ಸಾಧನೆ

ಬಹಳ ಹಿಂದೆ , ಜೀವನದಲ್ಲಿ ನಮ್ಮ‌ ಸಾಧನೆ ಹೇಗಿರಬೇಕೆಂದರೆ, ನಾಲ್ಕಾರು ಜನರ ಮಧ್ಯೆ ನಮ್ಮ ಉಪಸ್ಥಿತಿಗಿಂತ, ನಮ್ಮ ಅನುಪಸ್ಥಿತಿ ಎದ್ದು‌‌ ಕಾಣುವಂತಿರಬೇಕು ಎಂದು ಬರೆದಿದ್ದೆ. ಇಂದು ಅಕ್ಷರಶಃ ಅದರ ಪ್ರಾತ್ಯಕ್ಢತೆಯನ್ನು ನೋಡುವ ಸುವರ್ಣಾವಕಾಶ ದೊರೆಯುವಂತಾಯಿತು. 28 ಮೇ 1883 ರಲ್ಲಿ ಮಹಾರಾಷ್ಟ್ರದ ಭಾಗೂರ್ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಸರಿಯಾಗಿ ತಿಳಿದವರಿಗಿಂತ ತಿಳಿಯದವರೇ ಹೆಚ್ಚಿನವರಿದ್ದಾರೆ.  ಬಹುಶಃ ಪ್ರಪಂಚದಲ್ಲಿ ಅಷ್ಟು ದೀರ್ಘಕಾಲದ ಕಠಿಣ ಶಿಕ್ಷೆ ಮತ್ತು ನಿಂದನೆಯನ್ನು ಬದುಕಿದ್ದಾಗಲೂ ಮತ್ತು ಸತ್ತ ನಂತರವೂ ಅನುಭವಿಸುತ್ತಿರುವ ಏಕೈಕ ನಾಯಕದಿದ್ದರೆ ಅದು ನಿಶ್ಚಿತವಾಗಿಯೂ ಸಾವರ್ಕರ್ ಅವರೇ ಎಂದರೆ ತಪ್ಪಾಗಲಾರದು. ನೆಲ್ಸನ್ ಮಂಡೇಲಾ, ಸೂಕೀ ಅಂಹಹವರೂ ಅತ್ಯಂತ ದೀರ್ಘಾವಧಿಯ ಕಾಲ ಸೆರೆಮನೆಯಲ್ಲಿ ಇದ್ದರಾದರೂ ಸಾವರ್ಕರ್ ಅವರಷ್ಟು ಕಠಿಣ ಶಿಕ್ಷೆಯನ್ನು ಅನುಭವಿಸಿರಲಿಲ್ಲ ಮತ್ತು ಅವರು ಸೆರೆಮನೆಯಿಂದ ಹೊರಬಂದಾಗ ಅವರಿಗೆ ಸಕಲ ರಾಜಮರ್ಯಾದೆಯಿಂದೆ ಕೆಂಪು ರತ್ನ ಕಂಬಳಿಯನ್ನು ಹಾಸಿ ಸ್ವಾಗತಿಸಿ ಅವರಿಗೆ ತಮ್ಮ ದೇಶದ ಅಧ್ಯಕ್ಷ ಪದವಿಯನ್ನು ಅನುಭವಿಸುವ ಸೌಭಾಗ್ಯವಾಗಿತ್ತು.

savarkarಬಾಲ್ಯದಲ್ಲಿಯೇ ತಂದೆ ತಾಯಿಯವರನ್ನು ಕಳೆದುಕೊಂಡು ದೊಡ್ಡಪ್ಪನವರ ಆಶ್ರಯದಲ್ಲಿ ಬೆಳೆದ ಸಾವರ್ಕರ್ ಓದಿನಲ್ಲಿ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿ ಅವರ ಸಹೋದರು ಮತ್ತು ಸ್ನೇಹಿತರನ್ನು ಸೇರಿಸಿಕೊಂಡು ಅಭಿನವ ಭಾರತವನ್ನು ಕಟ್ಟಿಕೊಂಡು ಎಲ್ಲರಲ್ಲೂ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸುತ್ತಾ, ಸ್ವದೇಶೀ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸುವುದರಲ್ಲಿ ಸಫಲರಾಗಿದ್ದರು. ಫರ್ಗ್ಯೂಸನ್ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿಯನ್ನು ಪಡೆದು ಚಾಪೇಕರ್ ಸಹೋದರನ್ನು ಗಲ್ಲಿಗೇರಿಸಿದ್ದು ಅವರಲ್ಲಿ ಮತ್ತಷ್ಟೂ ಸ್ವಾತಂತ್ರ್ಯದ ಕಿಚ್ಚನ್ನು ಹಬ್ಬಿಸಿತ್ತು. ಹಾಗಾಗಿ ಬ್ರಿಟಿಷರ ನೆಲದಲ್ಲಿದ್ದುಕೊಂಡೇ ಅವರ ವಿರುದ್ಧ ದಂಗೆಯನ್ನು ಎಬ್ಬಿಸಬೇಕೆಂದು ನಿರ್ಧರಿಸಿ, ಸಿಂಹದ ಗುಹೆಗೇ ನುಗ್ಗಿ ಸಿಂಹದ ಹಲ್ಲನ್ನು ಕೀಳಬೇಕು ಎಂದು ನಿರ್ಧರಿಸಿ ಶಿಷ್ಯವೇತನದೊಂದಿಗೆ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಆಫ್ ಲಾ ಪದವಿಯನ್ನು ಪಡೆಯಲು ಬರುತ್ತಾರೆ. ಬ್ರಿಟನ್ನಿಗೆ ಬಂದಿಳಿದ ಸಾವರ್ಕರ್ ಮೊತ್ತ ಮೊದಲು ಅಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸುವ ಕಾರ್ಯಪ್ರವೃತ್ತರಾಗುತ್ತಾರೆ. ಪ್ರತೀ ಕಾಲೇಜಿನ ಮುಂದೆ ಬಂದು ಸಣ್ಣದಾಗಿ ದೇಶಭಕ್ತಿಯ ಭಾಷಣ ಅವರಲ್ಲಿ ಭಾರತ ಬಗ್ಗೆ ಹೆಮ್ಮೆ ಬರುವಂತೆ ಮಾಡಿ ಎಲ್ಲರನ್ನೂ ಅಭಿನವ ಭಾರತ ಸಂಘಟನೆಯ ಸದಸ್ಯರನ್ನಾಗಿ ಮಾಡಿದ್ದಲ್ಲದೇ ಎಲ್ಲರನ್ನೂ ಪ್ರತೀ ಶನಿವಾರ ಮತ್ತು ಭಾನುವಾರ ಇಂಡಿಯಾ ಹೌಸ್ ಎಂಬ ಕಟ್ಟದಲ್ಲಿ ಸಭೆ ನಡೆಸುತ್ತಾ ಮೋಜು ಮಸ್ತಿಯಲ್ಲಿ ಮಗ್ನರಾಗಿದ್ದ ಅನೇಕ ಭಾರತೀಯರ ಮನಃ ಪರಿವರ್ತಿಸಿ ಎಲ್ಲರಲ್ಲೂ ಭಾರತದ ಬಗ್ಗೆ ಗೌರವ ಬರುವಂತೆ ಮಾಡಿದರು. ಹಾಗೆ ಮನಃ ಪರಿವರ್ತಿತನಾಗಿ ವಿಲಿಯಂ ಹಟ್ ಕರ್ಜನ್ ವಿಲ್ಲಿ ಹತ್ಯೆಗೈದು ಅಲ್ಲಿಯೇ ನೇಣುಗಂಬವನ್ನೇರಿದ ಮದನ್ ಲಾಲ್ ಢಿಂಗ್ರಾ ಕೂಡಾ ಒಬ್ಬರು. ಇದೇ ರೀತಿ ಸಣ್ಣ ಸಣ್ಣ ಪಿಸ್ತೂಲ್ಗಳನ್ನು ಖರೀದಿಸಿ ಅದನ್ನು ದಪ್ಪನೆಯ ಗಟ್ಟಿ ರೊಟ್ಟಿರುವ ಬೈಬಲ್ಲುಗಳನ್ನು ಪಿಸ್ತೂಲ್ ಆಕಾರದಲ್ಲಿ ಕೊರೆದು ಅದರೊಳಗೆ ಪಿಸ್ತೂಲ್ಗಳನ್ನು ಇಟ್ಟು ಸುಲಭವಾಗಿ ಬ್ರಿಟೀಷರ ಕಣ್ತಪ್ಪಿಸಿ ಭಾರತಕ್ಕೆ ಸಮುದ್ರದ ಮೂಲಕ ಕಳುಹಿಸುತ್ತಿದ್ದರು. ನಂತರ ಅಲ್ಲಿ ಬಾಂಬ್ ತಯಾರಿಸುವುದನ್ನು ಕಲಿತು ಅದನ್ನು ಕಲ್ಕತ್ತಾದ ವ್ಯಕ್ತಿಯೊಬ್ಬರ ಮೂಲಕ ಭಾರತಕ್ಕೆ ತಲುಪಿಸಿ ಭಾರತದಲ್ಲೂ ಬಾಂಬ್ ತಯಾರಿಸಿ ಮೊತ್ತ ಮೊದಲ ಬಾರಿಗೆ ಖುದೀರಾಮ್ ಭೋಸ್ ಬಾಂಬ್ ಕೂಡಾ ಸಿಡಿಸಿಯಾಗಿತ್ತು. ಇದಲ್ಲದೇ ಬ್ರಿಟೀಷರ ಅನ್ಯಾಯದ ವಿರುದ್ಧ ಪುಸ್ತಕವನ್ನು ಬರೆದು ಅದನ್ನು ಪ್ರಾನ್ಸಿನಲ್ಲಿ ಮುದ್ರಣ ಮಾಡಿಸಿ ಎಲ್ಲ ಕಡೆಗೂ ತಲುಪಿಸುವ ವ್ಯವಸ್ಥೆ ಮಾಡಿದಾಗ ವ್ಯಗ್ರರಾದ ಬ್ರಿಟಿಷರೂ ಪುಸ್ತಕ ಬಿಡುಗಡೆಯಾಗುವ ಮಂಚೆಯೇ ಅದನ್ನು ನಿಷೇಧಿಸಿದ್ದರು. ಆದರೆ ಪುಣೆಯಲ್ಲಿ ಬ್ರಿಟಿಷ್ ಅಧಿಕಾರಿ ಜಾಕ್ಸನ್ ಹತ್ಯೆಗೀಡಾದಾಗ ಆದಕ್ಕೆ ಬಳೆಸಿದ ಬ್ತಿಟನ್ನಿನ ಪಿಸ್ತೂಲ್ ಸಾವರ್ಕರ್ ಮೂಲಕ ಭಾರತಕ್ಕೆ ತಲುಪಿದ ವಿಷಯ ಬ್ತಿಟೀಷರರಿಗೆ ತಿಳಿದು ಅದೊಮ್ಮೆ ಪ್ಯಾರೀಸ್ಸಿನಿಂದ ಲಂಡನ್ನಿಗೆ ಹಿಂದಿರುಗುತ್ತಿದ್ದ ಸಾವರ್ಕರ್ ಅವರನ್ನು ಬಂಧಿಸಿ ತನಿಖೆ ನಡೆಸಿ ಭಾರತಕ್ಕೆ ಗಡಿಪಾರು ಮಾಡುವ ಶಿಕ್ಷೆಯನ್ನು ಕೊಡಲಾಯಿತು. ಹಾಗೇ ಭಾರತಕ್ಕೆ ಹಡುಗಿನಲ್ಲಿ ಬರುತ್ತಿದ್ದಾಗಲೇ ಶೌಚಾಲಯದ ಸಣ್ಣ ಕಿಟಕಿಯ ಗಾಜನ್ನು ಒಡೆದು ಸಮುದ್ರಕ್ಕೆ ಹಾರಿ ದಿಟ್ಟತನದಿಂದ ಥೈರ್ಯದಿಂದ ಈಜಿ ಫ್ರಾನ್ಸ್ ದಡ ಸೇರಿದರೂ ಅಲ್ಲಿನ ಪೋಲೀಸರ ಅಚಾತುರ್ಯ ಮತ್ತು ಲಂಚಗುಳಿತನದ ಕಾರಣದಿಂದಾಗಿ ಮತ್ತೆ ಬಂಧಿತರಾಗಿ ಭಾರತಕ್ಕೆ ಬಂದು ವಿಚಾರಣೆ ನಡೆದು ಸುಮಾರು 50 ವರ್ಷಗಳ ಕಾಲ ಕಾಲಾಪಾನಿ ಶಿಕ್ಷೆಗೆ ಒಳಗಾಗುತ್ತಾರೆ.

sav1ಸಾವರ್ಕರ್ ಅವರನ್ನು 1911 ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕರೆತಂದು ಅವರನ್ನು ಗಾಣದಿಂದ ಎಣ್ಣೆಯನ್ನು ತೆಗೆಯುವ ಕೆಲಸಕ್ಕೆ ಹೂಡಲಾಯಿತು. ಪ್ರತೀ ದಿನ ಅವರು ಕಡ್ಡಾಯವಾಗಿ ಮೂವತ್ತು ಪೌಂಡ್ ಕೊಬ್ಬರಿ ಎಣ್ಣೆ ತೆಗೆಯಬೇಕಾಗಿತ್ತು. ತಪ್ಪಿದರೆ ಶಿಕ್ಷೆ, ದಣಿವಾಗಿ ನಿಂತರೆ ಚಾವಟಿಯ ಹೊಡೆತ, ಕೈಗಳಲ್ಲಿ ರಕ್ತ, ಎದೆಯಲ್ಲಿ ಉರಿ, ತಲೆ ಸುತ್ತು… ಹೀಗೆ ನರಕಯಾತನೆ. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ! ಬೆಳಿಗ್ಗೆ 6 ರಿಂದ 10 ರವರೆಗೆ, ಮಧ್ಯಾಹ್ನ 12 ರಿಂದ 5 ರವರೆಗೆ ಗೋಡೆ ಕಡೆ ಮುಖ ಮಾಡಿ ಬೇಡಿ ಹಾಕಲಾಗುತ್ತಿತ್ತು. ವರ್ಷಕ್ಕೆ ಒಂದು ಸಲ ಕಾಗದ ಬರೆಯುವ ಅವಕಾಶ. ಅರೆ ಅನ್ನ, ಗಬ್ಬು ನೀರು, ಮಣ್ಣು ಕಲ್ಲು ಬೆವರು ಬೆರೆಸಿದ ಊಟ, ಇದು ಅಲ್ಲಿನ ಆಹಾರ ವ್ಯವಸ್ಥೆ. ಬೆಳಗ್ಗೆ ಎದ್ದರೆ ಅದೇ ಜೈಲು ಖಾನೆ, ಮರದ ಹಲಗೆ, ಕೊರೆಯುವ ಚಳಿ, ಹರಕು ಕಂಬಳಿ! ಅದೇ ತೆಂಗಿನ ನಾರು ಬಿಡಿಸುವ ಕೆಲಸ, ಅದೇ ಎಣ್ಣೆಯ ಗಾಣ, ನೀರು ಇಟ್ಟಿಗೆ ಹೊರುವುದು ಸಾವಕರ್ರರ ಪ್ರತಿನಿತ್ಯದ ಕರ್ತವ್ಯವಾಗಿತ್ತು. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ ಸಾವರ್ಕರ್ ಅವರು ತಮ್ಮ ಕೈಗಳಿಗೆ ಹಾಕಿದ ಬೇಡಿಯಿಂದಲೇ ಗೋಡೆಗಳ ಮೇಲೆ ತಮ್ಮ ಕವನಗಳನ್ನು ರಚಿಸಿ ಅದನ್ನು ಕಂಠಸ್ಥ ಮಾಡಿ ಅವರು ಬಿಡುಗಡೆಯಾದ ನಂತರ ಅದನ್ನು ಪುಸ್ತಕ ರೂಪಕಕ್ಕೆ ತರಲಾಯಿತು.

ಹೀಗೆ ಸಾವರ್ಕರ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತನು ಮನ ಧನ ಹೀಗೆ ಸರ್ವಸ್ವವನ್ನೂ ಅರ್ಪಿಸಿದರೂ  ಐಶಾರಾಮ್ಯ ಜೀವನ ನಡೆಸುತ್ತಾ ಕಾಟಾಚಾರಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಕೆಲವು ಪಟ್ಟಭಧ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ ನಾನಾ ರೀತಿಯ ಕಪೋಲ ಕಲ್ಪಿತ ಆರೋಗಳು ಒಂದರ ಮೇಲೊಂದು ಬಂದವು, ಮೊದಲು ಸುಮ್ಮನೆ ಕಾಲಾಪಾನಿ ಜೈಲಿನ ಕಠಿಣ ಶಿಕ್ಷೆಯಿಂದಾಗಿ ಪದೇ ಪದೇ ಕೈಕೊಡುತ್ತಿದ ಆರೋಗ್ಯದಿಂದ ಅಲ್ಲೇ ಕೊಳೆತು ನಾರುವ ಬದಲು ಪುನಃ ಶಹರಕ್ಕೆ ಮರಳಿದಲ್ಲಿ ಒಂದಲ್ಲಾ ಒಂದು ರೀತಿಯಿಂದ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸಬಹುದು ಎಂಬ ಅಲೋಚನೆಯಿಂದ ಕಾಲಾಪಾನಿಯಿಂದ ಮುಕ್ತಿ ಬಯಸಿ ಬ್ರಿಟೀಷರಿಗೆ ಪತ್ರ ಬರೆದದ್ದನ್ನೇ ಮುಂದಿಟ್ಟು ಕೊಂಡು ಅವರ ವಿರೋಧಿಗಳು ವೀರ ಸಾವರ್ಕರ್ ಅವರನ್ನು ಹೇಡಿ ಎಂದು ಅನುಮಾನಿಸಿ ಅವಮಾನಿಸಿದರು. ಕಾಲಾಪಾನಿ, ಯರವಾಡ ಮತ್ತು ರತ್ನಗಿರಿ ಸೆರೆಮನೆ ಎಲ್ಲವೂ ಸೇರಿದಂತೆ ಸುಮಾರು 27 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಬಿಡುಗಡೆಯಾಗಿ ತಮ್ಮ ಪಾಡಿಗೆ ತಾವು ಹಿಂದೂ ಮಹಾಸಭಾ ದೊಂದಿಗೆ ಗುರುತಿಸಿಕೊಂಡು ಕಾರ್ಯಪರರಾಗಿದ್ದರೆ, ಸ್ವಾತಂತ್ರ್ಯಾ ನಂತರ ಮಹಾತ್ಮಾಗಾಂಧಿಯವರನ್ನು ಹತ್ಯೆಗೈದ ಗೋಡ್ಸೆ ಹಿಂದೂ ಮಹಾಸಭಾದ ಕಾರ್ಯಕರ್ತ ಎಂಬ ನೆಪವೊಡ್ದಿ ಸಾವರ್ಕರ್ ಅವರನ್ನೂ ಗಾಂಧೀಜೀಯವರ ಹತ್ಯೆಯ ಆರೋಪದಡಿಯಲ್ಲಿ ಬಂಧಿಸಿ ವಿಶೇಷವಾದ ವಿಚಾರಣೆ ನಡೆಸಿ ಗಾಂಧೀಜಿಯವರ ಹತ್ಯೆಯಲ್ಲಿ ಸಾವರ್ಕರ್ ಅವರದ್ದೇನೂ ಪಾತ್ರವಿರಲಿಲ್ಲ ಎಂದು ನ್ಯಾಯಾಲಯವೇ ತೀರ್ಪಿತ್ತಿದ್ದರೂ ಅವರ ವಿರೋಧಿಗಳು ಸುಳ್ಳನ್ನೇ ಒಂದು ನೂರು ಸಾರಿ ಹೇಳುತ್ತಾ ಹೋದಲ್ಲಿ ಅದುವೇ ನಿಜವಾಗುತ್ತದೆ ಎಂಬ ಗೋಬೆಲ್ಸ್ ತತ್ವದಂತೆ ಗಾಂಧಿಯವರ ಹತ್ಯೆಯ ಹಿಂದೆ ಸಾವರ್ಕರ್ ಅವರ ಕೈವಾಡವಿತ್ತು ಎಂದೇ ಗುಲ್ಲೆಬ್ಬಿಸಿ ಅದನ್ನೇ ಸತ್ಯವೆಂದು ಜನಮಾನಸದಲ್ಲಿ ನಂಬುವಂತೆ ಮಾಡಿದದ್ದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

1950 ರ ಪ್ರಪ್ರಥಮ ಗಣರಾಜ್ಯೋತ್ಸವ ಸಂದರ್ಭದಲ್ಲಿಯೂ ಅಂದಿನ ಕಾಂಗ್ರೇಸ್ ಸರ್ಕಾರ ಅವರಿಗೆ ಆಹ್ವಾನ ನೀಡದೇ ಅವಮಾನ ಮಾಡಿತು. ಪಾಕೀಸ್ಥಾನದ ಲಿಯಾಖತ್ ಭಾರತಕ್ಕೆ ಬರುವ ಸಂದರ್ಭದಲ್ಲಿ ದಂಗೆ ಏಳಬಹುದು ಎಂಬ ನೆಪವೊಡ್ಡಿ ಮತ್ತೆ ಅವರನ್ನು ಬಂಧಿಸಿ ನಮ್ಮ ಬೆಳಗಾವಿ ಜೈಲಿಗೆ ದೂಡಲಾಗಿತ್ತು. ಹೀಗೆ ಹೆಜ್ಜೆ ಹೆಜ್ಜೆಗೂ ಅಪಮಾನಗಳನ್ನು ಅನುಭವಿಸುತ್ತಾರೆ. ಕಡೆಗೆ 1966 ಫೆಬ್ರುವರಿ 26 ಸಾವರರ್ಕರ್ ನಿಧನರಾದಾಗ ಇಡೀ ದೇಶವೇ ಕಣ್ಣಿರಿಟ್ಟರೂ. ಅಂದಿನ ಕಾಂಗ್ರೇಸ್ ಸರ್ಕಾರ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ಕೊಡಲು ನಿರಾಕರಿಸಿತು. ಆಗ ಸಾವರ್ಕರ್ ಅವರ ಕಟ್ಟಾ ಅಭಿಮಾನಿ, ನಟ ವಿ. ಶಾಂತಾರಾಮ್ ತಮ್ಮ ಸ್ವಂತ ಖರ್ಚಿನಿಂದ ಗನ್ ಕ್ಯಾರೇಜ್ ವ್ಯವಸ್ಥೆ ಮಾಡಿದರು. ಲೋಕಸಭೆಯಲ್ಲಿ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಸಾವರ್ಕರ್ ಈ ಸಂಸತ್ತಿನ ಸದಸ್ಯನಾಗಿರಲಿಲ್ಲ ಎಂಬ ಕಾರಣ ನೀಡಿದ ಸಭಾಧ್ಯಕ್ಷರು ತಿರಸ್ಕರಿಸುತ್ತಾರೆ. ಅವರು ಸತ್ತ 40 ವರ್ಷಗಳ ನಂತರ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಭಾರೀ ಸದ್ದು ಗದ್ದಲಗಳ ನಡುವೆಯೂ ವಾಜಪೇಯಿಯವರ ಸರ್ಕಾರ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಹಾಕಲಾಯಿತು. ಬದುಕಿರುವಾಗಲೇ ತಮಗೆ ತಾವೇ ಭಾರತರತ್ನ ಪ್ರಶಸ್ತಿಯನ್ನು ಕೊಟ್ಟುಕೊಂಡ ಇಲ್ಲವೇ ತಮ್ಮ ರಾಜಕೀಯ ತೆವಲುಗಳಿಗಾಗಿ ಅನೇಕ ಅಪಾತ್ರರಿಗೆ ಭಾರತರತ್ನ ಪ್ರಶಸ್ತಿ ಪ್ರಧಾನ ಮಾಡಿರುವಾಗ ಇಂತಹ ವೀರ ಸೇನಾನಿಗೆ ಇಂದಿಗೂ ಸಹಾ ಭಾರತರತ್ನ ಪ್ರಶಸ್ತಿಯನ್ನು ಕೊಡುವ ವಿಷಯದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿರುವುದು ನಿಜಕ್ಕೂ ಅತ್ಯಂತ ಛೇಧಕರ ವಿಷಯ.

ಸ್ವಾತಂತ್ರ್ಯಾ ನಂತರ ದೇಶದಲ್ಲಾದ ಪ್ರತೀ ಯೋಜನೆಗಳಿಗೂ , ಕಟ್ಟಡಗಳಿಗೂ, ವಿಮಾನ ನಿಲ್ದಾಣಗಳಿಗೂ ಕಡೆಗೆ ಶೌಚಾಲಯಗಳಿಗೂ ನೆಹರೂ ವಂಶಸ್ಥರ ಹೆಸರಗಳನ್ನೇ ಇಟ್ಟು ತಮ್ಮ ದಾಸ್ಯತನದಲ್ಲಿಯೇ ಮೈಮೆರೆತ ಭಾರತೀಯರಿಗೆ ಗಾಂಧೀ, ನೆಹರು ಮತ್ತು ನಕಲಿಗಾಂಧಿಯರ ಹೊರತಾಗಿಯೂ ಅನೇಕ ವೀರ ಸೇನಾನಿಗಳು ಇದ್ದಾರೆ ಎಂಬುದನ್ನೇ ಮರೆತಂತಾಗಿತ್ತು.

ಯಲಹಂಕ ಉಪನಗರದಲ್ಲಿ ನೂತನವಾಗಿ ಕಟ್ಟಲಾದ ಮೇಲ್ಸೇತುವೆಗೆ ವೀರ ಸಾವರ್ಕರ್ ಅವರ ಹೆಸರನ್ನು ಇಡಬೇಕೆಂದು ನಾಲ್ಕು ತಿಂಗಳುಗಳ ಮುಂಚೆಯೇ ಫೆಬ್ರವರಿ ತಿಂಗಳಿನಲ್ಲಿಯೇ ಮಹಾನಗರ ಪಾಲಿಕೆಯಲ್ಲಿ ಪ್ರಸ್ತಾಪಿಸಿ ಅನುಮೋದನೆಯನ್ನು ಪಡೆದು ಇಂದು ಸಾವರ್ಕರ್ ಅವರ ಜಯಂತಿ ಅದರ ಅಂಗವಾಗಿ ವಿದ್ಯುಕ್ತವಾಗಿ ಉಧ್ಘಾಟನೆ ಮಾಡಲು ರಾಜ್ಯಸರ್ಕಾರ ನಿರ್ಧರಿಸುತ್ತಿದ್ದಂತೆಯೇ ನಕಲೀ ಗಾಂಧಿ ಕುಟುಂಬದ ಅನುಯಾಯಿಗಳಿಗೆ ಸಹಿಸಲು ಅಸಾಧ್ಯವಾಗಿ ಪುಂಖಾನುಪುಂಖವಾಗಿ ಸ್ಥಳೀಯ ನಾಯಕರ ಅಸ್ಮಿತೆ ಕಾಡತೊಡಗಿ ಸುಖಾಸುಮ್ಮನೆ ಮಾಧ್ಯಮಗಳ ಮುಖಾಂತರ, ಸಾಮಾಜಿಕ ಜಾಲತಾಣಗಳ ಮುಖಾಂತರ ಕಿಡಿಕಾರತೊಡಗಿದರು. ಸರ್ಕಾರವು ಇಂತಹ ಗೊಡ್ಡು ಬೆದರಿಕೆಗೆ ಮಣಿದು ಆಹ್ವಾನ ಪತ್ರಿಕೆಯಲ್ಲಿ ಸಾವರ್ಕರ್ ಅವರ ಹೆಸರನ್ನು ತೆಗೆದು ಹಾಕಿ ನಂತರ ಸಾವರ್ಕರ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಕಡೆಗೆ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಉದ್ಘಾಟನೆಯನ್ನೇ ಮುಂದೂಡಿ ಆಗಬಹುದದ ಮುಜುಗರವನ್ನು ತಪ್ಪಿಸಿಕೊಂಡಿತು.

ಸರ್ಕಾರಗಳು ಬರುತ್ತದೆ ಹೋಗುತ್ತದೆ, ಈಗ ಕಟ್ಟಿದ ಸೇತುವೆಗಳು ಒಂದಲ್ಲಾ ಒಂದು ದಿನ ಬಿದ್ದೇ ಬಿದ್ದು ಹೋಗುತ್ತದೆ. ಆದರೆ ಈ ರೀತಿಯ ಅಪಮಾನಗಳು ಸಾವರ್ಕರ್ ಅವರಿಗೆ ಹೊಸದೇನಲ್ಲ. ಇದರಿಂದ ಅವರ ಕೀರ್ತಿ ಪತಾಕೆಗಳು ಒಂದು ಕಿಂಚಿತ್ತೂ ಅಲುಗುವುದಿಲ್ಲ ಏಕೆಂದರೆ ವಿನಾಯಕ ದಾಮೋದರ ಸಾವರ್ಕರ್ ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರದೇ ಅವರು ಇಡೀ ದೇಶದ ಶಕ್ತಿಯಾಗಿದ್ದಾರೆ. ಅವರು ಕೇವಲ ತಮ್ಮ ರಾಜ್ಯವಾದ ಮಹಾರಾಷ್ಟ್ರಕ್ಕೇ ಸೀಮಿತವಾಗದೇ, ಇಡೀ ಭಾರತದ ಆಸ್ತಿ ಯಾಗಿದ್ದಾರೆ. ಅವರು ಇಂತಹ ಸಾಧನೆ ಮಾಡಿದ್ದು ಕೇವಲ ಇಂತಹ ಯಾವುದೋ ಒಂದು ರಸ್ತೆಗಾಗಲೀ ಕಟ್ಟಡಗಳಿಗಾಗಲೀ, ಮೇಲ್ಸೇತುವೆಗಳ ಹೆಸರಾಗಬೇಕು ಎಂದಲ್ಲ. ಅವರ ಹೆಸರಿನಲ್ಲಿ ಯಾವುದೇ ಕಟ್ಟಡ, ರಸ್ತೆ , ಸೇತುವೆ ಅಥವಾ ಸರ್ಕಾರಿ ಯೋಜನೆಗಳು ಇಲ್ಲದಿದ್ದರೂ ಅವರು ತಮ್ಮ ಕಾರ್ಯಗಳಿಂದಾಗಿ ಜನಮಾನಸದಲ್ಲಿ ಅಂದು, ಇಂದು ಮತ್ತು ಎಂದೆಂದಿಗೂ ಆಚಂದ್ರಾರ್ಕವಾಗಿ ಅಜರಾಮರವಾಗಿಯೇ ಇರುತ್ತಾರೆ.

yb2ಸರ್ಕಾರ ಯಲಹಂಕದ ಆ ಮೇಲ್ಸೇತುವೆಗೆ ವೀರ ಸಾವರ್ಕರ್ ಅವರ ಹೆಸರಿಡುತ್ತದೆಯೋ ಇಲ್ಲವೇ ಬಿಡುತ್ತದೆಯೋ ಗೊತ್ತಿಲ್ಲ. ಆದರೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಂದಾಗಿ ಸದ್ದಿಲ್ಲದೇ ಉಧ್ಘಾಟನೆಯಾಗ ಬೇಕಿದ್ದ ಮೇಲ್ಸೇತುವೆಗೆ ಭಾರೀ ಪ್ರಮಾಣದಲ್ಲಿ ಪ್ರಚಾರ ನೀಡಿ ಮುಂದೆ ಆ ಮೇಲ್ಸೇತುವೆಗೆ ಯಾವುದೇ ಹೆಸರಿಟ್ಟರೂ ಜನಮಾನಸದಲ್ಲಿ ಅದು ವೀರ ಸಾವರ್ಕರ್ ಸೇತುವೆ ಎಂಬುದಾಗಿಯೇ ಶಾಶ್ವತವಾಗಿ ಅಚ್ಚೊತ್ತುವಂತೆ ಮಾಡಿದ್ದಾರೆ. ಸಾವರ್ಕರ್ ಅವರ ಜಯಂತಿಯಂದು ಅವರ ಅಭಿಮಾನಿಗಳು ಅದಾಗಲೇ ತಮ್ಮ ಹೃದಯಾಂತರಾಳದಿಂದ ವೀರಸಾವರ್ಕರ್ ಮೇಲ್ಸೇತುವೆ ಎಂದು ಬರೆದು ಸಾಂಕೇತಿಕವಾಗಿ ಸೇತುವೆಯನ್ನು ಉದ್ಥಾಟನೆ ಮಾಡಿಯೂ ಆಗಿದೆ. ತಮ್ಮ ವಿರೋಧದ ಮೂಲಕ ಈ ರೀತಿಯಾದ ಆಭೂತಪೂರ್ವ ಪ್ರಚಾರವನ್ನು ಒದಗಿಸಿದ ಆ ಎಲ್ಲಾ ಸಾವರ್ಕರ್ ವಿರೋಧಿಗಳಿಗೂ ಒಂದು ಅಭಿನಂದನೆ ಸಲ್ಲಿಸಿಯೇ ಬಿಡೋಣ.

ವಿರೋಧಿಗಳು ಯಾರ ಕೆಲಸವನ್ನೇ ಆಗಲೀ, ಪದೇ‌ ಪದೇ ಹಳಿಯತ್ತಿದ್ದಾರೆ ಎಂದರೆ
ಆವರು ಮಾಡುತ್ತಿರುವ ಕೆಲಸ ಕಾರ್ಯಗಳ ಮೂಲಕ ವಿರೋಧಿಗಳಿಗಿಂತ ‌ಮುಂದಿದ್ದಾರೆ ಎಂದರ್ಥ.
ಹಾಗಾಗಿ ಈ ಸರ್ಕಾರ ಯಾರಿಗೂ ಜಗ್ಗದೇ, ಕುಗ್ಗದೇ ಆತ್ಮಸ್ಥೈರ್ಯದೊಂದಿಗೆ ಕೈ ಹಿಡಿದ ಕಾರ್ಯವನ್ನು
ಶ್ರದ್ಧೆಯಿಂದ ‌ಮಾಡಿದರೆ ಖಂಡಿತವಾಗಿಯೂ ಅಂತಿಮ ಜಯ ಅವರದ್ದೇ ಆಗಿರುತ್ತದೆ.
ಪುರಂದರ ದಾಸರೇ ಹೇಳಿಲ್ಲವೇ, ನಿಂದಕರಿರಬೇಕು ಕೇರಿಯಲ್ಲಿ ಹಂ.. ಇದ್ದಹಾಗೆ ಎಂದು

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s