ಹೇಗೂ ಮಳೆಗಾಲ ಶುರುವಾಗಿದೆ. ಸಂಜೆ ಆಯ್ತು ಎಂದ್ರೆ ಧೋ ಎಂದು ಮಳೆ ಬೀಳ್ತಾ ಇದ್ರೇ, ಹಮಾಮಾನದಲ್ಲಿ ಸ್ವಲ್ಪ ಚಳಿ ಚಳಿಯಾಗಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಇಲ್ವೇ ಕುಡಿಬೇಕು ಅನ್ಗೋಸ್ತೆ. ಇನ್ನು ಈ ಕುರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಹೊರಗೆ ಹೋಗಿ ತಿನ್ನಲೂ ಭಯ ಆಗುತ್ತದೆ. ಅದಕ್ಕಾಗಿಯೇ ಉತ್ತರ ಕರ್ನಾಟಕದ ಪ್ರಸಿದ್ಧವಾದ ಮಂಡಕ್ಕಿ ಗಿರ್ಮಿಟ್ ಮಾಡುವ ವಿಧಾನನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 3-4 ಜನರಿಗೆ ಸಾಕಾಗುವಷ್ಟು ಮಂಡಕ್ಕಿ ಗಿರ್ಮಿಟ್ ಮಾಡಲು ಬೇಕಾಗುವ ಸಾಮಗ್ರಿಗಳು.
- ಮಂಡಕ್ಕಿ/ಕಡಲೆಪುರಿ (ನೈಲಾನ್ ಇದ್ದರೆ ಉತ್ತಮ) – 3 ಕಪ್
- ಹುರಿಗಡಲೆ ಪುಡಿ – 1/4 ಕಪ್
- ಹುರಿದ/ಕರಿದ ಕಡಲೇಕಾಯಿ ಬೀಜ – 2 ಚಮಚ
- ಜೀರಿಗೆ – 2 ಚಮಚ
- ಸಾಸಿವೆ – 2 ಚಮಚ
- ಬೆಲ್ಲ- 2 ಚಮಚ
- ಅರಿಶಿಣ ಪುಡಿ – ಚಿಟಿಕೆ
- ಹುಣಸೆ ರಸ – 1/4 ಕಪ್
- ಒಗ್ಗರಣೆಗೆ ಎಣ್ಣೆ – 2 ಚಮಚ
- ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ – 3
- ಕತ್ತರಿಸಿದ ಟೊಮೇಟೊ – 1
- ಕತ್ತರಿಸಿದ ಈರುಳ್ಳಿ – 2 + 1
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಕರಿಬೇವು- 2 ಕಡ್ದಿ
- ಉಪ್ಪು- ರುಚಿಗೆ ತಕ್ಕಷ್ಟು
- ಓಂ ಪುಡಿ (ಸೇವ್) /ಖಾರ ಬೂಂದಿ (ಐಚ್ಚಿಕ)
ಗಿರ್ಮಿಟ್ ಗೊಜ್ಜು ಮಾಡುವ ವಿಧಾನ:
- ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಸಾಸಿವೆ ಯನ್ನು ಚಟ ಪಟ ಸಿಡಿಸಿ ಜೀರಿಗೆ ಒಗ್ಗರಣೆ ಹಾಕಿಕೊಳ್ಳಿ
- ಈ ಒಗ್ಗರಣೆಗೆ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಸ್ವಲ್ಪ ಹುರಿದುಕೊಳ್ಳಿ
- ಸಣ್ಣಗೆ ಹಚ್ಚಿದ ಎರಡು ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೂ ಹುರಿದು ಅದಕ್ಕಿ ಚಿಟುಕಿ ಅರಿಶಿನ ಸೇರಿಸಿ.
- ಈಗ ಮಾಡಿಟ್ಟು ಕೊಂಡಿದ್ದ ಹುಣಸೇ ರಸ ಮತ್ತು ಅದರ ಜೊತೆ ಬೆಲ್ಲ ಹಾಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿದಲ್ಲಿ ಗಿರ್ಮಿಟ್ ಗೊಜ್ಜು ಸಿದ್ದ.
- ಗಿರ್ಮಿಟ್ ಗೊಜ್ಜನ್ನು ಸ್ವಲ್ಪ ಸಮಯ ಆರಲು ಬಿಡಿ.
ಗಿರ್ಮಿಟ್ ಮಾಡುವ ವಿಧಾನ:
- ಒಂದು ಅಗಲವಾದ ಪಾತ್ರೆಯಲ್ಲಿ ಮಂಡಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಹುರಿಗಡಲೇ ಪುಡಿಯೊಂದಿಗೆ ಚೆನ್ನಾಗಿ ಕಲೆಸಿ
- ಈಗ ಸಣ್ಣಗೆ ಕತ್ತರಿಸಿದ ಮತ್ತೊಂದು ಈರುಳ್ಳಿ , ಟೊಮೆಟೊ ಮತ್ತು ಅಗತ್ಯಕ್ಕೆ ತಕಷ್ಟು ಗಿರ್ಮಿಟ್ ಗೊಜ್ಜನ್ನು ಸೇರಿಸಿ ಚೆನ್ನಾಗಿ ಕಲೆಸಿ.
- ರುಚಿ ಹೆಚ್ಚಿಸಲು ಮತ್ತು ಅಲಂಕಾರಿಕವಾಗಿ ಕಾಣಲು, ಕತ್ತಸಿಸಿದ ಕೊತ್ತಂಬರಿ, ಕರಿದ/ಹುರಿದ ಕಡಲೇ ಕಾಯಿ ಜೀಜ ಮತ್ತು ಸ್ವಲ್ಪ ಓಂಪುಡಿ( ಸೇವ್) ಇಲ್ಲವೇ ಖಾರ ಬೂಂದಿ ಉದುರಿಸಿದರೆ ರುಚಿ ರುಚಿಯಾದ, ಘಮ ಘಮಚಾದ ಮಂಡಕ್ಕಿ ಗಿರ್ಮಿಟ್ ಸಿದ್ದ.
ದಿಢೀರ್ ಆಗಿ ಮನೆಯಲ್ಲಿಯೇ ರುಚಿಯಾದ ಮಂಡಕ್ಕಿ ಗಿರ್ಮಿಟ್ ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದೇವೆ. ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಇಷ್ಟ ಪಟ್ಟು ನಾಲ್ಕಾರು ಬಾರಿ ತಿಂದೇ ತಿನ್ತಾರೆ ನೋಡಿ.
ಇನ್ನೇಕೆ ತಡ ಓದ್ಕೋಳಿ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಸಂಜೆಯ ಹೊತ್ತು ಬಿಸಿ ಬಿಸಿಯಾದ ಚಹಾ, ರುಚಿಯಾದ ಮಂಡಕ್ಕಿ ಗಿರ್ಮಿಟ್ ಮತ್ತು ಅದರ ಜೊತೆ ಬಿಸಿ ಬಿಸಿಯಾದ ಮೆಣಸಿನಕಾಯಿ ಬೋಂಡ (ಮಿರ್ಚಿ ಬಜ್ಜಿ) ತಿನ್ನುವ ಆನಂದವನ್ನು ಹೇಳುವುದಕ್ಕಿಂತ ಅನುಭವಿಸಿದರೇನೇ ಘಮ್ಮತ್ತು. ಈ ಮಂಡಕ್ಕಿ ಗೊಜ್ಜನ್ನು ಸುಮಾರು ಒಂದು ವಾರಗಳ ಕಾಲ ಇಟ್ಟುಕೊಂಡು ಬೇಕಾದ ಸಮಯದಲ್ಲಿ ಬಳೆಸಿ ಕೊಳ್ಳಬಹುದು.
Perfect snacks for a delicious evening treat. Especially with the wonderful rain 🌧.
LikeLiked by 1 person