ಗೋವಾ ಗೋಳಿನ ಕಥೆ ವ್ಯಥೆ  ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)

7 ಏಪ್ರಿಲ್ 1506 ರಂದು ಸ್ಪೇನಿನ ನವಾರ್ರೆ ಎಂಬ ಪ್ರದೇಶದಲ್ಲಿ ಜನಿಸಿದ ಫ್ರಾನ್ಸಿಸ್ ಕ್ಸೇವಿಯರ್ ಮೂಲತಃ ಬಾಸ್ಕ್ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವನು. ಈತ 1534 ರಲ್ಲಿ ಪಾದ್ರಿಯ ದೀಕ್ಷೆಯನ್ನು ಮಾಂಟ್ ಮಾರ್ಟ್ ಎಂಬಲ್ಲಿ ಪಡೆದು ಅಲ್ಲಿಯವರೆಗೆ ಎಲ್ಲೆಲ್ಲಿ, ಕ್ರಿಶ್ಚಿಯನ್ ಮಿಷನರಿಗಳು ಭೇಟಿ ನೀಡದಿರುವಂತಹ ಸ್ಥಳಗಳನ್ನು ಗುರುತಿಸಿ ಅದರಲ್ಲೂ ಮುಖ್ಯವಾಗಿ ಏಷ್ಯಾ ಖಂಡದ ಭಾರತ, ಜಪಾನ್, ಬೊರ್ನಿಯೊ, ಮಲುಕು ಮುಂತದ ದ್ವೀಪಗಳಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡನು. ಸುವಾರ್ತಾ ಕೂಟಗಳ ಮೂಲಕ ಹಾಗೆಯೇ 1542 ರಲ್ಲಿ ಗೋವಾಕ್ಕೆ ಭೇಟಿ ನೀಡಿದ ಫ್ರಾನ್ಸಿಸ್ ಜೇವಿಯರ್ 45ರ ವರೆಗೂ ಗೋವಾದಲ್ಲಿದ್ದನು.

ಹೀಗೆ 1542 ರ ಮೇ 6 ರಂದು ಗೋವಾಕ್ಕೆ ಬಂದ ಫ್ರಾನ್ಸಿಸ್ ಕ್ಸೇವಿಯರ್ , ಭಾರತೀಯ ನೆಲದಿಂದ ವಿಗ್ರಹ ಆರಾಧಕರ ನಂಬಿಕೆ ಹಾಗೂ ಆಚಾರಗಳು (ಪೇಗನಿಸಂ) ಅನ್ನು ಬೇರುಸಹಿತ ಕಿತ್ತುಹಾಕುವ ಮತ್ತು ಅದನ್ನು ಕ್ರಿಶ್ಚಿಯನ್ ಧರ್ಮದೊಂದಿಗೆ ಬದಲಾಯಿಸುವ ಸಂಕಲ್ಪದೊಂದಿಗೆ ಭಾರತಕ್ಕೆ ಬರುತ್ತಾನೆ. ಹಾಗಾಗಿ ಬರುವಾಗಲೇ ಹಿಂದೂಗಳಿಗೆ ಕೊಡಬೇಕಾದ ಕಿರುಕುಳ ಮತ್ತು ದಬ್ಬಾಳಿಕೆಯ ಎಲ್ಲಾ ಯೋಜನೆಗಳನ್ನೂ ಮಾಡಿಕೊಂಡೇ ಬಂದಿರುತ್ತಾನೆ. ಹಿಂದೂ ದೇವಾಲಯಗಳ ಧ್ವಂಸ ಮತ್ತು ವಿಗ್ರಹಗಳ ಭಂಗ ಹೀಗೆ ಬಲವಂತದ ಮತ್ತು ಮೋಸದ ಮುಖಾಂತರ ಹಿಂದೂಗಳ ಎಲ್ಲಾ ಧಾರ್ಮಿಕ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗುತ್ತಾನೆ. ಫ್ರಾನ್ಸಿಸ್ ಕ್ಸೇವಿಯರ್, ಸೊಸೈಟಿ ಆಫ್ ಜೀಸಸ್ಗೆ ಪತ್ರವೊಂದನ್ನು ಬರೆದು ಮೊದಲು ಕುಟುಂಬದ ಗಂಡಸರನ್ನು ಬಲವಂತವಾಗಿ ಮತಾಂತರ ಮಾಡುತ್ತೇವೆ. ಒಮ್ಮೆ ಕುಟುಂಬದ ಹಿರಿಯ ಮತಾಂತರವಾದಲ್ಲಿ ಕ್ರಮೇಣ ಅವನ ಮನೆಯಲ್ಲಿರುವ ಇತರೇ ಕುಟುಂಬದ ಸದಸ್ಯರುಗಳೂ ದೀಕ್ಷಾಸ್ನಾನ ಪಡೆದ ನಂತರ, ಎಲ್ಲೆಡೆ ಸುಳ್ಳು ದೇವರ ದೇವಾಲಯಗಳನ್ನು ಕಿತ್ತು ವಿಗ್ರಹಗಳನ್ನು ನಾಶ ಮಾಡಿವ ಸಂಕಲ್ಪವನ್ನು ತೊಟ್ಟಿದ್ದೇನೆ ಎಂದು ತಿಳಿಸುತ್ತಾನೆ.

ಶಾಂತಿ ಪ್ರಿಯ ಸ್ಥಳೀಯ ಹಿಂದೂಗಳಿಗೆ ಕಿರುಕುಳ ನೀಡಲು ಮತ್ತು ಅವರ ಆಶಯಕ್ಕೆ ವಿರುದ್ಧವಾಗಿ ಕ್ಯಾಥೊಲಿಕ್ ಕ್ರೈಸ್ತರಾಗಲು ಒತ್ತಾಯಿಸಲು ಸೇಂಟ್ ಫ್ರಾನ್ಸಿಸ್ ಜೇವಿಯರ್ ಎಂಬ ವಿಕೃತ ಮನುಷ್ಯ ಮೊತ್ತ ಮೊದಲ ಬಾರಿಗೆ ಗೋವಾಕ್ಕೆ ಚಿತ್ರಹಿಂಸೆ, ಹಿಂಸೆ, ಬೆದರಿಕೆ ಮತ್ತು ಭಯೋತ್ಪಾದನೆಯನ್ನು ಪರಿಚಯಿಸಿದನು. ಭಾರತೀಯರ ಇತಿಹಾಸ ಮತ್ತು ಭಾರತೀಯರ ಬೌದ್ಧಿಕ ಸಾಮರ್ಥ್ಯ ಮತ್ತು ಖಗೋಳ ವಿಜ್ಞಾನ, ಗಣಿತ, ಕಲೆ ಮತ್ತು ವಿಜ್ಞಾನ, ದೇವಾಲಯದ ವಾಸ್ತುಶಿಲ್ಪ, ಭಾಷೆಗಳು ಇತ್ಯಾದಿಗಳಲ್ಲಿದ್ದ ಪಾಂಡಿತ್ಯವನ್ನು ಅರಿಯಲಾಗದ ಮೂಢ ಭಾರತೀಯರು ಧರ್ಮದ್ರೋಹಿಗಳು. ವಿಗ್ರಹ ರೂಪಗಳಲ್ಲಿ ದೆವ್ವಗಳು ಮತ್ತು ರಾಕ್ಷಸರನ್ನು ಪೂಜಿಸುವವರು ಬೌದ್ಧಿಕವಾಗಿ ಕೆಳಮಟ್ಟದಲ್ಲಿರುವ ಸಸ್ಯಾಹಾರಿಗಳು. ಅವರಿಗೆ ಗೋಮಾಂಸ, ಹಂದಿಮಾಂಸ ಮತ್ತು ಇತರೇ ಹತ್ಯೆ ಮಾಡಿದ ಪ್ರಾಣಿಗಳ ಮಾಂಸವನ್ನು ತಿನ್ನಿಸಿ ಅವರನ್ನು ಯುರೋಪಿಯನ್ನರಂತೆ ಮಾಡಬೇಕೆಂಬ ಛಲಹೊತ್ತಿದ್ದವನು.

ಫ್ರಾನ್ಸಿಸ್ ಕ್ಸೇವಿಯರ್ ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ನಡೆದ ವಿಚಾರಣೆಯಲ್ಲಿ ಭಾಗವಹಿಸಿದ್ದರಿಂದ ಹಿಂಸೆ ಮತ್ತು ಭಯೋತ್ಪಾದನೆಯನ್ನು ಬಳಸಿಕೊಂಡು ಸಾವಿರಾರು ಯಹೂದಿಗಳು ಮತ್ತು ಮುಸ್ಲಿಮರನ್ನು ಹಿಂಸಿಸಿದ ಅನುಭವವ ಅವನಿಗಿತ್ತು. ಹಾಗಾಗಿ ಗೋವೆಯಲ್ಲಿಯೂ ಕ್ರಿಶ್ಚಿಯನ್ ಧರ್ಮದ ಹರಡುವಿಕೆಗಾಗಿ ಅದೇ ರೀತಿಯ ವಿಚಾರಣೆಯನ್ನು ಸ್ಥಾಪಿಸುವಂತೆ ಪೋರ್ಚುಗಲ್ ರಾಜನಿಗೆ ಮನವಿ ಮಾಡುತ್ತಾನೆ.

ಫ್ರಾನ್ಸಿಸ್ ಕ್ಸೇವಿಯರ್ ಕೇವಲ ಹಿಂದೂಗಳನ್ನು ಮಾತ್ರಾ ಹಿಂಸಿಸುತ್ತಿದ್ದಿದ್ದಲ್ಲದೇ, ಅದಾಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರ ಮೇಲೆಯೂ ಆತನ ವಕ್ರ ದೃಷ್ಟಿ ಬಿದ್ದಿತ್ತು. ಕ್ರಿಶ್ಚಿಯನ್ ಧರ್ಮದ ಸಿದ್ಧಾಂತಗಳನ್ನು ಅನುಸರಿಸುವಲ್ಲಿ ಯಾರಾದರೂ ಸಣ್ಣ ಪುಟ್ಟ ಮಾಡಿದ್ದಾರೆ ಎಂದು ಗೊತ್ತಾದರೂ ಸಾಕು ಅವರನ್ನು ಅತ್ಯಂತ ಕ್ರೂರವಾಗಿ ಹಿಂಸಿಸತೊಡಗಿದ. ಫ್ರಾನ್ಸಿಸ್ ಜೇವಿಯರ್ ಗೋವಾದಲ್ಲಿ ಇದ್ದದ್ದು ಕೇವಲ 3 ವರ್ಷವಾದರೂ ಆತನ ನೇತೃತ್ವದಲ್ಲಿ ಮತಾಂತರಕ್ಕೆ ಒಪ್ಪದ ಸುಮಾರು 20 ಸಾವಿರಕ್ಕೂ ಅಧಿಕ ಹಿಂದೂಗಳನ್ನು ಬರ್ಬರ ಹತ್ಯೆ ಮಾಡಲಾಯಿತು. ಅನೇಕರು ತಮ್ಮ ಜೀವವನ್ನು ಉಳಿಸಿಕೊಳ್ಳು ಸಲುವಾಗಿಯೇ ಕರ್ನಾಟಕದ ಕಾರವಾರ, ಕುಂದಾಪುರ, ಕಾರ್ಕಳ, ಮಂಗಳೂರು ಮತ್ತು ಕೊಚ್ಚಿನ್ ಪ್ರದೇಶಗಳಿಗೆ ದಿಕ್ಕಾಪಾಲಾಗಿ ವಲಸೆ ಹೋಗಿ ತಮ್ಮ ಬದುಕನ್ನು ಕಟ್ಟಿ ಕೊಂಡರು. ತನ್ನ ಧರ್ಮ ಪ್ರಚಾರವನ್ನು ಮುಂದುವರಿಸಿದ ಫ್ರಾನ್ಸಿಸ್ ಜೇವಿಯರ್ 1548ರಲ್ಲಿ ಜಪಾನಿಗೆ ಭೇಟಿಕೊಟ್ಟರೂ ಅಲ್ಲಿಯ ಸ್ಥಳೀಯ ಭಾಷೆಗಳಲ್ಲಿ ಮಾತನಾಡಲು ಸಾಧ್ಯವಾಗದ ಭಾರತದಲ್ಲಿ ಗಳಿಸಿದಂತಹ ಯಶಸ್ಸನ್ನು ಕಾಣದೇ, ನಿರಾಶೆಯಾಗಿ ಚೀನಾ ಮಾರ್ಗವಾಗಿ ಭಾರತಕ್ಕೆ ಹಿಂದಿಗುತ್ತಿದ್ದಾಗ ತನ್ನ 46 ನೇ ವಯಸ್ಸಿನಲ್ಲಿ ಡಿಸೆಂಬರ್ 3, 1552 ರಲ್ಲಿ ಚೀನಾದ ಕರಾವಳಿ ಭಾಗವಾದ ಶ್ಯಾಂಗ್ ಚಿಹಾನ್ಯ ಲ್ಲಿ ನಿಧನರಾದನು.

1552 ರಲ್ಲಿ ನಿಧನರಾದಾಗ, ಅವನಿಗೆ ನಿಯಮಿತ ಕ್ರಿಶ್ಚಿಯನ್ ಸಮಾಧಿ ನೀಡದೇ ಅವನಿಗೆ ಸಂತನ ಪಟ್ಟವನ್ನು ಕಟ್ಟಲಾಯಿತು. ಇಂದಿಗೂ ದೇಶದ ಹಲವಾರು ಶಿಕ್ಷಣ ಸಂಸ್ಥೆಗಳಿಗೆ Francis Xavier ಎಂಬ ಹೆಸರಿಟ್ಟು ಆತನನ್ನು ವೈಭವೀಕರಿಸಲಾಗುತ್ತಿದೆ. ಚೀನಾದಲ್ಲಿ ಮೃತನಾದ ಜೇವಿಯರ್ ಪಾರ್ಥೀವ ಶರೀರವನ್ನು ವಿಶೇಷ ಶವಪೆಟ್ಟಿಗೆಯಲ್ಲಿ ಸಂರಕ್ಷಿಸಿ ಗೋವಾಕ್ಕೆ ತಂದು ಗೋವದಲ್ಲಿರುವ “ಬೊಮ್ ಜೆಸು ಚರ್ಚಿನಲ್ಲಿ ಇಂದಿಗೂ ಹಾಗೆಯೇ ಸಂರಕ್ಷಿಸಿಡಲಾಗಿದೆ. ಅವನ ಶವವನ್ನು ಹತ್ತು ವರ್ಷಗಳಿಗೊಮ್ಮೆ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಆವನ ಪಾರ್ಥೀವ ಶರೀರವನ್ನು ನೋಡಲು ದೇಶ ವಿದೇಶಗಳಿಂದ ಇಂದಿಗೂ ಪ್ರತೀ ದಿನ ಸಾವಿರಾರು ಜನರು ಬರುತ್ತಾರೆ. ಫ್ರಾನ್ಸಿಸ್ ಕ್ಸೇವಿಯರ್ ಅವರನ್ನು ಪ್ರಾರ್ಥಿಸುತ್ತಾರೆ. ಸಹಸ್ರಾರು ಹಿಂದೂಗಳನ್ನು ಬರ್ಬರವಾಗಿ ಹತ್ಯೆಗೈದ ಈ ನರಹಂತಕನ ಇತಿಹಾಸ ತಿಳಿಯದ ಅನೇಕ ಹಿಂದೂಗಳು ಅಲ್ಲಿಗೆ ಭೇಟಿ ನೀಡಿ ಪ್ರಾರ್ಥಿಸುವುದನ್ನು ನೋಡಿದಾಗ ನಿಜಕ್ಕೂ ಕರುಳು ಚುರುಕ್ ಎನ್ನುತ್ತದೆ.

ಫ್ರಾನ್ಸಿಸ್ ಕ್ಸೇವಿಯರನಿಂದ ದೌರ್ಜನ್ಯಕ್ಕೆ ಒಳಗಾದ ಕೆಲ ಕ್ರಿಶ್ಚಿಯನ್ ಸಮುದಾಯದವರು ಕೊಂಕಣಿ ಕ್ರಿಶ್ಚಿಯನ್ ವಿಕ್ಟಿಮ್ಸ್ ಎಂಬ ಸಂಘವನ್ನು ಕಟ್ಟಿಕೊಂಡು ಕ್ಸೇವಿಯರನಿಂದ ದೌರ್ಜನ್ಯಕ್ಕೆ ಬಲಿಯಾದವರ ವಂಶಸ್ಥರು ಎಂಬ ಆಂದೋಲನವನ್ನು ಪ್ರಾರಂಭಿಸಿ ಇಂತಹ ನರಹಂತಕನ ಶರೀರವನ್ನು ಭಾರತದಲ್ಲಿ ಇಟ್ಟುಕೊಳ್ಳುವುದು ಅಪಮಾನ ಹಾಗಾಗಿ ಅವನ ದೇಹವನ್ನು ಆತನ ತಾಯ್ನಾಡಿನ ಫ್ರಾನ್ಸಿಗೆ ಕಳುಹಿಸಬೇಕು ಎಂಬ ಬೇಡಿಕೆಯಿತ್ತು ಅದಕ್ಕಾಗಿ ರಾಷ್ಟ್ರವ್ಯಾಪಿ ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಬಲವಂತದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ತಮ್ಮ ಜೀವನ ಶೈಲಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ತಂದುಕೊಂಡರೂ ಇನ್ನೂ ಹೆಚ್ಚಿನವರೂ ತಮ್ಮ ಮೂಲ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡಲಾಗದೇ ಗೊಂದಲದ ಗೂಡಾದರು. ಉದಾಹರಣೆಗೆ ಮನೆಗಳಲ್ಲಿ ತಮ್ಮ ಕುಲದೇವತೆಗಳ ವಿಗ್ರಹಗಳನ್ನಿಟ್ಟು ಕೊಳ್ಳುವುದು, ಮನೆಯ ಮುಂದೆ ತುಳಸೀ ಗಿಡ ಬೆಳೆಸುವುದು ಮತ್ತು ಅದಕ್ಕಿ ಪ್ರತಿನಿತ್ಯ ಪೂಜೆ ಮಾಡುವುದು. ಮನೆಗೆ ಬಂದವರಿಗೆ ವಿಳ್ಳೇದೆಲೆ ಬಾಗಿಣ ಕೊಡುವುದು, ಮನೆಗಳಲ್ಲಿ ಧೋತಿ ಮತ್ತು ಸೀರೆಗಳನ್ನು ಉಡುವುದು. ಏಕದಶೀ ಮತ್ತು ಗ್ರಹಣಗಳ ಕಾಲದಲ್ಲಿ ಉಪವಾಸ ಆಚರಣೆ, ಮದುವೆಯ ಮುಂಚಿನ ದಿನಗಳಲ್ಲಿ ಹಿಂದೂ ಪದ್ದತಿಯದಂತೆ ಹಲ್ದೀ ಮತ್ತು ಮೆಹಂದೀ ಕಾರ್ಯಕ್ರಮಗಳನ್ನು ಆಚರಿಸುವುದು. ಶುಭಸಮಾರಂಭಗಳಲ್ಲಿ ವೊವಿಯೊ ಎಂಬ ಸಾಂಪ್ರದಾಯಿಕ ಹಾಡುಗಳನ್ನು ಹಾಡುವುದು, ಮಹಿಳೆಯರು ಹಣೆಯಲ್ಲಿ ಕುಂಕುಮ ಇಟ್ಟುಕೊಂಡರೇ ಪುರುಷರು ಗಂಧದ ತಿಲಕವನ್ನು ಇಟ್ಟುಕೊಳ್ಳುವುದು. ಗರ್ಭಿಣಿಯರಿಗೆ ಹಿಂದೂ ಸಂಪ್ರದಾಯದಂತೆ ಶ್ರೀಮಂತ ಮಾಡುವುದು ಮಕ್ಕಳು ಹುಟ್ಟಿದ ತಕ್ಷಣ ಜಾತಕ ಬರೆಸಿ, ನಾಮಕಾರಣ ಮಾಡುವುದು ತಮ್ಮ ಸತ್ತ ಪೂರ್ವಜರ ನೆನಪಿನಲ್ಲಿ ಶ್ರಾಧ್ಧ ಕಾರ್ಯಗಳನ್ನು ನಡೆಸುವುದು, ಅದರ ಸಲುವಾಗಿ ಹಸುವಿನ ಸಗಣಿ ಬಳಸಿ ತಮ್ಮ ಮನೆಗಳ ನೆಲ ಅಥವಾ ಗೋಡೆಗಳನ್ನು ಹೊಳಪು ಮಾಡುವುದು, ಉಪ್ಪು ಇಲ್ಲದೆ ಅನ್ನ ಮಾಡುವುದು ಹೀಗೆ ಸರಿ ಸುಮಾರು 56 ವಿವಿಧ ರೀತಿಯ ಆಚರಣೆಗಳನ್ನು ಅಪರಾಧ ಎಂದು ಕರೆದು ಅಂತಹ ಕ್ರೈಸ್ತರನ್ನು ಆಯಾಯಾ ಸ್ಥಳೀಯ ಚರ್ಚಿನ ವಿಚಾರಣಾ ನ್ಯಾಯಾಲಯ ಮೂಲಕ ಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಲು ಆರಂಭಿಸಿದರು.

ಗೋವಾ ಮಣ್ಣಿನಲ್ಲಿ ಪವಿತ್ರ ವಿಚಾರಣೆಯ ಹೆಸರಿನಲ್ಲಿ ನಡೆವ ಚಿತ್ರಹಿಂಸೆ ಮತ್ತು ಕ್ರೂರತೆಯನ್ನು ನೋಡಲು ಸೇಂಟ್ ಜೇವಿಯರ್ ಜೀವಂತವಾಗಿ ಇಲ್ಲದಿದ್ದರೂ ಅತನ ಸಲಹೆಯಂತೆ 1560 ರಲ್ಲಿ ಪೋರ್ಚುಗಲ್ ರಾಜನು ಮೊದಲ ಅಧಿಕೃತ ವಿಚಾರಣಾಧಿಕಾರಿಗಳಾದ ಅಲೆಕ್ಸೊ ಡಯಾಸ್ ಫಾಲ್ಕ್ಫೊ ಮತ್ತು ಫ್ರಾನ್ಸಿಸ್ಕೊ ಮಾರ್ಕ್ಸ್ ಅವರನ್ನು ಭಾರತಕ್ಕೆ ಕಳುಹಿಸುವ ಮುಖಾಂತರ ಗೋವಾದಲ್ಲಿ ವಿಚಾರಣೆಯನ್ನು ಸ್ಥಾಪಿಸಿದರು ಪೋರ್ಚುಗೀಸಿನ ರಾಜ ವಸಾಹತೀಕರಣದ ಭಾಗವಾಗಿ ಧರ್ಮನಿಂದೆಯ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅಧಿಕೃತ ಮನ್ನಣೆ ಕೊಟ್ಟ ಮೇಲಂತೂ ಗೋವಾದಲ್ಲಿ ಕೊಂಕಣೀ ಭಾಷೆಯನ್ನು ನಿಷೇಧಿಸಲಾಯಿತು. ಯಾವಾಗ ಶಿಕ್ಷಣದಲ್ಲಿ ಕೊಂಕಣೀ ನಿಷೇಧವಾಯಿತೋ ಅಂದಿನಿಂದ ಕೊಂಕಣಿ ಕೇವಲ ಆಡುಭಾಷೆಯಾಗಿ ಉಳಿದು ಹೋಗಿ ಅದರ ಲಿಪಿಗಳನ್ನೆಲ್ಲಾ ಸಂಪೂರ್ಣವಾಗಿ ಅಳಿಸಿ ಹಾಕಲಾಯಿತು. ಇಂದಿಗೂ ಸಹಾ ಕರ್ನಾಟಕದ ಕೊಂಕಣಿಗರು ತಮ್ಮ ಸಾಹಿತ್ಯ ರಚನೆ ಕೊಂಕಣಿಯಲ್ಲಿದ್ದರೂ ಕನ್ನಡದ ಲಿಪಿ ಬಳೆಸುತ್ತಾರೆ ಅದೇ ರೀತಿ ಗೋವಾ ಮತ್ತು ಮಹಾರಾಷ್ಟ್ರದ ಕಡೆಯವರು ಹಿಂದಿ ಇಲ್ಲವೇ ಮರಾಠಿ ಲಿಪಿಗೆ ಮೊರೆಹೋಗಿದ್ದಾರೆ ಸ್ಥಳೀಯ ಕೊಂಕಣಿಗರನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಆರಂಭಿಸಿದರು

ಇನ್ನು ಅಲ್ಲಿ ವಿಚಾರಣೆಗಳು ನಡೆಸುತ್ತಿದ್ದ ಪರಿ ಕೇಳಿದರೆ ರೋಷ ಉಕ್ಕಿ ಬರುತ್ತದೆ. ಯಾವುದೇ ಕ್ರಿಶ್ಚಿಯನ್ ವ್ಯಕ್ತಿ ಮತಾಂತರ ಹೊಂದಿದವನ ವಿರುದ್ದ ಈ ವ್ಯಕ್ತಿಯು ವಿಗ್ರಹದ ಮುಂದೆ ತಲೆಬಾಗುವುದನ್ನು ನಾನು ನೋಡಿದೆ ಎಂದೋ ಅಥವಾ, ಮೇಲೆ ತಿಳಿಸಿದ 56 ವಿವಿಧ ರೀತಿಯ ಆಚರಣೆಗಳನ್ನು ಮಾಡುತ್ತಿದ್ದ ಎಂದು ಹೇಳಿದರೆ ಸಾಕು ಹಿಂದೂ ಮುಂದೂ ವಿಚಾರಿಸಿದೇ ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿತ್ತು. ಸಾಕ್ಷಿಗಳು ತಮ್ಮ ಮೇಲೆ ಆರೀತಿ ಸುಳ್ಳು ಆರೋಪವನ್ನು ಮಾಡುತ್ತಿದ್ದಾನೆ ಎಂದು ಹೇಳಲೂ ಅವಕಾಶ ನೀಡುತ್ತಿರಲಿಲ್ಲ. ಆ ವ್ಯಕ್ತಿಯನ್ನು ಬಂಧಿಸಿದ ನಂತರ ಅವರು ಮಾಡುತ್ತಿದ್ದ ಮೊತ್ತ ಮೊದಲ ಕೆಲಸವೆಂದರೆ ಆ ವ್ಯಕ್ತಿಯ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಂಡು ಆ ಆಸ್ತಿಯ ಒಂದು ಭಾಗವನ್ನು ಆ ವ್ಯಕ್ತಿಯ ವಿರುದ್ಧ ಸಾಕ್ಷ ಹೇಳಿದವನಿಗೆ ನೀಡಲಾಗುತ್ತಿತ್ತು ಉಳಿದ ಭಾಗ ಅಲ್ಲಿಯ ಚರ್ಚಿನ ಪಾಲಾಗುತ್ತಿತ್ತು. ಅರೋಪಿಯು ತಪ್ಪೊಪ್ಪಿಗೆಯನ್ನು ಪಡೆಯಲು ವಿಚಾರಣೆಯ ಸಮಯದಲ್ಲಿ ಕಠಿಣವಾದ ಚಿತ್ರಹಿಂಸೆಯನ್ನು ಕೊಡಲಾಗುತ್ತಿತ್ತು. ಕಂಬಕ್ಕೆ ನೇತು ಹಾಕಿ ಚಿತ್ರಹಿಂಸಿಸುವುದು ಅಥವಾ ತಿರುಗಣೆಗಳಿಗೆ ಸಿಕ್ಕಿಸಿ ಹಿಂಸಿಸುವುದು. ಕಾಲುಗಳ ಮೇಲೆ ಭಾರವನ್ನು ಹೊರಿಸುವುದು ತಪ್ಪೊಪ್ಪಿಕೊಳ್ಳುವವರೆಗೂ ತೂಕವನ್ನು ಹೆಚ್ಚಿಸಲಾಗುತ್ತಿತ್ತು. ಬಿಸಿ ನೀರಿನ ಚಿತ್ರಹಿಂಸೆ, ವ್ಯಕ್ತಿಯನ್ನು ತಲೆಗೆಳಗಾಗಿ ನೇತು ಹಾಕಿ ಗಂಟಲಿನ ಸುತ್ತಲೂ ಕಬ್ಬಿಣದ ಸಲಾಕಿಗಳನ್ನು ಇರಿಸಿ, ವ್ಯಕ್ತಿಗಳ ತಲೆ ಸ್ಥಿರವಾಗಿಯೇ ಇರಬೇಕು. ಅಕಸಸ್ಮಾತ್ ಅಚೀಚೆ ಅಲುಗಿದರೂ ಸಲಾಕಿಗಳು ಆ ವ್ಯಕ್ತಿಯ ದೇಹ ಒಳಗೆ ನುಗ್ಗಿ ರಕ್ತ ಚಿಮ್ಮುತ್ತಿತ್ತು. ಮಹಿಳೆಯರು ಎನ್ನುವ ಮಮಕಾರವಿಲ್ಲದೇ ಅವರನ್ನು ವಿವಸ್ತ್ರಗೊಳಿಸಿ ಚಿತ್ರ ವಿಚಿತ್ರ ರೀತಿಯಲ್ಲಿ ಹಿಂಸಿಸಲಾಗುತ್ತಿತ್ತು. ಬಿಸಿ ಬಿಸಿಯಾದ ಮೇಣವನ್ನು ಮೈಮೇಲೆ ಸುರಿಯುವುದು, ಕೈ ಕಾಲುಗಳ ಮೇಲೆ ಬಾಸುಂಡೆ ಬರುವಂತೆ ಹೊಡೆಯುವುದು, ಹೆಂಗಸರನ್ನು ಮನಸೋ ಇಚ್ಚೆ ಅತ್ಯಾಚಾರ ಮಾಡಿ ಕಡೆಗೆ ಅವರನ್ನು ಜೀವಂತವಾಗಿ ಬೆಂಕಿಗೆ ಹಾಕಿ ಸುಡುವುದು ಹೀಗೆ ಹೇಳಲು ಅಸಾಧ್ಯವಾಗಂದತಹ ಚಿತ್ರ ವಿಚಿತ್ರಗಳ ರೂಪದಲ್ಲಿ ಹಿಂದೂಗಳನ್ನು ಹಿಂಸಿಸಿ ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಹಿಂಸಿಸುತ್ತಿದ್ದರು.

ಇಂದಿಗೂ ಗೋವಾದ ಕೊಂಕಣಿ ಹಾಥ್ ಕತ್ರೋ ಖಂಬೊ ಎಂಬಲ್ಲಿ ಒಂದು ಸ್ತಂಭವಿದೆ, ಮುರಿದ ಕೈಗಳ ಸ್ತಂಭ, ಅಲ್ಲಿ ಜನರನ್ನು ಕಟ್ಟಲಾಗುತ್ತಿತ್ತು ಮತ್ತು ಅವರನ್ನು ಜೀವಂತವಾಗಿ ಸುಡಲಾಗುತ್ತಿತ್ತು ಎನ್ನುವ ಕುರುಹುಗಳನ್ನು ಕಾಣಬಹುದಾಗಿದೆ. ಅದೇ ಕಾಲದಲ್ಲಿ ಹಿಂದೂಗಳ ಸಂಸ್ಕೃತ ಮತ್ತು ಮರಾಠಿ ಭಾಷೆಗಳಲ್ಲಿದ್ದ ಎಲ್ಲಾ ಪವಿತ್ರ ಗಂಥಗಳನ್ನು ಓದುವ ಮೂಲಕ ಸ್ಥಳೀಯರು ಧರ್ಮದ್ರೋಹಿಗಳಾಗಿರಬಹುದೆಂಬ ಅನುಮಾನದ ಮೇಲೆ ಸುಟ್ಟುಹಾಕಲಾಯಿತು. ಕಡೆಗೆ 1812 ರಲ್ಲಿ ಅಂತಿಮವಾಗಿ ವಿಚಾರಣಾ ನ್ಯಾಯಾಲಯವನ್ನು ರದ್ದುಗೊಳಿಸಿ ಅಧಿಕೃತ ದಾಖಲೆಗಳನ್ನು ಸುಟ್ಟು ಹಾಕುವ ಮೂಲಕ 250 ವರ್ಷಗಳ ಅವಧಿಯಲ್ಲಿ ಎಷ್ಟು ಜನರನ್ನು ವಿಚಾರಣೆಗೆ ಒಳಪಡಿಸಲಾಯಿತು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಸಿಗದಂತೆ ಮಾಡಿದರು. ಬಲ್ಲ ಮೂಲಗಳ ಪ್ರಕಾರ 1561-1774ರ ನಡುವಿನ 63 ವರ್ಷಗಳ ಅವಧಿಯಲ್ಲಿಯೇ, ಸುಮಾರು 16712 ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿದೆ ಎಂದು ದಾಖಲಾದ ಮಾಹಿತಿಯಿದೆ. ಆ ಸಮಯದಲ್ಲಿ ಗೋವಾದಲ್ಲಿದ್ದ ಜನಸಂಖ್ಯೆಯನ್ನು ಗಮನಿಸಿದಲ್ಲಿ 16,000 ಎಂಬ ಸಂಖ್ಯೆ ಬಲು ದೊಡ್ಡದು ಎನಿಸುತ್ತದೆ.

ಇಂದಿಗೂ ಸಹಾ ಗೋವಾದ ಪ್ರತಿಯೊಬ್ಬ ಕ್ರಿಶ್ಚಿಯನ್ನರಿಗೂ ತಮ್ಮ ಪೂರ್ವಜರು ಹಿಂದೂಗಳಾಗಿದ್ದವರು ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದನ್ನು ತಿಳಿದಿದ್ದಾರೆ. ಇಂದಿಗೂ ಹಲವರು ತಮ್ಮ ಹಿಂದಿನ ಹಿಂದೂ ಉಪನಾಮಗಳನ್ನು ಸಹಾ ಬಲ್ಲವರಾಗಿದ್ದಾರೆ. ಹಾಗಾಗಿ ಇನ್ನೂ ಅನೇಕ ಕ್ರಿಶ್ಚಿಯನ್ನರು ತಮ್ಮ ಮನೆಯ ಶುಭಸಮಾರಂಭಗಳಲ್ಲಿ ಮೊದಲು ತಮ್ಮ ಮೂಲ ಕುಟುಂಬ ದೇವತೆಗೆ ತೆಂಗಿನಕಾಯಿ ಅರ್ಪಿಸಿ ನಂತರ ಚರ್ಚ್‌ನಲ್ಲಿ ಮುಂದಿನ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ ರೂಢಿಯನ್ನು ಇರಿಸಿಕೊಂಡಿದ್ದಾರೆ.

16 ನೇ ಶತಮಾನಕ್ಕೆ ಮೊದಲು 99% ಹಿಂದೂಗಳು ಇದ್ದ ಗೋವಾದಲ್ಲಿ ಇಂದು ಅಲ್ಪ ಸಂಖ್ಯಾತರಾಗಿ ಹೋಗಿದ್ದರೂ, ಹಿಂದೂಗಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅಲ್ಲಿ ಕಳೆದ ಒಂದು ಶತಮಾನದಿಂದ ಆ ರೀತಿಯ ಘಟನೆಗಳು ಸಂಭವಿಸಿದ ಕಾರಣ ಕೋಮು ಸೌಹಾರ್ದ ಎಂಬ ನೆಪವೊಡ್ಡಿ, ಹಿಂದೂಗಳ ಮೇಲೆ ಆದ ಹಿಂದಿನ ದೌರ್ಜನ್ಯದ ಬಗ್ಗೆ ಮಾತನಾಡುವುದಕ್ಕೆ ಹಿಂಜರಿಯುತ್ತಾರೆ. ಕಾಶ್ಮೀರಿ ಬ್ರಾಹ್ಮಣರಂತೆ, 16 ಮತ್ತು 17 ನೇ ಶತಮಾನದಲ್ಲಿ ದಬ್ಬಾಳಿಕೆಯ ಪೋರ್ಚುಗೀಸ್ ಆಡಳಿತಗಾರರಿಂದ ಕ್ರಿಶ್ಚಿಯನ್ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಂಡ ಕಾರಣ ಗೋವಾದ ಗೌಡ್ ಸರಸ್ವತ್ ಬ್ರಾಹ್ಮಣ (ಜಿಎಸ್ಬಿ) ಸಮುದಾಯದ ಸದಸ್ಯರು ತಮ್ಮ ತಾಯಿನಾಡಿನಿಂದ ಪಲಾಯನ ಮಾಡುವಂತಾಯಿತು. ಗೋವಾ ವಿಚಾರಣೆ ಎಂದು ಕರೆಯಲ್ಪಡುವ ಜನಾಂಗೀಯ ಶುದ್ಧೀಕರಣವನ್ನು ಆರಂಭಿಸಿದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಗೆ ನಾವಿಂದು ಸಂತ ನ ಪಟ್ಟ ಕಟ್ಟಿ ಅದಕ್ಕೆ ಓಲ್ಡ್ ಗೋವಾದ ಬಸೆಲಿಕಾ ಡೊ ಬೊಮ್ ಚರ್ಚಿನಲ್ಲಿ ಅತನ ಶವವನ್ನು ಇಟ್ಟುಕೊಂಡರೆ ಅದಕ್ಕೆ ಯುನೆಸ್ಕೋದ ವಿಶ್ವ ಪರಂಪರೆಯ ತಾಣ ಎಂದು ಹೆಸರಿಸುತ್ತದೆ. ಹಿಂದಿನ ಇತಿಹಾಸವನ್ನು ಅರಿಯದ ಹೆಚ್ಚಿನವರು ಇಂದಿಗೂ ಅಲ್ಲಿ ಸಿಗುವ ಅಗ್ಗದ ಮಧ್ಯಕ್ಕೆ ಮರುಳಾಗಿ, ಅಲ್ಲಿನ ಸಮುದ್ರ ದಡಕ್ಕೆ ಆಕರ್ಷಿತರಾಗಿ ವಿದೇಶಗಳಿಂದ ಬರುವ ಹೆಂಗಳೆಯರ ಬೆತ್ತಲೆ ದೇಹವನ್ನು ನೋಡಲು, ಮೋಜು ಮಸ್ತಿ ಮಾಡಲು ಹಾತೊರೆವ ಹಿಂದೂಗಳನ್ನು ನೋಡಿದಾಗ ಇವರೆಲ್ಲಾ ಎಚ್ಚೆತ್ತು ಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ಕಾಡುವುದಂತೂ ಸತ್ಯ.

ಇಷ್ಟೆಲ್ಲಾ ಇತಿಹಾಸವನ್ನು ತಿಳಿದ ಮೇಲಾದರೂ ಹಿಂದುಗಳನ್ನು ಯಾರೂ ನಾಶ ಪಡಿಸಲು ಸಾಧ್ಯವಿಲ್ಲ ಎಂಬ ಹುಂಬತನದಲ್ಲಿ ಎಚ್ಚೆತ್ತು ಕೊಳ್ಳದಿದ್ದಲ್ಲಿ ಈ ಮತಾಂತರದ ಪಿಡುಗು ಕೂರೋನಾ ಮಹಾಮಾರಿಗಿಂತಲೂ ವೇಗವಾಗಿ ಹರಡಿ ಇನ್ನು ಕೆಲವೇ ವರ್ಷಗಳಲ್ಲಿ ಹಿಂದೂಸ್ಥಾನದಲ್ಲಿಯೇ ಹಿಂದೂಗಳು ಅಲ್ಪಸಂಖ್ಯಾತರಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ನಾವೆಲ್ಲ ಹಿಂದೂ ನಾವೆಲ್ಲಾ ಒಂದು. ನಾವೆಲ್ಲಾ ಹಿಂದೂ ನಾವೆಲ್ಲಾ ಬಂಧು ಒಗ್ಗಟ್ಟಾದಲ್ಲಿ ಉಳಿಗಾಲವಿದೆ.

ಏನಂತೀರೀ?

One thought on “ಗೋವಾ ಗೋಳಿನ ಕಥೆ ವ್ಯಥೆ  ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s