ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

kame4ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಅನಕ್ಷರಸ್ಥ ಕುರಿ ಕಾಯುವ ವೃತ್ತಿಯನ್ನು ಮಾಡುವ 84 ವರ್ಷ ಕುರುಬ ಕಲ್ಮನೆ ಕಾಮೇಗೌಡ ಎಂಬ ಹೆಸರು ಬಹುಶಃ ಅವರ ಊರು ಅಥವಾ ಅವರ ತಾಲ್ಲೂಕಿನ ಹೊರತಾಗಿ ಹೊರಗಿನವರಿಗೆ ಹೆಚ್ಚಾಗಿ ಪರಿಚಯವೇ ಇರಲಿಲ್ಲ. ಆದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್  ನಲ್ಲಿ ಈ ವ್ಯಕ್ತಿಯ ಬಗ್ಗೆ  ಯಾವಾಗ ಮಾತನಾಡಿದರೋ ಆ ಕೂಡಲೇ ಅವರ ಹೆಸರು ದೇಶಾದ್ಯಂತ ಪರಿಚಿತವಾಗಿ ಗೂಗಲ್ಲಿನಲ್ಲಿ ಅತ್ಯಂತ ಹೆಚ್ಚಿನ ಜನರು  ಅವರ ಬಗ್ಗೆ ಹುಡುಕಿದ್ದಾರೆ ಎಂದರೆ ತಪ್ಪಾಗಲಾರದು.

 

kame1ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಮಾಡುತ್ತಿದ್ದ ಕೆಲಸವನ್ನು ಮತ್ತು ಇಂದಿನ  ಅನೇಕ ಸರ್ಕಾರಗಳೂ ಮಾಡದಂತಹ ಶ್ಲಾಘನೀಯವಾದ ಕೆಲಸವನ್ನು ಅವರು ಯಾವುದೇ ಆರ್ಥಿಕ ನೆರವಿಲ್ಲದೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿರುವುದು ನಿಜಕ್ಕೂ ಅದ್ಭುತ, ಅಮೋಘ, ಅನನ್ಯ, ಆಭಿನಂದನಾರ್ಹ ಮತ್ತು ಅನುಕರಣಿಯವಾದುದು. ಇಂದಿನ ಕಾಲದಲ್ಲಿ ಇರುವ ಕೆರೆ ಕಟ್ಟೆಗಳನ್ನೇ  ದುರಾಸೆಯಿಂದ  ತಮ್ಮ ಸ್ವಾರ್ಥಕ್ಕಾಗಿ  ಮುಚ್ಚಿ ಹಾಕಿ ಅದರ ಮೇಲೆ  ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುವವರೇ ಹೆಚ್ಚಾಗಿರುವಾಗ, ಕಳೆದ 42 ವರ್ಷಗಳಲ್ಲಿ ಅವರು ತಮ್ಮ ಹಳ್ಳಿಯಲ್ಲಿ 16 ಕೊಳಗಳನ್ನು  ನಿರ್ಮಿಸಿ  ತಮ್ಮ ಗ್ರಾಮದಲ್ಲಿ ಹಸಿರು ಪರಿಸರದ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಬೇಸಿಗೆಯೂ ಸೇರಿದಂತೆ ವರ್ಷವಿಡೀ ನೀರಿನಿಂದ ತುಂಬಿ ತುಳುಕುತ್ತಾ  ಸುತ್ತ ಮುತ್ತಲಿನ  ಪಶು ಪಕ್ಷಿಗಳಿಗೆ ನೀರುಣಿಸುತ್ತಿದೆಯಲ್ಲದೇ ಇಡೀ ಅವರ ಹಳ್ಳಿಯನ್ನು  ಹಚ್ಚ ಹಸಿರು ವಲಯವನ್ನಾಗಿಸಿದೆ.

ಸುಮಾರು 42 ವರ್ಷಗಳ ಹಿಂದೆ ಮಳವಳ್ಳಿ ತಾಲೂಕ್ಕಿನಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ದಾಸನದೊಡ್ಡಿ ಗ್ರಾಮದ ಹೊರವಲಯದಲ್ಲಿರುವ ಕುಂದನ ಬೆಟ್ಟ ಬಹುತೇಕ ಬಂಜರನಿಂದ ಕೂಡಿದ್ದು ಬೆಟ್ಟದಲ್ಲಿ ಯಾವುದೇ ಹಸಿರು ಇಲ್ಲದೆ ವಿರಳವಾದ ಪೊದೆಗಳಿದ್ದವು. ಈ ಬೆಟ್ಟಕ್ಕೆ ತಮ್ಮ ಕುರಿಗಳನ್ನು ಮೇಯಿಸಲು ಕರೆದು ಕೊಂಡು ಹೋದಾಗ ಕುರಿಗಳಿಗೆ ನೀರಿನ ಕೊರತೆ ಕಾಣಿಸಿದಾಗ ಇದಕ್ಕೊಂದು ಪರಿಹಾರವನ್ನು ಕಂಡು ಹಿಡಿಯಲೇ ಬೇಕೆಂದು ನಿರ್ಧರಿಸಿ, ಬೆಟ್ಟದ ಮೇಲೆ ಸುರಿಯುತ್ತಿದ್ದ ಮಳೆಯ ಎಲ್ಲಿಯೂ ನಿಲ್ಲದೇ ಸುಮ್ಮನೆ  ಇಳಿಜಾರುಗಳಲ್ಲಿ  ಹರಿದು ಹೋಗುತ್ತಿದ್ದನ್ನು ಗಮನಿಸಿ ಅವುಗಳನ್ನು ಆ ಬೆಟ್ಟದ ಮೇಲೆಯೇ ಹಿಡಿದಿಡಬೇಕೆಂದು ನಿರ್ಧರಿಸಿ ಅಲ್ಲಿಯೇ ಹೊಂಡವನ್ನು ನಿರ್ಮಿಸಲು ಯೋಚಿಸಿದರು.

ಕೊಳವನ್ನೇನೋ ನಿರ್ಮಿಸಲು ನಿರ್ಧರಿಸಿಯಾಗಿತ್ತು. ಅದರೆ ಅದಕ್ಕೆ ಬೇಕಾದ ಹಾರೆ, ಪಿಕಾಸಿ, ಗುದ್ದಲಿಯಂತಹ ಪರಿಕರಗಳನ್ನು ಕೊಳ್ಳಲು ಆವರ ಬಳಿ ಹಣವಿಲ್ಲದಿದ್ದಾಗ, ತಮ್ಮ  ಒಂದೆರಡು ಕುರಿಗಳನ್ನು ಮಾರಿ ಹಣವನ್ನು ಹೊಂಚಿಕೊಂಡು ತಮ್ಮ ಕೆಲಸವನ್ನು ಆರಂಭಿಸಿಯೇ ಬಿಟ್ಟರು. ಮೊದಲ ಕೊಳವನ್ನು ಅವರೊಬ್ಬರ ಪರಿಶ್ರಮದಿಂದಲೇ ನಿರ್ಮಿಸಲು ಸುಮಾರು ಆರು ತಿಂಗಳುಗಳ ಕಾಲ ತೆಗೆದುಕೊಂಡರು. ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 9 ರವರೆಗೆ ಕೊಳಗಳನ್ನು ಅಗೆದು  ಆನಂತರ 9 ರಿಂದ ಸಂಜೆ 7 ರವರೆಗೆ ಕುರಿಗಳನ್ನು ಮೇಯಿಸುವ ವೇಳಾಪಟ್ಟಿಯನ್ನು ತಮ್ಮ ಕಾಯಕದಲ್ಲಿ ಅಳವಡಿಸಿಕೊಂಡು ಇದನ್ನೇ ಸುಮಾರು 42 ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

kame3ಆರು ತಿಂಗಳುಗಳ ಕಾಲ ಸತತ ಪರಿಶ್ರಮದಿಂದ ಬೆಟ್ಟದ ತಪ್ಪಲಿನಲ್ಲಿ ಅಗೆದ ಕೊಳದಲ್ಲಿ ಮಳೆಯ ನೀರು, ಹನಿ ಹನಿ ಗೂಡಿದರೇ ಹಳ್ಳ ಎನ್ನುವಂತೆ ಅವರ ಕೊಳದಲ್ಲಿ ನೀರು ತುಂಬಿದೊಡನೇ ಆ ನೀರನ್ನು ಕುಡಿಯಲು ಬೆಟ್ಟದ ಸುತ್ತಮುತ್ತಲಿನ ಪಶುಪಕ್ಷಿಗಳು ಬರತೊಡಗಿದ್ದನ್ನು ನೋಡಿದಾಗ ಕಾಮೇಗೌಡರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ ಮತ್ತು ಆದಕ್ಕೆ ಬೆಲೆ ಕಟ್ಟಲಾಗಲಿಲ್ಲ. ಈ ಕಾರ್ಯದಿಂದ ಪ್ರೋತ್ಸಾಹಿತರಾಗಿ ಮತ್ತಷ್ಟೂ ಹಳ್ಳಗಳನ್ನು ತೋಡಲು ನಿರ್ಧರಿಸಿದರು. ಆದರೆ ಈಗ ಅವರೊಬ್ಬರಲ್ಲದೇ ಅವರೊಂದಿಗೆ ಕೈಜೋಡಿಸಲು ಕೆಲವು ಗ್ರಾಮಸ್ಥರೂ ಒಪ್ಪಿಕೊಂಡರು. ಅವರೆಲ್ಲರ ಸಹಕಾರ ಮತ್ತು ಪರಿಶ್ರಮದಿಂದ ಈಗ ಕುಂಡಿನಿ ಬೆಟ್ಟದ ಸುತ್ತ ಮುತ್ತಲು ಒಟ್ಟು 16 ಕೊಳಗಳನ್ನು ನಿರ್ಮಿಸಿದ್ದಾರೆ. ವರ್ಷವಿಡೀ ಇಲ್ಲಿ ನೀರು ಇರುವುದರಿಂದ ಕುಂಡಿನಿಬೆಟ್ಟವು ಹಚ್ಚ ಹಸಿರಿನಿಂದ ಕೂಡಿರುವುದಲ್ಲದೇ ಅಲ್ಲಿಯ ಅಂತರ್ಜಲದ ಪ್ರಮಾಣವೂ ಹೆಚ್ಚಾಗಿದೆ. ಇನ್ನೂ ಒಂದು ಗಮನಾರ್ಹವಾದ ಅಂಶವೆಂದರೆ ಈ ಎಲ್ಲಾ ಕೊಳಗಳಿಗೂ ಒಂದಕ್ಕೊಂದು ಸಂಪರ್ಕ ಹೊಂದಿದ್ದು ಈ ಎಲ್ಲಾ ಕೊಳಗಳು ತುಂಬಿ ತುಳುಕಿದ ನಂತರ ಹೆಚ್ಚುವರಿ ನೀರು ಕೆಳಗಿನ ಕೊಳಗಳಿಗೆ ಹರಿಯುವಂತೆ ನಿರ್ಮಿಸಿರುವುದು ಅವರ ಜಾಣ್ಮೆಯನ್ನು ತೋರಿಸುತ್ತದೆ. ತಮ್ಮೆಲ್ಲಾ ಸಮಯವನ್ನು ಈ ಕೊಳಗಳ ನಿರ್ಮಾಣ ಮತ್ತು ನಿರ್ವಹಣೆಗೇ ಮೀಸಲಿಟ್ಟಿರುವುದರಿಂದ ಶ್ರೀ ಕಾಮೇಗೌಡರನ್ನು ಅಲ್ಲಿಯ ಜನ ಹುಚ್ಚ ಎಂದು ಕರೆದರೂ ಅದಕ್ಕೆ ಇವರು ಸೊಪ್ಪು ಹಾಕದೇ ತಮ್ಮ ಕೆಲಸವನ್ನು ತಾವು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಬೆಟ್ಟದ ಮೇಲಿನ ಬಿದ್ದ ನೀರು ಹಾಗೆಯೇ ಹರಿದು ಹೋಗಬಾರದೆಂದು ಹೊರಗಿನಿಂದ ಹುಲ್ಲನ್ನು ತಂದು ಇಡೀ ಬೆಟ್ಟದ ಮೇಲೆ ಬೆಳೆಸಿದ್ದರಿಂದ  ಅಲ್ಲಿನ ಮಣ್ಣಿನ ತೇವಾಂಶ  ಹಾಗೆಯೇ ಉಳಿದಿದೆಯಲ್ಲದೇ ಮಣ್ಣಿನ ಸವಕಳಿಯನ್ನು ತಡೆದು ಮರ ಗಿಡಗಳು ಸದಾಕಾಲವೂ ಹಚ್ಚ ಹಸಿರಾಗಿರುತ್ತವೆ. ಇಷ್ಟೋಂದು ಕೊಳಗಳನ್ನು ನಿರ್ಮಿಸಲು ಸುಮಾರು 10 ರಿಂದ 15 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರಾದರೂ ಅವರು ಎಂದಿಗೂ ಸಾಲ ತೆಗೆದುಕೊಂಡಿಲ್ಲ ಎನ್ನುವುದು ಮೆಚ್ಚ ಬೇಕಾದ ಸಂಗತಿ. ಅವರ ಈ ಹೆಮ್ಮೆಯ ಕಾರ್ಯವನ್ನು ಗುರುತಿಸಿ ಅವರಿಗೆ ಬಸವಶ್ರೀ  ಪ್ರಶಸ್ತಿಯಲ್ಲದೇ ಇನ್ನೂ ಹಲವಾರು ಪುರಸ್ಕಾರಗಳು ಮತ್ತು ನಗದುಗಳು ಬಂದಾಗ  ಅದೆಲ್ಲವನ್ನೂ ತಮ್ಮ ಸ್ವಂತಕ್ಕೆ ಬಳಸಿಕೊಳ್ಳದೇ ಎಲ್ಲವನ್ನೂ ಈ ಕೊಳಗಳ ನಿರ್ಮಾಣಕ್ಕೇ ಸುರಿದಿದ್ದಾರೆ.

ಪಿತ್ರಾರ್ಜಿತವಾಗಿ ಬಂದಿರುವ  ಎರಡು ಎಕರೆ ಭೂಮಿ ಮತ್ತು ಒಂದು ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿಯೇ ಇಂದಿಗೂ ವಾಸಿಸುತ್ತಿರುವ ಕಾಮೇಗೌಡರು ತಮ್ಮ ಆದಾಯವನ್ನು ಕೊಳಗಳ ನಿರ್ಮಾಣಕ್ಕೆ ಬಳಸಿಕೊಳ್ಳದೇ ಸ್ವಾರ್ಥಕ್ಕೆ ಬಳಸಿಕೊಂಡಿದ್ದಲ್ಲಿ ಇಂದು ಅನೇಕ ಎಕರೆಗಳ ಭೂಮಿಯ ಒಡೆಯರಾಗುವುದಲ್ಲದೇ, ಉತ್ತಮವಾದ ಮನೆಯಲ್ಲಿರಬಹುದಾಗಿತ್ತೇನೋ?

ತಮ್ಮ ಪರಿಶ್ರಮದಿಂದ ನಿರ್ಮಿಸಿದ ಈ ಎಲ್ಲಾ ಕೊಳಗಳಿಗೂ ತಮ್ಮ ಮೊಮ್ಮಕ್ಕಳ ಹೆಸರನ್ನು ಇಟ್ಟಿರುವುದು ಒಂದು ಗಮನಿಸ ಬೇಕಾದ ಅಂಶ. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹಣವನ್ನು ನೀಡಿದರೆ, ಅದನ್ನು ಅವರು ಖರ್ಚು ಮಾಡಿ ದಿವಾಳಿಯಾಗಿ ಬಿಡುತ್ತಾರೆ ಆದರೆ ಅದೇ ವರ್ಷಪೂರ್ತಿ ನೀರಿರುವ ಈ ಕೊಳಗಳನ್ನು ಅವರಿಗೆ ನೀಡಿದರೆ, ಅವರು ಸದಾಕಾಲವೂ ಅತ್ಯಂತ ಶ್ರೀಮಂತರಾಗುತ್ತಾರೆ ಎಂದು ಮುಗ್ಧವಾಗಿ ಹೇಳುತ್ತಾರೆ ಶ್ರೀ ಕಾಮೇಗೌಡರು.

ತಮ್ಮೂರಿನ ಅಂತರ್ಜಲದ ವೃದ್ಧಿಗಾಗಿ ಕಾಮೇಗೌಡರು ಸ್ವಂತ ಶ್ರಮದಿಂದ ತಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ  ಸುತ್ತಮುತ್ತಲ ರೈತರಿಗೆ ಅನುಕೂಲವಾಗುವಂತೆ ಯಾರ ನೆರವಿಲ್ಲದೇ ನಿರ್ಮಿಸಿದ ಕೊಳಗಳಿಂದ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಕೊಳಗಳಲ್ಲಿ ನೀರು ಸಂಗ್ರಹವಾದುದರಿಂದ ಪ್ರಾಣಿ, ಪಕ್ಷಿಗಳಿಗಳೂ ಅಲ್ಲಿ ನೆಲೆಗೊಂಡವು. ಅದರ ಜೊತೆಗೆ ಸುತ್ತಮುತ್ತಲ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ.

ಈ ರಮಣೀಯ ನಿಸರ್ಗ ಸೌಂದರ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆಯಲ್ಲದೇ ಆ ಪರ್ವತದ ಸುತ್ತಲೂ ಇತಿಹಾಸ ಪ್ರಸಿದ್ಧವಾದ ಮಲ್ಲಪ್ಪ, ಕುಂದೂರಮ್ಮ, ಶ್ರೀ ರಷಸಿದ್ದೇಶ್ವರ ಮಠ, ಸಿದ್ದಪ್ಪಾಜಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಂದ ಕೂಡಿದ್ದು ಈಗ ಒಂದು ರೀತಿಯ ಪ್ರವಾಸಿ ತಾಣವಾಗಿ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಜಿಲ್ಲಾಡಳಿತವು ಕಲ್ಮನೆ ಕಾಮೇಗೌಡರು ನಿರ್ಮಿಸಿದ ಕೊಳಗಳ  ಪಕ್ಕದಲ್ಲಿಯೇ ಸುಂದರ ವಿಗ್ರಹಗಳನ್ನು ನಿರ್ಮಿಸಿ, ಅಲ್ಲಿಯೇ ಎಲ್ಲರೂ  ಕುಳಿತುಕೊಂಡು ವಿಶ್ರಾಂತಿ ಪಡೆಯುವಂತೆ ಆಸನದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಅಲ್ಲಿರುವ ಕಲ್ಲಿನ ಹೆಬ್ಬಂಡೆಗಳ ಮೇಲೆ ಸ್ವತಃ ಕಾಮೇಗೌಡರು ಬರೆಸಿರುವ ಸಂದೇಶಗಳು ಮನಮುಟ್ಟುವಂತಿವೆ. ಇವೆಲ್ಲವೂ ಅಂತರ್ಜಲದ ಮಹತ್ವದ ಬಗ್ಗೆ ಪ್ರವಾಸಿಗರಿಗೆ ತಿಳಿ ಹೇಳುತ್ತಿದೆ.

ಕೇವಲ ನೀರಿನ ಹೊಂಡಗಳನ್ನು ನಿರ್ಮಿಸುವುದಕ್ಕಷ್ಟೇ ತಮ್ಮನ್ನು ಸೀಮಿತರಾಗಿಸಿಕೊಳ್ಳದ ಶ್ರೀಯುತರು, ನೀರಿನೊಂದಿಗೆ ಪ್ರಕೃತಿಯ ಅಭಿವೃದ್ಧಿಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ, ಈ ಮಹತ್ಕಾರ್ಯಕ್ಕೆ ಈ ರಮಣೀಯ ಪ್ರದೇಶವನ್ನು ನೋಡಲು ರಾಜ್ಯದ ಮೂಲೆ ಮೂಲೆಯಿಂದ ಬರುತ್ತಿರುವ ಜನರು ಅವರ ಕಾರ್ಯವನ್ನು ಶ್ಲಾಘಿಸಿ, ತಾವೂ ಸಹಾ ಗಿಡಗಳನ್ನು ನೆಡುವ ಮೂಲಕ ಕೈಜೋಡಿಸುತ್ತಿದ್ದಾರೆ. ಕಾಮೇಗೌಡರ ಕಾಮನೆಯಂತೆ ಈ ಎಲ್ಲಾ ಕೆಲಸಗಳೂ ಪೂರ್ಣವಾದಲ್ಲಿ ಮಳೆಯ ನೀರು ಪೋಲಾಗುವುದನ್ನು  ತಡೆದು ಅಂತರ್ಜಲ ವೃದ್ಧಿಯನ್ನು ಮಾಡಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

kame2ಕಾಮೇಗೌಡರ ಕಾರ್ಯವೈಖರಿಯನ್ನು ಮೆಚ್ಚಿ ಈಗಾಗಲೇ ಬಸವಶ್ರೀ, ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹಲವಾರು ರಾಷ್ಟ್ರೀಯ ಮ್ತತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಸಾಮಾನ್ಯರಿಗೆ ಈ ರೀತಿಯಾಗಿ ದೊರೆತ ಹಣವನ್ನು ವಯಕ್ತಿಯ ಹಿತಾಸಕ್ತಿಗೋ ಇಲ್ಲವೇ ಮದ್ಯಕ್ಕಾಗಿ ಖರ್ಚು ಮಾಡಡಿದರೇ,  ನಾನು ಮಾತ್ರಾ ಈ  ಹಣವನ್ನು ಕೊಳಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಳೆಸುತ್ತೇನೆ, ಇದೇ ನನ್ನ  ಚಟ ಎಂದು ಹೇಳಿ ಮುಗುಮ್ಮಾಗಿ ನಗುತ್ತಾರೆ.  ಇಷ್ಟೆಲ್ಲಾ ಸಾಧನೆ ಮಾಡಿರುವ ನಿಮ್ಮ ಗುರಿ ಏನು ಎಂದು ಕೇಳಿದರೆ,  ಇನ್ನೂ 4 ಕೊಳಗಳನ್ನು  ನಿರ್ಮಿಸಿ ತನ್ನ ಜೀವಿತಾವಧಿಯಲ್ಲಿ ಒಟ್ಟು 20 ಕೊಳಗಳನ್ನು ನಿರ್ಮಿಸುವುದು  ನನ್ನ ಜೀವನದ ಹೆಗ್ಗುರಿ ಎನ್ನುತ್ತಾರೆ  84 ವರ್ಷದ ಇಳೀ ವಯಸ್ಸಿನ ಕಲ್ಮನೆ ಕಾಮೇಗೌಡರು.

kame7ಭಗವಂತ ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯವನ್ನು ಕೊಟ್ಟು ಅವರ ಕನಸು ನನಸಾಗುವಂತೆ ಮಾಡಲೀ. ಆ ಮೂಲಕ ಸುತ್ತ ಮುತ್ತಲಿನ ಜನರಿಗೆ ಇನ್ನೂ ಹೆಚ್ಚಿನ ಅನುಕೂಲಗಳಾಗಲೀ ಮತ್ತು ಅವರ ಹೆಸರು ಅಚಂದ್ರಾರ್ಕವಾಗಿ ಚಿರಸ್ಥಾಯಿಯಾಗಲೀ ಎಂದು ಹಾರೈಸೋಣ.

 

ಏನಂತೀರೀ?

One thought on “ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s