ಶ್ರೀ ಕುದ್ಮುಲ್ ರಂಗರಾಯರು

ಬ್ರಿಟೀಷರು ಭಾರತೀಯರನ್ನು ಒಡೆದು ಆಳುವ ನಿಟ್ಟಿನಲ್ಲಿ ಬಿತ್ತಿಹೋದ ಜಾತಿ ಮತ್ತು ಸಾಮಾಜಿಕ ಅಸಮಾನತೆ ಎಂಬ ಕಳೆ ಈಗ ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಸಮಾನತೆಯ ಪಿಡುಗನ್ನು ತೊಡೆದು ಹಾಕುವುದರಲ್ಲಿ ತಮ್ಮದೇನೂ ಕಿಂಚಿತ್ ಪಾತ್ರವಿರದಿದ್ದರೂ ತಮ್ಮ ಬಾಯಿ ಚಪಲ ಮತ್ತು ಸುತ್ತಮುತ್ತಲಿನ ವಂದಿಮಾಗಧರ ಚೆಪ್ಪಾಳೆಗಾಗಿ ದಲಿತರು, ಬಲಿತರು ಎಂಬ ವಿತಂಡವಾದವನ್ನು ಮಂಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿರುವವರೇ ಹೆಚ್ಚಾಗಿರುವಾಗ ಈ ಸಂದರ್ಭದಲ್ಲಿ ಸುಮಾರು ಸುಮಾರು 150 ವರ್ಷಗಳ ಹಿಂದೆಯೇ ದೀನ ದಲಿತರ ಸೇವೆಗಾಗಿಯೇ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದ ಶ್ರೀ ಕುದ್ಮಲ್  ರಂಗರಾವ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ.

ಇತ್ತೀಚಿನ ಯಾವುದೇ ದೃಶ್ಯ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಕಾಣ ಸಿಗುವ ಒಂದೇ ಒಂದು ಪ್ರಮುಖ ಅಂಶವೆಂದರೆ, ಮೀಸಲಾತಿ. ಆ ಎಲ್ಲಾ ನಾಯಕರುಗಳ ಬಾಯಿಯಲ್ಲಿ ದಲಿತರು ಮತ್ತು ಅಂಬೇಡ್ಕರ್ ಬಿಟ್ಟರೆ ಬರುವ ಮೂರನೇ ಪದವೇ ಬ್ರಾಹ್ಮಣರ ವಿರೋಧ. ತಲತಲಾಂತರಗಳಿಂದಲೂ ಬ್ರಾಹ್ಮಣರು ನಮ್ಮ ಏಳಿಗೆಯನ್ನು ತಡೆದರು ಎಂಬುದಾಗಿ ಪುಂಖಾನು ಪುಂಖವಾಗಿ ಹೇಳುತ್ತಾರಾದರೂ, ಅದಕ್ಕೆ ತಕ್ಕ ಸಾಕ್ಷಿ ಮತ್ತು ಪುರಾವೆ ಗಳನ್ನು ಒದಗಿಸಿ ಎಂದು ಹೇಳಿದರೆ ಬೆಬ್ಬೆಬೇ ಎಂದು ತೊದಲುತ್ತಾರೆ. ಆದರೆ ನಿಜವಾಗಿಯೂ ಅವರು ತಿಳಿದುಕೊಳ್ಳಬೇಕಾಗಿರುವ ವಿಷಯವೇನಂದರೆ, ಭೀಮ್ ರಾವ್ ಎಂಬ ದಲಿತ ಹುಡುಗನಿಗೆ ಅವರ ಪ್ರಾಥಮಿಕ ಶಾಲೆಯ ಗುರುಗಳಾಗಿದ್ದ ಶ್ರೀ ಕೃಷ್ಣ ಕೇಶವ್ ಅಂಬೇಡ್ಕರ್ ಎಂಬ ದೇವ್ರುಖೆ ಬ್ರಾಹ್ಮಣ ಶಾಲಾ ದಾಖಲೆಗಳಲ್ಲಿ ತಮ್ಮದೇ ಆದ ಉಪನಾಮವಾದ ಅಂಬೇಡ್ಕರ್ ಎಂದು ಬದಲಾಯಿಸಿ ಅವರಿಗೆ ಸಮಾಜದಲ್ಲಿ ಸ್ಥಾನಮಾನ ಸಿಗುವಂತೆ ಮಾಡಿದ್ದರು.

ನಾನೀಗ ಹೇಳ ಹೊರಟಿರುವುದು, ದಲಿತೋದ್ಧಾರಕ ಅಂಬೇಡ್ಕರ್ ಅವರಿಗೇ ಮಾರ್ಗದರ್ಶಕರಾಗಿದ್ದ, ಜನ್ಮತಃ ಬ್ರಾಹ್ಮಣರಾಗಿದ್ದು, ದಲಿತರ ಉದ್ದಾರಕ್ಕೆಂದೇ ತಮ್ಮ ಇಡೀ ಜೀವಮಾನವನ್ನು ತೇಯ್ದ ಶ್ರೀ ಕುದ್ಮುಲ್ ರಂಗರಾವ್ ಅವರ ಬಗ್ಗೆ. ಅವಿಭಜಿತ ದಕ್ಷಿಣ ಕನ್ನಡದ ಕುದ್ಮಲ್ ಎಂಬ ಗ್ರಾಮದ ಗೌಡ ಸಾರಸ್ವತ ಬ್ರಾಹ್ಮಣ ದಂಪತಿಗಳಾದ ಶ್ರೀ ದೇವಪ್ಪಯ್ಯ ಮತ್ತು ಗೌರಿ ದಂಪತಿಗಳ ಮಗನಾಗಿ 1859 ರ ಜೂನ್ 29 ರಂಗರಾವ್ ಜನಿಸುತ್ತಾರೆ. ಮಧ್ಯಮ ವರ್ಗದ ಅವರ ತಂದೆ ದೇವಪ್ಪಯ್ಯನವರು ಅಲ್ಲಿಯ ಸ್ಥಳೀಯ ಭೂಮಾಲೀಕರೊಬ್ಬರ ಹತ್ತಿರ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ರಂಗರಾವ್ ಅವರಿಗೆ ಸುಮಾರು 16 ವರ್ಷವಿದ್ದಾಗ ಅವರ ತಂದೆ ಅಸುನೀಗಿದಾಗ ಅಮ್ಮ ಅಮ್ಮನ ಊರಾದ ಕಾಸರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಉದ್ಯೋಗ ಹುಡುಕಿಕೊಂಡು ಮಂಗಳೂರಿಗೆ ಬಂದು ಅಲ್ಲಿಯ ಶಾಲೆಯೊಂದರಲ್ಲಿ ಮಾಸಿಕ 8 ರೂಪಾಯಿಗಳ ಸಂಬಳದ ಶಿಕ್ಷಕರಾಗಿ ಕೆಲಸ ಪ್ರಾರಂಭಿಸುತ್ತಾರೆ. ಎಷ್ಟೇ ಹಣಕಾಸಿನ ತೊಂದರೆಗಳಿದ್ದರೂ ಬಹಳಷ್ಟು ಪರಿಶ್ರಮದಿಂದ ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಪ್ಲೀಡರ್‌ಶಿಪ್ ಪರೀಕ್ಷೆಯನ್ನು ಮುಗಿಸಿ ಮಂಗಳೂರಿನ ಸ್ಥಳೀಯ ನ್ಯಾಯಾಲಯದಲ್ಲಿ ತಮ್ಮ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಹೆಸರಿಗಷ್ಟೇ ವಕೀಲ ಅದರೆ ಅದರಿಂದ ಅವರಿಗೆ ಚಿಕ್ಕಾಸು ಹುಟ್ಟುತ್ತಿರಲಿಲ್ಲ ಕಾರಣ ಅವರ ಹತ್ತಿರ ಬರುತ್ತಿದ್ದವರೆಲ್ಲರೂ ಅರ್ಥಿಕವಾಗಿ ಕಡು ಬಡವರೇ, ಹಾಗಾಗಿ ಅವರನ್ನು ಬಡವರ ವಕೀಲ ಎಂದೇ ಎಲ್ಲರು ಕರೆಯುತ್ತಿದ್ದರು. ವಕೀಲಿತನ ಅವರ ವೃತ್ತಿಯಾಗಿದ್ದರೂ ಮಕ್ಕಳಿಗೆ ಪಾಠ ಹೇಳಿಕೊಡುವುದು ಅವರ ಪ್ರವೃತ್ತಿಯಾಗಿತ್ತು. ಶಿಕ್ಷಣವೇ ಪ್ರಗತಿಯ ಮೂಲ ಎಂಬುದು ಅವರ ಸಿದ್ಧಾಂತವಾಗಿತ್ತು. 19ನೇ ಶತಮಾನದ ಅಂತ್ಯದಲ್ಲಿ ದಲಿತರಿಗೆ ಯಾವುದೇ ಶಾಲಾ, ಸಂಸ್ಥೆಗಳಲ್ಲಿ ಮುಕ್ತ ಪ್ರವೇಶವಿರಲಿಲ್ಲದ ಕಾರಣ, ಅದೆಷ್ಟೋ ದೀನದಲಿತ ಮಕ್ಕಳು ಶಾಲೆಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗಿರುವುದನ್ನು ಮನಗೊಂಡು ದೀನ ದಲಿತರಿಗಾಗಿ ವಕೀಲ ವೃತ್ತಿಗೆ ರಾಜಿನಾಮೆ ನೀಡಿದರು. Depressed Classes Mission ಡಿ. ಸಿ. ಎಂ. ಸಂಸ್ಥೆ ಸ್ಥಾಪಿಸಿ ಮಂಗಳೂರಿನ ಕಂಕನಾಡಿ, ಮೂಲ್ಕಿ, ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಕಾಡು ಇಲ್ಲಿ ದಲಿತರಿಗೆ ಉಚಿತ ಶಾಲೆಗಳನ್ನು ತೆರೆದು ಅವುಗಳನ್ನು ಪಂಚಮಾ ಶಾಲೆಗಳು ಎಂದು ಕರೆದರು. ಈ ಶಾಲೆಗಳಿಗೆ ಪರಿಶಿಷ್ಟ ಜಾತಿಯ ಅಧ್ಯಾಪಕರನ್ನು ನೇಮಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ದಾರಿ ದೀಪವಾಗಿದ್ದರು. ಮಕ್ಕಳುಗಳು ಶಾಲೆಗಳಿಗೆ ತಪ್ಪದೇ ಹಾಜರಾಗುವಂತೆ ಮನವೊಲಿಸಲು ತಮ್ಮ ಶಾಲಾ ಮಕ್ಕಳಿಗೆ ಅವರೇ ಸ್ನಾನ ಮಾಡಿಸಿ ಅವರನ್ನು ಸ್ವಚ್ಚವಾಗಿ ಇರುವಂತೆ ನೋಡಿಕೊಂಡರು. ಆವರ ಪೋಷಕರಿಗೆ ಅಂದಿನ ಕಾಲದಲ್ಲಿಯೇ ಕೇವಲ 2 ಪೈಸೆಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿದ್ದಲ್ಲದೇ ಅವರೊಂದಿಗೇ ರಂಗರಾವ್ ಊಟವನ್ನು ಮಾಡುತ್ತಿದ್ದರು ಮತ್ತು ಗುಡಿಸಲುಗಳಲ್ಲಿಯೇ ಮಲಗುತ್ತಿದ್ದರು. ಅದರಲ್ಲನೇಕರು ಇನ್ನೂ ಜೀತ ಪದ್ದತಿಯ ದಾಸ್ಯ ಜೀವನವನ್ನು ನಡೆಸುತ್ತಿದ್ದದ್ದನ್ನು ಗಮನಿಸಿ ಆ ಅನಾಗರಿಕ ಯಜಮಾನರ ಹಿಡಿತದಿಂದ ಅವರನ್ನು ಬಿಡುಗಡೆ ಗೊಳಿಸಿದರು.

ಶೇಡಿಗುಡ್ಡೆಯಲ್ಲಿ ದಲಿತರಿಗೆಂದೇ ಕೈಗಾರಿಕಾ ತರಭೇತಿ ಶಾಲೆ ತೆರೆದು ವೃತ್ತಿಪರ ಶಿಕ್ಷಣಗಳಾದ ಬಡಗಿ, ನೇಯ್ಗೆ, ರೇಷ್ಮೆ, ತೋಟಗಾರಿಕೆ, ಕಸೂತಿಗಳ ತರಭೇತಿ ನೀಡಿದರು. ದೂರದ ಊರಿನಿಂದ ಬರುವ ಹೆಣ್ಣು ಮಕ್ಕಳಿಗೆಂದೇ ವಿದ್ಯಾರ್ಥಿನಿಲಯವನ್ನು ಶೇಡಿಗುಡ್ಡೆಯಲ್ಲಿ ಸ್ಥಾಪಿಸಿ ಅವರ ವಿದ್ಯಾಭ್ಯಾಸಕ್ಕೆ, ಸ್ಫೂರ್ತಿ ಹಾಗೂ ಬೆಳವಣಿಗೆಗೆ ಅವಕಾಶ ಕಲ್ಪಿಸಿದರು. ಕೊರಗ ಜನಾಂಗದವರಿಗೆ ಕೋರ್ಟಗುಡ್ಡೆ ಬಳಿ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಲ್ಲದೇ, ವಿಧವೆಯರು ಮತ್ತು ದೇವದಾಸಿಯರಿಗೆ ಆಶ್ರಮಗಳನ್ನು ನಿರ್ಮಿಸಿದರು ಅವರಿಗೆ ಮರು ವಿವಾಹಗಳನ್ನು ಮಾಡಿಸಿದರು.

ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತಾಗಬಾರದು ಎಂದು ನಿರ್ಧರಿಸಿ, ತಮ್ಮ ಸ್ವಂತ ವಿಧವೆ ಮಗಳಾದ ರಾಧಾಬಾಯಿಯನ್ನು ಮದ್ರಾಸಿನ ಜಮೀನ್ದಾರ್ ಡಾ. ಪಿ.ಸುಬ್ಬರಾಯನ್ ಅವರಿಗೆ ವಿವಾಹ ಮಾಡಿಕೊಡುವ ಮೂಲಕ ಅಂತರ್ಜಾತಿ ವಿವಾಹ ಮತ್ತು ವಿಧವಾ ಮರು-ವಿವಾಹಕ್ಕೆ ಸ್ವಯಂ ಪ್ರೇರಣಾದಾಯಕರಾದರು. ಈ ಕಾರ್ಯದಿಂದ ಸ್ಪೂರ್ತಿಗೊಂಡ ಮಹಾತ್ಮಾಗಾಂಧಿಯವರೂ ಸಹಾ ತಮ್ಮ ಮಗನಿಗೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಮಗಳೊಂದಿಗೆ ಅಂತರ್ಜಾತಿ ವಿವಾಹ ಮಾಡಿದ್ದಲ್ಲದೇ, ನಾನು ಶ್ರೀ ರಂಗರಾವ್ ಅವರಿಂದ ಸಾಮಾಜಿಕ ನಿಷ್ಠೆಯನ್ನು ಗ್ರಹಿಸಿದ್ದೇನೆ. ಅವರು ನನಗೆ ಸ್ಫೂರ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ. ಅಸ್ಪೃಶ್ಯರ ಉನ್ನತಿಗೆ ಬಂದಾಗ ಅವರರೇ ನನ್ನ ಶಿಕ್ಷಕರು ಎಂದು ಮುಕ್ತ ಕಂಠದಿಂದ ಹೊಗಳಿದ್ದರು. ಕೇವಲ ಮಹಾತ್ಮಾ ಗಾಂಧಿಯವರಿಗಲ್ಲದೇ, ಮಹಾತ್ಮಾ ಜ್ಯೋತಿ ಬಾ ಪುಲೆ, ಸಾಹು ಮಹರಾಜ್, ನಾರಾಯಣ ಗುರು, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರಿಗೆ ದಲಿತರ ಉನ್ನತೀಕರಣದಲ್ಲಿ ಶ್ರೀ ರಂಗರಾವ್ ಅವರೇ ಮಾರ್ಗದರ್ಶಕರಾಗಿದ್ದರು ಮತ್ತು ಗುರುಗಳಾಗಿದ್ದರು ಎನ್ನುವುದು ಹೆಮ್ಮೆಯ ವಿಷಯ.

ದಲಿತರು ಸ್ವಾವಲಂಬಿಯಾಗಿ ಬದುಕಲು ಕಲಿಯಬೇಕು. ಆತ್ಮ ಗಾಂಭೀರ್ಯ ಬೆಳೆಸಿಕೊಳ್ಳುವುದರ ಜತೆಗೆ ಧಾರ್ಮಿಕ ಆಚರಣೆಯನ್ನು ಮೈಗೂಡಿಸಿಕೊಂಡು, ಏಕಾಗ್ರತೆ, ಸಂಘಟನೆಯ ವೃದ್ಧಿಗೆಂದೇ ಪ್ರತಿಯೊಂದು ಕಾಲನಿಯಲ್ಲಿ ಭಜನ ಮಂದಿರವನ್ನು ಸ್ಥಾಪಿಸಿದ್ದರು. ಬದುಕುವ ಹಕ್ಕು, ವಾಸಿಸುವ ಹಕ್ಕು, ಶಿಕ್ಷಣ ಹಾಗೂ ಉದ್ಯೋಗದ ಹಕ್ಕುಗಳಿಗೆ ದಲಿತರು ಹೇಗೆ ಮೈಗೂಡಿಸಬೇಕು ಎನ್ನುವುದನ್ನು ತನ್ನ ಸಾಮಾಜಿಕ ಕಾರ್ಯಗಳಲ್ಲಿ ಪ್ರತಿಪಾದಿಸುತ್ತಾ ಅದನ್ನು ಕಾರ್ಯರೂಪಕ್ಕೆ ತಂದಿದ್ದರು.

ದೇಶದಲ್ಲೇ ರಾಜಕೀಯ ಮೀಸಲಾತಿ ಹೋರಾಟ ಮಾಡಿದವರು ಇವರೇ ಮೊದಲು. ಜಿಲ್ಲಾ ಮತ್ತು ಪುರಸಭೆ ಸಂಸ್ಥೆಗಳಿಗೆ ಅವರ ದಲಿತರಿಗೆ ಮೀಸಲಾತಿ ಹೋರಾಟದ ಫಲವಾಗಿ ಅಂಗರ ಮಾಸ್ತರ್ ಮತ್ತು ಗೋವಿಂದ ಮಾಸ್ತರ್ ಎಂಬ ದಲಿತರಿಬ್ಬರು ಸ್ಥಳೀಯ ಸಂಸ್ಥೆಯ ಸದಸ್ಯರಾದರು. ಇವರ ದಲಿತರ ಸೇವೆ ಗುರುತಿಸಿ ಅಮೇರಿಕಾದ ಖ್ಯಾತ ಉದ್ಯಮಿ ಹೆನ್ರಿಫೋರ್ಡ್, ಡಾ. ಕಾರ್ನಾಟ್, ಜಸ್ಟಿಸ್ ವಿಲ್ಭರ್ಟ ಇವರಿಗೆ ಅಭಿನಂದನೆ ಸಲ್ಲಿಸಿದರು.ಇವರಿಗೆ ದೊರೆತ ರಾವ್ ಬಹದ್ದೂರ್ ಮತ್ತು ಇತರೆ ಬಂದ ಪ್ರಶಸ್ತಿಗಳಿಂದ ತಮ್ಮ ತಲೆಗೇರಿ ತಮಗೆ ಅಹಂಕಾರ ಬರಬಾರದೆಂದು ಆ ಪ್ರಶಸ್ತಿಗಳನ್ನೇ ಬೆಂಕಿಗೆ ಹಾಕಿ ಸುಟ್ಟುಹಾಕಿದಂತಹ ಮಹನೀಯರು. ಜನವರಿ 30, 1928ರಂದು ಹೃದಯದ ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟುವಿಕೆಯ ಮೂಲಕ ಶ್ರೀ ರಂಗರಾಯರು ನಮ್ಮನ್ನಗಲುತ್ತಾರೆ.

WhatsApp Image 2020-06-29 at 3.59.16 PM

ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರ್ಕಾರಿ ನೌಕರಿಗೆ ಸೇರಿ, ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು, ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ ಎಂದು ಸದಾಕಾಲವೂ ಹೇಳುತ್ತಿದ್ದರು. (ಇದೇ ಮಾತುಗಳನ್ನು ಅವರ ಸಮಾಧಿಯ ಮೇಲೆ ಕೆತ್ತಲಾಗಿದೆ)

Town Hall 1 aug 2017 1

ಮಂಗಳೂರು ಸಿಟಿ ಕಾರ್ಪೊರೇಷನ್ (ಎಂಸಿಸಿ) ಕುಡ್ಮುಲ್ ರಂಗ ರಾವ್ ಅವರ ಸಾಮಾಜಿಕ ಸುಧಾರಣೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ಹೆಸರು ಇಂದಿನ ಪೀಳಿಗೆಗೂ ತಿಳಿದಿರಬೇಕಂಬ ಸದುದ್ದೇಶದಿಂದ ಮಂಗಳೂರಿನ ಟೌನ್ ಹಾಲಿಗೆ ಕುಡ್ಮುಲ್ ರಂಗ ರಾವ್ ಪುರಸಭೆ ಎಂದು ಮರುನಾಮಕರಣ ಮಾಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿದೆ.

kudmal

ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ವಿರುದ್ಧ ಹೋರಾಡಿದ, ಸಮಾನತೆ ಸಾಧಿಸಿ ಹಾಗೂ ಶಿಷ್ಟಾಚಾರಗಳನ್ನು ಮೈಗೂಡಿಸಿಕೊಂಡು ಬದುಕಬೇಕೆಂದು ಪ್ರತಿಪಾದಿಸಿ ಅದನ್ನು ತೋರಿಸಿ ಕೊಡುವ ಮೂಲಕ ದೀನ ದಲಿತರ ಉದ್ಧಾರಕರೆಂದು ಹೆಸರುವಾಸಿಯಾಗಿದ್ದ ಮತ್ತು ಅನೇಕ ದೀನ ದಲಿತರಿಗೆ ಮಾರ್ಗದರ್ಶಕರಾಗಿದ್ದ ದಿ. ಶ್ರೀ ಕುದ್ಮುಲ್‌ ರಂಗರಾಯರನ್ನು ಅವರ ಜನ್ಮ ದಿನಾಚರಣೆಯಂದು ನೆನಪಿಸಿ ಕೊಳ್ಳೋಣ.
ಬ್ರಾಹ್ಮಣ್ಯ ಮತ್ತು ಬ್ರಾಹ್ಮಣದಿಂದಲೇ ದೇಶ ಹಾಳಾಗಿ ಹೋಗಿದೆ ಎಂದು ಊರೆಲ್ಲಾ ಬೊಬ್ಬಿಡುವ ಗಂಜೀ ದಲಿತ ಓಲಾಟಗಾರು‌ ಮತ್ತು ಸ್ವಘೋಷಿತ ಬುದ್ದಿ ಜೀವಿಗಳಿಗೆ ಬ್ರಾಹ್ಮಣರಾದ ಶ್ರೀ ಕುದ್ಮುಲ್‌ ರಂಗರಾಯರಂತಹ ಪ್ರಾಥಃಸ್ಮರಣಿಯರ ಸೇವೆಯನ್ನು ನೆನಪಿಸಿ ಕೊಡುವ ಮೂಲಕ ಮುಂದೆಂದೂ ತಮ್ಮ ಹೊಟ್ಟೇ ಪಾಡಿಗಾಗಿ ಮತ್ತು ತೀಟೆ ತೀರಿಸಿಕೊಳ್ಳುವುದಕ್ಕಾಗಿ ವಿನಾಕಾರಣ ಬ್ರಾಹ್ಮಣರನ್ನು ವಾಚಾಮಗೋಚರವಾಗಿ ಹೀಯ್ಯಾಳಿಸುವ ಕೆಲಸಕ್ಕೆ ಕೈ ಹಾಕದಂತೆ ತಡೆಯೋಣ. ಈ ದೇಶದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ.

ನಮ್ಮ ದೇಶ ಹೆಸರಿಗಷ್ಟೇ ಜಾತ್ಯಾತೀತ. ಪ್ರತಿಯೊಂದೆಡೆಯೂ, ಜಾತೀಯದೇ ಅತೀಯಾದ ಆಟಾಟೋಪ. ಒಂದು ಜಾತಿಯನ್ನು ಹಳಿಯುವುದಿಂದಾಗಲೀ, ದ್ವೇಷಿಸುವುದರಿಂದಾಗಲೀ ದೇಶ ಉದ್ದಾರವಾಗದು. ರಂಗರಾಯರಂತೆ ಎಲ್ಲರಿಗೂ ವಿದ್ಯೆ ಕಲಿಸಿ ಸ್ವಾವಲಂಭಿಗಳಾಗುವಂತೆ ಮಾಡೋಣ. ಜಾತೀ ಹೆಸರಿನಲ್ಲಿ ಕಂಡೋರ ಮುಂದೆ ಕೈ ಚಾಚುವುದು ನಮ್ಮ ಸ್ವಾಭಿಮಾನಕ್ಕೇ ಧಕ್ಕೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

4 thoughts on “ಶ್ರೀ ಕುದ್ಮುಲ್ ರಂಗರಾಯರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s