ಸಂತೋಷ್ ಬಿ ಎಲ್, ಸಂಘಟನಾ ಚತುರ

sant3

ನೆನ್ನೆ ಸಂಜೆ ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್ ಸಭೆಯನ್ನು ಉದ್ದೇಶಿಸಿ ಮೋದಿಯವರ ಕಳೆದ ಆರು ವರ್ಷಗಳ ಆಡಳಿತ ಅವರ ವಿದೇಶಾಂಗ ನೀತಿಗಳು ಮತ್ತು ಇತ್ತೀಚಿನ ಪಾಕ್, ಜೀನಾ ಆಕ್ರಮಣದ ಕುರಿತಂತೆ ಮೋದಿಯವರ ನಿರ್ಧಾರಗಳು,ಇಂತಹ ವಿಪತ್ತಿನಲ್ಲಿ ದೇಶದ ಪರವಾಗಿ ನಿಲ್ಲದೇ ಶತ್ರುಗಳಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಹಿತಶತ್ರುಗಳನ್ನು ಎಳೆ ಎಳೆಯಾಗಿ ಜಗ್ಗಾಡುತ್ತಾ ಹಿಗ್ಗಾ ಮುಗ್ಗಿ ನಯವಾಗಿಯೇ ಜಾಡಿಸಿ ಮಾತನಾಡುತ್ತಿದ್ದದ್ದನು ಮನೆಯಲ್ಲಿಯೇ ಕುಳಿತು online ಮೂಲಕ ನೋಡುತ್ತಿದ್ದಾಗ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

2009ರ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾಪಕ್ಷದಿಂದ ಶ್ರೀಯುತ ಜನಾರ್ಧನ ಸ್ವಾಮಿ ಎಂಬ ಸಜ್ಜನ ಮತ್ತು ವಿದ್ಯಾವಂತ ಹೊಸ ಮುಖವನ್ನು ಕಣಕ್ಕಿಳಿಸಿದ್ದಾಗ ಬಹುತೇಕರು ಯಾರೀ ಮನುಷ್ಯ ಎಂದು ಹುಡುಕಾಡುತ್ತಿದ್ದರೆ, ನಾನು ಇಂತಹ ಹೊಸ ಮುಖವನ್ನು ಪರಿಚಯಿಸುವ ದಿಟ್ಟತನವನ್ನು ತೋರಿದವರು ಯಾರು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದಾಗಲೇ ನನಗೆ ಮೊತ್ತ ಮೊದಲ ಬಾರಿಗೆ ಬಿ. ಎಲ್ ಸಂತೋಷ್ ಅವರ ಹೆಸರು ತಿಳಿಯಿತು. ಅದಾದ ನಂತರ ಅವರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲದಿಂದ ಹತ್ತಾರು ಕಡೆ ವಿಚಾರಿಸಿದಾಗ ತಿಳಿದ ವಿಷಯವೆಂದರೆ, ಜನಾರ್ಧನ ಸ್ವಾಮಿ, ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿದ್ದರೂ ಕನ್ನಡಿಗರಿಗೆ ಅಂಕಣಕಾರರಾಗಿ ಸುಪರಿಚಿತವಾಗಿರುವ ಶ್ರೀವತ್ಸ ಜೋಶಿ ಮತ್ತು ಸಂತೋಷ್ ಇವರೆಲ್ಲರೂ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತೊಂಭತ್ತರ ದಶಕದಲ್ಲಿ ಸಹಪಾಠಿಗಳು.

ಉಡುಪಿ ಜಿಲ್ಲೆಯ ಹಿರಿಯಡ್ಕದ ಮೂಲದವರಾದ ಬೊಮ್ಮರಾಬೆಟ್ಟು ಲಕ್ಷ್ಮಿಜನಾರ್ಥನ ಸಂತೋಷ್ ಶಾಲಾ ದಿನಗಳಿಂದಲೂ ತಮ್ಮ ಚುರುಕುತನ ಮತ್ತು ಬುದ್ಧಿವಂತಿಕೆಗೆ ಹೆಸರಾದವರು. ಸಂತೋಷ್ ಆವರು ಯಾವುದೇ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ ಎಂದರೆ ಅವರಿಗೆ ಮೊದಲ ಬಹುಮಾನ ಕಟ್ಟಿಟ್ಟ ಬುತ್ತಿಯಂತಾಗಿ ಅದ್ಭುತ ವಾಗ್ಪಟುವಾಗಿದ್ದಲ್ಲದೇ, ಅತ್ಯುತ್ತಮ ನಾಯಕತ್ವ ಗುಣವುಳ್ಳ ಸಂಘಟನಾ ಚತುರ. ತನ್ನ ಸ್ವಭಾವ, ನಡುವಳಿಗೆ ಮತ್ತು ದಿಟ್ಟತನದಿಂದಾಗಿ ಬಹುಬೇಗನೆ ಎಲ್ಲರನ್ನೂ ತನ್ನತ್ತ ಸೂಜಿಗಲ್ಲಿನಂತೆ ಸೆಳೆವ ಸರಳ ಸಜ್ಜನದ ವ್ಯಕ್ತಿತ್ವ. ಇಂಜಿನೀಯರಿಂಗ್ ಅಂತಿಮ ವರ್ಷದಲ್ಲಿ ಚಿನ್ನದ ಪದಕದೊಂದಿಗೆ ಉತ್ತೀರ್ಣರಾದಾಗ ತನ್ನ ಆತ್ಮೀಯ ಗೆಳೆಯರಂತೆ ವಿದೇಶಕ್ಕೆ ಹಾರಿ ಹೋಗುವುದೋ ಇಲ್ಲವೇ ಇಲ್ಲಿಯೇ ದೊಡ್ಡ ದೊಡ್ಡ ಸಂಬಳದ ವೃತ್ತಿಗೆ ಹೋಗಬಹುದಿತ್ತು. ಆದರೆ ರಾಷ್ಟ್ರ ಸೇವೆಗಾಗಿಯೇ ತನ್ನ ಜೀವನ ಎಂಬುದಾಗಿ ಮೊದಲೇ ನಿರ್ಧರಿಸಿದ್ದರಿಂದ ಒಂದು ಸಾಧಾರಣ ಪಂಚೆಯುಟ್ಟು ಅದರ ಮೇಲೊಂದು ಬಿಳೀ ಅಂಗಿ ಹೆಗಲ ಮೇಲೊಂದು ಚೀಲವನ್ನು ತಗುಲಿಹಾಕಿಕೊಂಡು 1993ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದರು.

ಸುಮಾರು ಹದಿಮೂರು ವರ್ಷಗಳ ಕಾಲ ಸಂಘದ ಪ್ರಚಾರಕರಾಗಿ ವಿವಿಧ ಜವಾಬ್ಧಾರಿಗಳನ್ನು ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ ನಂತರ 2006ರಲ್ಲಿ ಸಂಘದಿಂದ ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನಿಯುಕ್ತರಾದರೂ ಅವರು ಹೊರಗಿನ ಪ್ರಪಂಚಕ್ಕೆಲ್ಲೂ ಕಾಣಿಸಿಕೊಳ್ಳದೇ, ಸದಾ ಕಾಲವೂ ಸುದ್ದಿ ಮಾಧ್ಯಮಗಳಿಂದ ದೂರವೇ ಉಳಿದು ಪಕ್ಷವನ್ನು ತಳಮಟ್ಟದಿಂದಲೂ ಮೇಲಕ್ಕೆ ತರಲು ಬಹಳವಾಗಿ ಶ್ರಮವಹಿಸಿದವರು. ಸಂತೋಷ್ ಅವರು ಸಂಘಟನಾತ್ಮಕ ಕಾರ್ಯತಂತ್ರ ಉಳಿದೆಲ್ಲವರಿಗಿಂತಲೂ ಸ್ವಲ್ಪ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿಯ ಪ್ರಾಭಲ್ಯ ಹೆಚ್ಚಾಗಿರುವ ಕಾರಣ ಅಲ್ಲಿಯ ಜವಾಬ್ಧಾರಿಗಳನ್ನು ಸ್ಥಳೀಯ ನಾಯಕರಿಗೆ ವಹಿಸಿ ಪಕ್ಷ ದುರ್ಬಲ ಇರುವ ಕಡೆ ಸ್ವತಃ ಇವರೇ ಗಮನ ಹರಿಸಿ ಅಲ್ಲಿನ ಸ್ಥಳೀಯ ನಾಯಕರನ್ನು ಗುರುತಿಸಿ ಅವರನ್ನು ಬೆಳೆಸಿದ್ದರಿಂದಲೇ ರಾಜ್ಯಾದ್ಯಂತ ಬಿಜೆಪಿ ಪಕ್ಷ ತಳಮಟ್ಟದಲ್ಲಿ ಪ್ರಭಲವಾಗುಂತಾಯಿತು. ಇದರಿಂದಾಗಿಯೇ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲವೆಂದು ಪರಿಗಣಿಸಲಾಗಿದ್ದಂತಹ ಚಾಮರಾಜನಗರ, ಕೋಲಾರ, ಕಲಬುರ್ಗಿಯಂತಹ ಕ್ಷೇತ್ರಗಳಲ್ಲಿಯೂ ಕಮಲ ಅರಳುವಂತಾಯಿತು. ಕೇವಲ ಕಾರ್ಯಕರ್ತರನ್ನು ನಿಯೋಜಿಸಿ ಸುಮ್ಮನಾಗದೇ ಪ್ರತೀ ವಾರಕ್ಕೊಮ್ಮೆ ಕಾರ್ಯಕರ್ತರ ಸಭೆ ನಡೆಸಿ ಅವರನ್ನು ಹುರಿದುಂಬಿಸಿದ ಕಾರಣದಿಂದಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಆ ರೀತಿಯ ಅಭೂತ ಪೂರ್ವ ಫಲಿತಾಂಶಕ್ಕೆ ಕಾರಣವಾಯಿತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.

sant5

ತಮ್ಮ ವಯಕ್ತಿಕ ಕಾರಣಿದಿಂದಾಗಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಪಕ್ಷವನ್ನು ತೊರೆದು ಹೋದಾಗ ತೆರೆಯ ಮರೆಯಲ್ಲಿ ನಿಂತು ಪಕ್ಷ ಹರಿದು ಹಂಚಿಹೋಗದಂತೆ ಸಂಘಟಿಸಿದ ಬಿ.ಎಲ್. ಸಂತೋಷ್ ಪಕ್ಷದ ಸ್ಥಳೀಯ ಕಾರ್ಯಕರ್ತರು ಮತ್ತು ದೆಹಲಿಯ ಮಟ್ಟದ ನಾಯಕರುಗಳಿಗೂ ಅಚ್ಚುಮೆಚ್ಚು. ಹಾಗಾಗಿ ಎಲ್ಲರೂ ಅವರನ್ನು ಪ್ರೀತಿಯಿಂದ ಸಂತೋಷ್ ಜೀ ಎಂದೇ ಸಂಬೋಧಿಸುತ್ತಾರೆ. ಮಾತು ಕಡಿಮೆ ಕೆಲಸಕ್ಕೆ ಹೆಚ್ಚಿನ ಆದ್ಯತೆ ಕೊಡುವ ಸಂತೋಷ್ ಅವರು ವಂಶಪಾರಂಪರ್ಯ ಮತ್ತು ಜಾತೀ ಆಧಾರಿತ ರಾಜಕಾರಣವನ್ನು ವಿರೋಧಿಸಿ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿಯುವ ಕಾರ್ಯಕರ್ತರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರಲ್ಲದೇ, ಹೊಸ ಪೀಳಿಗೆಯ ನಾಯಕರನ್ನು ಬೆಳೆಸಲು ಆದ್ಯತೆ ಕೊಡುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ, ಜನಾರ್ಧನ ಸ್ವಾಮಿ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮುಂತಾದ ಯುವಕರನ್ನು ಪ್ರವರ್ದಮಾನಕ್ಕೆ ತಂದರೆ, ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೂ ಪರಿಚಯವೇ ಇರದಿದ್ದ ಅಶೋಕ ಗಸ್ತಿ ಮತ್ತು ಈರಣ್ಣ ಕಡಾಡಿ ಎನ್ನುವಂತಹ ಕಾರ್ಯಕರ್ತರಿಗೆ ಮಣೆ ಹಾಕಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದವರು.

ರಾಜ್ಯ ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು ಎಂಟು ವರ್ಷಗಳ ಸಮರ್ಥವಾಗಿ ನಿಭಾಯಿಸಿದ್ದನ್ನು ಮೆಚ್ಚಿಕೊಂಡ ಅಮಿತ್ ಶಾ ಅವರು 2014ರಲ್ಲಿ ಸಂತೋಷ್ ಅವರನ್ನು ದಕ್ಷಿಣ ರಾಜ್ಯಗಳ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದಲ್ಲದೇ ಕಳೆದ ವರ್ಷ ಅವರನ್ನು ರಾಮ್‌ಲಾಲ್ ಅವರ ಉತ್ತರಾಧಿಕಾರಿಯಾಗಿ ಭಾರತೀಯ ಜನತಾ ಪಕ್ಷದ ಹೊಸ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಅತ್ಯುನ್ನತ ಜವಾಬ್ಧಾರಿಯನ್ನೇ ನೀಡಿದ್ದಾರೆ. ಸುಮಾರು ಹತ್ತು ಹನ್ನೆರಡು ವರ್ಷಗಳ ಕಾಲ ಬಿಜೆಪಿ ಪಕ್ಷಕ್ಕಾಗಿಯೇ ಸೇವೆ ಸಲ್ಲಿಸಿದ್ದ ಅವರನ್ನು ಮರಳಿ ಹಿಂಪಡೆಯಲು ಆರ್‌ಎಸ್‌ಎಸ್ ಕೂಡಾ ಉತ್ಸುಕವಾಗಿತ್ತು ಎಂದರೆ ಅದು ಅವರ ಕಾರ್ಯತತ್ಪರತೆ ಮತ್ತು ಜನಪ್ರಿಯತೆಯನ್ನು ತೋರುತ್ತದೆ.

sant2

ಯಡಿಯೂರಪ್ಪನವರು ಮರಳಿ ಬಿಜೆಪಿಗೆ ಹಿಂದಿರುಗಿದ ನಂತರ ಅವರು ಪಕ್ಷದಲ್ಲಿ ಪ್ರಶ್ನಾತೀತ ನಾಯಕರಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳ ಶ್ರಮಿಸಿದ್ದಾರಾದರೂ ಬಿಜೆಪಿ ಪಕ್ಷದಲ್ಲಿರುವ 75 ವಯಸ್ಸಿನ ವಯೋಮಿತಿಯನ್ನು ನೋಡುವುದಾದರೇ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅವರ ನಂತರ ಪಕ್ಷವನ್ನು ಮುನ್ನೆಡಸಬಲ್ಲ ಸಮರ್ಥ ನಾಯಕರು ಯಾರಿದ್ದಾರೆ ಎಂದು ಹಿಂದಿರುಗಿ ನೋಡಿದರೇ ಸದ್ಯದ ಪರಿಸ್ಥಿತಿಯಲ್ಲಿ ನಿಜವಾಗಿಯೂ ಶೂನ್ಯವೇ ಕಾಣಿಸುತ್ತದೆ. ಯಡಿಯೂರಪ್ಪನವರ ಸಂಪುಟದಲ್ಲಿರುವ ಬಹುತೇಕ ನಾಯಕರು ವಯಕ್ತಿಯ ಬಲದಿಂದ ಆಯ್ಕೆಯಾಗಿದ್ದಕ್ಕಿಂತಲೂ ಮೋದಿ ಮತ್ತು ಯಡಿಯೂರಪ್ಪನವರ ಹೆಸರಿನ ಬಲದಿಂದ ಆಯ್ಕೆಯಾದವರೇ ಹೆಚ್ಚು ಇನ್ನೂ ಕೆಲವರು ಹಣ ಬಲದಿಂದ ಆಯ್ಕೆಯಾಗಿದ್ದರೆ ಮತ್ತೆ ಕೆಲವರು ತಮ್ಮ ಕ್ಷೇತ್ರದ ಹೊರಗಡೆ ಪರಿಚಯವೇ ಇಲ್ಲ. ಮತ್ತೆ ಹಲವರು ಆರು ಕೊಟ್ಟರೆ ಅತ್ತೇ ಕಡೇ ಮೂರು ಕೊಟ್ಟರೆ ಸೊಸೇ ಕಡೇ ಎನ್ನುವ Adujstment politicians ಇಂತಹವರೆಲ್ಲರ ಮುಂದೆ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಕಾರ್ಯಕರ್ತರ ಪರಿಚಯವಿರುವ, ತಾಳ್ಮೆವಂತ, ಬುದ್ಧಿವಂತ, ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತುಳು ಭಾಷೆಗಳಲ್ಲಿ ನಿರ್ಗಳವಾಗಿ ಮಾತನಾಡಬಲ್ಲ ಉತ್ತಮ ವಾಗ್ಮಿ, ನಿಷ್ಠುರವಾದಿ, ಸುತ್ತೀ ಬಳಸೀ ಹೇಳದೇ ನೇರವಾಗಿ ಹೇಳಬಲ್ಲವ ಮತ್ತು ಎಲ್ಲದ್ದಕ್ಕಿಂತಲೂ ಇದುವರೆಗೂ ತನಗೆ ವಹಿಸಿದ ಎಲ್ಲಾ ಕೆಲಸಗಳನ್ನೂ ಅತ್ಯುತ್ತಮವಾಗಿ ನಿಭಾಯಿಸಿರುವ, ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಆಜನ್ಮ ಬ್ರಹ್ಮಚಾರಿಯಾಗಿ ಮೋದಿಯವರ ನಾ ಖಾವೂಂಗಾ ಮತ್ತು ನಾ ಖಾನೇ ದೂಂಗ ಎನ್ನುವ ಮಾತಿಗೆ ಅನ್ವರ್ಥವಾಗಿರುವ ಸಂತೋಷ್ ಜೀ ಅವರನ್ನೇ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನಾಗಿ ಏಕೆ ಬಿಂಬಿಸ ಬಾರದು?

sanಸಂತೋಷ್ ಬಿ ಎಲ್ ಒಬ್ಬ ಸರಳ ಮತ್ತು ಸಜ್ಜನ ವ್ಯಕ್ತಿ. ಬಹಳ ಓದಿಕೊಂಡಿದ್ದಾರೆ. ಪರಿಸರ, ರಕ್ಷಣೆ, ಚೀನಾ ಸಂಬಂಧ, ವಿಭಿನ್ನ ತತ್ವಗಳು ಹೀಗೆ ಯಾವುದೇ ವಿಷಯವಾಗಲೀ ಅದರ ಆಳವಾಗಿ ಅಧ್ಯಯನ ಮಾಡಿರುವವರು ಮತ್ತು ಅದರ ಕುರಿತಂತೆ ನಿರರ್ಗಳವಾಗಿ ಮಾನತಾಡಬಲ್ಲರು. ಈಗ Boycot china ಎಂಬ ಅಭಿಯಾನ ಎಲ್ಲಾ ಕಡೆಯಲ್ಲಿಯೂ ಜಾಗೃತವಾಗಿದ್ದರೇ, ಬಿ ಎಲ್ ಸಂತೋಷ್ ಮೂರು ವರ್ಷಗಳ ಹಿಂದೆಯೇ ಇದರ ಬಗ್ಗೆ Know chaina and No chaina (ಇಂದಿಗೂ YouTube ಚಾನೆಲ್ಲಿನಲ್ಲಿ ಕೇಳಬಹುದಾಗಿದೆ) ಎಂದು ಚೀನಾದ ಕುಕೃತ್ಯಗಳ ಬಗ್ಗೆ ಯುವ ಜನತೆಗೆ ಜನಜಾಗೃತಿ ಮೂಡಿಸುವ ಅಭಿಯಾನವನ್ನು ನಡೆಸಿದ್ದದ್ದು ಅವರ ದೂರದರ್ಶಕತ್ವಕ್ಕೆ ಸಾಕ್ಷಿಯಾಗಿದೆ. ಒಬ್ಬ ವ್ಯಕ್ತಿಯ ಶಕ್ತಿ ಸಾಮರ್ಥವನ್ನು ಕ್ಷಣಾರ್ಧದಲ್ಲಿಯೇ ಅಳೆದು ಯಾರಿಗೆ ಯಾವ ಕೆಲಸವನ್ನು ವಹಿಸಬೇಕೆಂದು ಸರಿಯಾಗಿ ನಿರ್ಧರಿಸಿ, ಅವರಿಂದ ಕೆಲಸವನ್ನು ಹೇಗೆ ಸಮರ್ಥವಾಗಿ ಮಾಡಿಸಿಕೊಳ್ಳುವ ಛಾತಿ ಅವರಿಗೆ ಕರಗತವಾಗಿದೆ.

ಅವರ ಸಂಘಟನಾ ಚಾತುರ್ಯತೆ, ನಾಯಕತ್ವದ ಗುಣ, ಯಾವುದೇ ಪ್ರಭಲ ಜಾತಿಯ ಹಂಗಿಲ್ಲದ, ತಮ್ಮ ಕುಟುಂಬದವರೇ ಮುಂಚೂಣಿಯಲ್ಲಿರಬೇಕು ಎಂದು ಭಾವಿಸುವ ನಾಯಕರಿಗಿಂತ ಕೌಟುಂಬಿಕ ನಂಟು ಇಲ್ಲದ ವ್ಯಕ್ತಿಯಾಗಿರುವ ಕಾರಣ ಅವರೊಬ್ಬ ಯೋಗಿ, ಫಡ್ನವಿಸ್, ಖಟ್ಟರ್ ಅಥವಾ ಸ್ವತಃ ನರೇಂದ್ರ ಮೋದಿಯಂತೆಯೇ ಮತ್ತೊಬ್ಬ ಸಮರ್ಥ ನಾಯಕನಾಗಬಲ್ಲ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ.

sant1

ಸಂಸ್ಕಾರವೇ ಇಲ್ಲದೇ, ತಮ್ಮ ಸಂಸಾರಕ್ಕಾಗಿಯೇ ದಿನದ 24 ಗಂಟೆಗಳೂ ರಾಜಕಾರಣ ಮಾಡುವವರೇ ಹೆಚ್ಚಾಗಿರುವಾಗ, ಸಂಸಾರವೇ ಇಲ್ಲದೇ, ಸಂಸ್ಕಾರವಂತನಾಗಿ ಪ್ರಜೆಗಳ ಹಿತಕ್ಕಾಗಿ 18 ಗಂಟೆಗಳ ಕಾಲ ದುಡಿಯಬಲ್ಲ ಛಾತಿ ಇರುವ ಸರಳ, ಸಜ್ಜನ, ಸಂತ ಸೂಕ್ತ ಎನಿಸುತ್ತದೆ ಅಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s