ಯಾವುದೇ ಸಮಾರಂಭಗಳಲ್ಲಿ ಸಿಹಿ ತಿಂಡಿಯದ್ದೇ ಭರಾಟೆ. ಸಮಾರಂಭಕ್ಕೆ ಅಡುಗೆಯವರನ್ನು ಮಾತು ಕಥೆಗೆ ಕರೆಸಿದಾಗ, ಪಾಯಸ, ಎರಡು ಪಲ್ಯ, ಎರಡು ಕೋಸಂಬರಿ, ಗೊಜ್ಜು, ಅನ್ನಾ ಸಾರು, ಕೂಟು ಎಂಬೆಲ್ಲವೂ ಮಾಮೂಲಿನ ಅಡುಗೆಯಾದರೇ, ಸಮಾರಂಭಗಳ ಊಟದ ಘಮ್ಮತ್ತನ್ನು ಹೆಚ್ಚಿಸುವುದೇ ಸಿಹಿ ತಿಂಡಿಗಳು. ಸಮಾರಂಭದಲ್ಲಿ ಎಷ್ಟು ಬಗೆಯ ಸಿಹಿ ತಿಂಡಿಗಳು ಮತ್ತು ಯಾವ ಯಾವ ಸಿಹಿತಿಂಡಿಗಳನ್ನು ಮಾಡಿಸಿರುತ್ತಾರೋ ಅದರ ಮೇಲೆ ಅವರ ಅಂತಸ್ತು ಮತ್ತು ಸಮಾರಂಭದ ಘನತೆಯನ್ನು ಹೆಚ್ಚಿಸುತ್ತದೆ ಎಂದರೂ ತಪ್ಪಾಗಲಾರದು. ಸಮಾರಂಭ ಮುಗಿದ ಎಷ್ಟೋ ದಿನಗಳ ನಂತರವೂ ಅಲ್ಲಿ ತಿಂದಿದ್ದ ಸಿಹಿ ತಿಂಡಿಗಳ ಕುರಿತೇ ಚರ್ಚೆ ನಡೆಯುತ್ತಿರುತ್ತದೆ. ಆದರೆ ಅದೇ ಸಿಹಿ ತಿಂಡಿಗಳಿಂದಲೇ ಸಮಾರಂಭ ಕಹಿಯಾಗಿ ಮಾರ್ಪಟ್ಟ ಪೇಚಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಅದು 70ರ ದಶಕ. ನಾನಿನ್ನೂ ಚಿಕ್ಕ ಹುಡುಗ ನಮ್ಮ ಚಿಕ್ಕಪ್ಪನ ಮದುವೆ, ಚಿಕ್ಕಮ್ಮನ ಊರಾದ ಭದ್ರಾವತಿಯಲ್ಲಿ ನಿಶ್ಚಯವಾಗಿದ್ದ ಕಾರಣ, ನಮ್ಮ ಬಹುತೇಕ ಬಂಧುಗಳೆಲ್ಲರೂ ನಮ್ಮ ಊರಿಗೆ ಬಂದು ಅಲ್ಲಿ ಚಪ್ಪರ ಶಾಸ್ತ್ರ, ಹೂವಿಳ್ಯ ನಾಂದಿ ಶಾಸ್ತ್ರಗಳನ್ನೆಲ್ಲಾ ಮುಗಿಸಿಕೊಂಡು ಹತ್ತಾರು ಗಾಡಿಗಳ ಮೂಲಕ ಹಿರೀಸಾವೆಗೆ ಬಂದು ಅಲ್ಲಿಂದ ಚೆನ್ನರಾಯಪಟ್ಟಣದ ಮೂಲಕ ಭದ್ರಾವತಿ ತಲುಪಿದಾಗ ಸಂಜೆಯಾಗಿ ವರಪೂಜೆಗೆ ಸರಿಯಾದ ಸಮಯವಾಗಿತ್ತು.
ಸಂಜೆಯ ವರಪೂಜೆಯೆಲ್ಲಾ ಸಾಂಗವಾಗಿ ಮುಗಿದು ಊಟೋಪಚಾರಗಳೆಲ್ಲವೂ ಅಚ್ಚುಕಟ್ಟಾಗಿ ನಡೆದು, ಮಾರನೇಯ ದಿನ ಧಾರೆಯೂ ನಿರ್ವಿಘ್ನವಾಗಿ ನಡೆದು ಯಾವುದೇ ತರಹದ ರಂಪ ರಾಮಾಯಣಗಳಿಗೂ ಆಸ್ಪದ ಇಲ್ಲದೇ ಮೊದಲ ಪಂಕ್ತಿಯ ಊಟವೂ ಸುಸೂತ್ರವಾಗಿಯೇ ಮುಗಿದು ಎರಡನೇಯ ಪಂಕ್ತಿಯ ಊಟ ಇನ್ನೇನು ಆರಂಭವಾಗಬೇಕಿತ್ತು ಎನ್ನುವಷ್ಟರಲ್ಲಿ ಛತ್ರದ ಮುಂಭಾಗದಲ್ಲಿ ಜೋರು ಜೋರಾದ ಗಲಾಟೆಯ ಶಬ್ಧ ಒಂಡೆಡೆಯಾದರೆ ಮತ್ತೊಂಡೆಡೆ ಅಳುತ್ತಿರುವ ಶಬ್ಧ ಕೇಳಿಬಂದಾಗ, ಹಾಂ! ಈಗ ನೋಡಿ ಮದುವೆ ಮನೆ ಕಳೆಗಟ್ಟುತ್ತಿದೆ. ಮದುವೆ ಎಂದರೆ ಯಾರೋ ಒಬ್ಬರು ಕೊಂಕು ತೆಗೆಯಬೇಕು, ಮತ್ತೊಬ್ಬರು ಅಳಬೇಕು. ಹಾಗಾದಾಗಲೇ ಅದು ಮದುವೆ ಎನ್ನಿಸಿಕೊಳ್ಳುವುದು ಎಂದು ಯಾರೋ ಮಾತನಾಡಿಕೊಳ್ಳುತ್ತಿದ್ದದ್ದೂ ನಮ್ಮ ಕಿವಿಗೆ ಬಿದ್ದದ್ದು ಸುಳ್ಳಲ್ಲ.
ನಂತರ ಗಲಾಟೆಗೆ ಕಾರಣವೇನೂ ಎಂದು ತಿಳಿದು ಬಂದದ್ದೇನೆಂದರೆ, ಗಂಡಿನ ಕಡೆಯ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ಮೊದಲನೇ ಪಂಕ್ತಿಯಲ್ಲಿ ಊಟ ಮುಗಿಸಿ ಕೈಯ್ಯಲ್ಲಿ ಮೂರ್ನಾಲ್ಕು ಲಾಡುಗಳನ್ನು ಹಿಡಿದುಕೊಂಡು ಹೊರಬಂದಿದ್ದನ್ನು ಗಮನಿಸಿದ ಹೆಣ್ಣಿನ ಕಡೆಯ ಹುಡುಗನೊಬ್ಬ ಏಯ್! ಯಾರು ನೀನು? ಯಾರ ಮನೆಯ ಹುಡುಗಿ? ಇಷ್ಟೋಂದು ಲಾಡುಗಳನ್ನೇಕೆ ತೆಗೆದು ಕೊಂಡು ಹೋಗುತ್ತಿದ್ದೀಯೇ? ಎಂದು ಗದರಿಸಿ ಕೇಳಿದನಂತೆ. ಹಳ್ಳಿಯಿಂದ ಬಂದಿದ್ದ ಆ ಹುಡುಗಿಗೆ ಒಂದೇ ಸಮನೆಯ ಪ್ರಶ್ನೆಯಿಂದ ತಬ್ಬಿಬ್ಬಾಗಿ, ಏನು ಹೇಳಬೇಕೆಂದು ತಿಳಿಯದೆ ಬೆಬ್ಬೆಬ್ಬೇ ಎಂದಾಗ, ಆ ಹುಡುಗನೂ, ಏನು ಕಳ್ತನ ಮಾಡಿಕೊಂಡು ಹೋಗ್ತಿದ್ದೀಯಾ? ಎಂದು ದಬಾಯಿಸುತ್ತಿದ್ದದ್ದನ್ನು ಆ ಹುಡುಗಿಯ ತಾಯಿ ಗಮನಿಸಿದ್ದೇ ತಡಾ, ಆಕೆಗೆ ಎಲ್ಲಿಲ್ಲದ ರೋಷಾ ವೇಷಗಳು ಬಂದು, ನಾವು ಗಂಡಿನ ಕಡೆಯವರು, ಗತಿ ಗೆಟ್ಟು ಊಟಕ್ಕೆ ಬಂದಿಲ್ಲ. ನಮ್ಮನ್ನೇ ಕಳ್ಳರು ಅಂತೀರಾ ಎಂದು ಹೇಳಿದ್ದಲ್ಲದೇ ಗೋಳೋ ಎಂದು ಅಳುವುದಕ್ಕೆ ಆರಂಭಿಸಿದ್ದಾರೆ. ಹೆಂಡತಿಯ ಅಳುವಿನ ಸದ್ದನ್ನು ಕೇಳಿದ ಆಕೆಯ ಪತಿಯೂ ಅಲ್ಲಿಗೆ ಬಂದು ಜೋರಾದ ರಂಪಾಟ ಮಾಡಿ ಕಡೆಗೆ ಅವರನ್ನು ಸಮಾಧಾನ ಪಡಿಸಲು ವಧುವಿನ ತಂದೆ ತಾಯಿಯರೇ ಖುದ್ದಾಗಿ ಕ್ಷಮೆಯಾಚಿಸಿ, ಆ ಹುಡುಗನಿಂದಲೂ ಕ್ಷಮೆ ಬೇಡಿಸಿ ಆ ಪ್ರಸಂಗಕ್ಕೆ ಒಂದು ಇತಿಶ್ರೀ ಹಾಡಿದರು. ಊಟದ ಸಮಯದಲ್ಲಿ ಲಾಡುವನ್ನು ಎಲೆಗೆ ಹಾಕಿಸಿಕೊಳ್ಳುವ ಬದಲು ಕೈಯಲ್ಲಿ ಪಡೆದುಕೊಂಡು ಊಟವಾದ ನಂತರ ಕೈತೊಳೆಯುವ ಸಮಯದಲ್ಲಿ ಎಲ್ಲರ ಲಾಡುಗಳನ್ನೂ ಆ ಹುಡುಗಿಯ ಕೈಗೆ ಕೊಟ್ಟಿದ್ದೇ ಈ ಅಚಾತುರ್ಯಕ್ಕೆ ಕಾರಣವಾಗಿತ್ತು ಮದುವೆ ಮನೆಯಲ್ಲಿ ಸಿಹಿ ಅನುಭವವನ್ನು ಕಟ್ಟಿಕೊಡಬೇಕಿದ್ದ ಸಿಹಿ ತಿಂಡಿ ಲಾಡು ಕಹಿ ಅನುಭವನ್ನು ತಂದೊದಗಿಸಿದ್ದು ಎಲ್ಲರನ್ನೂ ಮುಜುಗರಕ್ಕೀಡು ಮಾಡಿದ್ದಂತೂ ಸುಳ್ಳಲ್ಲ.
ಆನಂತರ ಬಂದವರೆಲ್ಲರ ಊಟದ ಶಾಸ್ತ್ರ ಮುಗಿದು ಹೆಣ್ಣು ಒಪ್ಪಿಸಿಕೊಳ್ಳುವ ಶಾಸ್ತ್ರಗಳನ್ನೆಲ್ಲಾ ಲಗು ಬಗನೆ ಮುಗಿಸಿಕೊಂಡು ಮಾರನೆಯ ದಿನ ನಮ್ಮ ಊರಿನಲ್ಲಿ ಆಯೋಜಿಸಲಾಗಿದ್ದ ಸತ್ಯನಾರಾಯಣ ಪೂಜೆ ಮತ್ತು ಬೀಗರ ಔತಣಕ್ಕೆ ಆಹ್ವಾನಿಸಿ ಸಂಜೆ ಹೊತ್ತಿಗೆ ಮುಂಚೆಯೇ ಭದ್ರಾವತಿ ಬಿಟ್ಟು ನವ ದಂಪತಿಗಳ ಸಮೇತ ಹಾಗೂ ಹೀಗೂ ನಮ್ಮ ಊರಿಗೆ ಬರುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು. ತಣ್ಣನೆಯ ರಾತ್ರಿಯ ಜೊತೆಗೆ ಸಂಜೆಯಿಂದಲೇ ಕರೆಂಟು ಹೋಗಿತ್ತು. ಹಳ್ಳಿಗಳ ಕಡೆ ಸಂಜೆ ಕರೆಂಟು ಹೋದರೆ ಪುನಃ ಬರುವುದು ಯಾವಾಗಲೋ ಹಾಗಾಗಿ ಎಲ್ಲರಿಗೂ ಪ್ರಯಾಣದ ಆಯಾಸ ಮತ್ತು ಹೊಟ್ಟೆ ಕವ ಕವ ಎನ್ನುತ್ತಿದ್ದರಿಂದ ಎಲ್ಲರೂ ಲಗು ಬಗನೆ ಕೈತೊಳೆದು ಬುಡ್ಡೀ ದೀಪ ಮತ್ತು ಲ್ಯಾಂಟೀನ್ ಬೆಳಕಿನಲ್ಲಿಯೇ ಊಟಕ್ಕೆ ಕುಳಿತುಕೊಂಡೆವು. ಎಲೆ ಕೊನೆಗೆ ಪಾಯಸ, ಚೆಟ್ನಿ. ಉಪ್ಪು ಬಡಿಸಿ ಬಿಸಿ ಬಿಸಿ ಅನ್ನಾ ತಂದು ಎಲೆಗೆ ಬಡಿಸುತ್ತಿದ್ದಂತೆಯೇ ಒಮ್ಮೊಂದೊಮ್ಮೆಲ್ಲೇ ಇಡೀ ಮನೆಯಲ್ಲಿ ನಿಶ್ಯಬ್ಧ. ನಮ್ಮ ಮತ್ತೊಬ್ಬ ಚಿಕ್ಕಪ್ಪ ಹುಳಿಯನ್ನು ತಂದು ಬಡಿಸಿದರೆ, ನಮ್ಮತ್ತೆ ತುಪ್ಪಾ ಬಡಿಸಿ ಎಲ್ಲರೂ ಊಟಕ್ಕೆ ಏಳಬಹುದು ಎನ್ನುತಿದ್ದಂತೆಯೇ, ಗಬ ಗಬನೇ ಪಾಯಸಕ್ಕೆ ಕೈಹಾಕಿ ಬಾಯಿಗೆ ಇಡುತ್ತಿದ್ದರೆ, ಅದೇನೂ ಕಹಿ ಕಹಿ. ಸರಿ ಪ್ರಯಾಣದ ಆಯಾಸಕ್ಕೆ ಹೀಗಾಗಿರ ಬಹುದೆಂದು ಭಾವಿಸಿ ಪಾಯಸವನ್ನು ತಿನ್ನದೇ ಹಾಗೇ ಬಿಟ್ಟು ಅನ್ನಾ ಹುಳಿ ಕಲೆಸಿಕೊಂಡರೂ ಅದೇ ಕಮಟು ವಾಸನೆ ಮತ್ತು ಕಹಿ. ಈ ಅನುಭವ ಕೇವಲ ನನಗೆ ಮಾತ್ರವೇ ಅಥವಾ ಎಲ್ಲರಿಗೂ ಹಾಗೇನಾ ಎಂದು ತಲೆ ಕೆರೆದುಕೊಳ್ಳುತ್ತಿದ್ದಂತೆಯೇ ನಮ್ಮ ದೊಡ್ಡಪ್ಪ ಜೋರು ಧನಿಯಲ್ಲಿ ಇದ್ರೇನ್ರೋ ಪಾಯಸ ಹುಳಿ ಎಲ್ಲವೂ ಕಹಿ ಕಹಿಯಾಗಿದೆ ಮತ್ತು ಒಂದು ರೀತಿಯ ಕಮಟು ವಾಸನೆ ಬರುತ್ತಿದೆಯಲ್ರೋ ? ಎಂದಾಗ ಎಲ್ಲರೂ ಹೌದೌದು ಎಂದು ಧನಿಗೂಡಿಸಿದಾಗ ಸದ್ಯ ಬದುಕಿತು ಬಡಜೀವ ಇದು ನನಗೊಬ್ಬನಿಗೇ ಆದ ಅನುಭವವಲ್ಲ ಎಂದೆನಿಸಿತ್ತು.
ಹೇ, ಅದ್ಯಾಕೇ ಕಹಿ ಇರುತ್ತದೇ? ಅಷ್ಟು ಚೆನ್ನಾಗಿ ತರಕಾರಿಗಳನ್ನು ಹಾಕಿ ತುಪ್ಪದ ಒಗ್ಗರಣೆಯೊಂದಿಗೆ ಹುಳಿ ಮಾಡಿದ್ದೇವೆ ಅದು ಹೇಗೆ ಕಹಿಯಾಗಿರುತ್ತದೆ? ಎಂದು ನಮ್ಮ ಚಿಕ್ಕಪ್ಪ ಕೇಳಿದರು. ತುಪ್ಪದ ಒಗ್ಗರಣೆಯೇ? ಎಲ್ಲಿಂದ ತೆಗೆದುಕೊಂಡರೀ ತುಪ್ಪಾ ಎಂದು ನಮ್ಮ ಅಜ್ಜಿ ಕೇಳಿದಾಗ, ಅಷ್ಟೇ ಮುಗ್ಧವಾಗಿ ನಮ್ಮ ಚಿಕ್ಕಪ್ಪ, ಒಗ್ಗರಣೆಗೆ ಈ ಕತ್ತಲಲ್ಲಿ ಎಣ್ಣೇ ಹುಡುಕುತ್ತಿದ್ದಾಗ ದೇವರ ಮನೆಯ ಮುಂದೆ ತುಪ್ಪದ ಡಬ್ಬಿ ಕಾಣಿಸಿತು. ಸರಿ ತುಪ್ಪದಲ್ಲೇ ಒಗ್ಗರಣೆ ಹಾಕೋಣ ಎಂದು ನಿರ್ಧರಿಸಿ, ಹುಳಿ, ಸಾರು ಪಾಯಸ ಎಲ್ಲದ್ದಕ್ಕೂ ಅದೇ ತುಪ್ಪದಲ್ಲಿಯೇ ಒಗ್ಗರಣೆ ಹಾಕಿದ್ದೇವೆ ಎಂದಾಗ ನಮ್ಮ ಅಜ್ಜಿ ಅಯ್ಯೋ ರಾಮ ಅದು ತುಪ್ಪಾ ಅಲ್ರೋ ಅದು ಹಿಪ್ಪೇ ಎಣ್ಣೆ. ದೇವರ ದೀಪಕ್ಕೆಂದು ಮೊನ್ನೇ ತಾನೇ ದಬ್ಬದ ತುಂಬಾ ಹಿಪ್ಪೆ ಎಣ್ಣೆ ತಂದಿದ್ದೇ ಎನ್ನಬೇಕೆ?
ಧಾರೆ ಮುಗಿದು ಮೊದಲ ಪಂಕ್ತಿಯಲ್ಲಿಯೇ ಊಟ ಮಗಿಸಿದ ನಮ್ಮ ಕಡೆಯ ಚಿಕ್ಕಪ್ಪಂದಿರಿಬ್ಬರೂ ಒಬ್ಬ ಅಡಿಗೆಯವರೊಂದಿಗೆ ಊರಿಗೆ ಬಂದು ಎಲ್ಲರಿಗೂ ಅಡಿಗೆ ಮಾಡಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳಬೇಕೆಂದಿದ್ದರು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದೀತೂ ಎನ್ನುವಂತೆ ದುರಾದೃಷ್ಟವಷಾತ್ ನೋಡುವುದಕ್ಕೆ ಹಿಪ್ಪೇ ಎಣ್ಣೆಯೂ ಗಟ್ಟಿಯಾಗಿ ಮರಳು ಮರಳಾಗಿ ತುಪ್ಪದಂತೆಯೇ ಕಾಣುವುದರಿಂದ ಮತ್ತು ದೇವರ ಕೋಣೆಯ ಮುಂದಿದ್ದ ಕಾರಣ ಕತ್ತಲಲ್ಲಿ ತುಪ್ಪಾ ಎಂದು ಭಾವಿಸಿ ಹಿಪ್ಪೇ ಎಣ್ಣೆಯ ಅಡುಗೆ ಮಾಡಿಸಿದ್ದದ್ದು ಈ ಎಲ್ಲಾ ಮುಜುಗರದ ಪ್ರಸಂಗಕ್ಕೆ ಕಾರಣವಾಗಿತ್ತು. ಎಲ್ಲರ ಹೊಟ್ಟೆಯೂ ಬಹಳ ಹಸಿದಿದ್ದರಿಂದ ಮತ್ತು ಹಿಪ್ಪೇ ಎಣ್ಣೆ ಸ್ವಲ್ಪ ಕಹಿ ಎನ್ನುವುದರ ಹೊರತಾಗಿ ಅದರಿಂದ ದೇಹಕ್ಕೆ ಯಾವುದೇ ದುಷ್ಪರಿಣಾಮವಾಗದು ಎಂದು ನಮ್ಮ ತಾತನವರು ಹೇಳಿದ್ದರಿಂದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಉಪ್ಪಿನ ಕಾಯಿ, ಹುಣಸೇ ರಸ, ತೊಕ್ಕು ಮತ್ತು ಮಜ್ಜಿಗೆಯೊಡನೇ ಊಟದ ಶಾಸ್ತ್ರ ಮುಗಿಸುವ ಹೊತ್ತಿಗೆ ಗಂಟೆ ಒಂದಾಗಿತ್ತು.
ಈ ರೀತಿ ಸಿಹಿ ಪದಾರ್ಥಗಳಾದ ಲಾಡು ಮತ್ತು ಪಾಯಸಗಳ ಕಹಿ ಪ್ರಸಂಗಗಳಿಂದ ನಮ್ಮ ಚಿಕ್ಕಪ್ಪನವರ ಮದುವೆ ಸದಾಕಾಲವೂ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು. ಒಂದು ಸಣ್ಣ ಅವಾಂತರ ಎಷ್ಟೋಂದು ಮುಜುಗರವನ್ನು ತಂದೊಡ್ದಿ ಒಂದು ಸಿಹಿಯಾದ ಸುಂದರವಾಗ ಬೇಕಿದ್ದ ನೆನಪುಗಳನ್ನು ಕಹಿಯನ್ನಾಗಿ ಮಾಡಿಬಿಡುತ್ತವೆ ಅಲ್ವೇ?
ಏನಂತೀರೀ?