ವಿಕಾಸ್‌ ದುಬೆ

ನಿಜವಾಗಲೂ ಈತನ ಕುರಿತಾಗಿ ಈ ರೀತಿ ಒಂದು ಲೇಖನವನ್ನಾಗಲೀ ಅಥವಾ ಆತನ ಬಗ್ಗೆ ಮಾತನಾಡಿಕೊಳ್ಳ ಬೇಕಾದಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯೇ ಅಲ್ಲದಿದ್ದರೂ ಕಳೆದ ಒಂದು ವಾರಗಳಿಂದ ಈತ ದೇಶಾದ್ಯಂತ ಎಲ್ಲಾ ದೃಶ್ಯಮಾದ್ಯಮಗಳಿಗೂ ಟಿ.ಆರ್.ಪಿ ತಂದು ಕೊಟ್ಟಂತಹ ವ್ಯಕ್ತಿ ಎನ್ನುವುದಂತೂ ಸತ್ಯ.

2001 ರಲ್ಲಿ, ಉತ್ತರ ಪ್ರದೇಶದ ಬಿಜೆಪಿ ಸಚಿವರಾಗಿದ್ದ ಸಂತೋಷ್ ಶುಕ್ಲಾ ಅವರನ್ನು ಹಾಡಹಗಲಲ್ಲೇ ಗುಂಡಿಕ್ಕಿ ಕೊಲ್ಲುವ ಮೂಲಕ ಒಮ್ಮೆಂದೊಮ್ಮೆಲೆ ಪ್ರವರ್ಧಮಾನಕ್ಕೆ ಬಂದಂತಹ ಪಾತಕಿ ಸುಮಾರು ಆರು ತಿಂಗಳ ಪೋಲೀಸರಿಗೆ ಶರಣಾಗಿ ಕೊಲೆಯಾದ ಸಚಿವರ ಗನ್ ಮೆನ್ ಮತ್ತು ಅವರ ವೈಯಕ್ತಿಕ ಸಿಬ್ಬಂದಿಗಳೇ ಅದಾವ ಕಾರಣಕ್ಕೆ ದುಬೆ ಪರವಾಗಿ ಹೇಳಿಕೆಗಳನ್ನು ನೀಡಿದರೋ ತಿಳಿಯದು. ನಾಲ್ಕು ವರ್ಷಗಳ ತನಿಖೆಯ ನಂತರ ಖುಲಾಸೆಗೊಂಡಿದ್ದ.

ಈ ಹತ್ಯೆ ಆತನಿಗೆ ರಾಜಕೀಯದಲ್ಲಿ ಸ್ಥಾನಮಾನವನ್ನು ತಂದುಕೊಟ್ಟಿತಲ್ಲದೇ ಅನೇಕ ರಾಜಕೀಯ ಪಕ್ಷಗಳು ಆತನನ್ನು ಬೆಂಬಲಿಸಲು ಪ್ರಾರಂಭಿಸಿದವು. ಇದೇ ಸಮಯದಲ್ಲಿಯೇ ವಿಕಾಸ್ ದುಬೆ ಪಂಚಾಯಿತಿ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿ ಲಲ್ಲನ್ ಬಾಜ್ಪೈ ಅವರ ಹತ್ಯೆಗೂ ಮುಂದಾಗಿದ್ದ. ಈ ಎಲ್ಲಾ ಕುತೃತ್ಯಗಳಿಂದಾಗಿ ಆತ ಸುಮಾರು 10 ವರ್ಷಗಳ ಕಾಲ ಬಿಕ್ರು ಗ್ರಾಮದ ಪ್ರಧಾನ್ ಆಗಿ, ನಂತರ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಲ್ಲದೇ ಅವರ ಕಿರಿಯ ಸಹೋದರ ಪಕ್ಕದ ಭೀತಿ ಗ್ರಾಮದ ಗ್ರಾಮಪ್ರಭುತ್ವಕ್ಕೆ ಅವಿರೋಧವಾಗಿ ಆಯ್ಕೆಮಾಡಿಸಿಕೊಂಡಿದ್ದ ಮತ್ತು ಹೆಂಡತಿಯನ್ನೂ ಜಿಲ್ಲಾ ಪಂಚಾಯತ್ ಸದಸ್ಯೆಯನ್ನಾಗಿಯೂ ಮಾಡಿದ್ದ.

ಇಂತಹ ರಾಜಕೀಯ ಮತ್ತು ಪಾತಕಿ ಹಿನ್ನಲೆಯುಳ್ಳ ವಿಕಾಸ್ ದುಬೆ ವಿರುದ್ಧ ಉತ್ತರಪ್ರದೇಶದಲ್ಲಿ 62 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಐದು ಕೊಲೆ ಪ್ರಕರಣಗಳಾದರೆ, ಎಂಟು ಕೊಲೆಯ ಯತ್ನಗಳಿವೆ. ಹಾಗಾಗಿ ಪೊಲೀಸರು ಆತನ ವಿರುದ್ಧ ಉತ್ತರ ಪ್ರದೇಶದ ದರೋಡೆಕೋರರ ಕಾಯ್ದೆ, ಗೂಂಡಾ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಜುಲೈ 2-3 ರ ರಾತ್ರಿ ಕಾನ್ಪುರದ ಬಳಿಯ ಆತನ ಗ್ರಾಮವಾದ ಬಿಕ್ರು ವಿಗೆ ಆತನನ್ನು ಬಂಧಿಸಲು ಹೋಗಿದ್ದರು. ಅಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಎಂಟು ಪೊಲೀಸರನ್ನು ಹತ್ಯೆಮಾಡಿದ್ದ ವಿಕಾಸ್ ದುಬೆ ಮತ್ತವನ ತಂಡ ಪೋಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ.

ಆತ ತಪ್ಪಿಸಿಕೊಂಡ ದಿನದಿಂದ ಹಿಡಿದು ಇಂದಿನ ವರೆಗೂ ಆತನ ಪರ ಮತ್ತು ವಿರೋಧವಾಗಿ ದೇಶಾದ್ಯಂತ ಚರ್ಚೆಗಳು ನಡೆಯುತ್ತಲೇ ಇದ್ದು ಉತ್ತರಪ್ರದೇಶದ ಪೋಲೀಸರು ಆತನನ್ನು ಬಂಧಿಸಲು ದೇಶಾದ್ಯಂತ ಬಲೆ ಬೀಸಿ ನೆನ್ನೆ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಲನ ದೇವಾಲಯದ ಬಳಿ ಬಂಧಿಸಲಾಗಿತ್ತು ಮತ್ತು ಹೆಚ್ಚಿನ ವಿಚಾರಣೆಗೆಂದು ಆತನನ್ನು ಪೋಲೀಸ್ ಬೆಂಗಾವಲಿನಲ್ಲಿ ಉತ್ತರ ಪ್ರದೇಶಕ್ಕೆ ಕರೆದು ತರಲಾಗುತ್ತಿತ್ತು.

vd2ಹೀಗೆ ಅವನನ್ನು ಕರೆತರುತ್ತಿದ್ದಾಗ ಕಾನ್ಪುರದ ಬರ್ರಾ ಪೊಲೀಸ್‌ ಸ್ಟೇಷನ್ ಬಳಿ ಬರುವಾಗ, ಮಳೆಯ ಹಿನ್ನೆಲೆಯಲ್ಲಿ ದುಬೆ ಇದ್ದ ಪೊಲೀಸ್‌ ವಾಹನ ಸ್ಕಿಡ್‌ ಆಗಿ ಪಲ್ಟಿ ಆಗಿದೆ. ವಾಹನ ಪಲ್ಟಿಯಾದಾಗ ಇದೇ ಸಮಯವನ್ನು ಬಳಸಿಕೊಂಡ ದುಬೆ, ಅವನ ಬೆಂಗಾವಲಿಗಿದ್ದ ಪೊಲೀಸರ ಪಿಸ್ತೂಲನ್ನು ‌ ಕಿತ್ತು ಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅವನನ್ನು ಹಿಡಿಯಲು ಪ್ರಯತ್ನಿಸಿದ ಪೋಲೀಸರ ಮೇಲೆಯೂ ಮತ್ತೊಮ್ಮೆ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಸಹಾ ಪ್ರತಿದಾಳಿ ನಡೆಸಿದ ಸಂದರ್ಭದಲ್ಲಿ ಪೋಲೀಸರ ಗುಂಡೊಂದು ವಿಕಾಸ್ ದುಬೆಗೆ ತಾಕಿ ಗಾಯಗೊಂಡ ದುಬೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ಉತ್ತರ ಪ್ರದೇಶದ ಪೊಲೀಸರು ಘೋಷಿಸಿದ್ದಾರೆ.

ಈ ರೀತಿಯಾಗಿ ಪಾತಕಿ ವಿಕಾಸ್ ದುಬೆ ಪೋಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದಾಕ್ಷಣ ಅಬ್ಬಾ 8 ಜನ ಪೋಲಿಸರನ್ನು ಬರ್ಬರವಾಗಿ ಕೊಂದಿದ್ದ ನರಹಂತಕನಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ದೇಶದ ಬಹುತೇಕರು ಸಂತೋಷ ಪಟ್ಟರೆ, ದೇಶದಲ್ಲಿರುವ ಕೆಲ ಪಟ್ಟಭದ್ರ ಹಿತಾಸಕ್ತಿಯ ಕೆಲವು ಜನರು ತಮ್ಮ ಸಮೀಪದ ಸಂಬಂಧಿಯ ಹತ್ಯೆಯಾಗಿದೆಯೋ ಏನೋ ಎನ್ನುವಂತೆ, ಇದು ಅಕಸ್ಮಿಕವಾಗಿ ಆದ ಘಟನೆಯಲ್ಲ. ಇದು ಉತ್ತರ ಪ್ರದೇಶದ ಪೊಲೀಸರು ಉದ್ದೇಶಪೂರ್ವಕವಾಗಿಯೇ ಎನ್‌ಕೌಂಟರ್ ಮಾಡಿದ್ದಾರೆ ಎಂದು ಪುಂಖಾನು ಪುಂಖವಾಗಿ ಟ್ವೀಟ್ ಮಾಡುವ ಮುಖಾಂತರ ಮತ್ತು ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಮತ್ತು ಅಸಹ್ಯ ಹುಟ್ಟಿಸುತ್ತಿದೆ.

ನೆನ್ನೆ ಮಧ್ಯಪ್ರದೇಶದಲ್ಲಿ ಆತನ ಬಂಧನವಾಗುತ್ತಿದ್ದಂತೆಯೇ ಆತನಿಗೆ ಬೇಲ್ ಕೊಡಿಸಲು ಮುಂದಾಗಿದ್ದು ಕಾಂಗೇಸ್ಸಿನ ಮಾಜೀ ಸಚಿವ ಕಪಿಲ್ ಸಿಬಾಲ್ ಮತ್ತು ಪ್ರಶಾಂತ್ ಭೂಷಣ್ ಎಂಬುದು ಇಲ್ಲಿ ಗಮನಾರ್ಹವಾಗಿದೆ. ಆದರೆ ಇತ್ತೀಚೆಗೆ ಇದ್ದಕ್ಕಿಂದಂತೆಯೇ ನಾನು ಇಂದಿರಾಗಾಂಧಿಯವರ ಮೊಮ್ಮಗಳು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗೀ ಆದಿತ್ಯನಾಥ್ ವಿರುದ್ದ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಪ್ರಿಯಾಂಕ ವಾದ್ರ, ಕ್ರಿಮಿನಲ್ ಹತನಾಗಿದ್ದಾನೆ, ಆದರೆ ಅವನನ್ನು ರಕ್ಷಿಸುವವರ ಬಗ್ಗೆ ಏನು? ಎಂದು ಉತ್ತರ ಪ್ರದೇಶದ ಸರ್ಕಾರವನ್ನು ಪ್ರಶ್ನಿಸಿರುವುದರ ಹಿನ್ನಲೆ ನಿಜಕ್ಕೂ ಅರ್ಥವಾಗುತ್ತಿಲ್ಲ ಪ್ರಾಯಶಃ ಆತನನ್ನು ರಕ್ಷಿಸಲು ಮುಂದಾಗಿದ್ದೇ ಅವರ ಕಾಂಗ್ರೇಸ್ ವಕೀಲ ಎಂಬುದನ್ನು ಮರೆತಂತಿದೆ.

WhatsApp Image 2020-07-10 at 2.31.10 PM.jpegಎಂಟು ಪೋಲಿಸರನ್ನು ವಿಕಾಸ್ ದುಬೆ ಮತ್ತವನ ತಂಡ ಹತ್ಯೆ ಮಾಡಿದ್ದಾಗ ಇದೇ ಕಾಂಗ್ರೇಸ್ಸಿಗರು, ಇಂತಹಾ ಘಟನೆಯನ್ನ ಸಹಿಸೋದು ನಮಗಂತೂ ಸಾಧ್ಯವೇ ಇಲ್ಲ. ಎಲ್ಲಿದ್ದಾರೆ ಯೋಗಿಯಂತಹಾ ಮುಖ್ಯಮಂತ್ರಿ ಬೇಕು ಅನ್ನುವವರು? ಯೋಗಿ ಸರ್ಕಾರ ಈ ಕೂಡಲೇ ವಜಾ ಆಗಬೇಕು ಎಂದು ಕೂಗಾಡಿದ್ದವರು ಈಗ ಅದೇ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಕರೆ ತರುತ್ತಿದ್ದಾಗ ಮತ್ತೆ ಪೋಲೀಸರ ಮೇಲೆ ಹಲ್ಲೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಗುಂಡು ತಗುಲಿ ಹತ್ಯೆಯಾಗಿರುವುದನ್ನು ಖಂಡಿಸುತ್ತಿರುವುದು ಯಾವ ನ್ಯಾಯ?

ಒಬ್ಬ ಪಾತಕಿ ಹತ್ಯೆಯಾಗಿದ್ದಕ್ಕೆ ಈ ರೀತಿ ಮರುಗುತ್ತಿರುವ ಈ ಎಲ್ಲಾ ವಿರೋಧ ಪಕ್ಷದವರಿಗೆ ಅದೇ ವಿಕಾಸ್ ದುಬೆಯ ಕುಕೃತ್ಯದಿಂದ ಹತರಾದ ಎಂಟು ಜನರು ಪೋಲೀಸರು ಮತ್ತು ಹಳೆಯ ಐದು ಜನರ ಬಗ್ಗೆ ಒಂದು ಚೂರು ಚಕಾರವೆತ್ತದಿರುವುದು ನಿಜಕ್ಕೂ ಖೇದಕರ. ನಿಜವಾಗಲೂ ಕೆಲವೊಮ್ಮೆ ಆರೋಪಿಗಳನ್ನು ಕರೆತರುವಾಗ ಇಂತಹ ಘಟನೆಗಳು ಅನಿರೀಕ್ಷಿತವಾಗಿ ನಡೆದು ಹೋಗುತ್ತದೆ. ಅದನ್ನೇ ಈ ರೀತಿಯಾಗಿ ಬೊಬ್ಬಿರಿದು ಒಬ್ಬ ಸ್ವಾತಂತ್ರ್ಯ ಸೇನಾನಿಯೋ ಇಲ್ಲವೇ ವೀರ ಸೇನಾನಿಯ ಹತ್ಯೆಯಾದಂತೆ ದುಃಖಿಸುತ್ತಿರುವುದು ಇವರ ಮೊಸಳೇ ಕಣ್ಣಿರಿಗೆ ಸಾಕ್ಷಿಯಾಗಿದೆ.

ಬಹುಶಃ ಕೊರೋನಾ ಸಮಯದಲ್ಲಿ ಕಾಣೆಯಾಗಿದ್ದ ಗಂಜೀ ಗಿರಾಕಿಗಳೆಲ್ಲರಿಗೂ ಸರ್ಕಾರದ ವಿರುದ್ದ ಹೋರಾಡಲು ಒಂದು ಪ್ರಭಲ ಅಸ್ತ್ರವಾಗಿ ಇಂದಿನಿಂದಲೇ ದೇಶದಲ್ಲಿ ಏನಾಗುತ್ತಿದೇ? ಈ ರೀತಿಯ ಮಾನವಹಕ್ಕುಗಳ ಉಲ್ಲಂಘನೆಗೆ ಯಾರು ಹೊಣೇ? ದೇಶಾದ್ಯಂತ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಬೂಬ್ಬೆ ಹೊಡೆಯಲು ಆರಂಭಿಸಲೂ ಬಹುದು.

ಇದೇ ವಿಷಯವನ್ನು ಮತ್ತೊಬ್ಬ ಮಹಾಶಯರು ಸ್ವಲ್ಪ ಸಮಾಧಾನವಾಗಿ ವಿಕಾಸ್ ದುಭೆಯ ಎನ್ಕೌಂಟರ್ ವಿಷಯ ತಿಳಿದು ಮನಸ್ಸಿಗೆ ತುಂಬಾ ಬೇಜಾರಾಯ್ತು. ನಮ್ಮ ಕಾನೂನು ವ್ಯವಸ್ಥೆ ಎತ್ತ ಸಾಗುತ್ತಿದೆ. ಕೇವಲ ಎಪ್ಪತ್ತು, ಎಪ್ಪತ್ತೈದು ಕೊಲೆ, ಮೊನ್ನೆ ಕೇವಲ ಎಂಟು ಪೊಲೀಸರ ಕೊಲೆ, ಅಷ್ಟೇ ಅಪರಾಧ ಮಾಡಿರುವ ಒಬ್ಬ ಸಾಮಾನ್ಯ ಮನುಷ್ಯನನ್ನು ಈರೀತಿಯಾಗಿ ಪೂರ್ವನಿಯೋಜಿತವಾಗಿ ಎನ್ಕೌಂಟರ್ ಮಾಡಿರುವುದು ನಿಜಕ್ಕೂ ಖಂಡನೀಯ. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಶಿಕ್ಷೆ ಕೊಡಿಸಬೇಕಿತ್ತು ಎಂದು ತಮ್ಮ ಅವಲತ್ತನ್ನು ತೊಡಿಕೊಂಡಿದ್ದರೆ.

ನ್ಯಾಯಯುತವಾಗಿ ಅವರು ಹೇಳಿದ ರೀತಿ ಸರಿ ಎನಿಸಿದರೂ, ನಮ್ಮ ದೇಶದ ನ್ಯಾಯಾಂಗ ತನಿಖೆಯನ್ನು ಗಮನಿಸಿದರೆ ಈ ತನಿಖೆಯ ಆರೋಪಿಯನ್ನು ಹಲವಾರು ವರ್ಷಗಳ ಕಾಲ ಕಾರಾಗೃಹದಲ್ಲಿ ಕೂರಿಸಿ ಅವನಿಗೆ ಜನರ ತೆರಿಗೆ ಹಣದಲ್ಲಿ ಐಶಾರಾಮ್ಯದ ಊಟ, ತಿಂಡಿ ಮತ್ತು ಅವರ ಚಪಲಕ್ಕೆ ಅನುಗುಣವಾಗಿ ತೀರ್ಥದ ವ್ಯವಸ್ಥೆ ಮಾಡಿ ನಂತರ ಸಿಬಲ್ ಮತ್ತು ಪ್ರಶಾಂತ್ ಭೂಷಣ್ ಅವರಂತಹ ಹೆಸರಾಂತ ಕ್ರಿಮಿನಲ್ ವಕೀಲರ ಮುಖಾಂತರ ಜಾಮೀನು ಕೊಡಿಸಿ ಆತ ಧಿಮ್ಮಲೆ ರಂಗಾ ಎಂದು ಹೊರಗಿನ ಜಗತ್ತಿನಲ್ಲಿ ಓಡಾಡಿಕೊಂಡು ಇರುವ ಸಾಕ್ಷಿಗಳನ್ನೆಲ್ಲಾ ನಾಶ ಪಡಿಸಿ ಹೇಗೂ ಇರುವ ರಾಜಕೀಯದ ಪ್ರಭಾವದಿಂದ ಆತ ಶಾಸಕನೋ ಇಲ್ಲವೇ ಸಾಂಸದನಾಗಿ ರಾಜ್ಯಸರ್ಕಾರದಲ್ಲೋ ಇಲ್ಲವೇ ಕೇಂದ್ರದಲ್ಲೋ ಮಂತ್ರಿಯಾಗಿ ಹೋದರೋ ಅಚ್ಚರಿ ಪಡಬೇಕಿಲ್ಲ.

ವಿಕಾಸ್ ದುಬೆ ಯನ್ನು ಎನ್ಕೌಂಟರ್ ಮಾಡುವ ಮೂಲಕ ಅವನ ಹಿಂದಿರುವ ದೊಡ್ಡ ದೊಡ್ಡ ವ್ಯಕ್ತಿಗಳು ಪಾರಾದ್ರು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿದೆ. ಸಾವಿರಾರು ಕೋಟಿ ನಕಲೀ ಛಾಪಾಕಾಗದದ ಆರೋಪಿ ಕರೀಂ ಲಾಲ ತೇಲಗಿ ಬಂಧಿಸಿದಾಗಲೂ ಇದೇ ಅರೋಪ ಬಂದಿತ್ತು. ಆತನ ವಿರುದ್ಧದ ತನಿಖೆ ಆಮೆ ಗತಿಯಲ್ಲಿ ಹೋಗುವಂತೆ ನೋಡಿಕೊಂಡು, ಸೆರೆಮನೆಯಲ್ಲಿಯೇ ಆತನಿಗೆ ಸಕಲ ವೈಭವೋಪೇತ ರಕ್ಷಣೆಯನ್ನು ಸರ್ಕಾರೀ ಖರ್ಚುನಲ್ಲಿ ಮಾಡುವ ಮೂಲಕ ಆತನ ಹಿಂದಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅನೇಕ ದೊಡ್ಡ ದೊಡ್ಡ ರಾಜಕಾರಣಿಗಳನ್ನು ರಕ್ಷಿಸಿದ್ದದ್ದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ಇಂತಹ ವ್ಯಕಿಗಳಿಗೆ ಕಾನೂನಿನ ದುರುಪಯೋಗ ಮಾಡ್ಕೊಂಡು ಹೇಗೆ ತಪ್ಪಿಸಿಕೊಂಡು ಬರಬೇಕು ಎಂದು ತಿಳಿಸಿ ಕೊಡಲೇ ಸಾವಿರಾರು ಕ್ರಿಮಿನಲ್ ವಕೀಲರುಗಳು ನಮ್ಮ ದೇಶದಲ್ಲಿದ್ದಾರೆ. ಒಂದು ವೇಳೆ ಈ ರೀತಿಯಾಗಿ ಆತ ಹತ್ಯೆ ಯಾಗದಿದ್ದಲ್ಲಿ, ಒಂದಲ್ಲ ಒಂದು ದಿನ ನಮ್ಮ ಘನ ನ್ಯಾಯಾಲಯ ಸಾಕ್ಷಿಗಳ ಕೊರತೆಯ ನೆಪವಾಗಿಯೋ ಇಲ್ಲವೇ ಸಂತೋಷ್ ಶುಕ್ಲಾ ಕೇಸಿನಲ್ಲಿ ಸಾಕ್ಷಿಗಳನ್ನು ಬೆದರಿಸಿಯೋ ಆತನಿಗೆ ಬಿಡುಗಡೆಯಾಗುವ ಸಾಧ್ಯತೆಯೇ ಹೆಚ್ಚಾಗಿತ್ತು.

ಕಳ್ಳನ ಹೆಂಡತಿ ಯಾವತ್ತಿಗೂ ಮುಂಡೆ ಎನ್ನುವ ಗಾದೆ ಮಾತಿನಂತೆ ಒಮ್ಮೆ ಅಪರಾಧ ಜಗತ್ತಿಗೆ ಧುಮುಕಿದಲ್ಲಿ ಆತನಿಗೆ ಸಾವು ಕಟ್ಟಿಟ್ಟ ಬುತ್ತಿ. ಎಲ್ಲರ ಸಮ್ಮುಖದಲ್ಲಿಯೇ ಹತ್ತಾರು ಜನರ ಹತ್ಯೆ ಮಾಡಿದ ಕಸಬ್ ನನ್ನೇ ಹತ್ತಾರು ವರ್ಷಗಳ ಕಾಲ ಬಿರ್ಯಾನಿ ತಿನ್ನಿಸಿಕೊಂಡು ಸಾಕುತ್ತಾ, ಕೋಟ್ಯಾಂತರ ಹಣವನ್ನು ಆತನ ಮೇಲೆ ಖರ್ಚು ಮಾಡಿ ಕೊನೆಗೆ ಜನರ ಆಕ್ರೋಶ ಹೆಚ್ಚಾದ ಮೇಲೆ ನೇಣು ಹಾಕುವ ಬದಲು ಈ ರೀತಿಯಾಗಿ ಅಲ್ಲೇ ಡ್ರಾ ಅಲ್ಲೇ ಬಹುಮಾನದ ರೀತಿ ಅಂತ್ಯಕಾಣಿಸಿದರೆ, ಮುಂದೆ ಅಪರಾಧ ಮಾಡುವ ಮೊದಲು ಸ್ವಲ್ಪ ಹೆದರಿಕೆಯಾದರೂ ಇರುತ್ತದೆಯೇನೋ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s