ಪೆರು ದೇಶದ ಲೀನಾ ಐದು ವರ್ಷ ಪುಟ್ಟ ಹುಡುಗಿ. ಆಕೆ ಪದೇ ಪದೇ ಹೊಟ್ಟೇ ನೋವು ಎಂದು ಸಂಕಟ ಪಡುತ್ತಿದ್ದದ್ದಲ್ಲದೇ ಆಕೆಯ ಹೊಟ್ಟೆಯೂ ಕೂಡಾ ದಿನೇ ದಿನೇ ಬೆಳೆಯಲು ಆರಂಭಿಸಿದಾಗ, ಆಕೆಯ ತಾಯಿಯು ಅಕೆಯನ್ನು ಪಿಸ್ಕೋದ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಆರಂಭದಲ್ಲಿ ಅವಳ ಹೊಟ್ಟೆಯಲ್ಲಿ ದೊಡ್ಡದಾದ ಗೆಡ್ಡೆಯೊಂದು ಬೆಳೆಯುತ್ತಿರಬಹುದು ಎಂದೇ ಆರಂಭದಲ್ಲಿ ನಂಬಿದ್ದರಾದರೂ ನಂತರ ಕೂಲಂಕಷವಾಗಿ ಪರೀಕ್ಷಿಸಿದ ಡಾ. ಗೆರಾರ್ಡೊ ಲೊಜಾಡಾ ಎಂಬ ವೈದ್ಯೆ ಆಶ್ವರ್ಯಚಕಿತರಾಗಿ ಹೋದರು. ಕೇವಲ ಐದು ವರ್ಷದ ಆ ಹಾಲುಗಲ್ಲದ ಹಸುಳೆ ಗರ್ಭಿಣಿಯಾಗಿದ್ದಳು. ಇದು ಅಂದಿನ ಕಾಲಕ್ಕೇ ವೈದ್ಯಕೀಯ ಲೋಕವನ್ನೇ ದಿಗ್ಭ್ರಾಂತಗೊಳಿಸಿದ್ದ ವಿಸ್ಮಯಕಾರಿಯಾದ ಸಂಗತಿಯಾಗಿತ್ತು.
ಪ್ರಾಯಶಃ ಆ ಪುಟ್ಟ ಕಂದನಿಗೇ ಅರಿವಿಲ್ಲದಂತೆಯೇ ಅತ್ಯಾಚಾರಕ್ಕೊಳಗಾಗಿದ್ದಳು ಮತ್ತು ಅವಳಾಗ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಕೆಲವು ತಿಂಗಳುಗಳ ಕಾಲ ವೈದ್ಯಕೀಯ ಶುಶ್ರೂಷೆಯ ಬಳಿಕ ಮೇ 14, 1939 ರಂದು, ಅವಳ ಎಳೆಯ ಸೊಂಟವನ್ನು ಸಣ್ಣದಾಗಿ ಸೀಸೇರಿಯನ್ ಮಾಡುವ ಮೂಲಕ ಮುದ್ದಾದ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸುಮಾರು 6 ಪೌಂಡ್ ತೂಕವಿದ್ದ ಆಕೆಯ ಆರೋಗ್ಯಕ ಮಗುವಿಗೆ ಆಕೆಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ವೈದ್ಯೆ ಗೆರಾರ್ಡೊ ಹೆಸರನ್ನೇ ಇಡಲಾಯಿತು. ಗೆರಾರ್ಡೊ ಜನಿಸಿದಾಗ ಲೀನಾ ಕೇವಲ ಐದು ವರ್ಷ ವಯಸ್ಸಿನವಳಾಗಿದ್ದರೂ ಆಕೆ ಪ್ರಬುದ್ಧ ಲೈಂಗಿಕ ಅಂಗಗಳನ್ನು ಹೊಂದಿರುವ ಅವಧಿಗಿಂತ ಮುಂಚಿನ ಪ್ರೌಢಾವಸ್ಥೆ ಹೊಂದಿರುವಂತಹ ಖಾಯಿಲೆಯಿಂದ ಬಳಲುತ್ತಿದ್ದಲ್ಲದೇ. ಆಕೆ ಮೂರು ವರ್ಷಕ್ಕೆಲ್ಲಾ ಋತುಮತಿಯಾಗಿರುವ ವಿಷಯವನ್ನು ವೈದ್ಯರು ಕಂಡುಕೊಂಡರು. ಹೀಗೆ ಲೀನಾ ಮೆಡೀನಾ ತನಗೆ 5 ವರ್ಷ 7 ತಿಂಗಳು ಮತ್ತು 21 ದಿನಗಳಾಗಿದ್ದಾಗಲೇ ಆರೋಗ್ಯವಂತ ಮಗುವಿಗೆ ಜನ್ಮ ನೀಡುವ ಮೂಲಕ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ತಾಯಿ ಎಂಬ ಖ್ಯಾತಿ(ಅಪ)ಗೆ ಪಾತ್ರಳಾದಳು.
ಪೆರುವಿನ ಕ್ಯಾಸ್ಟ್ರೊವಿರ್ರೆನಾ ಪ್ರಾಂತ್ಯದ ಟಿಕ್ರಾಪೋದಲ್ಲಿ ಟಿಬುರೆಲೊ ಮದೀನಾ ಮತ್ತು ವಿಕ್ಟೋರಿಯಾ ಲೋಸಿಯಾ ಎಂಬ ದಂಪತಿಗಳಿಗೆ 1933 ರಲ್ಲಿ ಜನಿಸುತ್ತಾಳೆ. ಆಕೆಯ ತಂದೆ ಸಾಧಾರಣ ಬೆಳ್ಳಿ ಕೆಲಸಗಾರನಾಗಿದ್ದು ಅವರ ಒಂಬತ್ತು ಮಕ್ಕಳಲ್ಲಿ ಈಗೆಯೂ ಒಬ್ಬಳಾಗಿದ್ದಳು. ಗೆರಾರ್ಡೊಗೆ ಹತ್ತು ವರ್ಷವಾಗುವವರೆಗೂ ಲೀನಾಳನ್ನು ತನ್ನ ಒಡಹುಟ್ಟಿದ ಸಹೋದರೀ ಎಂದೇ ನಂಬಿದ್ದ ನಂತರ ಆಕೆ ತನ್ನ ಸಹೋದರಿಯಾಗಿರದೇ ಜನ್ಮ ನೀಡಿದ ತಾಯಿ ಎಂವ ವಿಷಯ ಆತನಿಗೆ ಅರಿವಾಗಿತ್ತು.
ಅಲ್ಲಿನ ಸರ್ಕಾರ ಆಕೆಯ ಈ ಪರಿಸ್ಥಿತಿಗೆ ಕಾರಣ ಯಾರು ಎಂದು ತಿಳಿಯಲು ಆದೇಶಿದ ಕಾರಣ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅನುಮಾನದ ಮೇಲೆ ಲೀನಾಳ ತಂದೆಯನ್ನು ಬಂಧಿಸಲಾಯಿತು. ವೈದ್ಯಕೀಯ ವಿಜ್ಞಾನ ಇಂದಿನಷ್ಟು ಬೆಳದಿರಲಿಲ್ಲವಾದ್ದರಿಂದ ಮತ್ತು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಆತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಯಿತು.
ಲೀನಾ ಮೆಡೀನಾ ಎಂದಿಗೂ ತನ್ನ ಮಗುವಿನ ನಿಜವಾದ ತಂದೆ ಯಾರು ಎಂದು ಬಹಿರಂಗ ಪಡಿಸಲೇ ಇಲ್ಲ ಏಕೆಂದರೆ ಅಕೆಗೆ ನಿಜವಾಗಿಯೂ ಏನಾಯಿತು ಮತ್ತು ಹೇಗಾಯಿತು ಎಂಬ ತಿಳಿವಳಿಕೆ ಇಲ್ಲದ ವಯಸ್ಸಿನವಳಾಗಿದ್ದಳು. ಹೀಗೆ ತಾಯಿ ಮತ್ತು ಮಗ ಒಟ್ಟೊಟ್ಟಿಗೇ ಬೆಳೆದು ಕಡೆಗೆ 1979 ರಲ್ಲಿ ತಮ್ಮ 40 ನೇ ವಯಸ್ಸಿನಲ್ಲಿ ಮಗ ಗೆರಾರ್ಡೊ ಮೂಳೆ ಸಂಬಂಧಿತ ಕಾಯಿಲೆಯಿಂದ ನಿಧನ ಹೊಂದಿದ.
ಮೆಡೀನಾ ಕೂಡಾ ಬೆಳೆದು ದೊಡ್ಡವಳಾದ ಮೇಲೆ ಲಿಮಾ ಚಿಕಿತ್ಸಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾಗಲೇ, ಶಾಸ್ತ್ರೋಕ್ತವಾಗಿ 1970 ರೌಲ್ ಎಂಬುವರನ್ನು ವಿವಾಹವಾಗಿ, 1972 ರಲ್ಲಿ ತನ್ನ 39 ನೇ ವಯಸ್ಸಿನಲ್ಲಿ ಎರಡನೇ ಮಗನಿಗೆ ಜನ್ಮ ನೀಡಿದರು. 85 ವರ್ಷದ ಲೀನಾ ಇಂದಿಗೂ ಆರೋಗ್ಯಕರವಾಗಿ ಪೆರುವಿನಲ್ಲಿ ವಾಸಿಸುತ್ತಿದ್ದಾರೆ. ತಾನು ಸಾಮಾನ್ಯ ಜೀವನವನ್ನು ನಡೆಸಲು ಬಯಸಿದ್ದರಿಂದ ತನ್ನ ಈ ಕಥೆ/ವ್ಯಥೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಬಯಸದ ಕಾರಣ ಅವಳ ಕಥೆಯನ್ನು ಯಾರಿಗೂ ಚಿತ್ರವನ್ನಾಗಿ ಮಾರಾಟ ಮಾಡಲು ನಿರಾಕರಿದಳು.
ಇಂದಿಗೂ ಸಹಾ ಕೆಲ ಕಾಮಾಂಧರು ಏನನ್ನೂ ಅರಿಯದ ಮುಗ್ಧ ಪುಟ್ಟ ಪುಟ್ಟ ಕಂದಮ್ಮಗಳ ಮೇಲೆ ತಮ್ಮ ಕಾಮದ ತೃಷೆಯನ್ನು ತೀರಿಸಿಕೊಳ್ಳುತ್ತಿರುವ ವಿಛಿದ್ರಕಾರಿ ಪ್ರಕರಣಗಳು ಅಲ್ಲಿಲ್ಲಿ ಬೆಳಕಿಗೆ ಬರುತ್ತಿರುತ್ತದೆ. ಹಾಗಾಗಿ ನಮ್ಮ ಹೆಣ್ಣು ಮಕ್ಕಳನ್ನು ಇಂತಹ ಕಾಮಾಂಧರಿಂದ ತುಸು ಜಾಗೃತೆ ವಹಿಸೋಣ.
ಏನಂತೀರೀ?
ಈ ಲೇಖನ ಬರೆಯಲು ಪ್ರೋತ್ಸಾಹಿಸಿದ ಗೆಳೆಯ ಆನಂದ್ ಪ್ಯಾಟಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು
ಲೇಖನ ಓದುವಾಗ ಕಣ್ಣೀರು ಬರುತ್ತೆ ಸರ್. ಪುಟ್ಟ ಬಾಲಕಿ ತನ್ನಲ್ಲದ ತಪ್ಪಿಗೆ ಹೇಗೆಲ್ಲ ನೋವು ಅನುಭವಿಸಿದಳು. ಇಂತಹ ಅದೆಷ್ಟೋ ನಿಜ ಕತೆಗಳು ಕತ್ತಲಲ್ಲೇ ಉಳಿದುಬಿಟ್ಟಿವೆ.
LikeLiked by 1 person