ಋಣಗಳು

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಜನ್ಮಿಸುವ ಪ್ರತಿಯೊಬ್ಬರಿಗೂ ತಮ್ಮ ಜೀವಿತಾಧಿಯಲ್ಲಿ ಐದು ಋಣಗಳನ್ನು ತೀರಿಸಲೇ ಬೇಕಾದ ಜವಾಬ್ಧಾರಿಯನ್ನು ಹೊಂದಿರುತ್ತಾರೆ. ಹಾಗಾಗಿಯೇ ಋಣಭಾರವೋ, ಮಣಭಾರವೋ ಎಂಬ ಗಾದೆಯ ಮಾತಿದೆ. ಆ ಐದು ಋಣಗಳಾವುವೆಂದರೆ ಪಿತೃ ಋಣ, ದೇವ ಋಣ, ಋಷಿ ಋಣ, ಭೂತ ಋಣ ಮತ್ತು ಮನುಷ್ಯ ಋಣ. ಈ ಋಣಗಳ ಬಗ್ಗೆ ವಿವರವಾಗಿ ಮತ್ತು ಅವುಗಳಿಂದ ಹೇಗೆ ಋಣಮುಕ್ತರಾಗುವುದು ಹೇಗೆ ಎಂಬುದರ ಕುರಿತು ಸ್ವಲ್ಪ ತಿಳಿದುಕೊಳ್ಳೋಣ.

ಪಿತೃ ಋಣ: ನಮಗೆ ಜನ್ಮ ಕೊಟ್ಟ ಮಾತಾ ಪಿತೃಗಳೇ ನಮಗೆ ಪತ್ಯಕ್ಷ ದೇವರುಗಳು. ಅವರ ಫಲದಿಂದಾಗಿಯೇ ನಾವುಗಳು ಭೂಮಿಯಲ್ಲಿ ಜನ್ಮತಾಳುವಂತಾಗಿರುವ ಕಾರಣ ಅವರುಗಳಿಗೆ ನಾವು ಸದಾಕಾಲವೂ ಋಣಿಗಳಾಗಿರಲೇ ಬೇಕು. ಸಾಮಾನ್ಯವಾಗಿ ಪಿತೃ ಋಣ ಎಂದರೆ,ಆವರು ಮರಣ ಹೊಂದಿದ ನಂತರ ಶ್ರಾದ್ಧ ಕರ್ಮಗಳನ್ನು ಮಾಡಿ ಅವರಿಗೆ ಸದ್ಗತಿಯನ್ನು ಕೊಡಿಸುವುದಲ್ಲದೇ, ಪ್ರತೀ ವರ್ಷವೂ ಶ್ರದ್ದೆಯಿಂದ ಶ್ರಾದ್ಧಕಾರ್ಯಗಳನ್ನು ಮಾಡುವುದು ಎಂದೇ ಎಲ್ಲರೂ ಭಾವಿಸಿದ್ದಾರೆ. ಇದ್ದಾಗ ನೋಡಿಕೊಳ್ಳದೇ, ಸತ್ತಾಗ ಅತ್ತು ಕರೆದು ನೂರಾರು ಜನರನ್ನು ಕರೆಸಿ ಭಕ್ಷ ಭೋಜನಗಳನ್ನು ಬಡಿಸಿ ಸಂತೃಷ್ಟ ಪಡಿಸಿದರೆ ಎದ್ದು ಬರುವರೇ ನಮ್ಮ ಹೆತ್ತವರು ಎಂಬ ವಾಕ್ಯ ಹೆಚ್ಚು ಸೂಕ್ತವಾಗುತ್ತದೆ. ಹಾಗಾಗಿ ಬುದುಕಿದ್ದಾಗ ನಮ್ಮ ತಂದೆ ತಾಯಿಯರನ್ನು ಚೆನ್ನಾಗಿ ಗೌರವದಿಂದ ನೋಡಿಕೊಳ್ಳಬೇಕು. ಈ ಇಳೀ ವಯಸ್ಸಿನಲ್ಲಿ ಅವರೊಂದು ಕಡೆ ನಾವೊಂದು ಕಡೆ ಇರುವುದಾಗಲೀ ಅಥವಾ ಆವರನ್ನು ವೃದ್ಧಾಶ್ರಮದಲ್ಲಿ ಬಿಡುವುದಾಗಲೀ ಸಲ್ಲದು. ಅವರ ಜೊತೆಯಲ್ಲಿಯೇ ನಾವು ಇಲ್ಲವೇ ನಮ್ಮ ಜೊತೆಯಲ್ಲಿ ಅವರು ಇರುವ ಹಾಗೆ ನೋಡಿಕೊಳ್ಳುತ್ತಾ ಅವರ ವೃದ್ಧಾಪ್ಯದಲ್ಲಿ ಅವರ ಎಲ್ಲಾ ಬೇಕು ಬೇಡಗಳನ್ನು ಗಮನಿಸುತ್ತಾ ಅವರ ಆರೋಗ್ಯದ ಕಡೆ ಗಮನವಿತ್ತು ಸೂಕ್ತವಾದ ಸೇವೆಯನ್ನು ಮಾಡಬೇಕು. ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ಎನ್ನುವಂತೆ, ತಮ್ಮ ಇಳೀ ವಯಸ್ಸಿನಲ್ಲಿ ಯಾರಿಗೂ ಭಾರವಾಗದೇ ಮತ್ತು ಯಾರ ಬಳಿಯಲ್ಲೂ ಬೇಡುವಂತಾಗದೇ ಅನಾಯಾಸವಾಗಿ ಭಗವಂತನ ಪಾದವನ್ನು ಸೇರಿಕೊಳ್ಳುವ ರೀತಿಯಲ್ಲಿ ನೋಡಿಕೊಳ್ಳುವ ಮೂಲಕ ಪಿತೃಋಣವನ್ನು ತೀರಿಸಬೇಕು.

piligrimage

ದೇವ ಋಣ: ಈ ಭೂಮಿಯಲ್ಲಿ ಜನ್ಮಪಡೆದ ನಂತರ ನಮಗೂ ನಮ್ಮ ಹುಟ್ಟಿದ ಊರಿಗೂ ಒಂದು ರೀತಿಯ ಅವಿನಾಭಾವ ಸಂಬಂಧವೇರ್ಪಡುತ್ತದೆ. ನಾವುಗಳು ನಮ್ಮನ್ನು ಪರಿಚಯಿಸಿಕೊಳ್ಳುವುದೇ ನಮ್ಮ ಹುಟ್ಟೂರಿನ ಮೂಲಕವೇ. ಹಾಗಾಗಿ ನಾವು ನಮ್ಮ ಕುಲದೇವರು,ಆರಾಧ್ಯ ದೈವ ಮತ್ತು ಗ್ರಾಮದೇವತೆಗಳಿಗೆ ಸೇವೆ ಸಲ್ಲಿಸಬೇಕು. ಹಾಗಾಗಿಯೇ ಪ್ರತೀ ವರ್ಷ ನಮ್ಮೂರಿನಲ್ಲಿ ಗ್ರಾಮದೇವತೆಗಳ ಜಾತ್ರೆಯನ್ನು ಏರ್ಪಡಿಸುವ ಸಂಪ್ರದಾಯದ ಮೂಲಕ ಎಲ್ಲರನ್ನೂ ಒಂದೆಡೆ ಸೇರಿಸುವಂತಹ ಉತ್ಕೃಷ್ಟವಾದ ಕಾರ್ಯವನ್ನು ನಮ್ಮ ಹಿರಿಯರು ಮಾಡಿದ್ದಾರೆ. ಅದೇ ರೀತಿ ವರ್ಷಕ್ಕೊಮ್ಮೆ ಅಥವಾ ಸಮಯ ಸಿಕ್ಕಾಗಲೆಲ್ಲಾ ನಮ್ಮ ಮನೆದೇವರ ತೀರ್ಥಕ್ಷೇತ್ರಕ್ಕೆ ಹೋಗಿ ಯಥಾಶಕ್ತಿ ತನು ಮನ ಧನಗಳ ಮೂಲಕ ಸೇವೆ ಸಲ್ಲಿಸಿ ಕೃತಾರ್ಥರಾಗ ಬೇಕು ಎನ್ನುತ್ತದೆ ನಮ್ಮ ಸಂಪ್ರದಾಯ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಕ್ರಿಕೆಟಿಗ ರವಿಶಾಸ್ತ್ರಿ. ಮೂಲತಃ ದಕ್ಷಿಣ ಕರ್ನಾಟಕದ ಶಾಸ್ತ್ರೀ ಹುಟ್ಟು ಬೆಳೆದು ಖ್ಯಾತರಾಗಿದ್ದೆಲ್ಲಾ ದೂರದ ಮುಂಬೈಯಲ್ಲಿಯೇ ಹಾಗಾಗಿ ಬಹಳ ಸಮಯದ ವರೆಗೂ ತಮ್ಮ ಕುಲದೇವತೆಯತ್ತ ತಲೆಯನ್ನೇ ಹಾಕಿರಲಿಲ್ಲ. ಮದುವೆಯಾಗಿ ಸುಮಾರು ವರ್ಷಗಳು ಕಳೆದರೂ ನಾನಾರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದರೂ ಅ ದಂಪತಿಗಳಿಗೆ ಸಂತಾನದ ಭಾಗ್ಯವಿರಲ್ಲಿಲ್ಲ. ಕಡೆಗೆ ಹಿರಿಯೊಬ್ಬರ ಸಲಹೆಯ ಮೇರೆಗೆ ಅನೇಕ ವರ್ಷಗಳ ನಂತರ ತಮ್ಮ ಪೂರ್ವಜರ ಊರಿಗೆ ಬಂದು ತಮ್ಮ ಕುಲದೇವತೆಯ ಪೂಜೆ ಮಾಡಿದ ನಂತರವೇ ಅವರಿಗೆ ಮಗಳು ಹುಟ್ಟಿದ್ದು ನಮ್ಮ ದೇವರುಗಳ ಮೇಲಿನ ನಂಬಿಕೆಗಳನ್ನು ಮತ್ತಷ್ಟೂ ಪುಷ್ಟಿ ಕೊಟ್ಟಿದ್ದಂತೂ ಸುಳ್ಳಲ್ಲ.

ruhi

ಋಷಿ ಋಣ: ನಾವಿಂದು ಅನುಸರಿಸುತ್ತಿರುವ ಬಹುತೇಕ ಶಾಸ್ತ್ರ ಸಂಪ್ರದಾಯಗಳು, ಪಠಿಸುತ್ತಿರುವ ಶ್ಲೋಕಗಳು, ಮಂತ್ರಗಳು, ಸ್ಮೃತಿಗಳು, ಪೌರಾಣಿಕ ಗ್ರಂಥಗಳು, ನಮ್ಮ ಧಾರ್ಮಿಕ ಚೌಕಟ್ಟುಗಳ ಮೂಲ ಕತೃಗಳೇ ನಮ್ಮ ಸನಾತನ ಧರ್ಮದ ಋಷಿಗಳು. ನಮ್ಮ ಗೋತ್ರಗಳ ಪ್ರವರ್ತಕರೂ ಋಷಿಗಳೇ. ಹಾಗಾಗಿ ನಮ್ಮ ಮೇಲೆ ಋಷಿಗಳ ಋಣ ಸಾಕಷ್ಟು ಇದೆ. ಹಿಂದಿನ ಕಾಲದಲ್ಲಿ ಇದೇ ಋಷಿಗಳು ಗುರುಗಳೂ ಆಗಿದ್ದ ಕಾರಣ ಅವರುಗಳು ತಮ್ಮ ಸಾಧನೆಯಿಂದ ಸಿದ್ಧಿಸಿಕೊಂಡಿದ್ದ ಅಗಾಧವಾದ ಜ್ಞಾನಸಂಪತ್ತನ್ನು ತಮ್ಮ ಶಿಷ್ಯಂದಿರಿಗೆ ವಿದ್ಯಾದಾನದ ಮೂಲಕ ನೀಡಿ ಹೋಗಿರುವ ಕಾರಣ ಇಂದಿಗೂ ನಮಗೆ ಲಭ್ಯವಾಗಿದೆ. ಈಗ ನಾವುಗಳು ಅದನ್ನು ಚೆನ್ನಾಗಿ ಆಧ್ಯಯನ ಮಾಡುವುದಲ್ಲದೇ ಅವುಗಳನ್ನು ನಮ್ಮ ಮುಂದಿನ ಪೀಳಿಯವರಿಗೂ ವರ್ಗಾಯಿಸುವುದರ ಮೂಲಕ ನಮ್ಮ ಋಷಿ ಋಣವನ್ನು ಸಂದಾಯ ಮಾಡಬಹುದಾಗಿದೆ.

petanimas

ಭೂತ ಋಣ: ಮನುಷ್ಯ ಸ್ನೇಹ ಜೀವಿ. ಹಾಗಾಗಿ ಆತ ತನ್ನ ಜೊತೆ ಸಾಕುಪ್ರಾಣಿಗಳಾದ
,ಬೆಕ್ಕು,ದನಕರುಗಳು, ಕುರಿ, ಆಡು, ಮೇಕೆ, ಕತ್ತೆ, ಕುದುರೆ, ಒಂಟೆ ಹೀಗೆ ಅನೇಕ ಪ್ರಾಣಿಗಳನ್ನು ತಮ್ಮ ಜೊತೆ ಸಾಕಿಕೊಳ್ಳುವುದಲ್ಲದೇ ಅವರುಗಳನ್ನು ತಮ್ಮ ನಿಜ ಜೀವನದಲ್ಲಿ ಮತ್ತು ವ್ಯವಸಾಯಗಳಲ್ಲಿ ಬಳೆಸಿಕೊಳ್ಳುತ್ತಾನೆ. ಅದೇ ರೀತಿ ಪ್ರಕೃತಿಯಲ್ಲಿ ಬೆಳೆಯುವ ಎಲ್ಲಾ ರೀತಿಯ ಹೂವು, ಹಣ್ಣು ಮತ್ತು ತರಕಾರಿಗಳನ್ನು ಬಳೆಸಿಕೊಳ್ಳುವುದಲ್ಲದೇ, ಮರಗಿಂಡಗಳನ್ನು ತನಗೆ ಸೂರನ್ನು ಕಟ್ಟಿಕೊಳ್ಳಲು, ಮನೆಗಳಿಗೆ ಮರಮುಟ್ಟುಗಳನ್ನು ತಯಾರಿಸಿಕೊಳ್ಳಲು ಮತ್ತು ಉರುವಲುಗಳಾಗಿಯೂ ಬಳಸಿಕೊಳ್ಳುತ್ತಿದ್ದೇವೆ. ಅದೇ ರೀತಿ ಕೆರೆ, ಹಳ್ಳಗಳು,ಕೊಳ್ಳಗಳು ನದಿಗಳ್ಳಲ್ಲದೇ ಭಾವಿ ಮತ್ತು ಕೊಳವೇ ಭಾವಿಗಳ ಮೂಲಕ ಅಂತರ್ಜಲವನ್ನೂ ಬಳಸಿಕೊಳ್ಳುವ ಮೂಲಕ ಎಗ್ಗಿಲ್ಲದೇ ಪ್ರಕೃತಿ ಮತ್ತು ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಗಿಡ ಮರಗಳನ್ನು ನೆಡುವ ಮೂಲಕ, ಸಾಕುಪ್ರಾಣಿಗಳನ್ನು ಅಕ್ಕರೆಯಿಂದ ನೋಡಿಕೊಳ್ಳುವ ಮೂಲಕ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಈ ಪಂಚಭೂತಗಳನ್ನು ಸಮಸ್ಥಿತಿಯಲ್ಲಿಡುವ ಮೂಲಕ ಭೂತ ಋಣವನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಮನುಷ್ಯ ಋಣ: ಮನುಷ್ಯ ಸಂಘಜೀವಿ. ಮತ್ತೊಬ್ಬರ ಸಹಾಯವಿಲ್ಲದೇ ಒಬ್ಬನೇ ಎನನ್ನೂ ಸಾಧಿಸಲಾರ. ಪ್ರತಿಯೊಬ್ಬರೂ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುವ ಮೂಲಕ ಸಮಾಜದ ಸ್ವಾಸ್ಥ್ಯತೆಯನ್ನು ಕಾಪಾಡಿಕೊಂಡು ಹೋಗುತ್ತೇವೆ. ನಮ್ಮ ಪೂರ್ವಜರಲ್ಲಿ ಯಾರೋ ಮಹಾನುಭಾವರು ಲೋಕ ಕಲ್ಯಾಣಕ್ಕೆ ಕಟ್ಟಿಸಿದ ಕೆರೆಗಳು, ಯಾರೋ ನೆಟ್ಟು ಪೋಷಿಸಿ ಬೆಳೆಸಿದ ಗಿಡಮರಗಳಿಂದ ಫಲವನ್ನು ಆವು ಅನುಭವಿಸುತ್ತಿದ್ದೇವೆ. ಹಾಗಾಗಿ ನಾವುಗಳೂ ಸಹಾ, ಅದೇ ರೀತಿ ಅಗತ್ಯವಿರುವವರೆಗೆ ತನು ಮನ ಧನಗಳಿಂದ ಕೈಯಲ್ಲಾದ ಮಟ್ಟಿಗೆ ಸಹಾಯ ಮಾಡುವ ಮೂಲಕ ಮನುಷ್ಯ ಋಣವನ್ನು ಕಳೆದುಕೊಳ್ಳಬಹುದಾಗಿದೆ. ಪ್ರಕೃತಿ ವಿಕೋಪ, ನೆರೆ ಹಾವಳಿ ಮತ್ತು ಸಾಂಕ್ರಾಮಿಕ ರೋಗಗಳು ಹರಡಿದಾಗ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡೋಣ. ಇದೇ ಕಾರಣಕ್ಕಾಗಿಯೇ ನಮ್ಮ ಪೂರ್ವಜರು ರಸ್ತೆಗಳ ಬದಿಯಲ್ಲಿ ಅರವಟ್ಟಿಗೆ, ಪರ ಊರಿನಿಂದ ಬಂದವರಿಗೆ, ಪರ ಊರಿನ ವಿದ್ಯಾರ್ಥಿಗಳಿಗೆ ಅನ್ನಛತ್ರಗಳ ಮೂಲಕ ನಿತ್ಯದಾಸೋಹವನ್ನು ಏರ್ಪಡಿಸುವ ಮೂಲಕವೋ ಇಲ್ಲವೇ ದೇವಸ್ಥಾನಗಳಿಗೆ ಧನ ಧಾನ್ಯಗಳನ್ನು ದಾನ ಮಾಡುವ ಮೂಲಕ ಮನುಷ್ಯಋಣ ದಿಂದ ಮುಕ್ತಿ ಹೊಂದುವ ಮಾರ್ಗವನ್ನು ಕಂಡು ಕೊಂಡಿದ್ದಾರೆ. ಎಲೆಮಲ್ಲಪ್ಪ ಶೆಟ್ಟರು ಎನ್ನುವ ಮಹಾನುಭಾವರು ತಮ್ಮ ಸ್ವಂತ ಖರ್ಚಿನಿಂದ ಬೆಂಗಳೂರಿನ ಹೊರವಲಯದಲ್ಲಿ ನೂರಾರು ಎಕರೆ ವಿಸ್ತೀರ್ಣದ ಕೆರೆಯನ್ನು ಕಟ್ಟಿಸಿದ್ದಲ್ಲದೇ, ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸಿದ್ದರು. ಲಕ್ಷಾಂತರ ಮರಗಳನ್ನು ಬೆಳೆಸಿದ ಸಾಲು ಮರದ ತಿಮ್ಮಕ್ಕ ಮತ್ತು ತಮ್ಮ ಸ್ವಂತ ಪರಿಶ್ರಮದಿಂದ 16 ಕಲ್ಯಾಣಿಗಳನ್ನು ನಿರ್ಮಿಸಿದ ಕಲ್ಮನೆ ಕಾಮೇಗೌಡರು ನಮಗೆ ಜೀವಂತ ಮಾರ್ಗದರ್ಶಕರಾಗಿದ್ದಾರೆ.

ಹೀಗೆ ನಮ್ಮ ಧರ್ಮ ಶಾಸ್ತ್ರದ ಪ್ರಕಾರ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರೂ, ತಮ್ಮ ಜೀವಿತಾವಧಿಯಲ್ಲಿ. ತಮ್ಮ ಜನ್ಮ ಸಾರ್ಥಕಪಡಿಸಿಕೊಳ್ಳುವ ಸಲುವಾಗಿ ಈ ಮೇಲೆ ತಿಳಿಸಿದ ಎಲ್ಲಾ ಋಣಗಳಿಂದ ಕಡ್ಡಾಯವಾಗಿ ಮುಕ್ತರಾಗಬೇಕು. ಈ ಋಣಗಳನ್ನು ತೀರಿಸದೇ ಹೋದರೆ ಆತ್ಮಕ್ಕೆ ಮುಕ್ತಿಯಿಲ್ಲ ಎನ್ನುತ್ತದೆ ನಮ್ಮ ಧರ್ಮಶಾಸ್ತ್ರಗಳು. ನಮ್ಮ ಧರ್ಮದಲ್ಲಿ ಹುಟ್ಟಿದವರು ಯಾರೂ ಕೇವಲ ಸ್ವಾರ್ಥಿಗಳಾಗಿರದೇ, ಪರೋಪಕಾರಾಯ ಇಂದ ಶರೀರಂ ಎನ್ನುವಂತೆ, ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ತನಗೆ ಜನ್ಮನೀಡಿದ ತಾಯಿ ತಂದೆ, ಹುಟ್ಟೂರು, ತನ್ನ ಸುತ್ತಮುತ್ತಲಿನ ಪರಿಸರ, ತನ್ನ ಗುರುಗಳು ಮತ್ತು ತನ್ನ ಸುತ್ತಮುತ್ತಲಿನವರಿಗೆ ಸಾದ್ಯವಾದಷ್ಟೂ ಉಪಕಾರವನ್ನು ಮಾಡಲೇ ಬೇಕೆಂದು ಶಾಸ್ತ್ರದ ಮೂಲಕ ಒಂದು ರೀತಿಯ ಕಟ್ಟಪ್ಪಣೆ ಮಾಡಿದ್ದಾರೆ ಎಂದರೂ ತಪ್ಪಾಗದು. ಇಂತಹ ಶ್ರೀಮಂತ ಸಂಸ್ಕೃತಿಯಲ್ಲಿ ಜನ್ಮ ಪಡೆದದ್ದಕ್ಕಾಗಿ ಹೆಮ್ಮೆ ಪಡಬೇಕಲ್ಲವೇ.

ಈ ಲೇಖನ ಯಾರನ್ನೂ ಹೆದರಿಸುವ ಅಥವಾ ಬೆದರಿಸುವ ಉದ್ದೇಶವಾಗಿರದೇ ಎಲ್ಲರಿಗೂ ತಮ್ಮ ಮೂಲ ಭೂತ ಜವಾಬ್ಧಾರಿಯನ್ನು ತಿಳಿಸುವ ಸದ್ದುದ್ದೇಶವಾಗಿದೆಯಷ್ಟೇ. ಇದರಲ್ಲಿ ಎಲ್ಲರೂ ಇಷ್ಟೇ ಮಾಡಬೇಕು ಅಷ್ಟೇ ಮಾಡಬೇಕು ಎಂದೇನಿಲ್ಲ. ಒಂದೇ ಒಂದು ಅಗಸೇ ಸೊಪ್ಪಿನಿಂದಲೂ ಕೃಷ್ಣನ ಹೊಟ್ಟೆ ಮತ್ತು ದೂರ್ವಾಸರು ಮತ್ತವರ ಶಿಷ್ಯಂದಿರ ಹೊಟ್ಟೆ ತುಂಬಿದ ಪ್ರಸಂಗ ನಮಗೆಲ್ಲರಿಗೂ ಗೊತ್ತೇ ಇದೆ. ಭಕ್ತಿಯಿಂದ ಚೆಲ್ಲಿದ ನಾಲ್ಕಾರು ಅಗುಳುಗಳೂ ಪಕ್ಷಿಗಳ ಹೊಟ್ಟೆಯನ್ನು ತುಂಬಿಸಬಲ್ಲದು. ಶ್ರದ್ಧೆಯಿಂದ ನೆಟ್ಟ ಹತ್ತಾರು ಜೀಜಗಳು ಕೆಲವೇ ಕೆಲವು ದಿನಗಳಲ್ಲಿ ದೊಡ್ಡ ದೊಡ್ಡ ಮರಗಳಾಗಿ ನೂರಾರು ಹಕ್ಕಿಗಳಿಗೆ ಆಶ್ರಯ ತಾಣವಾಗುವುದಲ್ಲದೇ ಕಾಲ ಕಾಲಕ್ಕೆ ಮಳೆಯನ್ನೂ ಆಕರ್ಷಿಸ ಬಲ್ಲದು. ಇದೇ ಮರಗಳು ಜೀವಂತ ಇರುವಾಗ ನೆರಳು ನೀಡುವುದಲ್ಲದೇ, ಹಣ್ಣಗಳನ್ನೂ ಕೊಡುತ್ತಾ, ಸತ್ತ ನಂತರ ಮರಮುಟ್ಟು ಮತ್ತು ಉರುವಲುಗಳು ಆಗಬಹುದು. ಹೀಗೆ ನಾನಾ ರೀತಿಯ ಮೂಲಕ ಋಣಮುಕ್ತರಾಗ ಬಹುದು. ಮನಸ್ಸಿದ್ದಲ್ಲಿ ಮಾರ್ಗವಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

3 thoughts on “ಋಣಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s