ಬಿರ್ಯನಿ ಭಾರತೀಯ ಉಪಖಂಡದ ಒಂದು ಜನಪ್ರಿಯ ಖಾದ್ಯವಾಗಿದೆ. ಇದನ್ನು ಅಕ್ಕಿ, ತರಕಾರಿಗಳು, ಮತ್ತು ಮಸಾಲಾಗಳನ್ನು ಬೆರೆಸಿ ತಯಾರಿಸಲಾಗುತ್ತದಾದರೂ ಕುರಿ ಇಲ್ಲವೇ ಕೋಳಿ ಪೀಸ್ ಹಾಕಿದ ಬಿರ್ಯಾನಿಯೇ ಅತ್ಯಂತ ಜನ ಪ್ರಿಯ ಖಾದ್ಯವಾಗಿದೆ. ಸಸ್ಯಾಹಾರಿಗಳಿಗೂ ತಮ್ಮ ಬಿರ್ಯಾನಿಯಲ್ಲಿ ಪೀಸ್ ತಿನ್ನುವ ಅನುಭವವಾಗುಂತಹ ಹಲಸಿನ ಕಾಯಿ ಬಿರಿಯಾನಿ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿ ಕೊಡುತ್ತಿದ್ದೇವೆ.
ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಲಸಿನಕಾಯಿ ಬಿರ್ಯಾನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
- ಬಾಸ್ಮತಿ ಅಕ್ಕಿ -2 ಬಟ್ಟಲು
- ಟೊಮೆಟೊ – 2
- ಶುಂಠಿ – 2 ಇಂಚು
- ಈರುಳ್ಳಿ – 4
- ಬೆಳ್ಳುಳ್ಳಿ – 10 ಎಸಳುಗಳು
- ಹಸಿರು ಮೆಣಸಿನಕಾಯಿ – 2
- ಕೆಂಪು ಮೆಣಸಿನಕಾಯಿ – 4
- ಏಲಕ್ಕಿ – 6
- ಲವಂಗ – 6
- ದಾಲ್ಚಿನ್ನಿ -2 ಇಂಚು
- ಸೋಂಫು -1 ಚಮಚ
- ಅರಿಶಿನ ಪುಡಿ- 1/2 ಚಮಚ
- ಪುದೀನ ಎಲೆಗಳು -1 ಚಮಚ
- ಕೊತ್ತಂಬರಿ ಸೊಪ್ಪು -1 ಚಮಚ
- ತುಪ್ಪ -3 ಚಮಚ
- ರುಚಿಗೆ ಉಪ್ಪು
- ಕೇಸರಿ (ಕೇಸರಿ) -5/6 ಎಳೆಗಳನ್ನು ಅರ್ಧ ಕಪ್ ಹಾಲಿನಲ್ಲಿ ನೆನೆಸಿ (ಐಚ್ಚಿಕ)
ಹಲಸಿನಕಾಯಿ ಬಿರ್ಯಾನಿ ತಯಾರಿಸುವ ವಿಧಾನ:
- ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರು ಉದುರಾಗಿರುವಂತೆ ಅನ್ನ ಮಾಡಿಕೊಂಡು ಸಲ್ಪ ಆರಲು ಬಿಡಬೇಕು.
- ಸಿಪ್ಪೆ ತೆಗೆದ ಹಲಸಿನಕಾಯಿಯನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿಕೊಂಡು ಅದಕ್ಕೆ ಉಪ್ಪನ್ನು ಸೇರಿಸಿ ಸ್ವಲ್ಪ ಹಸೀ ಹೋಗುವವರೆಗೂ ಬೇಯಿಸಿಕೊಂಡು ಸ್ವಲ್ಪ ಆರಲು ಬಿಡಬೇಕು.
- 2 ಈರುಳ್ಳಿ, ಟೊಮೆಟೊ, ಪುದೀನ ಎಲೆಗಳು, ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ಲವಂಗ, ಸೋಂಪು, ದಾಲ್ಚಿನ್ನಿ ಮತ್ತು ಕೆಂಪು ಮೆಣಸಿನಕಾಯಿಗಳನ್ನು ಮಿಕ್ಸಿಯಲ್ಲಿ ಸ್ವಲ್ಪವೇ ನೀರನ್ನು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ.
- 2 ಈರುಳ್ಳಿಯನ್ನು ತೆಗೆದುಕೊಂಡು ತೆಳುವಾದ ಹೋಳುಗಳನ್ನಾಗಿ ಕತ್ತರಿಸಿ ಕೊಳ್ಳಿ
- ಒಂದು ಗಟ್ಟಿ ತಳದ ಬಾಣಲೆಗೆ ಬಿಸಿ ತುಪ್ಪ ಹಾಕಿ, ತುಪ್ಪ ಕಾದ ನಂತರ ಸೋಂಪನ್ನು ಹಾಕಿ ಹಸಿ ಹೋಗುವವರೆಗೂ ಹುರಿದುಕೊಳ್ಳಿ.
- ಈಗ ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಗರಿಗರಿಯಾಗಿ ಕಂದು ಬಣ್ಣ ಬರುವವರೆಗೆ ಹುರಿದು ಕೊಂಡು ಅದನ್ನು ಒಂದು ತಟ್ಟೆಯಲ್ಲಿ ತೆಗೆದಿಟ್ಟು ಕೊಳ್ಳಿ.
- ಈಗ ಆದೇ ತುಪ್ಪಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ, ರುಬ್ಬಿಟ್ಟು ಕೊಂಡ ಮಸಾಲಾವನ್ನು ಬೆರೆಸಿ ಹಸಿ ವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಿ
- ಈಗ ಬೇಯಿಸಿದ ಹಲಸಿನಕಾಯಿ ತುಂಡುಗಳನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 2-3 ನಿಮಿಷಗಳ ಕಾಲ ಮುಚ್ಚಿಡಿ.
- ಒಂದು ದಪ್ಪವಾದ ತಳವುಳ್ಳ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಪದರ ಆರಿದ ಬಾಸುಮತಿ ಅನ್ನವನ್ನು ಹರಡ ಬೇಕು. ನಂತರ ಅದರ ಮೇಲೆ ಹಲಸಿನಕಾಯಿ ಮಸಾಲವನ್ನು ಒಂದು ಪದರ ಹರಡಬೇಕು, ಇದೇ ವಿಧಾನವನ್ನು ಮತ್ತೊಮ್ಮೆ ಪುನರಾವರ್ತಿಸಿ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಮತ್ತು ಗರಿಗರಿಯಾಗಿ ಹುರಿದಿಟ್ಟು ಕೊಂಡಿದ್ದ ಈರುಳ್ಳಿ ಚೂರುಗಳನ್ನು ಹರಡಿ. ಇದರ ಮೇಲೆ ಕೇಸರಿ ಬೆರಸಿದ ಹಾಲನ್ನು ಸೇರಿಸಿದಲ್ಲಿ ರುಚಿ ಮತ್ತಷ್ಟೂ ಹೆಚ್ಚಿಸುತ್ತದೆ.
- ಈಗ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಸುಮಾರು 2-3 ನಿಮಿಷಗಳ ಸಣ್ಣ ಉರಿಯಲ್ಲಿ ಬೇಯಿಸಿದಲ್ಲಿ ರುಚಿ ರುಚಿಯಾದ ಬಿಸಿ ಬಿಸಿಯಾದ ಹಲಸಿನಕಾಯಿ ಬಿರ್ಯಾನಿ ಸಿದ್ದ.
ರುಚಿಕರವಾದ ಹಲಸಿನಕಾಯಿ ಬಿರ್ಯಾನಿ ಮಾಡುವುದನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ ಮತ್ತು ಮಾಡಿದ ನಂತರ ರುಚಿ ಹೇಗಿತ್ತು ಅನ್ನುವುದನ್ನು ನಮಗೆ ತಿಳಿಸುವುದನ್ನು ಮಾತ್ರ ಮರೆಯಬೇಡಿ.
ಏನಂತೀರೀ?
ಮನದಾಳದ ಮಾತು : ಮೂಲತಃ ಮೊಘಲರ ಮೂಲಕ ಭಾರತಕ್ಕೆ ಬಿರಿಯಾನಿ ಮಾಡುವ ಕಲೆ ರೂಢಿಗೆ ಬಂದಿದೆ. ಬಿರಿಯನ್ ಎಂಬ ಪರ್ಷಿಯನ್ ಪದದ ಮೂಲಕ ಬಿರಿಯಾನಿ ಎಂಬ ಪದ ಪ್ರಸಿದ್ಧವಾಗಿದೆ. ಭಾರತದ್ಯಂತ ಈ ಖಾದ್ಯ ಅದರಲ್ಲೂ ಅಕ್ಕಿಯೇ ಪ್ರಧಾನವಾಗಿರುವ ದಕ್ಷಿಣ ಭಾರತದ ಮನೆಮನೆಗಳಲ್ಲಿಯೂ ಬಿರಿಯಾನಿಯ ಪರಿಮಳವನ್ನು ಸವಿಯಬಹುದಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಹೈದರಾಬಾದ್ ಬಿರಿಯಾನಿ ಸುಪ್ರಸಿದ್ಧವಾಗಿದೆ.
ಹಲಸಿನ ಕಾಯಿ ಇಲ್ಲದಿದ್ದಲ್ಲಿ ಅದರ ಬದಲಾಗಿ ಹೂಕೋಸು (ಕಾಲೀ ಫ್ಲವರ್) ಬಳಸಿಕೊಂಡು ಮನೆಯಲ್ಲಿಯೇ ಇದೇ ರೀತಿಯಾಗಿ ಘಮ ಘಮವಾದ ಬಿರ್ಯಾನಿ ತಯಾರು ಮಾಡಬಹುದಾಗಿದೆ. ಪುರುಸೊತ್ತು ಇದ್ದಲ್ಲಿ ರಂಜಾನ್ ಸಮಯದಲ್ಲಿ ಹೋಟೆಲ್ಲಿನಲ್ಲಿ ಬಿರ್ಯಾನಿ ತಿನ್ನಲೂ ಹೋಗಿ ಪೇಚಿಗೆ ಸಿಕ್ಕಿಕೊಂಡ ನಮ್ಮ ಈ ಪ್ರಸಂಗವನ್ನು ಓದಲು ಮರೆಯದಿರಿ.