ಚೊಚ್ಚಲು ಟಿ20 ವಿಶ್ವಕಪ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಉಳಿದೆಲ್ಲಾ ತಂಡಗಳಿಗೆ ಹೋಲಿಸಿದಲ್ಲಿ, ಭಾರತಕ್ಕೆ ಅಷ್ಟೇನೂ ಟಿ20 ಪಂದ್ಯಾವಳಿಗಳ ಅನುಭವವಿರಲಿಲ್ಲ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಸಚಿನ್, ಸೌರವ್, ದ್ರಾವಿಡ್ ಅಂತಹ ಘಟಾನುಘಟಿಗಳಿಲ್ಲದೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಯುವಕರ ಪಡೆಯೇ ದಕ್ಷಿಣ ಆಫ್ರಿಕಾಕ್ಕೆ ಹೋಗಿತ್ತು. 2007ರ, Sep 14 ರಂದು ದರ್ಭಾನ್ ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನವನ್ನು ಎದುರಿಸುತ್ತಿತ್ತು.
ಕ್ರೀಡಾಂಗಣದಲ್ಲಿ ಭಾರತೀಯರು ಮತ್ತು ಪಾಕೀಸ್ಥಾನೀಯರಿಂದಲೇ ಕಿಕ್ಕಿರಿದು ತುಂಬಿದ್ದ ಕಾರಣ ಅದೊಂದು ಭಾರತ ಮತ್ತು ಪಾಕ್ ಉಪಖಂಡದಲ್ಲಿಯೇ ಪಂದ್ಯಾವಳಿ ನಡೆಯುತ್ತಿದೆಯೇನೋ ಎನ್ನುವಂತಹ ವಾತವರಣವಿತ್ತು ಎಂದರೂ ತಪ್ಪಾಗಲಾರದು. ಟಾಸ್ ಗೆದ್ದ ಪಾಕೀಸ್ಥಾನ ಮೊದಲು ಬೋಲಿಂಗ್ ಮಾಡಲು ನಿರ್ಧರಿಸಿತು.
ಭಾರತದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಗಂಭೀರ್ ಶೂನ್ಯಕ್ಕೆ ಔಟಾದರೇ ಉಳಿದ ಆಟಗಾರರಂದಲೂ ಅಷ್ಟೇನೂ ಉತ್ತಮ ಪ್ರದರ್ಶನ ಬರಲ್ಲಿಲ್ಲವಾದರೂ ಕರ್ನಾಟಕದ ರಾಬಿನ್ ಉತ್ತಪ್ಪ ಅರ್ಧಶತಕ (50)ಗಳಿಸಿದರೆ ಪಠಾಣ್ ಮತ್ತು ಧೋನಿ ಅವರ ಭರ್ಜರಿ ಆಟದಿಂದಾಗಿ ನಿಗಧಿತ ಅವರಿಂದ 20 ಓವರುಗಳಲ್ಲಿ ಭಾರತವು 9 ಕ್ಕೆ 141 ರನ್ ಗಳಿಸಿತು. ಪಾಕೀಸ್ಥಾನದ ಪರವಾಗಿ ಮೊಹಮ್ಮದ್ ಆಸಿಫ್ ಅದ್ಭುತವಾಗಿ ಬೋಲಿಂಗ್ ಮಾಡಿ 18 ಕ್ಕೆ ಅವರ 4 ವಿಕೆಟ್ ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನಲುಬನ್ನು ಮುರಿದಿದ್ದರು.
ಪಾಕೀಸ್ಥಾನ ಈ ಸಾಧಾರಣ ಮೊತ್ತವನ್ನು ಬೇಧಿಸುವುದರಲ್ಲಿ ಉತ್ತಮವಾದ ಆರಂಭವನ್ನೇ ಪಡೆಯಿತಾದರೂ ಭಾರತೀಯರ ಚುರುಕು ಕ್ಷೇತ್ರ ರಕ್ಷಣೆ ಮತ್ತು ಇರ್ಫಾನ್ ಪಠಾಣ್ (20 ಕ್ಕೆ 2 ವಿಕೆಟ್) ತೀಕ್ಷ್ಣವಾದ ಬೋಲಿಂಗ್ ಪರಿಣಾಮವಾಗಿ ಪಂದ್ಯ ಸಮ ಸಮನಾದ ಹಂತಕ್ಕೆ ತಲುಪಿತ್ತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮಿಸ್ಬಾ ಬಂಡೆಯಂತೆ ಪಾಕೀಸ್ಥಾನಕ್ಕೆ ಆಸರೆಯಾಗಿದ್ದರು. ಕಡೆಯ ಮೂರು ಓವರುಗಳಲ್ಲಿ ಅರಾಫತ್ ಮತ್ತು ಮಿಸ್ಬಾ ಬೌಂಡರಿಯ ಮೇಲೆ ಬೌಂಡರಿಗಳನ್ನು ಹೊಡೆಯುತ್ತಾ ಕೊನೆಯ ಎರಡು ಎಸೆತಗಳಲ್ಲಿ 1 ರನ್ ಗಳಿಸುವತ್ತ ಸಾಗಿ ಪಂದ್ಯ ರೋಚಕ ಹಂತಕ್ಕೆ ತಲುಪಿತು. ಶ್ರೀಶಾಂತ್ ಎಸೆದ ಕಡೇ ಚೆಂಡಿನಲ್ಲಿ ಮಿಸ್ಬಾ ಕವರ್ಸ್ ಕಡೆ ಹೊಡೆದು ಒಂದು ರನ್ ಪಡೆಯುವ ಆತುರದಲ್ಲಿ ಶ್ರೀಶಾಂತ್ ಮೂಲಕ ರನ್ ಔಟ್ ಆಗಿ ಪಂದ್ಯವು ಟೈನಲ್ಲಿ ಕೊನೆಗೊಂಡಿತು. ಭಾರತ ಮತ್ತು ಪಾಕೀಸ್ಥಾನದ ನಡುವಿನ ರೋಚಕ ಹಣಾಹಣಿಯನ್ನು ನಿರೀಕ್ಷಿಸಿ ಬಂದಿದ್ದ ಪ್ರೇಕ್ಷಕರಿಗೆ ಇದಕ್ಕಿಂತ ಉತ್ತಮ ಪಂದ್ಯ ನೋಡಲು ಸಿಗಲಾರದು.
ಆ ವಿಶ್ವಕಪ್ ನಿಯಮಾವಳಿಯಂತೆ ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ಬದಲಾಗಿ ಬೋಲ್ ಔಟ್ ಮುಖಾಂತರ ಪಂದ್ಯದ ಗೆಲುವನ್ನು ನಿರ್ಧರಿಸಲಾಗುತ್ತಿತ್ತು.
ಪ್ರತೀ ತಂಡವೂ ತಮ್ಮ ತಂಡ ಐದು ಬೋಲರ್ಗಳನ್ನು ನಾಮನಿರ್ದೇಶಿಸಬೇಕಾಗಿತ್ತು ಅವರೆಲ್ಲರಿಗೂ ಒಂದೊಂದು ಚೆಂಡನ್ನು ಎಸೆಯಲು ಅವಕಾಶ ನೀಡಲಾಗುತ್ತದೆ. ಯಾವ ಯಾವ ತಂಡವು ಅತೀ ಹೆಚ್ಚು ಬಾರಿ ಸ್ಟಂಪ್‌ಗಳನ್ನು ಹೊಡೆಯುವಲ್ಲಿ ಸಫಲವಾಗುತ್ತದೆಯೋ ಅಂತಹ ತಂಡ ಗೆಲುವನ್ನು ಪಡೆಯುತ್ತದೆ. ಒಂದು ಬಾರೀ ಅಲ್ಲಿಯೂ ಸಹಾ ಟೈ ಆದಲ್ಲಿ ಪೆನಾಲ್ಟಿ ಶೂಟ್ ಮೂಲಕ ಗೆಲುವನ್ನು ನಿರ್ಧರಿಸಲಾಗುತ್ತದೆ.
ಮತ್ತೊಮ್ಮೆ ಟಾಸ್ ಗೆದ್ದ ಶೋಯೆಬ್ ಮಲಿಕ್, ಭಾರತ ತಂಡ ಮೊದಲ ಎಸತವನ್ನು ಎಸೆಯಲು ಕೋರಿಕೊಳ್ಳುತ್ತಾರೆ.
ಭಾರತವು ಸೆಹ್ವಾಗ್, ಹರ್ಭಜನ್, ಉತ್ತಪ್ಪ, ಶ್ರೀಶಾಂತ್, ಪಠಾಣ್ ಅವರನ್ನು ನಾಮಕರಣ ಮಾಡಿದರೆ, ಪಾಕಿಸ್ತಾನ ಅರಾಫತ್, ಉಮರ್ ಗುಲ್, ಅಫ್ರಿದಿ, ತನ್ವೀರ್ ಮತ್ತು ಆಸಿಫ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಇಡೀ ಕ್ರೀಡಾಂಗಣದ ಚಿತ್ತ ಪಿಚ್ ನತ್ತ ನೆಟ್ಟಿರುತ್ತದೆ. ಎಲ್ಲಾ ಆಟಗಾರರೂ ಕುತೂಹಲದಿಂದ 30 ಯಾರ್ಡ್ಸ್ ನಿಂದ ಹೊರಗೆ ನಿಂತಿದ್ದಾರೆ.
1 ನೇ ಎಸೆತ
ಧೋನಿ ಸ್ಟಂಪ್‌ನ ಹಿಂದೆ ನಿಂತು ಕೊಂಡರೆ, ಸೆಹ್ವಾಗ್ ಮಂದಹಾಸದಿಂದ ಮೊದಲ ಎಸೆತವನ್ನು ಎಸೆಯಲು ಸಿದ್ಧವಾಗಿ ನಿಧಾವಾಗಿ ಓಡಿ ಬಂದು ಗಾಳಿಯಲ್ಲಿ ತೇಲಿ ಬಿಟ್ಟ ಚೆಂಡು ನೇರವಾಗಿ ಲೆಗ್ ಸ್ಟಂಪ್ ಹಾರಿಸುತ್ತಿದ್ದಂತಯೇ ಇಡೀ ಕ್ರೀಡಾಂಗಣದಲ್ಲಿ ವಿದ್ಯುತ್ ಸಂಚಲನವಾಗಿ ಜೋರಾದ ಉದ್ಘೋಷ.
ಪಾಕೀಸ್ಥಾನದ ಕಡೆ ಅರಾಫತ್ ನೇರವಾಗಿ ಓಡಿ ಬಂದ ಎಸೆದ ಚೆಂಡು ಫುಲ್ ಟಾಸ್ ಆಗಿ ಆಫ್ ಸೈಡ್ ಆಚೆಗೆ ಬಿದ್ದಾಗ ಪಾಕೀಸ್ಥಾನದ ಕಡೆ ಪೆಚ್ಚುಮೊರೆಯಾದರೇ, ಭಾರತ ತಂಡ ಕಡೆ ಹರ್ಷೋದ್ಘಾರ.
ಹೀಗೆ ಮೊದಲ ಸುತ್ತಿನ ನಂತರ ಭಾರತ 1-0 ಮುನ್ನಡೆ ಸಾಧಿಸುತ್ತದೆ
2 ನೇ ಎಸೆತ
ಈ ಬಾರಿ ಭಾರತದ ಪ್ರಮುಖ ಬೌಲರ್ ಹರ್ಭಜನ್ ತ್ವರಿತವಾಗಿ ಮತ್ತು ನೇರವಾಗಿ ಎಸೆದ ಚೆಂಡು ಮಧ್ಯದ ವಿಕೆಟ್ಟಿಗೆ ತಾಗುತ್ತಿದ್ದಂತೆಯೇ ಆತನ ಆನಂದ ಮುಗಿಲೆತ್ತರಕ್ಕೆ ಏರಿತ್ತು ಎಂದರೂ ಅತಿಶಯೋಕ್ತಿ ಏನಲ್ಲ.
ಪಾಕೀಸ್ಥಾನದ ಕಡೆ ಉಮರ ಗುಲ್ ಶಾರ್ಟ್ ರನ್ ಅಪ್ ನಲ್ಲಿ ಎಸೆದ ಚೆಂಡು ಮತ್ತೊಮ್ಮೆ ವಿಕೆಟ್ಟಿಗೆ ತಾಗದೇ ಆಫ್ ಸ್ಟಂಪಿನಿಂದ ಅಚೆ ಬೀಳುತ್ತಿದ್ದಂತೆಯೇ ಭಾರತೀಯ ಆನಂದ ಅವರ್ಣನೀಯ.
ಎರಡನೇ ಸುತ್ತಿನ ನಂತರ ಭಾರತ 2-0 ಮುನ್ನಡೆ ಸಾಧಿಸಿ ಪಾಕಿಸ್ತಾನದ ಮೇಲೆ ಭಾರೀ ಒತ್ತಡವನ್ನು ಹೇರುತ್ತದೆ.
3ನೇ ಎಸೆತ
ಈ ಬಾರೀ ಆಶ್ವರ್ಯಕರವಾದ ರೀತಿಯಲ್ಲಿ ಭಾರತ ತನ್ನ ದಾಂಡಿಗ ರಾಬಿನ್ ಉತ್ತಪ್ಪ ಅವರನ್ನು ಮೂರನೇ ಚೆಂಡನ್ನು ಎಸೆಯಲು ಕಳುಹಿಸಿರುತ್ತಾರೆ. ಆತ ನಿಧಾನವಾಗಿ ಓಡಿ ಬಂದು ಎಸೆದ ಚೆಂಡು ನೇರವಾಗಿ ಲೆಗ್ ಸ್ಟಂಪಿಗೆ ಬಡಿಯುತ್ತಿದ್ದಂತೆಯೇ ಉತ್ತಪ್ಪ ಸಂತೋಷದಿಂದ ತನ್ನ ಟೋಪಿಯನ್ನು ತೆಗೆದು ಜನಸಮೂಹದತ್ತ ನಮಸ್ಕರಿಸುತ್ತಾನೆ.
ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿಗೆ ಬಂದ ಪಾಕೀಸ್ಥಾನ, ಪಂದ್ಯವನ್ನು ಪುನಃ ಸಮಸ್ಥಿತಿಗೆ ತರಲು ಉಳಿದ ಮೂರೂ ಎಸೆತಗಳಲ್ಲಿ ವಿಕೆಟ್ಟನ್ನು ಹಾರಿಸಲೇ ಬೇಕಾದಂತಹ ಒತ್ತಡಕ್ಕೆ ಸಿಲುಕಿರುತ್ತದೆ.
ಮೂರನೇ ಎಸೆತವನ್ನು ಎಸೆದ ಅಫ್ರಿದಿಯ ಚೆಂಡು ಗುರಿ ತಪ್ಪಿ ಲೆಗ್ ಸೈಡ್ ಆಚೆಗೆ ಹಾರುತ್ತಿದ್ದಂತೆಯೇ ಇಡೀ ಕ್ರೀಡಾಂಗಣದಲ್ಲಿದ್ದ ಭಾರತೀಯರಿಗೆ ಯುದ್ದವನ್ನು ಗೆದ್ದ ಸಂಭ್ರಮ
ಈ ರೀತಿಯಾಗಿ ಭಾರತ ಪಾಕೀಸ್ಥಾನವನ್ನು ಲೀಗ್ ಹಂತದಲ್ಲಿ 3-0 ಎಸೆತಗಳಿಂದ ಸೋಲಿಸಿ ಮತ್ತೊಮ್ಮೆ ಪಾಕೀಸ್ಥಾನದ ವಿರುದ್ಧ ವಿಶ್ವ ಕಪ್ ಪಂದ್ಯಾವಳಿಯಲ್ಲಿ ತನ್ನ ಅಜೇಯ ತನವನ್ನು ಎತ್ತಿ ಹಿಡಿಯಿತು.
ಈ ಪಂದ್ಯ ಗೆಲ್ಲುವ ಮೂಲಕ ಮೂರು ಅಂಕಗಳಿಸಿದ್ದ ಭಾರತ ಮತ್ತು ಪಾಕಿಸ್ತಾನ ಎರಡು ಅಂಕ ಗಳಿಸಿದ್ದ ಪಾಕೀಸ್ಥಾನ ಎರಡೂ ತಂಡಗಳೂ ಸೂಪರ್ ಎಂಟರ ಹಂತಕ್ಕೆ ಅರ್ಹತೆ ಪಡೆದು ಕೊಂಡವು.
ಈ ಎರಡೂ ತಂಡಗಳು ಮತ್ತೊಮ್ಮೆ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿ ಮತ್ತದೇ ಮಿಸ್ಬಾಉಲ್ ಹಕ್ ಗಲಿ ಬಿಲಿಯಲ್ಲಿ ಜೋಗಿಂದರ್ ಶರ್ಮಾ ಬೋಲಿಂಗ್ನಲ್ಲಿ ಶ್ರೀಶಾಂತ್ ಕೈಗೆ ಕ್ಯಾಚ್ ಕೊಡುವ ಮೂಲಕ ಭಾರತ ಚೊಚ್ಚಲು ವಿಶ್ವಕಪ್ ಟ್ರೋಫಿಯನ್ನು ಗೆಲ್ಲುತ್ತದೆ. ಆ ಪಂದ್ಯದ ರೋಚಕತೆಯನ್ನು ಮುಂದೊಮ್ಮೆ ವಿವರಿಸುತ್ತೇನೆ.
ಪಂದ್ಯ ಟೈ ಆದಾಗ, ಬೌಲ್ ಔಟ್‌ನಲ್ಲಿ ಬೌಲಿಂಗ್ ಮಾಡಲು ನಿಯಮಿತ ಬೋಲರ್ ಗಳಲ್ಲದ ವಿರೇಂದ್ರ ಸೆಹ್ವಾಗ್ ಹಾಗೂ ರಾಬಿನ್ ಉತ್ತಪ್ಪಗೆ ಏಕೆ ಅವಕಾಶ ನೀಡರೆಂದು ಆಗ ಬೌಲಿಂಗ್ ಕೋಚ್ ಆಗಿದ್ದ ವೆಂಕಟೇಶ್ ಪ್ರಸಾದ್ ಅವರಲ್ಲಿ ವಿಚಾರಿಸಿದಾಗ,
ಪ್ರತೀ ದಿನ ನೆಟ್ಸ್‌ನಲ್ಲಿ ನಿಯಮಿತವಾಗಿ ಅಭ್ಯಾಸ ನಡೆಸುತ್ತಿದ್ದಾಗ ತಂಡದ ಪ್ರತೀಯೊಬ್ಬ ಆಟಗಾರಿಂದಲೂ ಬೌಲ್ ಔಟ್ ಮಾಡುವುದನ್ನು ಅಭ್ಯಾಸ ಮಾಡಿಸುತ್ತಿದ್ದರು. ಆ ವೇಳೆಯಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳು ವಿಕೆಟ್‌ಗೆ ಚೆಂಡು ತಾಗಿಸುವಲ್ಲಿ ಯಶಸ್ವಿಯಾದರೂ. ಎಂ.ಎಸ್ ಧೋನಿ, ಸೆಹ್ವಾಗ್ ಹಾಗೂ ರಾಬಿನ್ ಉತ್ತಪ್ಪ ಅತೀ ಹೆಚ್ಚಿನ ಬಾರಿ ಸ್ಥಿರತೆಯಿಂದ ವಿಕೆಟ್ ಬಡಿಯುವುದರಲ್ಲಿ ಸಿದ್ದ ಹಸ್ತರಾಗಿದ್ದ ಕಾರಣ ವಿರೇಂದ್ರ ಸೆಹ್ವಾಗ್, ರಾಬಿನ್ ಉತ್ತಪ್ಪ ಹಾಗೂ ಹರಭಜನ್ ಸಿಂಗ್ ಅವರನ್ನು ಅಂತಿಮಗೊಳಿಸಿದರಂತೆ
ಅದೂ ಅಲ್ಲದೇ ನಿಯಮಿತ ಬೋಲರ್ಗಳು ಇಂತಹ ಸಮಯದಲ್ಲಿ ಒತ್ತಡಕ್ಕೊಳಗಾಗಿ ಚೆಂಡನ್ನು ಆಚೀಚೆ ಎಸೆಯುವ ಸಂದರ್ಭಗಳು ಹೆಚ್ಚಾಗಿರುವ ಕಾರಣ (ಪಾಕೀಸ್ಥಾನದ ತಂಡ ಅದೇ ತಪ್ಪನ್ನು ಮಾಡಿತ್ತು) ಅರೆಕಾಲಿಕವಾಗಿ ನಿಧಾನವಾಗಿ ಬೌಲಿಂಗ್ ಮಾಡುವ ಬೌಲರ್‌ಗಳು ಯಾವುದೇ ಒತ್ತಡವಿಲ್ಲದೇ, ತಮ್ಮ ದೇಹವನ್ನು ಹಾಗೂ ಎಸೆತವನ್ನು ನಿಯಂತ್ರಿಸುತ್ತಾ ನೇರವಾದ ತೋಳಿನಿಂದ ಚೆಂಡು ಎಸೆಯುತ್ತಾರೆ. ಹಾಗಾಗಿ ಅದು ವಿಕೆಟ್‌ಗೆ ಸುಲಭವಾಗಿ ತಾಗುತ್ತದೆ ಎಂಬುದು ನಮ್ಮ ಊಹೆಯಾಗಿತ್ತು ಮತ್ತು ಅದನ್ನು ನಮ್ಮ ಬೋಲರ್ಗಳು ಸಾಧಿಸಿ ತೋರಿಸಿದರು ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದರು.
ಈ ಮೂಲಕ ಯುದ್ಧ ಕಾಲೇ ಶಸ್ತ್ರಾಭ್ಯಾಸ ಮಾಡದೇ, ಮುಂದೆ ಬರಬಹುದಾದಂತಹ ವಿಪತ್ತುಗಳನ್ನು ಮುಂಚೆಯೇ ಅಲೋಚಿಸಿ ಅದಕ್ಕೆ ತಕ್ಕ ಸಿದ್ದತೆ ಮಾಡಿಕೊಂಡಿದ್ದಲ್ಲಿ ಜಯವು ನಮ್ಮದೇ ಎನ್ನುವುದನ್ನು ಭಾರತ ಕ್ರಿಕೆಟ್ ಆಟಗಾರರು ಮತ್ತೊಮ್ಮೆ ಸಾಭೀತು ಪಡಿಸಿದರು. ಛಲವಿದ್ದಲ್ಲಿ ಬಲವಿದೆ. ಬಲವಿದ್ದಲ್ಲಿ ಗೆಲುವಿದೆ.
ಏನಂತೀರೀ?
ಭಾರತ ಮತ್ತು ಪಾಕೀಸ್ಥಾನದ ನಡುವಿನ ಬೋಲ್ ಔಟ್ ರೋಚಕ ಕ್ಷಣಗಳನ್ನು ಈ ವೀಡಿಯೋ ಮೂಲಕ ಕಣ್ತುಂಬಿಕೊಳ್ಳ ಬಹುದಾಗಿದೆ