ಸಾಧಾರಣವಾಗಿ ಪತ್ರಿಕೆಗಳ ಮೂರನೇಯ ಪುಟದಲ್ಲಿ ಪ್ರಕಟವಾಗುವ ಕ್ರೈಮ್ ಸುದ್ದಿ ನೋಡುವಾಗ ಅಮಾಯಕ ಹುಡುಗಿಗೆ ಮೋಸ ಮಾಡಿದ ಹುಡುಗ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಸುದ್ದಿ ಅದರ ತದ್ವಿರುದ್ಧವಾಗಿ ಹುಡುಗರೇ ಯುವತಿಯರಿಂದ ಮೋಸ ಹೋದ ಅಪರೂಪ ಪ್ರಕರಣಗಳು ಹೆಚ್ಚಾಗಿ ಸಭ್ಯ ಗಂಡಸರೆಲ್ಲಾ ತಲೆ ತಗ್ಗಿಸುವಂತಾಗಿದೆ
ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೈಟ್ ಫೀಲ್ಡ್ ನ ದೊಡ್ಡನೆಕ್ಕುಂದಿ ಬಳಿಯ ಯುವಕನೊಬ್ಬ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಹದಿಹರೆಯದ ವಯಸ್ಸು ಮತ್ತು ಅಂತರ್ಜಾಲದಲ್ಲಿ ಜಾಹೀರಾತಿನ ಆಮಿಷಕ್ಕೆ ಆಕರ್ಷಿತನಾಗಿ ಏಕಾಂತವಾಗಿರುವಾಗ ಮಹಿಳೆ ಜತೆ ಕಾಲ ಕಳೆಯಲು ಓಕೆ ಕ್ಯೂಪಿಡ್ ಎಂಬ ಆ್ಯಪ್ ಮೂಲಕ ಯುವತಿಯನ್ನು ಸಂಪರ್ಕಿಸಿದ. ಹಾಗೆ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಇಬ್ಬರೂ ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಒಬ್ಬರಿಗೊಬ್ಬರು ಸುದೀರ್ಘ ಮಾತನಾಡತೊಡಗಿದರು.
ಸುಮಾರು ದಿನಗಳವರೆಗೆ ಇದೇ ರೀತಿ ವಾಟ್ಸ್ ಆ್ಯಪ್ ಚಾಟಿಂಗ್ ಮುಂದುವರಿಯುತ್ತಿದ್ದಂತೆಯೇ, ಆ ಯುವಕ ಸ್ವಲ್ಪ ಮುಂದುವರೆದು ತನ್ನ ನಿಜವಾದ ಭಾವನೆಯನ್ನು ಮತ್ತು ಮನೋ ಕಾಮನೆಯನ್ನು ಆ ಯುವತಿಯ ಬಳಿ ಹೇಳಿಕೊಂಡಿದ್ದಾನೆ. ಅದಕ್ಕೆ ಪೂರಕವಾಗಿ ಆ ಯುವತಿಯೂ ಪ್ರತಿಕ್ರಿಯಿಸಿದ್ದು ಕಂಡು ಯುವಕನಿಗೆ ರೊಟ್ಟಿಗೆ ಜಾರಿ ತುಪ್ಪಕ್ಕೆ ಬಿದ್ದ ಹಾಗೆ ಆಗಿದೆ. ಹಾಗೆಯೇ ಮುಂದುವರಿದ ಇವರಿಬ್ಬರ online ಸರಸ ಸಲ್ಲಾಪ. ಕಾಮಾತುರಾಣಾಂ ನ ಭಯಂ ನ ಲಜ್ಜಾ!! ಎನ್ನುವಂತೆ ಕೊನೆಗೆ ಆಕೆಯ ಜತೆ ವಾಟ್ಸ್ ಆ್ಯಪ್ ನಲ್ಲಿ ನಗ್ನವಾಗಿ ವಿಡಿಯೋ ಸಂಭಾಷಣೆ ನಡೆಯುವಷ್ಟು ಮುಂದುವರಿದೆ.
ಮುಂದೆ ನಡೆದದ್ದೇ ಈ ಪ್ರಕರಣಕ್ಕೆ ಟ್ವಿಸ್ಟ್. ಆ ಯುವಕನ ಅರಿವಿಗೇ ಬಾರದಂತೆ ಆಕೆ ಆತನ ನಗ್ನ ವೀಡಿಯೋ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಲ್ಲದೇ ಹುಡುಗನೊಂದಿಗೆ ಬ್ಲಾಕ್ ಮೇಲಿಗೆ ಇಳಿದಿದ್ದಾಳೆ. ತಾನು ಕೇಳಿದಷ್ಟು ಹಣ ಕೊಡದಿದ್ದಲ್ಲಿ ಈ ಖಾಸಗಿ ದೃಶ್ಯಗಳನ್ನು ಯೂಟ್ಯೂಬ್ ಮತ್ತು ಇತರೇ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೆದರಿಸಿದ್ದಾಳೆ.
ಮಾಡಿದ ಕರ್ಮಕ್ಕಾಗಿ ವಿಧಿ ಇಲ್ಲದೇ ಆಕೆಗೆ 22 ಸಾವಿರ ರೂಗಳನ್ನು ಆಕೆಯ ಖಾತೆಗೆ ಸಂದಾಯ ಮಾಡಿದ್ದಾನೆ, ಕರೆಯುವ ಹಸು ಸಿಕ್ಕಿರುವಾಗ ರುಚಿ ಕಂಡ ಬೆಕ್ಕು ಸುಮ್ಮನಿರುತ್ತದೆಯೇ? ದುರಾಸೆಯಿಂದ ಆಕೆ ಮತ್ತೊಮ್ಮೆ ಆ ಯುವಕನಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ವಿಧಿ ಇಲ್ಲದೇ ಯುವತಿಯೊಬ್ಬಳು ತನಗೆ ಕರೆ ಮಾಡಿ ತನ್ನನ್ನು ಬೆತ್ತಲೆ ನೋಡಬೇಕೆಂದು ಹೇಳಿ ವಿಡಿಯೋ ಕಾಲ್ ಮಾಡಿಸಿಕೊಂಡು, ಅದನ್ನು ತನ್ನ ಅರಿವಿಲ್ಲದಂತೆಯೇ, ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಾ ಹಣವನ್ನು ತೆಗೆದುಕೊಂಡಿದ್ದಲ್ಲದೇ ಮತ್ತೆ ಮತ್ತೆ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾಳೆ ಎಂದು ಆರೋಪಿಸಿ ಆ ಯುವಕ ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಇದೇ ರೀತಿಯ ಇನ್ನೊಂದು ಪ್ರಕರಣ ಕೆಲ ದಿನಗಳ ಹಿಂದೆಯೂ ನಡೆದಿತ್ತು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಯುವತಿಯೊಬ್ಬಳ ಪರಿಚಯವಾಗುತ್ತದೆ. ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಹುಡುಗಿ ಸ್ವಲ್ಪ ಕಿಸಿದರೆ ಸಾಕು ಆಕೆ ಎಲ್ಲದ್ದಕ್ಕೂ ಸಿದ್ದಳಿದ್ದಾಳೆ ಎಂದೇ ಭಾವಿಸುವ ಇಂದಿನ ಕಾಲದ ಹುಡುಗರು ಅತುರಕ್ಕೆ ಬಿದ್ದ ಆಂಜನೇಯನಂತೆ ನೇರವಾಗಿ ತಮ್ಮ ನಿವೇದನೆಯನ್ನು ಮಾಡಿಯೇ ಬಿಡುತ್ತಾರೆ. ಇಲ್ಲಿಯೂ ಸಹಾ ಅದೇ ರೀತಿಯಲ್ಲೇ ನಡೆದು ಅವರಿಬ್ಬರೂ ಅಂದೊಂದು ಸಂಜೆ ಹೋಟೆಲ್ ಒಂದರಲ್ಲಿ ಭೇಟಿಯಾಗಲು ನಿರ್ಧರಿಸುತ್ತಾರೆ.
ಹುಡುಗಿಯನ್ನು ಭೇಟಿ ಮಾಡುವ ಇಂಗಿತದಿಂದ ತುರಾತುರಿಯಲ್ಲಿ ಕಛೇರಿಯಿಂದ ನೇರವಾಗಿಯೇ ನಿರ್ಧರಿಸಿದ್ದ ಹೋಟೆಲ್ಗೆ ಹೋಗಿ ಅದಾಗಲೇ ಬುಕ್ ಮಾಡಿದ್ದ ಕೊಠಡಿಯಲ್ಲಿ ತನ್ನ ತೃಷೆ ತೀರಿಸಿಕೊಂಡು ಸ್ನಾನ ಮಾಡಿಕೊಂಡು ಬರುವಷ್ಟರಲ್ಲಿ ಕೊಠಡಿಯಲ್ಲಿ ಹುಡುಗಿ ಕಾಣುವುದಿಲ್ಲ ಮತ್ತು ಜೊತೆಗೆ ಆತನ ಕಂಪನಿಯ ಲ್ಯಾಪ್ಟಾಪ್ ಮತ್ತು ಪರ್ಸ್ ಎಲ್ಲವೂ ನಾಪತ್ತೆ. ಸ್ವಾಗತಕಾರರಿಗೆ ಕರೆ ಮಾಡಿ ವಿಚಾರಿಸಿದಾಗ, ಸರ್, ನಿಮ್ಮಾಕೆ ಈಗ ತಾನೇ ಲ್ಯಾಪ್ಟಾಪ್ ಬ್ಯಾಗಿನೊಂದಿಗೆ ಹೊರ ಹೋಗಿದ್ದನ್ನು ನೋಡಿದೆ ಎಂದಿದ್ದಾರೆ. ಮಾಡಿರುವ ತಪ್ಪಿಗಾಗಿ ಆಕೆ ತನ್ನ ಹೆಂಡತಿಯಲ್ಲ ಎಂದು ಹೇಳಿಕೊಳ್ಳಲೂ ಆಗುವುದಿಲ್ಲ ಮತ್ತು ಮರ್ಯಾದೆಗೆ ಅಂಜಿ ಆಕೆಯ ವಿರುದ್ಧ ಪೋಲೀಸಿಗೆ ದೂರನ್ನೂ ಕೊಡಲಾಗದೇ ಒದ್ದಾಡುವ ಪರಿಸ್ಥಿತಿ ಆತನದ್ದಾಗಿರುತ್ತದೆ.
ಕಛೇರಿಯಲ್ಲಿ ತನ್ನ ಲ್ಯಾಪ್ಟಾಪ್ ಕಳ್ಳತನವಾಗಿದೆ ಹೊಸಾ ಲ್ಯಾಪ್ಟಾಪ್ ಕೊಡಿ ಎಂದು ಕೇಳಿದಾಗ ಕಳ್ಳತನವಾಗಿದ್ದಕ್ಕೆ ಪೋಲೀಸರಲ್ಲಿ ದೂರನ್ನು ದಾಖಲಿಸಿ ಎಂದಾಗಲೇ ಬಿಸಿ ತುಪ್ಪ ನುಂಗಲಾಗದೇ ಬಿಡಲಾಗದೇ ವಿಲಿವಿಲನೆ ಚಡಪಡಿಸುತ್ತಿದ್ದದ್ದನ್ನು ಕಂಡ ಆತನ ಸಹೋದ್ಯೋಗಿ ವಿಚಾರಿಸಿದಾಗ ನಡೆದದ್ದೆಲ್ಲವನ್ನೂ ವಿವರಿಸಿದಾಗ ಆತ ತನಗೆ ಗೊತ್ತಿದ್ದ ಕ್ರೈ ಪೋಲೀಸರ ಸಹಾಯದಿಂದ ವಿಚಾರಣೆ ನಡೆಸಿದಾಗ ಅದೊಂದು ಫೇಕ್ ಅಕೌಂಟ್ ಆಗಿದ್ದು ಪ್ರತೀ ಬಾರಿಯೂ ಒಂದೊಂದು ಹೊಸಾ ನಕಲೀ ಅಕೌಂಟಿನ ಮುಖಾಂತರ ಇಂತಹ ಮಿಕಗಳನ್ನು ಹುಡುಕಿ ಮೋಸಮಾಡುವ Honey Trap ಜಾಲವೇ ಬೆಂಗಳೂರಿನಲ್ಲಿದೆ ಎಂಬ ಆಶ್ವರ್ಯಕರವಾದ ವಿಷಯವನ್ನು ತಿಳಿಸುತ್ತಾರೆ. ಈ ರೀತಿಯಾಗಿ ಮೋಸ ಹೋಗುವ ಹೆಚ್ಚಿನವರು ಮಾನ ಮರ್ಯಾದೆಗೆ ಅಂಜಿ ದೂರು ನೀಡುವುದಿಲ್ಲ ಎಂಬುದನ್ನು ಅ ಮಾಟಗಾತಿಯರು ಚೆನ್ನಾಗಿ ಅರಿತಿರುವ ಕಾರಣ ಈ ರೀತಿಯ ಮೋಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಮತ್ತು ಎಲ್ಲೋ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಈ ರೀತಿಯಲ್ಲಿ ಹೊರಬರುತ್ತದೆ.
ಈ ಎರಡೂ ಪ್ರಸಂಗಗಳಲ್ಲಿ ಆ ಯುವತಿಯರೇ ಮೋಸಮಾಡಿದ್ದರೂ ನಿಜ ಹೇಳ ಬೇಕೆಂದರೆ ನನ್ನ ಪ್ರಕಾರ ತಪ್ಪಾಗಿರುವುದು ಹುಡುಗರ ಕಡೆಯಿಂದಲೇ. ಮನುಸ್ಮೃತಿಯಲ್ಲಿ ಹೇಳಿರುವಂತೆ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಃ ತತ್ರ ಅಫಲಾಃ ಅಂದರೆ ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ. ಅದೇ ರೀತಿ ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ತಿಳಿಸುತ್ತದೆ. ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಕೊಟ್ಟ ಪೂಜ್ಯಸ್ಥಾನವನ್ನು ಜಗತ್ತಿನ ಇನ್ಯಾವ ಸಂಸ್ಕೃತಿಯಲ್ಲೂ ನೀಡಿಲ್ಲ. ಪರಸ್ತ್ರೀಯನ್ನು ನಾವು ತಾಯಿ ಮತ್ತು ಸಹೋದರಿಯ ರೂಪದಲ್ಲಿಯೇ ನೋಡಬೇಕು ಎಂದೇ ಹೇಳುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಶಕ್ತಿ ಎಂದರೆ ಅಥವಾ ಶತ್ರು ನಾಶ ಎಂದರೆ ಅವಲಂಭಿಸಿರುವುದು ಶಕ್ತಿ ದೇವತೆಗಳನ್ನೇ.
ಆದರೆ ಇಂದಿನ ಯುವಜನತೆ ಅಂಧ ಪಾಶ್ವಾತ್ಯ ಅನುಕರಣೆಯಿಂದ ನಮ್ಮ ಸತ್ ಸಂಪ್ರದಾಯಗಳನ್ನೆಲ್ಲಾ ಬದಿಗೊತ್ತಿ ವಯಸ್ಸಲ್ಲದ ವಯಸ್ಸಿನಲ್ಲಿ ಹಪಾ ಹಪಿಯಿಂದ ವಿವಾಹೇತರ ಕಾಮಕೇಳಿಯಲ್ಲಿ ತೊಡಗುವುದಲ್ಲದೇ, ಇಂತಹ ಸಮಸ್ಯೆಗಳಿಗೆ ಸಿಲುಕಿಕೊಂಡು ಧನ ಕನಕಗಳನ್ನು ಕಳೆದುಕೊಳ್ಳುವುದಲ್ಲದೇ ಮಾನ ಮರ್ಯಾದೆಯನ್ನೂ ಮೂರು ಕಾಸಿಗೆ ಹರಾಜು ಹಾಕಿಕೊಳ್ಳುತ್ತಾರೆ. ದುರ್ಬಲ ಮನಸ್ಸಿದ್ದವರು ಪ್ರಾಣವನ್ನೂ ಕಳೆದುಕೊಂಡ ಪ್ರಸಂಗಗಳು ಎಷ್ಟೋ ದಿನಗಳ ನಂತರ ಬೆಳಕಿಗೆ ಬರುತ್ತದೆ. ಹಾಗಾಗಿ ಗಂಡಸರೇ/ ಯುವಕರೇ ಹುಷಾರ್. ದಯವಿಟ್ಟು ಈ ರೀತಿಯ ದುಶ್ವಟಗಳಿಗೆ ಬಲಿಯಾಗ ಬೇಡಿ.
ಎಲ್ಲಿಯ ವರೆಗೂ ಈ ರೀತಿಯಾಗಿ ಮೋಸ ಹೋಗುವವರು ಇರುತ್ತಾರೆಯೋ, ಅಲ್ಲಿಯವರೆಗೂ ಇಂತಹ ಮೋಸ ಮಾಡುವವರು ಇದ್ದೇ ಇರುತ್ತಾರೆ. ಬೆಳ್ಳಗಿರೋದೆಲ್ಲಾ ಹಾಲಲ್ಲ. ನಿಮ್ಮನ್ನು ನೋಡಿ ಕಿಸಕ್ಕೆಂದ ಹೆಣ್ಣು ಮಕ್ಕಳೆಲ್ಲಾ ಸರಸಕ್ಕಿರುವ ಸರಕಲ್ಲಾ ಎಂಬುದನ್ನು ಮನನ ಮಾಡಿಕೊಳ್ಳಿ. ಹಾಗಾಗಿ ಗಂಡಸರೇ ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಿಸಿ ಕೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿ.
ಏನಂತೀರೀ?
ಕಾಕತಾಳೀಯವೆಂದರೆ, ಈ ಲೇಖನ ಬರೆಯುತ್ತಿದ್ದ ಸಮಯದಲ್ಲಿಯೇ ರಮೇಶ್ ಅರವಿಂದ್ ಮತ್ತು ಕಮಲ ಹಾಸನ್ ಅಭಿನಯಿಸಿರುವ ಇದೇ ರೀತಿಯ ವಿವಾಹೇತರ ಸಂಬಂಧದ ಕಥೆಯುಳ್ಳ ರಾಮಾ ಭಾಮ ಶ್ಯಾಮ ಚಿತ್ರ ಟಿವಿಯ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿತ್ತು.
ಲೇಖನ ಚೆನ್ನಾಗಿದೆ
LikeLiked by 1 person
ಧನ್ಯೋಸ್ಮಿ
LikeLike