ರಕ್ಷಾ ಬಂಧನ

ನಮ್ಮ ದಕ್ಷಿಣ ಭಾರತದಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ವೃದ್ಧಿಸುಸುವ ಅಥವಾ ಬಲಪಡಿಸುವ ಉದ್ದೇಶದಿಂದ ನಾಗರಪಂಚಮಿಯನ್ನು ಅಚರಿಸಿದರೆ ಭಾರತ ಉಳಿದ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

ಈ ರಕ್ಷಾ ಬಂಧನದ ಆಚರಣೆಯ ಹಿಂದೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆಯೂ ಇದೆ. ಬಲಿ ಚಕ್ರವರ್ತಿಯನ್ನು ಬಲಿ ತೆಗೆದುಕೊಳ್ಳುವ ಸಲುವಾಗಿ ಮಹಾವಿಷ್ಣು ವಾಮನ ರೂಪದಲ್ಲಿ ಬಂದು ಮೂರು ಹೆಜ್ಜೆಗಳ ಪ್ರದೇಶವನ್ನು ದಾನವಾಗಿ ಪಡೆದು ತ್ರಿವಿಕ್ರಮನಾಗಿ ಮೊದಲ ಹೆಜ್ಜೆ ಇಡೀ ಭೂಮಂಡಲವನ್ನು ಆಕ್ರಮಿಸಿದರೆ, ಎರಡನೇ ಹೆಜ್ಜೆ ಆಕಾಶಲೋಕವನ್ನು ಆಕ್ರಮಿಸಿ ಮೂರನೇ ಹೆಜ್ಜೆ ಎಲ್ಲಿ ಇಡುವುದು ಎಂಬ ಜಿಜ್ಞಾಸೆ ಕಾಡಿದಾಗ, ಬಂದಿರುವುದು ಸಾಮಾನ್ಯ ವಟುವಲ್ಲ ಎಂಬುದರ ಅರಿವಾಗಿ ನನ್ನ ತಲೆಯಮೇಲೆ ಇಡಿ ಎಂಬು ಬಲಿ ಚಕ್ರವರ್ತಿ ಪ್ರಾರ್ಥಿಸಿಕೊಂಡಾಗ ವಾಮನ ಬಲಿಯ ತಲೆಯ ಮೇಲೆ ತನ್ನ ಪಾದವನ್ನಿಟ್ಟು, ಪಾತಾಳ ಲೋಕಕ್ಕೆ ತುಳಿಯಲ್ಪಟ್ಟರೂ ತನ್ನ ಧಮ೯ವನ್ನು ಬಿಡದ ಬಲಿರಾಜನನ್ನು ಮೆಚ್ಚಿದ ವಿಷ್ಣುಪತ್ನಿ ಲಕ್ಷ್ಮೀಯು

ಏನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ|
ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ||

ಅಂದರೆ ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಕ್ಷೆಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಕ್ಷೆಯೇ, ನೀನು ವಿಚಲಿತಳಾಗಬೇಡ, ವಿಚಲಿತಳಾಗಬೇಡ.

ಎಂಬ ಆಶಯದಿಂದ ಬಲಿ ಚಕ್ರವರ್ತಿಯ ಕೈಗೆ ರಕ್ಷ್ನೆಯನ್ನು ಕಟ್ಟುವ ಮೂಲಕ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡ ದಿನವೇ ಶ್ರಾವಣ ಹುಣ್ಣಿಮೆಯಾಗಿತ್ತು ಹಾಗಾಗಿ ಅಂದಿನಿಂದ ಅಣ್ಣ ತಂಗಿಯರ ಅನುಬಂಧ ಬೆಸೆಯುವ ಈ ರಕ್ಷಾ ಬಂಧನದ ಆಚರಣೆ ಆರಂಭವಾಯಿತು ಎಂಬ ಪ್ರತೀತಿ ಇದೆ.

rakhi4

ರಕ್ಷೆ ಕಟ್ಟುವುದು ಕೇವಲ ಅಣ್ಣ ತಂಗಿಯರಷ್ಟೇ ಅಲ್ಲದೇ ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಒಳ್ಳೆಯ ಕಾರ್ಯಗಳನ್ನು ಮಾಡುವ ಮುನ್ನಾ ಕಂಕಣ ಕಟ್ಟಿಸಿಕೊಂಡು ಆ ಕಂಕಣಕ್ಕೆ ಕಟಿ ಬದ್ದನಾಗಿ ಕಾರ್ಯವನ್ನು ನಿರ್ವಹಿಸಿ ಕೆಲಸವನ್ನು ಯಶಸ್ವಿಗೊಳಿಸಲು ಸದಾ ಎಚ್ಚರಿಸುವ ಸಂಕೇತವೇ ಈ ರಕ್ಷೆಯಾಗಿರುತ್ತದೆ ಎಂದರೂ ತಪ್ಪಾಗಲಾರದು.

ಅದಕ್ಕೆ ಪುರಾವೆಯಂತೆ ದೇವರು ಮತ್ತು ದಾನವರ ನಡುವೆ ಸುಮಾರು 12 ವರ್ಷಗಳ ಕಾಲ ನಿರಂತರವಾಗಿ ಯುದ್ಧ ನಡೆದು, ದೇವತೆಗಳ ರಾಜ ಇಂದ್ರನಿಗೆ ಸೋಲುಂಟಾಗಿ ಮೂರು ಲೋಕಗಳೂ ರಾಕ್ಷಸರ ಪಾಲಾಗುತ್ತದೆ. ಯುದ್ದದ ಸೋಲನ್ನು ಅರಗಿಸಿಕೊಳ್ಳದ ಇಂದ್ರ ತಮ್ಮ ಗುರುಗಳಾದ ಬೃಹಸ್ಪತಿಯವರ ಬಳಿ ಬಳಿಗೆ ಹೋಗಿ ಸಲಹೆ ಕೇಳಿದಾಗ ಇದೇ ಶ್ರಾವಣ ಮಾಸದ ಹುಣ್ಣಿಮೆಯಂದು ಕೆಲವು ಬೀಜಮಂತ್ರಗಳನ್ನು ಬೋಧಿಸಿ, ಇಂದ್ರ ಪತ್ನಿ ಶಚಿ(ಇಂದ್ರಾಣಿ), ಇಂದ್ರನ ಬಲಗೈ ಮಣಿಕಟ್ಟಿನ ಮೇಲೆ ಕಂಕಣ ಕಟ್ಟುತ್ತಾಳೆ. ಆ ಕಂಕಣದ ರಕ್ಷೆ ಮತ್ತು ಮಂತ್ರಗಳ ಅಶೀರ್ವಾದಿಂದ ಪುನಃ ದಾನವರ ಮೇಲೆ ದಂಡೆತ್ತಿ ಹೋದ ಇಂದ್ರ ತಾನು ಕಳೆದುಕೊಂಡಿದ್ದ ಎಲ್ಲಾ ರಾಜ್ಯಗಳನ್ನೂ ಮರಳಿ ಪಡೆಯುತ್ತಾನೆ ಎಂಬುದು ಪುರಾಣದಲ್ಲಿ ತಿಳಿದು ಬರುತ್ತದೆ.

ಇನ್ನು ಇತಿಹಾಸವನ್ನು ನೋಡುತ್ತಾ ಹೋದರೆ, ಇಡೀ ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನು ಸಿಂಧೂ ನದಿಯ ತಟದಲ್ಲಿ ಪುರೂರವನನ್ನು ಎದುರಿಸಿ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ ಪುರೂರವನ ಕೈ ಮೇಲಾಗುತ್ತಿದ್ದದ್ದನ್ನು ಗಮನಿಸಿದ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಇಲ್ಲಿಯ ಸಂಪ್ರದಾಯದಂತೆ ತನ್ನ ಪತಿಯನ್ನು ಯುದ್ದದಲ್ಲಿ ಕೊಲ್ಲದಿರುವಂತೆ ಮನವಿ ಯೊಂದಿಗೆ ಪುರೂರವನಿಗೆ ರಾಖಿಯನ್ನು ಕಳುಹಿಸುತ್ತಾಳೆ. ಅದಕ್ಕೆ ರೊಕ್ಸಾನಳನ್ನು ತನ್ನ ಸಹೋದರಿ ಎಂದು ಭಾವಿಸಿ ಅವಳು ಕಳುಹಿಸಿದ ರಕ್ಷೆಗ ಬದ್ಧನಾದ ಪುರೂರವ ಯುದ್ಧದಲ್ಲಿ ಪೌರವ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಆದರೆ ಅಂಬಿ ಎಂಬ ಹಿತಶತ್ರುವಿನಿಂದಾಗಿ ಅಲೆಕ್ಸಾಂಡರ್ ಪೌರವನನ್ನು ಸೆರೆಹಿಡಿದು ಹಿಂಸಿಸಿದ ಕಥೆ ಈಗ ಇತಿಹಾಸ.

ಇದೇ ರೀತಿಯಲ್ಲಿಯೇ ಚಿತ್ತೂರಿನ ರಾಜ ಸತ್ತುಹೋದಾಗ, ಚಿತ್ತೂರನ್ನು ವಶಪಡಿಸಿಕೊಳ್ಳಲು ಇದೇ ಸುಸಂದರ್ಭ ಎಂದು ಭಾವಿಸಿದ ಚಕ್ರವರ್ತಿ ಬಹದ್ದೂರ್ ಷಾ ಚಿತ್ತೂರಿನ ಮೇಲೆ ದಂಡೆತ್ತಿ ಬರಲು ನಿರ್ಧರಿಸುತ್ತಾನೆ. ಈ ವಿಷಯ ತಿಳಿದ ಚಿತ್ತೂರಿನ ರಾಣಿ ಕರ್ಣಾವತಿಯು ಸಹಾಯಕ್ಕಾಗಿ ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳುಹಿಸಿ ತನ್ನ ರಕ್ಷಣೆಯನ್ನು ಮಾಡುವಂತೆ ಕೋರಿಕೊಳ್ಳುತ್ತಾಳೆ, ದುರಾದೃಷ್ಟವಾಷಾತ್ ಈ ಮನವಿ ಹುಮಾಯೂನನಿಗೆ ತಲುಪುವ ಮುನ್ನವೇ, ಬಹದ್ದೂರ್ ಶಾನ ಸೈನ್ಯ ಚಿತ್ತೂರನ್ನು ವಶಪಡಿಸಿಕೊಂಡದ್ದನ್ನು ಸಹಿಸದ ರಾಣಿ ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡುತ್ತಾಳೆ. ತನಗೆ ರಕ್ಷೆ ಕಳುಹಿಸಿದ ಸಹೋದರಿಯ ನೆನಪಿನಲ್ಲಿ ಬಹದ್ದೂರ್ ಶಾನ ಸೈನ್ಯವನ್ನು ಸೋಲಿಸಿದ ಹುಮಾಯೂನ್ ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಪ್ರತಿಷ್ಟಾಪಿಸುವ ಮೂಲಕ ರಕ್ಷೆಗೆ ಬದ್ಧನಾಗುತ್ತಾನೆ ಎನ್ನುತ್ತದೆ ಇತಿಹಾಸ.

ಹೀಗೆ ರಕ್ಷೆಯನ್ನು ಸಹೋದರಿಯು ಸಹೋದರನ ಕೈಗೆ ಕಟ್ಟುವುದರ ಮೂಲಕ ತನ್ನ ತವರು ಮನೆ ಏಳಿಗೆಯಾಗಿ ತನ್ನ ರಕ್ಷಣೆಗೆ ಸನ್ನದ್ಧನಾಗಿರ ಬೇಕು ಎನ್ನುವ ಉದ್ದೇಶವಿದ್ದರೆ, ಈ ರೀತಿಯಾಗಿ ರಕ್ಷೆ ಕಟ್ಟಿಸಿಕೊಂಡ ಸಹೋದರನೂ ಕೂಡಾ ಎಲ್ಲ ಕಾಲವೂ ಎಲ್ಲಾ ರೀತಿಯಲ್ಲಿ ತನ್ನ ಸಹೋದರಿಯ ರಕ್ಷಣೆಗೆ ಬದ್ಧನಾಗಿರುವ ಸಂಕಲ್ಪವನ್ನು ತೊಟ್ಟಿರುತ್ತಾನೆ.

WhatsApp_Image_2020-08-02_at_12-removebg-preview

ಇನ್ನು ಕಟ್ಟುವ ರಾಖಿ ಹೇಗಿರ ಬೇಕು ಮತ್ತು ಹೇಗೆ ಕಟ್ಟಬೇಕು ಎಂದರೆ, ರಾಖಿಯಿಂದ ಪಸರಿಸುವ ಲಹರಿಗಳು ಸಹೋದರ ಸಹೋದರಿ ಬಾಂಧವ್ಯವನ್ನು ವೃದ್ಧಿಗೊಳಿಸುವಂತಿರಬೇಕು. ಹಾಗಾಗಿ ಚಿತ್ರ-ವಿಚಿತ್ರಗಳಿಂದ ಕೂಡಿರುವ ರಾಖಿಗಳಿಗಿಂತ ಹತ್ತಿ ಇಲ್ಲವೇ ಒಳ್ಳೆಯ ರೇಷ್ಮೆಯಿಂದ ಮಾಡಿರುವ ಹಳದಿ,ಕೆಂಪು ಅಥವಾ ಬಿಳಿ ಬಣ್ಣದ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದಲ್ಲಿ ಆ ರಾಖಿಯ ತ್ರಿಗುಣಗಳು (ಸತ್ತ್ವ, ರಜ, ತಮಸ್ಸು) ಧರಿಸಿದವರ ಜೀವನದ ಮೇಲೆ ಪ್ರತಿಕೂಲದ ಪರಿಣಾಮವನ್ನು ಬೀರಬಹುದಾಗಿರುತ್ತದೆ.

rakhi5

ಇನ್ನು ರಕ್ಷೆಯನ್ನು ಕಟ್ಟುವ ಸ್ಥಳ ಶುಚಿಯಾಗಿದ್ದು ಮಣೆ ಇಲ್ಲವೇ ಮಂದಲಿಗೆಯನ್ನು ಹಾಕಿ ಸಾಧ್ಯವಾದಲ್ಲಿ ರಂಗೋಲಿ ಬಿಡಿಸಿ ಸಹೋದರರನ್ನು ಪೂರ್ವಾಭಿಮುಖವಾಗಿ ಕೂರಿಸಿ ಹಣೆಗೆ ತಿಲಕವನ್ನಿಟ್ಟು ಉತ್ತರಾಭಿಮುಖವಾಗಿ ನಿಂತೋ ಇಲ್ಲವೇ ಕುಳಿತು ಬಲಿ ಚಕ್ರವರ್ತಿಗೆ ಮಹಾಲಕ್ಷ್ಮಿ ಹೇಳಿದ ಶ್ಲೋಕವನ್ನು ಪಠಿಸುತ್ತಾ ರಾಖಿಯನ್ನು ಕಟ್ಟಬೇಕು. ಇನ್ನು ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರರೂ ಸಹಾ ಅಷ್ಟೇ ಶ್ರದ್ಧಾ ಭಕ್ತಿಯಿಂದ ಸ್ಪಂದಿಸಬೇಕು. ರಕ್ಷೆಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುವ ಸಂಪ್ರದಾಯ ಕೆಲವಡೆಯಲ್ಲಿ ಇದೆ. ಈ ರೀತಿಯಲ್ಲಿ ತುಪ್ಪದ ದೀಪದ ಆರತಿ ಬೆಳಗುವುದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ಆಲೋಚನೆ ಮಾಡುವ ಶಕ್ತಿಯು ವೃದ್ಧಿಯಾಗುತ್ತದೆ ಎನ್ನುವ ಭಾವನೆ ಇದೆ. ಆದಾದ ನಂತರ ಸಹೋದರಿ ಸಹೋದರನಿಗೆ ಸಿಹಿ ತಿನ್ನಿಸುವ ಸಂಪ್ರದಾಯವಿದೆ.

rakhi3

ಸಹೋದರಿ ಆರತಿ ಎತ್ತಿದಾಗ ಕಾಣಿಕೆಯ ರೂಪದಲ್ಲಿ ಏನಾದರೂ ಕೊಡುವ ಸಂಪ್ರದಾಯವಿದೆ. ಅದರೆ ಈ ರೀತಿಯ ಕಾಣಿಕೆಗಳೇ, ಇಂದು ಅನೇಕ ಮನಸ್ಥಾಪಗಳಿಗೆ ಕಾರಣವಾಗುತ್ತಿರುವುದು ವಿಷಾಧನೀಯ. ಹೊದ ಸಲ ರಕ್ಷೆ ಕಟ್ಟಿದ್ದಾಗ ಅದನ್ನು ಕೊಟ್ಟಿದ್ದ ಈ ಬಾರಿ ಏನು ಕೊಡುತ್ತಾನೋ? ಎನ್ನುವ ತಾಮಸವು ಹೆಚ್ಚಾಗಿ, ಅವಳ ಅಪೇಕ್ಷೆಗನುಗುಣವಾಗಿ ಕಾಣಿಕೆ ಸಿಗದಿದ್ದಲ್ಲಿ ನಿರಾಶೆಯಾಗಿ ಸಹೋದರನ ಮೇಲಿನ ಪ್ರೇಮವು ಕಡಿಮೆಯಾಗುವ ಉದಾಹರಣೆಗಳೂ ಇವೆ. ಹಾಗಾಗಿ ರಕ್ಷಾಬಂಧನದಂದು ಸಹೋದರಿಯು ತನ್ನ ಸಹೋದರನಿಂದ ಕಾಣಿಕೆಯನ್ನು ಪಡೆಯುವ ಅಪೇಕ್ಷೆಯನ್ನು ಇಟ್ಟುಕೊಂಡಿದ್ದಲ್ಲಿ, ಆಕೆಗೆ ದಿನ ಪ್ರಾಪ್ತವಾಗ ಬೇಕಿದ್ದ ಫಲಗಳಿಂದ ವಂಚಿತಳಾಗುವುದಲ್ಲದೇ ಆಕೆ ಮಾಡಿದ್ದೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತದೆ .

rakhi2

ಇಂದಿನ ದಿನಗಳಲ್ಲಿ ರಾಖಿಗಳನ್ನು ಆಕರ್ಷಣೀಯವಾಗಿಸಲು ದೇವರುಗಳ ಚಿತ್ರಗಳೂ ಇಲ್ಲವೇ ಓಂ ಅಥವಾ ಸ್ವಸ್ತಿಕ್ ನಂತರ ಧಾರ್ಮಿಕ ಸಂಕೇತಗಳನ್ನು ಅಳವಡಿಸಿಕೊಂಡಿರುತ್ತಾರೆ. ರಾಖಿಯನ್ನು ಉಪಯೋಗಿಸಿದ ಈ ರಾಖಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಅದು ನಮ್ಮ ದೇವತೆಗಳಿಗೆ ಅಥವಾ ನಮ್ಮ ಧರ್ಮದ ನಂಬಿಕೆಗಳಿಗೆ ದ್ರೋಹ ಬಗೆದಂತಾಗುವ ಕಾರಣ ದಯವಿಟ್ಟು ರಾಖಿಯನ್ನು ಹರಿಯುವ ನೀರಿನಲ್ಲಿಯೋ ಅಥವಾ ಮಣ್ಣಿನಲ್ಲಿ ವಿಸರ್ಜಿಸಿದರೆ ಉತ್ತಮ.
ನಾವೆಲ್ಲಾ ಚಿಕ್ಕವಯಸ್ಸಿನವರಾಗಿದ್ದಾಗ ಮತ್ತು‌ ಈ‌ ಪರಿಯಾಗಿ ರಾಖಿಗಳು ಅಂಗಡಿಗಳಲ್ಲಿ ಲಭ್ಯವಿರದ ಸಮಯದಲ್ಲಿ, ನಮ್ಮ ಮನೆಯಲ್ಲೇ ರೇಷ್ಮೆ ದಾರಗಳನ್ನು ತಂದು ಅವುಗಳಿಂದ ಬಣ್ಣ ಬಣ್ಣದ ರಕ್ಷೆಗಳನ್ನು ಮಾಡಿ ಕೈಗೆ ಕಟ್ಟಿಸಿಕೊಂಡು ವಾರಾನುಗಟ್ಟಲೆ ಎಲ್ಲರಿಗೂ ಮನೆಯಲ್ಲಿ ತಂಗಿ ಮಾಡಿದ ರಾಖಿ ಎಂದು ತೋರಿಸಿಕೊಂಡು ಓಡಾಡುತ್ತಿದ್ದ ಸಂತೋಷ, ಭೀಮನ ಅಮಾವಾಸ್ಯೆಯಂದು ಭಂಢಾರ ಒಡೆದಾಗ ಸಿಗುತ್ತಿದ್ದ ಹಣದಲ್ಲಿ ಕೊಂಚ ಭಾಗವನ್ನು ರಕ್ಷೆ ಕಟ್ಟಿದ ಸಹೋದರಿಯರಿಗೆ ಕೊಟ್ಟು ಸಂಭ್ರಮ ಪಡುತ್ತಿದ್ದದ್ದು ಈಗ ನೂರಾರು ರೂಪಾಯಿ ಖರ್ಚು ಮಾಡಿ ಅಂಗಡಿಯಿಂದ ಚೆಂದನೆಯ ರಾಖಿ ತಂದು ಕಟ್ಟಿದರೂ ಬಾರದು.

ಇನ್ನೊಂದು ಸವಿನಯ ಕೋರಿಕೆ ಇಲ್ಲವೇ ಪ್ರೀತಿ ಪೂರ್ವಕ ಆಗ್ರಹ ಎಂದರೂ ತಪ್ಪಾಗದು, ದಯವಿಟ್ಟು ರಕ್ಷೆ ಕೊಳ್ಳುವಾಗ ಅದು ಚೀನಾ ದೇಶದಲ್ಲಿ ತಯಾರಾದ ಇಲ್ಲವೇ ಪ್ಲಾಸ್ಟಿಕ್ ಅಥವಾ ರಬ್ಬರ್ ರಾಖಿಗಳ ಬದಲಾಗಿ ಸ್ವದೇಶೀ ರೇಶ್ಮೇ ರಾಖಿಗಳನ್ನೇ ಬಳಸುವ ಮೂಲಕ ಸಹೋದರ, ಸಹೋದರಿಯರ ಸಂಬಂಧಗಳನ್ನು ದೇಸೀತನಗೊಳಿಸುವ ಮೂಲಕ ಅನುಬಂಧವಾಗಿಸೋಣ. ತನ್ಮೂಲಕ ಪ್ರೀತಿ ಮತ್ತು ವಾತ್ಸಲ್ಯಗಳನ್ನು ಶಾಶ್ವತವಾಗಿರಿಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s