ಮನೆಯಲ್ಲಿ ನಾಲ್ಕಾರು ತರಕಾರಿಗಳು ಸ್ವಲ್ಪ ಸ್ವಲ್ಪವೇ ಉಳಿದು ಹೋಗಿರುತ್ತದೆ ಅದನ್ನು ಸುಮ್ಮನೇ ಬಿಸಾಡಲು ಮನಸ್ಸು ಬರೋದಿಲ್ಲ ಆಗ ಉಳಿದಿರುವ ನಾಲ್ಕಾರು ತರಕಾರಿಯನ್ನೇ ಬಳಸಿಕೊಂಡು ಸಾಂಪ್ರದಾಯಿಕವಾಗಿ ತಯಾರಿಸಬಹುದಾದ ಕೂಟು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.
ಸುಮಾರು 4-6 ಜನರಿಗೆ ಸಾಕಾಗುವಷ್ಟು ಕೂಟು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಕಡಲೇ ಬೇಳೆ – 1 ಬಟ್ಟಲು
- ಕಡಲೇಕಾಯಿ ಬೀಜ – 1 ಬಟ್ಟಲು
- ಉದ್ದಿನ ಬೇಳೆ – 2 ಚಮಚ
- ಮೆಣಸು – 1/2 ಚಮಚ
- ಜೀರಿಗೆ – 1/2 ಚಮಚ
- ಕೊತ್ತಂಬರೀ ಬೀಜ (ದನಿಯ) – 1/2 ಚಮಚ
- ಒಣಮೆಣಸಿನ ಕಾಯಿ ಮತ್ತು ಗುಂಟೂರು ಮೆಣಸಿನಕಾಯಿ 8-10
- ಸಾಸಿವೆ 1/2 ಚಮಚ
- ಹುಣಸೇಹಣ್ಣು 1/2 ಚಮಚ
- ಚಿಟುಕಿ ಅರಿಶಿಣಪುಡಿ
- ಚಿಟುಕಿ ಇಂಗು
- ರುಚಿಗೆ ತಕ್ಕಷ್ಟು ಉಪ್ಪು
ಉಪಯೋಗಿಸಿದ ತರಕಾರಿಗಳು
- ಹುರಳೀಕಾಯಿ – 1 ಬಟ್ಟಲು
- ಕ್ಯಾರೆಟ್- 1 ಬಟ್ಟಲು
- ಆಲೂಗೆಡ್ಡೆ- 1 ಬಟ್ಟಲು
- ಗೆಡ್ಡೇಕೋಸು- 1 ಬಟ್ಟಲು
- ಬೂದುಗುಂಬಳ ಕಾಯಿ – 1 ಬಟ್ಟಲು
- ಕಾಯಿ ತುರಿ – 1/2 ಬಟ್ಟಲು
- ಕರಿಬೇವು – 8-10 ಎಲೆಗಳು
- ಕೊತ್ತಂಬರಿ ಸೊಪ್ಪು – 2 ಚಮಚ
ಕೂಟು ತಯಾರಿಸುವ ವಿಧಾನ
- ತರಕಾರಿಗಳನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರದ ಹೋಳುಗಳನ್ನಾಗಿ ಕತ್ತರಿಸಿಕೊಂಡು ಅದರ ಜೊತೆ ಬೇಳೆ, ಕಡಲೇಕಾಯಿ ಬೀಜ ಚಿಟುಕಿ ಅರಿಶಿನ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಬೇಕು.
- ಒಂದು ಸಣ್ಣ ಬಾಣಯನ್ನು ತೆಗೆದುಕೊಂಡು ಅದರಲ್ಲಿ ಕಡಲೇಬೇಳೆ, ಉದ್ದಿನಬೇಳೆ, ದನಿಯಾ, ಜೀರಿಗೆ ಮತ್ತು ಕಾಳು ಮೆಣಸಿನ ಜೊತೆ ಒಣಮೆಣಸಿನ ಕಾಯಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು.
- ಹುರಿದುಕೊಂಡ ಪದಾರ್ಥಗಳನ್ನು ತಂಗಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಜೊತೆಗೆ ಹುಣಸೇ ಹುಳಿ ಸೇರಿಸಿ ನುಣ್ಣಗೆರುಬ್ಬಿಕೊಳ್ಳಬೇಕು.
- ಒಂದು ಅಗವಾದ ಗಟ್ಟಿ ತಳದ ಪಾತ್ರೆಗೆ ಬೇಯಿಸಿಕೊಂಡ ತರಕಾರಿ ಮತ್ತು ಬೇಳೆಯನ್ನು ಹಾಕಿ ಅದಕ್ಕೆ ರುಬ್ಬಿಕೊಂಡ ಮಿಶ್ರಣದ ಬೆರೆಸಿ ಕುದಿಸಬೇಕು.
- ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಸಾಸಿವೆಯನ್ನು ಸಿಡಿಸಿ ಅದಕ್ಕೆ ಇಂಗು, ಕರಿಬೇವು ಒಗ್ಗರಣೆ ಮಾಡಿಕೊಂಡು ಅದನ್ನು ಕುದಿಯುತ್ತಿರುವ ಕೂಟಿಗೆ ಸೇರಿಸಿ ಅದಕ್ಕೆ ಸ್ವಲ್ಪ ಕತ್ತರಿಸಿದ ಕೊತ್ತಂಬರೀ ಸೊಪ್ಪನ್ನು ಬೆರೆಸಿದಲ್ಲಿ ರುಚಿ ರುಚಿಯಾದ ತರಕಾರಿ ಕೂಟು ಸಿದ್ದ.ಈ ಕೂಟನ್ನು ನೇರವಾಗಿ ಅನ್ನದಜೊತೆ ಕಲಸಿಕೊಂಡು ತಿನ್ನುವುದಲ್ಲದೇ, ಚಪಾತಿ, ದೋಸೆ, ಪೂರಿ ಮತ್ತು ಪರೋಟಗಳ ಜೊತೆಯೂ ನೆಂಚಿಕೊಂಡು ಸವಿಯಬಹುದಾಗಿದೆ.
ಈ ಸಾಂಪ್ರದಾಯಕವಾದ ತರಕಾಯಿ ಕೂಟನ್ನು ತಯಾರಿಸುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ, ತಿನ್ಕೊಳ್ಳಿ
ಏನಂತೀರೀ?
ಮದದಾಳದ ಮಾತು : ಈ ರೀತಿಯಾಗಿ ನಾಲ್ಕಾರು ತರಕಾರಿಗಳನ್ನು ಬಳಸಿಕೊಂಡು ಹೆಚ್ಚಿನ ಮಸಾಲೆ ಅಂಶಗಳು ಇಲ್ಲದೇ, ತಯಾರಿಸುವ ಕೂಟಿನ ಮೂಲಕ ಆ ತರಕಾರಿಯಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳು ದೇಹಕ್ಕೆ ತಲುಪಿ ಆರೋಗ್ಯವಾಗಿರಲು ಸಹಕಾರಿಯಾಗಿರುತ್ತದೆ. ಈ ಕೂಟಿನ ಜೊತೆಗೆ ಬಾಳಕದ ಮೆಣಸಿನಕಾಯಿ (ಉಪ್ಪು ಮೆಣಸಿನಕಾಯಿ) ಅಥವಾ ಹಪ್ಪಳ ಸಂಡಿಗೆ ಇದ್ದರಂತೂ ಅದರ ಘಮ್ಮತ್ತು ಮತ್ತಷ್ಟು ಹೆಚ್ಚುತ್ತದೆ.