ಮೈಸೂರು ಎಂದರೆ ನಮಗೆ ನೆನಪಿಗೆ ಬರುವುದು ಮೈಸೂರು ಅರಮನೆ, ಕನ್ನಂಬಾಡಿ ಕಟ್ಟೆ, ಚಾಮುಂಡಿ ಬೆಟ್ಟ, ಮೃಗಾಲಯ ಮತ್ತು ಜಂಜಾಟವಿಲ್ಲದ ವಿಶಾಲವಾದ ರಸ್ತೆಗಳು. ಇದರ ಜೊತೆ ಜೊತೆಗೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಮುಖಾಂತರ ಹೋಗುವ ತಪ್ಪಲಿನಲ್ಲಿಯೇ ನಂಜನಗೂಡಿನ ರಸ್ತೆಗೆ ಹೋಗುವ ಮಾರ್ಗದಲ್ಲಿಯೇ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ಪೀಠವಿದ್ದು ಅಲ್ಲಿಯ ದೇವಸ್ಥಾನಗಳ ಸಂಕೀರ್ಣ ನಯನ ಮನೋಹರವಾಗಿದೆ.
ದೇವಸ್ಥಾನದ ಆವರಣದಲ್ಲಿಯೇ ಸ್ವಾಮೀಜಿಯವರು 2012 ರಲ್ಲಿ ನಿರ್ಮಿಸಿರುವ ಪಕ್ಷಿಗಳ ಪುನರ್ವಸತಿ ಕೇಂದ್ರ ಶುಕವನ ಮತ್ತು ಬೋನ್ಸಾಯ್ ಉದ್ಯಾನವನವಿದ್ದು ಮಕ್ಕಳೊಂದಿಗೆ ಅತ್ಯಗತ್ಯವಾಗಿ ನೋಡಲೇ ಬೇಕಾದ ಸ್ಥಳವಾಗಿದೆ. ಜಗತ್ತಿನಾದ್ಯಂತದ ಇರುವ ಮೆಕಾವ್(ಸ್ಕಾರ್ಲೆಟ್ ಮೆಕಾವ್, ಮಿಲಿಟರಿ ಮೆಕಾವ್, ಶಮ್ ರಾಕ್ ಮೆಕಾವ್), ಲಾರಿಕೀಟ್ , ಕಾಂಗೊ ಆಫ್ರಿಕನ್ ಗ್ರೇ ಗಿಳಿ, ಮಿಚೆಲ್ ಕೊಕಾಟೂ… ಇನ್ನೂ ಹಲವು ಬಗೆಯ ಪಕ್ಷಿಗಳು ವಿವಿಧ ಬಣ್ಣ, ಕೊಕ್ಕುಗಳಿರುವ ನೂರಾರು ಬಗೆಯ ಬಣ್ಣಬಣ್ಣದ ಗಿಳಿಗಳು ಮತ್ತು ಇತರೇ ಪಕ್ಷಿಗಳನ್ನು ಇಲ್ಲಿ ನೋಡಬಹುದಾಗಿದೆ ಮತ್ತು ನಮ್ಮ ಕೈಯ್ಯಾರೆ ಅವುಗಳಿಗೆ ಆಹಾರವನ್ನು ತಿನಿಸಬಹುದಾಗಿದೆ ಮತ್ತು ಅದರ ಪೋಟೋ ತೆಗಿಸಿ ಕೊಳ್ಳಬಹುದಾದ ಅನುಕೂಲವನ್ನೂ ಮಾಡಿದಾರೆ. ಸ್ವತಃ ಸ್ವಾಮೀಜಿಯವರೇ ಅಸ್ಥೆವಹಿಸಿ ಇವುಗಳ ಆರೈಕೆ ಮಾಡುವುದು ಇಲ್ಲಿಯ ವಿಶೇಷವಾಗಿದೆ. ಇಲ್ಲಿರುವ ಕೆಲವು ಗಿಣಿಗಳಿಗೆ ಮನುಷ್ಯತಂತೆ ಮಾತನಾಡುವುದನ್ನೂ ಸ್ವಾಮೀಜಿಯವರು ಕಲಿಸಿದ್ದಾರೆ.
ಸುಮಾರು 470ಕ್ಕೂ ಹೆಚ್ಚು ಅಪರೂಪದ ಪ್ರಭೇದದ 2 ಸಾವಿರಕ್ಕೂ ಪಕ್ಷಿಗಳಿಗೆ ಆಶ್ರಯ ಕಲ್ಪಿಸಿರುವ ಈ ಶುಕವನ ಗಿನ್ನಿಸ್ ಪುಸ್ತಕದಲ್ಲೂ ದಾಖಲಾಗಿದೆ. ಉದ್ಯಾನವನದ ಒಳಗೆ ಸುಮಾರು ಎರಡು ಮೂರು ಗಂಟೇಗಳ ಕಾಲ ಎಲ್ಲಾ ಹಕ್ಕಿಗಳ ಚಿಲಿಪಿಲಿ, ವಿವಿಧ ರೀತಿಯ ಕೂಗುಗಳು ಕೇಳುವುದು ಮನಸ್ಸಿಗೆ ಬಹಳ ಮುದ ನೀಡುತ್ತದೆ. ಅಲ್ಲಿ ಇರುವ ಎಲ್ಲಾ ಪಕ್ಷಿಗಳಿಗೂ ಒಂದೊಂದು ಹೆಸರನ್ನಿಟ್ಟು ಆ ಹೆಸರುಗಳನ್ನು ಕರೆದಲ್ಲಿ ಅವುಗಳು ಪ್ರತಿಕ್ರಿಯಿಸುವುದನ್ನು ನೋಡುವುದಕ್ಕೆ ಆನಂದವಾಗುತ್ತದೆ.
ಶುಕವನದ ಪಕ್ಕದಲ್ಲಿಯೇ 2005ರಲ್ಲಿ ಆರಂಭಿಸಿದ ಕುಬ್ಜವಾಗಿ ಬೆಳೆಸಿದ ಮರಗಳು ಹಾಗೂ ಗಿಡಗಳನ್ನು ಈ ಬೋನ್ಸಾಯ್ ಉದ್ಯಾನವಿದ್ದು ಇಲ್ಲಿ ಬೆಳೆಸಿರುವ ವಿವಿಧ ಬೋನ್ಸಾಯ್ ಗಿಡಗಳಿಂದ ಈ ಉದ್ಯಾನವನ ಗಿನ್ನಿಸ್ ಪುಸ್ತಕದ ದಾಖಲೆಗಳಲ್ಲಿ ಸೇರಿದೆ. ಅತ್ಯಂತ ವಿಶಾಲವಾಗಿ ಬೆಳೆಯುವ ಅಶ್ವತ್ಥ , ವಟವೃಕ್ಷ , ಬಿಲ್ವ, ಅಶೋಕ ವೃಕ್ಷಗಳಲ್ಲದೇ, ಹಣ್ಣುಗಳಾದ ಸಪೋಟ, ಕಿತ್ತಳೆ, ನಿಂಬೆ, ಸೀತಫಲ ಮುಂತಾದವುಗಳ ಕುಬ್ಜ ಗಿಡಗಳು ಇಲ್ಲಿದೆ ಇದರ ಜೊತೆ ಕೊಳಗಳು ಹಾಗೂ ಕಾರಂಜಿಗಳ ಜೊತೆಗೆ ಕೆಲವು ಆಲಂಕಾರಿಕ ಮತ್ತು ಔಷಧೀಯ ಗಿಡಗಳೂ ಇಲ್ಲಿದ್ದು, ಇದು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಿರುವುದು ಶ್ಲಾಘನೀಯವಾಗಿದೆ.
ಇಂತಹ ವೈವಿಧ್ಯಮಯ ಗಿಳಿಗಳಿರುವ ಈ ಶುಕವನದಲ್ಲಿ ಈ ಬಾರಿಯ 74ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಸ್ವಾತಂತ್ರ್ಯ ದಿನದಂದು ಮಂತ್ರಿ ಮಾಗಧರೋ ಇಲ್ಲವೇ, ಗಣ್ಯವ್ಯಕ್ತಿಗಳಿಂದ ಧ್ವಜಾರೋಹಣ ಮಾಡಿಸುವುದು ವಾಡಿಕೆಯಾದರೇ, ಇಲ್ಲಿ ವಿಭಿನ್ನ ಪ್ರಭೇದದ ಗಿಳಿಯೊಂದು ಧ್ವಜಾರೋಹಣ ಮಾಡುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಡುವ ಹಾಗೆ ಮಾಡಿದೆ. ಆ ಗಿಳಿ ಧ್ವಜಾರೋಹಣ ಮಾಡುತ್ತಿದ್ದಾಗ ಹತ್ತಾರು ಗಿಳಿಗಳು ಶಿಸ್ತಿನ ಸಿಪಾಯಿಯಂತೆ ಸಾಲಾಗಿ ನಿಲ್ಲುಮ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಶುಕವನದಲ್ಲಿ ವಿಭಿನ್ನವಾಗಿ ಆಚರಣೆಯಾದ 74ನೇ ಸ್ವಾತಂತ್ಯ್ರೋತ್ಸವದ ಸುಂದರ ಕ್ಷಣಗಳು ಇದೋ ನಿಮಗಾಗಿ
ಸ್ವಾಮೀಜೀಯವರ ಹೆಗಲು ಮೇಲೆ ಕುಳಿತ ಗಿಣಿಯೊಂದು ಸ್ವಾಮೀಜಿಗಳ ಜೊತೆ ಭಾರತ್ ಮಾತಾಕಿ ಜೈ ಎಂದು ಸ್ಪಷ್ಟವಾಗಿ ಹೇಳುವುದನ್ನು ಕೇಳುವುದಕ್ಕೆ ಕರ್ಣಾನಂದವಾಗುವುದಲ್ಲದೇ, ಕೇಳಿದವರೆಲ್ಲರಲ್ಲೂ ದೇಶಭಕ್ತಿ ಉಕ್ಕಿಸುತ್ತದೆ ಎಂದರೂ ತಪ್ಪಾಗಲಾರದು. ಖಂಡಿತವಾಗಿಯೂ ಸ್ವಲ್ಪ ಸಮಯ ಮಾಡಿಕೊಂಡು ಮಕ್ಕಳು ಮತ್ತು ಕುಟುಂಬದೊಂದಿಗೆ ಖಂಡಿವಾಗಿಯೂ ಅಲ್ಲಿಗೆ ಹೋಗಿ ಆನಂದಿಸುತ್ತೀರಲ್ಲವೇ?
ಏನಂತೀರೀ?
ಈ ವಿಭಿನ್ನ ವನವನ್ನು ನಾವುಗಳು ನೋಡಿ ಬಂದಿದ್ದೇವೆ. ತುಂಬಾ ಚೆನ್ನಾಗಿದೆ, ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಎಲ್ಲ ವಯಸ್ಕರರಿಗೂ ಇಷ್ಟವಾಗುವ ಸ್ಥಳ. ಗಿಣಿಯೊಂದು ಧ್ವಜಾರೋಹಣ ಮಾಡುವುದು ನಿಜಕ್ಕೂ ಅಚ್ಚರಿ!
LikeLiked by 1 person