ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ
ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು
ಇಂತ ಧ್ವಜವು ನಮ್ಮ ಧ್ವಜವು ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ ನಾಡ ಸಿರಿಯ ಮೆರೆವುದು
ಕೆಂಪು ಕಿರಣ ತುಂಬಿ ಗಗನ ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ ನೋಡಿರಣ್ಣ ಹೇಗಿದೆ
ಈ ಪದ್ಯವನ್ನು ಕನ್ನಡದ ಹೆಮ್ಮೆಯ ಕವಿ ಕಾಸರಗೋಡಿನ ಶ್ರೀ ಕಯ್ಯಾರ ಕಿಞ್ಞಣ್ಣ ರೈರವರು ರಚಿಸಿದ್ದು. ಅದನ್ನು ಪ್ರಾಥಮಿಕ ಶಾಲೆಯಲ್ಲಿ ಓದಿದ್ದು ಇನ್ನೂ ಚೆನ್ನಾಗಿಯೇ ಕಂಠಸ್ತವಾಗಿದೆ.
ಪ್ರತಿಯೊಂದು ರಾಷ್ಟ್ರಗಳಿಗೂ ಧ್ವಜವು ಅತ್ಯವಶ್ಯಕವಾಗಿದೆ. ಒಂದು ಧ್ವಜವು ಆ ದೇಶದ ಆದರ್ಶವನ್ನು ಮತ್ತು ಧ್ಯೇಯವನ್ನು ಪ್ರತಿನಿಧಿಸುತ್ತದೆ. ಕೆಲವೊಂದು ದೇಶಗಳ ಧ್ವಜದ ಬಣ್ಣ, ವಿನ್ಯಾಸ ಮತ್ತು ಅವುಗಳಲ್ಲಿ ಬಳಸುವ ಚಿಹ್ನೆಗಳು ಆದೇಶದ ಧಾರ್ಮಿಕ ಭಾವನೆಗಳನ್ನು ಜಗತ್ತಿಗೆ ಸುಲಭವಾಗಿ ಪರಿಚಯಿಸುವ ಸಾಧನವಾಗಿದೆ. ಧ್ವಜವು ಪ್ರತಿಯೊಬ್ಬ ದೇಶವಾಸಿಗಳನ್ನು ಒಗ್ಗೂಡಿಸುವ ಸಾಧನವಾಗಿದೆ.
ಅದರಂತೆಯೇ, ನಮ್ಮ ದೇಶದಲ್ಲಿ ತ್ರಿವರ್ಣ ಎಂಬ ಪದವು ಭಾರತದ ರಾಷ್ಟ್ರೀಯ ಧ್ವಜವನ್ನು ಸೂಚಿಸುತ್ತದೆ. ಭಾರತದ ರಾಷ್ಟ್ರೀಯ ಧ್ವಜ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಸಮಾನ ಪ್ರಮಾಣದಲ್ಲಿದ್ದು ಮಧ್ಯದಲ್ಲಿ ಅಶೋಕ ಚಕ್ರವಿದ್ದು ಅವೆಲ್ಲವೂ ಸೇರಿ ಪ್ರತಿಯೊಬ್ಬ ಭಾರತೀಯರಲ್ಲೂ ದೇಶ ಪ್ರೇಮ, ಗೌರವವನ್ನು ಮೂಡುವಂತೆ ಮಾಡುತ್ತದೆ.
ಭಾರತದ ರಾಷ್ಟ್ರೀಯ ಧ್ವಜವು ದೇಶದ ಎಲ್ಲ ನಾಗರಿಕರ ಹೆಮ್ಮೆ. ಅದು ನಮಗೆ ಸ್ವಾತಂತ್ರ್ಯದ ಧ್ವಜ ಮಾತ್ರವಲ್ಲ, ಎಲ್ಲ ಜನರಿಗೆ ಸ್ವಾತಂತ್ರ್ಯದ ಸಂಕೇತ. ರಾಷ್ಟ್ರೀಯ ಧ್ವಜವು ಸಾರ್ವಭೌಮತ್ವ, ಸಮಗ್ರತೆ ಮತ್ತು ಸಾಮ್ಯತೆಯ ಸಂಕೇತವಾಗಿದೆ ಎಂದು ದೇಶದ ಪ್ರಪ್ರಥಮ ಪ್ರಧಾನಿಗಳಾದ ಶ್ರೀ ಜವಾಹರಲಾಲ್ ನೆಹರು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಕಾವು ತೀವ್ರತರವಾಗಿದ್ದಾಗ ಎಲ್ಲರನ್ನೂ ಒಗ್ಗೂಡಿಸುವ ಸಲುವಾಗಿ ಒಂದು ಧ್ವಜದ ಅವಶ್ಯಕತೆಯನ್ನು ಮನಗೊಂಡು ನಮ್ಮ ಧ್ವಜ ಹೇಗಿರಬೇಕೆಂದು ಪ್ರಸ್ತಾಪನೆ ಮಾಡಿದಾಗ, ಬಹುತೇಕರು ತಲೆತಲಾಂತರದಿಂದ ನಮ್ಮ ಸಂಸ್ಕ್ಸೃತಿಯ ಭಾಗವಾಗಿದ್ದ ಭಗವಾಧ್ವಜವನ್ನೇ ನಮ್ಮ ಧ್ವಜವನ್ನಾಗಿಸಲು ಕೇಳಿಕೊಂಡರು. ಅದರೆ, ಮಹಾತ್ಮಾ ಗಾಂಧಿಯವರು ಮೊತ್ತ ಮೊದಲು 1921 ರಲ್ಲಿ ಪಿಂಗಲಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ ಹಿಂದೂಗಳಿಗೆ ಕೆಂಪು ಪಟ್ಟೆ ಮತ್ತು ಮುಸ್ಲಿಮರಿಗೆ ಹಸಿರು ಪಟ್ಟೆಯ ನಡುವೆ ಸಾಂಪ್ರದಾಯಿಕ ನೂಲುವ ಚರಕವಿರುವ ಧ್ವಜವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಪ್ರಸ್ತಾಪಿಸಿದರು. ನಂತರ ಬಹುಜನರ ಆಗ್ರಹಪೂರ್ವಕ ಒತ್ತಾಯದೊಂದಿಗೆ ಕೆಂಪು ಬಣ್ಣವನ್ನು ಕೇಸರಿಯೊಂದಿಗೆ ಬದಲಾಯಿಸಲು ಮತ್ತು ಕ್ರೈಸ್ತರನ್ನೂ ಓಲೈಸುವ ಸಲುವಾಗಿ ಮಧ್ಯದಲ್ಲಿ ಬಿಳಿ ಪಟ್ಟೆಯನ್ನು ಸೇರಿಸಲು ಮತ್ತು ನೂಲುವ ಚಕ್ರಕ್ಕೆ ಹಿನ್ನೆಲೆ ಒದಗಿಸಲು ವಿನ್ಯಾಸವನ್ನು ಮಾರ್ಪಡಿಸಲಾಯಿತು. ಈ ಬಣ್ಣಗಳಿಗೆ ಧರ್ಮವನ್ನು ಬೆಸೆದರೆ ಮುಂದೆ ತೊಡಕಾಗಬಹುದು ಎಂದು ನಿರ್ಧರಿಸಿ, ಆ ಮೂರು ಬಣ್ಣಗಳಿಗೆ ಈ ರೀತಿಯ ಹೊಸ ಅರ್ಥವನ್ನು ನೀಡಲಾಯಿತು.
ಕೇಸರಿ:– ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆವ ಬಲಿದಾನಗಳ ಸಂಕೇತವಾಗಿದೆ.
ಬಿಳಿ :- ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ.
ಹಸಿರು :- ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ.
ಅಶೋಕ ಚಕ್ರ: ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರ, ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನದ ಸಂಕೇತವಾಯಿತು.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ 22, 1947ರ ಸಂವಿಧಾನ ಸಭೆಯಲ್ಲಿ ಅಂಗೀಕರಿಸಿ. ಬ್ರಿಟಿಷರಿಂದ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ದೆಹಲಿಯ ಕೆಂಪುಕೋಟೆಯ ಮೇಲೆ ಹಾರಿಸಲಾಯಿತು. ಅಂದಿನಿಂದ ಜನವರಿ 26,1950 ರವರೆಗೆ ಸ್ವತಂತ್ರ ಭಾರತದ ಪ್ರಭುತ್ವದ ಬಾವುಟವಾಗಿಯೂ, 26, ಜನವರಿ, 1950ರಿಂದ ಗಣರಾಜ್ಯ ಭಾರತದ ತ್ರಿವರ್ಣ ಧ್ವಜ ಎಂಬ ಮನ್ನಣೆ ಪಡೆಯಿತು.
ಅಧಿಕೃತವಾಗಿ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ತಯಾರಿಸುವ ಹಾಗಿಲ್ಲ. ಭಾರತ ಸರ್ಕಾರ ನಮ್ಮ ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೆಂಗೇರಿಯ ಬಳಿಯ ಗರಗ ಎಂಬ ಗ್ರಾಮದ ಖಾದಿ ಅಭಿವೃದ್ದಿ ಮತ್ತು ಗ್ರಾಮೋದ್ಯೋಗ ಆಯೋಗ ಸಂಸ್ಥೆಗೆ ಮಾತ್ರ ಅಧಿಕೃತವಾಗಿ ಧ್ವಜವನ್ನು ತಯಾರಿಸುವ ಅಧಿಕಾರವನ್ನು ನೀಡುವ ಮೂಲಕ ಸಮಸ್ಥ ಕನ್ನಡಿಗರೂ ಹೆಮ್ಮೆ ಪಡುವಂತಾಗಿದೆ
1954 ರಲ್ಲಿ ಧಾರವಾಡದ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಧಾರವಾಡ ತಾಲ್ಲೂಕು ಕ್ಷೇತ್ರ ಸೇವಾ ಸಂಘ ಎಂಬ ಸಂಘವನ್ನು ಸ್ಥಾಪಿಸಿ ಅದರಡಿಯಲ್ಲಿ ರಾಷ್ಟ್ರಧ್ವಜ ತಯಾರಿಸುವ ಪರವಾನಿಗೆಯನ್ನು ಪಡೆದುಕೊಂಡರು. ಈ ಸಂಸ್ಥೆಯ ಅಧೀನದಲ್ಲಿ ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. ಉತ್ತಮ ಮಟ್ಟದ ಖಾದಿಯಲ್ಲಿ ಗರಗ ಗ್ರಾಮದಲ್ಲಿ ಖಾದಿ ತಯಾರಾಗುತ್ತದೆ. ಕೈಮಗ್ಗದಲ್ಲಿ ತಯಾರಿಸಿದಂತ ದೇಶದ ಏಕೈಕ ತಾಣ ಗರಗವಾಗಿದೆ. ಇಲ್ಲಿಂದ ಹಲವಾರು ತಾಣಕ್ಕೆ, ದೇಶದ ಮೂಲೆ ಮೂಲೆಗೆ ರಾಷ್ಟ್ರಧ್ವಜ ಸರಬರಾಜಾಗುತ್ತದೆ.
ದ್ವಜವು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ. ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು. ಎಂಬ ನಿಯಮವಿದೆ. ಕೇಸರಿ – ಬಿಳಿ – ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ ಇಪ್ಪತ್ತ ನಾಲ್ಕು ರೇಖೆಗಳಿವೆ. ದ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರ ತಕ್ಕದ್ದು ಎಂದು ತಿಳಿಸಿದೆ.
ಇನ್ನು ತ್ರಿವರ್ಣ ಧ್ವಜದ ಬಳಕೆಯ ಕುರಿತೂ ಧ್ವಜ ಸಂಹಿತೆ ರೂಪಗೊಂಡಿದೆ. ಅದರ ಪ್ರಕಾರ ರಾಷ್ಟ್ರ ದ್ವಜವನ್ನು ಸರಿಯಾಗಿ ಪ್ರದರ್ಶನ ಮಾಡುವ ವಿಧಾನಗಳು ಈ ರೀತಿಯಾಗಿವೆ.
- ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.
- ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು.
- ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆ ಜನಗಣ ಮನವನ್ನು ಹಾಡಲೇಬೇಕು
- ರಾಷ್ಟ್ರ ದ್ವಜವನ್ನು ಸರ್ಕಾರೀ ಕಛೇರಿಗಳ ಮೇಲೆ ಪ್ರತಿ ದಿನ ಮತ್ತು ಸಾರ್ವಜನಿಕವಾಗಿ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಬೇಕು.
- ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಗಾಂಧಿಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸಬಹುದು.
- ದ್ವಜ ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸತಕ್ಕದ್ದು.
- ರಾಷ್ಟ್ರದ್ವಜವನ್ನು ತಲೆಕೆಳಗಾಗಿ ಹಾರಿಸುವುದಾಗಲೀ, ಅದನ್ನು ಸುಡುವುದಾಗಲೀ, ಕಾಲಿನಿಂದ ತುಳಿಯುವುದಾಗಲೀ ಅಥವಾ ಯಾವುದೇ ರೀತಿಯಲ್ಲಿ ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೂ ಸಹಾ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು.
- ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ದ್ವಜವನ್ನು ಕಾಪಾಡಬೇಕು.
- ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸಬೇಕು
- ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರದ್ವಜ ಹಾರಾಡತಕ್ಕದ್ದು
- ಶಾಲೆ ಕಾಲೇಜುಗಳು, ಕ್ರೀಡಾ ಕೂಟಗಳು, ಎನ್.ಸಿ.ಸಿ. ಮತ್ತು ಸ್ಕೌಟ್ಸ್ ಶಿಬಿರಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರ ದ್ವಜ ಹಾರಿಸಬಹುದಾಗಿದೆ.
ಸ್ವಾತಂತ್ಯ ದಿನೋತ್ಸವ, ಗಣರಾಜ್ಯೋತ್ಸಮ ಮತ್ತಿತರ ಉತ್ಸವವನ್ನು ಆಚರಿಸುವ ಭರದಲ್ಲಿ ರಸ್ತೆಯ ಬದಿಯಲ್ಲಿ ಭಿಕರಿಯಾಗುವ ಪ್ಲಾಸ್ಟಿಕ್ ಧ್ವಜಗಳನ್ನು ಎಲ್ಲಂದರಲ್ಲಿ ಬಳಸಿ ಉತ್ಸವದ ನಂತರ ಅದನ್ನು ಅಲ್ಲಿಯೇ ಬಿಟ್ಟು ಹೋಗುವ ಬದಲು, ಮೇಲೆ ತಿಳಿಸಿದ ಧ್ವಜ ಸಂಹಿತೆಯನ್ನು ಪಾಲಿಸುವ ಮೂಲಕ ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಅಂಶವನ್ನು ಇಡೀ ಪ್ರಪಂಚಕ್ಕೆ ತಿಳಿಯಪದಿಸುವುದೇ ನಮ್ಮ ಧ್ವಜವನ್ನು ಎತ್ತರೆತ್ತರಕ್ಕೆ ಹಾರಿಸುವ ಆಶಯವಾಗಿದೆ. ಈ ಮೂಲಕ ಮತ್ತೊಮ್ಮೆ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಕಾರ್ಯದಲ್ಲಿ ನಾವೆಲ್ಲರೂ ಸಂತೋಷದಿಂದ ಭಾಗಿಗಳಾಗೋಣ.
ಏನಂತೀರೀ?