ದೇವರ ಸ್ವಂತ ನಾಡು, ಕೇರಳ

ಕೇರಳ ರಾಜ್ಯವು ದಕ್ಷಿಣ ಭಾರತದ ಅತ್ಯಂತ ಸಣ್ಣ ರಾಜ್ಯವಾಗಿದ್ದರೂ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಶೇ 100ರಷ್ಟು ಸಾಕ್ಷರತ ರಾಜ್ಯವಾಗಿದ್ದು ಪ್ರವಾಸ ಮತ್ತು ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದ ಪ್ರಾಚೀನ ನೀರು ಮತ್ತು ಪೂರ್ವದಲ್ಲಿ ಸೊಂಪಾದ ಪಶ್ಚಿಮ ಘಾಟ್ ಪರ್ವತಗಳು, ಅದರ ತೀವ್ರವಾದ ನದಿಗಳು ಮತ್ತು ಕೆರೆಗಳ ಜಾಲ, ದಟ್ಟ ಕಾಡುಗಳು, ವಿಲಕ್ಷಣ ವನ್ಯಜೀವಿಗಳು, ಪಚ್ಚೆ ಹಿನ್ನೀರಿನ ಶಾಂತವಾದ ವಿಸ್ತಾರಗಳು ಮತ್ತು ಪ್ರಶಾಂತ ಕಡಲತೀರಗಳ ಉದ್ದದ ತೀರವು ಪ್ರವಾಸಿಗರಿಗೆ ಸ್ವರ್ಗವನ್ನೇ ಧರೆಗಿಳಿಸಿದಂತಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನೃತ್ಯ ರೂಪ ಮತ್ತು ಸಂಗೀತದ ಸಾರವು ಎಷ್ಟು ಪ್ರಭಾವಶಾಲಿಯಾಗಿದೆಯೆಂದರೆ, ಕೇರಳದ ಈ ಮಾಯಾ ವೈಶಿಷ್ಟ್ಯಗಳಿಂದ ಪ್ರವಾಸಿಗರು ತಮ್ಮನ್ನೇ ತಾವು ಮರೆತು ಹೋಗುತ್ತಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಕೇರಳದ ಸಾಹಿತ್ಯಿಕ ಅರ್ಥ ತೆಂಗಿನಕಾಯಿ ಭೂಮಿ. ಮಲಯಾಳಂನಲ್ಲಿ ಕೇರ ಎಂದರೆ ತೆಂಗಿನಕಾಯಿ. ತೆಂಗಿನ ಗಿಡಗಳಿಂದ ಕೇರಳವು ಹೇರಳವಾಗಿರುವುದರಿಂದ ಇದಕ್ಕೆ ಸ್ವಾಭಾವಿಕವಾಗಿ ಕೇರಳ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಎಲ್ಲರ ಕಲ್ಪನೆಗೂ ಮೀರಿರುವ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಅದ್ಭುತ ಮತ್ತು ಭವ್ಯವಾದ ರಾಜ್ಯವನ್ನು ದೇವರ ಸ್ವಂತ ನಾಡು ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯೇನಿಲ್ಲ.

ಈ ರಾಜ್ಯಕ್ಕೆ ದೇವರ ಸ್ವಂತ ದೇಶ ಎಂಬ ಮಾಂತ್ರಿಕ ಟ್ಯಾಗ್‌ಲೈನ್ ಅನ್ನು ಹೇಗೆ ಪಡೆದುಕೊಂಡಿದೆ? ಎಂಬುದು ಕುತೂಹಲಕಾರಿ ವಿಷಯವಾಗಿದೆ. ದೇಶದ ಹೆಸರಾಂತ ಜಾಹೀರಾತು ಏಜೆನ್ಸಿಯ ಸೃಜನಾತ್ಮಕ ನಿರ್ದೇಶಕರಾಗಿದ್ದ ಶ್ರೀ ವಾಲ್ಟರ್ ಮೆಂಡೆಜ್ ಅವರು ಕೇರಳದಪ್ರವಾಸೋದ್ಯಮ ಇಲಾಖೆಯ ಇಚ್ಚೆಯಂತೆ 1989 ರಲ್ಲಿ ಈ ರೀತಿಯಾದ ಪದ ನಾಮವನ್ನು ಕೊಡುವ ಮೂಲಕ ಕೇರಳ ರಾಜ್ಯದತ್ತ ಪ್ರವಾಸಿಗರನ್ನು ಸೆಳೆಯಲು ಸಮರ್ಥರಾದರು. ದೇವರ ಸ್ವಂತ ದೇಶ/ನಾಡು ಏಂಬ ಟ್ಯಾಗ್ ತುಂಬಾ ಆಕರ್ಷಕವಾಗಿದ್ದರಿಂದ, ಪ್ರಯಾಣಿಕರು ಸುಲಭವಾಗಿ ಆ ರಮಣೀಯ ಸೌಂದರ್ಯದ ಭೂಮಿಯನ್ನು ನೋಡಲು ಹಾತೊರೆದದ್ದಲ್ಲದೇ, ಅಲ್ಲಿನ ಪ್ರಾಕೃತಿಕ ಸೌಂದರ್ಯಗಳು ಪ್ರವಾಸಿಗಳನ್ನು ನಿರಾಶೆಗೊಳಿಸದ ಕಾರಣ ಎಲ್ಲರೂ ಆ ಪದನಾಮವನ್ನು ಮೆಚ್ಚಿಕೊಂಡರು ಮತ್ತು ಒಪ್ಪಿಕೊಂಡರು.

ದಕ್ಷಿಣ ಭಾರತದ ಮಲಬಾರ್ ಕರಾವಳಿಯ ಕೇರಳವು ಮೊದಲಿನಿಂದಲೂ ಮಸಾಲೆ ವಸ್ತುಗಳನ್ನು ರಫ್ತು ಮಾಡುವ ಪ್ರಮುಖ ತಾಣವಾಗಿದೆ. ಇಲ್ಲಿನ ಕರಾವಳಿ ಸುಮಾರು 600 ಕಿಲೋಮೀಟರ್ ವರೆಗೆ ವ್ಯಾಪಿಸಿದ್ದು ಅತ್ಯಂತ ಶ್ರೀಮಂತ ನೈಸರ್ಗಿಕ ವೈವಿಧ್ಯತೆ, ಆಹಾರ ಮತ್ತು ಸುಂದರವಾದ ಹಿನ್ನೀರಿನೊಂದಿಗೆ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲು ಬಯಸುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಕೆಳಗಿನ ಕಾರಣಗಳಿಂದಾಗಿಯೂ ಕೇರಳ ರಾಜ್ಯಕ್ಕೆ ದೇವರ ಸ್ವಂತ ದೇಶ ಎಂಬ ಅನ್ವರ್ಥ ನಾಮ ಬಂದಿದೆ ಎಂದರೂ ತಪ್ಪಾಗಲಾರದು.

ಹಿಂದೂ ಪುರಾಣದ ಪ್ರಕಾರ, ವಿಷ್ಣುವಿನ ಅವತಾರವಾಗಿದ್ದ ಭಗವಾನ್ ಪರಶುರಾಮರು ಒಮ್ಮೆ ಕನ್ಯಾಕುಮಾರಿಯಿಂದ ಉತ್ತರದ ಕಡೆಗೆ ತನ್ನ ಕೊಡಲಿಯನ್ನು ಎಸೆದಾಗ ಸಾಗರದಿಂದ ಹುಟ್ಟಿಕೊಂಡ ಭೂಮಿಯೇ ಕೇರಳ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿಯೇ ಇದನ್ನು ದೇವರ ಸ್ವಂತ ದೇಶ ಎಂದು ಕರೆಯಬಹುದಾಗಿದೆ.

ಕೇವಲ ಹಿಂದೂಗಳಲ್ಲದೇ ಕ್ರೈಸ್ತರು ಮತ್ತು ಮುಸಲ್ಮಾನರುಗಳು ಸಮಾನ ಸಂಖ್ಯೆಯಲ್ಲಿ ಈ ರಾಜ್ಯದಲ್ಲಿದ್ದು. ಮಲೆಯಾಳಂ ಭಾಷೆ ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ದೇವರು ಸೃಷ್ಟಿಸಿದ ಈ ಭೂಮಿಯ ಧಾರ್ಮಿಕ ಮೌಲ್ಯಗಳನ್ನು ಮೆಚ್ಚಿಸಲು ಶಬರಿ ಮಲೆ, ಜಗತ್ಪ್ರಸಿದ್ದ ಪದ್ಮನಾಭ ದೇವಸ್ಥಾನ, ಕೊಟ್ಟಾಯಂ, ಸೇಂಟ್ ಫ್ರಾನ್ಸಿಸ್ ಚರ್ಚ್‌ನಂತಹ ಭವ್ಯ ಧಾರ್ಮಿಕ ಸ್ಥಳಗಳು ಇಲ್ಲಿವೆ.

ಕೇರಳವು ಹಲವು ಅತ್ಯುತ್ತಮ ಸಸ್ಯ ಮತ್ತು ಪ್ರಾಣಿಗಳ ಆಶ್ರಯ ತಾಣವಾಗಿದ್ದು, ಇಲ್ಲಿನ ವೈವಿಧ್ಯಮಯ ಭೂದೃಶ್ಯಗಳು, ಪ್ರಶಾಂತ ಕಡಲತೀರಗಳು ವಿಶೇಷವಾಗಿ ಕೋವಲಂ ಬೀಚ್, ನೀಲಂಬೂರು ಮತ್ತು ಪೆರಿಯಾರ್‌ನ ದಟ್ಟ ಕಾಡುಗಳು, ಅಲ್ಲಿನ ನೈಸರ್ಗಿಕ ಆನೆಗಳು, ಬಗೆ ಬಗೆಯ ಪಕ್ಷಿ ಸಂಕುಲಗಳು, ಸುಂದರವಾದ ಅತಿರಪ್ಪಿಲ್ಲಿ ಜಲಪಾತಗಳು, ಅಲ್ಲೆಪ್ಪಿಯ ಹಿನ್ನೀರು ತಾಣಗಲು ಅಲ್ಲಿರುವ ಬೋಟ್ ಹೌಸ್ಗಳು ಮತ್ತು ಮುನ್ನಾರಿನ ಅತ್ಯಂತ ಸುಂದರವಾದ ಕಣ್ಣನ್ ದೇವನ್ ಚಹಾ ತೋಟಗಳನ್ನು ನೋಡಿದಲ್ಲಿ ದೇವರುಗಳು ಸಹಾ ತಮ್ಮ ಲೋಕಕ್ಕೆ ಹಿಂದಿರುಗಲು ಮನಸ್ಸು ಮಾಡದಂತಿವೆ.

ಕೇರಳದ ಮಣ್ಣು ಅತ್ಯಂತ ಫಲವತ್ತಾದ ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಇಲ್ಲಿ ಬೆಳೆಯುವ ಭತ್ತ, ತೆಂಗಿನಕಾಯಿ, ರಬ್ಬರ್, ಬಾಳೆಹಣ್ಣು, ಚಹಾ, ಕಾಫಿಗಳಲ್ಲದೇ, ಮೆಣಸು, ಏಲಕ್ಕಿ, ಲವಂಗ, ಶುಂಠಿಯಂತಹ ಮಸಾಲೆ ಪದಾರ್ಥಗಳಿಗೆ ಹೆಸರುವಾಸಿಯಾಗಿದೆ.

ಇನ್ನು ಅಲ್ಲಿನ ರುಚಿಕರವಾದ ದಕ್ಷಿಣ ಭಾರತೀಯ ಸಸ್ಯಾಹಾರ ಮತ್ತು ಮತ್ಸ್ಯಾಹಾರವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ವಿಶಾಲವಾದ ಬಾಳೆ ಎಲೆಯ ಮೇಲೆ ಬಗೆ ಬಗೆಯ ಪಲ್ಯಗಳು, ಉಪ್ಪಿನ ಕಾಯಿ, ತೆಂಗಿನ ಕಾಯಿ ಚೆಟ್ನಿಗಳು, ಹಪ್ಪಳ, ಕುಚಲಕ್ಕಿ ಕೆಂಪನ್ನ, ಕೊಬ್ಬರೀ ಎಣ್ಣೆಯ ಒಗ್ಗರಣೆ ಹಾಕಿದ ಬಗೆ ಬಗೆಯ ಸಾರು ಮತ್ತು ಸಾಂಬಾರ್ಗಳು ನಾಲಿಗೆಯ ಬರವನ್ನು ಕಳೆಯುತ್ತವೆ. ಮತ್ಸ್ಯಾಹಾರಿಗಳಿಗಂತೂ ಬಗೆ ಬಗೆಯ ಮೀನುಗಳ ನಾನಾ ರೀತಿಯ ಭಕ್ಷಗಳು ಕೇರಳವನ್ನು ನಿಜಕ್ಕೂ ದೇವರ ಸ್ವಂತ ದೇಶ ಎಂದು ಕರೆಯುವುದನ್ನು ಸಮರ್ಥಿಸುತ್ತವೆ.

ಕೇರಳದ ಪ್ರತಿಯೊಂದು ಮೂಲೆ ಮೂಲೆಯಲ್ಲಿರುವ ಹಿಂದೂ ದೇವಾಲಯಗಳಲ್ಲಿನ ಉತ್ಸವಗಳು ಮತ್ತು ಪ್ರತಿ ವರ್ಷ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಜರುಗುವ ಸ್ನೇಕ್ ಬೋಟ್ ರೇಸ್ಗಳು ಪ್ರಮುಖ ಆಕರ್ಷಣಿಯವಾಗಿದೆ. ಸುಮಾರು 130 ಅಡಿ ಉದ್ದದ ಹಾವಿನ ರೀತಿಯಲ್ಲಿರುವ ದೋಣಿಯಲ್ಲಿ 100ಕ್ಕೂ ಹೆಚ್ಚಿನ ಶಿಸ್ತಿನ ಸಿಪಾಯಿಗಳಂತಹ ನಾವಿಕರು ಏಕಕಾಲದಲ್ಲಿಯೇ ವೇಗವಾಗಿ ಹುಟ್ಟುಗಳನ್ನು ಹಾಕುತ್ತಾ ಸ್ವರ್ಧಿಸುವುದು, ಪ್ರತೀ ದೋಣಿಗಳಲ್ಲಿಯೂ ಅವರನ್ನು ಪ್ರೋತ್ಸಾಹಿಸಲೆಂದೇ ಕೂಗುವ ಪರಿ ಬಹಳ ರೋಮಾಂಚನಕಾರಿಯಾಗಿರುತ್ತದೆ. ಪ್ರತೀ ಉತ್ಸವದ ನಂತರ ಸಿಡಿಸುವ ಲಕ್ಷಾಂತರ ರೂಪಾಯಿಗಳ ಪಟಾಕಿ ಉತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸುವುದರಿಂದ ಬಹುಶಃ ದೇವರು ಈ ಭೂಮಿಯನ್ನು ಎಲ್ಲಾ ರೀತಿಯ ಬಣ್ಣಗಳಿಂದ, ಅತ್ಯಂತ ಶ್ರದ್ಧೆಯಿಂದ
ಬಹಳ ಸಮಯ ಮತ್ತು ಶ್ರಮದಿಂದ ಚಿತ್ರಿಸಿರುವ ಕಾರಣ ಇದು ನಿಜಕ್ಕೂ ದೇವರ ಸ್ವಂತ ದೇಶ ಎನ್ನಬಹುದಾಗಿದೆ.

ಇನ್ನು ಕೇರಳ ರಾಜ್ಯವನ್ನು ದೇವರ ಸ್ವಂತ ನಾಡು ಎನ್ನಲು ಐತಿಹಾಸಿಕವಾದ ಹಿನ್ನಲೆಯೂ ಇದೆ. ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ, ತಿರುವಂಕೂರು ಸಾಮ್ರಾಜ್ಯವು ಭಾರತ ಸರ್ಕಾರದ ಅಧೀನಕ್ಕೆ ಒಳಪಡಲು ಇಚ್ಚಿಸದೇ, ತಿರುವಂಕೂರು ಸಾಮ್ರಾಜ್ಯದ ದಿವಾನ್ ಜೂನ್, 1947ರಲ್ಲಿಯೇ ತಿರುವಂಕೂರು ಸಾಮ್ರಾಜ್ಯವು ಪ್ರತ್ಯೇಕ ದೇಶವಾಗಲಿದೆ ಎಂದು ಘೋಷಿಸಿದ್ದರು.

ಆಗಿನ ದಿವಾನ್ ಅವರು, ನಮ್ಮಲ್ಲಿರುವ ವಿಂಜೆಮ್ ನೈಸರ್ಗಿಕ ಬಂದರು ಐರೋಪ್ಯ ದೇಶಗಳೊಡನೆ ವ್ಯಾಪಾರಕ್ಕೆ ಪ್ರಮುಖ ರಫ್ತು ತಾಣವಾಗಿರುವ ಕಾರಣ ನಾವು ಭಾರತದೊಡನೇ ಸೇರದೆಯೇ, ಸ್ವತಂತ್ರ್ಯವಾಗಿ ಶ್ರೀಮಂತ ದೇಶವಾಗಬಹುದು ಎಂದು ಒತ್ತಾಯಿಸಿದ್ದರು. ಇದಲ್ಲದೇ, ಅಂದಿನ ತಿರುವಂಕೂರು ಸಾಮ್ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ, ಟೆಲಿಫೋನ್ ನೆಟ್‌ವರ್ಕ್ ಮತ್ತು ಹೆವಿ ಎಂಜಿನಿಯರಿಂಗ್ ಕೈಗಾರಿಕೆಗಳು ಉತ್ತಮವಾಗಿ ಅಭಿವೃದ್ಧಿಗೊಂಡಿತು. ರಾಜರೇ ವಿಶ್ವವಿದ್ಯಾಲಯದ ಎಲ್ಲಾ ಖರ್ಚುಗಳನ್ನು ವಹಿಸಿಕೊಂಡಿದ್ದಲ್ಲದೇ, ಯಾವುದೇ ಜಾತಿಯ ತಾರತಮ್ಯವಿಲ್ಲದೇ, ಎಲ್ಲಾ ಹಿಂದೂಗಳೂ ಯಾವುದೇ ಪಕ್ಷಪಾತವಿಲ್ಲದೆ ರಾಜ್ಯದ ಎಲ್ಲಾ ದೇವಾಲಯಗಳಿಗೆ ಮುಕ್ತವಾಗಿ ಪ್ರವೇಶಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಇಂತಹ ಸಂವೃದ್ಧ ರಾಜ್ಯವನ್ನು ಭಾರತದ ಒಕ್ಕೂಟದ ಭಾಗವನ್ನಾಗಿ ಮಾಡಲು ಭಾರತೀಯ ಪ್ರತಿನಿಧಿಗಳು ಮತ್ತು ರಾಜ ಚಿತ್ರೈ ತಿರುನಾಳ್ ಬಲರಾಮ ವರ್ಮಾವರ ನಡುವೆ ಮಾತುಕತೆ ನಡೆಯುತ್ತಿದ್ದಾಗ, ರಾಜರು, ಈ ಭೂಮಿ ನನಗೆ ಸೇರಿದ್ದಲ್ಲ. ಇದು ಭಗವಾನ್ ಪದ್ಮನಾಭ ಸ್ವಾಮಿಗೆ ಸೇರಿದ ಭೂಭಾಗವಾಗಿದ್ದು ನಾನು ಕೇವಲ ಅವನ ಅಜ್ಞಾಪಾಲಕನಷ್ಟೇ. ಭಗವಂತನ ಅನುಗ್ರಹವಾದಲ್ಲಿ ನಾನು ಭಾರತದ ಒಕ್ಕೂಟದಲ್ಲಿ ಸೇರುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದರಂತೆ. ಭಾರತದ ಒಕ್ಕೂಟಕ್ಕೆ ಸೇರಲು ಇಚ್ಚಿಸದೇ ಈ ರೀತಿಯ ಕ್ತಟ್ಟು ಕಥೆಗಳನ್ನು ಕಟ್ಟುತ್ತಿರಬಹುದು ಎಂದು ಭಾರತೀಯ ಅಧಿಕಾರಿಗಳು ನಂಬಿದ್ದರಂತೆ.

ಆದರೆ ತಿರುವಂಕೂರು ಅಧಿಕಾರಿಗಳು 1750 ರ ಜನವರಿ 20 ರಂದು ಅಂದಿನ ತಿರುವಂಕೂರು ರಾಜ ತಿರುನಾಳೆ ಮಾರ್ತಾಂಡ ವರ್ಮಾ ಅವರು ಭಗವಾನ್ ಪದ್ಮನಾಭ ಸ್ವಾಮಿಯವರ ಪರವಾಗಿ ಸಹಿ ಮಾಡಿದ ತಾಳೇ ಗರಿಯೊಂದನ್ನು ತೋರಿಸಿ, ಅದರಲ್ಲಿ ಇಂದಿನ ಕನ್ಯಾಕುಮಾರಿಯಿಂದ ಹಿಡಿದು ಇಡೀ ಮಲಬಾರ್ ಪ್ರದೇಶದ ವರೆಗೂ ವಿಸ್ತರಿಸಿರುವ ಇಡೀ ತಿರುವಾಂಕೂರ್ ಸಾಮ್ರಾಜ್ಯವು ಭಗವಂತನಿಗೆ ಸೇರಿದ್ದಾಗಿದೆ ಎಂದು ನಮೂದಿಸಲಾಗಿತ್ತಂತೆ. ಈ ಕಾರಣದಿಂದಾಗಿಯೂ, ಕೇರಳ ರಾಜ್ಯವನ್ನು ದೇವರ ಸ್ವಂತ ನಾಡು ಎಂದು ಕರೆಯಲು ಕಾರಣೀಭೂತವಾಗಿದೆ.

ನಮ್ಮ ಪೂರ್ವಜರು ಮಾಡಿದ ಸಂಪ್ರದಾಯ ಮತ್ತು ಇಟ್ಟ ಹೆಸರುಗಳ ಹಿಂದೆ ನಾನಾ ರೀತಿಯ ಕಾರಣಗಳು ಇದ್ದು ಅದನ್ನು ಕೂಲಂಕುಶವಾಗಿ ಪರಿಶೀಲಿಸಿ, ಪರಾಂಬರಿಸಿ ಅದನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ತಲುಪಿಸುವ ಕಾರ್ಯ ನಮ್ಮದ್ದಾಗಿದೆ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s