ಮೊನ್ನೆ ಇದ್ದಕ್ಕಿದ್ದಂತೆಯೇ ಆತ್ಮೀಯರೊಬ್ಬರು ಕರೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಭುವನೇಶ್ವರಿ, ಭುವನ ಮನೋಹರಿ ಎಂದೆಲ್ಲಾ ಉಪಮೇಯಗಳಿಂದ ಕರೆಯುವುದು ವಾಡಿಕೆಯಲ್ಲಿದೆ. ಇತ್ತೀಚೆಗೆ ಅಚಾನಕ್ಕಾಗಿ ನನ್ನ ಬಾಯಿಂದ ಭುವನ ಗಾಂಧಾರೀ ಎಂಬ ಪದ ಹೊರಬಂದಿದೆ. ತಾಯಿ ಶ್ರೀ ಚಾಮುಂಡೇಶ್ವರಿಗೆ ಭುವನ ಗಾಂಧಾರೀ ಎಂದು ಕರೆದ ಉಲ್ಲೇಖ ಎಲ್ಲಾದರೂ ಇದೆಯೇ? ಇಲ್ಲದಿದ್ದಲ್ಲಿ ನಾವು ಹಾಗೆ ಕರೆಯಬಹುದೇ? ಎಂದು ನೋಡಿ ತಿಳಿಸಿ ಎಂದು ಕೇಳಿಕೊಂಡಾಗ ಭುವನ ಗಾಂಧಾರೀ ಎನ್ನುವ ಪದ ನನಗೂ ಹೊಸತು ಎನಿಸಿದರೂ ಸ್ವಲ್ಪ ವಿಚಾರ ಮಾಡೋಣ ಎಂದು ಎಲ್ಲಾ ಕಡೆಯಲ್ಲಿಯೂ ಹುಡುಕಿ ತಡಕಾಡಿದರೂ ಎಲ್ಲೂ ಅದರ ಬಗ್ಗೆ ಒಂದು ಚೂರೂ ಮಾಹಿತಿ ತಿಳಿಯದಿದ್ದಾಗ, ನನಗೆ ತಿಳಿದಿರುವಂತೆ ಪರಿಹಾರ ಕಂಡುಕೊಂಡಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಭುವನ ಎಂದರೆ ಇಡೀ ಜಗತ್ತು ತಾಯಿ ಚಾಮುಂಡೀ ಇಡೀ ಜಗತ್ತಿಗೇ ತಾಯಿ ಎಂಬ ಅರ್ಥದಲ್ಲಿ ಭುವನೇಶ್ವರೀ ಎಂದೂ ಕರೆಯಲಾಗುತ್ತದೆ. ನಮಗೆಲ್ಲಾ ತಿಳಿದಿರುವಂತೆ ಗಾಂಧಾರ ದೇಶದ ರಾಜನ ಮಗಳು ಗಾಂಧಾರಿ, ಕುರುವಂಶದ ಹುಟ್ಟು ಕುರುಡ ಧುತರಾಷ್ಟ್ರನನ್ನು ಮದುವೆಯಾಗಿ ನೂರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳ ತಾಯಿಯಾಗುತ್ತಾಳೆ. ಆದರೆ ಆಕೆ ಎಲ್ಲರಂತೆ ಸಾಮಾನ್ಯ ತಾಯಿಯಾಗಿರದೇ ತನ್ನ ನೂರು ಗಂಡು ಮಕ್ಕಳೂ ಸರಿ ಇಲ್ಲದಿರುವುದನ್ನು ಆಕೆ ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡಿರುತ್ತಾಳೆ. ಅವಳೆಂದೂ ತನ್ನ ಪತಿ ಧುತರಾಷ್ಟ್ರನಂತೆ ಯಾವ ಸಂದರ್ಭದಲ್ಲಿಯೂ ತನ್ನ ಮಕ್ಕಳ ಕೆಟ್ಟತನಕ್ಕೆ ವಕಾಲತ್ತು ವಹಿಸದೇ ಸದಾಕಾಲವೂ ತನ್ನ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ತರಲು ನಿರಂತರ ಪ್ರಯತ್ನದಲ್ಲಿರುತ್ತಾಳೆ ಮತ್ತು ಮಕ್ಕಳ ಹಿತವನ್ನೇ ಬಯಸುತ್ತಿರುತ್ತಾಳೆ. ಅದೇ ರೀತಿ ತಾಯಿ ಚಾಮುಂಡಿಯೂ ಮಕ್ಕಳ ರೂಪದಲ್ಲಿರುವ ತನ್ನ ಭಕ್ತಾದಿಗಳ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದಲ್ಲದೇ, ಸದಾ ತನ್ನ ಭಕ್ತಾದಿಗಳ ಹಿತವನ್ನೇ ಕಾಪಾಡುವುದಿಂದ ತಾಯಿ ಚಾಮುಂಡಿಯನ್ನು ಭುವನ ಗಾಂಧಾರಿ ಎಂದು ಕರೆದರೆ ಅತಿಶಯೋಕ್ತಿಯೇನಲ್ಲ ಅಲ್ಲವೇ?
ಇನ್ನೊಂದು ಆಯಾಮದಲ್ಲಿ ಯೋಚಿಸಿ ನೋಡಿದಲ್ಲಿ, ಗಾಂಧಾರಿ ಅತ್ಯಂತ ಸುಂದರ ಮತ್ತು ಸದ್ಗುಣಶೀಲ ಮಹಿಳೆ ತಾನು ಮದುವೆ ಆಗುತ್ತಿರುವ ವರ ಧುತರಾಷ್ಟ್ರ ಹುಟ್ಟು ಕುರುಡ ಎಂಬುದನ್ನು ತಿಳಿದೇ ಆತನನ್ನು ಸಂತೋಷದಿಂದಲೇ ಮದುವೆಯಾಗಿ, ತನ್ನ ಪತಿರಾಯ ನೋಡದಿರುವ ಪ್ರಪಂಚವನ್ನು ತಾನೂ ಸಹಾ ನೋಡಲಾರೆ ಎಂದು ಸ್ವಪ್ರೇರಣೆಯಿಂದ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತನ್ನ ಪತಿಯ ಸುಖಃ ಮತ್ತು ದುಖಃಗಳಲ್ಲಿ ಜೀವನ ಪರ್ಯಂತ, ಅಕ್ಷರಶಃ ಪತಿಯೊಡನೆ ಸಹಭಾಗಿತ್ವ ತೋರಿದ ಸಮರ್ಪಿತ ಮಹಾಸಾಧ್ವಿ ಹೆಂಡತಿ ಎಂದೇ ಪ್ರಖ್ಯಾತಳಾದವಳು. ಅದೇ ರೀತಿ ತಾಯಿ ಚಾಮುಂಡಿಯೂ ತನ್ನ ಭಕ್ತಾದಿಗಳ ಸರ್ವ ಸುಖಃ ದುಖಃಗಳಲ್ಲಿ ಯಾವುದೇ ಪೂರ್ವಾಗ್ರಹ ಪೀಡತಳಾಗದೆ ಸಲಹುವ ಕಾರಣ ಆಕೆಯನ್ನು ಭುವನ ಗಾಂಧಾರೀ ಎಂಬ ಉಪಮೇಯದಿಂದ ಕರೆದರೆ ತಪ್ಪಾಗಲಾರದು ಎಂದೇ ನನ್ನ ಭಾವನೆ.
ಈ ಕುರಿತಂತೆ ಆರೋಗ್ಯಕರ ಚರ್ಚೆಗೆ ಸಿದ್ದ. ವಿತಂಡ ವಾದಕ್ಕೆ ನಿಶಿದ್ಧ.
ಏನಂತೀರೀ?