ಕೊಹಿನೂರು ವಜ್ರ ನಮ್ಮ ಕರ್ನಾಟಕದ ಸ್ವತ್ತು 

ಅರೇ 105.6 ಕ್ಯಾರೆಟ್ ತೂಕದ  ಪ್ರಸ್ತುತ 350 ಮಿಲಿಯನ್ ಯುಎಸ್ ಡಾಲರ್ ಅಂದರೆ 23,28,95,07,500 ರೂ. ಬೆಲೆ ಬಾಳುವಂತಹ ಲಂಡನ್ ಗೋಪುರದ ಜ್ಯುವೆಲ್ಹೌಸ್‌ನಲ್ಲಿ 1911 ರಲ್ಲಿ ಕ್ವೀನ್ ಮೇರಿಯ ಕಿರೀಟದದ ಮೂಲಕ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿರುವ ಆ ಕೋಹಿನೂರ್ ವಜ್ರವೆಲ್ಲಿ ನಮ್ಮ ಕರ್ನಾಟಕವೆಲ್ಲಿ?  ಅಲ್ಲಿಗೂ ಇಲ್ಲಿಗೂ ಎಲ್ಲಿಯ ಬಾದರಾಯಣ ಸಂಬಂಧ? ಸ್ವಲ್ಪ ಉಸಿರು ಬಿಗಿ ಮಾಡಿಕೊಂಡು ಇದನ್ನು ಕೇಳ್ತಾ/ಈ ಲೇಖನ ಓದುತ್ತಾ ಹೋದಂತೆಲ್ಲಾ ನಿಮಗೇ ಅರ್ಥವಾಗುತ್ತದೆ.

ಆರ್ಟಿಐ ಕಾರ್ಯಕರ್ತ ಶ್ರೀ ರೋಹಿತ್ ಸಬರ್ ವಾಲ್ ಅವರು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಹಾಕಿದ್ದ ಅರ್ಜಿಗೆ ಸಿಕ್ಕಿದ  ಉತ್ತರದ ಪ್ರಕಾರ  ಇರುವರೆಗೂ ನಾವೆಲ್ಲರೂ ಕೇಳಿದ್ದಂತೆ ಈ ಕೊಹಿನೂರ್ ವಜ್ರವನ್ನು ಬ್ರಿಟಿಷರು ಕದ್ದುಕೊಂಡು ಹೋಗಿಲ್ಲ ಅಥವಾ ಬಲವಂತವಾಗಿ ತೆಗೆದುಕೊಂಡಿಲ್ಲ. ಬದಲಿಗೆ, ಪಂಜಾಬ್ ಪ್ರಾಂತ್ಯದ ಅಂದಿನ ರಾಜರು, ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆ ರೂಪದಲ್ಲಿ ನೀಡಿದ್ದಾರೆ.  ಲಾರ್ಡ್ ಡಾಲ್ ಹೌಸಿ ಹಾಗೂ ಮಹಾರಾಜ ದುಲೀಪ್ ಸಿಂಗ್ ನಡುವೆ 1849ರಲ್ಲಿ ಆಗಿದ್ದ ಲಾಹೋರ್ ಒಪ್ಪಂದ ಪ್ರಕಾರ, ಮಹಾರಾಜ ರಣಜಿತ್ ಸಿಂಗ್ ಅವರು ಶಾ ಸುಜಾ ಉಲ್ ಮುಲ್ಕ್ ರಿಂದ ಪಡೆದಿದ್ದ ಈ ಕೊಹಿನೂರ್ ವಜ್ರವನ್ನು  ಇಂಗ್ಲೆಂಡಿನ ಮಹಾರಾಣಿಗೆ ಕಪ್ಪ ಕಾಣಿಕೆ ರೂಪದಲ್ಲಿ ಈ ವಜ್ರವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಆದರೆ ಈ ಉತ್ತರದ ಬಗ್ಗೆ ದೇಶವ್ಯಾಪೀ ಚರ್ಚೆ ನಡೆದದ್ದಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿನ ವಿರೋಧಾಭಾಸವನ್ನು ಗಮನಿಸಿದ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಂಡು ನಾವು ಆ ರೀತಿಯಾಗಿ ಹೇಳಿಯೇ ಇಲ್ಲ. ಕೋಹಿನೂರ್ ವಜ್ರ ಎಂದೆಂದಿಗೂ ನಮ್ಮದೇ ಮತ್ತು ಅದನ್ನು ನ್ಯಾಯಯುತವಾದ ಹೋರಾಟದ ಮೂಲಕ ಮರಳಿ ಭಾರತಕ್ಕೆ ಹಿಂದಿರುಗಿ ತರುತ್ತೇವೆ ಎಂಬ ಆಶ್ವಾಸನೆ ನೀಡಿರುವುದು ಭಾರತೀಯರಲ್ಲಿ  ತುಸು ನೆಮ್ಮದಿಯನ್ನು ಮೂಡಿಸಿದೆ.

ಇನ್ನು ಕೋಹೀನೂರು ವಜ್ರದ ಬಗ್ಗೆ ಹಲವಾರು ಕಥೆಗಳಿದ್ದರೂ, ಒಂದು ಪೌರಾಣಿಕ ಮತ್ತು ಒಂದು ಐತಿಹಾಸಿಕ ಕಥೆಯತ್ತ ಗಮನ ಹರಿಸೋಣ.

ತಜ್ಞರು ಹೇಳುವ ಪ್ರಕಾರ ಈ ಕೋಹಿನೂರ್ ವಜ್ರ ಸುಮಾರು 5000 ವರ್ಷಗಳ ಹಳೆಯದು. ಹಾಗೆ ನೋಡಿದರೆ,  ದ್ವಾಪರಯುಗದಲ್ಲಿ ಈ ವಜ್ರದ ಕುರಿತಂತೆ ಶಮಂತಕೋಪಾಖ್ಯಾನ ಕಥೆಯಲ್ಲಿ ಉಲ್ಲೇಖವಾಗಿದೆ ಶ್ರೀ ಕೃಷ್ಣನ ಸಂಬಂಧಿಯಾದ ಸತ್ರಾಜಿತನು ತಪ್ಪಸ್ಸು ಮಾಡಿ ಈ ಶಮಂತಕಮಣಿಯನ್ನು ಪಡೆದುಕೊಳ್ಳುತ್ತಾನೆ. ಅದೊಮ್ಮೆ ಕೃಷ್ಣಾ ಮತ್ತು ಶಮಂತಕ ಮಣಿಯನ್ನು ಧರಿಸಿದ್ದ ಸತ್ರಾಜಿತನ ತಮ್ಮ ಬೇಟೆಗಾಗಿ ಕಾಡಿಗೆ ಹೋಗಿದ್ದಾಗ, ಸತ್ರಾಜಿತನ ತಮ್ಮ ಮರಳಿ ಬಾರದಿದ್ದದ್ದನ್ನು ಕಂಡು ಎಲ್ಲರೂ ಶ್ರೀಕೃಷ್ಣನೇ ಶಮಂತಕ ಮಣಿಯ ಆಸೆಗಾಗಿ ಕೊಂದಿರಬಹುದೆ ಎಂಬ ಸಂದೇಹ ಪಟ್ಟಾಗ, ಶ್ರೀಕೃಷ್ಣನು ಕಾಡಿನಲ್ಲಿ ಮಣಿಯನ್ನು ಹುಡುಕುತ್ತಾ ಹೋರಟಾಗ,  ಜಾಂಬವಂತ ಎಂಬ ಕರಡಿಯ ಗುಹೆಯಲ್ಲಿ ಆ ಶಮಂತಕ ಮಣಿಯನ್ನು ಆತನ ಪುತ್ರಿ ಜಾಂಬವತಿಯ ಬಳಿ  ಇರುವುದನ್ನು ನೋಡಿ ಜಾಂಬವಂತನೊಂದಿಗೆ ಘೋರ ಯುದ್ಧವನ್ನು ಮಾಡುತ್ತಿರುವಾಗ ಶ್ರೀಕೃಷ್ಣನೇ ರಾಮ ಎಂಬುದರ ಅರಿವಾಗಿ ತಪ್ಪೊಪ್ಪಿಕೊಂಡು ಆತನಿಗೆ ಮಣಿಯ ಸಮೇತ ತನ್ನ ಮಗಳನ್ನೂ ಕಲ್ಯಾಣ ಮಾಡಿಕೊಡುತ್ತಾನೆ.ಈ ರೀತಿಯಾಗಿ ಮಣಿಯನ್ನು ತಂದ ಕೃಷ್ಣನನ್ನು ಕಂಡ ಸತ್ರಾರ್ಜಿತನಿಗೂ  ತನ್ನ ತಪ್ಪಿನ ಅರಿವಾಗಿ ತನ್ನ ಪುತ್ರಿ ಸತ್ಯಭಾಮಳೊಂದಿಗೆ ಶಮಂತಕ ಮಣಿಯನ್ನು ಕೊಡಲು ಮುಂದಾದಾಗ, ಕೇವಲ ಸತ್ಯಭಾಮಳನ್ನು ಮಾತ್ರ ವರಿಸಿ, ಶಮಂತಕವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ ಎನ್ನುತ್ತದೆ.

ಇನ್ನು ಇತಿಹಾಸದ ಪ್ರಕಾರ  13ನೇ ಶತಮಾನದಲ್ಲಿ  ಈ ವಜ್ರ ಅಂದಿನ ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೊಳೂರು ಎಂಬ ಗ್ರಾಮದ ಗಣಿಯಲ್ಲಿ  ದೊರಕಿತು ಎನ್ನಲಾಗುತ್ತದೆ. ಪ್ರಸ್ತುತ ಇದು ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳೂರಿನ  ಸರ್ವೇ.ನಂ.337 ಮತ್ತು ಸರ್ವೇ.ನಂ.342 ಕ್ಕೆ ಸೇರಿದ್ದಾಗಿರುವುದರಿಂದಲೇ ಈ ಕೋಹೀನೂರ್ ವಜ್ರ ಕರ್ನಾಟಕದ ಸ್ವತ್ತು ಎಂದು ಗರ್ವದಿಂದ ಮತ್ತು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ.

13ನೇ ಶತಮಾನದಲ್ಲಿ ಈ ಪ್ರಾಂತ್ಯ ಕಾಕತೀಯರ ಸಾಮ್ರಜ್ಯದಲ್ಲಿತ್ತು. ಗೋಲ್ಕೊಂಡ ವಜ್ರವು  (ಅಪ್ಪಟ ಬಿಳಿ ಬಣ್ಣದ, ಶುಭ್ರ ಮತ್ತು ಪಾರದರ್ಶಕ ವಜ್ರ)  ಜಗತ್ತಿನ ಅತಿ ದೊಡ್ಡ ವಜ್ರ ಎಂದು ಪರಿಗಣಿಸಲಾಗಿದೆ. ಇಂದಿನವರೆಗೂ ಇದಕ್ಕಿಂತ ದೊಡ್ಡ ಗಾತ್ರದ ವಜ್ರ  ಎಲ್ಲಿಯೂ ಪತ್ತೆಯಾಗಿಲ್ಲ. ಇದು ಕಾಕಾತೀಯ ಅರಸರ ಆರಾಧ್ಯ ದೇವತೆಯ ಕಣ್ಣಿನಂತೆ ಈ ಕೊಹಿನೂರು ವಜ್ರವನ್ನು ಭಕ್ತರಿಂದ ಪೂಜಿಸಲಾಗುತ್ತಿತ್ತು.

ಈ ಅನರ್ಘ್ಯ ವಜ್ರ ಮೊದಲಿಗೆ ದೊರೆತಾಗ ಸುಮಾರು 793 ಕ್ಯಾರಟ್ ಅಂದರೆ 158.6 ಗ್ರಾಂ ತೂಕವಿತ್ತು. ಹಾಗಾಗಿ ಇಂತಹ ವಜ್ರವನ್ನು  ತಮ್ಮ ಬಳಿ ಇರಿಸಿಕೊಂಡರೆ ಅದು ಪ್ರತಿಷ್ಠೆ ಸಂಕೇತ ಎಂದು ಅಂದಿನ ಬಹುತೇಕರು ಭಾವಿಸಿದ್ದ ಕಾರಣ ಇದೇ ವಜ್ರದ ವಿಷಯವಾಗಿ ಹಲವಾರು ಯುದ್ಧಗಳು ನೆಡೆದಿವೆ, ಹಲವಾರು ರಾಜರುಗಳು ಪ್ರಾಣ ಬಿಟ್ಟಿದ್ದಾರೆ, ರಾಜ್ಯಗಳನ್ನು ಕಳೆದುಕೊಂಡಿದ್ದಾರೆ. ಕಳ್ಳತನವೂ ಆಗಿದೆ. ಹಾಗಾಗಿ ಈ ವಜ್ರವನ್ನು ಕಲಹಪ್ರಿಯ ಎಂದೂ ಕರೆಯಲಾಗುತ್ತದೆ.  

ಕ್ರಿಶ-1310ರಲ್ಲಿ ಮಲ್ಲಿಕಫುರ್ ಖಿಲ್ಜಿ ಈ ವಜ್ರವನ್ನು ವಶಪಡಿಸಿಕೊಂಡು ಸುಮಾರು 200 ವರ್ಷಗಳ ಕಾಲ ಈ ವಜ್ರವು ಮುಘಲರ ಸಾಮ್ರಜ್ಯದಲ್ಲಿತ್ತು. ನಂತರ ಕ್ರಿಶ-1739ರಲ್ಲಿ ಪರ್ಶಿಯನ್ ಜನರಲ್ ಆದ ನಾದಿರ್ ಮೊಹಮ್ಮದ್ ಷಾ ಭಾರತಕ್ಕೆ ಬಂದಾಗ ಈ ವಜ್ರವನ್ನು ವಶಪಡಿಸಿಕೊಂಡು ತನ್ನ ದೇಶಕ್ಕೆ ತೆಗೆದುಕೊಂಡು ಹೋಗಿದ್ದಲ್ಲದೇ ಈ ವಜ್ರಕ್ಕೆ ಕೊಹಿನೂರು (ಬೆಳಕಿನ ಬೆಟ್ಟ) ಎಂಬ ಪರ್ಷಿಯನ್ ಹೆಸರಿಡುತ್ತಾನೆ.

ಕ್ರಿಶ-1747 ರಲ್ಲಿ ಜನರಲ್ ನಾದಿರ್ ಮೊಹಮ್ಮದ್ ಷಾ ಮರಣದ ನಂತರ ಈ ವಜ್ರವು ಅಹಮ್ಮದ್ ಷಾ ದುರಾನಿಯ ವಶಕ್ಕೆ ಬಂದು, ಆನಂತರ ಕ್ರಿಶ-1813 ಅಲ್ಲಿ ಷಾ ಶುಜಾರ ದುರಾನಿ ಈ ವಜ್ರವನ್ನು ಪುನಃ ಭಾರತಕ್ಕೆ ತಂದು ಅದನ್ನು ರಾಜ ರಾಣಜಿತ್ ಸಿಂಗ್ ರವರಿಗೆ  ಕಾಣಿಕೆಯಾಗಿ ನೀಡಿದನು. ರಾಜ ರಣಜಿತ್ ಸಿಂಗ್ ರಿಗೆ  ಈ ವಜ್ರವನ್ನು ಒರಿಸ್ಸಾದ ಜಗನಾಥ್ ಪೂರಿ ದೇವಸ್ಥಾನದಲ್ಲಿ ಇಡಬೇಕೆಂಬ ಮಹಾದಾಸೆ ಇತ್ತು ಆದರೆ ಕ್ರಿಶ-1849ರಲ್ಲಿ ಬ್ರಿಟಿಷ್ ಅಧಿಕಾರಿ ಸರ್ ಜಾನ್ ಲಾರೆನ್ಸ್ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ ಈ ಕೊಹಿನೂರು ವಜ್ರ ಬ್ರಿಟಿಷರ ಸ್ವತ್ತಾಗಿ, ಲಾಹೋರ್  ಟ್ರೀಟಿ ಎಂಬ ಹೆಸರಿನಲ್ಲಿ ಈ ವಜ್ರವನ್ನು ಬ್ರಿಟೀಷರು ಈಸ್ಟ್ ಇಂಡಿಯ ಕಂಪೆನಿಗೆ ವರ್ಗಾವಣೆ ಮಾಡಿದರು. ಅದರ ಜೊತೆ ಜೊತೆಗೆ ಇದನ್ನು ಯುದ್ದದ ಖರ್ಚು” ಎಂದು ದಾಖಲಿಸಿದ್ದಲ್ಲದೇ, ಕುತಂತ್ರದಿಂದ . ಈ ಕೊಹಿನೂರು ವಜ್ರವನ್ನು ರಾಜ ರಣಜಿತ್ ಸಿಂಗ್ ನ ಕಿರಿಯ ಮಗನಾದ ದುಲೀಪ್ ಸಿಂಗ್ ಕಾಣಿಕೆಯನ್ನಾಗಿ ನೀಡಿರುವಂತೆ ದಾಖಲೆಯಲ್ಲಿ ನಮೂದಿಸಲಾಗಿದೆ ಈ ಮೂಲಕ ಕೊಳ್ಳೆ ಹೊಡೆದ ವಜ್ರಕ್ಕೆ ತಮ್ಮ ಕುತಂತ್ರದ ಮೂಲಕ ನಕಲೀ ದಾಖಲೆಯನ್ನು ಸೃಷ್ಟಿಸುತ್ತಾರೆ.

ಮುಂದೆ 1850 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಈ ವಜ್ರವನ್ನು  ರಾಣಿ ವಿಕ್ಟೋರಿಯ ಬ್ರೂಚ್ ಳಿಗೆ ಉಡುಗೊರೆಯಾಗಿ ನೀಡುತ್ತದೆ. ಆಕೆಯ ಸಾಮ್ರಾಜ್ಯದಲ್ಲಿ ಇದ್ದ ಆಲ್ಬರ್ಟ್ ಪ್ರಿನ್ಸ್ ಕೋನ್ ಸೋರ್ಟ್ ಎಂಬುವನಿಗೆ ಈ ವಜ್ರದ ಆಕಾರವು ಆಕರ್ಷಕವಾಗಿ ಕಾಣದ ಕಾರಣ ಆದನ್ನು ಮತ್ತಷ್ಟೂ ಆಕರ್ಷಣೀಯವನ್ನಾಗಿ ಮಾಡಲು  1852 ರಲ್ಲಿ ಈ ವಜ್ರವನ್ನು ಮಿಸ್ಟರ್ ಕೇಂಟೋರ ಎಂಬ ಚಿನ್ನದ ಕುಶಲಕರ್ಮಿಗೆ ನೀಡುತ್ತಾನೆ.

ವಿಶ್ವದಲ್ಲಿಯೇ ಅತೀ ದೊಡ್ಡ ಗಾತ್ರದಲ್ಲಿ ಈ ವಜ್ರ ಗಣಿಯಲ್ಲಿ ದೊರೆತಾಗ ಸುಮಾರು 793 ಕ್ಯಾರೆಟ್ ಅಂದರೆ 158.6 ಗ್ರಾಂ ನಷ್ಟು ಇತ್ತು. ಅದನ್ನು ಮಿ.ಕಂಟೋರ  186 ಕ್ಯಾರಟ್ ಅಂದರೆ 37.2ಗ್ರಾಂ ಗಳಿಗೆ ತೂಕ ಮತ್ತು ಆಕಾರವನ್ನು ಕಡಿಮೆಗೊಳಿಸಿ ಕತ್ತರಿಸಿ ರಾಣಿಯ ಪರ್ಪಲ್-ವೆಲ್ವೆಟ್ ಕ್ವೀನ್ ಮಥರ್ನ್ ಕಿರೀಟದಲ್ಲಿ ಅಳವಡಿಸುತ್ತಾನೆ.  ರಾಣಿ ವಿಕ್ಟೋರಿಯ ಬ್ರೂಚ್ ರವರು ಈ ಕಿರೀಟ ಧರಿಸಿದ ನಂತರ ಇನ್ನು ಮುಂದೆ ಈ ವಜ್ರದ ಕಿರೀಟವನ್ನು ಕೇವಲ ಮಹಿಳೆಯರು ಮಾತ್ರ ಧರಿಸಬೇಕು ಎಂದು ಆದೇಶ ಹೊರಡಿಸಿದ್ದಲ್ಲದೇ,  ಅಂದಿನಿಂದ ಇಂದಿನವರೆಗೂ ಇದನ್ನು ಕೇವಲ ಮಹಿಳೆಯರು ಮಾತ್ರ ಧರಿಸಿದ್ದಾರೆ. ಅವರ ಮರಣದ ನಂತರ ಈ ಕೊಹಿನೂರು ವಜ್ರವಿದ್ದ ಕಿರೀಟವನ್ನು ಲಂಡನ್ ಗೋಪುರದಲ್ಲಿರುವ ಜ್ಯುವೆಲ್ ಹೌಸ್‌ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಹೀಗೆ ‍ನಮ್ಮ ಕರ್ನಾಟಕದ ಯಾದಗಿರಿ ಜಿಲ್ಲೆಯ ಅಪೂರ್ವ ವಜ್ರ ತಮ್ಮ ಮೂಲ ಗಾತ್ರವನ್ನು ಕಳೆದುಕೊಂಡಿದ್ದರೂ ಇಂದಿಗೂ ಲಂಡನ್ನಿನಲ್ಲಿ ರಾಣಿಯ ಕಿರೀಟದಲ್ಲಿ    ಮೆರೆಯುತ್ತಿದೆ ಎಂಬುದು ಹೆಮ್ಮೆಯ  ವಿಷಯವಾದರು ನಮ್ಮ ದೇಶದ ಈ ಅನರ್ಘ್ಯ ವಜ್ರ  ಬ್ರಿಟಿಷರ ಪಾಲಾಗಿದೆಯಲ್ಲಾ ಎಂಬ  ನೋವಂತೂ ಇದ್ದೇ ಇದೆ.

ಈ ರೀತಿಯಾಗಿ ಮೋಸದ ಮೂಲಕ ಬ್ರಿಟಿಷರು ಈ ವಜ್ರವನ್ನು ತೆಗೆದುಕೊಂಡು ಹೋಗಿರುವ ಕಾರಣ ಈ ವಜ್ರವು ಭಾರತಕ್ಕೆ ಸೇರಬೇಕೆಂದು ಸ್ವಾತಂತ್ರ್ಯ ಬಂದ 1947 ರಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ  ವಾದ ವಿವಾದಗಳು ನಡೆಯುತ್ತಿವೆಯಾದರೂ, ಬ್ರಿಟೀಷರು ಅಂದೇ ದೂರದೃಷ್ಟಿಯಿಂದ ಮೋಸದ ದಾಖಲೆ ಸೃಷ್ಟಿಸಿರುವ ಪರಿಣಾಮವಾಗಿ ಭಾರತೀಯರ ವಾದಗಳು ವ್ಯರ್ಥವಾಗುತ್ತಿದೆ. ಈ ವಜ್ರಕ್ಕೆ ಹೋರಾಟ ಮಾಡುತ್ತಿರುವುದು ಭಾರತ ದೇಶವಷ್ಟೆ ಅಲ್ಲದೆ, ಪಾಕಿಸ್ತಾನ, ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನ, ಇರಾನ್ ಕೂಡಾ ಇದು ನಮ್ಮ ಆಸ್ತಿ ಎಂದು ವಾದ ಮಾಡುತ್ತಿರುವ ಕಾರಣ ಇದು ಇನ್ನೂ ಬಗೆಹರಿಯದ ವಿಷಯವಾಗಿ ಜಟಿಲವಾಗುತ್ತಲೇ ಇದೆ.  ಬ್ರಿಟಿಷರಿಗೆ ಇದು ಉಡುಗೊರೆಯಾಗಿ ಕೊಟ್ಟದ್ದಲ್ಲಾ ಅವರು  ಇದನ್ನು ನಮ್ಮ ದೇಶದಿಂದ ಕದ್ದು ತೆಗೆದುಕೊಂಡು ಹೋಗಿರುವುದು ಎಂದು ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ಸಮರ್ಥವಾಗಿ  ಸಾಬೀತು ಪಡಿಸಿದಲ್ಲಿ ಮಾತ್ರವೇ ಕೋಹಿನೂರು ವಜ್ರ ಭಾರತ ದೇಶಕ್ಕೆ ಹಿಂದಿರುಗಿ ಬರುವ ಸಾಧ್ಯತೆಗಳಿವೆ. ಈ ವಿಷಯದಲ್ಲಿ  ದೇಶವಾಸಿಗಳೆಲ್ಲರೂ ತಮ್ಮ ಎಲ್ಲಾ ಸೈದ್ಧಾಂತಿಕ ವಿರೋಧಗಳನ್ನು ಬದಿಗಿಟ್ತು ಹೋರಾಟ ಮಾಡಿದಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ಕೋಹಿನೂರು ವಜ್ರ ಮತ್ತೊಮ್ಮೆ ನಮ್ಮದಾಗುವುದರಲ್ಲಿ ಸಂದೇಹವೇ ಇಲ್ಲ.

ಈ ಕೋಹೀನೂರ್ ವಜ್ರದ ಕುರಿತಂತೆ  ಇಂಗ್ಲೇಂಡಿನ ಇತಿಹಾಸಜ್ಞ ಡಾಲ್ರಿಂಫೆಲೆ  ಸಂಶೋಧನೆ ನಡೆಸಿ ಕೊಹಿನೂರ್ – ದಿ ಹಿಸ್ಟರಿ ಆಫ್ ದ ವಲ್ಡ್ಸ್ ಫೇಮಸ್ ಡೈಮೆಂಡ್ ಎಂಬ  ಗ್ರಂಥವನ್ನು ರಚಿ‍ಸಿದ್ದಾರೆ. ಈ ಪುಸ್ತಕದಲ್ಲಿ ಅವರು, ಈ ವಜ್ರದ ಮೂಲವನ್ನು  ಹುಡುಕುತ್ತಾ ಇಂಗ್ಲೆಂಡಿನಿಂದ ಭಾರತಕ್ಕೆ ಬಂದು ಆ ವಜ್ರ ಎಲ್ಲಿ ದೊರಕಿತೋ ಅಲ್ಲಿಂದ ಆರಂಭಿಸಿ ಕಡೆಗೆ  ಯಾರಿಂದ ಯಾರಿಗೆ ಕೈ ಬದಲಿಸುತ್ತಾ ಹೋಗಿತ್ತೋ ಆ ಎಲ್ಲಾ ಸ್ಥಳಗಳಿಗೂ ಭೇಟಿಕೊಟ್ಟು ಧಾಖಲೆಗಳನ್ನು ಸಂಗ್ರಹಿಸಿ ಕರ್ನಾಟಕದ  ಕೊಳ್ಳೂರಿನ ಗಣಿಯಲ್ಲಿ ದೊರೆತ ಗೊಲ್ಕೊಂಡ ವಜ್ರ ಈಗ ಕೋಹಿನೂರ್ ವಜ್ರವಾಗಿ ಹೇಗೆ  ಬ್ರಿಟಿಷ್ ರಾಣಿಯ ಕಿರೀಟದ ಭಾಗವಾಗಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ಕೋಹಿನೂರ್ ವಜ್ರದ ರೋಚಕ ಕಥನ ಇದೋ ನಿಮಗಾಗಿ https://youtu.be/_iPEAsTk6pU

ನಮ್ಮ ಕರ್ನಾಟಕದ ಹೆಮ್ಮೆಯ ಕೋಹೀನೂರ್ ವಜ್ರದ ಈ ರೋಚಕ ಕಥೆಯನ್ನು ನೀವೂ ತಿಳಿದುಕೊಳ್ಳಿ ಮತ್ತು ಇತರರಿಗೂ ತಿಳಿಸುತ್ತೀರೀ ಎಂದೇ ಭಾವಿಸುತ್ತೇವೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s