ನಾವೆಲ್ಲರೂ ಚಿಕ್ಕಂದಿನಿಂದಲೂ, ಪಂಚತ್ರಂತ್ರ ಮತ್ತು ಅಕ್ಬರ್ ಬೀರ್ಬಲ್ ಕಥೆಗಳನ್ನು ಕೇಳಿಕೊಂಡು ಬೆಳೆದವರೇ ಆಗಿದ್ದು, ಅಲ್ಲಿ ಕಳ್ಳರು ಬಹಳ ಚಾಣಕ್ಯತನದಿಂದ ಎಲ್ಲರನ್ನೂ ಬೇಸ್ತುಗೊಳಿಸಿ ತಮ್ಮ ಕೈಚಳಕವನ್ನು ತೋರಿಸುವುದನ್ನು ಕೇಳಿದ್ದೇವೆ, ಓದಿದ್ದೇವೆ. ಪ್ರಸ್ತುತವೂ ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅದಕ್ಕೆ ಉದಾಹರಣೆಯಾಗಿ ಒಂದು ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು.
ಸಾಮಾನ್ಯವಾಗಿ ರಾತ್ರಿಯ ಹೊತ್ತು ದನಗಳನ್ನು ಕದಿಯಲು ಬರುವ ಕಳ್ಳರು ಮಾಡುವ ಮೊದಲ ಕೆಲವೆಂದರೆ, ಹಸುಗಳ ಕುತ್ತಿಗೆಗೆ ಕಟ್ಟಲಾಗಿರುವ ಗಂಟೆಗಳನ್ನು ಶಬ್ಧ ಬಾರದಂತೆ ತೆಗೆದುಬಿಡುತ್ತಾರೆ ನಂತರ ಹಸುಗಳ ಬಾಯಿಗೆ ಶಬ್ಧ ಮಾಡದಂತೆ ಸಣ್ಣ ಬುಟ್ಟಿಯನ್ನು ಕಟ್ಟುತ್ತಾರೆ.
ಹಸುಗಳ ಕಾಲುಗಳನ್ನು ಕಟ್ಟಿ ತಮ್ಮ ಗಾಡಿಗಳಲ್ಲಿ ಹೇರಿಕೊಂಡ ನಂತರ ಒಬ್ಬ ಕಳ್ಳ ಪಶ್ಚಿಮ ದಿಕ್ಕಿನಲ್ಲಿ ಗಂಟೆ ಬಾರಿಸಿಕೊಂಡು ಓಡಿ ಹೋದರೆ, ಉಳಿದ ಕಳ್ಳರು ಲಗು ಬುಗನೆ ಪೂರ್ವ ದಿಕ್ಕಿನಲ್ಲಿ ದನವನ್ನು ಹೇರಿಕೊಂಡು ಹೋಗುತ್ತಾರೆ.
ಅಷ್ಟೊಂದು ತಡರಾತ್ರಿ ಕಗ್ಗತ್ತಲೆಯಲ್ಲಿ ಗಂಟೆಯ ಶಬ್ಧಕ್ಕೆ ಎಚ್ಚರಗೊಂಡ ಗ್ರಾಮಸ್ಥರು ಗಂಟೆಯ ಶಬ್ಧವನ್ನೇ ಅನುಸರಿಸಿಕೊಂಡು ಪಶ್ಚಿಮದ ಕಡೆ ಓಡುತ್ತಾರೆ. ಗಂಟೆಯನ್ನು ಬಾರಿಸಿಕೊಂಡು ಊರಿನಿಂದ ಸುಮಾರು ದೂರ ಬಂದ ನಂತರ ಕಾಡಿನ ಜಾಡಿನಲ್ಲಿ ಆ ಗಂಟೆಯನ್ನು ಬಿಸಾಕಿ ತನ್ನ ಪಾಡಿಗೆ ತಾನು ಮತ್ತೊಂದು ದಿಕ್ಕಿಗೆ ಓಡಿ ಹೋಗುತ್ತಾನೆ. ಹಸುಗಳನ್ನು ಹುಡುಕಿಕೊಂಡ ಬಂದ ಗ್ರಾಮಸ್ಥರು ಹಸುವಿನ ಕೊರಳಿನ ಗಂಟೆಯನ್ನು ನೋಡಿ, ಓಹೋ ಹಸು ಕಾಡಿನ ಕಡೆಗೆ ಹೋಗಿರ ಬಹುದು ಎಂದು ಹಸುವನ್ನು ಹುಡುಕಿಕೊಂಡು ಕಾಡನ್ನು ಪ್ರವೇಶಿಸುತ್ತಾರೆ.
ಹಸುಗಳನ್ನು ಹೇರಿಕೊಂಡು ಪೂರ್ವ ದಿಕ್ಕಿನ ಕಡೆಗೆ ಹೋಗುವ ಕಳ್ಳರ ಮತ್ತೊಂದು ಗುಂಪು, ನಿರಾಳವಾಗಿ, ಯಾವುದೇ ಧಾವಂತವಿಲ್ಲದೇ, ಹಸುಗಳನ್ನು ಕದ್ದೊಯ್ಯುತ್ತಾರೆ.
ಈ ವಿಷಯ ಈಗ ಏಕೆ ಪ್ರಸ್ತಾಪಿಸ ಬೇಕಾಯಿತು ಎಂದರೆ, ಈ ಪ್ರಸಂಗದಲ್ಲಿ ಬರುವ ಹಸುಗಳು ಅಂದರೆ ದೇಶದ ಆರ್ಥಿಕತೆ, ನಿರುದ್ಯೋಗ, ಆರೋಗ್ಯ, ದೇಶದ ರಕ್ಷಣೆ, ಪರಿಸರ ಮಾಲಿನ್ಯ, ಮೂಲಸೌಕರ್ಯಗಳು, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ, ಕೋವಿಡ್, ಹಣದುಬ್ಬರ, ಅಭಿವೃದ್ಧಿ ....
ಹಸುಗಳ ಕೊರಳಿನ ಗಂಟೆಗಳು ಎಂದರೆ, ಕೋಮು ಗಲಭೆಗಳು, ಮಾದಕ ದ್ರವ್ಯದ ಹಗರಣ, ಸುಶಾಂತ್ ಸಿಂಗ್ ರಾಥೋಡ್, ರಿಯಾ, ಕಂಗನಾ, ಠಾಕ್ರೆ, ರಾಗಿಣಿ, ಸಂಜನಾ ಇತ್ಯಾದಿ ಇತ್ಯಾದಿ ….
ಕಳ್ಳರು: ಎಲ್ಲಾ ಸುದ್ದಿ ವಾಹಿನಿಗಳು
ಸಮಾಜದ ನಾಲ್ಕನೇ ಆಧಾರೆ ಸ್ತಂಭ ಎಂದು ಕೊಚ್ಚಿಕೊಳ್ಳು(ಲ್ಲು)ವ ಈ ಸುದ್ದಿ ಮಾಧ್ಯಮಗಳು, ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಗೋಗಳ್ಳರು ಜನರ ದಿಕ್ಕು ತಪ್ಪಿದಂತೆ, ಜನಸಾಮಾನ್ಯರ ನಿಜವಾದ ಬವಣೆಯತ್ತ ಗಮನ ಹರಿಸದೇ ಐವತ್ತಾದರೂ ರಾಹುಲ್ ಮದುವೆಯಾಗದಿರುವುದು, ಅನುಷ್ಕ ಅಮ್ಮನಾಗುತ್ತಿರುವುದು, ಅದಾರೋ ನಟ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಾರೋ ನಟಿಯ ಅನೈತಿಕ ಸಂಬಂಧಗಳನ್ನೇ ದಿನದ ಇಪ್ಪತ್ನಾಲ್ಕು ಗಂಟೆಗಳೂ ಬ್ರೇಕಿಂಗ್ ನ್ಯೂಸ್ ಎಂದು ವೈಭವೀಕರಿಸುತ್ತಾ, ಜನರ ದಿಕ್ಕು ತಪ್ಪಿಸಿ, ದಿಕ್ಕಾಪಾಲು ಮಾಡುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.
ನಾವು ನೆಮ್ಮದಿಯ ಜೀವನ ನಡೆಸಿದರೇ, ನಾವು ಉದ್ದಾರ ಆಗ್ತೀವಿ. ನಾವು ಉದ್ದಾರ ಆದ್ರೇ, ದೇಶ ಉದ್ಧಾರ ಆಗುತ್ತದೆ. ಹಾಗಾಗಿ ನಾವು ಮತ್ತು ದೇಶ ಎರಡೂ ಉದ್ದಾರ ಆಗ ಬೇಕು ಅಂದ್ರೇ, ತೆಪ್ಪಗೆ ಒಂದು ಸ್ವಲ್ಪ ದಿನ ಎಲ್ಲಾ ಮಾಧ್ಯಮಗಳನ್ನೂ ನೋಡದೇ ಇದ್ದು ಬಿಡೋಣ. ಆಗಲಾದರೂ ಈ ಸುದ್ದಿ ಮಾಧ್ಯಮಗಳಿಗೆ ಬುದ್ದಿ ಬರಬಹುದೇನೋ?
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂದು ಯೋಚನೆ ಮಾಡುತ್ತಲೇ ಕೂರದೇ, ಸುಮ್ಮನೆ ನ್ಯೂಸ್ ಛಾನೆಲ್ ಬದಲಾಯಿಸಿ ಸಾಕು. ಎಲ್ಲವೂ ತಂತಾನೇ ಬದಲಾಗುತ್ತದೆ.
ಏನಂತೀರೀ?
ಗೆಳೆಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶದ ಕನ್ನಡ ಭಾವಾನುವಾದ