ದಿಢೀರ್ ಪಾಲಾಕ್ ದೋಸೆ

ಸಾಮಾನ್ಯವಾಗಿ ದೋಸೆ ಮಾಡಬೇಕು ಅಂದ್ರೇ, ಹಿಂದಿನ ದಿನ ದೋಸೆ ಹಿಟ್ಟನ್ನು ರುಬ್ಬಿಟ್ಟುಕೊಂಡು ಮಾರನೇ ದಿನ ದೋಸೆ ಮಾಡುವುದು ಸಹಜ ಪ್ರಕ್ರಿಯೆ. ಆದರೆ ನಾವಿಂದು ದಿಢೀರ್ ಆಗಿ ಆರೋಗ್ಯಕರವಾದ ಪಾಲಾಕ್ ದೋಸೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತೋರಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಪಾಲಾಕ್ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ

  • ಪಾಲಾಕ್ ಸೊಪ್ಪು – 1 ಕಟ್ಟು
  • ಪುದಿನಾ ಸೊಪ್ಪು – 1/2 ಕಟ್ಟು
  • ಶುಂಠಿ – 1/4 ಇಂಚು
  • ಹಸಿರು ಮೆಣಸಿನಕಾಯಿ -5-6
  • ಚಿರೋಟಿ ರವೆ – 1 ಬಟ್ಟಲು
  • ಮೊಸರು – 1 ಬಟ್ಟಲು
  • ಅಕ್ಕಿ ಹಿಟ್ಟು 3-4 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ರುಚಿ ಹೆಚ್ಚಿಸಲು ಮತ್ತು ಅಲಂಕಾರಕ್ಕಾಗಿ

  • ಕತ್ತರಿಸಿದ ಈರುಳ್ಳಿ – 1/4 ಬಟ್ಟಲು
  • ತುರಿದ ಕ್ಯಾರೆಟ್ – 1/4 ಬಟ್ಟಲು
  • ತೆಂಗಿನ ತುರಿ – 1/4 ಬಟ್ಟಲು

ಪಾಲಾಕ್ ದೋಸೆ ತಯಾರಿಸುವ ವಿಧಾನ

  • ‍ಚೆನ್ನಾಗಿ ತೊಳೆದ ಪಾಲಾಕ್ ಮತ್ತು ಪುದೀನಾ ಸೊಪ್ಪಿನ ಜೊತೆಗೆ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ
  • ರುಬ್ಬಿಕೊಂಡ ಮಿಶ್ರಣಕ್ಕೆ ಚಿರೋಟಿ ರವೆ, ಮೊಸರಿನ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಗೊಟಾಯಿಸಿ ಸುಮಾರು 10 ನಿಮಿಷಗಳ ಕಾಲ ನೆನೆಯಲು ಬಿಡಿ.
  • ದೋಸೆ ಗರಿಗರಿಯಾಗಿ ಬರಲು ಕಲೆಸಿಟ್ಟು ಕೊಂಡಿದ್ದ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಬೆರಸಿ, ಕಾವಲಿಯ ಮೇಲೆ ದೋಸೆಯನ್ನು ಹುಯ್ಯಿರಿ.
  • ದೋಸೆಯ ರುಚಿಯನ್ನು ಹೆಚ್ಚಿಸಲು ಮತ್ತು ಆಲಂಕಾರಿಕವಾಗಿ ಕಾಣುವಂತೆ ಮಾಡಲು, ದೋಸೆಯ ಮೇಲೆ ತುರಿದ ಕ್ಯಾರೆಟ್, ತೆಂಗಿನ ತುರಿ ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿ ಉದುರಿಸಿ ಚೆನ್ನಾಗಿ ಬೇಯಿಸಿದಲ್ಲಿ ರುಚಿ ರುಚಿಯಾದ ದಿಢೀರ್ ಪಾಲಾಕ್ ದೋಸೆ ಸವಿಯಲು ಸಿದ್ಧ.

ಕಾಯಿ ಚೆಟ್ನಿ, ಚೆಟ್ನಿ ಪುಡಿ ಇಲ್ಲವೇ ಯಾವುದೇ ರೀತಿಯ ಪಲ್ಯ ಅಥವಾ ಗೊಜ್ಜಿನೊಡನೆ ನೆಂಚಿಕೊಂಡು ತಿಂದರೆ ಇನ್ನೂ ಮಜವಿರುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಪಾಲಾಕ್ ದೋಸೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಜ್ಯೋತಿ ಗಂಗಾಪ್ರಸಾದ್ ಅವರಿಗೆ ತುಂಬು ಹೃದಯದ ಧನ್ಯವಾದಗಳು

ಮನದಾಳದ ಮಾತು : ಪಾಲಾಕ್ ಸೊಪ್ಪು ಅರೋಗ್ಯಕ್ಕೆ ಬಹಳ ಉತ್ತಮವಾಗಿದ್ದು ಇದರಲ್ಲಿ ಪ್ರೋಲೇಟ್, ಕ್ಯಾರೋಟಿನೈಡ್, ವಿಟಮಿನ್ ಅಂಶಗಳು ಹೆಚ್ಚಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೆ, ಮೊಡವೆ ಸಮಸ್ಯೆ, ದೃಷ್ಟಿ ಹಿನತೆ, ಅಧಿಕ ರಕ್ತದೊತ್ತದ ಸಮಸ್ಯೆಗಳಿಗೆ ರಾಮಬಾಣ ಎಂದೇ ಹೇಳಬಹುದು.

  • ಕೂದಲಿನ ಬೆಳವಣಿಗೆಗೆ ಪಾಲಾಕ್ ಸೊಪ್ಪು ಬಹಳ ಸಹಕಾರಿ. ಕಬ್ಬಿಣ, ವಿಟಮಿನ್ ಎ ಮತ್ತು ಸಿ ಹಾಗೂ ಪ್ರೊಟೀನ್ ಅಂಶಗಳು ಈ ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿರುವುದರಿಂದ ಕೂದಲು ಉದುರುವುದನ್ನು ತಡೆದು, ನೈಸರ್ಗಿಕ ಕಾಂತಿ ನೀಡುತ್ತದೆ.
  • ಪಾಲಾಕ್ ಸೊಪ್ಪಿನಲ್ಲಿ ಕ್ಯಾನ್ಸರ್ ಕಣಗಳನ್ನು ಕೊಲ್ಲಬಲ್ಲ ಶಕ್ತಿ ಇರುವುದರಿಂದ ಕ್ಯಾನ್ಸರ್ ರೋಗಿಗಳಿಗೆ ಇದು ದಿವ್ಯೌಷಧವಾಗಿದೆ.
  • ನರ ದೌರ್ಬಲ್ಯವಿದ್ದವರು, ಸಂಧಿವಾತದ ಸಮಸ್ಯೆ ಇರುವವರು, ಮತ್ತು ರಕ್ತಹಿನತೆಯ ಸಮಸ್ಯೆಯಿಂದ ಬಳಲುತ್ತಿರುವವರು, ಪ್ರತಿ ನಿತ್ಯ ಪಾಲಾಕ್ ಸೇವಿಸುವುದು ಉತ್ತಮ.
  • ದೇಹದ ತೂಕ ಕಡಿಮೆ ಮಾಡಿಕೊಳ್ಳುವವರಿಗೆ, ಇದರಲ್ಲಿರುವ ಕ್ಯಾರೋಟಿನೈಡ್ ಅಂಶ ದೇಹದಲ್ಲಿರುವ ಕೊಲೆಸ್ಟ್ರಾಲನ್ನ ಕರಗಿಸಿ, ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.
  • ನಿರಂತರ ಪಾಲಾಕ್ ಬಳಸುವುದರಿಂದ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಮೆದುಳಿನ ನರಕೋಶಗಳ ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
  • ಪಾಲಾಕ್ ಸೊಪ್ಪಿನಲ್ಲಿ ಹೆಚ್ಚು ನಾರಿನಂಶ ಹಾಗೂ ನೀರಿನಂಶ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದಲ್ಲದೆ, ಜೀರ್ಣಶಕ್ತಿಗೆ ಸಹಕರಿಸುತ್ತದೆ.

Leave a comment