ತಮಿಳುನಾಡಿನ ಯಾವುದೇ ಸಮಾರಂಭಗಳಿಗೆ ಹೋದಲ್ಲಿ ಅಥವಾ ಹೋಟೆಲ್ಗಳಲ್ಲಿ ಉಣಬಡಿಸುವ ಸಾಂಪ್ರದಾಯಿಕ ಅಡುಗೆಯಾದ ಉಸುರೀಕಾಯಿ (ಸುಂಡಕಾಯಿ) ವತ್ತ ಕೊಳಂಬು ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ವತ್ತ ಕೊಳಂಬು ಮಾಡಲು ಅವಶ್ಯವಾಗಿರುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ಕಡಲೇಬೇಳೆ – 2 ಚಮಚ
- ಉದ್ದಿನಬೇಳೆ- 2 ಚಮಚ
- ದನಿಯ- 1 ಚಮಚ
- ಮೆಂತ್ಯ- 1 ಚಮಚ
- ಮೆಣಸು- 1 ಚಮಚ
- ಜೀರಿಗೆ- 1 ಚಮಚ
- ಒಣಮೆಣಸಿನಕಾಯಿ – 5-6
ವತ್ತ ಕೊಳಂಬು ಪುಡಿ ತಯಾರಿಸುವ ವಿಧಾನ
- ಒಂದು ಗಟ್ಟಿ ತಳದ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ನಂತರ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಸಿ ಹೋಗುವವರೆಗೂ ಕೆಂಪಗೆ ಹುರಿದುಕೊಳ್ಳಿ
- ಹುರಿದುಕೊಂಡದ್ದು ಚೆನ್ನಾಗಿ ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.
ವತ್ತ ಕೊಳಂಬು ಮಾಡಲು ಬೇಕಾಗುವ ಸಾಮಗ್ರಿಗಳು
- ಒಣಗಿದ ಉಸುರೀಕಾಯಿ(ಸುಂಡಕಾಯಿ) 2-3 ಹಿಡಿ
- ಸಾಸಿವೆ – 1 ಚಮಚ
- ಮೆಂತ್ಯ- 1/4 ಚಮಚ
- ಕರಿಬೇವು – 8-10
- ಒಣಮೆಣಸಿನಕಾಯಿ – 5-6
- ಬೆಲ್ಲ – 2-3 ತುಣುಕುಗಳು
- ಹುಣಸೇಹಣ್ಣಿನ ರಸ – 1/2 ಬಟ್ಟಲು
- ಚಿಟುಕಿ ಅರಿಶಿನ
- ಇಂಗು – 1 ಚಮಚ
- ಅಡುಗೆ ಎಣ್ಣೆ 3-4 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ವತ್ತ ಕೊಳಂಬು ತಯಾರಿಸುವ ವಿಧಾನ
- ಒಂದು ಗಟ್ಟಿ ತಳದ ಬಾಣಲಿಯಲ್ಲಿ 3-4 ಚಮಚ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ನಂತರ, ಒಣಗಿದ 2-3 ಹಿಡಿ ಉಸರೀಕಾಯಿ(ಸುಂಡಕಾಯಿ)ಯನ್ನು ಚೆನ್ನಾಗಿ ಕೆಂಪಗೆ ಬರುವಂತೆ ಕರಿದುಕೊಂಡು ಆರಲು ಬಿಡಿ.
- ಕಾದ ಅದೇ ಬಾಣಲಿ ಮತ್ತು ಎಣ್ಣೆಗೆ ಸಾಸಿವೆ ಹಾಕಿಕೊಂಡು ಸಿಡಿಸಿಕೊಂಡ ನಂತರ, ಮೆಂತ್ಯ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿಕೊಂಡು ಚೆನ್ನಾಗಿ ಹಸಿ ಹೋಗುವವರೆಗೂ ಕೆಂಪಗೆ ಹುರಿದುಕೊಂಡು ಅದನ್ನು ಒಂದು ಪಾತ್ರೆಗೆ (ಕಲ್ಲಿನ ಮರಗಿ) ಹಾಕಿಕೊಳ್ಳಿ
- ನೆನಸಿಟ್ಟು ಕೊಂಡಿದ್ದ ಹುಣಸೇ ಹುಳಿಯನ್ನು ಪಾತ್ರೆಗೆ ಸೇರಿಸಿ ಅದಕ್ಕೆ ಅರಿಶಿನ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ
- ಚೆನ್ನಾಗಿ ಕುದಿಯುತ್ತಿದ್ದ ಮಿಶ್ರಣಕ್ಕೆ ಕರಿದುಕೊಂಡಿದ್ದ ಉಸರೀಕಾಯಿ (ಸುಂಡಕಾಯಿ) ಮತ್ತು ಇಂಗನ್ನು ಹಾಕಿ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿದ ನಂತರ ಮಾಡಿಟ್ಟು ಕೊಂಡಿದ್ದ ಪುಡಿಯನ್ನು ಬೆರಸಿ, ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿದರೆ ರುಚಿ ರುಚಿಯಾದ ಸಾಂಪ್ರದಾಯಕವಾದ ಮತ್ತು ಆರೋಗ್ಯಕರವಾದ ವತ್ತ ಕೊಳಂಬು ಸವಿಯಲು ಸಿದ್ಧ.
ಈ ವತ್ತ ಕೊಳಂಬುವನ್ನು ಚಪಾತಿ, ದೋಸೆ, ಪರೋಟ ಅಲ್ಲದೇ, ರಾಗಿ ಮುದ್ದೆ ಮತ್ತು ಅನ್ನದೊಂದಿಗೂ ಕಲೆಸಿಕೊಂಡು ತಿನ್ನಬಹುದಾಗಿದೆ.
ವತ್ತ ಕೊಳಂಬು ಮಾಡುವುದನ್ನು ಈ ವಿಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.
ತಮಿಳುನಾಡಿನ ಸಾಂಪ್ರದಾಯಿಕ ಅಡುಗೆಯಾದ ವತ್ತ ಕೊಳಂಬು ಮಾಡುವುದನ್ನು ತೋರಿಸಿಕೊಟ್ಟ ಶ್ರೀಮತಿ ರೇವತಿ ವೆಂಕಟೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
ಇನ್ನೇಕೆ ತಡಾ, ನೋಡ್ಕೋಳ್ಳಿ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ವತ್ತ ಕೊಳಂಬು ತಯಾರಿಸಲು ಉಸರೀ ಕಾಯಿಯ ಬದಲಾಗಿ ಒಣಗಿದ ಗಣಕೀಹಣ್ಣು(ಕಾಶೀಹಣ್ಣು) ಇಲ್ಲವೇ ಬೆಂಡೇಕಾಯಿ ಅಥವಾ ಬದನೇಕಾಯಿ ಜೊತೆ ಅವರೇಕಾಳನ್ನು ಬೆರೆಸಿಯೂ ಸಾಂಪ್ರದಾಯಕವಾಗಿ ವತ್ತೆ ಕೊಳಂಬು ತಯಾರಿಸಬಹುದಾಗಿದೆ.
ಹಸೀ ಉಸುರೀ ಕಾಯಿಯ ಬೀಜ ಬಹಳ ಒಗುರು ಒಗುರಾಗಿರುವ ಕಾರಣ ಚೆನ್ನಾಗಿ ಜೆಜ್ಜಿ, ಸುಮಾರು ಎಂಟು ಹತ್ತು ಬಾರಿ ತೊಳೆದು ಉಪಯೋಗಿಸಬೇಕು
ಉಸರೀ ಕಾಯಿ ಅರೋಗ್ಯಕ್ಕೆ ಬಹಳ ಉತ್ತಮವಾಗಿದ್ದು ಇದನ್ನು ಆಗ್ಗಿಂದ್ದಾಗೆ ಸೇವಿಸುವ ಮೂಲಕ ಪಚನಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಬಹುದಲ್ಲದೇ, ಸುಲಭವಾಗಿ ಕರಳುಗಳನ್ನು ಶುದ್ಧೀಕರಿಸಿಬಹುದಾಗಿದೆ.
ಇದರ ಬೀಜ ಕಹಿಯಾಗಿರುವ ಕಾರಣ ಮಧುಮೇಹಿಗಳಿಗೂ ಇದು ಉತ್ತಮ ಪರಿಣಾಮಕಾರಿಯಾಗಿದೆ