ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನ ಅಥವಾ ತಬಲಾ ಸಾಥಿ ಎಂದಾಕ್ಷಣ ಎಲ್ಲರ ಕಣ್ಣ ಮುಂದೆಯೂ ಪುರುಷರೇ ಕಣ್ಣ ಮುಂದಿಗೆ ಬರುತ್ತಾರೆ. ಆದರೆ ಈ ಸಂಪ್ರದಾಯವನ್ನು ಮೀರಿ ಪುರುಷ ಪ್ರಧಾನದ ಏಕತಾನತೆಯನ್ನು ಮುರಿದು ಪಕ್ಕವಾದ್ಯದಲ್ಲಿ ಮಿಂಚಿ ಮೆರೆಯುತ್ತಿರುವ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರಿಂದ ಸರಸ್ವತಿಯ ಪ್ರತಿರೂಪ ಎಂದು ಹೊಗಳಿಸಿಕೊಂಡಿರುವ ಅಧ್ಬುತವಾದ ಪ್ರತಿಭೆಯಾದ, ಸಂಗೀತ ಲೋಕದ ಅತಿ ಅಪರೂಪದ ಸಾಧಕಿ, ಕೋಲ್ಕತ್ತದ ಕುಮಾರಿ ರಿಂಪಾ ಶಿವ ನಮ್ಮ ಈ ದಿನದ ಕಥಾವಸ್ತು.
ಫರೂಕಾಬಾದ್ ಘರಾನಾಕ್ಕೆ ಹೆಸರಾದ ತಬಲಾ ವಾದಕ ಪ್ರೊ. ಸ್ವಪನ್ ಶಿವ ದಂಪತಿಗಳಿಗೆ ಜನವರಿ 1, 1986ರಲ್ಲಿ ಜನಿಸಿದ ರಿಂಪಾ, ಬಾಲ್ಯದಿಂದಲೂ ಆಟಿಕೆಯೊಂದಿಗೆ ಆಡುವುದರ ಬದಲು ಅಪ್ಪನ ತಬಲಾದೊಂದಿದೇ ಕಾಲ ಕಳೆದದ್ದೇ ಹೆಚ್ಚು. ತಂದೆಯಿಂದಲೇ ತನ್ನ ತಬಲಾದ ಬಾಲ ಪಾಠಗಳನ್ನು ಕಲಿಯಲಾರಂಭಿಸಿದಾಗ ಆಕೆಯ ವಯಸ್ಸು ಕೇವಲ ಮೂರು ವರ್ಷಗಳು. ತನ್ನ ವಯಸ್ಸಿನ ಬಹುಪಾಲು ಬಾಲಕಿಯರು ಗೊಂಬೆಗಳೊಂದಿಗೆ ಆಟವಾಡುವುದರಲ್ಲಿ ಮಗ್ನರಾಗಿದ್ದರೇ, ರಿಂಪಾ ಶಿವ ಮಾತ್ರಾ ತಾನಾಯಿತು ತನ್ನ ತಬಲವಾಯಿತು ಎನ್ನುವಂತೆ ಗಂಟೆಗಟ್ಟಲೆ ತಬಲಾದೊಂದಿಗೆ ಕಾಲ ಕಳೆಯುತ್ತಿದ್ದಳು. ತಬಲಾ ಮೇಲಿನ ಮಗಳ ಉತ್ಸಾಹಕ್ಕೆ ಆಕೆಯ ತಂದೆಯೂ ತಣ್ಣೀರೆರಚದೇ, ಪ್ರೋತ್ಸಾಹ ನೀಡುತ್ತಾ ಆಕೆಗೆ ತಬಲಾದ ಎಲ್ಲಾ ಪಾಠಗಳನ್ನು ಒಂದೊಂದಾಗಿ ಕಲಿಸಿಕೊಡತೊಡಗಿದರು.
ಮಗಳಿಗೆ ಸ್ವಲ್ಪ ಬುದ್ಧಿ ಬಂದ ನಂತರ ತಬಲಾ ಬದಲು ಸಿತಾರ್ ಕಲಿ ಮಗಳೇ ಎಂದು ಹೇಳಿದರೂ, ರಿಂಪಾಳಿಗೆ ತಬಲಾ ಮೇಲೆಯೇ ಪ್ರಾಣ. ಅವರ ತಂದೆಯವರು ತಮ್ಮಇತರೇ ಶಿಷ್ಯರಿಗೆ ತಬಲಾ ನುಡಿಸುವ ತಂತ್ರಗಳನ್ನು ಹೇಳಿಕೊಡುವುದನ್ನೇ ಗಮನಿಸುತ್ತಾ, ಏಕಲವ್ಯಳಂತೆಯೇ ಆಕೆಯೂ ತನಗೇ ಅರಿವಿಲ್ಲದಂತೆಯೇ ತಬಲಾ ನುಡಿಸುವುದರಲ್ಲಿ ನಿಷ್ಣಾತಳಾಗಿ ಹೋದಳು. ಕೇವಲ ಎಂಟೇ ವಯಸ್ಸಿಗೇ ಕೋಲ್ಕೋತ್ತಾದಲ್ಲಿ ತನ್ನ ಮೊದಲ ಕಛೇರಿ ನೀಡುವಷ್ಟು ಪ್ರಬುದ್ಧಳಾಗಿ ಬಿಟ್ಟಳು ರಿಂಪಾ.
ಚಿಕ್ಕವಳಿದ್ದಾಗ ಎಲ್ಲರೊಂದಿಗೆ ಎಲ್ಲಿಗಾದರೂ ಆಡ್ಡಾಡಿಕೊಂಡು ಬಾ ಎಂದು ಪೋಷಕರು ಬಲವಂತ ಮಾಡಿದರೂ ರಿಂಪಾ ಮಾತ್ರಾ ಅದಕ್ಕೆ ಜಪ್ಪಯ್ಯಾ ಎಂದರೂ ಒಪ್ಪದೇ, ಏ ತಬ್ಲಾ ಮೇರಾ ಸಬ್ ಕುಚ್ ಹೈ ಅಂದರೆ ಇದು ನನ್ನ ಜೀವನವೆಲ್ಲವೂ ತಬಲಾದಲ್ಲಿಯೇ ಇದೆ ಎನ್ನುತ್ತಾ ತನ್ನ ಎಲ್ಲಾ ಸಾಧನೆಗಳನ್ನೂತಬಲಾ ವಾದನದಲ್ಲಿ ಅಪೂರ್ವವಾದ ತಂತ್ರಗಾರಿಕೆ, ಮಟ್ಟುಗಳನ್ನು ನುಡಿಸಿ ತೋರಿಸುವ ಮುಖಾಂತರ ತಾಳವಾದ್ಯ ಲೋಕದಲ್ಲಿ ಅಪ್ರತಿಮೆಯಾಗಿ ಬಿಟ್ಟಳು. ಆಕೆಯ ಖ್ಯಾತಿ ದೇಶ ವಿದೇಶಗಳಲ್ಲಿ ಹಬ್ಬುತ್ತಿದ್ದಂತೆಯೇ, ಫ್ರಾನ್ಸ್ ಸರ್ಕಾರ Rimpa Siva Princess of Tabla ಎಂಬ ಫ್ರೆಂಚ್ ನಿರೂಪಣೆಯೊಂದಿಗೆ 98 ರಲ್ಲಿ ಸಾಕ್ಷ್ಯಚಿತ್ರವೊಂದನ್ನೂ ನಿರ್ಮಿಸಿದೆ. ಫ್ರೆಂಚ್ ಚಿತ್ರ ತಂಡವು ಸುಮಾರು 26 ದಿನಗಳ ಕಾಲ ಕೋಲ್ಕತ್ತಾದಲ್ಲಿಯೇ ಬೀಡು ಬಿಟ್ಟು ಆಕೆಯ ಕುರಿತಾದ ಅದ್ಭುತ ಸಾಕ್ಷ ಚಿತ್ರ ತಯಾರಿಸುವ ಮೂಲಕ ಆಕೆಯ ಖ್ಯಾತಿ ಮತ್ತಷ್ಟೂ ಜಗತ್ಪ್ರಸಿದ್ಧವಾಗಲು ಸಹಕಾರಿ ಆಯಿತು ಎಂದರೂ ತಪ್ಪಾಗಲಾರದು. ಆ ಚಿತ್ರದಲ್ಲಿ ಆಕೆ ತನ್ನ ತಂದೆಯೊಡನೆ ತರಬೇತಿ ಮತ್ತು ಬೋಧನಾ ಶೈಲಿ, ಆಕೆಯ ಅಭ್ಯಾಸ, ಆಕೆಯ ಸಾಧನೆ ಹೀಗೆ ಆಕೆಯ ವಿವಿಧ ಮಜಲುಗಳನ್ನು ಜಗತ್ತಿಗೆ ಪರಿಚಯಿಸಿತು.
ತನ್ನ ರಿಯಾಜ್ ಬಗ್ಗೆ ಮಾತನಾಡುತ್ತಾ ರಿಂಪಾ, ತಾನೆಂದೂ ಆಭ್ಯಾಸಕ್ಕೆ ಇಂತಿಷ್ಟೇ ಸಮಯವನ್ನು ಮೀಸಲಾಗಿಡಬೇಕು ಎಂದು ನಿರ್ಧರಿಸುವುದಿಲ್ಲ. ಸಮಯ ಸಿಕ್ಕಾಗಲೆಲ್ಲಾ ಒಂದೊಂದು ಆಭ್ಯಾಸವನ್ನು ಮಾಡುತ್ತಲೇ ಇರುತ್ತೇನೆ. ದೇಹಕ್ಕೆ ಉಸಿರಾಟ ಹೇಗೆ ಸಹಜ ಪ್ರಕ್ರಿಯೆಯೋ ಹಾಗೆಯೇ ನನ್ನ ಜೀವನದಲ್ಲಿ ತಬಲಾ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ತಬಲಾ ಅಭ್ಯಾಸ ಮಾಡುವಾಗ ನನ್ನನ್ನೇ ನಾನು ಮರೆತು ಹೋಗುವ ಕಾರಣ, ನಾನು ತಬಲಾ ಜೊತೆ ಎಷ್ಟು ಸಮಯ ಕಳೆದಿದ್ದೇನೆ ಎಂಬ ಲೆಕ್ಕವಿಡುವುದಿಲ್ಲ ಎಂದು ಮುಗ್ಧಳಾಗಿ ಹೇಳುತ್ತಾಳೆ.
ಸಣ್ಣ ವಯಸ್ಸಿನಿಂದಲೂ ತನ್ನ ಅಧ್ಭುತವಾದ ಪ್ರತಿಭೆಯಿಂದಾಗಿ ಜಗತ್ತಿನೆಲ್ಲೆಡೆ ತಬಲಾ ರಾಜಕುಮಾರಿ ಎಂದೇ ಗುರುತಿಸಿಕೊಳ್ಳುವ ರಿಂಪಾ ಬೆಂಗಳೂರಿನಲ್ಲಿಯೂ ಸಾಕಷ್ಟು ಬಾರಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅದರಲ್ಲೂ ಆಕೆಯ ಸೋಲೊ ವಾದನ ಅವರ ವಿಶೇಷವಾಗಿರುತ್ತದೆ. ಅದಲ್ಲದೇ ಪಂಡಿತ್ ಜಸ್‌ರಾಜ್ ಮತ್ತು ಪಂಡಿತ್ ಹರಿಪ್ರಸಾದ್ ಚೌರಾಸಿಯಾರಂತಹ ಸಂಗೀತ ದಿಗ್ಗಜರಿಗೂ ಆಕೆ ತಬಲಾದಲ್ಲಿ ಸಾಥ್ ನೀಡಿರುವುದು ರಿಂಪಾಳ ಹೆಗ್ಗಳಿಕೆ.
ಒಂದು ಹೆಣ್ಣಾಗಿ ತಬಲಾ ನುಡಿಸುವುದು ಕಷ್ಟವಾಗುವುದಿಲ್ಲವೇ ಎಂದು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಂಪಾ, ಹೆಣ್ಣಾಗಿ ತಬ್ಲಾ ಕಲಿಯುವುದು ಕಷ್ಟವೇನಲ್ಲ ಆದರೆ ಹೆಣ್ಣಾಗಿ ತಬಲಾ ನುಡಿಸುವ ಸಾಮರ್ಥ್ಯ ಮತ್ತು ಸ್ಥಿರೀಕರಣದ ಅಗತ್ಯವಂತೂ ಖಂಡಿತವಾಗಿಯೂ ಇರುತ್ತದೆ. ಹೆಣ್ಣು ಮಕ್ಕಳು ಹಾಡುವಾಗ ಮತ್ತು ಇತರೇ ಪಕ್ಕವಾದ್ಯಗಳನ್ನು ನುಡಿಸುವಾಗ ದೀರ್ಘಾವಧಿಯವರೆಗೆ ಹೇಗೆ ಕುಳಿತುಕೊಳ್ಳುತ್ತಾರೋ ಹಾಗೆಯೇ ನಮಗೂ ಸಹಾ ದೀರ್ಘಕಾಲ ಕೂರುವುದು ಸಮಸ್ಯೆಯಲ್ಲವದರೂ ಮಹಿಳೆಯರ ಬೆರಳುಗಳು ಸ್ವಲ್ಪ ಮೃದುವಾಗಿರುವ ಕಾರಣ ಸ್ವಲ್ಪ ಶ್ರಮ ಪಡಬೇಕಾಗುತ್ತದೆ. ಆದರೆ ತನ್ನ ತಬಲಾ ಪ್ರದರ್ಶನಗಳಿಗೆ ಪ್ರೇಕ್ಷಕರೂ ಸಹಾ ಅಷ್ಟೇ ಉತ್ಸಾಹದಿಂದ ತನ್ನನ್ನು ಹುರಿದುಂಬಿಸುವ ಕಾರಣ ತಾನು ಹೆಚ್ಚಿನ ರೀತಿಯಲ್ಲಿ ಪ್ರದರ್ಶನ ನೀಡಲು ಸಹಕಾರಿಯಾಗಿದೆ ಎನ್ನುತಾರೆ ರಿಂಪಾ.
ರಿಂಪಾಳಿಗೆ ಫರುಖಾಬಾದ್ ಘರಾನಾದೊಂದಿಗೆ ನಂಟಿರುವುದಲ್ಲದೇ, ಕೈದಾ, ಪೇಶ್ಕರ್ ಮತ್ತು ಗ್ಯಾಟ್ ನುಡಿಸುವುದರಲ್ಲಿಯೂ ಆಕೆಗೆ ಸಂತಸ ನೀಡುತ್ತದೆ. ಆಕೆಯ ಪ್ರಸ್ತುತ ಎಲ್ಲಾ ಸಾಧನೆಯ ಹಿಂದೆಯೇ ಆಕೆಯ ತಂದೆಯ ಪ್ರೇರಣೆಯೇ ಸಹಕಾರವಾಗಿದೆ. ಎಲ್ಲರೂ ಸ್ವಂತಿಕೆಯಿಂದ ಅಸಾಧಾರಣರಾಗಿರಲು ಪ್ರಯತ್ನಿಸಬೇಕೇ ಹೊರತು ಮತ್ತೊಬ್ಬರನ್ನು ನಕಲು ಮಾಡುವ ಮೂಲಕ ಪ್ರಖ್ಯಾತರಾಗಲು ಪ್ರಯತ್ನಿಸಬಾರದು ಎಂಬ ಆಕೆಯ ತಂದೆಯ ಮಾತನ್ನು ಸದಾಕಾಲವೂ ಮನಸ್ಸಿನಲ್ಲಿಯೇ ಇಟ್ಟು ಕೊಂಡಿರುವ ರಿಂಪಾ, ತನ್ನೀ ಸಾಧನೆಯಲ್ಲಿ ಯಾರನ್ನೂ ಅನುಕರಿಸದೇ, ಯಾರನ್ನೂ ಅನುಸರಿಸದೇ ತನ್ನದೇ ಆದ ವೈವಿಧ್ಯತೆಯನ್ನೇ ಇದುವರೆವಿಗೂ ಕಾಪಾಡಿಕೊಂಡು ಮುನ್ನೆಡೆಯುತ್ತಿರುವುದು ಆಕೆಯ ಸಾಮರ್ಥ್ಯದ ಕುರುಹಾಗಿದೆ.
ಕೆಲ ವರ್ಷದ ಹಿಂದೆ ಸಮಕಾಲೀನ ಮಹಿಳ ಸಂಗೀತ ಸಾಧಕರುಗಳನ್ನು ಒಟ್ಟು ಗೂಡಿಸಿ ತನ್ನದೇ ಆದ ನಾರಿ ಶಕ್ತಿ, ಆಲ್-ಲೇಡಿಸ್ ಬ್ಯಾಂಡ್ ಎಂಬುದನ್ನು ಪ್ರಾರಂಭಿಸಿ, ಸಹ ಕಲಾವಿದೆಯರು ಸಿತಾರ್ ಮತ್ತು ಇತರೇ ಪಕ್ಕವಾದ್ಯಗಳನ್ನು ನುಡಿಸುತ್ತಿದ್ದರೆ, ರಿಂಪಾ ಲೀಲಾಜಾಲವಾಗಿ ತನ್ನ ತಬಲಾದ ಮೂಲಕ ಎಲ್ಲರನ್ನೂ ಮುನ್ನಡೆಸುವುದನ್ನು ನೋಡುವುದಕ್ಕೇ ಮಹದಾನಂದವಾಗುತ್ತದೆ.
ಈ ರೀತಿಯಲ್ಲಿ ಸಂಗೀತ ಕ್ಷೇತ್ರದಲ್ಲಿ ಅದರಲ್ಲೂ ಪುರುಷ ಪ್ರಧಾನ ತಾಳವಾದ್ಯ ಕಲಾವಿದರುಗಳ ಮಧ್ಯೆ ಒಬ್ಬ ಮಹಿಳಾ ತಬಲಾವಾದಕಿಯಾಗಿ ರಿಂಪಾ ತನಗಾಗಿಯೇ ಒಂದು ವಿಶಿಷ್ಟವಾದ ಸ್ಥಾನಮಾನಗಳನ್ನು ತನ್ನ ಸ್ವಸಾಮರ್ಥ್ಯದಿಂದ ಗಳಿಸಿಕೊಂಡಿರುವ ಮೂಲಕ ಇತರೇ ಹೆಣ್ಣು ಮಕ್ಕಳಿಗೆ ಪ್ರೇರಣೆಯಾಗಿದ್ದಾಳೆ ಎಂದರೂ ತಪ್ಪಾಗಲಾರದು. ಹೆಂಗಸರು, ಗಂಡಸರಿಗಿಂತ ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದಾಳೆ ರಿಂಪಾ. ಅದಕ್ಕೇ ಅಲ್ವೇ ಹೇಳೋದು ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂದು
ಏನಂತೀರೀ?
ಓದಿ ತುಂಬಾ ಆನಂದವಾಯಿತು. ಇವರ ಪರಿಚಯ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.
LikeLiked by 1 person