ನಮ್ಮ ಹಿಂದೂಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಹುಟ್ಟಿದಾರಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಈ ಐದೂ ಋಣಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರವೇ ಅವರಿಗೆ ಅಂತಿಮವಾಗಿ ಸದ್ಗತಿ ದೊರೆಯುತ್ತದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಆ ಐದು ಋಣಗಳೆಂದರೆ, ದೇವಋಣ, ಋಷಿಋಣ, ಪಿತೃಋಣ, ಭೂತಋಣ ಮತ್ತು ಸಮಾಜಋಣ. ಈ ಐದು ಋಣಗಳಲ್ಲಿ ಪಿತೃಋಣವನ್ನು ತೀರಿಸುವ ಸಲುವಾಗಿ ಶ್ರಾಧ್ಧಕರ್ಮ ಮಾಡುವುದು ಆವಶ್ಯಕವಾಗಿದೆ.
ಈ ಭೂಮಿಯಲ್ಲಿ ನಮ್ಮ ಜನನಕ್ಕೆ ಕಾರಣೀಭೂತರಾದ ನಮ್ಮ ತಂದೆ ತಾಯಿಯರು ಮತ್ತು ನಮ್ಮ ವಂಶದವರಿಗೆ ಅವರಿಂದ ಪಡೆದ ಸಹಾಯಕ್ಕಾಗಿ ಯಥಾಶಕ್ತಿ ಕೃತಜ್ಞತೆಗಳನ್ನು ಸಲ್ಲಿಸುವ ಮಹಾಕಾರ್ಯವೇ ಶ್ರಾಧ್ಧ. ಹಾಗಾಗಿಯೇ ಇದನ್ನು ಯಜ್ಞವೆಂದೂ ಕರೆಯಲಾಗುತ್ತದೆ.
ತಂದೆ ತಾಯಿಯರು ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಲೆಂದು ಮಾಡುವ ಸಂಸ್ಕಾರಕ್ಕೇ ಶ್ರಾಧ್ಧ ಎನ್ನಲಾಗುತ್ತದೆ. ಈ ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರನ್ನು ಸಂತುಷ್ಟಗೊಳಿಸುವ ಮೂಲಕ ಅವರ ಅತೃಪ್ತವಾಗಿ ಉಳಿದಿದ್ದ ಆಸೆಗಳಿಗೆ ಮುಕ್ತಿಯನ್ನು ಕೊಡಬಹುದಾಗಿದೆ. ಪಿತೃಗಳು ಆತ್ಮಗಳು ಅತೃಪ್ತವಾಗಿಯೇ ಉಳಿದರೆ, ಆ ವಾಸನಾಯುಕ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗುತ್ತಾರೆ. ಈ ದುಷ್ಟ ಶಕ್ತಿಗಳು ವಾಸನಾಯುಕ್ತ ಪಿತೃಗಳ ಮೂಲಕ ತಮ್ಮ ಕುಟುಂಬದವರಿಗೆ ತೊಂದರೆಗಳನ್ನು ನೀಡುವ ಸಂಭವವೂ ಇರುವ ಕಾರಣ, ಶ್ರಧ್ಧೆಯಿಂದ ಶ್ರಾದ್ಧವನ್ನು ಮಾಡುವ ಮೂಲಕ ನಮ್ಮ ಪಿತೃಗಳನ್ನು ಆ ದುಷ್ಟ ಶಕ್ತಿಗಳಿಂದ ವಿಮುಕ್ತಿ ಗೊಳಿಸುವುವ ಮೂಲಕ ನಮ್ಮ ಇಡೀ ಕುಟುಂಬಕ್ಕೆ ನೆಮ್ಮದಿಯನ್ನು ತಂದು ಕೊಡಬಹುದೆಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.
ಇದನ್ನು ಇನ್ನೂ ಸರಳೀಕರಿಸಿ ಹೇಳ ಬೇಕೆಂದರೆ, ಶ್ರಾಧ್ಧ ಎನ್ನುವುದು ಸಂಸ್ಕೃತ ಶಬ್ದ. ಇದರರ್ಥ ನಂಬಿಕೆ, ಪ್ರಾಮಾಣಿಕತೆ ಮತ್ತು ವಿಶ್ವಾಸದಿಂದ ಮಾಡುವ ಕ್ರಿಯೆ ಎಂದರ್ಥ. ಹಾಗಾಗಿ ನಮ್ಮನ್ನಗಲಿದ ಪಿತ್ರುಗಳಿಗೆ ಮತ್ತು ಪೂರ್ವಜರಿಗೆ ಗೌರವಾರ್ಪಣೆ ಸಲ್ಲಿಸಲು ನಡೆಸುವ ಕ್ರಿಯಾವಿಧಿಯೇ ಶ್ರಾದ್ಧ. ಈ ಮೂಲಕ ನಮ್ಮನ್ನು ಹೆತ್ತವರಿಗೂ ಮತ್ತು ನಮ್ಮ ಪೂರ್ವಜರಿಗೂ ಹೃತ್ಪೂರ್ವಕವಾಗಿ ಕೃತಜ್ಞತೆ ಹಾಗು ವಂದನೆಗಳನ್ನು ವ್ಯಕ್ತಪಡಿಸಲು ನಮಗೆ ಇರುವ ಒಂದು ಸುಂದರ ಅವಕಾಶ ಎಂದರೂ ತಪ್ಪಾಗಲಾರದು. ನಾವು ಇಂದು ಏನಾಗಿದ್ದೇವೋ ಅದಕ್ಕೆ ಕಾರಣೀಭೂತರಾದವರಿಗೆ, ಪ್ರತಿವಂದನೆ ಸಲ್ಲಿಸುವ ಸುಸಂದರ್ಭವೇ ಶ್ರಾದ್ಧ.
ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅತ್ಯಂತ ಸರಳೀಕರಿಸಬೇಕೆಂದರೆ, ನಮ್ಮ ಒಂದು ವರುಷ ದೇವಾನುದೇವತೆಗಳಿಗೆ ಒಂದು ದಿವಸ. ಹಾಗಾಗಿ ನಾವು ಪ್ರತೀ ವರ್ಷವೂ ನಮ್ಮ ತಂದೆಯವರು ಮೃತರಾದ ತಿಥಿಯಂದು ನಮ್ಮ ತಂದೆ, ನಮ್ಮ ತಾತ ಮತ್ತು ಮುತ್ತಾತ ಮತ್ತು ತಾಯಿಯವರು ಮೃತರಾದ ತಿಥಿಯಂದು, ನಮ್ಮ ತಾಯಿ, ನಮ್ಮ ಅಜ್ಜಿ ಮತ್ತು ನಮ್ಮ ಮುತ್ತಜ್ಜಿಯವರನ್ನು ಬ್ರಾಹ್ಮಣರ ರೂಪದಲ್ಲಿ ಆಹ್ವಾನಿಸಿ ಆವರಿಗೆ ಭೋಜನವನ್ನು ಉಣಬಡಿಸಿ, ಯಥಾಶಕ್ತಿ ಧನಕನಕಗಳನ್ನು ನೀಡಿ ಸಂತೃಪ್ತಪಡಿಸಿ ಆ ಮೂಲಕ ನಮ್ಮ ಪುರ್ವಜರನ್ನು ಪ್ರತೀ ದಿನವೂ ಸಂತೃಪ್ತರನ್ನಾಗಿ ಮಾಡಿವ ಪ್ರಕ್ರಿಯೆಯೇ ಶ್ರಾದ್ಧ ಎಂದರೂ ತಪ್ಪಾಗಲಾರದು.
ಶ್ರದ್ದೆಯಿಂದ ಮಾಡುವ ಈ ಶ್ರಾದ್ದಕ್ರಿಯೆಯಲ್ಲಿ ಹಲವು ಕ್ರಮ ಇದೆ. ನಿತ್ಯ ಶ್ರಾದ್ದ, ಪಕ್ಷ ಶ್ರಾದ್ದ, ಮಾಸಿಕ ಶ್ರಾದ್ದ, ಸಂವತ್ಸರ ಶ್ರಾದ್ದಗಳಿವೆ. ಪೂರ್ವ ಷೋಡಶ, ಉತ್ತರ ಷೋಡಷ ಶ್ರಾದ್ದಗಳೂ ಇವೆ. ಅವರವರ ಅನುಕೂಲಕ್ಕೆ ತಕ್ಕಂತೆ ನಮ್ಮ ಜನನಕ್ಕೆ ಕಾರಣೀಭೂತರಾದವರಿಗೆ ನಮ್ಮ ದೇಹ ಇರುವವರೆಗೂ ಪಿತೃಋಣ ಸಂದಾಯಾರ್ಥವಾಗಿ ಶ್ರಾದ್ಧಕರ್ಮಗಳನ್ನು ತಪ್ಪಿಸದೇ ನಡೆಸಬೇಕು. ಇದನ್ನು ತರ್ಪಣ, ಪಿಂಡ ಪ್ರದಾನ, ಸಾಂವತ್ಸರಿಕ ಶ್ರಾದ್ಧ ಎಂದೂ ಕರೆಯಲಾಗುತ್ತದೆ
ಈಗಾಗಲೇ ತಿಳಿಸಿದಂತೆ ಶ್ರಾದ್ಧವನ್ನು ಯಜ್ಞಕಾರ್ಯವೆಂದೂ ಕರೆಯಲಾಗುವುದರಿಂದ ಮತ್ತು ಶ್ರದ್ಧೆಯಿಂದ ಮಾಡುವ ಕ್ರಿಯೆಯಾದ್ದರಿಂದ ಶ್ರಾದ್ಧದ ಕತೃವು ಹಿಂದಿನ ದಿನದಿಂದಲೇ ಮಾನಸಿಕವಾಗಿ ಸಿದ್ಧನಾಗಿ ಕೇವಲ ಒಂದು ಹೊತ್ತು ಊಟ ಮಾಡಿ ರಾತ್ರಿಯಿಂದಲೂ ಉಪವಾದದಲ್ಲಿರ ಬೇಕು. ಶ್ರಾದ್ಧ ಮಾಡುವ ದಿನವೂ ಸಹಾ ಬರೀ ಹೊಟ್ಟೆಯಲ್ಲಿ ತಲೆಗೆ ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿಯೇ ತನ್ನ ದಿನ ನಿತ್ಯದ ಪ್ರಾಥರ್ ಮತ್ತು ಮಾಧ್ಯಾನಿಕ ಸಂಧ್ಯಾವಂದನೆಯನ್ನು ಮುಗಿ ಮನೆ ದೇವರ ಪ್ರಾರ್ಥನೆಯನ್ನು ಮಾಡಿ, ನಂತರ ಶ್ರಾದ್ಧದ ಮಂತ್ರಗಳು ಮತ್ತು ಕ್ರಿಯಾವಿಧಿವಿದಾನಗಳು ಗೊತ್ತಿದ್ದಲ್ಲಿ ಖುದ್ದಾಗಿಯೂ ಇಲ್ಲವೇ ಆಚಾರ್ಯ ಮುಖೇನ ಬ್ರಾಹ್ಮಣರಲ್ಲಿ ತನ್ನ ಪೂರ್ವಜರನ್ನು ಆಹ್ವಾನಿಸಿ ಅವರಿಗೆ ಯಥಾಶಕ್ತಿ ಭಕ್ಷ ಭೋಜನಗಳನ್ನು ಬಡಿಸಿ, ಅಪರಕರ್ಮದ ವಿಧಿ ವಿಧಾನದಂತೆ ಪಿಂಡ ಪ್ರದಾನ ಮಾಡಿ ತರ್ಪಣವನ್ನು ಬಿಡಬೇಕು. ನಂತರ ಶ್ರಾದ್ಧವನ್ನು ಮಾಡಿಸಿದವಿಗೂ ಮತ್ತು ಬಂದ ಬ್ರಾಹ್ಮಣ ಮುತ್ತೈದಯರಿಗೆ ಯಥಾ ಶಕ್ತಿ ಧನಕನಗಳ ಸತ್ಕಾರವನ್ನು ಮಾಡುವ ಮೂಲಕ ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ ತಾಯಿಗಳಿಗೆ ತೃಪ್ತಿ ಆಗುವಂತೆ ಮಾಡಬೇಕು,
ಈ ಶ್ರಾದ್ಧದ ಸಮಯದಲ್ಲಿ ಒಂದು ಪಿಂಡವನ್ನು ಕಾಗೆಗಳಿಗೂ ಮತ್ತು ಶ್ರಾದ್ಧ ಮುಗಿದ ನಂತರ ಉಳಿದ ಮೂರು ಪಿಂಡಗಳನ್ನು ಜಲಜರಗಳಿಗೆ ಆಹಾರವಾಗುವಂತೆ ನದೀ ಅಥವಾ ಹಳ್ಳ ಕೊಳ್ಳಗಳಲ್ಲಿಯೂ ಅದು ಸಾಧ್ಯವಾಗದಿದ್ದಲ್ಲಿ, ಗೋವುಗಳಿಗೆ ತಿನ್ನಿಸುವ ಮೂಲಕವೂ ಅದೂ ಆಗದಿದ್ದಲ್ಲಿ ಮನೆಯ ಮುಂದಿನ ಜಾಗದಲ್ಲಿ ಹಳ್ಳವನ್ನು ಮಾಡಿ ಅದರಲ್ಲಿ ಈ ಪಿಂಡಗಳನ್ನು ಹೂಳುವ ಮೂಲಕ ಭೂಮಿಯಲ್ಲಿರುವ ಕ್ರಿಮಿಕೀಟಗಳಿಗಾದರೂ ಆಹಾರವಾಗುವಂತೆ ನೋಡಿಕೊಳ್ಳಬೇಕು
ಇದಾದ ನಂತರ ಬಂದ ಕುಟುಂಬಸ್ಥರೊಡನೆ ಪ್ರಸಾದ ರೂಪದಲ್ಲಿ ಮಾಡಿದ್ದ ಭಕ್ಷಗಳನ್ನು ಸ್ವೀಕರಿಸಿ ಎಲ್ಲರೊಡನೆ ಊಟವನ್ನು ಮಾಡುವುದು ರೂಢಿಯಲ್ಲಿರುವ ಸಂಪ್ರದಾಯವಾಗಿದೆ. ಈ ರೀತಿ ವರ್ಷಕ್ಕೊಮ್ಮೆಯಾದರೂ ಅಗಲಿದ ಹಿರಿಯರ ನೆನಪು ಮಾಡಿಕೊಳ್ಳುವ ಸಲುವಾಗಿ ಕುಟುಂಬದ ಎಲ್ಲಾ ಸದಸ್ಯರೂ ಒಂದು ಕಡೆ ಸೇರುವಂತೆ ಮಾಡುವ ಅಧ್ಭುತ ಕಾರ್ಯವೇ ಶ್ರಾದ್ಧ.
ಇನ್ನು ಶ್ರಾದ್ಧದ ಊಟದಲ್ಲಿ ಪಲ್ಯ, ಕೋಸಂಬರಿ, ಸಾರು, ಹುಳಿ, ವಡೆ ಮತ್ತು ಪಾಯಸ ಖಡ್ಡಾಯವಾದರೆ, ಅವರವರ ಮನೆಗಳ ಸಂಪ್ರದಾಯದಂತೆ ಆಂಬೋಡೆ ಮತ್ತು ಮೃತರ ಇಚ್ಚೆಯಂತೆ ಭಕ್ಷಗಳಾದ ರವೇ ಉಂಡೆ, ಸಜ್ಜಪ್ಪ, ಸುಕ್ಕಿನುಂಡೆ, ಎರೆಯಪ್ಪಗಳನ್ನು ಮಾಡಿಸುವುದು ರೂಢಿಯಲ್ಲಿದೆ. ಎಂದಿನ ದಿನಕ್ಕಿಂತಲೂ ಆ ದಿನ ಭೂರೀ ಭೋಜನವಾಗಿರುವ ಕಾರಣ ಶ್ರಾದ್ಧ ಮಾಡಿದ ಕತೃ ಮತ್ತು ಶ್ರಾದ್ಧದಲ್ಲಿ ಬ್ರಾಹ್ಮಣಾರ್ಥಕ್ಕೆ ಕುಳಿತಿದ್ದವರಿಗೆ ರಾತ್ರಿಯ ಊಟ ನಿಶಿದ್ಧವಾಗಿದೆ. ಈ ಮೂಲಕ ದೇಹದ ಪಚನಕ್ರಿಯೆಗೆ ಸಹಾಯವಾಗುವುದನ್ನು ನಮ್ಮ ಹಿರಿಯರು ಶಾಸ್ತ್ರದ ಮುಖಾಂತರ ರೂಢಿಗೆ ತಂದು ಆರೋಗ್ಯವನ್ನು ಕಾಪಾಡುವುದರಲ್ಲಿ ಎಚ್ಚರಿಕೆ ವಹಿಸಿದ್ದಾರೆ.
ಇಂತಹ ಶ್ರಾದ್ಧ ವಿಧಿಯನ್ನು ಒಂದು ವಿಶಿಷ್ಟ ಕಾಲದಲ್ಲಿ ಮತ್ತು ನಿಖರವಾದ ವಿಧಿ ವಿಧಾನಗಳಂತೆ ಮಾಡಲು ಸಾಧ್ಯವಾಗದ ಕಾರಣ ಶ್ರಾದ್ಧವನ್ನು ಮಾಡಲಿಲ್ಲ ಎಂದು ಯಾರೂ ಸಬೂಬು ಹೇಳದಂತೆ ಮಾಡಲು ಅನೇಕ ಪರಿಹಾರಗಳನ್ನು ನಮ್ಮ ಶಾಸ್ತ್ರದಲ್ಲಿ ತಿಳಿಸಲಾಗಿದೆ.
- ಈಗಾಗಲೇ ವಿವರಿಸಿದಂತೆ ಪ್ರತಿವರ್ಷವೂ ನಮ್ಮ ಮಾತಾ ಪಿತೃಗಳು ಹಿಂದೂ ಪಂಚಾಗದ ಪ್ರಕಾರ ಮರಣ ಹೊಂದಿದ ತಿಥಿಯ ದಿನ ಶ್ರಾದ್ಧವನ್ನು ಮಾಡುವುದು ಸಂಪ್ರದಾಯ.
- ಒಂದು ಪಕ್ಷ ಮೃತರ ತಿಥಿಯ ಅರಿವಿಲ್ಲದೇ, ಮೃತಪಟ್ಟ ತಿಂಗಳು ಮಾತ್ರವೇ ಗೊತ್ತಿದ್ದಲ್ಲಿ ಆ ತಿಂಗಳ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬಹುದಾಗಿದೆ.
- ಮೃತರ ತಿಥಿ ಮತ್ತು ತಿಂಗಳು ಎರಡೂ ಗೊತ್ತಿಲ್ಲದಿದ್ದಲ್ಲಿ ಮಾಘ ಅಥವಾ ಮಾರ್ಗಶಿರ ಮಾಸದ ಅಮಾವಾಸ್ಯೆಗೆ ಶ್ರಾದ್ಧವನ್ನು ಮಾಡಬಹುದಾಗಿದೆ.
- ನಿಶ್ಚಿತವಾಗಿ ಮರಣದ ತಿಥಿಯು ಗೊತ್ತಿಲ್ಲದೇ. ದೂರದಲ್ಲೆಲ್ಲೋ ಸತ್ತು ಹೊಗಿದ್ದಲ್ಲಿ ಮರಣದ ವಾರ್ತೆಯು ತಿಳಿದ ದಿನದಂದೇ ಶ್ರಾದ್ಧವನ್ನು ಮಾಡಬಹುದಾಗಿದೆ.
ಇದು ಯಾವುದೂ ತಿಳಿಯದಿದ್ದ ಪಕ್ಷದಲ್ಲಿ ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ಪಿತೃಪಕ್ಷ ಎಂದು ಕರೆಯಲಾಗುವ ಈ ಹದಿನೈದು ದಿನಗಳಲ್ಲಿ ತಮ್ಮ ಅನುಕೂಲದ ಪ್ರಕಾರ ನಮ್ಮ ಕುಲದ ಎಲ್ಲ ಪಿತೃಗಳೂ ಸೇರಿದಂತೆ ನಮ್ಮನ್ನಗಲಿದ ನಮ್ಮ ಆಪ್ತರು, ಬಂಧು-ಮಿತ್ರರು ಮತ್ತು ಸಾಕುಪ್ರಾಣಿಗಳಿಗೂ ತರ್ಪಣ ಕೊಡುವ ಮೂಲಕ ಶ್ರಾದ್ಧವನ್ನು ಮಾಡಬಹುದಾಗಿದೆ. ಅದೂ ಸಾಧ್ಯವಾಗದಿದ್ದಲ್ಲಿ ಪಿತೃಪಕ್ಷದ ಅಮಾವಾಸ್ಯೆಯಂದು ಶ್ರಾದ್ಧ ಮಾಡಲು ಹೆಚ್ಚು ಯೋಗ್ಯವಾದ ತಿಥಿಯಾಗಿದೆ ಮತ್ತು ಪಿತೃಪಕ್ಷದ ಅಮಾವಾಸ್ಯೆಯು ಎಲ್ಲಕ್ಕಿಂತಲೂ ಹೆಚ್ಚು ಸೂಕ್ತವಾದ ತಿಥಿಯಾಗಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿರುವ ಕಾರಣದಿಂದ ಈ ಅಮಾವಾಸ್ಯೆಯನ್ನು ಮಹಾಲಯ ಅಮವಾಸ್ಯೆ ಅಥವಾ ಸರ್ವಪಿತ್ರೀ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
- ಇನ್ನು ವಿಧಿವತ್ತಾಗಿ ಆಚಾರ್ಯ ಮುಖೇನ ಬ್ರಾಹ್ಮಣರು ಮತ್ತು ಬಂಧುಗಳ ಸಮ್ಮುಖದಲ್ಲಿ ಶ್ರಾದ್ಧವನ್ನು ಮಾಡಲಾಗದಿದ್ದಲ್ಲಿ, ಒಬ್ಬ ಬ್ರಾಹ್ಮಣರಿಗೆ ಅವರ ಒಂದು ದಿನಕ್ಕೆ ಬೇಕಾಗುವಷ್ಟು ಅಕ್ಕಿ, ಬೇಳೆ, ಬೆಲ್ಲ, ಹಾಲು, ಮೊಸರು, ತುಪ್ಪಾ ಮತ್ತು ತರಕಾರಿಗಳ ಜೊತೆ ಯಥಾ ಶಕ್ತಿ ದಕ್ಷಿಣೆಯ ಸ್ವಯಂಪಾಕ ನೀಡುವ ಮೂಲಕವೂ ಶ್ರಾದ್ಧವನ್ನು ಮಾಡಬಹುದಾಗಿದೆ
- ಸ್ವಯಂ ಪಾಕವನ್ನೂ ನೀಡಲು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ಒಂದು ಹಸುವಿಗೆ ಅಕ್ಕಿ, ಬೆಲ್ಲ ಮತ್ತು ಹಣ್ಣುಗಳನ್ನು ನೀಡುವ ಮೂಲಕವೂ ಪಿತೃಗಳ ಋಣ ಸಂದಾಯ ಮಾಡಬಹುದಾಗಿದೆ.
- ಗೋವುಗಳಿಗೆ ಕೊಡುವಷ್ಟೂ ಆರ್ಥಿಕವಾಗಿ ಸಧೃಡರಾಗಿಲ್ಲದಿದ್ದ ಪಕ್ಷದಲ್ಲಿ ಹತ್ತಿರದ ಅರಳೀ ಮರಕ್ಕೆ ಶ್ರದ್ಧೆಯಿಂದ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿಯಿಂದ ಅರಳೀ ಮರವನ್ನು ತಬ್ಬಿಕೊಂಡು ಭಗವಂತ ಆರ್ಥಿಕವಾಗಿ ಸಧೃಡನಾಗಿಲ್ಲದ ಕಾರಣ ನಮ್ಮ ಪಿತೃಗಳನ್ನು ಸಂಪ್ರೀತಗೊಳಿಸಲು ಸಾಧ್ಯವಾಗದ ಕಾರಣ ನಿನ್ನಲ್ಲಿ ಶರಣಾಗತಿ ಬಯಸುತ್ತಿದ್ದೇನೆ. ದಯವಿಟ್ಟು ಇದನ್ನು ಮನ್ನಿಸಿ ನಮ್ಮ ಪಿತೃಗಳನ್ನು ಸಂಪನ್ನಗೊಳಿಸು ಎಂದು ಬೇಡಿ ಕೊಳ್ಳುವ ಮೂಲಕವೂ ಶ್ರಾಧ್ಧವನ್ನುಆಚರಿಸಬಹುದಾಗಿದೆ.
ಮೇಲೆ ತಿಳಿಸಿದ ಯಾವುದೇ ರೀತಿಯಲ್ಲು ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಕನಿಷ್ಟ ಪಕ್ಷ ಹತ್ತಿರದ ನದಿ, ಹಳ್ಳ ಕೊಳ್ಳಗಳು ಅದೂ ಇಲ್ಲದಿದ್ದಲ್ಲಿ ಮನೆಯಲ್ಲಿಯೇ ಶುದ್ಧವಾಗಿ ಸ್ನಾನ ಮಾಡಿ ಆತ್ಮಶುದ್ಧಿಯಿಂದ ಪೂರ್ವಜರನ್ನು ನೆನಸಿಕೊಂಡು ಪೂರ್ವಾಭಿಕವಾಗಿ ಮೂರು ಬಾರಿ ಅರ್ಘ್ಯ ನೀಡುವ ಮೂಲಕವೂ ಶ್ರಾಧ್ಧವನ್ನು ಮಾಡಬಹುದಾಗಿದೆ.
ಶ್ರಧ್ದೆಯಿಂದ ಶ್ರಾದ್ಧವನ್ನು ಮಾಡುವುದರಿಂದ ಯಾವ ಫಲಪ್ರಾಪ್ತಿಯಾಗುತ್ತದೆ ಎಂಬುದರ ಬಗ್ಗೆ ಗರುಡಪುರಾಣದ ಗರುಡಪುರಾಣ, ಅಂಶ-2 , ಅಧ್ಯಾಯ-10, ಶ್ಲೋಕ-57ರಲ್ಲಿ ಈ ರೀತಿಯಾಗಿ ಹೇಳಲಾಗಿದೆ
ಆಯುಃ ಪುತ್ರಾನ್ ಯಶಃ ಸ್ವರ್ಗಂ ಕೀರ್ತಿಂ ಪುಷ್ಟಿಂ ಬಲಂ ಶ್ರಿಯಮ್ |
ಪಶುನ್ ಸೌಖ್ಯಂ ಧನಂ ಧಾನ್ಯಂ ಪ್ರಾಪ್ನುಯಾತ್ ಪಿತೃಪೂಜನಾತ್ |
ಇದರ ಅರ್ಥ: ಶ್ರಧ್ದಾ ಭಕ್ತಿಯಿಂದ ಪಿತೃಪೂಜೆಯನ್ನು ಶ್ರಾಧ್ಧದ ಮೂಲಕ ಮಾಡುವುದರಿಂದ ಆಯುಷ್ಯ, ಪುತ್ರ, ಯಶಸ್ಸು, ಸ್ವರ್ಗ, ಕೀರ್ತಿ, ಪುಷ್ಠಿ, ಬಲ, ಲಕ್ಷ್ಮೀ, ಪಶು, ಸೌಖ್ಯ, ಧನ, ಧಾನ್ಯಗಳು ಲಭಿಸುತ್ತವೆ.
ಇದಲ್ಲದೇ, ಶ್ರಧ್ಧೆಯಿಂದ ಶ್ರಾಧ್ಧ ಮಾಡುವ ಮೂಲಕ, ಶರೀರ, ಮನಸ್ಸು ಮತ್ತು ವಂಶ ಎಲ್ಲವೂ ಶುದ್ಧವಾಗುವ ಕಾರಣ, ಶ್ರಾದ್ಧ ಮಾಡುವುದು ಪ್ರತೀ ಕರ್ತೃವಿನ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಯಾವ ಕಾರಣಕ್ಕೂ ಈ ಪವಿತ್ರ ಕಾರ್ಯವನ್ನು ಬಿಡದೇ ಮೇಲೆ ತಿಳಿಸಿದ ಯಾವಾದಾದರೂ ಒಂದು ರೀತಿಯಲ್ಲಿ ಮಾಡಲೇ ಬೇಕು ಎಂದು ನಮ್ಮ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
ಹೀಗೆ ಶ್ರಾಧ್ಧ ಸಂಪೂರ್ಣ ವಿಚಾರವನ್ನು ನಾವೆಲ್ಲರೂ ಮನದಟ್ಟು ಮಾಡಿಕೊಂಡು, ಕುಟುಂಬಸ್ಥರೊಡನೆ ಸೇರೀ, ಶ್ರಧ್ಧಾ ಭಕ್ತಿಗಳಿಂದ ಆಚರಿಸುವ ಮೂಲಕ ನಮ್ಮ ಹಿರಿಯರ ಆಶೀರ್ವಾದಗಳಿಗೆ ಪಾತ್ರರಾಗೋಣ.
ಕಡೆಯ ಮಾತು : ಹೆತ್ತವರು ಬದುಕಿದ್ದಾಗ ಸರಿಯಾಗಿ ನೋಡಿ ಕೊಳ್ಳದೇ, ಸತ್ತಾಗ ಅತ್ತೂ ಕರೆದು, ನೂರಾರು ಜನರನ್ನು ಕರೆಸಿ ಭಕ್ಷ ಭೋಜನಗಳನ್ನು ಹಾಕಿಸಿದರೆ ಎದ್ದು ಬರುವವರೇ, ಹೆತ್ತವರು.
ಏನಂತೀರೀ?
Thumba vishaya tiliyuthu
LikeLike