2014ರ ಐಪಿಲ್ ಹರಾಜು ಪ್ರಕ್ರಿಯೆಯಲ್ಲಿ ಹರಿಯಾಣದ ಫರೀದಾಬಾದಿನ 21 ವಯಸ್ಸಿನ ಅಷ್ಟೇನು ಖ್ಯಾತನಾಗಿರದಿದ್ದ ಆಲ್ರೌಂಡರ್ ರಾಹುಲ್ ತೆವಾಟಿಯಾ ಎಂಬ ಯುವಕನನ್ನು ಮೂಲ ಬೆಲೆಯಾದ 10 ಲಕ್ಷಗಳಿಗೆ ರಾಜಸ್ಥಾನ್ ರಾಯಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸುಮಾರು ಮೂರು ವರ್ಷಗಳ ಕಾಲ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನು ಆಡಿಸಿ ಡಗ್ ಔಟಿನಲ್ಲಿ ನೀರನ್ನು ಹೊತ್ತು ತರಲು ಬಳಸಿಕೊಳ್ಳುತ್ತದೆ. 2017ರಲ್ಲಿ ರಾಜಸ್ಥಾನ್ ತಂಡದಿಂದ ಹೊರಬಿದ್ದು ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾದರೂ ಹೆಚ್ಚಿನ ಬದಲಾವಣೆ ಇಲ್ಲದೇ ಒಂದೇ ವರ್ಷಕ್ಕೆ ಅವರನ್ನು ಕೈಬಿಟ್ಟಿತ್ತು.
2018ರ ಹರಾಜಿನಲ್ಲಿ 24 ವರ್ಷದ ಲೆಗ್ ಸ್ಪಿನ್ನರ್ ರಾಹುಲ್ ತೆವಾಟಿಯಾ ಮೂಲ ಬೆಲೆ ಕೇವಲ 10 ಲಕ್ಷ ರೂ.ಗಳಿಗೆ ಆರಂಭವಾಗಿ ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ನಿಮಿಷಗಳಲ್ಲಿ ಅವರ ಬೆಲೆ 2.5 ಕೋಟಿ ರೂ.ಗೆ ಏರುತ್ತದೆ. ಅಷ್ಟು ಕೊಡಲು ಸಾಧ್ಯವಿಲ್ಲವೋ ಅಥವಾ ಅಷ್ಟೊಂದು ಹಣಕ್ಕೆ ಅವರು ಅರ್ಹರಲ್ಲವೋ ಎನುವಂತೆ ಕಿಂಗ್ಸ್ 11 ಪಂಜಾಬ್ ಅವರನ್ನು ಕೈಬಿಟ್ಟ ಕಾರಣ ಲೆಗ್ ಸ್ಪಿನ್ ಬೋಲಿಂಗ್ ಅಲ್ಲದೇ ಕೆಳ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಬಲ್ಲರು ಎಂಬ ಕಾರಣದಿಂದ ದೆಹಲಿ ಡೇರ್‌ಡೆವಿಲ್ಸ್ ತಂಡ ಅವರನ್ನು 3 ಕೋಟಿಗಳಿಗೆ ಖರೀದಿಸುತ್ತದೆ.
ಅದೃಷ್ಟ ತನ್ನ ಪರವಾಗಿಲ್ಲದಿದ್ದರೇ ಏನು ತಾನೇ ಮಾಡಲು ಸಾಧ್ಯ ಎನ್ನುವಂತೆ, ಅಮಿತ್ ಮಿಶ್ರಾರಂತಹ ಹಿರಿಯ ಅನುಭವಿ ಲೆಗ್ ಸ್ಪಿನ್ನರ್ ಅದಾಗಲೇ ದೆಹಲಿಯ ತಂಡದಲ್ಲಿದ್ದ ಕಾರಣ ಮತ್ತೆ ರಾಹುಲ್ ತೆವಾಟಿಯಾ ಅವರಿಗೆ ತಂಡದ 11ರ ಬಳಗದಲ್ಲಿ ಸೂಕ್ತ ಸ್ಥಾನ ಸಿಗುವುದಿಲ್ಲ. ಸಿಕ್ಕ ಒಂದೆರಡು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲವಾದ ಕಾರಣ ಮತ್ತೆ 2019ರ ಹರಾಜಿಯಲ್ಲಿ ಭಾಗವಹಿಸಿ, ತಮ್ಮ ಮೊದಲ ತಂಡವಾದ ರಾಜಸ್ಥಾನದ ಪಾಲಾಗಿ ಅದ್ಭುತವಾದ ಓಹೋ ಎನ್ನುವಂತಹ ಪ್ರದರ್ಶನವಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡಿದ ಕಾರಣ 2020ರಲ್ಲೂ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿ ಮುಂದುವರೆಯುತ್ತಾರೆ.
ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್-13ನೇ ಆವೃತ್ತಿಯಲ್ಲಿ ರಾಜಸ್ಥಾನ್ ತಂಡದ ಪ್ರಮುಖ ಆಟಗಾರನಾಗುವುದರಲ್ಲಿ ಯಶಸ್ವಿಯಾಗಿ, ಚನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ 3 ವಿಕೆಟ್ ಪಡೆಯುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಎಲ್ಲರೂ ವಿಕೆಟ್ ಪಡೆದಾಗ ಆರ್ಭಟಿಸಿದರೆ ಈತ ಮಾತ್ರ ತನ್ನೆರಡೂ ಕಿವಿಯನ್ನು ಹಿಡಿದುಕೊಂಡು ಸಂಭ್ರಮಿಸುವ ಪರಿ ಆಶ್ಚರ್ಯಕರವಾಗಿದೆ.
ಇನ್ನು ಎರಡನೇ ಪಂದ್ಯ, ತಮಗೆ 2.5 ಕೋಟಿ ಕೊಟ್ಟು ತೆಗೆದುಕೊಳ್ಳುವಷ್ಟು ಅರ್ಹರಲ್ಲ ಎಂಬ ಕಾರಣದಿಂದಾಗಿ ಕೈಬಿಟ್ಟ ಕಿಂಗ್ಸ್ 11 ಪಂಜಾಬ್ ವಿರುದ್ಧದ ಪಂದ್ಯವಾಗಿರುತ್ತದೆ. ಆ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಅಬ್ಬರಕ್ಕೆ ಸಿಲುಕಿ ಮೊದಲ ಓವರಿನಲ್ಲಿಯೇ 19 ರನ್ಗಳನ್ನು ಚಚ್ಚಸಿಕೊಂಡ ನಂತರ ಬೋಲಿಂಗ್ ಮಾಡುವ ಅವಕಾಶವೇ ಸಿಗದೇ ಪಂಜಾಬ್ ತಂಡ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದಾಗ ಬಹುತೇಕರು ಪಂದ್ಯ ರಾಜಸ್ಥಾನ್ ತಂಡದ ಕೈಬಿಟ್ಟಿತು ಎಂದೇ ಭಾವಿಸಿರುತ್ತಾರೆ.
ನಾಯಕ ಸ್ಮಿತ್ ಮತ್ತು ಸಂಜು ಸಾಂಸ್ಯನ್ ಭರ್ಜರಿಯ ಬ್ಯಾಟಿಂಗ್ ಮೂಲಕ ಉತ್ತಮ ರನ್ ಗಳಿಸಿ, ಕಡೆಯ ಮೂರು ಓವರುಗಳಲ್ಲಿ ರಾಜಸ್ಥಾನ್ ತಂಡಕ್ಕೆ ಗೆಲ್ಲಲು ಕೊನೆಯ ಮೂರು ಓವರ್ಗಳಲ್ಲಿ ರಾಜಸ್ಥಾನಕ್ಕೆ 51 ರನ್ಗಳನ್ನು ಬೇಕಿರುತ್ತದೆ. ಅಲ್ಲಿಯವರೆಗೂ 19 ಎಸತಗಳನ್ನು ಎದುರಿಸಿ ಕೇವಲ 8 ರನ್ಗಳನ್ನು ಗಳಿಸಿದ್ದ ತೆವಾಟಿಯಾನನ್ನು ಎಲ್ಲರೂ ಹಳಿದುಕೊಳ್ಳುತ್ತಿರುವಾಗಲೇ, ಇದ್ದಕ್ಕಿದ್ದಂತೆಯೇ 18ನೇ ಓವರ್ನಲ್ಲಿ ಶೆಲ್ಡನ್ ಕೋರ್ಟೇಲ್ ಬೋಲಿಂಗಿನಲ್ಲಿ ಮೊದಲ ನಾಲ್ಕು ಎಸತಗಳನ್ನು ಭರ್ಜರಿಯಾಗಿ ಸಿಕ್ಸರ್ ಬಾರಿಸಿದ್ದಲ್ಲದೇ ಮತ್ತೇ ಆರನೇ ಎಸೆತವನ್ನೂ ಮತ್ತೊಮ್ಮೆ ಸಿಕ್ಸರ್ ಹೀಗೆ 6,6,6,6,6,0,6 ಎತ್ತಿದ್ದಲ್ಲದೇ, ನಂತರ ಕೇವಲ 11 ಬಾಲ್ಗಳಲ್ಲಿ ಅರ್ಧಶತಕ ಪೂರೈಸುತ್ತಾರೆ. ಒಟ್ಟು 7 ಭರ್ಜರಿ ಸಿಕ್ಸರ್ ಗಳೊಂದಿಗೆ 31 ಎಸತೆಗಳಲ್ಲಿ 53ರನ್ ಸಿಡಿಸುವ ಮೂಲಕ ರಾಜಸ್ಥಾನ ತಂಡ ದಾಖಲೆಯ ಮೊತ್ತವನ್ನು ಇನ್ನೂ 3 ಎಸೆತಗಳು ಇರುವಂತೆಯೇ ಗಳಿಸುವ ಮೂಲಕ ಗೆಲುವಿನ ದಡ ತಲುಪಿಸಿದ್ದಲ್ಲದೇ ಕೈಜಾರುತ್ತಿದ್ದ ಪಂದ್ಯದ ಗತಿಯನ್ನೇ ಬದಲಿಸಿದ ರಾಹುಲ್ ತೆವಾಟಿಯಾ ಹೀರೋ ಎನಿಸಿಕೊಳ್ಳುತ್ತಾರೆ.
ಈ ಮೂಲಕ ನಾನು ತೆವಾಟಿಯಾ ನನ್ನನ್ನೇ ತಂಡದಿಂದ ಕೈ ಬಿಟ್ಟೆಯಾ? ಎನ್ನುವಂತೆ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದ ಮತ್ತು ತಮ್ಮ ಸಾಮರ್ಥ್ಯವನ್ನು ಹೀನಾಯವಾಗಿ ಅಂದಾಜು ಮಾಡಿದ್ದ ಪಂಜಾಬ್ ತಂಡದವರ ಎದುರೇ ಭರ್ಜರಿಯಾಗಿ ಪ್ರದರ್ಶನ ನೀಡುವ ಮೂಲಕ ದ್ವೇಷವನ್ನು ತೀರಿಸಿಕೊಂಡಿದ್ದಾರೆ ಎನ್ನುವುದಕ್ಕಿಂತಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದರೆ ತಪ್ಪಾಗಲಾರದು. ಮೊದಲು ಎಚ್ಚರಿಕೆಯ ಆಟವಾಡಿ, ಕೊನೆಯ ಮೂರು ಓವರ್ಗಳಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುವ ಮೂಲಕ ಸೋಲಿನ ಸುಳಿಯಲ್ಲಿದ್ದ ರಾಜಸ್ಥಾನ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ ಈ ಯುವ ಆಟಗಾರ ರಾಹುಲ್ ತೆವಾಟಿಯಾನ ಆಟ ಎಲ್ಲರನ್ನೂ ಮೋಡಿ ಮಾಡಿದ್ದಲ್ಲದೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಅವಶ್ಯಕವಾಗಿರುವ ಒಬ್ಬ ಸಮರ್ಥ ಆಲ್ರೌಂಡರ್ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ತಮಗಿದೆ ಎಂಬುದನ್ನು ಸಾಭೀತು ಪಡಿಸಿದ್ದಾರೆ.
ಕಾಕತಾಳೀಯವೆಂದರೆ, ಹೆಸರಿಗೆ ಪಂಜಾಜ್ ತಂಡವಾದರೂ ಕರ್ನಾಟಕದವರೇ ಹೆಚ್ಚಾಗಿರುವ ತಂಡ ವಿರುದ್ಧ ಹೀರೋ ಎನಿಸಿಕೊಂಡ ರಾಹುಲ್ ತೆವಾಟಿಯಾ ಹರ್ಯಾಣದ ಪರವಾಗಿ 2013 ರಲ್ಲಿ ಕರ್ನಾಟಕದ ವಿರುದ್ಧವೇ ರಣಜಿ ಟ್ರೋಫಿ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದ್ದಾರೆ. ಸಾಂಪ್ರದಾಯಿಕವಾದ ಶೈಲಿಯ ಲೆಗ್ ಸ್ಪಿನ್ನರ್, ಚೆಂಡನ್ನು ಹಾರಿಸುವುದಕ್ಕಿಂತಲೂ ಗಾಳಿಯಲ್ಲಿ ತೇಲೀಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದು ದಾಂಡಿಗರಿಗೆ ದುಃಸ್ವಪ್ನವಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ.
ಅದಕ್ಕೇ ಹೇಳೋದು ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಯಾರಿಗೆ ಗೊತ್ತು? ಹಾಗಾಗಿ ಯಾರ ಸಾಮರ್ಥ್ಯ ಎಲ್ಲಿ ಮತ್ತು ಹೇಗೆ ಪ್ರಕಟವಾಗುತ್ತದೆಯೋ ಯಾರು ಬಲ್ಲರು? ರಾಹುಲ್ ತೆವಾಟಿಯಾ ಅವರ ಈ ಪ್ರದರ್ಶನ ಅದಕ್ಕೊಂದು ಉತ್ತಮ ಉದಾರಣೆ. ಅದಕ್ಕಾಗಿಯೇ ಯಾರನ್ನು ಕಡಿಮೆ ಅಂದಾಜು ಮಾಡಬಾರದು ಅಲ್ವೇ?
ಏನಂತೀರೀ?