ನಾವೆಲ್ಲರೂ, ಗೋದಾನ, ಭೂದಾನ, ಸುವರ್ಣದಾನ, ರತ್ನದಾನ ಕಡೆಗೆ ಅನ್ನದಾನ ಮತ್ತು ರಕ್ತದಾನವನ್ನು ಕೇಳಿದ್ದೇವೆ. ಅರೇ, ಇದೇನಿದು ಅಪೂಪ ದಾನ? ಅಂತ ಆಶ್ಚರ್ಯ ಪಡ್ತಾ ಇದ್ದೀರಾ? ಹೌದು ಈ ರೀತಿಯಾದ ಅಪರೂಪದ ಅಪೂಪ ದಾನವನ್ನು ಎಲ್ಲಾ ಸಮಯದಲ್ಲಿಯೂ ಕೊಡಲು ಬರುವುದಿಲ್ಲ. ಇದು ಕೇವಲ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕಮಾಸದಲ್ಲಿ ಮಾತ್ರವೇ ಕೊಡುವಂತಹ ಅನುರೂಪದ ದಾನವೇ ಅಪೂಪ ದಾನ. ಹಾಗಾದ್ರೇ ಅಪೂಪ ದಾನ ಅಂದ್ರೆ ಏನು? ಅಧಿಕ ಮಾಸ ಅಂದ್ರೇ ಏನು? ಅದು ಹೇಗೆ ಬರುತ್ತದೆ? ಮತ್ತು ಅದರ ಮಹತ್ವ ಮತ್ತು ಆ ಮಾಸಾಚರಣೆಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಯಾವ ಚಾಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಇರುವುದಿಲ್ಲವೋ ಆ ಮಾಸವನ್ನು ಅಧಿಕ ಮಾಸವೆಂದು ಪರಿಗಣಿಸಲಾಗುತ್ತದೆ. ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ವಶಿಷ್ಟ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ.
ಅಧಿಕಮಾಸವು ಸಹ ಖಗೋಳ ಶಾಸ್ತ್ರ ಮತ್ತು ಗಣಿತ ಸೂತ್ರಗಳನ್ನು ಆಧರಿಸಿದೆ. ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) ಅಂದರೆ 365.2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾದರೆ, ಚಂದ್ರನು ಭೂಮಿಯ ಸುತ್ತಲೂ ಒಂದು ಸುತ್ತು ಸುತ್ತಿ ಬರಲು 27.3 ದಿವಸಗಳು ಬೇಕು. ಹಾಗಾಗಿ ಇದು ಚಂದ್ರಮಾನದ ಮಾಸಿಕ ಚಲನೆಯಾಗಿದೆ. ಹೀಗೆ ಭೂಮಿ ಮತ್ತು ಚಂದ್ರರ 27.3 ದಿವಸಗಳ ಚಲನೆ ಲೆಖ್ಖಾಚಾರದ ಪ್ರಕಾರ ಸೂರ್ಯನ ಸುತ್ತಲೂ 1/12 ಭಾಗವನ್ನು ಚಲಿಸಿರುತ್ತದೆ. ಸೂರ್ಯನ ಸುತ್ತಲು ಚಲಿಸುವ ಭೂಮಿಯ ಪಥವು ಸಮನಾಗಿಲ್ಲವಾಗಿರುವುದರಿಂದ, ಚಂದ್ರನು ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆವರೆಗೆ ಚಲಿಸಲು 2.2 ಹೆಚ್ಚಿನ ದಿವಸಗಳನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ.
ಹಾಗಾಗಿ ಚಾಂದ್ರಮಾನದ ಲೆಖ್ಖಾಚಾರದಂತೆ
ವಾರ್ಷಿಕ ಚಲನೆ 29.531 x 12 = 354.372 ದಿನಗಳಾಗುತ್ತದೆ.
ಸೌರಮಾನದ ವಾರ್ಷಿಕ ಚಲನೆ (1 ಆವರ್ತನ) = 365.2422 ದಿವಸಗಳಾಗುತ್ತದೆ.
ಚಾಂದ್ರಮಾನದ ವಾರ್ಷಿಕ ಚಲನೆ (29.531 x 12) = 354.372
ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: (365.2422 – 354.372) = 10.8702 ದಿವಸಗಳಾಗುತ್ತದೆ.
ಈ ರೀತಿಯಾದ 10 ದಿನಗಳ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಹಾಗಾಗಿ ಈ ವ್ಯತ್ಯಾಸ ಸರಿ ತೂಗಿಸಲು ಪ್ರತೀ 3 ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ. ಆಂದರೆ ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ಹೀಗೆ 33 ತಿಂಗಳಿಗೊಮ್ಮೆ ಒಂದು ಮಾಸವನ್ನು ಸೇರಿಸುವ ಪರಿಕಲ್ಪನೆಯೇ ಅಧಿಕ ಮಾಸ. ಈ ಹಿನ್ನೆಲೆಯಲ್ಲಿಯೇ ಅಧಿಕ ಮಾಸದಲ್ಲಿ 33 ಸಂಖ್ಯೆಯ ದಾನಗಳನ್ನು ಕೊಡುವ ಪದ್ಧತಿ ರೂಢಿಯಲ್ಲಿ ಬಂದಿದೆ ಎನ್ನಬಹುದು.
ಅದಲ್ಲದೇ ಅಧಿಕಮಾಸದಲ್ಲಿ 33 ದೇವತೆಗಳನ್ನು ಈ ರೀತಿಯಾಗಿ ವಿಂಗಡಿಸಿದ್ದಾರೆ.
ಅಷ್ಟ (8) ವಸುಗಳು, ಏಕಾದಶ (11) ರುದ್ರರು, ದ್ವಾದಶ (12) ಆದಿತ್ಯರು, (1) ಪ್ರಜಾಪತಿ, (1) ವಷಟ್ಕಾರ ಹೀಗೆ ಒಟ್ಟು 33 ದೇವತೆಗಳು.
ಈ ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನ ಕೊಟ್ಟರೆ ಹೆಚ್ಚಿನ ಫಲವಿದೆ ಎಂದು ಹೇಳಲಾಗುತ್ತದೆ. ಅಪೂಪ ಎಂದರೆ, ಅತಿರಸ ಅಥವಾ ಕಜ್ಜಾಯ ಎಂದು ಕರೆಯಲ್ಪಡುವ ಅಕ್ಕಿ, ಬೆಲ್ಲ ಮತ್ತು ತುಪ್ಪದಿಂದ ಮಾಡಿದ 33 ಭಕ್ಷ್ಯವನ್ನು ಒಂದು ತಟ್ಟೆಯಲ್ಲಿಟ್ಟು ದಾನ ಮಾಡಬೇಕು. ಅತಿರಸ ಮಾಡಲಾಗದಿದ್ದಲ್ಲಿ ಅನಾರಸ ಶ್ರೇಷ್ಠ, ಖರ್ಚಿಕಾಯಿ ಇಲ್ಲವೇ ಬೇಸನ್ ಲಾಡು ಅಥವಾ ನಿಮ್ಮ ಇಚ್ಚೆ ಮತ್ತು ಅನುಕೂಲಕ್ಕೆ ಅನುಗುಣವಾಗಿ 33 ಸಂಖ್ಯೆಯಷ್ಟು ಭಕ್ಷವನ್ನು ಮಾಡಿ ಈ ಅಪೂಪ ಶ್ಲೋಕವನ್ನು ಪಠಿಸುತ್ತಾ,
ತ್ರಯಸ್ತ್ರಿಂಶದ ಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ|
ಸಘೃತಂ ಹಿರಣ್ಯಂಚ ಬ್ರಾಹ್ಮಣಾಯ ನಿವೇದಯೇತ್||
33 ಅಪೂಪಗಳ ತಟ್ಟೆಯನ್ನು ದೇವರ ಎದುರಿನಲ್ಲಿ ರಂಗೋಲಿ ಅರಿಶಿನ ಕುಂಕುಮಾದಿಗಳಿಂದ ಮಂಡಲಮಾಡಿ ಮಣೆಯ ಮೇಲಿಟ್ಟು ಮೇಲೆ ತಿಳಿಸಿದ 33 ದೇವತೆಗಳನ್ನು ಆವಾಹನ ಮಾಡಿ, ತಟ್ಟೆಯ ಸಮೇತ ಬ್ರಾಹ್ಮಣರಿಗೆ ಅಥವಾ ಮನೆಯ ಅಳಿಯನಿಂಗಿಂತ ಶ್ರೇಷ್ಠವಾದ ಬ್ರಾಹ್ಮಣರಿಲ್ಲ ಎಂದು ಅಳಿಯನಿಗೋ, ಇಲ್ಲವೇ ಹೆಂಡತಿಯರ ಅಣ್ಣ ಅಥವಾ ತಮ್ಮಂದಿರಿಗೆ ದಾನ ಮಾಡಿದಲ್ಲಿ, ಹೆಚ್ಚಿನ ಫಲ ಲಭಿಸುತ್ತದೆ ಎನ್ನುತ್ತದೆ ಶಾಸ್ತ್ರ. ಈ ರೀತಿಯಾದ ಅಪೂಪ ದಾನವು ಪೃಥ್ವೀ ದಾನದಷ್ಟೇ ಫಲವನ್ನು ಕೊಡುತ್ತದೆ ಎಂದರೆ ಮತ್ತೊಂದು ಪುರಾಣದ ಪ್ರಕಾರ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ.
ಅಧಿಕ ಮಾಸದಲ್ಲಿ ಅಪೂಪ ದಾನ ಸರ್ವ ಶ್ರೇಷ್ಠ ದಾನವಾಗಿದ್ದರೆ ಅದರ ಜೊತೆ ಈ ಕೆಳಕಂಡ ದಾನವನ್ನು ಮಾಡುವುದರಿಂದ ಇನ್ನೂ ಅಧಿಕ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.
- ಸುವರ್ಣ ದಾನ – ದಾರಿದ್ರ್ಯ ನಾಶ
- ಗೋ ದಾನ – ಬ್ರಹ್ಮ ಲೋಕ ಪ್ರಾಪ್ತಿ
- ರಜತ ದಾನ – ಪಿತೃಗಳು ತೃಪ್ತಿಹೊಂದಿ ಪುತ್ರ – ಪೌತ್ರ – ಧನ – ಧನ್ಯ ಮೊದಲಾದ ಐಶ್ವರ್ಯ ಪ್ರಾಪ್ತಿ
- ತಾಮ್ರ ಪಾತ್ರ ಮತ್ತು ಧಾನ್ಯ ದಾನ – ಸರ್ವಾಭೀಷ್ಟ ಸಿದ್ಧಿ
- ರತ್ನ ದಾನ – ರಾಜ ಯೋಗ
- ಮುತ್ತು ಗಳ ದಾನ – ಭುಕ್ತಿ ಮುಕ್ತಿ ಪ್ರಾಪ್ತಿ
- ವಸ್ತ್ರ ದಾನ – ಚಂದ್ರ ಲೋಕ ಪ್ರಾಪ್ತಿ
- ಶಾಲು ದಾನ – ಪಾಪ ಪರಿಹಾರ
- ರೇಷ್ಮೆ ವಸ್ತ್ರ ದಾನ – ಭಯ ಪರಿಹಾರ
- ಪಾದರಕ್ಷೆ ದಾನ – ಸುಖಕರ ಪರಲೋಕ ಪ್ರಯಾಣ
ಅಧಿಕ ಮಾಸದಲ್ಲಿ ನಿತ್ಯದಾನ ಮಾಡಲು ಬಯಸುವವರು ಈ ರೀತಿಯಾಗಿ ದಾನಗಳನ್ನು ಮಾಡಬಹುದಾಗಿದೆ.
ಶುಕ್ಲ ಪಕ್ಷ
- ಪಾಡ್ಯ:- ಅರಿಶಿನ, ಕುಂಕುಮ, ಎಲೆ, ಅಡಿಕೆ ಮತ್ತು ದಕ್ಷಿಣೆ
- ಬಿದಿಗೆ:- ಅರಿಶಿನ, ಕುಂಕುಮ, ಎಲೆ, ಅಡಿಕೆ ಮತ್ತು ದಕ್ಷಿಣೆ
- ತದಿಗೆ:- ಕೊಬ್ಬರಿ ಮತ್ತು ಸಕ್ಕರೆ
- ಚೌತಿ:- ನಿಂಬೆಹಣ್ಣು, ಸಕ್ಕರೆ ಮತ್ತು ಏಲಕ್ಕಿ
- ಪಂಚಮಿ:- ಅಕ್ಕಿ, ಎಲೆಅಡಿಕೆ ಮತ್ತು ದಕ್ಷಿಣೆ
- ಷಷ್ಠಿ:- ಮೊಸರು
- ಸಪ್ತಮಿ:- ಹಣ್ಣುಗಳು
- ಅಷ್ಟಮಿ:- ತೊಗರಿಬೇಳೆ
- ನವಮಿ:- ಗೋರಿಕಾಯಿ
- ದಶಮಿ:- 2 ಬೆಲ್ಲದ ಅಚ್ಚು
- ದ್ವಾದಶಿ:- ಹಾಲು
- ತ್ರಯೋದಶಿ:- ಗೋಧಿಹಿಟ್ಟು
- ಚತುರ್ದಶಿ:- ಮಲ್ಲಿಗೆ ಹೂವು
- ಹುಣ್ಣಿಮೆ:- ಸೌತೆಕಾಯಿ
ಕೃಷ್ಣ ಪಕ್ಷ
- ಪಾಡ್ಯ:- ಹೀರೇಕಾಯಿ
- ಬಿದಿಗೆ:- ಗೆಡ್ಡೆ ಗೆಣಸು
- ತದಿಗೆ:- ಕುಪ್ಪಸ, ಎಲೆಅಡಿಕೆ ಜೊತೆಗೆ ದಕ್ಷಿಣೆ
- ಚೌತಿ:- ಹುರಿಗಡಲೆ
- ಪಂಚಮಿ:- ಕಡಲೆಕಾಯಿ ಬೀಜ
- ಷಷ್ಠಿ:- ರವೆ, ಎಲೆಅಡಿಕೆ ಮತ್ತು ದಕ್ಷಿಣೆ
- ಸಪ್ತಮಿ:- ಶ್ರೀಕೃಷ್ಣ ವಿಗ್ರಹ ಸಮೇತ ತುಳಸಿ ದಾನ
- ಅಷ್ಟಮಿ:- ಹತ್ತಿ
- ನವಮಿ:- ಕಡಲೇ ಹಿಟ್ಟು
- ದಶಮಿ:- ಗಾಜಿನ ಬಳೆಗಳು
- ದ್ವಾದಶಿ:- ಹೆಸರುಬೇಳೆ
- ತ್ರಯೋದಶಿ:- ಅವಲಕ್ಕಿ
- ಚತುರ್ದಶಿ:- ಕಡ್ಲೆಕಾಯಿ ಎಣ್ಣೆ
- ಅಮಾವಾಸ್ಯೆ:- ಕಡ್ಲೆಬೇಳೆ
ಇನ್ನು ಅಧಿಕ ಮಾಸದಲ್ಲಿ ಈ ಕೆಳಕಂಡ ರೀತಿಯ ದಾನಗಳನ್ನು ಸಹಾ ಮಾಡಬಹುದಾಗಿದೆ.
- 33 ಕರುವಿನ ಜೊತೆ ಹಸುವಿನ ದಾನ ಮಾಡಬಹುದು ಅದು ಸಾಧ್ಯವಾಗದಿದ್ದಲ್ಲಿ ಬೆಳ್ಳಿ ಅಥವಾ ಹಿತ್ತಾಳೆ ಹಸು ಕರುವಿನ ವಿಗ್ರಹ
- 33 ವಿಷ್ಣುಪಾದ ದಾನ
- 33 ಅನ್ನಪೂರ್ಣೇಶ್ವರಿಯ ಮೂರ್ತಿ
- 33 ತಮ್ಮ ಆರ್ಥಿಕ ಪರಿಸ್ಥಿತಿಯ ಅನುಕೂಲಕ್ಕೆ ತಕ್ಕಂತೆ ಬೆಳ್ಳಿ, ಹಿತ್ತಾಳೆಯ ಅರಿಷಿಣ ಕುಂಕುಮ ಬಟ್ಟಲು
- 33 ಮುತ್ತೈದೆಯರಿಗೆ ಉಡಿ ತುಂಬಿಸಬಹುದು
- 33 ಮುತ್ತೈದೆಯರಿಗೆ ಬಳೆಗಳನ್ನು ತೊಡಿಸುವುದು
- 33 ಮುತ್ತೈದೆಯರಿಗೆ ವಸ್ತ್ರ ದಾನ
- 33 ವಟುಗಳಿಗೆ ಸಂಧ್ಯಾವಂದನೆ ಸಾಮಗ್ರಿ ದಾನ
- 33 ಮರದ ಬಾಗಿಣ ಸಹಿತ 33 ದಂಪತಿಗಳಿಗೆ ಭೋಜನ
- 33 ಜೊತೆಯ ಬೆಳ್ಳಿ ಅಥವಾ ಹಿತ್ತಾಳೆಯ ದೀಪ ದಾನ
- 33 ತುಳಸಿ ಸಸಿಗಳನ್ನು ದಾನ ಮಾಡಬಹುದು
- 33 ಹಾಲು ಮೊಸರು ತುಂಬಿದ ಪಾತ್ರೆಗಳ ದಾನ
- 33 ದೇವರ ಪುಸ್ತಕಗಳ ದಾನ ಅಲ್ಲದೇ,
- ಅಧಿಕ ಮಾಸದ ಒಂದು ತಿಂಗಳು ಪೂರ್ತಿ ಪ್ರತೀ ದಿನ ಒಬ್ಬ ವಟುವಿಗೆ ಊಟ ಹಾಕಿಸುವುದು
- ಅಧಿಕ ಮಾಸದ ಒಂದು ತಿಂಗಳು ಪೂರ್ತಿ ಒಬ್ಬ ಮತ್ತೈದೆಗೆ ಮುಡಿಯಲು ಹೂವು ಕೊಡುವುದು
- ಅಧಿಕ ಮಾಸದ ಒಂದು ತಿಂಗಳು ಪೂರ್ತಿ ಒಂದು ಬ್ರಾಹ್ಮಣ ಮತ್ತು ಮುತ್ತೈದೆಗೆ ತಾಂಬೂಲ ದಕ್ಷಿಣೆ ಕೊಡುವುದು
- ಒಂದು ಒಣ ಕೊಬ್ಬರಿಯನ್ನು ಸಣ್ಣದಾಗಿ ರಂಧ್ರ ಮಾಡಿ ಅದರೊಳಗೆ ಅಕ್ಕಿಯನ್ನು ತುಂಬಿ ಅದರ ಜೊತೆ ಶ್ರೀ ಕೃಷ್ಣನ ಬೆಳ್ಳಿ ಅಥವಾ ಹಿತ್ತಾಳೆಯ ಮೂರ್ತಿಯನ್ನು ಕೊಬ್ಬರಿಯ ರಂಧ್ರವನ್ನು ಮುಚ್ಚಿ ದಕ್ಷಿಣೆಯ ಸಹಿತ ತಾಂಬೂಲವನ್ನು ದಾನ ಮಾಡಿದರೆ ಗೋವರ್ಧನ ಪರ್ವತ ದಾನ ಮಾಡಿದ ಫಲ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ ಶಾಸ್ತ್ರ
ನಮ್ಮ ಶಾಸ್ತ್ರದ ಪ್ರಕಾರ ಈ ಅಧಿಕ ಮಾಸವನ್ನು ಮಲೀನಮಾಸ ಎಂದು ಪರಿಗಣಿಸಲಾಗಿರುವ ಕಾರಣ ಈ ತಿಂಗಳಿನಲ್ಲಿ ನಾಮಕರಣ, ಮುಂಜಿ, ಮದುವೆ, ಗೃಹ ಪ್ರವೇಶ ಮತ್ತು ಹೊಸ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಆದರೆ, ಈ ಅಧಿಕ ಮಾಸದಲ್ಲಿ ಧ್ಯಾನ ,ಯೋಗ, ಪೂಜೆ, ವ್ರತಗಳುಗಳನ್ನು ಮಾಡ ಬಹುದಾಗಿದೆ. ಈ ಮಾಸದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಿಂದ ವ್ಯಕ್ತಿಯು ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಕಾಣುವುದಲ್ಲದೇ, ಉಳಿದ ತಿಂಗಳಲ್ಲಿ ಮಾಡಿದ ಪೂಜೆಗಳಿಗಿಂತಲೂ 10 ಪಟ್ಟು ಹೆಚ್ಚಿನ ಫಲವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.
ಹಾಗಾಗಿ ಇನ್ನೇಕೆ ತಡಾ, ಈ ಅಧಿಕ ಮಾಸದಲ್ಲಿ ಉಪವಾಸ, ಪೂಜೆ, ವ್ರತ, ಧ್ಯಾನ, ಭಜನೆ, ಕೀರ್ತನೆಗಳ ಜೊತೆ ಹೋಮ ಮತ್ತು ಹವನಗಳನ್ನು ಮಾಡುವುದಲ್ಲದೇ, ಶ್ರೀ ದೇವಿ ಪುರಾಣ, ಭಗವದ್ ಪುರಾಣ, ಶ್ರೀ ವಿಷ್ಣು ಪುರಾಣ, ಲಲಿತಾ ಸಹಾಸ್ರನಾಮ, ವಿಷ್ಣು ಸಹಸ್ರನಾಮ ಪಠಿಸುವ ಜೊತೆ ಜೊತೆಯಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ದಾನಗಳನ್ನು ಮಾಡುವ ಮೂಲಕ ಅಧಿಕ ಮಾಸದ ಅಧಿಕ ಫಲವನ್ನು ಪಡೆಯೋಣ.
ಏನಂತೀರೀ?
ಸೂಚನೆ: ಕೆಲವೊಂದು ಮಾಹಿತಿಗಳನ್ನು ಅಂತರ್ಜಾಲದಿಂದ ಎರವಲು ಪಡೆಯಲಾಗಿದೆ.