ಏನಂತೀರೀ? ಪುಸ್ತಕ ಲೋಕಾರ್ಪಣೆ

ನನ್ನೆಲ್ಲಾ ಆತ್ಮೀಯರಿಗೂ ಈಗಾಗಲೇ ತಿಳಿದಿರುವಂತೆ, ಒಬ್ಬ ಹವ್ಯಾಸೀ ಬರಹಗಾರನಾಗಿ ರಾಜಕಾರಣದ ಆಗು ಹೋಗುಗಳನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಕಾರಣ ಬೇಕೋ ಬೇಡವೋ ಗೆಳೆಯರ ಒತ್ತಾಯದ ಮೇರೆಗೆ ಸಾಮಾಜಿಕ ಜಾಲತಾಣಗಳ ನಾನಾ ಗುಂಪುಗಳ ಭಾಗವಾಗಿ ಸುಖಾ ಸುಮ್ಮನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದಕ್ಕೇ ನನ್ನ ಬರವಣಿಗೆ ಸೀಮಿತವಾಗಿತ್ತು. ಆ ಎಲ್ಲಾ ಲೇಖನಗಳಿಂದ ಮಿತ್ರತ್ವಕ್ಕಿಂತ ಶತೃತ್ವ ಗಳಿಸಿದ್ದೇ ಹೆಚ್ಚು. ಈ ಜಿದ್ದಾ ಜಿದ್ದಿ, ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಮೀಸಲಾಗಿರದೇ, ಮನೆಯವರೆಗೂ ಬಂದು, ನನ್ನ ಕುಟುಂಬದವರು ನನ್ನ ಪರವಾಗಿ ಅದೆಷ್ಟೋ ಬಾರಿ ಕ್ಷಮೆ ಯಾಚಿಸಿದ್ದೂ ಉಂಟು.

ಕಲೆ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತನವರು ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ರಾಜ್ಯಪ್ರಶಸ್ತಿ ವಿಜೇತ ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರು. ನಮ್ಮ ತಂದೆ ದಿ.ಶಿವಮೂರ್ತಿಗಳು ಖ್ಯಾತ ಗಮಕಿಗಳು, ವ್ಯಾಖ್ಯಾನಕಾರರು ಮತ್ತು ಮೋರ್ಚಿಂಗ್ ಕಲಾವಿದರಾಗಿದ್ದರು. ಅಂತಹ ದಿಗ್ಗಜರ ವಂಶವವನಾಗಿಯೂ ಅದೇಕೋ ಏನೋ ಗಮಕ ಒಲಿಯಲಿಲ್ಲ. ಒಲಿಯಲಿಲ್ಲ ಎನ್ನುವುದಕ್ಕಿಂತ ಕಲಿಯಲು ಪ್ರಯತ್ನಿಸಲಿಲ್ಲ ಎನ್ನುವುದೇ ಸೂಕ್ತ. ಹಾಗಾಗಿ ಪದ್ಯ ಒಲಿಯದಿದ್ದರೂ ಗದ್ಯವನ್ನು ಒಪ್ಪಿಕೊಂಡೆ ಅಪ್ಪಿಕೊಂಡೆ.

ಯಾವುದೋ ಸಿದ್ಧಾಂತಗಳಿಗೆ ಕಟ್ಟುಬಿದ್ದು ಲೇಖನಗಳನ್ನು ಬರೆಯುತ್ತಾ ಸಮಯ ಕಳೆಯುವ ಬದಲು ಅದೇ ಸಮಯವನ್ನು ಧನಾತ್ಮಕವಾದ ಮತ್ತು ಸಮಾಜಮುಖಿಯಾದ ಲೇಖನಗಳಿಗೆ ಏಕೆ ಉಪಯೋಗಿಸ ಬಾರದು? ಎಂದು ಮಡದಿ ಮಂಜುಳ ಮತ್ತು ನೆಚ್ಚಿನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಯವರ ಸಲಹೆಯ ಮೇರೆಗೆ ನನ್ನ ಬರವಣಿಗೆಯನ್ನು ನನ್ನ ಕಲ್ಪನೆ ಮತ್ತು ನನ್ನ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಎಲ್ಲೆಂದರಲ್ಲಿ ಪ್ರಕಟಿಸಲಾರಂಭಿಸಿದಾಗ, ಸುಮ್ಮನೆ ಎಲ್ಲೋ ನಿಮ್ಮ ಬರಹಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಬ್ಲಾಗ್ ಒಂದನ್ನು ಏಕೆ ಆರಂಭಿಸಬಾರದು? ಎಂದು ಗೆಳೆಯ ವಾಸುದೇವರವರು ಸೂಚಿಸಿದ ಪರಿಣಾಮವಾಗಿ ಆರಂಭಿಸಿದ https://enantheeri.com/ ಬ್ಲಾಗಿನಲ್ಲಿ ಈಗ 500 ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ ಕೇವಲ ಕರ್ನಾಟಕವಲ್ಲದೇ, ದೇಶ ವಿದೇಶಗಳಲ್ಲಿ ಸಾಕಷ್ಟು ಓದುಗರಸಾಕಷ್ಟು ಜನ ಮನ್ನಣೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ.

ನನ್ನೆಲ್ಲಾ ಬರಹಗಳು ಕೇವಲ ನನ್ನ ಬ್ಲಾಗಿನಲ್ಲಿ ಲಭ್ಯವಿದ್ದರೂ, ಪುಸ್ತಕದ ರೂಪದಲ್ಲಿ ಪ್ರಕಟಿಸಿದಾಗ ಮಾತ್ರವೇ ಅದು ಇನ್ನೂ ಹತ್ತು ಹಲವಾರು ಸಾಂಪ್ರದಾಯಕ ಓದುಗರಿಗೆ ತಲುಪುತ್ತದೆ ಎನ್ನುವುದು ನಮ್ಮ ಕುಟುಂಬದ ಭಾವನೆ. ಹಾಗಾಗಿ ನನ್ನ ಪುಸ್ತಕವನ್ನು ಪ್ರಕಟಿಸಲು ಸಾಧ್ಯವೇ ಎಂದು ಹತ್ತಾರು ಪ್ರಕಾಶಕರನ್ನು ವಿಚಾರಿಸಿದಾಗ, ಹೊಸಾ ಲೇಖಕರ ಕನ್ನಡ ಪುಸ್ತಕಗಳನ್ನು ಯಾರೂ ಕೊಂಡು ಓದುವುದಿಲ್ಲ ಎಂಬ ನೆಪದಿಂದ ನಮ್ಮನ್ನು ಸಾಗ ಹಾಕಿದ್ದನ್ನು ಗಮನಿಸಿದ ನನ್ನ ಮಡದಿ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯ ತ್ಯಾಗವಿರುತ್ತದೆ ಎನ್ನುವಂತೆ, ರೀ…, ನಮ್ಮ ಪುಸ್ತಕವನ್ನು ನಾವೇ ಪ್ರಕಟಿಸೋಣ. ಈ ಪುಸ್ತಕದ ಸಂಪೂರ್ಣ ಖರ್ಚು ವೆಚ್ಚಗಳೆಲ್ಲವೂ ನನ್ನದಿರಲಿ ಎಂಬ ಧೈರ್ಯ ತುಂಬಿದ ಕಾರಣವೇ, ನಮ್ಮದೇ ಆದ ಸೃಷ್ಟಿ ಪ್ರಕಾಶನ ಆರಂಭಿಸಿ ಅದರ ಅಡಿಯಲ್ಲಿ ಚೊಚ್ಚಲು ಪುಸ್ತಕವಾಗಿ, ನನ್ನ ಬರಹದ ಜನಪ್ರಿಯವಾದ, ಆಯ್ದ 20 ಲೇಖನಗಳನ್ನು ಏನಂತೀರೀ? ಎಂಬ ಪುಸ್ತಕದ ರೂಪದಲ್ಲಿ ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇವೆ.

ನಮ್ಮೀ ಚೊಚ್ಚಲು ಕಾಣಿಕೆಯನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಸಾಹಿತ್ಯ ದಿಗ್ಗಜರ ಉಪಸ್ಥಿತಿಯಲ್ಲಿ ಬಹಳ ಅದ್ದೂರಿಯ ಸಮಾರಂಭದಲ್ಲಿ ಬಿಡುಗಡೆ ಮಾಡಬೇಕೆಂದು ಬಹಳ ಹಿಂದೆಯೇ ಯೋಚಿಸಿದ್ದರೂ, ಮಹಾಮಾರಿ ಕೋವಿಡ್ ಪರಿಣಾಮವಾಗಿ ಇಂದು ಮನೆಯಲ್ಲಿಯೇ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಲೋಕಾರ್ಪಣೆ ಮಾಡುತ್ತಿದ್ದೇವೆ.

ಈ ಪುಸ್ತಕವನ್ನು ಪ್ರಕಟಿಸುವ ಹಿಂದೆಯೂ, ನಮ್ಮ ಕುಟುಂಬಸ್ಥರ ಪ್ರೀತಿ ಮತ್ತು ವಿಶ್ವಾಸಗಳು ಅಡಗಿವೆ. ನಾನು ಹುಟ್ಟಿದ್ದು 1970ರ, ಸಾಧಾರಣ ಸಂವತ್ಸರ, ಆಶ್ವಯುಜ, ಶುಕ್ಲ ಪಂಚಮಿ ಇಂದಿಗೆ ಸರಿಯಾಗಿ ನನಗೆ 50 ವರ್ಷಗಳು ತುಂಬಿದೆ. ಹಾಗಾಗಿ ಬಹಳಷ್ಟು ಆಸ್ಥೆ ವಹಿಸಿ, ಕಷ್ಟ ಪಟ್ಟು ಇಷ್ಟು ಚೆಂದವಾಗಿ ಪುಸ್ತಕವನ್ನು ನನ್ನ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡುತ್ತಿರುವ ನನ್ನ ಕುಟುಂಬದವರಿಗೆ ಯಾವ ರೀತಿಯಾಗಿ ಪ್ರತಿಕ್ರಿಯೆ ನೀಡಬೇಕು ಎನ್ನುವುದೇ ನನಗೆ ತಿಳಿಯದಾಗಿದೆ.

ಈ ಎಲ್ಲಾ ಬೆಳವಣಿಗೆಯನ್ನು ಕಣ್ಣಾರೆ ನೋಡಲುಮತ್ತು ಸಂಭ್ರಮಿಸಲು ಇಂದು ನಮ್ಮ ತಂದೆ ತಾಯಿಯವರು ನಮ್ಮೊಂದಿಗೆ ಇಲ್ಲವಲ್ಲಾ ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ನೂರಾರು ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ದೊರೆತದ್ದು ನನ್ನ ಪೂರ್ವಜನ್ಮದ ಸುಕೃತವೇ ಸರಿ. ಹಾಗಾಗಿ, ನನ್ನ ಬರಹಗಳನ್ನು ನಿರಂತರವಾಗಿ ಓದುತ್ತಿರುವ ನಿಮ್ಮಂತಹ ಸಾಹಿತ್ಯಾಸಕ್ತರಿಗೆ ಸಾವಿರ ಶರಣು. ಅರ್ಥತ್ ಸಾವು + ಇರದ= ಸಾವಿರದ, ಅಂದರೇ ಸಾವೇ ಇರದಷ್ಟು ಚಿರಋಣಿ ಆಗಿದ್ದೇನೆ.

ನೂರು ರೂಪಾಯಿ ಮುಖ ಬೆಲೆಯ ಈ ಪುಸ್ತಕವನ್ನು ದಯವಿಟ್ಟು ಕೊಂಡು ಓದುವ ಮೂಲಕ ನಮ್ಮೀ ಚೊಚ್ಚಲು ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಮತ್ತು ಆಶೀರ್ವಾದವಿರಲಿ. ನಿಮ್ಮೀ ನಿರಂತರ ಸಹಕಾರದಿಂದ ಇಂತಹ ಹತ್ತಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅಗಾಧವಾದ ಸಾಗರದಂತಿರುವ ಕನ್ನಡ ಸಾರಸ್ವತ ಲೋಕಕ್ಕೆ ಆದ್ಭುತವಾದ ಸಾಹಿತ್ಯ ಭಂಡಾರವನ್ನು ಸಣ್ಣ ಮಟ್ಟದಲ್ಲಿ ಕೊಡುವ ಆಸೆ ನಮ್ಮದು.

ನಮ್ಮ ಹಿರಿಯರು ನಮ್ಮ ಮಸ್ತಕದಲ್ಲಿ ತುಂಬಿದ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪುಸ್ತಕ ರೂಪದಲ್ಲಿ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಯುವಂತೆ ಮಾಡೋಣ.

ಏನಂತೀರೀ?

ಇಂತಿ ನಿಮ್ಮ ವಿಶ್ವಾಸಿ

ಶ್ರೀಕಂಠ ಬಾಳಗಂಚಿ

ಶಾರ್ವರೀ ಸಂವತ್ಸರ, ಆಶ್ವಯುಜ, ಶುದ್ಧ ಪಂಚಮಿ

8 thoughts on “ಏನಂತೀರೀ? ಪುಸ್ತಕ ಲೋಕಾರ್ಪಣೆ

  1. ನನ್ನ ಹಾರ್ದಿಕ ಶುಭಾಶಯಗಳು.. ಇದೆ ರೀತಿ ಇನ್ನಷ್ಟು ಪುಸ್ತಕಗಳು ನಿಮ್ಮ ಸೃಷ್ಟಿ ಪ್ರಕಾಶನದಿಂದ ಹೊರ ಹೊಮ್ಮಲಿ ಎಂದು ಆಶಿಸುತ್ತೇನೆ.

    Like

  2. ಶ್ರೀಕಂಠ ಸರ್, ಪ್ರತಿಬಾರಿಯೂ ನಿಮ್ಮ ಬ್ಲಾಗ್ ಬರಹಗಳನ್ನು ಓದುವಾಗ ಬೆರಗಾಗುತ್ತೇನೆ ನಾನು.ಯಾವ ವೃತ್ತಿಪರ ಪತ್ರಕರ್ತನಿಗೂ ಕಮ್ಮಿಯಿಲ್ಲದಂತೆ ನಿರಂತರವಾಗಿ ಲೇಖನಗಳನ್ನು ಬರೆಯುವ ನಿಮ್ಮ ಶ್ರದ್ಧೆಗೆ,ಕನ್ನಡದ ಮೇಲಿನ ಪ್ರೀತಿಗೆ ಶರಣು ಶರಣಾರ್ಥಿ. ನೀವು ಹೊರತರುತ್ತಿರುವ ಪುಸ್ತಕ ನಾಡಿನ ಎಲ್ಲ ಅಕ್ಷರಾಸಕ್ತರನ್ನು ತಲುಪುವಂತಾಗಲಿ.ನಿಮ್ಮ ಪ್ರಕಾಶನ ಸಂಸ್ಥೆಯಿಂದಲೂ ಮುಂದೆ ಹಲವಾರು ಒಳ್ಳೊಳ್ಳೆ ಪುಸ್ತಕಗಳು ಹೊರಬರುವಂತಾಗಲಿ. ಬ್ಲಾಗ್ ಬರವಣಿಗೆಯ ಮೆರವಣಿಗೆ ಹೀಗೇ ಮುಂದುವರೆಯಲಿ.
    Best Wishes..
    -ಡಾ. ಲಕ್ಷ್ಮೀಶ ಜೆ.ಹೆಗಡೆ

    Liked by 1 person

    1. ಧನ್ಯೋಸ್ಮಿ ನಿಮ್ಮೀ ನಿರಂತರ ಪ್ರೋತ್ಸಾಹ ಮತ್ತು ಸಹಕಾರಗಳಿಂದ ಇಂತಹ ಹತ್ತಾರು ಲೇಖನಗಳು ಮತ್ತು ಪುಸ್ತಕಗಳನ್ನು ಪ್ರಕಟಿಸುವ ಶಕ್ತಿಯನ್ನು ತಾಯಿ ಭುವನೇಶ್ವರಿಯು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

      Liked by 1 person

  3. ನಾನು ಮೂವತ್ತೈದು ವರ್ಷ ಹಿಂದೆ ನೋಡಿದ ಶ್ರೀಕಂಠ ಇಷ್ಟೆಲ್ಲಾ ಹವ್ಯಾಸಗಳನ್ನ ಬೆಳೆಸಿಕೊಂಡಿ ದ್ದಾನೆಂದು ತಿಳಿದು ಬಹಳ ಸಂತೋಷ ಆಯಿತು. ಶುಭಾಶಯಗಳು. ನನಗೆ ಒಂದು ಪುಸ್ತಕ ಬೇಕು, ಅಂಚೆ ವೆಚ್ಚ ಸೇರಿ ಹಣವನ್ನ ಫೋನೇಪೆ ಮಾಡುವೆ. ನಮಸ್ಕಾರಗಳು…

    Liked by 1 person

  4. ನಿಮ್ಮ ಮಾತನಾಡುವ ಕಲೆ , ಬರಹರೂಪಕ್ಕೆ ಬಂದು ಪುಸ್ತಕ ರೂಪವಾಗಿದ್ದು ಸಂತೋಷ. ಹೀಗೆ ಮುಂದೆವರಿಯಾಲಿ.

    Liked by 1 person

  5. ಬರಹಗಳು (esp. online) ತುಂಬಾ ಉಪಯುಕ್ತವಾಗಿವೆ. ನಿಮ್ಮ ಪ್ರಯತ್ನ ಶ್ಲಾಘನೀಯ. ಮುಂದೆಯೂ ಈ ಪ್ರಯತ್ನಗಳು ಸಾಗುತ್ತವೆ ಎ೦ದು ಆಶಿಸುತ್ತೇನೆ. ನಿಮ್ಮೆಲ್ಲ ಪ್ರಯತ್ನಗಳು ಯಶಸ್ಸನ್ನು ಕಾಣಲಿ. ‘

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s