ಮಳೆಗಾಲ ಮುಗಿಯುತ್ತಿದ್ದಂತೆಯೇ ಅವರೇಕಾಳಿನ ಕಾಲ ಶುರುವಾಗುತ್ತದೆ. ಆವರೇ ಕಾಳಿನ ಉಪ್ಪಿಟ್ಟು, ಹುಳಿ, ನುಚ್ಚಿನುಂಡೆ, ಆಂಬೊಡೆ, ಹುಸ್ಲಿ ಹೀಗೆ ಹಲವಾರು ರುಚಿ ರುಚಿಯಾದ ಪದಾರ್ಥಗಳನ್ನು ಮಾಡಬಹುದಾಗಿದೆ. ನಾವು ಇಂದು ಅತ್ಯಂತ ಸುಲಭ ಮತ್ತು ಸರಳವಾಗಿ ತಯಾರಿಸಬಹುದಾದ ರುಚಿ ರುಚಿಯಾದ ಅವರೆಕಾಳು ಉಂಡೆ ಕಡುಬು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಅವರೆಕಾಳು ಉಂಡೆ ಕಡುಬು ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ಬೇಯಿಸಿಟ್ಟುಕೊಂಡ ಅವರೇಕಾಳು – 1 ಬಟ್ಟಲು
- ಅಕ್ಕಿತರಿ – 1 ಬಟ್ಟಲು
- ಸಾಸಿವೆ – 1/2 ಚಮಚ
- ಉದ್ದಿನಬೇಳೆ – 1 ಚಮಚ
- ಕಡಲೇ ಬೇಳೆ – 1 ಚಮಚ
- ಜೀರಿಗೆ – 1/2 ಚಮಚ
- ಕಾಳು ಮೆಣಸು -1/4 ಚಮಚ
- ಹಸಿರು ಮೆಣಸಿನಕಾಯಿಗಳು – 5 ರಿಂದ 6
- ಸಲ್ಪ ಕೊತ್ತಂಬರಿ ಸೊಪ್ಪು
- ಕರೀಬೇವಿನ ಸೊಪ್ಪು – 5 ರಿಂದ 6 ಎಲೆಗಳು
- ತೆಂಗಿನ ಕಾಯಿ ತುರಿ – 1 ಬಟ್ಟಲು
- ಅಡುಗೆ ಎಣ್ಣೆ – 2 ಚಮಚ
- ಚಿಟುಕಿ ಇಂಗು
- ರುಚಿಗೆ ತಕ್ಕಷ್ಟು ಉಪ್ಪು
ಅವರೆಕಾಳು ಉಂಡೆ ಕಡುಬು ತಯಾರಿಸುವ ವಿಧಾನ
- ಮೊದಲು ಸ್ವಲ್ಪ ಉಪ್ಪನ್ನು ಬೆರೆಸಿ ಅವರೇಕಾಳನ್ನು ಬೇಯಿಸಿ ಕೊಳ್ಳಿ.
- ಗಟ್ಟಿ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಇಂಗು, ಹಸಿರು ಮೆಣಸಿನಕಾಯಿಗಳು, ಕರಿಬೇವನ್ನು ಬೆರೆಸಿ ಒಗ್ಗರಣೆ ಮಾಡಿಕೊಳ್ಳಿ
- ತಯಾರಿಟ್ಟು ಕೊಂಡ ಒಗ್ಗರಣೆಗೆ ಎರಡು ಲೋಟ ನೀರನ್ನು ಸೇರಿಸಿ ಅದು ಸ್ವಲ್ಪ ಕುದಿಗೆ ಬರುತ್ತಿದ್ದಂತೆಯೇ, ಅದಕ್ಕೆ ಅವರೇಕಾಳು, ಉಪ್ಪು, ಜೀರಿಗೆ, ಮೆಣಸು ಮತ್ತು ಕಾಯಿತುರಿ ಸೇರಿಸಿ ಚೆನ್ನಾಗಿ ಕುದಿ ಬರುತ್ತಿದ್ದಂತೆಯೇ ಅದಕ್ಕೆ ಅಕ್ಕಿ ತರಿ ಸೇರಿಸಿ ಉಪ್ಪಿಟ್ಟಿನ ಸ್ಥಿರತೆ ಬರುವ ವರೆಗೂ ಅದನ್ನು ಕುದಿಸಿ ತಣ್ಣಗಾಗಲು ಬಿಡಿ.
- ಮಾಡಿಟ್ಟುಕೊಂಡ ಮಿಶ್ರಣ ತಣ್ಣಗಾದ ನಂತರ ಪಿಡಿಚೆಯಷ್ಟು ಉಂಡುಂಡೆಗಳಾಗಿ ಮಾಡಿಟ್ಟುಕೊಂಡು ಇಡ್ಲಿ ಕುಕ್ಕರಿನಲ್ಲಿ10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದಲ್ಲಿ ರುಚಿ ರುಚಿಯಾದ ಅವರೆಕಾಳು ಉಂಡೆ ಕಡುಬು ಸವಿಯಲು ಸಿಧ್ದ.
ಸ್ವಲ್ಪ ತುಪ್ಪ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಈ ಸಾಂಪ್ರದಾಯಿಕ ಅವರೆಕಾಳು ಉಂಡೆ ಕಡುಬು ಸವಿಯಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಈ ಅವರೆಕಾಳು ಉಂಡೆ ಕಡುಬಿಗೆ ಜೀರಿಗೆ ಮತ್ತು ಮೆಣಸು ಸೇರಿಸುವುದರಿಂದ ಅವರೇಕಾಳಿನಲ್ಲಿರಬಹುದಾದ ವಾಯುವನ್ನು ಒಡೆಯುವುದಲ್ಲದೇ, ಹಬೆಯಲ್ಲಿಯೂ ಎರಡನೇ ಬಾರಿ ಬೇಯಿಸುವುದರಿಂದ ಆರೋಗ್ಯಕರವೂ ಆಗಿದೆ.
ಕುರಿ ಕೋಳಿಯಂತಹ ಮಾಂಸಾಹಾರದ ಸೇವನೆಯಿಂದ ಸಿಗುವಂತ ಪೋಷಕಾಂಶಗಳು ಈ ಅವರೆಕಾಳಿನಲ್ಲಿ ಸಿಗುವುದಲ್ಲದೇ ಇದರಲ್ಲಿ ಫೈಬರ್ ಅಂಶ ಇರುವ ಕಾರಣ ಇದು ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ.
ಮಕ್ಕಳ ದೇಹದ ಬೆಳವಣಿಗೆಗೆ ಕಾರಣೀಭೂತವಾದ ಹಾರ್ಮೋನುಗಳನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಪದೇ ಪದೇ ಹಸಿವು ಆಗುವುದನ್ನು ನಿಯಂತ್ರಿಸುವುದಲ್ಲದೇ ಜೀರ್ಣಕ್ರಿಯೆಗೂ ಹೆಚ್ಚು ಸಹಕಾರಿಯಾಗಿದೆ.
ಅವರೆಕಾಳಿನಲ್ಲಿ ಹೆಚ್ಚಾಗಿ ಮ್ಯಾಗ್ನೇಶಿಯಂ, ಪೊಟ್ಯಾಶಿಯಂ ಹಾಗೆ ಕ್ಯಾಲ್ಸಿಯಂ ಅಂಶಗಳಿರುವ ಕಾರಣ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಬಲ್ಲದಾಗಿದೆ.
ಅತೀ ಆದರೇ ಅಮೃತವೂ ವಿಷ ಎನ್ನುವಂತೆ ಹೆಚ್ಚಾಗಿ ಅವರೇ ಕಾಳು ತಿನ್ನುವುದರಿಂದ ವಾಯು ಸಮಸ್ಯೆ ಬರುವ ಕಾರಣ ನೋಡಿಕೊಂಡು ಬಳಸುವುದು ಉತ್ತಮ
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು