ಹೆಚ್ ನರಸಿಂಹಯ್ಯ, ಶಿಕ್ಷಣ ತಜ್ಞರು

ಅಂದಿನ ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದ  ಮತ್ತು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿರುವ ಗೌರಿಬಿದನೂರು ತಾಲ್ಲೂಕಿನ ಹೊಸೂರು ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವ್ಯಕ್ತಿ, ತಮ್ಮೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಸ ಮುಗಿಸಿ, ನಂತರ ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಂದುವರೆಸಿ ಭೌತಶಾಸ್ತ್ರದಲ್ಲಿ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೇರ್ಣರಾಗಿ, ಅಂದಿನ ಕಾಲದಲ್ಲಿಯೇ ದೂರದ ಅಮೇರಿಕಾದ  ಓಹಿಯೂ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದು  ಕೈತುಂಬ ಸಂಪಾದನೆ ಮಾಡಿಕೊಂದು ಸುಃಖ ಸಂಸಾರವನ್ನು ನಡೆಸಬಹುದಾಗಿದ್ದರೂ, ದೇಶ ಮತ್ತು ತಾವು ನಂಬಿದ್ದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಸ್ವದೇಶಕ್ಕೆ ಮರಳಿ ಸರಳ ಜೀವನ ನಡೆಸುತ್ತಾ ಅಜೀವ ಬ್ರಹ್ಮಚಾರಿಯಾಗಿ ಭಾರತದ ಭಾವೀ ಪ್ರಜೆಗಳಾದ ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸುವುದಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ರಸಋಷಿ, ಶಿಕ್ಷಣ ತಜ್ಞ ಶ್ರೀ ಹೊಸೂರು ಹುಚ್ಚು ನರಸಿಂಹಯ್ಯನವರು ಎಲ್ಲರ ಪ್ರೀತಿಯ ಹೆ‍ಚ್. ನರಸಿಂಹಯ್ಯ ಅರ್ಥಾತ್ ಹೆಚ್ನೆನ್ ಅವರೇ ನಮ್ಮ ಇಂದಿನ ಕಥಾ ನಾಯಕರು.

ಶ್ರೀ ಹನುಮಂತಪ್ಪ ಮತ್ತು ವೆಂಕಟಮ್ಮ ದಂಪತಿಗಳಿಗೆ ಜೂನ್ 6, 1920 ರಲ್ಲಿ ಜನಿಸಿದ ಶ್ರೀ ನರಸಿಂಹಯ್ಯನವರ ಮಾತೃ ಭಾಷೆ  ತೆಲುಗು ಆದರೂ, ಅವರ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲವೂ ನಡೆದದ್ದು ಅಚ್ಚ ಕನ್ನಡದಲ್ಲಿಯೇ ಹಾಗಾಗಿಯೇ ಅವರಿಗೆ ಕನ್ನಡ ಬಗ್ಗೆ ಅತೀವ ಪ್ರೀತಿ ಮತ್ತು ಪ್ರಾವೀಣ್ಯತೆಯನ್ನೂ ಹೊಂದಿದ್ದರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಾದ  ಹೊಸೂರಿನಲ್ಲಿಯೇ ಮುಗಿಸಿ, 1935 ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಹೈಸ್ಕೂಲಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸೇರಿ ತಮ್ಮ ಮೆಟ್ರುಕ್ಯುಲೇಷನ್ ಉನ್ನತ ಶ್ರೇಣಿಯಲ್ಲಿ ಮುಗಿಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಬಿಎಸ್ಸಿ ಮತ್ತು  ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಅಮೇರಿಕಾದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಉನ್ನತ ಪದವಿಯನ್ನು ಪಡೆದ ನಂತರವೂ ಅಮೇರಿಕಾದಂಥ ಆಕರ್ಷಕ ರಾಷ್ಟ್ರದಲ್ಲಿ ಕೈತುಂಬಾ ಹಣ ಸಂಪಾದಿಸಬಹುದಾಗಿದ್ದರೂ, ತಾಯ್ನಾಡಿನಲ್ಲಿ ಸೇವೆ ಸಲ್ಲಿಸಬೇಕೆನ್ನುವ ಅವರ ಹಂಬಲ ಮತ್ತು  ವಿದ್ಯೆ ಕೊಟ್ಟು ಬದುಕು ರೂಪಿಸಿದ ನ್ಯಾಷನಲ್ ಶಿಕ್ಷಣ ಸಂಸ್ಥೆಯಲ್ಲೆ ಕೆಲಸ ಮಾಡಬೇಕೆನ್ನುವ ಅವರ ತುಡಿತದಿಂದಾಗಿ  ಭಾರತಕ್ಕೆ ಮರಳಿ ತಾವು ಓದಿದ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡಿದ್ದಲ್ಲದೇ ಕೆಲವರ್ಷಗಳ  ನಂತರ  ಅದೇ ಕಾಲೇಜಿನ ಪ್ರಾಂಶುಪಾಲರಾದದ್ದಲ್ಲದೇ, ಇದೇ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ರಾಜ್ಯಾದ್ಯಂತ ನಾಲ್ಕು ನ್ಯಾಷನಲ್ ಕಾಲೇಜುಗಳು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ಈ ವಿದ್ಯಾಸಂಸ್ಥೆಯ ಅವಿಭಾಜ್ಯ ಅಂಗವಾಗಿ  ಹೋದದ್ದು ಈಗ ಇತಿಹಾಸ.

ವಿದ್ಯಾರ್ಥಿ ದೆಸೆಯಿಂದಲೂ ಮಹಾತ್ಮ ಗಾಂಧಿಯವರ ಸ್ವಾಂತಂತ್ರ್ಯ ಚಳುವಳಿಯತ್ತ ಆಕರ್ಷಿರಾಗಿದ್ದ ನರಸಿಂಹಯ್ಯನವರು, 1942 ರಲ್ಲಿ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಬೆಂಗಳೂರು, ಮೈಸೂರು ಮತ್ತು ಪುಣೆಯ ಯಾರವಾಡ ಜೈಲಿನಲ್ಲಿಯೂ  ಸೆರೆಮನೆವಾಸ ಅನುಭವಿಸಿದ್ದರು. ಮುಂದೆ 1947ರಲ್ಲಿ ಸ್ವಾತಂತ್ರ ಬಂದ ನಂತರ ಮೈಸೂರು ಚಲೋ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಗಳಾಗಿದ್ದಲ್ಲದೇ, ತಮ್ಮ ಸಹೋದ್ಯೋಗಿಗಳ ಜೊತೆ ಭೂಗತ ಹೋರಾಟ ನಡೆಸಿ ಮೈಸೂರು ಸಂಸ್ಥಾನದಲ್ಲಿ ಜವಾಬ್ಧಾರಿಯುತ ಸರ್ಕಾರ ರಚನೆಗೆ ಬೆಂಬಲ ಸೂಚಿಸಿದರು. ಅಪ್ಪಟ ಗಾಂಧೀವಾದಿಯಾಗಿ ತಮ್ಮ ಜೀವಮಾನವಿಡೀ ಖಾದಿಯನ್ನೇ ಉಡುಪನ್ನೇ ತೊಡುತ್ತಿದ್ದಲ್ಲದೇ ಸದಾಕಾಲವೂ ಗಾಂಧಿ ಟೋಪಿಯನ್ನು ಧರಿಸುತ್ತಿದ್ದರು

1972 ರಿಂದ 1977 ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ ಕಾಲದಲ್ಲಿ  ಅನೇಕ ಸುಧಾರಣೆಗಳನ್ನು ತಂದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತಿಯ ನಂತರ  ಮತ್ತೆ ನ್ಯಾಷನಲ್ ಕಾಲೇಜಿಗೆ ಮರಳಿ ಬಂದಿದ್ದಲ್ಲದೇ, ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಅರ್ಥಿಕ ಪರಿಸ್ಥಿತಿಯ ಪರಿಣಾಮ ವಿವಿಧ ಉಚಿತ ವಿದ್ಯಾರ್ಥಿ ನಿಲಯಗಳಲ್ಲಿದ್ದು ತಮ್ಮ ಓದನ್ನು ಮುಂದಿವರಿಸಿದ್ದ ಕಾರಣ, ತಮ್ಮ ವೃತಿಯನ್ನು ಆರಂಭಿಸಿದ ನಂತರ  ಮೇಲೂ ಒಟ್ಟು 57 ವರ್ಷಗಳ ಕಾಲ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸವಿದ್ದ ಅವರ ಸರಳ, ಆದರ್ಶಮಯ ಜೀವನ ಎಲ್ಲರಿಗೂ ಮಾದರಿ. ಅಷ್ಟು ದೊಡ್ಡ ಹುದ್ಧೆಯಲ್ಲಿದ್ದರೂ ವಿದ್ಯಾರ್ಥಿಗಳ ವಸತಿ ಗೃಹದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದ ಅವರ ಸರಳತೆ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ್ದು, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆಗಳು ಅನನ್ಯ ಮತ್ತು ಅನುಕರಣೀಯ.

ಡಾ. ಹೆಚ್ ಎನ್ ಎಂದಾಗ ನಮಗೆ ನೆನಪಾಗೋದೇ ಅವರ ನಾಸ್ತಿಕತೆ. ನಾಸ್ತಿಕರು ಎಂದ ಮಾತ್ರಕ್ಕೇ ಅವರು ಧರ್ಮ ಮತ್ತು ದೇವರನ್ನು ವಿರೋಧಿಸುತ್ತಿದ್ದರು ಎಂದಲ್ಲ. ವಿಜ್ಞಾನದಲ್ಲಿ, ವಿಜ್ಞಾನಿಕ ಮನೋಭಾವದಲ್ಲಿ ಅಚಲವಾದ ನಂಬಿಕೆ ಹೊಂದಿದ್ದ ಡಾ|| ಎಚ್.ಎನ್ ಅವರು ಮೂಢನಂಬಿಕೆ, ಮೌಢ್ಯಗಳ ವಿರುದ್ದ ಹೋರಾಡುತ್ತಿದ್ದರು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಕಂದಾಚಾರಗಳು, ಮೂಢನಂಬಿಕೆಗಳು ಮತ್ತು ಪವಾಡಗಳ ಮೂಲಕ ಜನರನ್ನು ಮರಳು ಮಾಡುತ್ತಿದ್ದದ್ದನ್ನು ಪ್ರಭಲವಾಗಿ ವಿರೋಧಿಸುತ್ತಿದ್ದರು. ಗ್ರಹಣದ ಸಮಯದಲ್ಲಿ ಗ್ರಹಣವನ್ನು ನೋಡಬಾರದು ಮತ್ತು ಏನನ್ನು ತಿನ್ನದೇ ಬರೀ ಹೊಟ್ಟೆಯಲ್ಲಿ ಇರಬೇಕು ಎಂಬುದನ್ನು ವಿರೋಧಿಸಿ, ಪ್ರತಿಯೊಂದು ಆಚರಣೆಗೆ ಬಲವಾದ ವೈಜ್ಞಾನಿಕ ಹಿನ್ನಲೆ ಇದ್ದಲ್ಲಿ ಮಾತ್ರವೇ ಅದನ್ನು ರೂಡಿಸಿಕೊಳ್ಳಬೇಕೆನ್ನುವುದು ಅವರ ವಾದವಾಗಿತ್ತು. ಹಾಗಾಗಿಯೇ ತಮ್ಮ ಅಂತ್ಯಕ್ರಿಯೆಯನ್ನೂ ಸಹಾ ಆಡಂಬರಗೊಳಿಸದೇ ಅತ್ಯಂತ ಸರಳವಾಗಿ ಮಾಡಬೇಕೆಂದು ಅವರು ಉಯಿಲು ಬರೆದಿಟ್ಟಿದ್ದರು. ಬೆಂಗಳೂರು ವಿಜ್ಞಾನ ವೇದಿಕೆ ಎಂಬ ವಿಜ್ಞಾನ ವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದರ ಜೊತೆ ಜೊತೆಗೆ  ಸಂಗೀತ, ನಾಟಕ ಮತ್ತು ನೃತ್ಯ ಮುಂತಾದ ಲಲಿತ ಕಲೆಗಳಿಗೂ ಪ್ರೋತ್ಸಾಹ ನೀಡಿದ್ದರು.

ಬಾಹ್ಯ ನೋಟಕ್ಕೆ ಅತ್ಯಂತ ಶಿಸ್ತಿನ ಮನುಷ್ಯ ಎಂದೇ ಕಾಣಿಸುತ್ತಿದ್ದ ಹೆಚ್.ಎನ್ ತಮ್ಮ ಆತ್ಮೀಯರ ಬಳಿ ಬಹಳ ಹಾಸ್ಯಮಯ ವ್ಯಕ್ತಿಯಾಗಿದ್ದರು ಎಂದರೆ ಆಶ್ವರ್ಯವಾಗಬಹುದು. ಅವರ ಮೂಲ ಹೆಸರಾಗಿದ್ಛ ಹುಚ್ಚ ನರಸಿಂಹಯ್ಯ ಎಂಬುದನ್ನು ಕೆಲವರು ಆಡಿಕೊಳ್ಳುತ್ತಿದ್ದ ಕಾರಣ ಹುಚ್ಚ ನರಸಿಂಹಯ್ಯ ಬದಲಾಗಿ ಅದನ್ನು ಹೆಚ್. ನರಸಿಂಹಯ್ಯ ಎಂದು ಬದಲಾಯಿಸಿ ಕೊಂಡದ್ದನ್ನು ನೋಡಿದ ಅವರ ಅತ್ಮೀಯರೊಬ್ಬರು ಏನು ನರಸಿಂಹಯ್ಯನವರೇ ಇದು ಎಂದಾಗ ಅಷ್ಟೇ ಸ್ಪರ್ಧಾತ್ಮಕವಾಗಿ ತೆಗೆದುಕೊಂಡ ನರಸಿಂಹಯ್ಯನವರು ಹುಚ್ಚು, ಹೆಚ್ ಆಯ್ತು ಅಷ್ಟೇ ಎಂದು ತಮ್ಮ ಬಗ್ಗೆ ತಾವೇ ನಗೆಯಾಡಿದ್ದರಂತೆ.

ಅದೇ ರೀತಿ ಅವರು ಅಂತಿಮ ದಿನಗಳಲ್ಲಿ ಅವರನ್ನು ಭೇಟಿಮಾಡಲು ಬಂದಿದ್ದ ಊರಿನವರೊಂದಿಗೆ ರಾಜಾ ನನಗ್ಯಾಕೋ ಇನ್ನು ಹೆಚ್ಚು ದಿನ ಬದುಕುವುದಿಲ್ಲಾ ಎಂದನಿಸುತ್ತಿದೆ. ನನ್ನ ಸಾವಿನ ನಂತರ ನನ್ನ ಉಯಿಲಿನಲ್ಲಿ ಬರದಿರುವಂತೆ ನಮ್ಮ ಊರಿನಲ್ಲೇ ಅತ್ಯಂತ ಸರಳವಾಗಿ ಅಂತ್ಯ ಸಂಸ್ಕಾರ ಮಾಡಿ ಬಿಡಿ. ಆದರೆ ನನ್ನನ್ನು ಸುಡುವಾಗ ಹಸೀ ಸೌದೆ ಬದಲು ಚೆನ್ನಾಗಿ ಒಣಗಿರುವ ಸೌದೇಯನ್ನೇ ಬಳಸಿರಪ್ಪಾ ಎಂದರಂತೆ. ಅದಕ್ಕೆ ಅವರ ಅತ್ಮಿಯರು ಇದೇನು ಮೇಷ್ಟ್ರೇ ಹೀಗೆ ಮಾತನಾಡ್ತೀರಿ ಬಿಡ್ತು ಅನ್ನಿ. ನಿಮಗೇನೂ ಆಗುವುದಿಲ್ಲ ಇನ್ನೂ ಹತ್ತಾರು ವರ್ಷಗಳು ಆರೋಗ್ಯವಾಗಿ ಇರ್ತೀರಿ ಎಂದು ಸಮಾಧಾನ ಪಡಿಸಿದ್ದಲ್ಲದೇ, ಕುತೂಹಲದಿಂದ ಅಲ್ಲಾ ಮೇಷ್ಟ್ರೇ  ಅಕಸ್ಮಾತ್ ನೀವು ಸತ್ತು ಹೋದ ಮೇಲೆ ಹಸೀ ಸೌದೆಯಾಗಲೀ ಅಥವಾ ಒಣಸೌದೆಯಾಗಲೀ ಇದ್ರೇ ನಿಮಗೇನು ತೊಂದರೆ ಅಂದಾಗ, ಹೆಚ್ಚೆನ್ ಅವರು ನಗುನಗುತ್ತಾ ನಿಮಗೇ ತಿಳಿದಂತೆ ನನಗೆ ಒಣಕೆಮ್ಮು ಜಾಸ್ತಿ ಇದೆ. ಹಸೀ ಸೌದೇಯಾದ್ರೇ ಹೆಚ್ಚಿನ ಹೊಗೆ ಬಂದು ಕೆಮ್ಮು ಜಾಸ್ತಿ ಆಗುತ್ತದೆ. ಒಣ ಸೌದೆಯಾದ್ರೇ ಯಾವುದೇ ತೊಂದ್ರೆ ಇಲ್ದೇ ದೇಹ ಸುಟ್ಟು ಹೋಗುತ್ತದೆ  ಎಂದು  ಅಲ್ಲಿದ್ದವರನ್ನೆಲ್ಲಾ ನಗೆಗಡಲಲ್ಲಿ ತೇಲಾಡಿಸಿದ್ರಂತೆ.

ಇನ್ನು ಆಯುಧಪೂಜೆಯ ಸಮಯದಲ್ಲಿ ಬೂದುಗುಂಬಳ ಕಾಯಿಯನ್ನು ಅಮಾನುಷವಾಗಿ ದಾರುಣ ರೀತಿಯಲ್ಲಿ ದಾರಿಯುದ್ದಕ್ಕೂ ಒಡೆದು ಹಾಕಿದ್ದ  ದೃಶ್ಯವನ್ನು ನೋಡಿ ಬೇಸರಗೊಂಡು ಬೂದುಗುಂಬಳ ಕಾಯಿಗೆ ಬರೆದಿದ್ದ ಹಾಸ್ಯಮಯವಾದ ಬಹಿರಂಗ ಪತ್ರದ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸುತಿದ್ದೇನೆ. ಪತ್ರದ ವಿಷಯ ಬಹಳ ಮೋಜೆನಿಸಿದರೂ ಕಡೆಯ ಸಾಲುಗಳು ಅವರ ಅಂತಃಕರಣ ಮತ್ತು ಮಾನವೀಯತೆಯನ್ನು ಎತ್ತಿ ತೋರಿಸುತ್ತದೆ.

ನಿನ್ನ ಬಗ್ಗೆ ಮೊದಲಿನಿಂದಲೂ ತುಂಬಾ ಅನುಕಂಪ. ನಾನು ಉಪಕುಲಪತಿಯಾಗಿದ್ದಾಗ ನಮ್ಮ ವಿಶ್ವವಿದ್ಯಾಲಯದ ವಾಹನಗಳ ಚಾಲಕರು, ಕಂಡಕ್ಟರ್‌ಗಳು ಒಂದು ದಿನ ನನ್ನ ಆಫೀಸಿಗೆ ಬಂದರು. ಏನಪ್ಪಾ ವಿಷಯ ಅಂದೆ. ನಾಳೆ ಆಯುಧಪೂಜೆ ಸಾರ್ ಅಂದರು. ಎಂತೆಂತಹ ವಿದ್ಯಾವಂತರಿಗೆ, ವಿಜ್ಞಾನಿಗಳಿಗೆ ವೈಜ್ಞಾನಿಕ ಮನೋಭಾವದ ಅಭಾವವಿರುವುದರಿಂದ ಇವರಿಗೆ ವೈಚಾರಿಕ ಮನೋಭಾವವನ್ನು ಭೋಧಿಸುವುದು ಸರಿಯಲ್ಲವೆಂದು ನಾಲ್ಕು ಸೆಕೆಂಡ್ ಯೋಚನೆ ಮಾಡಿ. ಆಯುಧಪೂಜೆ ಮಾಡಿಯಪ್ಪ. ಆದರೆ ನನ್ನದೊಂದು ಸಲಹೆ, ಎಲ್ಲಾ ವಾಹನಗಳನ್ನು ಒಟ್ಟಿಗೆ ನಿಲ್ಲಿಸಿ ಅವುಗಳಿಗೆಲ್ಲಾ ಸೇರಿ ಒಂದೇ ಒಂದು ಬೂದುಗುಂಬಳಕಾಯಿ ಒಡೆಯಿರಿ ಎಂದೆ. ಅದಕ್ಕೆ ಅವರು ಏನು ಸಾರ್ ಹೀಗಂತೀರಿ. ಒಂದೊಂದು ವಾಹನಕ್ಕೂ ಒಂದೊಂದು ಬೂದುಗುಂಬಳಕಾಯಿ ಒಡದೇ ಆಕ್ಸಿಡೆಂಟ್‌ಗಳು ಕಡಿಮೆ ಆಗಲಿಲ್ಲ. ಅಂದ ಮೇಲೆ ಎಲ್ಲಾ ವಾಹನಗಳಿಗೂ ಸೇರಿ ಒಂದೇ ಒಂದು ಬೂದುಗುಂಬಳ ಕಾಯಿ ಒಡೆದರೆ ನಮ್ಮ ಗತಿ ಏನ್ ಸಾರ್? ಅಂತ ಹೇಳಿದರು. ಚರ್ಚಿಸಿ ಉಪಯೋಗವಿಲ್ಲವೆಂದು ಸರಿ, ಹಿಂದಿನಂತೆಯೇ ಆಯುಧಪೂಜೆ ಮಾಡಿ ಅಂದೆ. ಒಂದೊಂದು ವಾಹನಕ್ಕೂ ನಿನ್ನ ವಂಶದ ಒಬ್ಬೊಬ್ಬರನ್ನು ಬಲಿ ಕೊಟ್ಟರು. ಆ ಪಾಪದಲ್ಲಿ ನಾನೂ ಭಾಗಿಯಾದೆ.

ನಿನ್ನನ್ನು ಹೀಗೆ ಆಯುಧಪೂಜೆ ದಿನ ಬೀದಿಯಲ್ಲಿ ಕೊಲೆ ಮಾಡುವುದರಿಂದ ಅಪಘಾತಗಳು ಕಡಿಮೆ ಆಗುವುದಿಲ್ಲ ಎಂದು ಹಲವು ದಶಕಗಳಿಂದ ಬಡುಕೋತ ಇದ್ದೀನಿ. ಯಾರೂ ಇಲ್ಲಿಯ ತನಕ ಜಗ್ಗಿಯೇ ಇಲ್ಲ. ಈಗಿನ ಶಿಕ್ಷಣಪದ್ದತಿಯಿಂದ, ವಿಜ್ಞಾನದ ಬೆಳವಣಿಗೆಯಿಂದ ಇಂತಹ ಅರ್ಥವಿಲ್ಲದ ನಂಬಿಕೆಗಳನ್ನು ಸಾಕಷ್ಟು ಕಡಿಮೆ ಮಾಡಲು ಆಗಿಲ್ಲ. ಹೇಳಿಕೊಳ್ಳುವಂತಹ ಸಮಾಜ ಸುಧಾರಣೆ ಆಗಿಲ್ಲ. ವಿಜ್ಞಾನದ ಪಾಡಿಗೆ ವಿಜ್ಞಾನ. ಮೂಡನಂಬಿಕೆಗಳ ಪಾಡಿಗೆ ಮೂಢನಂಬಿಕೆಗಳು.

ಬದುಕಿರುವಾಗ ದೇಹಕ್ಕೆ ಮನಸ್ಸಿಗೆ ಸಾಕಷ್ಟು ಕಷ್ಟಕೊಟ್ಟು ಸತ್ತಾಗ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವ ಜನ ನಾವು. ನಿನ್ನ ದೇಹಕ್ಕೆ ಮತ್ತು ಮನಸ್ಸಿಗೆ ಅಸಾಧ್ಯ ನೋವಾಗಿದೆ ಎಂದು ನನಗೆ ಚೆನ್ನಾಗಿ ಗೊತ್ತು. ಗೊತ್ತಿಲ್ಲದ ಆತ್ಮದ ಬಗ್ಗೆ ನಾನು ಏನನ್ನೂ ಹೇಳಲೂ ಇಚ್ಚಿಸುವುದಿಲ್ಲ.

ಕನ್ನಡದಲ್ಲಿ ಮಾತನಾಡುವುದು ಅಪಮಾನ ಎಂದು ಭಾವಿಸುವವರಿಗೆ ಅವರು ಹೇಳಿದ ಮಾತು ಮುಟ್ಟಿ ನೋಡಿಕೊಳ್ಳುವಂತಿದೆ. ತಪ್ಪು ಇಂಗ್ಲೀಷ್ ಮಾತನಾಡುವುದು ಅವಮಾನ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಏಕೆಂದರೆ ಅದು ನಮ್ಮ ಭಾಷೆ ಅಲ್ಲ. ತಪ್ಪು ತಪ್ಪು ಇಂಗ್ಲೀಷಿನಲ್ಲಾದರೂ ಮಾತನಾಡುತ್ತೇವೆ ಆದರೇ, ಕನ್ನಡದಲ್ಲಿ ಮಾತನ್ನೇ ಆಡೋದಿಲ್ಲ ಎನ್ನುವುದು ಅವಮಾನದ ಪರಾಕಾಷ್ಠತೆ. ಎಚ್ಚೆನ್ ಅವರ ಈ ಮಾತು ಇಂಗ್ಲೀಷ್ ಒಂದೇ ಅಲ್ಲದೇ ಇತರೇ ಎಲ್ಲಾ ಭಾಷೆಗಳಿಗೂ ಅನ್ವಯಿಸುತ್ತದೆ.

ಅದೇ ರೀತಿ ಭ್ರೂಣದಿಂದ ಸಮಾಧಿವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕೇ ಹೊರತು ಅದು ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೇ ಸೀಮಿತ ಆಗಬಾರದು ಎನ್ನುವ ಯೋಚನೆ ಅವರದ್ದಾಗಿತ್ತು.  ವೈಚಾರಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಮೂಲ ಕರ್ತವ್ಯವಾಗಬೇಕು ಎಂಬುದು ನರಸಿಂಹಯ್ಯ ಅವರ ಉದ್ದೇಶವಾಗಿತ್ತು.

ಇಷ್ಟೆಲ್ಲಾ ವಿಶಿಷ್ಟ ಸಾಧನೆಗಳನ್ನು ಮಾಡಿದ್ದ ನರಸಿಂಹಯ್ಯನವರಿಗೆ ಸಂದ ಪ್ರಶಸ್ತಿಗಳು ಮತ್ತು ಗೌರವಗಳು ಹೀಗಿವೆ.

  • ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ತಾಮ್ರಪತ್ರ ಪ್ರಶಸ್ತಿ.
  • ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ
  • 1984ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ.
  • ಕಲಬುರ್ಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
  • ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ.
  • ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಬಸವ ಪುರಸ್ಕಾರ.
  • ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪುರಸ್ಕಾರ.
  • ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಫೆಲೋ ಗೌರವ.
  • ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.

ವಯೋಸಹಜ ದೀರ್ಘಕಾಲಿಕ ಖಾಯಿಲೆಗಳಿಂದ ನರಳುತ್ತಿದ್ದ ಹೆಚ್. ನರಸಿಂಹಯ್ಯನವರು ಜನವರಿ 31, 2005 ರಲ್ಲಿ ನಮ್ಮನ್ನೆಲ್ಲಾ  ಅಗಲಿದಾಗ ಕನ್ನಡ ಸಾರಸ್ವತ ಲೋಕ ತನ್ನ ಹಿರಿಯ ಅಜ್ಜನನ್ನು ಕಳೆದುಕೊಂಡಿತು ಎಂದರೂ ತಪ್ಪಾಗಲಾರದು. ಅವರ ನೆನಪು ಸದಾಕಾಲವೂ ಹಚ್ಚಹಸಿರಾಗಿಡುವ ಪ್ರಯತ್ನವಾಗಿ ಅವರ  ಹುಟ್ಟೂರು ಹೊಸೂರಿನಲ್ಲಿ ಅವರ ಹೆಸರಿನಲ್ಲಿ ಒಂದು ಪ್ರೌಢಶಾಲೆಯನ್ನು ಆರಂಭಿಸಲಾಗಿದೆ.

ಸರಳ ಸಜ್ಜನರಾಗಿ ಸದ್ದಿಲ್ಲದೇ ಭಾರತದ ಭಾವೀ ಪ್ರಜೆಗಳದ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗಾಗಿಯೇ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಹೆಚ್ ನರಸಿಂಹಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s