ಎಂ. ಚಿದಾನಂದಮೂರ್ತಿ

ಅದು ಎಂಭತ್ತರ ದಶಕ. ಬೆಂಗಳೂರಿನ ದಂಡು ಪ್ರದೇಶದ ಒಂದು ಸಿನಿಮಾ ಮಂದಿರದಲ್ಲಿ ಟಿಕೆಟ್ಟಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ನಡು ವಯಸ್ಸಿನ ಕುಳ್ಳಗಿನ ಕನ್ನಡದ ಪ್ರಾಧ್ಯಾಪಕರೊಬ್ಬರು ನಾಲ್ಕು ಟಿಕೆಟ್ ಕೊಡಿ ಎಂದು ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಕೇಳಿದಾಗ, ಇದನ್ನು ಕೇಳಿದ ಕೌಂಟರಿನಲ್ಲಿದ್ದ ವ್ಯಕ್ತಿ ಹಾವು ಕಡಿದಂತಾಗಿ ನಿಮಗೆ ಇಂಗ್ಲಿಷ್ ಬರುವುದಿಲ್ಲವೇ? ಇಂಗ್ಲೀಷಿನಲ್ಲಿ ಮಾತನಾಡಿ ಎಂದು ಒತ್ತಾಯ ಮಾಡಿದ. ಆದರೆ ಆ ಕನ್ನಡದ ಪ್ರಾಧ್ಯಾಪಕರು ನನಗೆ ಇಂಗ್ಲೀಷ್ ಬರುತ್ತದೆ ಯಾದರೂ ಕರ್ನಾಟಕದಲ್ಲಿ ಕನ್ನಡಿಗನೇ ಸ್ವಾರ್ವಭೌಮ ಇಲ್ಲಿ ಕನ್ನಡಕ್ಕೇ ಪ್ರಥಮ ಪ್ರಾಶಸ್ತ್ಯ ಎಂದು ಹೇಳಿದರು. ಹೀಗೆ ಮಾತಿಗೆ ಮಾತು ಬೆಳೆದದ್ದನ್ನು ಗಮನಿಸಿದ, ಬಂದ ಚಿತ್ರ ಮಂದಿರದ ಮ್ಯಾನೇಜರ್ ಕೂಡಾ ಕನ್ನಡದಲ್ಲಿ ಮಾತನಾಡಿದರೆ, ಚಿತ್ರಮಂದಿರದ ಆವರಣದಿಂದ ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದ್ದನ್ನು ಕೇಳಿದರೂ ಕೇಳದಂತೆ ಮೂಕ ಪ್ರೇಕ್ಷಕರಾಗಿ ಮೌನದಿಂದ ನೋಡುತ್ತಿದ್ದ ಸುತ್ತಲೂ ಇದ್ದ ಕನ್ನಡಿಗರ ಬಗ್ಗೆ ಪ್ರಾಧ್ಯಾಪಕರಲ್ಲಿ ಸಿಟ್ಟು ಸೆಡವುಗಳನ್ನು ತರಿಸಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕರ್ನಾಟಕದ ರಾಜಧಾನಿಯಲ್ಲೇ ಕನ್ನಡದ ಈ ದುಃಸ್ಥಿತಿಯ ಬಗ್ಗೆ ಸಂಕಟ ತರಿಸಿತ್ತು. ಅಂದಿನಿಂದಲೇ ಕರ್ನಾಟಕಾದ್ಯಂತ ಕನ್ನಡದ ಹಿರಿಮೆ, ಗರಿಮೆ ಮತ್ತು ಅಸ್ಮಿತೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಮತ್ತು ಕನ್ನಡಕ್ಕಾಗಿಯೇ ಮುಂದಿನ ಬದುಕಿನ ಜೀವನವನ್ನು ಮೀಸಲಿಡಿಸಿ ಕನ್ನಡ ನಾಡು ನುಡಿ, ಸಂಸ್ಕ್ರಾರ ಮತ್ತು ಸಂಪ್ರದಾಯಗಳನ್ನು ಎತ್ತಿ ಹಿಡಿಯುವುದಕ್ಕಾಗಿಯೇ ಅಹರ್ನಿಶಿ ದುಡಿಯುವ ದೃಢ ಸಂಕಲ್ಪವನ್ನು ಮಾಡಿದ ಕನ್ನಡ ಗರುಡ ಎಂದೇ ಖ್ಯಾತರಾಗಿರುವ ಕನ್ನಡದ ಗಾರುಡಿಗ ಶ್ರೀ ಎಂ.ಚಿದಾನಂದ ಮೂರ್ತಿಗಳು, ನಮ್ಮೆಲ್ಲರ ಪ್ರೀತಿಯ ಚಿಮೂಗಳೇ ನಮ್ಮ ಇಂದಿನ ಕಥಾನಾಯಕರು.

1931 ಮೇ 10ನೇ ತಾರೀಖಿನಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಜನ್ಮಿಸಿದ ಚಿದಾನಂದ ಮೂರ್ತಿಗಳು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ನಡೆಯಿತು. ಓದಿನಲ್ಲಿ ಅತ್ಯಂತ ಚುರುಕಾಗಿದ್ದ ಮೂರ್ತಿಗಳು, ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕೇ ಹತ್ತನೇ ರ‌್ಯಾಂಕ್ ಗಳಿಸಿದ್ದರೂ, ಡಾಕ್ಟರ್ ಅಥವಾ ಇಂಜಿನಿಯರಿಂಗ್ ಕೋರ್ಸಿಗೆ ಸೇರದೇ ಕನ್ನಡ ಆನರ್ಸ್ ಸೇರಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದದ್ದು ಅವರ ಕನ್ನಡ ಪ್ರೇಮವನ್ನು ಎತ್ತಿ ತೋರಿಸುವಂತಿತ್ತು. ಕಾಲೇಜಿನ ಎಲ್ಲಾ ಅಧ್ಯಾಪಕರ ಅಚ್ಚು ಮೆಚ್ಚಿನ ಶಿಷ್ಯರಾಗಿ ಅವರ ಸೂಕ್ತ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿ ನಿಲಯದ ಪೋಷಣೆಯಲ್ಲಿ ಚಿನ್ನದ ಪದಕದೊಂದಿಗೆ ತಮ್ಮ ಕನ್ನಡ ಆನರ್ಸ್ ಪಡೆಡು ಅಧ್ಯಾಪಕ ವೃತ್ತಿಯನ್ನು ಕೈಹಿಡಿದು ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದ ನಂತರ ಮೈಸೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡು ಮತ್ತೆ ಪ್ರಥಮ ಸ್ಥಾನದೊಂದಿಗೆ ಕನ್ನಡ ಎಂ.ಎ ಪದವಿಯನ್ನು ಗಳಿಸುತ್ತಾರೆ.

ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪಂಪಕವಿ ಮತ್ತು ಮೌಲ್ಯಪ್ರಸಾರದ ಮೂಲಕ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾ ಪ್ರಬಂಧ ಸಿದ್ಧಪಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದು ಡಾ. ಎಂ. ಚಿದಾನಂದ ಮೂರ್ತಿಗಳಾಗುತ್ತಾರೆ. ಕ್ರಿ.ಶ. 450 ರಿಂದ ಕ್ರಿ.ಶ. 1150 ರವರೆಗಿನ ಶಾಸನಗಳ ವ್ಯವಸ್ಥಿತವಾದ ಅವರ ಈ ಅಧ್ಯಯನದ ಜೊತೆಗೆ ಅಂದಿನ ಕಾಲಮಾನದಲ್ಲಿ ಆಚರಣೆಯಲ್ಲಿದ್ದ ವಿವಿಧ ರೀತಿಯ ಸಾಂಸ್ಕೃತಿಕ ಆಚರಣೆಗಳ ಮೇಲೆ, ಬೆಳಕು ಚೆಲ್ಲುವ ಈ ಕೃತಿಯು ಇಂದಿಗೂ ಕನ್ನಡದ ಡಾಕ್ಟರೇಟ್ ಪ್ರಬಂಧಗಳಲ್ಲಿ ಅತ್ಯುತ್ತಮವಾದದ್ದು ಎಂದೇ ಖ್ಯಾತಿ ಪಡೆದಿರುವುದು ಗಮನಾರ್ಹವಾಗಿದೆ.

1957ರಲ್ಲಿ ಚಿದಾನಂದಮೂರ್ತಿಗಳು ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗುತ್ತಾರೆ. ನಂತರ 1960ರಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು. 1968ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು ಬಳಿಕ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಮಾಡಿದ ನಂತರ ಮೇಲೆ ತಿಳಿಸಿದ ಚಿತ್ರಮಂದಿರದ ದುರ್ಘಟನೆಯಿಂದ ಕನ್ನಡಕ್ಕಾಗಿ ತಮ್ಮ ಮುಂದಿನ ಜೀವಮಾನವನ್ನು ಮೀಸಲಿಡಬೇಕೆಂದು ನಿರ್ಧರಿಸಿ 1990ರಲ್ಲಿ ಸ್ವಯಂಸೇವಾ ನಿವೃತ್ತಿ ಪಡೆದು ಸಂಪೂರ್ಣವಾಗಿ ಕನ್ನಡ ನಾಡು, ನುಡಿ ಸಂಸ್ಕೃತಿಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ.

ಮೂರ್ತಿಗಳು, ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್,ಥೈಲಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳನ್ನು ಸುತ್ತಿದ್ದಲ್ಲದೇ, ಕನ್ನಡ ಪರ ಸಂಶೋಧನೆಯ ಅಂಗವಾಗಿ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಅವರು ವ್ಯಾಪಕವಾಗಿ ಸುತ್ತುವ ಮೂಲಕ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆಯ ಮಾತನ್ನು ಅಕ್ಷರಶಃ ಪಾಲಿಸಿದ್ದರು ಮೂರ್ತಿಗಳು. ತಮ್ಮ ನಿರಂತರ ಅಧ್ಯಯನಶೀಲತೆ ಮತ್ತು ವಿದ್ವತ್ತಿನ ಪರಿಣಾಮದಿಂದಾಗಿ ಬರ್ಕ್ಲಿ, ಫಿಲಡೆಲ್ಫಿಯ, ಸ್ಟಾನ್ಫೋರ್ಡ್ ಮುಂತಾದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿಶ್ವಮಟ್ಟದ ಐತಿಹಾಸಿಕ ಭಾಷಾ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಪ್ರಬಂಧಗಳನ್ನು ಸಮರ್ಥವಾಗಿ ಮಂಡಿಸಿ ಕರ್ನಾಟಕ ಮತ್ತು ಭಾರತ ದೇಶದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿದ್ದರು ಚಿದಾನಂದ ಮೂರ್ತಿಗಳು.

ಚಿದಾನಂದಮೂರ್ತಿಗಳು ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳು, ನಾಲ್ಕುನೂರಕ್ಕೂ ಹೆಚ್ಚಿನ ಸಂಪ್ರಬಂಧಗಳ ಮೂಲಕ ಕನ್ನಡ ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ,ಕರ್ಣಾಟಕ ಇತಿಹಾಸ –ಸಂಸ್ಕೃತಿ ಹೀಗೆ ಬಹುತೇಕ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ನಂತರದ ದಿನಗಳಲ್ಲಿ ಮೂರ್ತಿಗಳು ತಮ್ಮನ್ನು ತಾವು ಕನ್ನಡ ಮತ್ತು ಕನ್ನಡಿಗರ ಇತಿಹಾಸದ ಕುರಿತಾದ ಸಂಶೋಧನ ಕ್ಷೇತ್ರದಲ್ಲಿ ತಮ್ಮನ್ನು ತೊಡಸಿಸಿಕೊಂಡು ಚಿರಸ್ಮರಣೀಯವಾದ ಕೆಲಸಗಳನ್ನು ಮಾಡಿದ್ದಾರೆ. ಯುಗ ಪ್ರವರ್ತನೆಯ ಸಂಶೋಧಕ, ಸಂಶೋಧನೆಯ ಸಂಶೋಧಕ, ಸಂಸ್ಕೃತಿ ಸಂಶೋಧಕ, ತೀ.ನಂ.ಶ್ರೀ ಉತ್ತರಾಧಿಕಾರಿ ಎಂಬೆಲ್ಲಾ ಹೊಗಳಿಕೆಗಳು ಅವರ ಕೆಲಸದ ಅನ್ವರ್ಥವಾಗಿ ದೊರೆತಿದೆ.

1982ರಲ್ಲಿ ಗೋಕಾಕ್ ವರದಿಯ ಜಾರಿಗೆ ಕುರಿತಂತೆ ಡಾ.ರಾಜ್ ಅವರ ನೇತೃತ್ವದಲ್ಲಿ ರಾಜ್ಯದ್ಯಂತ ನಡೆದ ವಿವಿಧ ಹೋರಾಟಗಳಲ್ಲಿ ಕನ್ನಡ ಖ್ಯಾತ ಸಾಹಿತಿಗಳು, ಚಲನಚಿತ್ರ ಕಲಾವಿದರು ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದು ಈಗ ಇತಿಹಾಸ. ಆ ಹೋರಾಟದ ಸ್ಪೂರ್ತಿಯಿಂದಾಗಿ ಅದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಸಾಹಿತಿಗಳ ಕಲಾವಿದರ ಬಳಗ ಎಂಬುದು ಚಿದಾನಂದಮೂರ್ತಿಯವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದು, ಮೂರ್ತಿಗಳು ಕನ್ನಡ ಚಳುವಳಿಯ ಹೊಸ ನಾಯಕರಾಗಿದ್ದಲ್ಲದೇ, 1988ರಲ್ಲಿ ಕನ್ನಡ ಶಕ್ತಿ ಕೇಂದ್ರವನ್ನು ಅಸ್ತಿತ್ವಕ್ಕೆ ತಂದು, ಜಿಲ್ಲಾ ಮಟ್ಟಗಳಲ್ಲಿ ಇದರ ಶಾಖೆಗಳು ಆರಂಭವಾಗಿ ಕನ್ನಡಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತವಾಯಿತು.

ಕನ್ನಡಕ್ಕಾಗಿ ನಿಸ್ವಾರ್ಥವಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ದುಡಿಯುವ ಕಾರ್ಯಕರ್ತರನ ಪಡೆಯನ್ನು ಕಟ್ಟಿದ್ದು ಚಿದಾನಂದಮೂರ್ತಿಯವರ ದೊಡ್ಡ ಸಾಧನೆ ಎಂದರೂ ತಪ್ಪಾಗಲಾರದು. ಈ ಕಾರ್ಯಕರ್ತರಲ್ಲಿ ಕನ್ನಡ ಮತ್ತು ಕರ್ನಾಟಕಗಳ ಬಗ್ಗೆ ಕುರಿತು ಅರಿವು ಮೂಡಿಸಲು ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ಅವರುಗಳಿಗೆ ಮಾತುಗಾರಿಕೆ ಶಿಬಿರಗಳನ್ನೂ ಏರ್ಪಡಿಸಿದ್ದಲ್ಲದೇ, ಜನಸಾಮಾನ್ಯರಲ್ಲಿ ಕನ್ನಡತನ ಜಾಗೃತಿಯಾಗಲು, ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಕಿರುಹೊತ್ತಗೆಯನ್ನೂ ಪ್ರಕಟಿಸಿದರು. ಇದಾದ ನಂತರ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಬಹಳ ಉಪಯುಕ್ತವಾದ ಅಂಕಿ ಅಂಶಗಳು ಮತ್ತು ಅನೇಕ ಮಾಹಿತಿಗಳನ್ನು ಒಳಗೊಂಡ ಪುಸ್ತಕವನ್ನು ತಮ್ಮ ಸಂಪಾದಕತ್ವದಲ್ಲಿ ಹೊರತಂದರು. ಇದು ಕನ್ನಡಿಗರ ಅನಧಿಕೃತವಾದ ಸಂವಿಧಾನ ಎಂಬ ಪ್ರಶಂಸೆಗೂ ಪಾತ್ರವಾಯಿತು.

ಕನ್ನಡದ ಬಗೆಗಿನ ಚಿದಾನಂದಮೂರ್ತಿಗಳ ಮತ್ತೊಂದು ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮಾಡಿರುವುದು. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿಗಳಿಗೆ ಕನ್ನಡಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನೇಕೆ ಅಸ್ತಿತ್ವಕ್ಕೆ ತರಬಾರದು ಎಂಬ ಯೋಚನೆ ಬಂದು, ತಮ್ಮ ಸಾಹಿತಿಗಳು ಮತ್ತು ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಶ್ರಮವಹಿಸಿ, ಒಂದೆರಡು ವರ್ಷಗಳಲ್ಲಿಯೇ ಅದರ ಕಾರ್ಯಾರಂಭಕ್ಕೆ ಕಾರಣೀಭೂತರಾದರು. ಈ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧನೆ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.

ಚಿದಾನಂದಮೂರ್ತಿಯವರು ಹಲವಾರು ಪ್ರಶಸ್ತಿಗಳನ್ನು ಗೌರವಗಳನ್ನು ಪಡೆದಿದ್ದಾರೆ ಅದರಲ್ಲಿ ಮುಖ್ಯವಾದವುಗಳೆಂದರೆ

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,(1984)
  • ರಾಜ್ಯೋತ್ಸವ ಪ್ರಶಸ್ತಿ,(1985)
  • ಹೊಸತು ಹೊಸತು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,(1997)
  • ಪಂಪ ಪ್ರಶಸ್ತಿ, (2002)
  • ಜನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು
  • ಸಂಶೋಧನ ಅವರಿಗೆ ಸಮರ್ಪಿತವಾಗಿರುವ ಅಭಿನಂದನ ಗ್ರಂಥ

ಕನ್ನಡದ ಸಾತ್ವಿಕ ಶಕ್ತಿ, ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ ಧೀಮಂತ ವ್ಯಕ್ತಿ, ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿಯವರು ತಮ್ಮ ವಯೋಸಹಜವಾಗಿ ವೃದ್ಯಾಪ್ಯದಲ್ಲಿ ಜನವರಿ‌ 11, 2020 ರಂದು ನಮ್ಮೆಲ್ಲರನ್ನು ಅಗಲುವ ಮೂಲಕ ಕನ್ನಡ ತಾಯಿ ತನ್ನ ನೆಚ್ಚಿನ ಕಟ್ಟಾಳುವೊಬ್ಬನನ್ನು ಕಳೆದು ಕೊಂಡಳು ಎಂದರೂ ಅತಿಶಯೋಕ್ತಿಯೇನಲ್ಲ. ಚಿದಾನಂದಮೂರ್ತಿಯವರ ಜನ್ಮ ದಿನವಾದ ಮೇ 10ರಂದು ಪ್ರತೀ ವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಮೂರ್ತಿಗಳ ಹೆಸರಿನಲ್ಲಿ ಚಿದಾನಂದ ಪ್ರಶಸ್ತಿ ನೀಡುವ ಮೂಲಕ ಕನ್ನಡಿಗರು ಚಿದಾನಂದ ಮೂರ್ತಿಗಳ ಬಗ್ಗೆ ಇಟ್ಟಿರುವ ಪ್ರೀತಿ ಅಭಿಮಾನಗಳ ಕುರುಹಾಗಿವೆ.

ಮೂರು ದಶಕಗಳಿಗೂ ಹೆಚ್ಚಿನ ಕಾಲ ಕನ್ನಡ ಭಾಷಾ ಚಳುವಳಿಯ ಅವಿಭಾಜ್ಯ ಅಂಗವಾಗಿದ್ದ ಮತ್ತು ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿ ಮತ್ತು ಕನ್ನಡ ಕರ್ನಾಟಕದ ಹಿತಾಸಕ್ತಿಗಳನ್ನು ಕಾಪಾಡಲು ತಮ್ಮದೇ ಆದ ರೀತಿಯಲ್ಲಿ ಹೋರಾಡಿದ ಎಂ ಚಿದಾನಂದ ಮೂರ್ತಿಗಳೂ ನಿಜವಾಗಿಯೂ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s