ಕೆ.ಎಸ್. ನಾರಾಯಣಾಚಾರ್ಯ

ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಲೋಕದಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಮತ್ತು ಮಾತನಾಡಬಲ್ಲಂತಹ ವ್ಯಕ್ತಿಗಳು ಇನ್ನೂ ನಮ್ಮೊಂದಿಗೆ ಇದ್ದಾರೆ ಎಂದರೆ ಆವರು ಕೆ. ಎಸ್. ನಾರಾಯಣಾಚಾರ್ಯರು ಎಂದರೆ ಅತಿಶಯೋಕ್ತಿಯೇನಲ್ಲ. ನಾರಾಯಣಚಾರ್ಯರು ಕೇವಲ ಕನ್ನಡಕ್ಕೇ ಸೀಮಿತವಾಗದೇ ಭಾರತೀಯ ಸಂಸ್ಕೃತಿಯ ಹಿರಿಯ ವಿದ್ವಾಂಸರು, ಲೇಖಕರು, ಧರ್ಮ ಪ್ರಚಾರಕರು ಮತ್ತು ಹೆಮ್ಮೆಯ ಪ್ರವಚನಕಾರರೂ ಹೌದು.

ಬೆಂಗಳೂರು ಜಿಲ್ಲೆಯ ಕಾನಕನಹಳ್ಳಿ ಅಂದರೆ ಈಗಿನ ಕನಕಪುರದ ಶ್ರೀ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್ ಮತ್ತು ರಂಗನಾಯಕಮ್ಮ ದಂಪತಿಗಳಿಗೆ 1933ರ ಅಕ್ಟೋಬರ್ 30ರಂದು ಜನಿಸಿದರು. ಅವರದ್ದು ವೈಷ್ಣವ ಸಂಪ್ರದಾಯದ ವೈದಿಕ ವಿದ್ವಾಂಸರ ಕುಟುಂಬ. ಮನೆಯ ಮಾತೃಭಾಷೆ ತಮಿಳಾದರೂ ಸ್ಥಳೀಯ ಭಾಷೆ ಕನ್ನಡ ಮತ್ತು ಸಂಸ್ಕೃತವನ್ನು ಬಾಲ್ಯದಿಂದಲೇ ತಮ್ಮ ಮನೆಯಲ್ಲಿಯೇ ಕರಗತಮಾಡಿಕೊಂಡಿದ್ದಲ್ಲದೇ, ತಮ್ಮ ಸ್ವಹಿತಾಸಕ್ತಿಯಿಂದ ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯವನ್ನು ಸಂಪಾದಿಸಿಕೊಂಡರು. ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕನಕಪುರದಲ್ಲಿಯೇ ಮುಗಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತಮ್ಮ ಬಿ.ಎಸ್ಸಿ. ಪದವಿಯ ನಂತರ ಬಿ.ಎ. ಆನರ್ಸ್‌ ಕೂಡಾ ಪಡೆದದ್ದಲ್ಲದೇ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವದ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದು ಅಧಿಕಾರಯುತವಾಗಿ ಡಾ. ಕೆ.ಎಸ್.ನಾರಾಯಣಚಾರ್ಯರೆನಿಸಿದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ನಾರಾಯಣಾರ್‍ಯರು ಆದೇ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ನಂತರ ಬೆಂಗಳೂರಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ನೆಮ್ಮದಿಯಾಗಿ ನಡೆಸುತ್ತಿದ್ದಾರೆ. ಹೇಳೀ ಕೇಳಿ ಧಾರವಾಡ ಸಾಹಿತಿಗಳು ಮತ್ತು ಸಂಗೀತಗಾರ ನೆಲೆ. ಹಾಗಾಗಿ ಅಲ್ಲಿಯ ಬಹುತೇಕ ಸಾಹಿತಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದ ಆಚಾರ್ಯರು, ವರಕವಿ ದ.ರಾ. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಅದುವರೆವಿಗೂ ಪ್ರವಚನದಲ್ಲೇ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದವರು ಅಲ್ಲಿಂದ ಮುಂದೆ ಲೇಖನದತ್ತಲೂ ಕೈಯ್ಯಾಡಿಸಿ ಪ್ರಖರವಾದ ಸಾಹಿತಿಗಳೆನಿಸಿದರು. ವೇದಗಳು, ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ವಿಶೇಷ ಪರಿಣಿತಿ ಪಡೆದಿರುವ ಅವರು ಬೇಂದ್ರೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಕೃತಿ ರಚಿಸಿದ್ದಾರೆ. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಪಡೆದಿರುವ ಆಚಾರ್‍ಯರು 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡದ ಬಹುತೇಕ ವಾರಪತ್ರಿಕೆಗಳಲ್ಲಿ ಅವರ ಲೇಖನಗಳು ಧಾರಾವಾಹಿಯ ರೂಪದಲ್ಲಿ ಸುಮಾರು ವರ್ಷಗಳವರೆಗೂ ಬಂದಿದೆಯಲ್ಲದೇ, ಅನೇಕ ಪತ್ರಿಕೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಅಂಕಣಗಳನ್ನು ಬರೆದು ಖ್ಯಾತಿಯನ್ನು ಪಡೆದಿದ್ದಾರೆ.

ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ಕಾರಣದಿಂದಲೇ ಡಾ.ಕೆ.ಎಸ್.ನಾರಾಯಣಾಚಾರ್ಯರ ಕೃತಿಗಳು ಹೆಚ್ಚಾಗಿ ಚರ್ಚಗೆ ಆಸ್ಪದ ಮಾಡಿಕೊಟ್ಟಿದೆ ಅವರು ಬರೆದ ವಾಲ್ಮೀಕಿ ಯಾರು? ಎಂಬ ಪುಸ್ತಕದ ವಿರುದ್ಧ ಹಲವಾರು ಪ್ರತಿಭಟನೆಗಳು ನಡೆದಿವೆ. ಬೇಡನಾಗಿದ್ದು ನಂತರ ಕ್ರೌಂಚ ಪಕ್ಷಿಯ ಬೇಟೆಯಾಡಿದ ಸಮಯದಲ್ಲಿ ಮನಃಪರಿವರ್ತನೆಯಾಗಿ ವಾಲ್ಮೀಕಿಯಾಗಿ ರಾಮಯಣ ಕೃತಿಯನ್ನು ರಚಿಸಿದ್ದಾರೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ ಆದರೆ. ನಾರಾಯಣಾಚಾರ್ಯರ ವಾಲ್ಮೀಕಿ ಯಾರು ಕೃತಿಯ ಪ್ರಕಾರ ವಾಲ್ಮೀಕಿ ತನ್ನನ್ನು ತಾನು ಬೇಡನೆಂದು ಎಲ್ಲೂ ಹೇಳಿಕೊಂಡಿಲ್ಲ. ಶ್ರೀ ರಾಮನಿಗೆ ತನ್ನನ್ನು ತಾನು ಪರಿಚಯಿಸಿಕೊಳ್ಳುವಾಗ ಪ್ರಚೇತಸೋಹಂ ದಶಮಃ ಪುತ್ರೋ, ರಘುನಂದನ ಅಂದರೆ ಹೇ ರಾಮಾ, ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆ ಮಗ ಎಂದು ಹೇಳಿಕೊಳ್ಳುತ್ತಾನೆ ಎಂದಾದರೆ ಮೂಲ ರಾಮಾಯಣದಲ್ಲಿ ವಾಲ್ಮೀಕಿ ಬ್ರಾಹ್ಮಣ ಎಂದು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ತಮ್ಮ ವಾದವನ್ನು ಮುಂದುವರೆಸುತ್ತಾ, ಪಾಮರನಾದ ಬೇಡನೊಬ್ಬ ದಿಢೀರನೆ ಈ ರೀತಿಯಾಗಿ ಕಾವ್ಯ ಬರೆದ ಎಂದು ಹೇಳುವುದೇ ಹಾಸ್ಯಾಸ್ಪದವಾಗುತ್ತದೆ. ವಾಲ್ಮೀಕಿ ಬೇಡನೆಂಬುದಕ್ಕೆ ಶ್ರೀ ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ಯಾವಾ ಆಧಾರಗಳೂ ಸಿಗುವುದಿಲ್ಲ. ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆಯುವುದು ಖಂಡಿತಾ ಸಾಧ್ಯವಿಲ್ಲ. ಕೇವಲ ಬೇಡನೊಬ್ಬನೇ ಅಲ್ಲ. ಇಂದಿನ ಸಂಸ್ಕೃತ ಓದಿರುವ ಬ್ರಾಹ್ಮಣರೂ ಕೂಡ ದಿಢೀರನೆ ಶ್ಲೋಕ ರಚಿಸಲು ಸಾಧ್ಯವಿಲ್ಲ. ಯಾವ ಕೆಲಸವನ್ನು ಬೇಡ ತನ್ನ ಜೀತಾವಧಿಯಲ್ಲಿ ಮಾಡಿಲ್ಲವೋ, ಅಂಥವನು ಕಾವ್ಯ ರಚಿಸಿದನೆಂಬುದನ್ನು ಹೇಗೆ ನಂಬುವುದು? ಆತನಿಗೆ ಸಾಹಿತ್ಯದ ಜ್ಞಾನ ಇದ್ದಲ್ಲಿ ಮಾತ್ರವೇ ಇಂತಹ ಪಾತ್ರ ರಚನೆ, ಪೋಷಣೆ, ವಾಕ್ಯಗಳ ವಿವರಣೆ ಎಲ್ಲವೂ ಸಾಧ್ಯ. ರಾಮಾಯಣವನ್ನು ಕಾವ್ಯವಾಗಿ ಪ್ರವಚನ ರೂಪದಲ್ಲಿ ಆಸ್ವಾದಿಸಲು ವೇದ ಬಲ್ಲವರು, ಪೌರಾಣಿಕರು, ಸ್ವರಲಕ್ಷಣ ಬಲ್ಲವರು, ಪದ, ಅಕ್ಷರ, ಸಮಾಸಜ್ಞರು, ಛಂದೋದರು, ಜೋತಿಷ್ಯ ಬಲ್ಲವರು ಭಾಷಾಶಾಸ್ತ್ರಜ್ಞರು, ತಾರ್ಕಿಕರು, ಚಿತ್ರಜ್ಞರು, ನಾಟ್ಯ ಬಲ್ಲವರು ಇತ್ಯಾದಿ ವಿದ್ವಾಂಸರಾಗಿರ ಬೇಕೆಂದು ಸ್ವತಃ ವಾಲ್ಮೀಕಿಯೇ ಹೇಳಿರುವಾಗ ಬೇಡನೊಬ್ಬನಿಗೆ ಇಷ್ಟೆಲ್ಲ ವಿಷಯಗಳನ್ನು ಕ್ರೂಡಿಕರಿಸಿ ಕಾವ್ಯ ಬರೆಯಲು ಹೇಗೆ ಸಾಧ್ಯ? ಎಂದು ನಾರಾಯಣಾಚಾರ್ಯರು ಓದುಗರನ್ನು ಪ್ರಶ್ನಿಸುವುದಲ್ಲದೇ, ಈ ರೀತಿಯಾಗಿ ಬರೆಯುವ ಮೂಲಕ ವಾಲ್ಮೀಕಿ ಜನಾಂಗದವರನ್ನು ಅಸಡ್ಡೆ ಮಾಡುತ್ತಿಲ್ಲ. ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವ, ಯಾತ್ರಿಕರನ್ನು ದೋಚಿ ಜೀವನ ನಡೆಸುವ ಇದ್ದಕ್ಕಿದ್ದಂತೆ ಈ ರೀತಿಯಾದ ಮಹಾನ್ ಕಾವ್ಯವನ್ನು ಹೇಗೆ ಬರೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ ಆಚಾರ್ಯರು.

ಇನ್ನು ಗಾಂಧಿಯನ್ನು ನಿಜವಾಗಿ ಕೊಂದದ್ದು ಯಾರು? ಎಂಬ ಅವರ ಕೃತಿ ಮಹಾತ್ಮ ಗಾಂಧಿಯವರ ಹತ್ಯೆಯ ಮತ್ತೊಂದು ಮಜಲನ್ನು ಎಲ್ಲರ ಮುಂದೆ ಬಿಚ್ಚಿಡುತ್ತದೆ. ಅಚಾರ್ಯರ ಪ್ರಕಾರ ಗಾಂಧಿಯವರ ಸಾವನ್ನು ಹಲವರು ನಾನಾ ಕಾರಣಗಳಿಂದಾಗಿ ಇಚ್ಚಿಸುತ್ತಿದ್ದರು. ಅಂದಿನ ಸರ್ಕಾರಕ್ಕೂ ತಲೆನೋವಾಗಿದ್ದ ಗಾಂಧಿಯವರ ಗಾಂಧಿ ಹತ್ಯೆ ಬೇಕಿತ್ತು. ಹಾಗಾಗಿ ಗಾಂಧಿಯವರ ಹತ್ಯೆ ಯಾರ ಕೈಯ್ಯಲ್ಲಿಯೂ ಮಾಡಿಸಿ ಅದನ್ನು ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿ, ಶಾಶ್ವತವಾಗಿ ಹಿಂದೂಗಳನ್ನು ಭಯೋತ್ಪಾದಕರನ್ನಾಗಿ ಬಿಂಬಿಸುತ್ತಾ, ನಿರಾತಂಕವಾಗಿ ಆಡಳಿತ ನಡೆಸಬಹುದು ಎಂದು ನಿರ್ಧರಿಸಿ ಯಾರನ್ನೋ ಅಪರಾಧಿ ಮಾಡಿ ತಮ್ಮ ಮೂಗಿನ ನೇರಕ್ಕೆ ತನಿಖೆ ನಡೆಸಿ ನೇಣು ಹಾಕಿಸಿದ್ದೇ ಸಾಧನೆ ಎನ್ನುತ್ತಾರೆ ಆಚಾರ್ಯರು. ಇಡೀ ಪ್ರಕರಣದ ನಿಜವಾದ ರೂವಾರಿಯಾಗಿದ್ದ ಕಾಂಗ್ರೆಸ್ಸು ಅಪರಾಧಿ ಸ್ಥಾನದಲ್ಲಿ ಸಿಕ್ಕಿ ಬೀಳದೇ ತಲೆಮರಿಸಿಕೊಂಡು ಮತ್ತೊಬ್ಬ ನಿರಪರಾಧಿಯನ್ನು ಸರಿಯಾಗಿ ಸಿಕ್ಕಿಸಿದೆ ಎನ್ನುವುದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸುತ್ತಾರೆ ಆಚಾರ್ಯರು.

ಗಾಂಧಿಯವರ ಹತ್ಯೆಯನ್ನು ಅತ್ಯಂತ ಹತ್ತಿರದ ಸ್ಥಾನದಲ್ಲಿ ನೋಡಿದ್ದ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಸರ್ದಾರ ಪಟೇಲರ ಮಗಳು. ಇನ್ನೊಬ್ಬಳು ಗಾಂಧಿಯವರ ದತ್ತು ಪುತ್ರಿ. ಹಾಗಾಗಿ ವಿಚಾರಣೆ ಸಮಯದಲ್ಲಿ ಅವರಿಬ್ಬರೇ ಪ್ರಮುಖ ಸಾಕ್ಷಿಗಳಾಗ ಬೇಕಿತ್ತು.

ಅವರಲ್ಲಿ ಒಬ್ಬಳು ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದಂತೆ ಗಾಂಧಿಯವರನ್ನು ಕೊಲೆ ಮಾಡಿದ ಎಂಬ ಗೋಡ್ಸೆ ಗಾಂಧಿಯವರ ಮುಂದೆ ಎರಡೂ ಕೈಗಳನ್ನೂ ಜೋಡಿಸಿ ನಮಸ್ತೆ ಮಾಡುತ್ತಿದ್ದ. ಹಾಗೆ ಕೈ ಮುಗಿಯುತ್ತಿದ್ದಾಗ, ಆತನ ಬಲ ತೋಳು ಕೆಳಗಡೆ ಸಂದಿನಿಂದ ಖಾದಿ ತುಂಬಿದ್ದ ಬೇರೊಂದು ತೋಳು ಹೊರ ಚಾಚಿ ಬಂದು, ಅದರ ಕೈಲಿ ಆಯುಧದಿಂದ ಮೂರು ಸುತ್ತು ಗುಂಡು ಚಲಾಯಿಸಲ್ಪಟ್ಟಿತು. ಆಗ ಗಾಂಧಿ ಕುಸಿದರು. ಹಾಗಾಗಿ ಎರಡೂ ಕೈಯಿಂದ ನಮಸ್ತೆ ಮಾಡುತ್ತಿದ್ದ ಗೋಡ್ಸೆ ಕೈಯಲ್ಲಿ ಪಿಸ್ತೂಲಿನಿಂದ ಹೇಗೆ ಕೊಲೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾಳೆ. ಆಕೆಯ ಪಕ್ಕದಲ್ಲಿದ್ದ ಮತ್ತೊಬ್ಬಳೂ ಅದನ್ನೇ ಅನುಮೋದಿಸಿದ್ದಳು.

ಆದರೆ ಗಾಂಧಿಯವರ ಹತ್ಯೆಯಲ್ಲಿ ಪ್ರಮುಖ ಸಾಕ್ಷಿಗಳಾಗಬೇಕಿದ್ದ ಈ ಇಬ್ಬರೂ ಸಾಕ್ಷಿದಾರರನ್ನು ಸರ್ಕಾರಿ ವಕೀಲರು ಅದಾವ ಒತ್ತಡದಿಂದಲೋ ವಿಚಾರಣೆಗೆ ಹಾಜರು ಪಡಿಸಲೇ ಇಲ್ಲ. ಅವರನ್ನು ಪಾಟೀ ಸವಾಲಿಗೂ ಒಳಪಡಿಸಲಿಲ್ಲ. ಹಾಗಾಗಿ ನಿಜವಾದ ಸತ್ಯವನ್ನು ಮುಚ್ಚಿಡುವ ಉಮ್ಮೇದಿನಲ್ಲಿದ್ದರು ಎಂಬುದು ಸ್ವಷ್ಟವಾಗುತ್ತದೆ ಎನ್ನುತ್ತಾರೆ ಅಚಾರ್ಯರು.

ಹಾಗೇ ಮುಂದುವರೆದು, ಗೋಡ್ಸೆ ಗಾಂಧಿಯವರನ್ನು ಕೊಲ್ಲಲು ಬಂದಿದ್ದು ನಿಜವಾದರೂ, ಅವನು ಗಾಂಧಿಯವರಿಗೆ ನಮಸ್ತೆ ಮಾಡಿ ತನ್ನ ಪಿಸ್ತೂಲನ್ನು ಅವರತ್ತ ಗುರಿ ಇಡಲು ಹೋಗುತ್ತಿದ್ದಂತೆಯೇ, ಹತ್ತಿರವಿದ್ದ ಮಿಲಿಟರಿ ರಕ್ಷಕ, ಗೋಡ್ಸೆಯನ್ನು ಬಲವಾಗಿ ಹಿಡಿದು ಕೊಂಡರೆ, ಮತ್ತೊಬ್ಬ ಅಂಗರಕ್ಷಕ, ಗೋಡ್ಸೆಯ ತಲೆಯ ಹಿಂಬದಿಗೆ ಬಲವಾಗಿ ಲಾಠಿಯಿಂದ ಹೊಡೆದು ಗಾಯಗೊಳಿಸಿದ ವಿಷಯ ಪೊಲೀಸ್ ತನಿಖಾ ವರದಿಯಲ್ಲೇ ನಮೂದಾಗಿದೆ. ಇನ್ನು ಗೋಡ್ಸೆ ಕೈಯ್ಯಿಂದ ವಶಪಡಿಸಿಕೊಂಡ ಪಿಸ್ತೂಲಿನಲ್ಲಿ ಪೂರ್ಣವಾಗಿ ಒಟ್ಟು ಏಳು ಗೋಲಿಗಳಿದ್ದವು. ಹಾಗಾಗಿ ಗೋಡ್ಸೆ ಪಿಸ್ತೂಲಿನಿಂದ ಗೋಲಿಗಳು ಸಿಡಿಯದಿದ್ದರೂ ಗಾಂಧಿಯವರ ಹತ್ಯೆಯಾಗಿರುವ ಕಾರಣ ಗೋಡ್ಸೆ ನಿಜವಾದ ಕೊಲೆಗಾರನಲ್ಲ ಎಂದು ಬಲವಾಗಿ ವಾದಿಸುತ್ತಾರೆ ಆಚಾರ್ಯರು.

ಇಂತಹ ಅನೇಕ ವೈರುದ್ಯ ಮತ್ತು ಚರ್ಚೆಗಳ ಮಧ್ಯೆಯೂ ಆಚಾರ್ಯರು ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲಿ ಅವರು ವಿಜಯವಾಣಿ ಪತ್ರಿಕೆಗೆ ಬರೆಯುತ್ತಿರುವ ರಾಜರ್ಧರ್ಮ ರಾಜನೀತಿ ಎನ್ನುವ ಪ್ರಸಕ್ತ ವಿಷಯಗಳ ಕುರಿತಂತೆ ಬರೆಯುವ ಅಂಕಣ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಅಂಕಣದಲ್ಲಿ ಪ್ರಸಕ್ತ ನಡೆಯುವ ರಾಜಕೀಯ ಘಟನೆಗಳನ್ನು ರಾಮಾಯಣ ಮತ್ತು ಮಹಾಭಾರತಕ್ಕೆ ಹೋಲಿಸಿ ನೋಡುವುದಲ್ಲದೇ ಹಲವಾರು ಬಾರಿ ಚಾಣುಕ್ಯ ನೀತಿಗೂ ಅದನ್ನು ಹೊಂದಿಸಿ ನೋಡಿ ವಸ್ತು ನಿಷ್ಟ ವಿಷಯಗಳನ್ನು ನೇರ ಮತ್ತು ದಿಟ್ಟವಾಗಿ ಪ್ರತಿಪಾದಿಸುವ ಅವರ ಬರವಣಿಗೆಯ ಶೈಲಿ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿದೆ ಎಂದರೂ ತಪ್ಪಾಗಲಾರದು

ಇಷ್ಟೆಲ್ಲಾ ಪ್ರತಿಭಾವಂತ ವಿದ್ಚಾಂಸರಾದ ಕೆ.ಎಸ್. ನಾರಾಯಾಣಾಚಾರ್ಯರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾದವು ಎಂದರೆ,

  • ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ಗೌರವ
  • ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
  • ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಮುಂತಾದ ಹಲವು ಬಿರುದು ಬಾವಲಿಗಳು ಅವರಿಗೆ ಲಭಿಸಿವೆ.

ವೇದ ಸಂಸ್ಕೃತಿಯ ಪರಿಚಯ, ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ,ಅಗಸ್ತ್ಯ, ಶ್ರೀಮಾತೇ ಕುನ್ತಿ ಕಂದೆರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಇನ್ನು ಹಲವಾರು 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವುದಲ್ಲದೇ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿನ ಅಂಕಣ, ಬರಹಗಳು, ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಯಗಳಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಆಧಿಕಾರಯುತವಾಗಿ ಆರ್ಥಪೂರ್ಣ ವಿಷಯಗಳನ್ನು ಪ್ರತಿಪಾದಿಸುವ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿರುವ ಡಾ. ಕೆ.ಎಸ್. ನಾರಾಯಣಾಚಾರ್ಯರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

2 thoughts on “ಕೆ.ಎಸ್. ನಾರಾಯಣಾಚಾರ್ಯ”

  1. ಧನ್ಯವಾದಗಳು. ಆಚಾರ್ಯರಿಗೆ ಅನಂತ ನಮಸ್ಕಾರಗಳು. ಅವರ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s