ಸದಾನಂದ ವಿಶ್ವನಾಥ್

ಅದು ಎಂಭತ್ತರ ದಶಕ. ಕರ್ನಾಟಕ ಮತ್ತು ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿಯವರ ಪ್ರಾಭಲ್ಯ ಮೆರೆಯುತ್ತಿರುತ್ತದೆ. ರಾಷ್ಟ್ರೀಯ ತಂಡ ಖಾಯಂ ವಿಕೆಟ್ ಕೀಪರ್ ಆಗಿದ್ದಲ್ಲದೇ, ಸಮಯ ಸಿಕ್ಕಾಗಲೆಲ್ಲಾ ರಾಜ್ಯ ತಂಡಕ್ಕೆ ತಮ್ಮ ಸೇವೆ ಸಲ್ಲಿಸುತ್ತಿರುತ್ತಾರೆ. ಅವರ ನಂತರ ರಾಜ್ಯತಂಡಕ್ಕೆ ಇನ್ನೇನು ನಂದನ್ ಎನ್ನುವ ಮತ್ತೊಬ್ಬ ಪ್ರತಿಭಾನ್ವಿತ ವಿಕೆಟ್ ಕೀಪರ್ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದೇ ಎಲ್ಲರೂ ಭಾವಿಸಿರುವಾಗಲೇ, ಧುತ್ ಎಂದು ಸ್ಥಳೀಯ ಲೀಗ್ ಕ್ರಿಕೆಟ್ಟಿನಲ್ಲಿ ಟನ್ ಗಟ್ಟಲೆ ರನ್ ಹೊಳೆ ಹರಿಸಿದ ಒಬ್ಬ ಮೋಜುಗಾರ ಮತ್ತು ಸೊಗಸುಗಾರ ವಿಕೆಟ್ ಕೀಪರ್ ಆಗಮನವಾಗುತ್ತದೆ. ಆತ ಕೇವಲ ವಿಕೆಟ್ ಕೀಪರ್ ಅಲ್ಲದೇ ಆರ್ಕರ್ಷಕವಾದ, ಭರ್ಜರಿ ಹೋಡೆತ ಬಾರಿಸಬಲ್ಲ ಆರಂಭಿಕ ಆಟಗಾರನಾಗಿರುತ್ತಾನೆ. ಆತ ಬೇರಾರೂ ಆಗಿರದೆ ನಮ್ಮ ಇಂದಿನ ಕನ್ನಡ ಕಲಿಯ ಕಥಾ ನಾಯಕ ಸದಾನಂದ ವಿಶ್ವನಾಥ್ ಆಗಿರುತ್ತಾರೆ.

ಸದಾನಂದ ವಿಶ್ವನಾಥ್ ಬೆಂಗಳೂರಿನ ಮಧ್ಯಮ ಕುಟುಂಬವರ್ಗದಲ್ಲಿ 28 ನವೆಂಬರ್ 1962ರಲ್ಲಿ ಜನಿಸಿಸುತ್ತಾರೆ. ಬಾಲ್ಯದಿಂದಲೂ, ಓದಿನ ಜೊತೆ ಕ್ರಿಕೆಟ್ ಬಗ್ಗೆಯೂ ಅತ್ಯಂತ ಆಸಕ್ತನಾಗಿದ್ದ ಕಾರಣ, ಕ್ರಿಕೆಟ್ ಆಟಕ್ಕೆ ಒತ್ತು ಕೊಡುತ್ತಿದ್ದ, ಸೇಂಟ್ ಜೋಸೆಫ್ ಶಾಲೆಯಲ್ಲಿ ಓದುತ್ತಲೇ, ಕೇವಲ 18 ವರ್ಷಕ್ಕೇ ತಮ್ಮ ಕ್ರಿಕೆಟ್ ಆಟದಿಂದಾಗಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೆಲಸಗಿಟ್ಟಿಸಿಕೊಂಡು ಸ್ಥಳೀಯ ಲೀಗ್‌ನಲ್ಲಿ ಗಳಿಸಿದ ಭರಪೂರ ರನ್ನುಗಳ ಪರಿಣಾಮವಾಗಿ ಅತೀ ಶೀಘ್ರದಲ್ಲೇ ಅವರು ರಾಜ್ಯ ರಣಜಿ ತಂಡದ ಭಾಗವಾಗಿ, ತನ್ನ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಆರಾದ್ಯ ದೈವ ಗುಂಡಪ್ಪ ವಿಶ್ವನಾಥ್, ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ, ಬಿಜೇಷ್ ಪಟೇಲ್ ಅವರಂತಹ ದಿಗ್ಗಜರಿದ್ದ ತಂಡ ಭಾಗವಾಗುತ್ತಾರೆ. ತಮ್ಮ ಆಕರ್ಷಕ ಹೊಡಿ ಬಡೀ ಅಟ ಮತ್ತು ಚುರುಕಿನ ವಿಕೆಟ್ ಕೀಪಿಂಗ್ ನಿಂದಾಗಿ, 1983ರ ಕಪಿಲ್ ದೇವ್ ತಂಡ ಗೆದ್ದ ವರ್ಲ್ ಕಪ್ ತಂಡ ರೂವಾರಿಯಾಗಿದ್ದ ತಮ್ಮ ಗುರು, ಸೈಯ್ಯದ್ ಕಿರ್ಮಾನಿಯವರನ್ನೂ ಬದಿಗೊತ್ತಿ ಗವಾಸ್ಕರ್ ನಾಯಕತ್ವದ ಬೆನ್ಸನ್ & ಹೆಡ್ಜಸ್ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗುತ್ತಾರೆ.

ಆಡಿದ ಮೊದಲ ವಿದೇಶೀ ಪಂದ್ಯಾವಳಿಯಲ್ಲಿಯೇ ವಿಕೆಟ್ ಕೀಪೀಂಗಿನಲ್ಲಿ ಮಿಂಚುವುದಲ್ಲದೇ, ತಂಡದ ಗೆಲುವಿಗೆ ಅಗತ್ಯವಿರುವ ರನ್ಗಳನ್ನು ಗಳಿಸಿ ಬಲು ಬೇಗನೇ ಭಾರತಾದ್ಯಂತ ಹೆಸರುವಾಸಿಯಾಗುತ್ತಾರೆ. ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನ ತಂಡದ ಅಂದಿನ ಪ್ರಮುಖ ಆಟಗಾರ ಮತ್ತು ಇಂದಿನ ಪ್ರಧಾನಿ ಇಮ್ರಾನ್ ಖಾನ್ ಆಡುವಾಗ ಒಂದು ಕ್ಷಣ ಕಾಲು ಎತ್ತಿ ಕ್ರೀಸಿನೊಳಗೆ ಮತ್ತೆ ಇಡುವಷ್ಟರಲ್ಲಿ ಸದಾನಂದ್ ಅವರು ಮಿಂಚಿನ ವೇಗದಲ್ಲಿ, ಕಣ್ಣಿನ ರೆಪ್ಪೆ ಬಡಿಯುವಷ್ಟರಲ್ಲಿ ಸ್ಟಂಪ್ ಔಟ್ ಮಾಡಿದಾಗ ಇಮ್ರಾನ್ ಖಾನ್ ನಂಬದಾಗುತ್ತಾರೆ. ಈ ಅದ್ಭುತ ಸ್ಟಂಪಿಂಗ್ ಅನ್ನು ನೋಡಿದ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳನ್ನು ಅವರತ್ತ ಸೆಳೆದುಕೊಳ್ಳುವುದರಲ್ಲಿ ಸಫಲರಾಗುತ್ತಾರೆ. ಇದಲ್ಲದೇ, ಸಾಂಪ್ರದಾಯಕವಾಗಿ ಬಳಸುತ್ತಿದ್ದ ಫುಲ್ ಪ್ಯಾಡಿನ ಬದಲಾಗಿ ಅರ್ಧ ಪ್ಯಾಡ್ ಮೊತ್ತ ಮೊದಲಬಾರಿಗೆ ಬಳಸಿ ಎಲ್ಲರ ಗಮನ ಸೆಳೆಯುತ್ತಾರೆ ವಿಶಿ.

ಸರಣಿಯ ಎರಡನೇ ಪಂದ್ಯದಲ್ಲಿ ವಿಶ್ವನಾಥ್ 3 ಕ್ಯಾಚ್ ಮತ್ತು 2 ಸ್ಟಂಪಿಂಗ್‌ಗಳನ್ನು ಮಾಡುವ ಮುಖಾಂತರ ರಾಡ್ನಿ ಮಾರ್ಷ್, ಗೈ ಡಿ ಅಲ್ವಿಸ್ ಮತ್ತು ಕಿರ್ಮಾನಿ ನಂತರ, ಏಕದಿನ ಪಂದ್ಯದಲ್ಲಿ 5 ಆಹುತಿಗಳನ್ನು ಪಡೆದ ನಾಲ್ಕನೇ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರಲ್ಲದೇ ಇಂದಿಗೂ ಸಹಾ ಈ ಸಾಧನೆಯನ್ನು ಯಾವ ಭಾರತೀಯ ವಿಕೆಟ್ ಕೀಪರ್ ಮೀರಿಸಿಲ್ಲದಿರುವುದು ಗಮನಾರ್ಹವಾದ ಅಂಶವಾಗಿದೆ. ಒಟ್ಟು ಆಡಿದ 5 ಪಂದ್ಯಗಳಲ್ಲಿ 9 ಕ್ಯಾಚ್‌ಗಳು ಮತ್ತು ಆಕರ್ಷಕ 3 ಸ್ಟಂಪಿಂಗ್‌ಗಳೊಂದಿಗೆ ಭಾರತ ಚಾಂಪಿಯನ್‌ಶಿಪ್ ಗೆದ್ದಿದ್ದಲ್ಲದೇ, ಕಿರ್ಮಾನಿಗಿಂತಲೂ ವಿಶ್ವನಾಥ್ ಅವರೇ ಬೇಕೆಂದು ಆಯ್ಕೆ ಮಾಡಿಸಿಕೊಂಡಿದ್ದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಈ ವಿಶ್ವ ಚಾಂಪಿಯನ್‌ಶಿಪ್ ಮುಗಿದ ಕೂಡಲೇ, ಶಾರ್ಜಾದಲ್ಲಿ ನಡೆದ ಚೊಚ್ಚಲ ಪಂದ್ಯಾವಳಿಯಾದ ದಿ ರೋಥ್‌ಮನ್ಸ್ ಕಪ್ ಕೂಡಾ ಭಾರತ ತಂಡ ಗೆದ್ದಿತು. ಇಲ್ಲೂ ಸಹಾ ಸದಾನಂದ್ ವಿಶ್ವನಾಥ್ ಮತ್ತೊಮ್ಮೆ ಮಿಂಚಿದ್ದಲ್ಲದೇ, ಮತ್ತೊಬ್ಬ ಯುವ ಆಟಗಾರ ಲಕ್ಷ್ಮಣ ಶಿವರಾಮಕೃಷ್ಣನ್ ಅವರೊಟ್ಟಿಗೆ ಅಪಾಯಕಾರೀ ಆಟಗಾರ ಜಾವೇದ್ ಮಿಯಾಂದಾದ್‌ ಆವರನ್ನು ಔಟ್ ಮಾಡಿದ್ದನ್ನು ಇಂದಿಗೂ ಸಹಾ ಭಾರತದ ಕ್ರಿಕೆಟ್ ಆಭಿಮಾನಿಗಳು ಮರೆಯಲಾರರು. ಈ ಪಂದ್ಯಾವಳಿಗಳು ಮುಗಿದ ಕೆಲವು ವರ್ಷಗಳ ನಂತರ, ಗವಾಸ್ಕರ್ ತಮ್ಮ ಒನ್-ಡೇ ವಂಡರ್ಸ್ ಪುಸ್ತಕದಲ್ಲಿ ಭಾರತ ಚಾಂಪಿಯನ್‌ಶಿಪ್ ಗೆಲ್ಲಲು ಬಹು ಮುಖ್ಯ ಕಾರಣವೆಂದರೆ ಸ್ಟಂಪ್‌ಗಳ ಹಿಂದೆ ಸದಾನಂದ್ ವಿಶ್ವನಾಥ್ ಅವರ ಕೈಚಳಕ ಎಂದು ಹೊಗಳಿರುವುದು ಸದಾನಂದ್ ವಿಶ್ವನಾಥ್ ಅವರ ಚಾಕಚಕ್ಯತೆಗೆ ಸಾಕ್ಷಿಯಾಗಿತ್ತು. ಇದನ್ನೇ ಅಂದಿನ ಆಸ್ಟ್ರೇಲಿಯಾದ ಮಾಧ್ಯಮಗಳು ಸಹಾ ಅನುಮೋದಿಸಿ ಬರೆದಿದ್ದವು.

ಆಸ್ಟ್ರೇಲಿಯನ್ನರ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವೊಂದರಲ್ಲಿ ಸದಾನಂದ್ ಹೊಡೆದ ಚೆಂಡು ಕ್ರೀಡಾಂಗಣದ ಆಚೆಗೆ ಹೋಗಿ ಚೆಂಡು ಹಿಂದಿರುಗಿ ಬಂದಾಗ ಆಸ್ಟ್ರೇಲಿಯ ತಂಡದ ನಾಯಕ ಬಾರ್ಡರ್ ಅವರು ಸದಾನಂದ್ ಹೊಡೆದ ಚೆಂಡು ಎಷ್ಟು ಮೇಲೆ ಮತ್ತು ದೂರ ಹೋಗಿರ ಬಹುದೆಂದರೆ ಬಹುಶಃ ಅದು ಕೆಳೆಗೆ ಬರುವಷ್ಟರಲ್ಲಿ ಐಸ್ ಆಗಿ ಬರಬಹುದೇನೋ ಎಂದು ಹೇಳಿದ್ದು ಅವರ ಹೊಡೆತದ ರಭಸ ಹೇಗಿತ್ತು ಎಂದು ಅರಿವು ಮೂಡಿಸುತ್ತದೆ.

80 ರ ದಶಕದ ಉತ್ತರಾರ್ಧದಲ್ಲಿ ಭಾರತ ಕ್ರಿಕೆಟ್ ತಂಡದ ನೀಲಿ ಕಣ್ಗಳ ಹುಡುಗ ಇನ್ನೇನೂ ಪ್ರಜ್ಚಲಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಿದ್ದಾನೆ ಎನ್ನುವಷ್ಟರಲ್ಲಿ ಆರ್ಥಿಕ ಹೊಡೆತದ ಕಾರಣ ಅವರ ತಂದೆ ಆತ್ಮೆಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು, ಸದಾನಂದ್ ಅವರ ಆಟದ ಮೇಲೆ ಭಾರೀ ಪರಿಣಾಮವನ್ನು ಬೀರಿತು.

1985 ರಿಂದ 1988 ರವರೆಗೆ ಭಾರತದ ಪರ 3 ಟೆಸ್ಟ್ ಮತ್ತು 22 ಏಕದಿನ ಪಂದ್ಯಗಳನ್ನು ಮಾತ್ರವೇ ಆಡಲು ಶಕ್ಯವಾದ ಸದಾನಂದ್ ವಿಶ್ವನಾಥ್ ತಮ್ಮ ವಯಕ್ತಿಕ ಕಾರಣಗಳು ಮತ್ತು ಚಿಕ್ಕವಯಸ್ಸಿನಲ್ಲಿಯೇ ಗಳಿಸಿದ ಯಶಸ್ಸನ್ನು ಅರಗಿಸಲಾಗಿಸಿಕೊಳ್ಳಲಾಗದ ಕಾರಣ ತಮ್ಮ ಸ್ವಾಭಾವಿಕ ಆಟವನ್ನು ಆಡಲು ಎಡವಿದರು. ಅದೇ ಸಮಯದಲ್ಲಿ ಭಾರತ ತಂಡಲ್ಲಿ ಕಿರಣ್ ಮೋರೆ ಮತ್ತು ಚಂದ್ರಕಾಂತ್ ಪಂಡಿತ್ ಅವರಂತಹ ಘಟಾನುಘಟಿ ವಿಕೆಟ್ ಕೀಪರ್ ಪ್ರಾಭಲ್ಯಕ್ಕೆ ಬಂದ ಕಾರಣ ಅವರ ಜೊತೆ ಈ ಫೈರ್ ಬ್ರ್ಯಾಂಡ್ ಸದಾನಂದ್ ವಿಶ್ವನಾಥ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪರದಾಡ ಬೇಕಾಯಿತು.

ಎರಡು ಯಶಸ್ವಿ ಪಂದ್ಯಾವಳಿಗಳ ನಂತರ ಮತ್ತು ಶ್ರೀಲಂಕಾ ಪ್ರವಾಸದ ಸ್ವಲ್ಪ ಮೊದಲು, ವಿಶ್ವನಾಥ್ ಅವರ ತಾಯಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳದಿದ್ದದ್ದು ವಿಶ್ವನಾಥ್ ಅವರ ಆಟದ ಮೇಲೇ ಭಾರೀ ಪರಿಣಾಮ ಬೀರಿತು. ಅದೇ ಸಮಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಸಮಯದಲ್ಲಿಯೇ ಕೈ ಬೆರಳೂ ಸಹಾ ಮುರಿದ ಕಾರಣ ಸಮರ್ಥವಾಗಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡಲು ಅಡ್ಡಿಯುಂಟುಮಾಡಿತು. ಕ್ಯಾಂಡಿಯಲ್ಲಿ ಶ್ರೀಲಂಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದ ದಾಖಲೆಯನ್ನು ಸಮನಾಗಿಸಲು ಸದಾನಂದ್ ಆರು ಆಹುತಿಗಳನ್ನು ತೆಗೆದುಕೊಂಡರೂ ಅದೇ ಅವರ ಕೊನೆಯ ಟೆಸ್ಟ್ ಪಂದ್ಯವಾಯಿತು. 1988 ರವರೆಗೆ ಏಕದಿನ ಪಂದ್ಯಗಳಲ್ಲಿ ಹೋಗಿ ಬಂದು ಮಾಡಿದರಾದರೂ, ವಯಕ್ತಿಕ ಜೀವನದಲ್ಲಿ ಆದ ಕೆಲವು ವಿಫಲ ಸಂಬಂಧಗಳು ಮತ್ತು ಮದ್ಯವ್ಯಸನಕ್ಕೆ ಬಲಿಯಾದ ಕಾರಣ ಅವರ ಕ್ರಿಕೆಟ್ ವೃತ್ತಿ ಜೀವನ ನಿರೀಕ್ಷೆಗಿಂತಲೂ ಮುಂಚೆಯೇ ಮೊಟಕುಗೊಂಡಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಕ್ರಿಕೆಟ್ ಆಟದಿಂದ ಬಹುಕಾಲ ಹೊರಗಿದ್ದ ನಂತರ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಣಜಿ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಅಂಪೈರಿಂಗ್ ಮಾಡಿದ ಕಾರಣ, ಇತ್ತೀಚೆಗೆ ಸದಾನಂದ್ ಅವರನ್ನು ಭಾರತೀಯ ಅಂಪೈರ್‌ಗಳ ಎಲೈಟ್ ಪ್ಯಾನೆಲ್‌ಗೆ ಕೂಡಾ ಬಡ್ತಿ ನೀಡಲಾಗಿದೆ ಇದಲ್ಲದೇ, ಈಗ ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಯುವ ಆಟಗಾರರಿಗಾಗೇ ತಮ್ಮದೇ ಆದ ಖಾಸಗಿ ಕ್ರಿಕೆಟ್ ಕೋಚಿಂಗ್ ಅಕಾಡೆಮಿಯನ್ನು ನಡೆಸುತ್ತಾ ಅನೇಕ ಯುವ ಆಟಗಾರರಿಗೆ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಅನುಭವವನ್ನು ಧಾರೆ ಎರೆದುಕೊಡುತ್ತಿದ್ದಾರೆ ಮತ್ತು ಭವಿಷ್ಯದ ಪ್ರತಿಭೆಗಳನ್ನು ಪೋಷಿಸುತ್ತಾ ರಾಷ್ಟ್ರೀಯ ಖ್ಯಾತ ಅಂಪೈರ್ ಕೂಡಾ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ಕ್ರಿಕಿಟ್ ತಂಡದಲ್ಲಿ ಗುಂಡಪ್ಪ ವಿಶ್ವನಾಥ್ ನಂತರ ಮತ್ತೊಬ್ಬ ವಿಶ್ವನಾಥ್ ಆಡಿದ ಕೆಲವೇ ಕೆಲವು ಪಂದ್ಯವಳಿಗಳಲ್ಲಿ ಮಿಂಚಿದ್ದಲ್ಲದೇ ಕರ್ನಾಟಕದ ಹೆಸರನ್ನು ಅಜರಾಮರವಾಗಿಸಿದ, ಜೀವನದಲ್ಲಿ ಮತ್ತು ಕ್ರಿಕೆಟ್ ಬದುಕಿನಲ್ಲಿ ಭಾರೀ ಏರಿಳಿತಗಳನ್ನು ಕಂಡರೂ ಸದಾ-ಆನಂದವಾಗಿರುವ ಸದಾನಂದ್ ವಿಶ್ವನಾಥ್ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s