ತೂಗು ಸೇತುವೆ ಸರದಾರ ಗಿರೀಶ್ ಬಾರದ್ವಾಜ್

ಸೇತುವೆ ಎಂದರೆ ಎರಡು ಭೂಪ್ರದೇಶಗಳು ಅಥವಾ ಸಂಬಂಧಗಳನ್ನು ಬೆಸೆಯುವ ಸುಂದರ ಸಾಧನ. ತ್ರೇತಾಯುಗದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಲಂಕೆಯಲ್ಲಿ ಇಟ್ಟಿರುವ ವಿಷಯವನ್ನು ಹನುಮಂತ ಪ್ರತ್ಯಕ್ಷಿಸಿ ನೋಡೀ ತಿಳಿಸಿದ ಮೇಲೆ ಸೀತಾದೇವಿಯನ್ನು ಬಿಡಿಸಿಕೊಂಡು ಬರಲು ಕಪೀ ಸೇನೆಯೊಂದಿಗೆ ಹೊರಟ ರಾಮ ರಾಮೇಶ್ವರದ ಧನುಷ್ಕೋಟಿಯಿಂದ ಲಂಕೆಯ ಮಧ್ಯೆ ನಳ ನೀಲರ ಸಾರಥ್ಯದಲ್ಲಿ ಕಪಿಗಳ ನೆರವಿನಿಂದ ಸೇತುವೆಯನ್ನು ನಿರ್ಮಿಸಿ ಲಂಕೆಗೆ ಹೋಗಿ ರಾವಣನ್ನು ಸಂಹರಿಸಿ ಸೀತಾ ಮಾತೆಯನ್ನು ಕರೆತಂದದ್ದನ್ನು ನಾವೆಲ್ಲರೂ ರಾಮಾಯಣದಲ್ಲಿ ನೋಡಿದ್ದೇವೆ. ಅದೇ ರೀತಿ ಕೂಗಳತೆಯ ದೂರದಲ್ಲೇ ಇರುವ ಎರಡು ಹಳ್ಳಿಗಳ ಮಧ್ಯೆ ನದಿ ಅಥವಾ ಹಳ್ಳ ಕೊಳ್ಳಗಳಿದ್ದಲ್ಲಿ ಅವುಗಳ ಮಧ್ಯೆ ಸಂಪರ್ಕ ಸಾಧಿಸಲು ಹತ್ತಾರು ಮೈಲಿಗಳ ದೂರವನ್ನು ಕ್ರಮಿಸಬೇಕಾಗುತ್ತದೆ ಇಲ್ಲವೇ ಸಣ್ಣ ಸಣ್ಣ ದೋಣಿಗಳ ಸಹಾಯದಿಂದ ತಲುಪಬೇಕಾಗುತ್ತದೆ. ಇನ್ನು ಮಳೆಗಾಲದಲ್ಲಿ ನೀರು ಉಕ್ಕಿ ಹರಿಯಲು ಆರಂಭಿಸಿದರಂತೂ ಆ ಎರಡೂ ಪ್ರದೇಶಗಳ ನಡುವೆ ಅಕ್ಷರಶಃ ಸಂಪರ್ಕವೇ ತಪ್ಪಿ ಹೋದಂತಾಗುತ್ತದೆ. ಅಂತಹ ಹಳ್ಳಿಗಳ ನಡುವೆ ಅತ್ಯಂತ ಕಡಿಮೆ ಖರ್ಚಿನಲ್ಲಿ, ಅತ್ಯಂತ ಕಡಿಮೆ ಸಮಯದಲ್ಲಿ, ಸಢೃಡವಾದ ತೂಗು ಸೇತುವೆಗಳನ್ನು ದೇಶಾದ್ಯಂತ ನಿರ್ಮಿಸಿ ತೂಗು ಸೇತುವೆಗಳ ಸರದಾರ ಎನಿಸಿಕೊಂಡಿರುವ ಶ್ರೀ ಗಿರೀಶ್ ಭಾರದ್ವಾಜ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ಮಂಗಳೂರು ಜಿಲ್ಲೆಗೆ ಸೇರಿದ ಸುಳ್ಯ ತಾಲ್ಲೂಕಿನ ಅರಂಬೂರು ಸಮೀಪದ ಇಡ್ಯಡ್ಕ ಭಾರದ್ವಾಜಾಶ್ರಮದ ನಿವಾಸಿಯಾಗಿರುವ ಬಲೆಕ್ಕಳ ಗಿರೀಶ್ ಭಾರದ್ವಾಜ್ 1975ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಯಾವುದಾದರೂ ಕಛೇರಿಗೆ ಸೇರಿ ಕೈತುಂಬಾ ಸಂಬಳ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಆದರೆ ತಮ್ಮ ತಂದೆಯ ಆಸೆಯಂತೆ ಅವರು ಯಾವುದೇ ಕೆಲಸಕ್ಕೆ ಸೇರದೇ ಸುಳ್ಯದಲ್ಲಿ ಆಯಶ್ಶಿಲ್ಪ ಎಂಬ ಎಂಜಿನಿಯರಿಂಗ್ ವರ್ಕ್ ಶಾಪ್ ಆರಂಭಿಸಿ ಜೀವನ ಸಾಗಿಸುತ್ತಿದ್ದರು.

ಅವರ ಊರಾದ ಅರಂಬೂರು ಮತ್ತು ತಮ್ಮ ವರ್ಕಶಾಪ್ ಮಧ್ಯೆ ಹರಿಯುತ್ತಿದ್ದ ಪಯಸ್ವಿನಿ ನದಿಯನ್ನು ದಾಟಿಕೊಂಡು ಹೋಗುವುದು ಅವರಿಗೆ ಪ್ರತಿ ದಿನವೂ ಅಭ್ಯಾಸವಾಗಿತ್ತು. ಪಯಸ್ವಿನಿ ನದಿಗೆ ಸೇತುವೆಯೊಂದನ್ನು ನಿರ್ಮಿಸಬೇಕೆಂದು ಸರಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವ ಪ್ರಗತಿಯನ್ನೂ ಕಾಣದಿದ್ದಾಗ, 1989ರಲ್ಲಿ ಸ್ಥಳೀಯರೆಲ್ಲರೂ ಸೇರಿ ಅರಂಬೂರು ಗ್ರಾಮದ ಜನರು ಸುಳ್ಯದೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವಂತಹ ಸೇತುವೆಯೊಂದನ್ನು ಕಟ್ಟಿಕೊಡಲು ಸಾಧ್ಯವೇ ಎಂದು ಗಿರೀಶ್ ಅವರನ್ನು ಕೇಳಿಕೊಂಡರು. ಸ್ಥಳೀಯರ ಈ ನಿವೇದನೆ ಆರಂಭದಲ್ಲಿ ಗಿರೀಶರಿಗೆ ಸ್ವಲ್ಪ ಮುಜುಗರವೆನೆಸಿದರೂ, ಇದಕ್ಕೇ ಏನಾದರೂ ಪರಿಹಾರವನ್ನು ಕಂಡು ಹಿಡಯಲೇ ಬೇಕೆಂದು ಧೃಢ ಸಂಕಲ್ಪ ಮಾಡಿ ಅದರ ಬಗ್ಗೆ ಅನೇಕ ವಿಚಾರಗಳನ್ನು ಮಾಡುತ್ತಿದ್ದಾಗಲೇ ಅವರ ಮನಸ್ಸಿನಲ್ಲಿ ಮೂಡಿದ ಕಲ್ಪನೆಯೇ ತೂಗು ಉಯ್ಯಾಲೆ. ಕಬ್ಬಿಣ ಮತ್ತು ಮರಗಳ ಸಹಾಯದಿಂದ ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಸಧೃಢವಾದ ಸೇತುವೆಯನ್ನೇಕೆ ಕಟ್ಟಬಾರದು ಎಂದು ಯೋಚಿಸಿ ತಮ್ಮ ಇಂಜೀನಿಯರಿಂಗ್ ಅನುಭವವನ್ನು ಉಪಯೋಗಿಸಿ ಅದರ ರೂಪು ರೇಷೆಗಳನ್ನು ತಯಾರಿಸಿಯೇ ಬಿಟ್ಟರು. ಆ ದಿನಗಳಲ್ಲಿ ತೂಗು ಸೇತುವೆಯ ಕಲ್ಪನೆಯೇ ಹೊಸತು.

ರಾಮೇಶ್ವರದಲ್ಲಿ ರಾಮ ತನ್ನ ಸೇನೆಯೊಂದಿಗೆ ರಾಮ ಸೇತು ಕಟ್ಟಿದಂತೆಯೇ, ತಮ್ಮೂರಿನ 40ಕ್ಕೂ ಅಧಿಕ ಸ್ವಯಂ ಪ್ರೇರಿತ ಯುವಕರ ತಂಡವೊಂದನ್ನು ಕಟ್ಟಿಕೊಂಡು ತೂಗು ಸೇತುವೆಯ ಕೆಲಸವನ್ನು ಆರಂಭಿಸಿ ನೋಡ ನೋಡುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ಬಲಾಢ್ಯ ಸೇತುವೆಯನ್ನೇ ಕಟ್ಟಿ ಎಲ್ಲರೂ ಮೂಗಿನ ಮೇಲೆ ಬೆರಳುಡುವಂತೆ ಮಾಡಿಯೇ ಬಿಟ್ಟರು. ಈ ಮೂಲಕ ಎಂತಹ ಸಮಯದಲ್ಲಿಯಾದರೂ, ಎಂತಹ ಪರಿಸ್ಥಿತಿಯಲ್ಲಿಯಾದರೂ ತಮ್ಮೂರಿನ ಜನ ಸುಳ್ಯದೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವಂತೆ ಮಾಡಿ ಎಲ್ಲರ ಮೆಚ್ಚಿಗೆಗೆ ಪಾತ್ರರಾದರು. ಅಂದಿನ ದಿನಗಳಲ್ಲಿ ಈ ಸೇತುವೆ ಸುತ್ತ ಮುತ್ತಲಿನ ಊರಿನವರಿಗೆ ಪ್ರಮುಖ ಪ್ರವಾಸೀ ತಾಣವಾಗಿತ್ತು ಎನ್ನುವುದು ನಂಬಲೇ ಬೇಕಾದ ಸತ್ಯ.

ತಮ್ಮ ಊರಿನ ತರುಣರ ಸಹಕಾರದಿಂದ ಮೊದಲ ತೂಗು ಸೇತುವೆ ನಿರ್ಮಿಸಿದ ನಂತರ ಅವರ ಆತ್ಮ ವಿಶ್ವಾಸ ಹೆಚ್ಚಾಗಿ ತಮ್ಮ ವರ್ಕ್ ಶಾಪ್ ಜೊತೆ ಜೊತೆಗೆ ತೂಗು ಸೇತುವೆಯ ನಿರ್ಮಾಣವನ್ನೇ ತನ್ನ ಪ್ರಧಾನ ವೃತ್ತಿಯನ್ನಾಗಿಸಿ ಇದುವರೆವಿಗೂ ದೇಶಾದ್ಯಂತ ಸುಮಾರು 130ಕ್ಕೂ ಅಧಿಕ ತೂಗು ಸೇತುವೆಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿ ಊರು, ಊರುಗಳನ್ನು ಬೆಸೆಯುವ ತೂಗು ಸೇತುವೆಗಳ ಸರದಾರ ಎಂದೇ ಪ್ರಸಿದ್ದಿಯಾಗಿದ್ದಾರೆ.

ಒರಿಸ್ಸಾದಲ್ಲಿ 2, ಆಂಧ್ರದಲ್ಲಿ 3 ಸೇತುವೆಗಳಾದರೆ, ಕೇರಳದಲ್ಲಿ 30 ಮತ್ತು ಕರ್ನಾಟಕದಲ್ಲ 90ಕ್ಕೂ ಹೆಚ್ಚಿನ ಸೇತುವೆಗಳನ್ನು ನಿರ್ಮಿಸಿದ್ದಾರೆ ಶ್ರೀ ಗಿರೀಶ್ ಭಾರದ್ವಾಜ್. ಆಂಧ್ರದ ಮಾಜೀ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ಗಿರೀಶರ ಕೆಲಸವನ್ನು ಮನಸಾರೆ ಹೊಗಳಿದ್ದಲ್ಲದೇ ತಮ್ಮ ರಾಜ್ಯದಲ್ಲಿ ಇಂತಹ ಅನೇಕ ಸೇತುವೆಗಳನ್ನು ಕಟ್ಟಿಕೊಡಲು ಕೇಳಿಕೊಂಡರೇ ಇದೇ ರೀತಿಯ ಪ್ರಸ್ತಾಪಗಳು ನಾನಾ ರಾಜ್ಯಗಳಿಂದ ಬಂದಿರುವುದು ಗಿರೀಶರ ಕೌಶ್ಯಲ್ಯಕ್ಕೆ ಸಾಕ್ಷಿಯಾಗಿದೆ.

ಇವೆಲ್ಲಕ್ಕಿಂತಲೂ ಗಮನಾರ್ಹವಾದ ಅಂಶವೆಂದರೆ, ಈ ಸೇತುವೆಗಳನ್ನು ನಿರ್ಮಿಸುವಾಗ ಸರ್ವೆ ಮಾಡುವುದರಿಂದ ಹಿಡಿದು ವಿನ್ಯಾಸ ಮತ್ತು ತಾಂತ್ರಿಕ ಸಲಹೆಗಳಿಗೆ ಗಿರೀಶರು ಹಣವನ್ನು ಪಡೆಯುವುದಿಲ್ಲ. ಹಳ್ಳಿಗಳ ಜನರಲ್ಲಿ ಸೇತುವೆ ನಿರ್ಮಿಸಲು ಹಣ ಇಲ್ಲದಿರುವುದು ಗಿರೀಶರಿಗೆ ಗೊತ್ತಾದಲ್ಲಿ ಅದೆಷ್ಟೋ ಬಾರಿ ತಮ್ಮ ಸ್ವಂತ ಹಣದಲ್ಲಿಯೇ ಸೇತುವೆ ನಿರ್ಮಿಸಿಕೊಟ್ಟಿರುವ ಅನೇಕ ಉದಾರಣೆ ನಮ್ಮ ಕಣ್ಣ ಮುಂದಿದೆ. . ಗಿರೀಶ್ ಅವರ ನೈಪುಣ್ಯತೆಯನ್ನು ಮೆಚ್ಚಿ, ಸೇನೆ ಅಧಿಕಾರಿಗಳೂ ಸಹಾ ಜಮ್ಮು ಕಾಶ್ಮೀರದ ಪೂಂಛ್ ಬಳಿ ಇದೇ ರೀತಿಯ ತೂಗು ಸೇತುವೆಯನ್ನು ನಿರ್ಮಿಸಿ ಕೊಡಬೇಕೆಂದು ಕೋರಿ ಪತ್ರ ಬರೆದಿದ್ದಾರೆ.

ಗಿರೀಶ್ ಅವರ ಈ ಅಭೂತಪೂರ್ವ ಸಾಧನೆಗಾಗಿ ಹತ್ತಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ಅವುಗಳಲ್ಲಿ ಪ್ರಮುಖವಾದವು ಎಂದರೆ,

  • ಜೆಟ್ ಸ್ಟ್ಯಾಂಡಿಂಗ್ ಕನ್‌ಸ್ಟ್ರಕ್ಟರ್ ಅವಾರ್ಡ್
  • ಸಿಎನ್‌ಎನ್- ಐಬಿಎನ್, ಎನ್‌ಡಿಟಿವಿ
  • ಕನ್ನಡ ಪ್ರಭ ಸುವರ್ಣ ಚಾನೆಲ್‌ನ ಅಸಮಾನ್ಯ ಕನ್ನಡಿಗ ಪ್ರಶಸ್ತಿ
  • 2017ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ

ಹಾಸನದಲ್ಲಿ ಸಿವಿಲ್ ಎಂಜಿನಿಯರಿಂಗ್ ಓದುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಬಾಲೆಗಡ್ಡೆಯ ವಿದ್ಯಾರ್ಥಿನಿ, ಕು. ಅಶಿತಾ ಗಿರೀಶ್ ಭಾರದ್ವಾಜರು ನಿರ್ಮಿಸಿದ ಈ ತೂಗು ಸೇತುವೆಯಿಂದಾಗಿಯೇ ಮಾತ್ರ ನಮ್ಮಂತಹವರು ಎಂಜಿನಿಯರಿಂಗ್ ಕಲಿಯಲು ಸಾಧ್ಯವಾಯಿತು. ಈ ತೂಗು ಸೇತುವೆ ಇಲ್ಲದಿದ್ದಲ್ಲಿ, ಬಾಲೆಗದ್ದೆಯ ಜನರು ಖಂಡೇಯಾ ಮತ್ತು ಸಂಗಮೇಶ್ವರಪೇಟೆ ತಲುಪಲು ಕಾಡಿನಲ್ಲಿ ಕಾಡು ಪ್ರಾಣಿಗಳು ಮತ್ತು ಆನೆಗಳ ದಾಳಿಯ ಭಯವಿರುವ ಸುರಕ್ಷಿತವಲ್ಲ ಮಾರ್ಗದಲ್ಲಿ ಸುಮಾರು 12 ಕಿ.ಮೀ ಪ್ರಯಾಣಿಸಬೇಕಾಗುತ್ತಿತ್ತು. ಅವರು ನಿರ್ಮಿಸಿದ ಸೇತುವೆಯಿಂದಾಗೀ ಕೆಲವೇ ನಿಮಿಷಗಳಲ್ಲಿ ತಲುಪಹುದಾಗಿದೆ ಎಂದಿರುವುದಲ್ಲದೇ, ಇಂತಹ ಸೇತುವೆಗಳಿಂದಾಗಿ ಸಣ್ಣ ಸಣ್ಣ ಹಳ್ಳಿಗಳನ್ನು ಮುಖ್ಯ ಪಟ್ಟಣಗಳಿಗೆ ಸಂಪರ್ಕಿಸುವ ಕಾರಣ, ಅನೇಕ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯವಾಗಿದೆ ಎಂದು ಗಿರೀಶರ ಈ ಅನನ್ಯ ಸೇವೆಯನ್ನು ಮನಸಾರೆ ಕೊಂಡಾಡಿದ್ದಾಳೆ.

ಗಿರೀಶ್ ಭಾರದ್ವಾಜ್ ಅವರು ನಿರ್ಮಿಸಿದ ಸೇತುವೆಗಳಲ್ಲಿ ಕೆಲವಾರು ಸೇತುವೆಗಳು ಇತ್ತೀಚಿನ ಜಲಪ್ರಳಯಕ್ಕೆ ಸಿಕ್ಕಿ ಹಾನಿಗೊಂಡಿರುವುದಲ್ಲದೇ ಕವು ಸೇತುವೆಗಳು ಪ್ರವಾಹದಲ್ಲಿ ನೀರಿನ ತಭಸಕ್ಕೆ ಕೊಚ್ಚಿ ಹೋಗಿರುವ ಕಾರಣ ಅಲ್ಲಿನ ಜನರು ತಮ್ಮ ಜೀವಸೆಲೆ ಆಗಿರುವ ಸೇತುವೆಗಳನ್ನು ಶೀಘ್ರವೇ ಸರಿಪಡಿಸಲು ಅಥವಾ ಪುನರ್ನಿರ್ಮಿಸಲು ಮೇಲಿಂದ ಮೇಲೆ ಕರೆಗಳನ್ನು ಮಾಡುತ್ತಿರುವುದನ್ನು ಗಿರೀಶರು ಪ್ರೀತಿಯಿಂದಲೇ ಸ್ವೀಕರಿಸಿ ಆ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅವಲೋಕಿಸಿ, ಅವುಗಳನ್ನು ಸರಿಪಡಿಸುವ ರೂಪು ರೇಷೆಗಳನ್ನು ಸಿದ್ಧ ಪಡಿಸುವುದರಲ್ಲಿ ನಿರತಾಗಿದ್ದಾರೆ.

ದೇಶದ ಅನೇಕ ಗ್ರಾಮ ಗ್ರಾಮಗಳನ್ನು ತಮ್ಮ ಶ್ರಮದಿಂದ ಮತ್ತು ನಿಸ್ವಾರ್ಥ ಸೇವೆಯಿಂದ ತಮ್ಮ ತೂಗು ಸೇತುವೆಗಳ ಮೂಲಕ ಬೆಸೆಯುವಂತೆ ಮಾಡಿದ್ದಲ್ಲದೇ, ಪ್ರತೀ ಗ್ರಾಮದ ಪ್ರತೀ ವ್ಯಕ್ತಿಯೂ ತೂಗು ಸೇತುವೆಯ ತಂತ್ರಜ್ಞಾನಿಯಾಗಿ ರೂಪುಗೊಳ್ಳಬೇಕು ಎಂಬ ಆಶಯವನ್ನು ಹೊಂದಿರುವ ಗಿರೀಶ್ ಭಾರದ್ವಾಜರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s