ಕ್ಯಾಪ್ಟನ್ ಗೋಪಿನಾಥ್

ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಮನೆಗಳ ಮೇಲೆ ಭಾರೀ ಶಭ್ಧವನ್ನು ಮಾಡುತ್ತಾ ಹೋಗುತ್ತಿದ್ದನ್ನು ನೋಡಿ ಅದಕ್ಕೆ ಕೈ ಬೀಸುವುದೇ ಭಾರೀ ಖುಷಿಯನ್ನು ಕೊಡುವ ಸಂಗಂತಿಯಾಗಿತ್ತು. ಏಕೆಂದರೆ ವಿಮಾನಯಾನ ಜನಸಾಮಾನ್ಯರಿಗೆ ಗಗನ ಕುಸುಮವಾಗಿತ್ತು. ಸಾಮಾನ್ಯ ಜನರು ದೂರದ ಊರುಗಳಿಗೆ ಹೋಗುವುದಕ್ಕೆ ರೈಲುಗಳನ್ನೇ ಅವಲಂಭಿಸಿ ಎರಡು ಮೂರು ದಿನಗಳ ಪ್ರಯಾಸಕರ ಪ್ರಯಾಣವನ್ನು ಮಾಡಬೇಕಿತ್ತು. ಆದರೆ 2003 ರಲ್ಲಿ ಆರಂಭವಾದ ಕಡಿಮೆ ದರದ ಡೆಕ್ಕನ್ ಏರ್ಲೈನ್ಸ್ ಮೂಲಕ ಎಲ್ಲಾ ಜನಸಾಮಾನ್ಯರೂ ವಿಮಾನದಲ್ಲಿ ಕೆಲವೇ ಗಂಟೆಗಳಲ್ಲಿ ತಮ್ಮ ನೆಚ್ಚಿನ ಊರುಗಳಿಗೆ ತಲುಪಬಹುದಾದಂತಹ ಸುವರ್ಣಾವಕಾಶವನ್ನು ಕಲ್ಪಿಸಿದವರೇ ನಮ್ಮ ಇಂದಿನ ಕನ್ನಡ ಕಲಿಗಳು ಕಥಾ ನಾಯಕ ಕ್ಯಾಪ್ಟನ್ ಗೋಪಿನಾಥ್.

1951 ರಲ್ಲಿ ಹಾಸನ ಜಿಲ್ಲೆಯ ಅರಕಲುಗೂಡು ತಾಲ್ಲೂಕಿನ ಹೇಮಾವತಿ ನದಿಯ ತಟದಲ್ಲಿರುವ ಸಣ್ಣ ಊರಾದ ಗೊರೂರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಎಂಟು ಮಕ್ಕಳಲ್ಲಿ ಎರಡನೆಯವರಾಗಿ ಗೋಪಿನಾಥ್ ಅವರ ಜನನವಾಗುತ್ತದೆ. ಸಾಹಿತಿಗಳು ಮತ್ತು ಕನ್ನಡ ಶಾಲೆಯ ಉಪಾಧ್ಯಾಯರಾಗಿದ್ದರೂ ಅವರ ತಂದೆಗೆ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂಬ ಗಾದೆಯ ಅನ್ವಯದಂತೆ ಮಕ್ಕಳು ಶಾಲೆಗಿಂತಲೂ ಮನೆಯಲ್ಲಿಯೇ ನೆಮ್ಮದಿಯ ವಾತಾವರಣದಲ್ಲಿ ಚೆನ್ನಾಗಿ ಶಿಕ್ಷಣ ಕಲಿಯುತ್ತಾರೆ ಎಂಬ ನಂಬಿಕೆ ಇದ್ದ ಕಾರಣ ಗೋಪೀನಾಥ್ ಮನೆಯಲ್ಲಿಯೇ ಅಕ್ಷರಾಭ್ಯಾಸ ಮಾಡಿಕೊಂಡು ತಮ್ಮ ಪ್ರಾಥಮಿಕ ಶಿಕ್ಷಣವನ್ನೇ ಪಡೆಯದೇ ಐದನೇ ತರಗತಿಗೆ ನೇರವಾಗಿ ಸೇರಿಕೊಂಡಿದ್ದರು. ತಮ್ಮ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿದ ನಂತರ 1962 ರಲ್ಲಿ, ಬಿಜಾಪುರದ ಸೈನಿಕ್ ಶಾಲೆಗೆ ಸೇರಿಕೊಳ್ಳುವ ಮೂಲಕ ಸಂಪ್ರದಾಯಸ್ಥ ಊರಿನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಸಂಪ್ರದಾಯಸ್ಥ ಕುಟುಂಬದ ಸಣ್ಣ ವಯಸ್ಸಿನ ಸಸ್ಯಹಾರದ ಹುಡುಗ ಅದು ಹೇಗೆ ಸೈನಿಕ ಶಾಲೆಯಲ್ಲಿ ಸಶಸ್ತ್ರ ಪಡೆಗಳ ತರಭೇತಿ ಪಡೆಯಬಲ್ಲ ಎಂಬುದು ಎಲ್ಲರ ಆತಂಕವಾಗಿತ್ತು.

ಓದಿನಲ್ಲಿ ಬಹಳ ಚುರುಕಾಗಿದ್ದ ಗೋಪೀನಾಥ್ ತಮ್ಮ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಗಳನ್ನು ಉತ್ತಮ ಶ್ರೇಣಿಯಲ್ಲಿ ಪೂರ್ಣಗೋಳಿಸಿ ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದದ್ದಲ್ಲದೇ ಸುಮಾರು ಎಂಟು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರಿಂದಲೇ ಕ್ಯಾಪ್ಟನ್ ಗೋಪಿನಾಥ್ ಎಂಬ ಹೆಸರನ್ನು ಅನ್ವರ್ಥವಾಗಿ ಗಿಟ್ಟಿಸಿಕೊಳ್ಳುತ್ತಾರೆ. ತಾವು ಸೇನೆಯಲ್ಲಿರುವಾಗಲೇ 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿಯೂ ಭಾಗವಾಗಿ ದೇಶದ ಪರವಾಗಿ ಹೋರಾಡಿದ್ದಕ್ಕಾಗಿ ಸರ್ಕಾರದಿಂದ ಕೃಷಿ ಭೂಮಿಯನ್ನೂ ಉಡುಗೊರೆಯಾಗಿ ಪಡೆಯುತ್ತಾರೆ.

ಮನಸ್ಸಿಗೆ ಹಿಡಿಸುವಷ್ಟು ದಿನ ಮಾತ್ರವೇ ಯಾವುದೇ ಕೆಲಸವನ್ನು ಮಾಡಬೇಕು. ಆ ಕೆಲಸದಲ್ಲಿ ಮನಸ್ಸು ವಿಮುಖವಾದರೆ ಹೊಸಾ ಕೆಲಸವನ್ನು ಮಾಡಬೇಕು ಎನ್ನುವ ನಿಯಮವನ್ನು ಪಾಲಿಸುವ ಗೋಪೀನಾಥ್ ಸೇನೆಯ ಏಕಾನತೆಯ ಕೆಲಸದಿಂದ ಬೇಸರ ಗೊಂಡು ತಮ್ಮ 28 ನೇ ವಯಸ್ಸಿನಲ್ಲಿಯೇ, ಸೈನ್ಯದಿಂದ ಸ್ವಯಂ ನಿವೃತ್ತಿ ಹೊಂದಿ ಸರ್ಕಾರ ನೀಡಿದ್ದ ಜಮೀನಿನಲ್ಲಿ ಕೃಷಿಯನ್ನು ಮಾಡುವುದರ ಜೊತೆಗೆ ಹೈನುಗಾರಿಕೆ, ಕೋಳೀ ಸಾಕಣೆ, ರೇಷ್ಮೇ ಸಾಕಣೆ ಮಾಡುತ್ತಾ ಸುಂದರವಾದ ಜೀವನ ಸಾಗಿಸುತ್ತಿದ್ದರು. ಇದೇ ಸಮಯದಲ್ಲಿ ತಮ್ಮ ಹಳ್ಳಿಯಿಂದ ನಗರಕ್ಕೆ ಬಂದು ಹೋಗಲು ಬುಲೆಟ್ ವಾಹನವನ್ನು ಬಳಸುತ್ತಿರುತ್ತಾರೆ. ಅದೊಮ್ಮೆ ಆವರ ಗಾಡಿ ಕೈ ಕೊಟ್ಟಾಗ, ಅದರ ರೀಪೇರಿಗೆ ಅಲ್ಲೆಲ್ಲೂ ಎನ್‌ಫೀಲ್ಡ್ ಬೈಕ್ ಸರ್ವಿಸ್ ಸೆಂಟರ್ ಇಲ್ಲದಿದ್ದನ್ನು ಮನಗೊಂಡು ತಾವೇಕೆ ಎನ್‌ಫೀಲ್ಡ್ ಬೈಕ್ ವ್ಯಾಪಾರ ಮಾಡಬಾರದು ಎಂದು ಯೋಚಿಸಿ ಚೆನೈಗೆ ಹೋಗಿ ಅಲ್ಲಿಯ ಅಧಿಕಾರಿಗಳಿಗೆ ಮನವೊಲಿಸಿ ಹಾಸನದಂತಹ ಜಿಲ್ಲಾ ಕೇಂದ್ರದಲ್ಲಿ ಎನ್‌ಫೀಲ್ಡ್ ಬೈಕ್ ಸೇಲ್ಸ್ & ಸರ್ವಿಸ್ ಆರಂಭಿಸಿ ನಂತರ ಅಕ್ಕ ಪಕ್ಕದ ಐದಾರು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಿ ಯಶಸ್ವಿ ವ್ಯಾಪಾರಿ ಎನಿಸಿಕೊಳ್ಳುತ್ತಾರೆ. ಇದೇ ಸಮಯದಲ್ಲಿಯೇ ಹೋಟೆಲ್ ಮಾಲೀಕರಾಗಿಯೂ ಸ್ಟಾಕ್ ಬ್ರೋಕರ್ ಆಗಿಯೂ ಕೆಲ ಕಾಲ ಜೀವನ ಸಾಗಿಸುತ್ತಾರೆ.

1995ರಲ್ಲಿ ವಾಯು ಸಾರಿಗೆಯಲ್ಲಿ ಹೊಸಾ ಉದ್ಯಮಿಗಳನ್ನು ಉತ್ತೇಜಿಸುವ ಸಲುವಾಗಿ ಹಲವಾರು ನಿಯಮಗಳನ್ನು ಸರ್ಕಾರ ಬದಲಿಸಿದನ್ನು ಗಮನಿಸಿದ ಕ್ಯಾಪ್ಟನ್ ಗೋಪಿನಾಥ್ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯಾರಂಭಿಸಿ 1997 ರಲ್ಲಿ ಡೆಕ್ಕನ್ ಏವಿಯೇಷನ್ ಎಂಬ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಸೇವೆಯನ್ನು ಕೇವಲ ಒಂದು ಹೆಲಿಕಾಪ್ಟರ್‌ನೊಂದಿಗೆ ಪ್ರಾರಂಭಿಸುತ್ತಾರೆ. ಸ್ವಲ್ಪವೇ ಸಮಯದಲ್ಲಿ ಈ ಹೆಲಿಕಾಪ್ಟರ್ ಸೇವೆ ಅಹಮದಾಬಾದ್, ಕೊಚ್ಚಿನ್, ದೆಹಲಿ, ಇಂದೋರ್, ಮುಂಬೈ, ಚೆನ್ನೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್, ಭುವನೇಶ್ವರ, ಜಮ್ ಷಡ್ಪುರ ಮತ್ತು ಕೂಚ್ ಬಿಹಾರ್ ಮುಂತಾದ ನಗರಗಳಿಗೆ ವಿಸ್ತರಿಸುತ್ತಾರೆ

ಇದೇ ಸಮಯದಲ್ಲಿಯೇ ಕುಗ್ರಾಮಾದ ಸಾಮಾನ್ಯ ಮಧ್ಯಮ ವರ್ಗದಿಂದ ಬಂದಿದ್ದ ಗೋಪೀನಾಥ್ ಅವರಿಗೆ ಪ್ರತಿಯೊಬ್ಬ ಭಾರತೀಯನೂ ಜೀವನದಲ್ಲಿ ಒಂದು ಬಾರಿಯಾದರೂ ವಿಮಾನ ಪ್ರಯಾಣ ಮಾಡಲಿ ಮತ್ತು ಭಾರತದ ಎರಡನೆಯ ದರ್ಜೆಯ ನಗರಗಳಾದ ಹುಬ್ಬಳ್ಳಿ, ಮಂಗಳೂರು, ಮೈಸೂರು, ಕೊಯಮತ್ತೂರು, ಮಧುರೈ, ವಿಶಾಖಪಟ್ಟಣ ಮುಂತಾದ ಪ್ರದೇಶಗಳಿಗೂ ವಿಮಾನ ಹಾರಾಟದ ವ್ಯವಸ್ಥೆಯಾಗಬೇಕೆಂಬ ಕನಸು ಕಂಡಿದ್ದರ ಪರಿಣಾಮ ಏರ್ ಡೆಕ್ಕನ್ ಎಂಬ ಭಾರತದ ಮೊದಲ ಕಡಿಮೆ-ವೆಚ್ಚದ ವಿಮಾನ ಯಾನ ಸಂಸ್ಥೆಯನ್ನು ತಮ್ಮ ಜೀವಮಾನದ ಉಳಿತಾಯವಲ್ಲದೇ ಸ್ನೇಹಿತರು ಮತ್ತು ತಮ್ಮ ಕುಟುಂಬದ ಇತರೇ ಸದಸ್ಯರಿಂದ 5 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಆರಂಭಿಸಿದರು. ಇದರ ಮೊದಲ ವಿಮಾನ ಪ್ರಯಾಣವು 2003,ಆಗಸ್ಟ್ 23 ರಂದು ಹೈದ್ರಾಬಾದ್ ನಿಂದ ವಿಜಯವಾಡಕ್ಕೆ ತಮ್ಮ ವಿಮಾನವನ್ನು ಹಾರಿಸಿದ್ದರು. ಈ ಸಂಸ್ಥೆಯ ಚಿನ್ಹೆಯಲ್ಲಿ ಎರಡು ಹಸ್ತಗಳು ಸೇರಿಸಿ ಪಕ್ಷಿಯೊಂದು ಹಾರುತ್ತಿರುವುದನ್ನು ಸಂಕೇತಿಸಲಾಗಿತ್ತು. ಈ ವಿಮಾನಯಾನದ ಘೋಷಣಾ ವಾಕ್ಯವೂ ಸಹಾ ಸಿಂಪ್ಲಿ-ಫ್ಲೈ ಎಂದಿದ್ದು ಜನಸಾಮಾನ್ಯರಿಗೂ ಈಗ ವಿಮಾನ ಪ್ರಯಾಣ ಸಾಧ್ಯವೆಂದು ಸ್ಪಷ್ಟವಾಗಿ ತಿಳಿಸುವುದರಲ್ಲಿ ಸಫಲವಾಯಿತು. ಭಾರತೀಯರು ಇಂತಹ ಸುವರ್ಣಾವಕಾಶವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡ ಪರಿಣಾಮ ಈ ಕಂಪನಿ ಅತ್ಯಂತ ಕಡಿಮೇ ಸಮಯದಲ್ಲಿಯೇ ತ್ವರಿತವಾದ ಯಶಸ್ಸನ್ನು ಕಂಡಿದ್ದಲ್ಲದೇ, ಅದಾಗಲೇ ಈ ವಿಮಾನ ಯಾನದ ಸೇವೆಯಲ್ಲಿದ್ದ ಇಂಡಿಗೊ ಏರ್‌ಲೈನ್ಸ್, ಗೋ ಏರ್, ಸ್ಪೈಸ್ ಜೆಟ್ ಮತ್ತು ಜೆಟ್ ಲೈಟ್‌ನಂತಹ ಹಲವಾರು ಕಂಪನಿಗಳು ಏರ್ ಡೆಕ್ಕನ್ ಜೊತೆ ಸ್ಪರ್ಧಿಸುವ ಸಲುವಾಗಿ ತಮ್ಮ ಟಿಕೆಟ್ ಬೆಲೆಯನ್ನೂ ಕಡಿಮೆ ಮಾಡಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸತೊಡಗಿ ಏರ್ ಡೆಕ್ಕನ್ ಕಂಪನಿಗೆ ತೀವ್ರವಾದ ಸ್ಪರ್ಧೆಯನ್ನು ಕೊಡಲಾರಂಭಿಸಿದವು. ಈ ರೀತಿಯ ವಿಮಾನಯಾನ ಅತಿಯಾದ ಸ್ಪರ್ಧೆಯಿಂದ ಗೋಪಿನಾಥ್ ಕಂಪನಿಗೆ ಆರ್ಥಿಕವಾಗಿ ಹೊಡೆತ ಬಿದ್ದದ್ದನ್ನು ತಾಳಲಾಗದೇ, ಏರ್ ಡೆಕ್ಕನ್ ಈ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸುತ್ತಿದ್ದಾಗಲೇ ಏರ್ ಡೆಕ್ಕನ್ ಕಂಪನಿಯನ್ನು ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ಲೈನ್ಸ್ ನೊಂದಿಗೆ ವಿಲೀನ ಗೊಳಿಸಿ ಸಾಕಷ್ಟು ಲಾಭವನ್ನು ಗಳಿಸಿ ಆರ್ಥಿಕವಾಗಿ ಗೋಪಿನಾಥ್ ಸಧೃಢರಾದರೂ ಭಾರತೀಯರಿಗೆ ಅತೀ ಕಡಿಮೆ ವೆಚ್ಚದ ಸೇವೆಯ ವಿಮಾನ ಯಾನದ ಮೇಲೆ ಭಾರೀ ಹೊಡೆತ ಬಿದ್ದಿದ್ದಂತೂ ಸುಳ್ಳಲ್ಲ.

ತಮ್ಮ ಏರ್ ಡೆಕ್ಕನ್ ಸಂಸ್ಥೆಯನ್ನು ಕಿಂಗ್ ಫಿಷರ್ ಕಂಪನಿಯೊಂದಿಗೆ ವಿಲೀನ ಗೊಳಿಸಿದ ನಂತರ ಆವರ ಕಂಪನಿಯಲ್ಲಿ ಆರಂಭದಿಂದಲೂ ನಂಬಿಕಸ್ಥರಾಗಿ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ಅವರ ಮನೆಗೆ ಕರೆಸಿಕೊಂಡು ಅವರೆಲ್ಲರಿಗೂ ತಮ್ಮ ಕೈಯ್ಯಾರೆ ಒಳ್ಳೆಯ ಊಟವನ್ನು ಬಡಿಸಿ ಅವರೊಂದಿಗೆ ತಾವೇಕೆ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂಬುದನ್ನು ಮುಕ್ತವಾಗಿ ಮತ್ತು ಅವರಿಗೆ ವಿವರಿಸಿ ತಮ್ಮ ಮನಸ್ಸನ್ನು ಹಗುರ ಗೊಳಿಸಿಕೊಂಡ ಅತ್ಯಂತ ಸರಳ ವ್ಯಕ್ತಿ ಕ್ಯಾಪ್ಟನ್ ಗೋಪಿನಾಥ್.

ಇದೇ ಸಮಯದಲ್ಲಿ ಸ್ವಲ್ಪ ಬಿಡುವಾಗಿದ್ದ ಕಾರಣ ಸಿಂಪ್ಲೀ-ಫ್ಲೈ ಎಂಬ ತಮ್ಮ ವಿಮಾನ ಕಂಪನಿಯ ಅನುಭವವನ್ನು ಪುಸ್ತಕದ ರೂಪದಲ್ಲಿ ಹೊರತಂದು ಅವರ ಮಹತ್ವಾಕಾಂಕ್ಷೆಯ ದೃಷ್ಟಿಯನ್ನು, ಯಶಸ್ವಿ ವ್ಯವಹಾರ ಕಥೆಯನ್ನಾಗಿ ಪರಿವರ್ತಿಸುವ ಗಮನಾರ್ಹ ಪ್ರಯಾಣದ ಬಗ್ಗೆ ಬೆಳಕು ಚೆಲ್ಲುವುದರಲ್ಲಿ ಸಫಲರಾದರು. ಇತರೇ ಎಲ್ಲಾ ಉದ್ಯಮಿಗಳಿಗಿಂತ ಭಿನ್ನವಾಗಿ ಮತ್ತು ದೇಶದ ಅನೇಕ ಹೊಸಾ ಯುವ ಉದ್ಯಮಿಗಳಿಗೆ ಪ್ರೇರಣೆ ನೀಡುವಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರ ಬಹುತೇಕ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಿವೆ.

ಇವೆಲ್ಲದರ ಮಧ್ಯೆ ರಾಜಕೀಯದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುವ ಸಲುವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರಾದರೂ ಸಾರ್ವಜನಿಕರಿಂದ ಸಾಕಷ್ಟು ಬೆಂಬಲವನ್ನು ಪಡೆಯುವುದರಲ್ಲಿ ವಿಫಲರಾದ ಗೋಪೀನಾಥ್ ಡೆಕ್ಕನ್ 360 ಎಂಬ ಸರಕು ಹಾರಾಟದ ಹೊಸ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೂಲಕ ವಿಮಾನಯಾನದ ವ್ಯವಹಾರದಲ್ಲಿ ಮುಂದುವರೆಯಲು ಪ್ರಯತ್ನಿಸಿದರಾದರೂ ಅರ್ಥಿಕವಾಗಿ ಅದು ಕೈಹಿಡಿಯದ ಕಾರಣ ಅದನ್ನೂ ಸಹಾ ಮುಚ್ಚ ಬೇಕಾದದ್ದು ದುರಾದೃಷ್ಟಕರ ಸಂಗತಿ.

ಇಷ್ಟು ಕಡಿಮೆ ಅವಧಿಯಲ್ಲಿ ಅವರ ಅದ್ಭುತ ಯಶಸ್ಸನ್ನು ಮನಗಂಡು ಅನೇಕ ಪ್ರಸಿದ್ಧ ಮತ್ತು ಪ್ರತಿಷ್ಠಿತ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದು ಅವುಗಳಲ್ಲಿ ಪ್ರಮುಖವಾಗಿರುವುದು

ಹಲವಾರಿ ಎಂಟರ್‌ಪ್ರೈಸ್‌ಗಾಗಿ ರೋಲೆಕ್ಸ್ ಪ್ರಶಸ್ತಿಗಳು,

ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,

  • ಚೆವಲಿಯರ್ ಡೆ ಲಾ ಲೀಜನ್ ಡಿ ಹೊನ್ನೂರ್,

  • ಪರ್ಸನಾಲಿಟಿ ಆಫ್ ದಿ ಡಿಕೇಡ್ ಪ್ರಶಸ್ತಿ

  • ಸರ್ ಎಂ ವಿಶ್ವೇಶ್ವರಯ ಸ್ಮಾರಕ ಪ್ರಶಸ್ತಿಗಳಾಗಿವೆ.

ಅವರ ಸಾಧನೆಗಳ ಕಾಲಘಟ್ಟಗಳು ಈ ರೀತಿಯಾಗಿದೆ

  • 1997: ಅವರು ಡೆಕ್ಕನ್ ಏವಿಯೇಷನ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

  • 2003: ಅವರು ಏರ್ ಡೆಕ್ಕನ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

  • 2004: ಡೆಕ್ಕನ್ ಏವಿಯೇಷನ್ ಶ್ರೀಲಂಕಾಕ್ಕೆ ವಿಸ್ತರಿಸಿತು.

  • 2007: ಏರ್ ಡೆಕ್ಕನ್ ಕಿಂಗ್‌ಫಿಶರ್ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಿತು.

  • 2009: ಅವರು ಡೆಕ್ಕನ್ 360 ಅನ್ನು ಪ್ರಾರಂಭಿಸಿದರು

  • 2014: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು.

ಗೋಪಿನಾಥರ ಸಿಂಪ್ಲಿ ಫ್ಲೈ ಪುಸ್ತಕದಿಂದ ಪ್ರೇರಿತವಾಗಿ ತಮಿಳಿನಲ್ಲಿ ಸೂರ್ಯಾ ಅವರ ಆಭಿನಯದಲ್ಲಿ ಸೂರರೈ ಪೊಟ್ರು ಎಂಬ ಚಿತ್ರ ಸಿದ್ಧವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಎತ್ತಿನ ಗಾಡಿ ಸವಾರಿ ಮಾಡುತ್ತಿದ್ದ ಸಾಧಾರಣ ವ್ಯಕ್ತಿ, ವಿಮಾನಯಾನದ ಸಂಸ್ಥೆಯನ್ನೇ ಆರಂಭಿಸಿ ಕಡಿಮೆ-ವೆಚ್ಚದ ವಿಮಾನಯಾನ ಸೇವೆಯನ್ನು ಪ್ರಾರಂಭಿಸುವ ಯುವಕನ ಕಥೆಯನ್ನು ಹೊಂದಿದೆ.

ಸದ್ಯದಲ್ಲಿ ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಡನೆ ನೆಮ್ಮದಿಯ ಜೀವನ ನಡೆಸುತ್ತಿರುವ ಕ್ಯಾಪ್ಟನ್ ಗೋಪಿನಾಥ್, ಅನೇಕ ವಾರಪತ್ರಿಕೆಗಳಲ್ಲಿ ಸಕ್ರೀಯರಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪ್ರಚೋದನಕಾರಿ ಅಂಕಣಕಾರರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 2017 ರಲ್ಲಿ, ತಮ್ಮ ಆಸಕ್ತಿಗಳು ಮತ್ತು ಬದ್ಧತೆಯ ಆಳವನ್ನು ಸೆರೆಹಿಡಿಯುವ You Cannot Miss This Flight: Essays on Emerging India ಎಂಬ ಹೆಸರಿನ ಮತ್ತೊಂದು ಪುಸ್ತಕವನ್ನು ಬರೆದು ಖ್ಯಾತ ಲೇಖಕರಾಗಿಯೂ ಪ್ರಸಿದ್ಧಿ ಹೊಂದಿದ್ದಾರೆ.

ಸಾಧಾರಣ ಹಿನ್ನೆಲೆಯಿಂದ ಬಂದ ಕ್ಯಾಪ್ಟನ್ ಗೋಪಿನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ. ಆರಂಭದಲ್ಲಿ ಸೇನಾಧಿಕಾರಿ, ಪರಿಸರ ಸ್ನೇಹಿ ಕೃಷಿಕ, ಭಾರತದ ಪ್ರಮುಖ ಉದ್ಯಮಿ, ಸ್ವತಂತ್ರ ರಾಜಕೀಯ ಅಭ್ಯರ್ಥಿ, ಪ್ರಸಿದ್ಧ ಲೇಖಕ ಹೀಗೆ ಹತ್ತು ಹಲವು ವಿಷಯಗಳಲ್ಲಿ ತುಂಬಾ ವೈವಿಧ್ಯತೆಯೊಂದಿಗೆ, ಅವರು ಅತ್ಯಂತ ಆಸಕ್ತಿದಾಯಕ ಮತ್ತು ವಿಶಿಷ್ಟ ವ್ಯಕ್ತಿಗಳಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಇವೆಲ್ಲವುಗಳ ಹೊರತಾಗಿಯೂ, ಅವರು ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಗಳ ಪ್ರವರ್ತಕರಾಗಿ ಭಾರತೀಯ ವಾಯುಯಾನದ ಕ್ಷೇತ್ರದಲ್ಲಿ ಕ್ರಾಂತಿಯುಂಟು ಮಾಡಿ ಜನ ಸಾಮಾನ್ಯರನ್ನೂ ಯಶಸ್ವಿಯಾಗಿ ವಿಮಾನಯಾನ ಮಾಡಿಸುವಲ್ಲಿ ಸಫಲತೆಯನ್ನು ಕಂಡ ಸಾಹಸಿ ಕ್ಯಾಪ್ಟನ್ ಗೋಪಿನಾಥ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s