ಪರಿಸರ ಪ್ರೇಮಿ ಸಾಲುಮರ ತಿಮ್ಮಕ್ಕ

ಸಾಧಾರಣವಾಗಿ ಎಲ್ಲಾ ಕುಟುಂಬಸ್ಥರೂ ತಮ್ಮ ಇಳೀ ವಯಸ್ಸಿನಲ್ಲಿ ತಮ್ಮನ್ನು ನೋಡಿಕೊಳ್ಳಲು ಮಕ್ಕಳಿರಬೇಕು ಎಂದು ಬಯಸುತ್ತಾರೆ. ಹಿಂದೆಲ್ಲಾ ಮಕ್ಕಳಿರಲವ್ವಾ ಮನೆ ತುಂಬಾ ಡಜನ್ ಗಟ್ಟಲೇ ಮಕ್ಕಳಿರುತ್ತಿದ್ದರು ಆದರೆ ಇಂದು ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಇದ್ದು ಈಗ ಹೆಣ್ಣಾಗಲೀ ಗಂಡಾಗಲೀ ಮಕ್ಕಳೊಂದೇ ಇರಲಿ ಎಂದರೂ ಒಟ್ಟಿನಲ್ಲಿ ಮಕ್ಕಳಿರಲೇ ಬೇಕೆಂದು ಆಶಿಸುತ್ತಾರೆ. ಇಲ್ಲೊಂದು ಹಳ್ಳಿಯ ರೈತಾಪಿ ಕುಟುಂಬದ ಅನಕ್ಷರಸ್ಥ ದಂಪತಿಗಳಿಗೆ ಮಕ್ಕಳೇ ಆಗದಿದ್ದಾಗ ಸ್ವಲ್ಪವೂ ಬೇಸರಿಸಿಕೊಳ್ಳದೇ, ತಮ್ಮ ಊರಿನ ದಾರಿಯುದ್ದಕ್ಕೂ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ತಮ್ಮ ಹೆತ್ತ ಮಕ್ಕಳಿಗಿಂತಳೂ ಅಕ್ಕರೆಯಿಂದ ಸಾಕಿ ಸಲಹಿದ ಪುಣ್ಯವಂತೆ ಸಾಲು ಮರದ ತಿಮ್ಮಕ್ಕನವರೇ ನಮ್ಮ ಈ ದಿನದ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕಿ.

ತಿಮ್ಮಕ್ಕನವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಚಿಕ್ಕರಂಗಯ್ಯ ಮತ್ತು ವಿಜಯಮ್ಮ ದಂಪತಿಗಳಿಗೆ ಜನಿಸುತ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದುದ್ದರಿಂದ ಯಾವುದೇ ಶಿಕ್ಷಣವನ್ನು ಪಡಯಲಾಗದೇ, ಮನೆಯ ಜೀವನದ ನಿರ್ವಹಣೆಗಾಗಿ ತಮ್ಮ ತಂದೆ ತಾಯಿಯರ ಜೊತೆ ತಮ್ಮೂರಿನ ಬಳಿಯ ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸವನ್ನು ಮಾಡಲಾರಂಭಿಸುತ್ತಾರೆ. ಹುಡುಗಿ ಬೆಳೆದು ಮದುವೆ ವಯಸ್ಸಿಗೆ ಬಂದಾಗ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಎಂಬ ಒಬ್ಬ ದನಗಾಹಿ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಡುತ್ತಾರೆ. ದುರಾದೃಷ್ಟವಷಾತ್ ಈ ದಂಪತಿಗಳಿಗೆ ಎಷ್ಟು ವರ್ಷವಾದರೂ ಮಕ್ಕಳಾಗದಿದ್ದಾಗ, ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ತಿಮ್ಮಕ್ಕನವರು ತಮ್ಮ ಊರಿನ ದಾರಿಯುದ್ದಕ್ಕೂ ಆಲದ ಮರಗಳನ್ನು ನೆಡಲಾರಂಭಿಸಿದರೆ ಅದಕ್ಕೆ ಪೂರಕವಾಗಿ ಅವರ ಚಿಕ್ಕಯ್ಯನವರೂ ಸಹಾ ಹತ್ತಿರದ ಭಾವಿಗಳಿಂದ ನೀರನ್ನು ತಂದು ಹಾಕುವ ಮೂಲಕ ಗಿಡಗಳು ಹಾಳಾಗದೇ, ಚೆನ್ನಾಗಿ ಬೆಳೆಯುವಂತೆ ನೋಡಿಕೊಂಡರು.

ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು ಹಾಗಾಗಿಯೇ ತಿಮ್ಮಕ್ಕ ದಂಪತಿಗಳು ಅದೇ ಆಲದ ಮರಗಳಿಂದ ಕಸಿಮಾಡಿ ಹೊಸಾ ಸಸಿಗಳನ್ನು ಮಾಡಿದರು. ಮೊದಲ ವರ್ಷದಲ್ಲಿ ಕೇವಲ ಹತ್ತು ಸಸಿಗಳನ್ನು ತಮ್ಮೂರಿನಿಂದ ಸುಮಾರು 4 ಕಿ.ಮೀ ದೂರದಲ್ಲಿದ್ದ ಕುದೂರಿನಲ್ಲಿ ನೆಟ್ಟು ಸಂರಕ್ಷಿಸಲಾಗಿ ಆ ಎಲ್ಲಾ ಸಸಿಗಳು ಚೆನ್ನಾಗಿ ಬೆಳೆಯರಾರಂಭಿಸಿದ್ದರಿಂದ ಉತ್ಸಾಹಿತರಾಗಿ, ಎರಡನೇ ವರ್ಷ ಹದಿನೈದು ಗಿಡಗಳು ನಂತರ ಮೂರನೇ ವರ್ಷ ಇಪ್ಪತ್ತು ಸಸಿಗಳನ್ನು ನೆಟ್ಟು‌ ಪೋಷಿಸಿದರು. ಆನಕ್ಷರಸ್ಥರಾದರೂ ಕೃಷಿಯಲ್ಲಿ ಬಹಳ ತಿಳುವಳಿಕೆ ಉಳ್ಳವರಾಗಿದ್ದ ಈ ದಂಪತಿಗಳು ಆರಂಭದಲ್ಲಿ ಸಸಿಗಳು ಬೆಳೆಯಲು ಹೆಚ್ಚಿನ ನೀರಿನ ಅವಶ್ಯಕತೆಯಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಅವರುಗಳು‌‌ ಸಸಿಗಳನ್ನು ಮುಂಗಾರು ಮಳೆಗಾಲದಲ್ಲಿಯೇ ನೆಡುವ ಮೂಲಕ ಗಿಡಗಳಿಗೆ ಸಂವೃಧ್ಧವಾಗಿ ನೀರು ದೊರೆಯುವಂತೆ ನೋಡಿಕೊಂಡರು. ನಂತರದ ದಿನಗಳಲ್ಲಿ ಈ ದಂಪತಿಗಳಿಬ್ಬರೂ ತಮ್ಮ ಆದಾಯದಲ್ಲೇ ಉಳಿಸಿದ ಹಣದಿಂದ ಬಿಂದಿಗೆ ಮತ್ತು ಕೊಳಗಳನ್ನು ಖರೀದಿಸಿ 4 ಕಿ.ಮೀ ದೂರದ ಊರಿನಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸಿತ್ತಿದ್ದಲ್ಲದೇ, ಬೀಡಾಡಿ ದನಗಳಿಂದ ಈ ಗಿಡಗಳನ್ನು ರಕ್ಷಿಸುವ ಸಲುವಾಗಿ ಈ ಗಿಡಗಳ ಸುತ್ತಾ ಮುಳ್ಳು ಪೊದೆಗಳ ಕವಚವನ್ನು ನಿರ್ಮಿಸಿ ಗಿಡಗಳನ್ನು ಜತನದಿಂದ ಕಾಪಾಡುವ ಮೂಲಕ ನೋಡ ನೋಡುತ್ತಿದ್ದಂತೆಯೇ ಆ ಸಸಿಗಳು ಹೆಮ್ಮರವಾಗಿ ಬೆಳೆದು ದಾರಿ ಹೋಕರಿಗೆ ತಂಪನ್ನೆರೆದಿದ್ದಲ್ಲದೇ ಎಷ್ಟೋ ಪಕ್ಷಿ ಸಂಕುಲಕ್ಕೆ ಆಶ್ರಯ ಕೊಡುವುದರ ಜೊತೆಗೆ ಅಲ್ಲಿಯ ಜನರಿಗೆ ಶುದ್ಧ ಗಾಳಿಯನ್ನು ಕೊಡುವ ಮೂಲಕ ಪರಿಸರವೂ ಶುದ್ಧಿಯಾಯಿತು.

ತಿಮ್ಮಕ್ಕ ದಂಪತಿಗಳಿಗೆ ಮಕ್ಕಳಾಗಿದ್ದರೆ ವಯಸ್ಸಾದ ನಂತರ ಕೇವಲ ಅವರನ್ನು ಮಾತ್ರವೇ ನೋಡಿ ಕೊಳ್ಳುತ್ತಿದ್ದರು. ಆದರೆ ಅದೇ ಮಕ್ಕಳ ಜಾಗದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ ಅವರು ನೆಟ್ಟ ಸುಮಾರು 291 ಸಸಿಗಳು ಇಂದು ಹೆಮ್ಮರವಾಗಿ ಅವುಗಳ ಇಂದಿನ ಮೌಲ್ಯ 15 ಲಕ್ಷ ಎಂದು ಅಂದಾಜು ಮಾಡಿದ್ದರೂ ನಿಜವಾಗಿಯೂ ಅದು ಬೆಲೆ ಕಟ್ಟಲಾಗದ ಸಾಧನೆಯಾಗಿದೆ. ಅದರಲ್ಲೂ ಅವರು ನೆಟ್ಟ ಆಲದ ಮರಗಳ ಬಿಳಲು‌ ಬಿಟ್ಟು ಇನ್ನೂ ನೂರಾರು ವರ್ಷಗಳ ಕಾಲ ಪರಿಸರದ ಸಂರಕ್ಷಣೆಯನ್ನು ಮಾಡುತ್ತಲೇ ಇರುವುದು ನಿಜಕ್ಕೂ ಅಭಿನಂದನಾರ್ಹವಾದ ಕಾರ್ಯವಾಗಿದೆ. ತಿಮ್ಮಕ್ಕನವರಿಗೆ ಈಗ ವಯಸ್ಸಾಗಿರುವ ಕಾರಣ ಈ ಎಲ್ಲಾ ಮರಗಳ ನಿರ್ವಹಣೆಯನ್ನು ಕರ್ನಾಟಕ ಸರ್ಕಾರವು ವಹಿಸಿಕೊಂಡಿರುವುದು ಸಂತೋಷದ ವಿಷಯವಾಗಿದೆ. ಅವರು ನೆಟ್ಟ ಮರಗಳು ತಲತಲಾಂತರದವರೆಗೂ ಸುಂದರವಾದ ಪರಿಸರದ ಜೊತೆ ಇಡೀ ಸಮಾಜಕ್ಕೆ ಶುದ್ಧವಾದ ಆಮ್ಲಜನಕದ ಕಾರ್ಖಾನೆಯಾಗಿರುವುದು ನಿಜಕ್ಕೂ ಶ್ಲಾಘನೀಯ, ಅನನ್ಯ ಮತ್ತು ಅನುಕರಣಿಯವೇ ಸರಿ.

ಅದೊಮ್ಮೆ ಮಾಜೀ ಮಂತ್ರಿಗಳಾದ ಶ್ಯಾಮನೂರು ಶಿವಶಂಕರಪ್ಪನವರು ತುಮಕೂರಿನ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಮಾಗಡಿಯ ಮೂಲಕ ಕನಕಪುರದಲ್ಲಿನ ಮತ್ತೊಂದು ಕಾರ್ಯಕ್ರಮಕ್ಕೆ ಹೋಗುವಾಗ ದಾರಿಯ ಮಧ್ಯದಲ್ಲಿ ತಮ್ಮ ವಾಹನ ನಿಲ್ಲಿಸಿ ದಾರಿಯ ಪಕ್ಕದಲ್ಲೇ ಇದ್ದ ಮರಗಳ ಹಿಂದೆ ತಮ್ಮ ದೇಹಬಾಧೆ ತೀರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಬೆಳೆದಿದ್ದ ಸಾಲು ಸಾಲು ಮರಗಳನ್ನು ನೋಡಿ ಅಚ್ಚರಿಗೊಂಡು ಅಲ್ಲಿಯೇ ಹೋಗುತ್ತಿದ್ದ ವ್ಯಕ್ತಿಯ ಬಳಿ ಈ ಮರಗಳನ್ನೆಲ್ಲ ಯಾವ ಗ್ರಾಮ ಪಂಚಾಯತಿಯವರು ಬೆಳೆಸಿದ್ದಾರೆ? ಎಂದು ಕುತೂಹಲದಿಂದ ಪ್ರಶ್ನಿಸುತ್ತಾರೆ. ಅದಕ್ಕೆ ಆ ವ್ಯಕ್ತಿಯು ಗಹಗಹಿಸಿ ನಗುತ್ತಾ, ಸ್ವಾಮೀ ಈ ಮರಗಳನ್ನು ಪಂಚಾಯ್ತಿಯವರು ಎಲ್ಲಿ ನೆಡ್ತಾರೇ? ಇದನ್ನು ನಮ್ಮ ಸಾಲು ಮರದ ತಿಮ್ಮಕ್ಕ ಮತ್ತು ಚಿಕ್ಕಯ್ಯ ಎಂಬ ಬಡ ದಂಪತಿಗಳು ನಿಸ್ವಾರ್ಥವಾಗಿ ಸುಮಾರು ನಾಲ್ಕು ಕಿಲೋ ದೂರದವರೆಗೆ 291 ಮರಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೆಟ್ಟು ಬೆಳೆಸಿದ್ದಾರೆ ಎಂದು ತಿಳಿಸುತ್ತಾರೆ. ಈ ಉತ್ತರದಿಂದ ಆಶ್ವರ್ಯ ಚಕಿತರಾಗಿ ಅಲ್ಲಿಯೇ ಇದ್ದ ಚಿಕ್ಕಯ್ಯ ಮತ್ತು ತಿಮ್ಮಕ್ಕನವರನ್ನು ಭೇಟಿ ಮಾಡಿ ಅವರ ಕಡು ಬಡತನವನ್ನು ಗಮನಿಸಿ ಲೋಕರೂಢಿಯಾಗಿ ನಿಮಗೆಷ್ಟು ಮಕ್ಕಳು ? ಎಂದು ಕೇಳುತ್ತಾರೆ. ಸ್ವಾಮೀ.. ಆ ಭಗವಂತ ನಮಗೆ ಮಕ್ಕಳ ಭಾಗ್ಯ ಕರುಣಿಸಿಲ್ಲ ಮತ್ತು ನಮಗೆ ಈಗ ಮಕ್ಕಳೇ ಬೇಡ. ಈ ಮರಗಳೇ ನಮ್ಮ ಮಕ್ಕಳು ಎಂದು ವಿನಮ್ರವಾಗಿ ಹೇಳಿದನ್ನು ಕೇಳಿ ಶಾಮನೂರು ಅವರು ಮೂಕ ವಿಸ್ಮಿತರಾಗುತ್ತಾರೆ.

1991ರಲ್ಲಿ ತಿಮಕ್ಕನವರ ಪತಿ ಚಿಕ್ಕಯ್ಯನವರು ತೀರಿಕೊಂಡ ನಂತರ ಹಲವಾರು ಸಂಘಟನೆಗಳು ಅವರನ್ನು ನೋಡಿಕೊಳ್ಳಲು ಮುಂದಾದರೂ, ಬಹಳ ಸ್ವಾಭೀಮಾನಿಯಾಗಿ ಒಂಟೀ ಜೀವನ ನಡೆಸುತ್ತೇನೆ‌ ಎನ್ನುತ್ತಾರೆ ತಿಮ್ಮಕ್ಕನವರು, ಅಷ್ಟಕ್ಕೇ ಸೀಮಿತವಾಗದೇ, ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜದ ಸೇವೆಗಾಗಿಯೇ ಮುಡುಪಾಗಿಡುವುದಲ್ಲದೇ, ನನ್ನ ಪತಿ ಬೆಳೆಸಿರುವ ಸಾಲುಮರಗಳನ್ನು ನೋಡುತ್ತಲೇ, ಅದರ ನೆರಳಿನಲ್ಲೇ ವಿಹರಿಸುತ್ತಾ ಹುಲಿಕಲ್‍ನಲ್ಲೇ ಇರುತ್ತೇನೆಂದು ತಿಮ್ಮಕ್ಕನವರು ಆ ಎಲ್ಲಾ ಸಂಘಟನೆಗಳಿಗೆ ಹೇಳಿರುವುದು ಗಮನಾರ್ಹ. ಪರಿಸರ ರಕ್ಷಣೆಯ ಜೊತೆಗೆ ಸಮಾಜ ಸೇವಾ ಕೆಲಸಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ತಿಮ್ಮಕ್ಕನವರು ನಾನಾ ಸಂಘ ಸಂಸ್ಥೆಗಳು ಪ್ರಶಸ್ತಿಗಳ ಜೊತೆ ಮಾಡುವ ಧನ ಸಹಾಯವನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಳ್ಳದೇ, ತಮ್ಮ ಹಳ್ಳಿಯಲ್ಲಿ ಹೆರಿಗೆ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಮತ್ತಿತರ ಸೇವೆಗಳಿಗೆ ಬಳಸಿಕೊಳುತ್ತಿದ್ದಾರೆ. ಕೆಲವೊಮ್ಮೆ ಉಪವಾಸ ಸತ್ಯಾಗ್ರಹವನ್ನೂ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಊರಿಗೆ ಅವಶ್ಯಕವಾದ ಕೆಲಸಗಳನ್ನು ಮಾಡಿಸಿದ್ದಾರೆ. ಶಾಲೆಯಲ್ಲಿ ವಿದ್ಯೆ ಕಲಿಯದಿದ್ದರೂ, ಕೃಷಿ ಮತ್ತು ಪರಿಸರದಲ್ಲೇ ಬೆಳೆದು ಅವರು ಕಲಿತ ಅನುಭವದಿಂದ ಸಸ್ಯ ಲೋಕದ ಜ್ಞಾನವನ್ನು ಸಂಪಾದಿಸಿದ್ದಾರೆ. ಯಾವುದೇ ಗಿಡದ ಎಲೆಯನ್ನು ನೋಡಿದ ತಕ್ಷಣವೇ, ಥಟ್ ಅಂತಾ ಅದನ್ನು ಗುರುತಿಸುವಷ್ಟು ಬುದ್ಧಿವಂತೆಯಾಗಿರುವ ನಮ್ಮ ತಿಮ್ಮಕ್ಕನವರ ಯಶೋಗಾಥೆ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಅವರ ಸಾಧನೆಗಳನ್ನು ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಳವಡಿಸಿದ್ದಾರೆ.

ತಿಮ್ಮಕ್ಕರವರು ಪರಿಸರ ಸಂರಕ್ಷಣೆಯಲ್ಲಿ ಮಾಡಿದ ಈ ಮಹತ್ತರ ಕಾರ್ಯವನ್ನು ಗುರುತಿಸಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ.

ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, ೨೦೧೦ರ ಸಾಲಿನ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, 2019 ರ ಪದ್ಮಶ್ರೀ ಪ್ರಶಸ್ತಿ, 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮೂಲಕ ಡಾ. ತಿಮ್ಮಕ್ಕನಾಗಿದ್ದಾರೆ ಈ ಸಾಲುಮರದ ವೃಕ್ಷಮಾತೆ. ಅವರಿಗೆ ಬಂದ ಪ್ರಶಸ್ತಿ ಪುರಸ್ಕಾರಗಳನ್ನು ಪಟ್ಟಿಮಾಡುತ್ತಾ ಹೋದರೇ ಪುಟಗಟ್ಟಲೇ ಆಗುತ್ತದೆ.

ಎಷ್ಟೇ ಪ್ರಶಸ್ತಿ ಪುರಸ್ಕಾರಗಳು ಬಂದರೂ ಅದಕ್ಕೆ ಹಿಗ್ಗದೇ ಕುಗ್ಗದೇ, ಬಹಳ ಮುಗ್ಧ ಜೀವಿಯಾಗಿರುವ ತಿಮ್ಮಕ್ಕನವರ ಮುಗ್ಧತೆಯ ಬಗ್ಗೆ ಒಂದು ಪ್ರಸಂಗವನ್ನು ತಿಳಿಸಲೇ ಬೇಕು. ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಮೃತಹಸ್ತದಿಂದ ಪದ್ಮಶ್ರೀ ಪಡೆದುಕೊಳ್ಳುವ ಸಂದರ್ಭದಲ್ಲಿ, ಹಿನ್ನಲೆಯ ಧ್ವನಿಯಲ್ಲಿ ತಿಮ್ಮಕ್ಕನವರ ಸಾಧನೆಯನ್ನು ಕೇಳಿ ಅಭಿಮಾನ ಪೂರ್ವಕವಾಗಿ ಅವರಿಗೆ ಅಭಿನಂದನೆ ತಿಳಿಸಲು ರಾಷ್ಟ್ರಪತಿಗಳು ತಿಮ್ಮಕ್ಕನವರ ಮುಂದೆ ತಲೆ ಬಗ್ಗಿಸಿದಾಗ ಅದನ್ನು ಅರಿಯದ ಮುಗ್ಧ ತಿಮ್ಮಕ್ಕನವರು ತಮಗೆ ನಮಸ್ಕಾರ ಮಾಡಿದರೆಂದು ಭಾವಿಸಿ ಭಕ್ತಿ ಪೂರ್ವಕವಾಗಿ ರಾಷ್ಟ್ರಪತಿಗಳ ತಲೆಯ ಮೇಲೆ ತಮ್ಮ ಕೈಗಳನ್ನು ಇರಿಸಿ ಆಶೀರ್ವದಿಸಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯ ಚಕಿತರಾದರೂ, ರಾಷ್ಟಪತಿಗಳು ಮಾತ್ರಾ ಯಾವುದೇ ಗೊಂದಕ್ಕೀಡಾಗದೇ ಇದು ಹಿರಿಯರ ಆಶೀರ್ವಾದ ಎಂದು ಭಾವಿಸಿ ತಮ್ಮ ಹಿರಿತನವನ್ನು ಮೆರೆಯುತ್ತಾರೆ.

ಈ 80ರ ವಯಸ್ಸಿನಲ್ಲಿಯೂ ಅವರ ಉತ್ಸಾಹ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ತಾವು ನೆಟ್ಟ ಸಾಲು ಸಾಲಾಗಿರೋ ಮರಗಳನ್ನೇ ತನ್ನ ಜೀವನಾಡಿ ಎಂಬಂತೆ ಪ್ರೀತಿ ಮಾಡುವ, ಮರಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೂ ಕೊಡಲು ಸಿದ್ದವಿರುವ, ಇಂದಿಗೂ ಸಹಾ ಎಲ್ಲೇ ಆಗಲೀ, ಯಾರೇ ಆಗಲೀ ಸಸಿ ನೆಡುವ ಕಾರ್ಯಕ್ರಮಕ್ಕೆ ಕರೆದಲ್ಲಿ ಉತ್ಸಾಹದಿಂದ ಬರುವ, ಅಮೆರಿಕಾದ ಸಂಯುಕ್ತ ಸಂಸ್ಥಾನದ ನಾಲ್ಕು ವಿ.ವಿಗಳಲ್ಲಿ ಅವರ ಹೆಸರಿನ ಪರಿಸರ ಅಧ್ಯಯನಗಳಿರುವ ತಮ್ಮ ಸಮಾಜ ಸೇವೆ ಮತ್ತು ಪರಿಸರದ ಕಾಳಜಿಯಿಂದಾಗಿ ಕರ್ನಾಟಕದ ಹೆಸರನ್ನು ವಿಶ್ವವಿಖ್ಯಾತಿ ಮಾಡಿರುವ ಡಾ. ಸಾಲುಮರ ತಿಮ್ಮಕ್ಕನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s