ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ

ಪಾಂಡವರ ತಾಯಿ ಕುಂತೀ ಮದುವೆಗೆ ಮುಂಚೆ, ಅವರ ತಂದೆಯ ಮನೆಯಲ್ಲಿದ್ದಾಗ ದೂರ್ವಾಸಮುನಿಗಳು ಬಂದಿದ್ದಾಗ ಅವರ ಆರೈಕೆಗಳಿಂದ ಸಂತೃಪ್ತರಾಗಿ ದೂರಲೋಚನೆಯಿಂದ ಮಕ್ಕಳಾಗುವ ಐದು ವರಗಳನ್ನು ಕೊಟ್ಟಾಗ, ಬಾಲಕಿ ಕುಂತೀದೇವಿ ಆ ವರಗಳನ್ನು ಪರೀಕ್ಷಿಸಿ ಸೂರ್ಯದೇವನ ವರದಿಂದ ಕರ್ಣನ ಜನವಾದಾಗ, ಮದುವೆಗೆ ಮುಂಚೆಯೇ ಮಗುವೇ ಎಂದು ಸಮಾಜಕ್ಕೆ ಅಂಜಿ ಆ ಮಗುವನ್ನು ಒಂದು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿ ಬಿಟ್ಟು ನಂತರ ಆ ಮಗು ಅಗಸರಿಗೆ ಸಿಕ್ಕಿ ಬೆಳೆದು ದೊಡ್ಡವನಾದ ಕಥೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯೊಬ್ಬಳು ಅದಾವುದೋ ಕಾರಣಕ್ಕೆ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗುತ್ತಾಳೆ. ಎರಡು ಮೂರು ದಿನಗಳಾದರೂ ಆ ತಾಯಿಯ ಪತ್ತೆಯಾಗದೇ, ತಾಯಿಯಿದ್ದರೂ ಅನಾಥವಾದ ಆ ಪುಟ್ಟ ಕಂದ ಅನಾಥಾಶ್ರಮದಲ್ಲಿ ಬೆಳೆದು ದೊಡ್ಡವನಾಗಿ, ತಾನು ಬೆಳೆದ ಆನಾಥಾಶ್ರಮದ ನೂರಾರು ವೃದ್ಧರಿಗೆ ಊರುಗೋಲಾಗಿ, ಮಕ್ಕಳೇ ಇಲ್ಲದ ಅದೆಷ್ಟೋ ತಾಯಂದಿರಿಗೆ ಮಗುವಾಗಿ, ಅನಾಥ ಹೆಣ್ಣುಮಗಳ ಬಾಳಸಂಗಾತಿಯಾಗಿ, ಎಲೆಮರೆಕಾಯಿಯಾಗಿ ಈ ಸಮಾಜ ಸೇವೆಗಾಗಿಯೇ ತನ್ನ ಜೀವನವನ್ನು ಮುಡುಪಾಗಿಟ್ಟಿರುವ, ಮಹಾಭಾರತದ ಕರ್ಣನ ಗುರುಗಳ ಹೆಸರನ್ನೇ ಹೊಂದಿರುವ ಪರುಶುರಾಮರೇ ನಮ್ಮ ಈ ದಿನದ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರು.

ಯಾರದ್ದೋ ತಪ್ಪಿನಿಂದಾಗಿಯೋ ಯಾರದ್ದೋ ಕೆಲಕ್ಷಣದ ತೆವಲಿಗೆ ಹುಟ್ಟಿ ಸಮಾಜಕ್ಕೆ ಹೆದರಿ ಅನಾಥವಾದ ಮಕ್ಕಳಿಗೆ ಸರಿಯಾದ ಪೋಷಣೆ ದೊರಕದೇ, ಮುಂದೆ ಸಮಾಜಕ್ಕೆ ಕಂಟಕಪ್ರಾಯವಾದ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇರುವಾಗ, ಆ ಪುಟ್ಟ ಕಂದನ ಅದೃಷ್ಟವೋ ಎನ್ನುವಂತೆ, ಆಸ್ಪತ್ರೆಯ ಆಡಳಿತವರ್ಗ ಆ ಗಂಡು ಮಗುವಿನ ಜೊತೆ ಮತ್ತರೆಡು ಹೆಣ್ಣು ಮಕ್ಕಳೊಂದಿಗೆ, ದಕ್ಷಿಣ ಕರ್ನಾಟಕದ ವಿಟ್ಲ ಸಮೀಪದ ಕನ್ಯಾನ ಭಾರತ ಸೇವಾಶ್ರಮದ ಮಡಿಲಿಗೆ ಸೇರಿಸುತ್ತಾರೆ.

ಅಖಂಡ ಭಾರತದ ಭಾಗವಾಗಿದ್ದ ಮತ್ತು ಈಗಿನ ಬಾಂಗ್ಲಾ ದೇಶದ ಢಾಕಾದ ನಾರಾಯಣಗಂಜ್ ಮೂಲದವರಾದ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯರು ಭಾರತ- ಬಾಂಗ್ಲಾ ವಿಭಜನೆಯ ನಂತರ ತಮ್ಮ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಎಂದು ಸುತ್ತಾಡಿ, ಅಶಿಸ್ತು ಅನ್ಯಾಯವನ್ನು ಸಹಿಸದೇ ಅನೇಕ ಕೆಲಸಗಳನ್ನು ಬಿಟ್ಟು ಕಡೆಗೊಮ್ಮೆ ಕೆಲಸದ ಮೇಲೆ ಕನ್ಯಾನಕ್ಕೆ ಬಂದು ಅದು ತಮ್ಮ ಹುಟ್ಟೂರನ್ನೇ ಹೋಲುತ್ತಿದ್ದ ಕಾರಣ, ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಅದೇ ಸಂದರ್ಭದಲ್ಲಿ ಕೆಲಸದ ನಿಮಿತ್ತ ಔರಂಗಾಬಾದ್ ಗೆ ಹೋಗಿದ್ದಾಗ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾಧುವೊಬ್ಬರು ದೀನರ ಸೇವೆ ಮಾಡುವಂತೆ ಪ್ರೇರೇಪಿಸಿದರಂತೆ. ಅವರ ಆಸೆಯೂ ಅದೇ ಆಗಿದ್ದರಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ತಮ್ಮ ಸಂಸಾರದೊಂದಿಗೆ ಒಂದು ಸಣ್ಣ ಗುಡಿಸಲಿನಲ್ಲಿ ಇಬ್ಬರು ಅನಾಥ ಮಕ್ಕಳೊಂದಿಗೆ ಸಮಾಜದಲ್ಲಿನ ದುರ್ಬಲರಿಗೆ, ಅಸಹಾಯಕರಿಗೆ ನೆರವಾಗುವ ಉನ್ನತ ಧ್ಯೇಯವನ್ನಿಟ್ಟುಕೊಂಡು ಸೇವೆಗೈಯಲು ನಿರ್ಧರಿಸಿ ನಿರಾಶ್ರಿತ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 1964 ರಲ್ಲಿ ಸಣ್ಣದಾಗಿ ಭಾರತ ಸೇವಾಶ್ರಮ ಎಂಬ ಹೆಸರಿನಲ್ಲಿ ಆಶ್ರಮವನ್ನು ಕಟ್ಟಿದರು ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯರು.

ಅಂತಹ ಧೀಮಂತ ಧೀರೇಂದ್ರನಾಧರ ಆಶ್ರಮದ ಆಶ್ರಯಕ್ಕೆ ಬಂದ ಆ ಪುಟ್ಟ ಮಗು ಆಶ್ರಮದಲ್ಲಿರುವ ವೃದ್ಧರ ಪಾಲಿಗೆ ಸಂಭ್ರಮ ಮತ್ತು ಖುಷಿ ತಂದು ಕೊಟ್ಟಿದ್ದಲ್ಲದೇ, ತನ್ನ ಹೆತ್ತ ತಾಯಿ ಬಿಟ್ಟು ಹೋದರೇನಂತೇ, ಆಶ್ರಮದಲ್ಲಿರುವ ಹತ್ತಾರು ತಾಯಿಯರು ಆ ಮುದ್ದಿನ ಕಂದನಿಗೆ ಪರಶುರಾಮ ಎಂದು ನಾಮಕರಣ ಮಾಡುತ್ತಾರೆ. ಎಲ್ಲರ ಅಕ್ಕರೆಯಿಂದ, ನೋಡ ನೋಡುತ್ತಿದ್ದಂತೆಯೇ, ಪರಶುರಾಮ ಬೆಳೆದು ದೊಡ್ಡವನಾಗಿ ಕನ್ಯಾನದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸುತ್ತಾನೆ.

ಓದಿನಲ್ಲಿ ಚುರುಕಾಗಿದ್ದ ಪರುಶುರಾಮ, ಶಾಲೆಯಿಂದ ಬಂದೊಡನೇ, ಆಶ್ರಮದಲ್ಲಿದ್ದ ಸುಮಾರು 150 ಗೋವುಗಳ ಗೋಶಾಲೆಯ ಸ್ವಚ್ಚೀಕರಣವಲ್ಲದೇ, ಆಶ್ರಮವನ್ನು ಗುಡಿಸಿ ಒರೆಸುವುದು, ಅಡುಗೆಗೆ ಸಹಾಯ ಮಾಡುವುದು, ಅಶಕ್ತ ವೃದ್ಧರಿಗೆ ಸ್ನಾನ ಮಾಡಿಸುವುದು, ಅವರ ಬಟ್ಟೆ ಸ್ವಚ್ಛಗೊಳಿಸುವುದಲ್ಲದೇ,ಆಶ್ರಮದ ಹೂ ತೋಟವನ್ನು ನೋಡಿಕೊಳ್ಳುವುದು ಹೀಗೆ ಆಶ್ರಮದ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಧೀರೇಂದ್ರ ಭಟ್ಟಾಚಾರ್ಯರ ಪ್ರೀತಿಯ ಶಿಷ್ಯನಾಗಿ ತಾನೊಬ್ಬ ಅನಾಥ ಮಗು ಎಂಬ ಪರಿವೇ ಇಲ್ಲದೇ, ಆಶ್ರಮದ ಹತ್ತಾರು ತಾಯಿಗಳು, ನೂರಾರು ಪಾಲಕರ ಆಶ್ರಯದಲ್ಲಿ ಅತ್ಯಂತ ಸಂಸ್ಕಾರವಂತನಾಗಿ ಆಶ್ರಮದ ಮಗನಾಗಿಯೇ ಬೆಳೆಯುತ್ತಾನೆ.

ಜಾತಸ್ಯ ಮರಣಂ ಧೃವಂ, ಅಂದರೆ ಹುಟ್ಟಿದವರು ಸಾಯಲೇ ಬೇಕೆಂಬ ಜಗದ ನಿಯಮದಂತೆ ಆಶ್ರಮದ ಸಂಸ್ಥಾಪಕರೂ ಮತ್ತು ಆಶ್ರಮದ ಬೆನ್ನೆಲುಬಾಗಿದ್ದ, ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯರು, ವಯೋಸಹಜ ಅನಾರೋಗ್ಯದಿಂದ ದೈವಾದೀನರಾಗಿ, ಇಡೀ ಆಶ್ರಮಕ್ಕೆ ಆಶ್ರಮವೇ ಶೋಕಾಚಾರಣೆಯಲ್ಲಿ ಮುಳುಗಿದ್ದಾಗ, ಧೀರೆಂದ್ರರ ಅಳಿಯ ಶ್ರೀ ಈಶ್ವರ ಭಟ್ ಅವರು ಆಶ್ರಮದ ಜವಾಬ್ಧಾರಿ ಹೊತ್ತುಕೊಳ್ಳುತ್ತಾರೆ. ಆ ಸಮಯದಲ್ಲಿ ಹತ್ತನೇ ತರಗತಿ ಮುಗಿಸಿದ್ದ ಪರಶುರಾಮ, ನಂತರ, ಉತ್ತಮ ಶ್ರೇಣಿಯಲ್ಲಿ ದ್ವಿತೀಯ PUC ಯನ್ನೂ ಮುಗಿಸಿ, ಆಶ್ರಮದ ಪ್ರೋತ್ಸಾಹದೊಂದಿಗೆ ಪದವಿಯನ್ನೂ ಮುಗಿಸುತ್ತಾನೆ. ಎರಡು ದಿನದ ಪುಟ್ಟ ಕಂದನಾಗಿ ಆಶ್ರಮದ ಆಶ್ರಯಕ್ಕೆ ಬಂದು, ಈಗ ಸಕಲ ವಿದ್ಯಾಪಾರಂಗತನಾಗಿ ಚಿಗುರು ಮೀಸೆಯ ಯುವನಾಗಿದ್ದ ಪರುಶುರಾಮನಿಗೆ ಆಶ್ರಮದ ಮುಖ್ಯಸ್ಥರಾದ ಈಶ್ವರ ಭಟ್ ತಮ್ಮ ಪರಿಚಯಸ್ಥರ ಬಳಿ ಉದ್ಯೋಗ ಕೊಡಿಸಲು ಓಡಾಡುತ್ತಿದ್ದಾಗ, ಈ ಅನಾಥನಿಗೆ ಆಶ್ರಯ ನೀಡಿ ತನ್ನನ್ನು ಈ ರೀತಿಯ ಸಂಭಾವಿತನಾಗಿ ಬೆಳಸಿದ ಈ ಆಶ್ರಮದ ಸೇವೆಗೇ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಿರುವ ಕಾರಣ, ತಾನು ಹೊರಗೆಲ್ಲೂ ಉದ್ಯೋಗ ಮಾಡುವುದಿಲ್ಲ ಎಂದು ಧೃಢ ಸಂಕಲ್ಪ ಮಾಡುತ್ತಾನೆ.

ಆಶ್ರಮದಲ್ಲೇ ಬೆಳೆದು ಆಶ್ರಮದ ಎಲ್ಲಾ ಕೆಲಸ ಕಾರ್ಯಗಳ ಅರಿವಿದ್ದ ಪರುಶುರಾಮ, ಆಶ್ರಮ ನಡೆಸಲು ಮೂಲ ಸಂಪನ್ಮೂಲವನ್ನು ಸಂಗ್ರಹಿಸುವ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡು ಮಹರ್ಷಿ ಪರುಶುರಾಮರಂತೆಯೇ, ಕಾಲಿಗೆ ಚಕ್ರ ಕಟ್ಟಿಕೊಂಡು ವಾರದಲ್ಲಿ 4 ದಿನ, ಕಾಸರಗೋಡು, ವಿಟ್ಲ, ಪುತ್ತೂರು, ಕುಂಬ್ಳೆ, ಬಿಸಿರೋಡ್, ಮಂಗಳೂರು ಮುಂತಾದ ಕಡೆಗಳಲ್ಲಿ ಆಶ್ರಮದ ಬಗ್ಗೆ ಒಲವಿರುವ ಅಂಗಡಿ ಮುಗ್ಗಟ್ಟುಗಳು ಮತ್ತು ಮನೆಗಳಿಗೆ ಹೋಗಿ, ಆಶ್ರಮಕೋಸ್ಕರ ಹಣ ಮತ್ತು ದವಸ ದಾನ್ಯಗಳನ್ನು ಸಂಗ್ರಹಿಸುವ ಕೆಲಸದಲ್ಲಿ ನಿರತನಾಗಿದ್ದಾರೆ. ಆಶ್ರಮವನ್ನು ಸುಗಮವಾಗಿ ನಡೆಸಲು ಪ್ರತೀ ತಿಂಗಳು ಸುಮಾರು 3.50ಲಕ್ಷ ಹಣದ ಅವಶ್ಯಕತೆ ಇದ್ದು ಅದರಲ್ಲಿ 70 ಸಾವಿರ ಹಣ ಸರ್ಕಾರದ ಅನುದಾದದಿಂದ ಬಂದ್ರೆ, ಹಾಲು, ತುಪ್ಪ, ತೆಂಗಿನ ಕಾಯಿ ಮತ್ತು ಕೆಲ ತರಕಾರಿಗಳು ಆಶ್ರಮದಲ್ಲಿಯೇ ಬೆಳೆಯುವ ಕಾರಣ, ಉಳಿದ ಹಣವನ್ನು ಒಟ್ಟುಗೂಡಿಸುವಲ್ಲಿ ಪರಶುರಾಮ ಹರಸಾಹಸ ಪಡುತ್ತಿದ್ದಾರೆ.

ಆಶ್ರಮದಲ್ಲಿರುವ ವೃದ್ಧರ ಆರೋಗ್ಯ ಸರಿ ಇಲ್ಲದಿದ್ದಾಗ, ಪರುಶುರಾಮರೇ ಅವರೆಲ್ಲರೂ ತಮ್ಮ ಬಂಧುಗಳು ಎನ್ನುವ ಭಾವದಲ್ಲಿ ಆಸ್ಪತ್ರೆಗೆ ಸೇರಿಸಿ ಅವರ ಆರೈಕೆ ಮಾಡುತ್ತಾರೆ. ಅಕಸ್ಮಾತ್ ಆಶ್ರಮದಲ್ಲಿ ಯಾರಾದರೂ ಸತ್ತು ಹೋದರೇ, ಆ ವಿಷಯವನ್ನು ಅವರ ಸಂಬಂಧಿಕರಿಗೆ ತಿಳಿಸಿದರೂ, ಕೆಲವೊಮ್ಮೆ ಯಾರೂ ಅವರ ಸಂಸ್ಕಾರಕ್ಕೆ ಬಾರದಿದ್ದಾಗ, ಆ ಹೆಣಕ್ಕೆ ಹೆಗಲು ಕೊಟ್ಟು, ಅವರ ಚಿತೆಗೆ ಬೆಂಕಿಯನ್ನು ಕೊಡುವುದಲ್ಲದೇ, ದಕ್ಷಿಣ ಕಾಶಿ ಎಂದೂ ಹೆಸರಾಗಿರುವ ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ಅವರ ಸಂಪೂರ್ಣ ಅಪರಕ್ರಿಯೆಗಳ ಜವಾಬ್ಧಾರಿಯನ್ನು ಪರಶುರಾಮರೇ ವಹಿಸಿಕೊಳ್ಳುವ ಮೂಲಕ ಈಗಾಗಲೇ ಹತ್ತಾರು ವೃದ್ಧರಿಗೆ ಸದ್ಗತಿ ದೊರೆಕಿಸಿಕೊಟ್ಟಿದ್ದಾರೆ. ಹೆತ್ತ ತಾಯಿ ಮತ್ತು ಹುಟ್ಟಿಸಿದ ತಂದೆಗೇ ಬೇಡವಾಗಿ ಅನಾಥವಾಗಿದ್ದ ಈ ಪರಶುರಾಮ, ತಮ್ಮ ಹೆತ್ತ ಮಕ್ಕಳಿಗೆ ಬೇಡವಾದ ಅದೆಷ್ಟೋ ಹಿರಿಯರ ಅಂತ್ಯವಾದಾಗ, ಅವರನ್ನು ಅನಾಥ ಶವವನ್ನಾಗಿ ಮಾಡದೇ ಆವರ ಸಂಪೂರ್ಣ ಅಂತಿಮ ಕ್ರಿಯೆಗಳನ್ನು ವಿಧಿವತ್ತಾಗಿ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅಪರೂಪದ, ಅನನ್ಯವಾದ ಅನುಕರಣೀಯವಾದ ಕಾರ್ಯವೇ ಸದಿ.

ಕೆಲ ದಶಕಗಳ ಹಿಂದೆ, ಗಂಡನ ಮನೆಯವರ ಕಿರುಕುಳ ತಾಳದ ಹೆಣ್ಣುಮಗಳೊಬ್ಬರು, ತನ್ನ 5 ವರ್ಷ ಪ್ರಾಯದ ಹೆಣ್ಣು ಮಗು ಶೈಲಾಳೊಂದಿಗೆ ಸೇವಾಶ್ರಮದ ಆಶ್ರಯಕ್ಕೆ ಬಂದು ಸೇರಿಕೊಳ್ಳುತ್ತಾರೆ. ಆ ತಾಯಿ ಆಶ್ರಮದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡರೇ, ಆ ಹೆಣ್ಣು ಮಗು ಶೈಲಾ, ಪರಶುರಾಮನಂತೆಯೇ, ಅಶ್ರಮದ ಮನೆ ಮಗಳಂತೆ ಬೆಳೆದು, ಚೆನ್ನಾಗಿಯೇ ಓದಿ, ವಿಟ್ಟದಲ್ಲಿ ತನ್ನ ಪದವಿ ಶಿಕ್ಷಣವನ್ನು ಮುಗಿಸಿ ಆಕೆಯ ಮದುವೆ ಪ್ರಸ್ತಾಪ ಬಂದಾಗ, ಅಂಗೈಯಲ್ಲಿ ಬೆಣ್ಣೆ ಇಟ್ಟು ಕೊಂಡು ತುಪ್ಪಕ್ಕೆ ಏಕೆ ಹುಡುಕುವುದು? ಎಂದು ನಿರ್ಧರಿಸಿದ, ಆಶ್ರಮದ ಹಿರಿಯರಾದ ಈಶ್ವರ ಭಟ್ಟರು ಆಶ್ರಮಕ್ಕಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿರುವ ಆಶ್ರಮದ ಮನೆ ಮಗನಾದ ಪರಶುರಾಮನೊಂದಿಗೆ ಆಶ್ರಮದ ಮನೆ ಮಗಳು ಶೈಲರನ್ನು ಕಲ್ಯಾಣ ಮಾಡಲು ನಿರ್ಧರಿಸಿದಾಗ, ಹಿರಿಯರ ಮಾತಿಗೆ ಮರುಮಾತಿಲ್ಲದ ಗಂಡು ಮತ್ತು ಹೆಣ್ಣು ಒಪ್ಪಿಕೊಂಡ ಪರಿಣಾಮ. ಆಶ್ರಮದಲ್ಲಿಯೇ ಆಶ್ರಮ ನಿವಾಸಿಗಳ ಸಮ್ಮುಖದಲ್ಲಿ ಪರಶುರಾಮ ಹಾಗೂ ಶೈಲಾರ ಮದುವೆ ವಿಜೃಂಭಣೆಯಿಂದ ನಡೆದು, ದಂಪತಿಗಳಿಬ್ಬರೂ ಆಶ್ರಮದಲ್ಲಿಯೇ ಸಂಸಾರ ನಡೆಸುತ್ತಿದ್ದಾರೆ.

ಪ್ರಸ್ತುತವಾಗಿ ಆಶ್ರಮದಲ್ಲಿ ಸುಮಾರು 152 ಜನ ವೃದ್ಧರ ಜೊತೆಗೆ, 24 ಶಾಲಾ ಹುಡುಗರು, 22 ಜನ ಶಾಲಾ ಹುಡುಗಿಯರು, 40 ಮಂದಿ ಅಬಲೆಯರು, 4 ಮಂದಿ ಅಂಗವಿಕರು ಮತ್ತು 4 ಮಂದಿ ಕಾರ್ಯಕರ್ತೆಯರು ಆಶ್ರಯ ಪಡೆದಿದ್ದಾರೆ. ಇದಲ್ಲದೇ ಸುಮಾರು 160 ಹಸುಕರುಗಳಿರುವ ಗೋಶಾಲೆಯೂ ಇದ್ದು, ಅದರಲ್ಲಿ ಸದ್ಯಕ್ಕೆ 28 ಹಸುಗಳು ಹಾಲು ಕೊಡುತ್ತಿದ್ದು, ಅವುಗಳ ಹಾಲನ್ನು ಆಶ್ರಮಕ್ಕೆ ಬಳೆಸಿಕೊಳ್ಳುತ್ತಿರುವುದಲ್ಲದೇ, ಹೆಚ್ಚಾದ ಹಾಲು ಮತ್ತು ತುಪ್ಪವನ್ನು ಹೊರಗಿನವರಿಗೆ ಮಾರಾಟ ಮಾಡಲಾಗುತ್ತಿದೆ. ಆ ಗೋಶಾಲೆಯಲ್ಲಿ ವಯಸ್ಸಾದ ಮತ್ತು ಕಟುಕರ ಕೈಯಿಂದ ಬಿಡಿಸಿ ತಂದ ಗೋವುಗಳ ಸಂಖ್ಯೆಯೇ ಹೆಚ್ಚಾಗಿರುವುದು ಗಮನಾರ್ಹವಾದ ವಿಷಯವಾಗಿದೆ.

ಆಶ್ರಮದಲ್ಲಿ ಬೆಳೆದ ಸುಮಾರು 24 ಹೆಣ್ಣು ಮಕ್ಕಳಿಗೆ ಆಶ್ರಮದವತಿಯಿಂದಲೇ ಸೂಕ್ತವಾದ ವರನನ್ನು ಹುಡುಕಿ ಆಶ್ರಮದಲ್ಲೇ ಮದುವೆ ಮಾಡಿಕೊಟ್ಟಿರುವುದಲ್ಲದೇ, ಅವರುಗಳಲ್ಲಿ ಸುಮಾರು ಹೆಣ್ಣುಮಕ್ಕಳಿಗೆ ತವರು ಮನೆಯವರಂತೆಯೇ, ಹೆರಿಗೆ ಮತ್ತು ಬಾಣಂತನವನ್ನೂ ಅಲ್ಲಿರುವ ಅನುಭವಿ ವೃದ್ದೆಯರ ಸಹಕಾರದಿಂದ ಮಾಡಿ ಕಳಿಸಿರುವುದು ಶ್ಲಾಘನೀಯವೇ ಸರಿ.

ಆಶ್ರಮದಲ್ಲಿ ಆರೋಗ್ಯವಂತ ಸದಸ್ಯರುಗಳು ಬಿಡುವಿನ ಸಮಯದಲ್ಲಿ, ಊದುಕಡ್ಡಿ, ದೇವರ ದೀಪದ ಬತ್ತಿ, ಕೈಯಲ್ಲಿ ಮಾಡಿದ ಗ್ರೀಟಿಂಗ್ಸ್ ಮತ್ತು ಇತರೇ ಕರಕುಶಲ ವಸ್ತುಗಳು ತಯಾರಿಸಿ ಅದನ್ನು ಹೊರಗೆ ಮಾರಾಟ ಮಾಡುವ ಮೂಲಕ ಆಶ್ರಮದ ನಿರ್ವಹಣೆಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಅಟ್ಟ ಹತ್ತಿದ ಮೇಲೆ ಏಣಿಯ ಹಂಗೇಕೆ? ಎನ್ನುವಂತೆ, ಊರವರ ಉಸಾಬರಿ ನಮಗೇಕೆ? ನಾವೇಕೆ ಸಮಾಜ ಸೇವೆ ಮಾಡಬೇಕು? ಎಂದು WhtsApp, FaceBook, Instagram ಎಂದು ಸಾಮಾಜಿಕ ಜಾಲತಾಣಗಳಲ್ಲಿಯೇ ತಮ್ಮ ಜೀವನದ ಬಹುಪಾಲು ಸಮಯವನ್ನು ಪೋಲು ಮಾಡುವವರೇ ಹೆಚ್ಚಾಗಿರುವಾಗ. ಸುಮಾರು ಮೂವತ್ನಾಲ್ಕು ವರ್ಷದ ಹಿಂದೆ ಅನಾಥ ಮಗುವಾಗಿ ಆಶ್ರಮಕ್ಕೆ ಸೇರಿ, ಬೆಳೆದು, ಓದಿ, ಸುಸಂಸ್ಕೃತನಾಗಿ, ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ತನಗೆ ಆಶ್ರಯ ನೀಡಿದ ಆಶ್ರಮಕ್ಕೇ ತನ್ನ ಜೀವನವನ್ನು ಮುಡುಪಾಗಿಟ್ಟಿದ್ದಲ್ಲದೇ, ತನ್ನಂತೆಯೇ, ಅದೇ ಆಶ್ರಮದಲ್ಲಿ ಬೆಳೆದ ಹುಡುಗಿಗೊಂದು ಚೆಂದ ಜೀವನ ಕೊಟ್ಟಿದ್ದಲ್ಲದೇ, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಆಶ್ರಮದ ಸುಮಾರು ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ಹಾಕಿಕೊಂಡು ಯಶಸ್ವಿಯಾಗಿ ಆಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ, ಹೆತ್ತ ತಾಯಿ ತಂದೆಯ ಪ್ರೀತಿಯ ಹೊರತಾಗಿಯೂ ಆಶ್ರಯ ನೀಡಿದ ಹತ್ತಾರು ತಂದೆ-ತಾಯಿಯ ಪ್ರೀತಿಗಳಿಸಬಹುದು ಮತ್ತು ಅವರ ಸೇವೆಗೇ ಕಟಿ ಬದ್ಧರಾಗಿರುವ ಪರುಶುರಾಮರೇ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎಂದರೆ ಅಪ್ಯಾಯಮಾನ ಎನಿಸುತ್ತದೆ.

ಕನ್ಯಾನ ಭಾರತ ಸೇವಾಶ್ರಮಕ್ಕೆ ಸಹಾಯಹಸ್ತವನ್ನು ಚಾಚಲು ಬಯಸುವವರು, 9901867611 ನಂಬರ್ ಮುಖಾಂತರ ಪರಶುರಾಮರನ್ನು ಸಂಪರ್ಕಿಸಬಹುದಾಗಿದೆ. ಯಾವುದಾರರೂ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಮತ್ತೊಬ್ಬರ ಜೀವನದಲ್ಲಿ ಸಂತೋಷವನ್ನು ತರುವುದರಲ್ಲಿರುವ ಸುಖ ಬೇರಾವುದರಲ್ಲೂ ಇಲ್ಲ ಅಲ್ಲವೇ?

ಏನಂತೀರೀ?

ಸಚಿನ್ ಜೈನ್ ಹಳೆಯೂರರು ಅವರ ಮುಖಪುಟದ ಲೇಖನವೇ ಈ ನನ್ನ ಬರಹಕ್ಕೆ ಸ್ಪೂರ್ತಿಯಾಗಿರುವ ಕಾರಣ, ಸಚಿನ್ ಜೈನ್ ಆವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

One thought on “ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ

  1. Dear Sri. Srikhant Balagangi sir, thamma
    Lekhana odi bahala Basaraju ondu kade innodukade santhosh Hindinakaladalli
    Yalla Brahmana kutumba badathanadalle beladu badiddu idakke karana ondu dozen Makkalu hutisutiddu berry enu adaya iralilla
    Thamma Javan’s bahala sogasagi vivarisiruvudakke thamage dhanyavadagalu 🙏

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s