ಅದು ಎಪ್ಪತ್ತರ ದಶಕ. ಬಳ್ಳಾರಿಯ ಸಂಪ್ರದಾಯಸ್ಥ ಮನೆತನದ ಚಿಗುರು ಮೀಸೆಯ ಚುರುಕು ಹುಡುಗನೊಬ್ಬ ಸಹವಾಸ ದೋಷದಿಂದ ಹಳಿಬಿಟ್ಟು ಶಾಲೆಗೆ ಸರಿಯಾಗಿ ಹೋಗದೇ ಪೋಲಿಯಾಗಿ ಅಲೆಯುತ್ತಿದ್ದಾಗ ಮತ್ತೆ ಅಮ್ಮನ ಪ್ರೋತ್ಸಾಹದ ಮೇರೆಗೆ ಅಮ್ಮಾ ಮಗ ಒಟ್ಟೊಟ್ಟಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಅಮ್ಮಾ ತೇರ್ಗಡೆಯಾದರೆ, ಮಗ ನಪಾಸ್. ಮತ್ತೆ ಛಲ ಬಿಡದ ತ್ರಿವಿಕ್ರಮನಂತೆ, ಪುನಃ ಪರೀಕ್ಷೇ ಬರೆದು ತೇರ್ಗಡೆ ಹೊಂದಿ, ತನ್ನೂರಿನಲ್ಲೇ ಪದವಿ ಪಡೆದು ನಂತರ ದೂರದ ಧಾರವಾಡದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರೆಗೂ ಹಿಂದಿರುಗಿ ನೋಡಲೇ ಇಲ್ಲ. ನಂತರ ಹೈಸ್ಕೂಲ್ ಶಿಕ್ಷಕ, ಹೋಟೆಲ್ ಮಾಣಿ, ರೂಂ ಬಾಯ್, ರಿಸೆಪ್ಷನಿಸ್ಟ್, ದಿನಪತ್ರಿಕೆಯನ್ನು ಮನೆ ಮನೆಗೆ ಹಾಕಿದ್ದು, ಕೆಲ ಕಾಲ ಹೈನುಗಾರಿಕೆ. ಮಧ್ಯೆ ಮಧ್ಯೆ, ಲಾಲ್ ಝಂಡ ಹಿಡಿದು ಎಡಪಂಥೀಯರ ಜೊತೆ ಸಾಲು ಸಾಲು ಪ್ರತಿಭಟನೆಗಳ ಸಾರಥ್ಯ,
ಸಣ್ಣದಾಗಿ ಸ್ಥಳೀಯ ಪತ್ರಿಕೆ ಆರಂಭಿಸಿದ್ದಲ್ಲದೇ, ತಮ್ಮ ಹೋರಾಟ ಮತ್ತು ಪತ್ರಿಕೋದ್ಯಮಕ್ಕೆ ಅನುಕೂಲವಾಗಲಿ ಎಂದು ಪ್ರಿಂಟಿಂಗ್ ಪ್ರೆಸ್ ಆರಂಭಿಸಿ ಕೈ ಸುಟ್ಟಿಕೊಂಡು, ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸದ ಜೊತೆ ಜೊತೆಗೆ ರಾಜ್ಯದ ಹಲವಾರು ಪತ್ರಿಕೆಗಳಿಗೆ ವರದಿಗಾರ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಇಂದಿನ ನಮ್ಮ ಕನ್ನಡದ ಕಲಿಗಗಳು ಕಥಾ ನಾಯಕ ಮಾಡದ ಕೆಲಸವಿಲ್ಲ ಎಂದರೂ ತಪ್ಪಾಗದು. ಬಹುಶಃ ಇಷ್ಟೆಲ್ಲಾ ಪೀಠಿಕೆ ನೋಡಿದ ಮೇಲೆ ನಿಮ್ಮ ಉಹೆ ಸರಿ. ನಾವಿಂದು ಹೇಳ ಹೊರಟಿರುವುದು ನೆನ್ನೆ ತಡರಾತ್ರಿ ನಿಧನರಾದ ಅಕ್ಷರಗಳ ಬ್ರಹ್ಮ ರಾಕ್ಷಸ ರವೀ ಬೆಳಗರೆಯವರ ಬಗ್ಗೆ.
ನಿಜ ಹೇಳಬೇಕೆಂದರೆ, ಈ ವರ್ಷದ ಕನ್ನಡದ ಕಲಿಗಳು ಮಾಲಿಕೆ ಪಟ್ಟಿಯಲ್ಲಿ ರವಿಯವರ ಹೆಸರೇ ಇರಲಿಲ್ಲ ಮತ್ತು ಅವರ ಕುರಿತಾದ ಶ್ರದ್ಧಾಂಜಲಿ ರೂಪದ ಇಂತಹ ಲೇಖನ ಇಷ್ಟು ಬೇಗ ಬರೆಯುತ್ತೇನೆ ಎಂದೂ ನಿರೀಕ್ಷಿಸಲಿರಲಿಲ್ಲ. ಈಗಾಗಲೇ ರವಿ ಬೆಳಗೆರೆಯವರ ಕುರಿತಂತೆ ಅವರೇ ತಮ್ಮ ಖಾಸ್ ಬಾತ್ ನಲ್ಲಿ ಹೇಳಿಕೊಂಡಿದ್ದಾರೆ ಮತ್ತು ಅನೇಕರು ಬರೆದಿರುವಾಗ ಇನ್ನೇನು ಬರೆಯಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡುವುದು ಸಹಜ. ನಾನಿಂದು ಹೇಳಹೊರಟಿರುವುದು ನಾ ಕಂಡಂತೆ ರವೀ ಬೆಳಗೆರೆ ಮತ್ತು ನಮ್ಮಂತಹ ಯುವಕರ ಮೇಲೆ ರವೀ ಬೆಳಗೆರೆಯವರ ಪ್ರಭಾವದ ಕುರಿತಾಗಿದೆ.
ರವೀ ಬೆಳಗರೆಯವರ ಜೀವನವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.
ಹುಟ್ಟಿದಾರಿಂದಲೂ ಬಳ್ಳಾರಿ ಬಿಟ್ಟು ಬೆಂಗಳುರಿಗೆ ಸೇರಿದ್ದ ಮೊದಲನೇ ಭಾಗವನ್ನು ಸಂಕ್ಷಿಪ್ತವಾಗಿ ಮೇಲೆ ತಿಳಿಸಿದ್ದೇನೆ. ಇನ್ನು ಬೆಂಗಳೂರಿಗೆ ಬಂದ ಮೊದಲ ಹತ್ತು ಹದಿನೈದು ವರ್ಷಗಳು ಉತ್ತುಂಗದಲ್ಲಿದ್ದ ಕಾಲ ಅವರ ಜೀವನದ ಎರಡನೇ ಭಾಗ. ರವೀ ಅವರ ಎರಡನೇ ಭಾಗ ಇಂದಿನ ಯುವ ಜನತೆಗೆ ಬಹಳ ಆದರ್ಶಮಯ ಮತ್ತು ಬಹಳಷ್ಟು ಕಲಿಯಬಹುದಾಗಿದೆ. ಒಬ್ಬ ಮನುಷ್ಯ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡು ನನ್ನ ಕೈಯ್ಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಸಾವೇ ನನ್ನ ಅಂತಿಮ ತೀರ್ಮಾನ ಎನ್ನುವವರು ಬಳ್ಳಾರಿಯಲ್ಲಿ ಪಡಬಾರದ ಕಷ್ಟ ನಷ್ಟಗಳು ಮತ್ತು ಅವಮಾನಗಳನ್ನು ಎದುರಿಸಿ ಒಂದು ರೀತಿಯಲ್ಲಿ ಸ್ವತಃ ಗಡಿಪಾರು ಮಾಡಿಕೊಂಡು ಕೇವಲ ಮುನ್ನೂರು ಚಿಲ್ಲರೇ ರೂಪಾಯಿಗಳನ್ನು ಕೈಯ್ಯಲ್ಲಿ ಇಟ್ಟುಕೊಂಡು, ಬೆಂಗಳೂರಿಗೆ ಬಂದು ಮೆಜೆಸ್ಟಿಕ್ ಬಸ್ ನಿಲ್ದಾಣದ ತಂಗುದಾಣದಲ್ಲಿ ಮಲಗಿ, ಸುಲಭ್ ಶೌಚಾಲಯದಲ್ಲಿ ನಿತ್ಯಕರ್ಮಗಳನ್ನು ಮುಗಿಸಿ, ರಸ್ತೆ ಬದಿಯಲ್ಲಿ ಆಹಾರ ಸೇವಿಸಿ, ನಾನಾ ಪತ್ರಿಕೆಗಳಲ್ಲಿ ಕೆಲಸ ಮಾಡಿ ನಂತರ ತನ್ನ ಬರಹದ ಶಕ್ತಿಯ ಮೇಲಿನ ಅಭೂತ ಪೂರ್ವ ನಂಬಿಕೆಯಿಂದ ಹಾಯ್ ಬೆಂಗಳೂರು ಎಂಬ ವಿಚಿತ್ರ ಕಪ್ಪು ಸುಂದರಿಯ ಪತ್ರಿಕೆ ಆರಂಭಿಸಿ ನೋಡ ನೋಡುತ್ತಿದ್ದಂತೆಯೇ ಜನರ ಅಭಿಮಾನದಿಂದ ಕೋಟ್ಯಾಂತರ ರೂಪಾಯಿಗಳ ಬಂಗಲೆಗಳು, ತಮ್ಮ ಭಾವನಾ ಪ್ರಕಾಶನದ ಮೂಲಕ ನೂರಾರು ಸ್ವರಚಿತ ಮತ್ತು ಅನುವಾದಿತ ಪುಸ್ತಕಗಳನ್ನು ಪ್ರಕಟಿಸಿ, ಲಕ್ಷಾಂತರ ರೂಪಾಯಿಗಳ ತೆರಿಗೆಯನ್ನು ಕಟ್ಟಿದ ಪರಿ ಎಂತಹವರಿಗೂ ಅಚ್ಚರಿಯನ್ನು ಮೂಡಿಸುತ್ತದೆ. ಅದ್ಭುತ ವಾಗ್ಝರಿ ಮತ್ತು ಧ್ವನಿಗಳ ಏರಿಳಿತದಿಂದ ಬಹುತೇಕ ಎಲ್ಲಾ ದೃಶ್ಯಮಾಧ್ಯಮಗಳಲ್ಲಿಯೂ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ಸೂಜಿಗಲ್ಲಿನಂತೆ ಸೆರೆಹಿಡಿದಿಡುವುದು ಎಲ್ಲರಿಗೂ ಸಿಧ್ಧಿಸುವುದಿಲ್ಲ. ವಿದ್ಯಾದಾನ ಮಹಾದಾನ ಎಂದೆಣೆಸಿ, ಡೊನೇಷನ್ ಇಲ್ಲದೇ ಅದ್ಭುತವಾದ ಮತ್ತು ವಿಶಾಲವಾದ ಪ್ರಾರ್ಥನಾ ಶಾಲೆಯನ್ನು ಕಟ್ಟುವ ಮೂಲಕ ತನ್ನ ಕೀರ್ತಿಯನ್ನು ಅಜರಾಮರವಾಗಿಸಿದ್ದು ಸುಲಭದ ಮಾತೇನಲ್ಲ.
ಇನ್ನು 2005ನೇ ಇಸವಿಯ ನಂತರ ಅದರಲ್ಲೂ ಹಾಯ್ ಬೆಂಗಳೂರ್ ಪತ್ರಿಕೆಯ ಜೊತೆ ಜೊತೆಯಲ್ಲಿಯೇ ತಮ್ಮ ಸಾರಥ್ಯದಲ್ಲಿ ಅಂದಿನ ಈ-ಟಿವಿ ಛಾನೆಲ್ಲಿಗೆ ನಡೆಸಿಕೊಡಲು ಆರಂಭಿಸಿದ ಕ್ರೈಮ್ ಡೈರಿ ಕಾರ್ಯಕ್ರಮದ ಅಭೂತಪೂರ್ವ ಯಸ್ಸಸ್ಸಿನ ನಂತರದಿಂದ ಹಿಡಿದು ಅವರ ನಿಧನರಾಗುವವರೆಗೂ ನಡೆಸಿದ ಅವರ ಜೀವನವನ್ನು ಮೂರನೇ ಕಾಲ ಘಟ್ಟವನ್ನಾಗಿ ಪರಿಗಣಿಸ ಬಹುದಾಗಿದೆ. ಒಬ್ಬ ಮನುಷ್ಯನಿಗೆ ಕೈಯಲ್ಲಿ ಯಥೇಚ್ಛವಾಗಿ ಹಣ ಮತ್ತು ಸಮಾಜದಲ್ಲಿ ಗತ್ತು ಗೈರತ್ತುಗಳು ಬಂದಾಗ ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎಂದು ತಿಳಿಯದಾದಾಗ ಅವನ ಬಂಧು-ಮಿತ್ರರುಗಳೇ ಶತ್ರುಗಳಾಗಿ ಅವರನ್ನು ಕಾಡುವ ಮೂಲಕ ಆತನ ಬದುಕನ್ನು ಹೇಗೆ ಹೈರಾಣಾಗಿ ಮಾಡಿ ಬಿಡುತ್ತಾರೆ ಎನ್ನುವುದಕ್ಕೆ ರವಿ ಬೆಳಗೆರೆಯವರ ಮೂರನೇ ಹಂತದ ಅವರ ಜೀವನವೇ ಜ್ವಲಂತ ಉದಾಹರಣೆ.
ಸಮಾಜದಲ್ಲಿ ಯಾವುದೇ ಕ್ರೈಂ ನಡೆದರೂ ಅದರ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಮೂಲಕ ಸಂತ್ರಸ್ಥರಿಗೆ ಪರಿಹಾರವನ್ನು ಕೊಡಿಸುವ ಜವಾಬ್ಧಾರಿ ಪೋಲೀಸರದ್ದಾಗಿರುತ್ತದೆ. ಪತ್ರಕರ್ತರು ಮತ್ತು ಮಾಧ್ಯಮದ ವರದಿಗಾರರು ಈ ಕುರಿತಂತೆ ತನಿಖಾ ವರದಿ ತಯಾರಿಸಿ ಜನರಲ್ಲಿ ಎಚ್ಚರಿಕೆ ಮೂಡಿಸ ಬಹುದೇ ಹೊರತು ತಾವೇ ಪೋಲೀಸರು ಮತ್ತು ನ್ಯಾಯಾಧೀಶರು ಎಂಬ ಭ್ರಮೆಯಿಂದ ಆ ಪ್ರಸಂಗಗಳನ್ನು ಕೈಗೆತ್ತಿಕೊಂಡು ತಪ್ಪಿತಸ್ಥರನ್ನು ಮತ್ತು ಸಂತ್ರಸ್ಥರನ್ನು ಹೆದರಿಸಿಯೋ ಬೆದರಿಸಿಯೋ ದುಡ್ಡು ಮಾಡಿಕೊಂಡು ಪ್ರಸಂಗಗಳನ್ನು ಅಲ್ಲಿಯೇ ಪರಿಹರಿಸುವ ಇಲ್ಲವೇ ಸಮಸ್ಯೆಗಳನ್ನು ಉಲ್ಬಣಿಸುವ ದೈನೇಸಿ ಸ್ಥಿತಿಗೆ ಬರಬಾರದು. ರವೀ ಬೆಳಗೆರೆಯವರ ಕ್ರೈಂ ಡೈರಿ ತಂಡದಲ್ಲಿ ಆದ ಸಮಸ್ಯೆಯೂ ಇದೆ. ಆರಂಭದಲ್ಲಿ ಎಲ್ಲವೂ ಸರಿ ದಿಕ್ಕಿನಲ್ಲಿ ಸಾಗುತ್ತಾ ಜನರಿಗೆ ಪ್ರತೀ ರಾತ್ರಿ ಮಲಗುವ ಮುನ್ನಾ ಒಂದು ಕ್ರೈ ಕಾರ್ಯಕ್ರಮಗಳನ್ನು ತೋರಿಸಿ ಅದು ನೋಡದೇ ನಿದ್ದೆಯೇ ಬಾರದೇನೋ ಎನ್ನುವಂತಹ ಸ್ಥಿತಿಯನ್ನು ತಂದಿದ್ದರು ಎಂದರೂ ಸುಳ್ಳಲ್ಲ. ಆದರೇ ದಿನೇ ದಿನೇ ಕಾರ್ಯಕ್ರಮದ ಜನಪ್ರಿಯತೆ ತುತ್ತ ತುದಿಯನ್ನು ತಲುಪುತ್ತಿದೆ ಎನ್ನುವ ಸಂದರ್ಭದಲ್ಲಿ ರವೀ ಬೆಳಗೆರೆಯವರ ಆಣತಿಯ ಮೇರೆಗೋ ಇಲ್ಲವೇ ಅವರದ್ದೇ ತಂಡದವರ ಸ್ವಾರ್ಥಕ್ಕಾಗಿಯೋ ಜನರನ್ನು ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ವಂದಂತಿಗಳು ಜನರಿಂದ ಜನರಿಗೆ ತಲುಪತೊಡಗಿದಾಗ ವಾಹಿನಿಯವರೇ ಕ್ರೈಂ ಡೈರಿ ಕಾರ್ಯಕ್ರಮವನ್ನು ನಿಲ್ಲಿಸಿ ಹೆಚ್ಚಿನ ಸಮಸ್ಯೆಗಳಾಗಂತೆ ತಡೆದರೂ ಅಡಿಕೆ ಹೋದ ಮಾನ ಆನೇ ಕೊಟ್ಟರೂ ಬದುವುದಿಲ್ಲ ಎನ್ನುವಂತೆ ರವೀ ಬೆಳಗೆರೆಯವರ ಮೇಲಿನ ನಂಬಿಕೆ ಜನರಿಗೆ ಕಡಿಮೆಯಾಗುತ್ತಾ ಹೋದ್ದದ್ದು ಸುಳ್ಳಲ್ಲ.
ಜಟ್ಟಿ ಬಿದ್ದರೂ ಮಣ್ಣಾಗಲಿಲ್ಲ ಎನ್ನುವಂತೆ ಕ್ರೈಂ ಡೈರಿಯಲ್ಲಿ ಕಳೆದುಕೊಂಡ ಮಾನವನ್ನು ಪಡೆದುಕೊಳ್ಳಲು ಅದೇ ವಾಹಿನಿಗೆ ಅವರು ನಡೆಸಿ ಕೊಡಲಾರಂಭಿಸಿದ ಎಂದೂ ಮರೆಯದ ಹಾಡುಗಳು ಕನ್ನಡಿಗರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ದಿತು ಎಂದರೂ ತಪ್ಪಾಘಲಾರದು. ಕಾರ್ಯಕ್ರಮದ ಪ್ರತಿಯೊಂದು ಹಾಡಿನ ಹಿಂದಿರಬಹುದಾದ ರೋಚಕವಾದ ಸಂಗತಿಗಳು, ಆ ಹಾಡಿನಲ್ಲಿ ಭಾಗಿಗಳಾಗಿದ್ದ ಕಲಾವಿದರುಗಳ ವ್ಯಕ್ತಿ ಪರಿಚಯಗಳು, ಅವರ ಕುರಿತಾದ ಅದ್ಭುತ ವಿಷಯಗಳನ್ನು ತಮ್ಮದೇ ಹಾವ ಭಾವ ಮತ್ತು ಚಿತ್ರ ವಿಚಿತ್ರ ದಿರಿಸುಗಳನ್ನು ಧರಿಸಿಕೊಂಡು ಅವರು ಪ್ರಸ್ತುತ ಪಡಿಸಿದ ರೀತಿ ಜನರಿಗೆ ಮೆಚ್ಚಿಗೆಯಾಗಿತ್ತು. ಈ ಕಾರ್ಯಕ್ರಮ ನೂರಾರು ಉದಯೋನ್ಮುಖ ಸಂಗೀತ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸಿದ್ದಲ್ಲದೇ ಅವರನ್ನು ರಾತ್ರೋ ರಾತ್ರಿ ಜಗತ್ರಸಿದ್ಧರನ್ನಾಗಿ ಮಾಡಿಸಿತು.
ತಮ್ಮೆಲ್ಲಾ ಕೆಲಸ ಕಾರ್ಯಗಳ ಮಧ್ಯೆಯೂ ಕೆಲ ಕಾಲ ರೇಡಿಯೋ ಜಾಕಿಯಾಗಿ ಬೆಂಗಳೂರಿನ ಕೇಳುಗರ ಹೃನ್ಮನಗಳನ್ನು ತಣಿಸಿದ್ದ ರವೀ ಬೆಳಗೆರೆ, ತಂತ್ರಜ್ಞಾನ ಬದಲಾವಣೆ ಆಗುತ್ತಿದ್ದಂತೆಯೇ ಅದಕ್ಕೆ ತಮ್ಮನ್ನು ತಾವು ಅಳವಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಲ್ಲದೇ, ತಮ್ಮ ಬೆಳ್ ಬೆಳಗ್ಗೆ ಕಾಫೀ ವಿತ್ ರವೀ ಬೆಳಗೆರೆ ತಮ್ಮದೇ YouTube Chnnel ಮುಖಾಂತರ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರಲ್ಲದೇ, ಜನಪ್ರಿಯ Big Boss ಕಾರ್ಯಕ್ರಮದಲ್ಲಿ ಕೇವಲ ಎರಡೇ ವಾರ ಭಾಗವಹಿಸಿದರೂ, ಆ ವೇದಿಕೆಯನ್ನು ಸೂಕ್ತವಾಗಿ ಬಳೆಸಿಕೊಳ್ಳುವ ಮೂಲಕ ಅವರ ಇಮೇಜ್ ಬದಲಿಸಿಕೊಂಡಿದ್ದಲ್ಲದೇ, ಜನರಿಗೆ ಅವರ ಮೇಲೆ ಅನುಕಂಪ ಮತ್ತು ಮತ್ತೆ ಪ್ರೀತಿಸುವಂತೆ ಸೆಳೆದುಕೊಂಡಿದ್ದಂತೂ ಸುಳ್ಳಲ್ಲ.
ನಾವೆಲ್ಲ ಕಾಲೇಜ್ ಓದುತ್ತಿರುವಾಗಮಂಗಳವಾರ ಸಂಜೆ ಆಯಿತೆಂತರೆ, ರಸ್ತೆ ಬದಿಯ ಪೇಪರ್ ಮಾರುವ ಅಂಗಡಿ ಇಲ್ಲವೇ ಟೀ ಶಾಪ್ ಅಥವಾ ಪಾನ್ ಬೀಡಾ ಅಂಗಡಿಯಲ್ಲಿ ನೇತು ಹಾಕಿರುವ ಆವರ ಕಪ್ಪು ಸುಂದರಿಯನ್ನು ಹುಡುಕಿಕೊಂಡು ಹೋಗಿ ಕೊಂಡುಕೊಂಡು ಆ ವಾರದ ಪ್ರಸ್ತಕ ವಿಷಯದ ಕುರಿತಾದ ಅವರ ನಿರ್ಭಿಡೆಯ ಚುಟುಕು ಹೆಡ್ ಲೈನ್ಸ್ ಏನಿರಬಹುದು? ಎಂಬ ಕುತೂಹಲವನ್ನು ತಣಿಸಿಕೊಳ್ಳುವ ಮಜವನ್ನು ವರ್ಣಿಸುವುದಕ್ಕಿಂದ ಅನುಭವಿಸಿದವರಿಗೇ ಗೊತ್ತು ಅದರ ಪರಿ.
ವಾಜಪೇಯಿಯವರು ಒಂದು ಓಟಿನಿಂದ ಪ್ರಧಾನ ಮಂತ್ರಿ ಪಟ್ಟ ಕಳೆದುಕೊಂಡು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ದೇವೇಗೌಡರು ಪ್ರಧಾನ ಮಂತ್ರಿಗಳ ಪಟ್ಟಕ್ಕೇರಿದಾಗ, ಅವರ ಪತ್ರಿಕೆಯ ತಲೆ ಬರಹ, ಸಂಸಾರವೇ ಇಲ್ಲದ ವಾಜಪೇಯಿ ಅವರ ಜಾಗವನ್ನು , ಸಂಸ್ಕಾರವೇ ಇಲ್ಲದ ದೇವೆಗೌಡ ತುಂಬಬಲ್ಲರೇ? ಎಂಬುದು ಬಹಳ ಮಾರ್ಮಿಕವಾಗಿದ್ದು ಇಂದಿಗೂ ಬಹುತೇಕರ ಮನದಲ್ಲಿ ಹಚ್ಚಹಸಿರಾಗಿದೆ.
ಇನ್ನು ಅವರ ಖಾಸ್ ಬಾತ್ ಅಂಕಣದಲ್ಲಿ ಆವರ ಜೀವನದ ಕುರಿತಂತೆ ಪಾರದರ್ಶಕವಾಗಿ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದರೆ, ಅದನ್ನು ಓದುತ್ತಿದ್ದ ಓದುಗನಿಗೂ ಅದೂ ತನ್ನದೇ ಅನುಭವವೇನೋ ಎನ್ನಿಸುವ ಮಟ್ಟಿಗೆ ಭಾವಿಸುವಂತೆ ಬರೆಯುವ ಕಲೆ ಅವರಿಗೆ ದೈವದತ್ತವಾಗಿತ್ತು. ಪ್ರೌಢಾವಸ್ಥೆಯಲ್ಲಿಯೇ ಮೋಟು ಬೀಡಿ ಸೇದಲಾರಂಭಿಸಿದ್ದು, ಹುಡುಗಾಟಿಕೆಯ ವಯಸ್ಸಿನಲ್ಲಿಯೇ ದಾವಣಿ ಹುಡುಗಿಯ ಪ್ರೀತಿಯಿಂದ ವಂಚಿತನಾಗಿದ್ದು, ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಸಲುವಾಗಿ ಹಿಮಾಲಯಕ್ಕೆ ಕೆಲ ಕಾಲ ಹೋಗಿದ್ದು, ಹಣಕ್ಕಾಗಿ ಹೋಟೆಲ್ಲಿನಲ್ಲಿ ನಾನಾ ವಿಧದ ಕೆಲಸಗಳನ್ನು ಮಾಡಿದ್ದು, ತಮಗಿಂತಲೂ ಹಿರಿಯರಾದ ಲಲಿತಾರನ್ನು ಮದುವೆಯಾದದ್ದು ಹೀಗೆ ಈ ಎಲ್ಲಾ ಆನುಭವಗಳನ್ನೂ ಎಳೆ ಎಳೆಯಾಗಿ ರಸವತ್ತಾಗಿ ವಿವರಿಸುತ್ತಿದ್ದನ್ನು ಜನ ಆನಂದದಿಂದ ಆಹ್ಲಾದಿಸತೊಡಗಿದರು
ತಮ್ಮ ಜನಪ್ರಿಯ ಲೇಖನದ ಸರಣಿಯಾದ ಪಾಪಿಗಳ ಲೋಕದಲ್ಲಿ ಮುಖಾಂತರ ಬೆಂಗಳೂರಿನ ನಟೋರಿಯಸ್ ರೌಡಿಗಳಾದ, ಜಯರಾಜ್ ಶ್ರೀರಾಂ ಪುರ ಕಿಟ್ಟಿ, ಜೇಡರಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಬಚ್ಚನ್, ಅಗ್ನಿ ಶ್ರೀಧರ್, ಆಯಿಲ್ ಕುಮಾರ್, ಕೋಳೀ ಫಯಾಜ್ ಎಲ್ಲರಿಗೂ ಪರಿಚಯವಾಗಿ ಅವರ ಕುರಿತಂತೆ ಮನೆ ಮನೆಗಳಲ್ಲೂ ಮಾತಾನಾಡುವಂತೆ ಮಾಡಿದರು, ಇನ್ನು ಅವರ ಪರಿಚಯಿಸಿದ ಸರಣಿ ಹಂತಕ ರವೀಂದ್ರ ನಾಥ್ ಕುರಿತಾದ ಲೇಖನ ಇಂದಿಗೂ ಮೈಸೂರು, ಮಡಕೇರಿ ಮತ್ತು ಚಾರ್ಮುಡಿ ಘಾಟ್ ದಾಟುವಾಗ ನೆನೆಪಿನಲ್ಲಿ ಉಳಿಯುವಂತೆ ಮಾಡಿದರು.
ತಮ್ಮ ಅನುವಾದ ಲೇಖನಗಳ ಮುಖಾಂತರ ಉರ್ದು ಕವಿ ಮೀರ್ಜಾ ಘಾಲೀಬ್, ಹಿಂದಿ ಕವಿ ಸರ್ದಾರ್ ಖುಷ್ವಂತ್ ಸಿಂಗ್, ತೆಲುಗು ಕವಿ ಚಲಂ, ಕನ್ನಡಿಗರಾದ ಸತ್ಯಕಾಮ, ಬ್ರಿಗೇಡಿಯರ್ ಜಾನ್ ಪಿ ದಲವಿ ಇನ್ನೂ ಅನೇಕ ಲೇಖಕರನ್ನು ಕನ್ನಡಿಗರಿಗೆ ಹತ್ತಿರವಾಗುವಂತೆ ಮಾಡಿದ್ದಲ್ಲದೇ ಅವರ ಇತರೇ ಪುಸ್ತಕಗಳನ್ನು ಓದಲು ಪ್ರೇರೇಪಿಸಿದರೂ ಎಂದರೂ ತಪ್ಪಾಗಲಾರದು.
ಜನ ಮಾನಸದಲ್ಲಿ ಅವರ ಜನಪ್ರಿಯತೆ ಮತ್ತು ಆತ್ಮೀಯತೆ ಎಷ್ಟಿತ್ತೆಂದರೆ, ಎರಡು ದಶಕಗಳ ಹಿಂದೆ ಸಿರ್ಸಿಯಲ್ಲಿ ನನ್ನ ಗೆಳೆಯನ ಮದುವೆಗೆ ಹೋಗಿದ್ದಾಗ, ಈಗಿನಂತೆ ಇಲ್ಲಿಂದಲೇ ರಿಟರ್ನ್ ಟಿಕೆಟ್ ಬುಕ್ ಮಾಡುವ ಸೌಲಭ್ಯವಿರದೇ, ಅಲ್ಲಿಂದಲೇ ಹೋಗಿ ಬುಕ್ ಮಾಡ ಬೇಕಿತ್ತು. ಬೆಂಗಳೂರಿನಿಂದ ಸಿರ್ಸಿಗೆ ರಾತ್ರಿ ಪ್ರಯಾಣಿಸಿ ಬೆಳ್ಳಂಬೆಳಿಗ್ಗೆ ಸಿರ್ಸಿ ತಲುಪಿ ಅದೇ ರಾತ್ರಿಗೆ ಹಿಂತಿರುಗುವ ಟಿಕೆಟ್ ಬುಕ್ ಮಾಡಲು ವಿಚಾರಿಸಿದರೆ, ಬಸ್ ಭರ್ತಿಯಾಗಿದೆ ಟಿಕೆಟ್ ಇಲ್ಲಾ. ಸಂಜೆ ಏಳಕ್ಕೆ ಬನ್ನಿ ನೋಡೋಣ ಎಂದು ಹೇಳಿ ಸಾಗಿ ಹಾಕಿದ್ದರು. ಮದುವೆ ಎಲ್ಲವನ್ನೂ ಮುಗಿಸಿಕೊಂಡು ಸಂಜೆ ಸಮಯ ಕಳೆಯಲೆಂದು ಅಲ್ಲೇ ಹಾಯ್ ಬೆಂಗಳೂರು ಪತ್ರಿಕೆ ಕೊಂಡು ಕೊಂಡು ಬಸ್ ಬುಕ್ ಮಾಡಲು ಹೋದಾಗ, ಟಿಕೆಟ್ ಕೊಡುವವ ನನ್ನನ್ನು ನೋಡಿಯೂ ನೋಡದಂತೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದನ್ನು ನೋಡಿ, ಅವನ ಎದುರಿಗೇ ಇದ್ದ ಕುರ್ಚಿಯ ಮೇಲೆ ಕುಳಿತು ಹಾಯ್ ಬೆಂಗಳೂರ್ ಓದಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಆತ, ರವೀ ಬೆಳಗೆರೆ ಈ ವಾರ ಏನ್ ಬರ್ದಿದ್ದಾರೆ ಸಾರ್ ಎಂದು ನಿಧಾನವಾಗಿ ಮಾತನಾಡಲು ಆರಂಭಿಸಿದಾಗ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದು ಭಾವಿಸಿದ ನಾನು ಹಾಗೆಯೇ ರವೀ ಬೆಳಗೆರೆಯನ್ನು ವಾಚಾಮಗೋಚರವಾಗಿ ಹೊಗಳಲು ಆರಂಭಿಸಿದ್ದೇ ತಡ, ಬೆಳಿಗ್ಗೆ ಟಿಕೆಟ್ ಇಲ್ಲಾ ಎಂದಿದ್ದ ಅದೇ ವ್ಯಕ್ತಿ, ಹೆಚ್ಚಿನ ದರವಿಲ್ಲದೇ, ಮುಂದಿನ ಸಾಲಿನ ಸೀಟ್ ಕೊಡುವುದಕ್ಕೆ ಅವನ ರವೀ ಬೆಳಗೆರೆಯ ಅಭಿಮಾನವೇ ಕಾರಣವಾಗಿತ್ತು.
ಹಾಯ್ ಬೆಂಗಳೂರ್ ಮತ್ತು ಓ ಮನಸೇ ಪತ್ರಿಕೆಗಳಲ್ಲದೇ, ರವಿ ಬೆಳಗೆರೆ ಅವರ ಸಾರಥ್ಯದಲ್ಲಿ ಅವರ ಭಾವನ ಪ್ರಕಾಶನದ ಮುಖಾಂತರ ಹೊರಬಂದ ಸುಮಾರು 70ಕ್ಕೂ ಅಧಿಕ ಪುಸ್ತಕಗಳು ನಿಜಕ್ಕೂ ಸಂಗ್ರಹ ಯೋಗ್ಯ ಮತ್ತು ಅವುಗಳು ನಮ್ಮ ಕಪಾಟಿನಲ್ಲಿ ಇವೇ ಎಂದು ಹೇಳುಕೊಂಡು ಸಂಭ್ರಮಿಸಬಹುದಾಗಿದೆ. ಬಹುಶಃ ಕನ್ನಡದಲ್ಲಿ ಭೈರಪ್ಪನವರ ಕೃತಿಗಳ ಹೊರತಾಗಿ ರವೀ ಅವರ ಪುಸ್ತಕಗಳೇ ಹೆಚ್ಚಿನವರ ಮನೆಯ ಕಪಾಟಿನಲ್ಲಿ ಮತ್ತು ಮನಗಳಲ್ಲಿ ತುಂಬಿಕೊಂಡಿವೆ ಎಂದರೂ ತಪ್ಪಾಗಲಾರದು.
ಖಾಸ್ ಬಾತ್, ಬಾಟಮ್ ಐಟಂ, ಹಿಮಾಗ್ನಿ, ಉಡುಗೊರೆ, ಅಮ್ಮ ಸಿಕ್ಕಿದ್ದು, ಲವ್ ಲವಿಕೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಹೇಳಿ ಹೋಗು ಕಾರಣ, ಚಲಂ, ನೀ ಹಿಂಗ ನೋಡಬ್ಯಾಡ ನನ್ನ ಪುಸ್ತಕಗಳ ಮುಖಾಂತರ ಕನ್ನಡಿಗರ ಮನೆಮಾತಾಗಿದ್ದ ರವೀ, ಹಿಮಾಲಯನ್ ಬ್ಲಂಡರ್ ಮುಖಾಂತರ ಇಂದಿನ ಯುವಜನತೆಗೆ ದೇಶಪ್ರೇಮ ಮತ್ತು ಗಡಿಕಾಯುವ ಸೈನಿಕರ ಮೇಲಿನ ಕಿಚ್ಚನ್ನು ಹುಚ್ಚೆಬ್ಬಿಸಿತ್ತು ಅದೇ ರೀತಿ, ಪ್ರೊತಿಮಾ ಬೇಡಿ ಬ್ಲ್ಯಾಕ್ ಪ್ರೈಡೇ, ಇಂದಿರೆಯ ಮಗ ಸಂಜಯ,, ಕಾಮರಾಜ ಮಾರ್ಗ, ಭೀಮ ತೀರದ ಹಂತಕರು, ರಾಜ್ ಲೀಲಾ ವಿನೋದ ಪುಸ್ತಕಗಳ ಮುಖಾಂತರ ಅನಗತ್ಯ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡು ನಂತರ ತಮ್ಮ ಎಂದಿನ ಹುಂಬ ತನದಿಂದ ಸಮರ್ಥವಾಗಿ ಎದುರಿದ್ದು ಈಗ ಇತಿಹಾಸ. ತಾವು ಓದಿದ್ದ ಅದ್ಬುತ ವಿಷಯಗಳನ್ನು ಅತ್ಯಂತ ವಿವರವಾಗಿ ಓದುಗನಿಗಾಗಿಯೇ ಚೆಂದದ ಚಿತ್ತಿಲ್ಲದ ಮುದ್ದು ಮುದ್ದಾದ ಅಕ್ಷರಗಳನ್ನು ಪೋಣಿಸಿ ಬರೆಯುತ್ತಿದ್ದ ರವೀ, ಅಶ್ಲೀಲದ ಬಗ್ಗೆ ಬರೆದರೂ ಅದರ ಸೋಂಕು ತಾಗದಂತೆ ಬರೆವ ಕಲೆಯನ್ನು ದಕ್ಕಿಸಿಕೊಂಡಿದ್ದರು ಎನ್ನುವುದು ನಿರ್ವಿವಾದ.
ಇಷ್ಟೆಲ್ಲಾ ಸಾಧಿಸಿದ್ದ ರವೀ ಬೆಳಗೆರೆಯವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿದ್ದು ಅವುಗಳಲ್ಲಿ ಪ್ರಮುಖವಾದವುಗಳು
- 1984 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- 1990 ರಲ್ಲಿ ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
- 1997 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- 2004 ರಲ್ಲಿ ಶಿವರಾಮ ಕಾರಂತ ಪುರಸ್ಕಾರ
- 2005 ರಲ್ಲಿ ಕೇಂದ್ರ ಸರ್ಕಾರದಿಂದ ಪ್ರಾರ್ಥನಾ ಶಾಲೆಗಾಗಿ ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್
- 2008 ರಲ್ಲಿ ಜೀವಮಾನದ ಸಾಧನೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
- 2011 ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
ಕುಂಬಾರನಿಗೆ ವರುಷ, ದೊಣ್ಣೆಗೊಂದು ನಿಮಿಷ ಎನ್ನುವಂತೆ ಅಪಾರವಾಗಿ ಸಾಧಿಸಿದ್ದನ್ನೆಲ್ಲವನ್ನೂ ಅವರ ಕಡೆಯ ದಿನಗಳಲ್ಲಿ ತಮ್ಮ ಎರಡನೇ ಪತ್ನಿಯೊಂದಿಗೆ ಸಲುಗೆಯಿಂದಿದ್ದಾನೆ ಎಂದು ಅವರೇ ಬೆಳೆಸಿದ್ದ ಸುನೀಲ್ ಹೆಗ್ಗರವಳ್ಳಿಯ ಹತ್ಯೆಗೆ ಸುಪಾರಿ ಕೊಟ್ಟ ಆಪಾದನೆ ಮೇಲೆ ಬಂಧನಕ್ಕೊಳಗಾಗುವ ಮೂಲಕ ಮತ್ತು ಆಸ್ವಾಭಾವಿಕವಾಗಿ ಸಣ್ಣಗಾಗಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ತಿಂಗಳಾನು ಗಟ್ಟಲೇ ಕೋಮಾ ಸ್ಥಿತಿಗೆ ತಲುಪುವ ಮೂಲಕ, ಸುಖಾ ಸುಮ್ಮನೇ ಯಾರದ್ದೋ ಮೇಲೆ ಹೇರಿ ಹೋಗಿ ವೈಷಮ್ಯ ಕಟ್ಟಿಕೊಳ್ಳುವ ಮೂಲಕ ತಾವೇ ಕಟ್ಟಿಕೊಂಡಿದ್ದ ಭವ್ಯ ಬಂಗಲೆಯ ತಳಪಾಯದ ಒಂದೊಂದೇ ಕಲ್ಲುಗಳನ್ನು ಸಡಿಲಗೊಳಿಸಿಕೊಳ್ಳುವ ಮೂಲಕ ಬಂಗಲೆ ಯಾವುದೇ ಕ್ಷಣದಲ್ಲಿ ಉರುಳಿ ಹೋಗುವಂತಹ ಸಂದರ್ಭವನ್ನು ಕೈಯ್ಯಾರೆ ತಂದು ಕೊಂಡಿದ್ದರು.
ಹಿತೈಷಿಗಳೊಬ್ಬರೂ ರವೀ ಕಡಿಮೆ ಕುಡೀರಿ. ಆಗ ಹೆಚ್ಚು ಕಾಲ ಕುಡಿಯಬಹುದಲ್ವೇ ? ಎಂದ್ದಿದ್ದಾಗ, ಹುಂಬ ರವೀ, ಕುಡ್ದು ಕುಡ್ದು ಸತ್ತ ಅನ್ನಿಸಿಕೊಳ್ಳೋದಿಕ್ಕಿಂತ ಬರೆದೂ ಬರೆದೂ ಸತ್ತ ಅನ್ನಿಸಿಕೊಳ್ಳಬೇಕು ಅಂತಾ ಹಾರಿಕೆಯ ಉತ್ತರವನ್ನು ಕೊಟ್ಟಿದ್ದಲ್ಲದೇ ಸಾಯುವ ಅರ್ಧ ಗಂಟೆಯವರೆಗೂ ಅದನ್ನೇ ಸಾಧಿಸಿ ತೋರಿಸಿದ ನಿಸ್ಸೀಮ.
ವಯಕ್ತಿಕ ವಿವಾದಗಳು ಮತ್ತು ಇಳೀ ಕಾಲದ ತೆವಲುಗಳ ಹೊರತಾಗಿಯೂ ಆರಂಭದಲ್ಲಿ ಕಸ್ತೂರಿ, ಕರ್ಮವೀರ. ಹಾಯ್ ಬೆಂಗಳೂರು ಮತ್ತು ಓ ಮನಸೇ ಪತ್ರಿಕೆಗಳ ಸಂಪಾದಕರಾಗಿ ಕೋಟ್ಯಾಂತರ ಕನಡಿಗರಿಗೆ ಅದ್ಭುತವಾದ ಸಾಹಿತ್ಯವನ್ನು ಪರಿಚಯಿಸಿ, ಈ ಎಲ್ಲಾ ಪತ್ರಿಕೆಗಳು ಮತ್ತು ಅವರ ಪುಸ್ತಕಗಳು ಕೈಗೆ ಸಿಕ್ಕೊಡನೆ ಒಂದೇ ಗುಕ್ಕಿನಲ್ಲಿ ಮೊದಲನೇ ಪುಟದಿಂದ ಕೊನೆಯ ಪುಟದವರೆಗೂ ಸರಾಗವಾಗಿ ಓದಿಸಿಕೊಂಡು ಹೋಗುತ್ತಿದ್ದ ಅದ್ಭುತ ಬರಹಗಾರ. ತನ್ನ ಅಧ್ಭುತವಾದ ಬರವಣಿಗೆ ಮತ್ತು ಸ್ಪುಟವಾದ ಮಾತುಗಾರಿಕೆಯಿಂದಲೂ ಸಾಕಷ್ಟು ದುಡ್ಡು ಮಾಡಬಹುದು ಎಂದು ಬರಿಗೈಲಿ 60 ಪೈಸೆ ಪೆನ್ ರೀಫಿಲ್ ಹಿಡಿದುಕೊಂಡು ತನ್ನ ಬದುಕು ಪ್ರಾರಂಭಿಸಿ ಕೋಟ್ಯಂತರ ಹಣ ಮತ್ತು ಹೃದಯಗಳ ಒಡೆಯರಾಗಿ ಮೆರೆದ ಮತ್ತು ಆಚಂದ್ರಾರ್ಕವಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಧೃವತಾರೆಯಾಗಿ ಮೆರೆಯುತ್ತಲೇ ಹೋಗುವ ರವೀ ಬೆಳಗೆರೆ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎಂದರೆ ತಪ್ಪಾಗದು ಅಲ್ವೇ?
ಏನಂತೀರೀ?
ಚೆನ್ನಾಗಿದೆ sir.
LikeLiked by 1 person