ಅಂಟಿಗೆ- ಪಿಂಟಿಗೆ ಹಬ್ಬ

ನಮ್ಮ ಹಳೇ ಮೈಸೂರಿನ ಕಡೆ ಆಶ್ವಯುಜ, ಬಹುಳ, ತ್ರಯೋದದಶಿಯಿಂದ ಆರಂಭವಾಗಿ ಕಾರ್ತೀಕ ಶುಕ್ಲ ಬಿದಿಗೆಯವರೆಗೂ ಐದು ದಿನಗಳವರೆಗೂ ದೀಪವಳಿಯನ್ನು ಆಚರಿಸಲಾಗುತ್ತದೆ. ಮಲೆನಾಡು ಅದರಲ್ಲೂ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಮತ್ತು ಉತ್ತರ ಕನ್ನಡದ ಕೆಲವು ಭಾಗಗಳಲ್ಲಿನ ರೈತಾಪಿ ಸಮುದಾಯಗಳಲ್ಲಿ ಈ ಅಂಟಿಗೆ ಪಿಂಟಿಗೆ ಹಬ್ಬವನ್ನು ಆಚರಿಸುವ ರೂಢಿಯಲ್ಲಿದೆ. ನಮ್ಮಲ್ಲಿ ದೀಪವನ್ನು ಹಚ್ಚಿಸು ಎನ್ನುವುದಕ್ಕೆ ದೀಪವನ್ನು ಅಂಟಿಸು ಎಂದೂ ಹೇಳುವ ಕಾರಣ ಮತ್ತು ಪಿಂಟಿಗೆ ಎಂಬ ಪದವು ಹಬ್ಬ ಎನ್ನುವುದಕ್ಕೆ ತಮಿಳಿನ ಪಂಡಿಗೈ ಅಥವಾ ತೆಲುಗಿನ ಪಂಡಗ ಎಂಬ ಪದಗಳಿಂದ ಎರವಲು ಪಡೆದು ಅಂಟಿಗೆ-ಪಿಂಟಿಗೆ ಎಂಬ ಹೆಸರು ಬಂದಿರಬಹುದು ಎಂದು ಕೆಲವರ ಅಂಬೋಣ.

ದೀಪಾವಳಿಯ ಹಬ್ಬದ ಬಲಿಪಾಡ್ಯಮಿಯಂದು ಊರಿನ ಪ್ರಮುಖ ದೇವಸ್ಥಾನದಲ್ಲಿ ಯುವಕರ ತಂಡವು ಒಗ್ಗೂಡಿ, ದೇವರನ್ನು ಭಕ್ತಿಯಿಂದ ಪೂಜಿಸಿ, ತಾವು ಹೊತ್ತು ಸಾಗಿಸಲಿರುವ ದೊಡ್ಡದಾದ ಕಂಚಿನ ಅಥವಾ ಮಣ್ಣಿನ ದೀವಕ್ಕೆ ಸಾಕಷ್ಟು ಎಣ್ಣೆಯನ್ನು ಹಾಕಿದ ಗಟ್ಟಿಯಾದ ಹಿಡಿಕೆಯುಳ್ಳ ದೀವಟಿಕೆಯನ್ನು ದೇವಸ್ಥಾನದ ನಂದಾದೀಪದಿಂದ ಹತ್ತಿಸಿಕೊಳ್ಳುತ್ತಾರೆ. ಇದರ ಜೊತೆಯಲ್ಲಿಯೇ ಹಿಂದೆಲ್ಲಾ ಮಣ್ಣಿನ ಹೂಜಿಯಲ್ಲಿ (ಈಗ ಕಾಲಕ್ಕೆ ಅನುಗುಣವಾಗಿ ಪ್ಲಾಸ್ಟಿಕ್ ಅಥವಾ ಸ್ಟೀಲ್ ಕ್ಯಾನಿನಲ್ಲಿ) ದೀಪದ ಎಣ್ಣೆಯನ್ನು ತುಂಬಿಕೊಂಡು ಅವರ ಜೊತೆಗೆ ಹೋಗುತ್ತಾರೆ. ಸಾಗುವ ಹಾದಿಯಲ್ಲಿ ಗಾಳಿಬೀಸಿಯೋ ಅಥವಾ ಮತ್ತಾವುದೋ ಕಾರಣದಿಂದ ದೀಪವು ಆರಿಹೋದಲ್ಲಿ ಅಪಶಕುನ ಆಗುತ್ತದೆ ಎಂಬ ಕಾರಣದಿಂದ ಬಹಳ ಎಚ್ಚರಿಕೆಯಿಂದ ಮೂರು ದಿನವೂ ದೀಪವು ಆರದಂತೆ ನೋಡಿಕೊಳ್ಳುತ್ತಾರೆ. ಈ ತಂಡದಲ್ಲಿ ತಂಡದಲ್ಲಿ ಏಳೆಂಟು ಜನ ಸದಸ್ಯರಿದ್ದು ಜ್ಯೋತಿಯನ್ನು ಹಿಡಿದುಕೊಂಡ ನಾಯಕನು ಮಧ್ಯದಲ್ಲಿದ್ದರೆ, ಅವನ ಮುಂದೆ ಇಬ್ಬರು ಗಾಯಕರು (ಮುಮ್ಮೇಳಧಾರಿಗಳು) ಮತ್ತನವನ ಹಿಂದೆ ದೀವಟಿಗೆಯರು, ಹಾಡುವವರು, ಸಂಭಾವನೆ ಹೊರುವವರು ಹಾಗೂ ಹಿಮ್ಮೇಳಧಾರಿಗಳು ಹಿಂಬಾಲಿಸುತ್ತಾರೆ. ಇನ್ನೂ ವಿಶೇಷವೆಂದರೆ ದೀಪ ಸಾಧಾರಣ ಪಂಚೆ, ಅದಕ್ಕೊಪ್ಪುವ ಅಂಗಿ ಅಥವಾ ಜುಬ್ಬದ ಜೊತೆಗೆ ತಲೆಗೊಂದು ಮುಂಡಾಸು ಕಟ್ಟಿಕೊಂಡು, ದಾರಿಯಲ್ಲಿ ಎದುರಾಗ ಬಹುದಾದ ಅಪಾಯಗಳನ್ನು ಎದುರಿಸಲು ಸಹಾಯಕವಾಗುವಂತೆ ಕೈಯ್ಯಲ್ಲೊಂದು ಗಟ್ಟಿಯಾದ ದಂಡವನ್ನು ಹಿಡಿದು ಹಗಲು ಇರಳು ಎನ್ನದೇ, ಮೂರು ದಿನಗಳ ಕಾಲ ನಿದ್ರಿಸದೇ, ಈ ಕಲಾವಿದರು ಮನೆಗಳಿಂದ ಮನೆಗಳಿಗೆ ದೀಪವನ್ನು ಹಿಡಿದುಕೊಂಡು ಜಾನಪದ ಗೀತೆಯನ್ನು ಒಕ್ಕೊರಲಿನಿಂದ ಹಾಡಿಕೊಂಡು ಹೋಗುತ್ತಾರೆ. ಪ್ರತಿಯೊಬ್ಬರ ಮನೆಯ ಮುಂದೆ ಹೋಗಿ ನಿಂತು ಮನೆಯ ಯಜಮಾನಿಗೆ ಹಾಡಿನ ಮೂಲಕ ಬಾಗಿಲ ತೆರೆಯಮ್ಮ, ಭಾಗ್ಯದ ಲಕ್ಷ್ಮಮ್ಮ, ಜ್ಯೋತ್ಸಮ್ಮನ್ನೊಳಗೆ ಕರಕೊಳ್ಳಿ. ಹಾಗೆಯೇ ಜ್ಯೋತಿದ್ದ ಮನೆಯಲ್ಲಿ ರೀತ್ಯುಂಟು, ನೀತ್ಯುಂಟು, ಒಳ್ಳೆ ಮಾತುಗಳುಂಟು ಮನದಲ್ಲಿ ಎಂದು ಹಾಡುತ್ತಾ ಅವರ ಮನೆಯ ದೀಪಗಳನ್ನು ಹತ್ತಿಸಿಕೊಳ್ಳಲು ಸೂಚಿಸುತ್ತಾರೆ. ಇವರ ಬರುವಿಕೆಗಾಗಿಯೇ ಕಾಯುತ್ತಿದ್ದ ಆ ಮನೆಯವರೂ, ತಮ್ಮ ಮನೆಯ ನಂದಾ ದೀಪವನ್ನು ಅವರು ಹೊತ್ತು ತಂದಿದ್ದ ದೀವಟಿಕೆಯಿಂದ ಹತ್ತಿಸಿಕೊಂಡು, ಅದರ ಮುಂದೆ ದೀಪದ ಎಣ್ಣೆ, ಅಕ್ಕಿ, ಕಾಯಿ, ಹಬ್ಬದಲ್ಲಿ ಮಾಡಿದ್ದ ನೈವೇದ್ಯ ಮತ್ತು ದಕ್ಷಿಣೆಯನ್ನಿಟ್ಟು ಭಕ್ತಿಯಿಂದ ನಮಿಸುವುದಲ್ಲದೇ, ರನ್ನಾದಟ್ಟಾಕೆ ಬಣ್ಣದೇಣಿಯಾ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ…… ಸಾವಿರ ಕಾಲ ಸುಖಿ ಬಾಳಿ ಎಂದು ಹಾಡುತ್ತಾ, ತಾವು ಹತ್ತಿಸಿಕೊಂಡ ನಂದಾದೀಪವನ್ನು ಬಲೀಂದ್ರಕಂಬ ಎನ್ನುವ ನಿರ್ದಿಷ್ಟ ಜಾಗದಲ್ಲಿ ಇಟ್ಟ ನಂತರ ದೀಪದ ಮೆರವಣಿಗೆಯನ್ನು ಮುಂದಿನ ಮನೆಗೆ ಕಳಿಸುತ್ತಾರೆ.

ಹೀಗೆ ಅಂಟಿಗೆ-ಪಿಂಟಿಗೆಯಲ್ಲಿ ದೇವಸ್ಥಾನದ ಹಣತೆಯ ಮೂಲಕ ಮೂಲಕ ಧನಾತ್ಮಕ ಚಿಂತನೆಗಳನ್ನು ಹೊತ್ತು ತಂದು, ಎಲ್ಲರ ಮನೆಯವರ ಅಂತರಂಗ(ಹೃದಯ)ದ ಬಾಗಿಲನ್ನು ತೆರೆದು ಅವರ ಮನೆಯ ನಂದಾದೀಪವನ್ನು ಹಚ್ಚುವ ಮೂಲಕ, ಅವರ ಬದುಕಿನ ಸಾರ್ಥಕತೆಯನ್ನು ಮತ್ತು ಆಧ್ಯಾತ್ಮಿಕ ಒಲವನ್ನು ಜಾಗೃತಗೋಳಿಸಿ ತಮ್ಮ ಪಯಣವನ್ನು ಮುಂದುವರೆಸುವ ಸುಂದರ ಕಲ್ಪನೆಯನ್ನು ನಮ್ಮ‌ ಹಿರಿಯರು ರೂಢಿಗೆ ತಂದಿದ್ದಾರೆ.

ದೀಪವನ್ನು ಹಚ್ಚಿಕೊಂಡು, ಹಳ್ಳಿಯ ಬೀದಿಗಳಲ್ಲಿ ಚಲಿಸುತ್ತಾ, ಮನೆ ಮನೆಯಲ್ಲಿಯೂ ಬೆಳಕನ್ನು ತುಂಬುವ ಈ ಸಂದರ್ಭದಲ್ಲಿ ಹಾಡುವ ಗೀತೆಗಳನ್ನು ಅಂಟಿಕೆ-ಪಂಟಿಕೆ ಪದಗಳು ಎಂದು ಕರೆಯುತ್ತಾರೆ. ಹೀಗೆ ಹಾಡುವ ಪದಗಳಲ್ಲಿಯೂ ಹಲವು ವಿಧಗಳಿವೆ. ಶಿವಯೋಗಿ ಪದ, ದೀಪ ಹಚ್ಚುವ ಪದ, ಬಲೀಂದ್ರ ಪದ, ಗೋವಿನ ಪದ, ಕವಲೆ ಹಾಡು, ಎಣ್ಣೆ ಎರೆಯುವ ಪದ, ದ್ರೌಪದಿ ಪದ, ಗಂಗೆ ಗೌರಿ ಪದ, ಜೋಗುಳ ಪದ, ಕೌಟುಂಬಿಕ ‌ಪದ ಹೀಗೆ ಹತ್ತು ಹಲವಾರು ರೀತಿಯ ಹಾಡುಗಳಿದ್ದು ಅವುಗಳ ಜೊತೆ ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಆ ಕಲಾವಿದನ ಆಶುಕವಿತ್ವಕ್ಕೆ ತಕ್ಕಂತೆ ಬದಲಾಗುವ ಸಂಧರ್ಭವೂ ಇರುತ್ತದೆ. ಕೆಲವೊಮ್ಮೆ ಮನೆಯವರ ಕಾಲು ಎಳೆಯುವ ಭರದಲ್ಲಿ ಆಶ್ಲೀಲದ ಪದಗಳ ಸೋಂಕು ಕೂಡ ತಗುಲಿ ಅಲ್ಲಿದ್ದ ಹಿರಿಯರ ಎಚ್ಚರಿಕೆಯ ನಂತರ ಸರಿ ದಾರಿಗೆ ಬರುವ ಉದಾಹರಣೆಯೂ ಇದೆ.

ಹೀಗೆ ದೀಪವನ್ನು ಹೊತ್ತು ಸಾಗುವಾಗ, ಮತ್ತೊಂದು ಊರಿನ ತಂಡವು ಎದುರು ಬದಿರು ಆಗುವ ಸಂಧರ್ಭ ಎದುರಾದಲ್ಲಿ. ಅವರು ದೀಪ-ದೀಪೋಳ್ಗೆ ಎಂದು ಗಟ್ಟಿಯಾಗಿ ಕೂಗುವುದರ ಮೂಲಕ ಪರಸ್ಪರ ಎಚ್ಚರಿಕೆ ಕೊಡುತ್ತಾ ಇಬ್ಬರೂ ಬೇರೆ ಬೇರೆ ದಾರಿಯಲ್ಲಿ ಸಾಗುತ್ತಾರೆ. ದೀಪವನ್ನು ಹತ್ತಿಸಿಕೊಳ್ಳುವವರೂ ಕೆಲವೊಂದು ಸಂಪ್ರದಾಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿರುತ್ತದೆ. ದೀಪ ಸ್ವೀಕರಿಸಬೇಕಾದ ಕುಟುಂಬದಲ್ಲಿ ಮುಟ್ಟು ಚೆಟ್ಟು, ಪುರುಡು, ಸಾವಿನ ಮೈಲಿಗೆಗಳು ಬಂದಿರಬಾರದು. ಈ ಎಲ್ಲಾ ಮೈಲಿಗೆಗಳು ಕಳೆದ ಮೂರು ವರ್ಷಗಳ ನಂತರವೇ ಆಂತಹ ಮನೆಗಳಿಗೆ ಹೋಗುತ್ತಾರೆ.

ಹೀಗೆ ಮೂರು ದಿನಗಳ ಕಾಲ ನಿರಂತರವಾಗಿ ಸಂಚರಿಸಿದ ನಂತರ ತಂಡವು ಮತ್ತೆ ತಮ್ಮ ಹಳ್ಳಿಯಲ್ಲಿ ತಾವು ಆರಂಭಿಸಿದ ದೇವಸ್ಥಾನಕ್ಕೇ ಬಂದು ಸಂಗ್ರಹಿಸಿದ ದವಸ ಧಾನ್ಯಗಳು, ನಗನಾಣ್ಯಗಳು ಮತ್ತು ಉಡುಗೊರೆಯನ್ನೆಲ್ಲಾ ದೇವಸ್ಥಾನಕ್ಕೆ ಅರ್ಪಿಸಿ, ಪೂಜೆ ಮಾಡಿಸಿ, ಮುಂದಿನ ವರ್ಷದವರೆಗೆ ಆ ದೀವಟಿಕೆಯನ್ನು ದೇವಸ್ಥಾನದಲ್ಲಿಯೇ ಇರಿಸಿ ಆ ವರ್ಷದ ಆಚರಣೆಗೆ ಮಂಗಳ ಹಾಡುತ್ತಾರೆ. ಈ ರೀತಿಯಾದ ಜನಪದ ಆಚರಣೆಗಳು ಇಂದಿನ ಯುವ ಜನತೆಗೆ ತಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದ ಸಮುದಾಯಗಳನ್ನು ಪರಿಚಯ ಮಾಡಿಸುವ ಮೂಲಕ ಅವರ ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸುತ್ತಿದೆ. ಮುಂದಿನ ವರ್ಷದ ದೀಪವನ್ನು ಹೊರಲು ಅಥವಾ ಆ ತಂಡಕ್ಕೆ ಸೇರಲು ಈ ವರ್ಷದಿಂದಲೇ ಯುವಕರುಗಳು ಅರ್ಜಿ ಹಾಕುವ ಸಂದರ್ಭಗಳಿಗೇನೂ ಕಡಿಮೆ ಇಲ್ಲ.

ಈಗ ಕಾಲ ಕಾಲಕ್ಕೆ ಮಳೆ ಬೆಳೆಯಾಗದೇ, ಮಲೆನಾಡಿನ ಹಳ್ಳಿಗಳ ಯುವಕರುಗಳು ಕೆಟ್ಟು ಪಟ್ಟಣ ಸೇರು ಎನ್ನುವಂತೆ ಹತ್ತಿರದ ನಗರಕ್ಕೆ ವಲಸೇ ಹೋಗುತ್ತಿರುವ ಪರಿಣಾಮದಿಂದಾಗಿ, ಪ್ರತೀ ಮನೆ-ಮನವನ್ನು ಬೆಳಗಬೇಕಿದ್ದ ಈ ಸುಂದರ ಕಲ್ಪನೆಯ ಅಂಟಿಗೆ-ಪಿಂಟಿಗೆ ಹಬ್ಬ ಈಗ ಅವಸಾನ ದತ್ತ ಸಾಗುತ್ತಾ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹೋಗು ಮಾರಾಯಾ, ಮೂರು ರಾತ್ರಿ ನಿದ್ದೆಗೆಡುವ ಗೋಳು ಯಾರಿಗೆ ಬೇಕು? ಎಂಬ ತಾತ್ಸಾರದಿಂದ ಆ ತಂಡದೊಂದಿಗೆ ಕೈ ಜೋಡಿಸುವವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಪರ್ಯಾಸವೇ ಸರಿ.

ಇಂತಹ ಸಂದರ್ಭ ಬಂದೊದಗಬಹುದು ಎಂದು ಸುಮಾರು 60 ವರ್ಷಗಳ ಹಿಂದೆಯೇ ಯೋಚಿಸಿ ತೀರ್ಥಹಳ್ಳಿ ತಾಲ್ಲೂಕಿನ ಹುಲಿಸರ- ಹಣಗೋಡಿನ ಗ್ರಾಮಸ್ಥರು ತಮ್ಮೂರಿನ ಗ್ರಾಮದೇವತೆಯ ಹೆಸರಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಂಟಿಗೆ ಪಿಂಟೆಗೆ ಸಂಘವನ್ನು 1962ರಲ್ಲಿ ರಚಿಸಿಕೊಂಡು ನಿರಂತರವಾಗಿ ಕಳೆದ 60 ವರ್ಷಗಳಿಂದಲೂ ನಿರಂತರವಾಗಿ ತಮ್ಮೂರಿನ ಯುವಕರ ತಂಡ ರಚಿಸಿಕೊಂಡು ಅಂಟಿಗೆ-ಪಿಂಟಿಗೆಯನ್ನು ಶ್ರದ್ಧಾ ಭಕ್ತಿಯಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅಂಟಿಗೆ ಪಿಂಟಿಗೆ ಮೂಲಕ ಸಂಗ್ರಹವಾದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳುವ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದ್ದಾರೆ.

ಶರಾವತಿ ನದಿಯ ದಡದಲ್ಲಿ ಕೃಷಿಯಾಧರಿತವಾಗಿದ್ದ ಈ ಊರಿಗೆ ಸರಿಯಾದ ಸಂಪರ್ಕ ವ್ಯವಸ್ಥೆಯೂ ಇರಲಿಲ್ಲ. ಮಳೆಗಾಲದ ಮೂರು ತಿಂಗಳಿನಲ್ಲಿ ಹುಲಿಸರ ಗ್ರಾಮವು ಅಕ್ಷರಶಃ ದ್ವೀಪವಾಗಿ, ರಸ್ತೆಯ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕವಿಲ್ಲದಾಗಿರುತ್ತಿತ್ತು.
ಇಂತಹ ದಿನಗಳಲ್ಲಿ ಆ ಊರಿನ ಹಿರಿಯರು ಅಂಟಿಗೆ-ಪಿಂಟಿಗೆ ಮೂಲಕ ಊರನ್ನು ಒಗ್ಗೂಡಿಸಿ, ಹಿರಿಯರೊಂದಿಗೆ ಎಳೆಯರಿಗೂ ಅಂಟಿಗೆ-ಪಿಂಟಿಗೆ ಕಲಿಸಿ, ಗ್ರಾಮದ ದೇವಸ್ಥಾನವನ್ನು ಅಭಿವೃದ್ಧಿ ಮಾಡಿದ್ದಲ್ಲದೇ, ತಮ್ಮ ಸಂಘ ಶಕ್ತಿಯ ಮೂಲಕ ರಾಜಕೀಯ ಒತ್ತಡ ತಂದು ತಮ್ಮೂರಿನ ಶರಾವತಿ ನದಿಗೆ ಸೇತುವೆ ನಿರ್ಮಿಸಿಕೊಂಡರು. ಈ ಹಳ್ಳಿಯಿಂದ ಪಟ್ಟಣಕ್ಕೆ ಸುಗಮವಾದ ಸಂಪರ್ಕರಸ್ತೆಯಾದ ಕೂಡಲೇ, ಊರಿನ ರಸ್ತೆಗಳು ಡಾಂಬರೀಕರಣ ಗೊಂಡಿದ್ದಲ್ಲದೇ, ವಿದ್ಯುತ್, ಫೋನ್ ಎಲ್ಲವೂ ಬಂದು ಊರಿನ ಯುವಕರು ಶಿಕ್ಷಣ ಪಡೆದು ಉದ್ಯೋಗ ಹಿಡಿದು ಬದುಕು ಕಟ್ಟಿಕೊಂಡಿದ್ದಾರೆ.

ನಮ್ಮ ಪೂರ್ವಜರು ಧಾರ್ಮಿಕ ಹಿನ್ನಲೆಯಲ್ಲಿ ರೂಡಿಗೆ ತಂದಿದ್ದ ಅಂಟಿಗೆ-ಪಿಂಟಿಗೆ ಹಬ್ಬ ಇಂದು ಹಳ್ಳಿ ಹಳ್ಳಿಗಳಲ್ಲಿ ಸಾಮಾಜಿಕ ಕ್ರಾಂತಿ ತಂದಿರುವುದಲ್ಲದೇ ಅವರೆಲ್ಲರೂ ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ ತಮ್ಮ ತಮ್ಮ ಊರಿನ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವಂತೆ ಇಡೀ ಊರನ್ನು ಒಗ್ಗೂಡಿಸುತ್ತಿದೆ. ಇದೇ ಅಲ್ಲವೇ ನಮ್ಮ ಹಬ್ಬಗಳ ವಿಶೇಷತೇ?

ಏನಂತೀರೀ?

4 thoughts on “ಅಂಟಿಗೆ- ಪಿಂಟಿಗೆ ಹಬ್ಬ

 1. *ದೀಪದಿಂದ ದೀಪವ ಹಚ್ಚಬೇಕು ಮಾನವಾ* ಎಂಬ ಮಾತನ್ನು ಅರ್ಥಪೂರ್ಣ ವಾಗಿ ಆಚರಿಸುವ ಈ ಅಂಟಿಗೆ-ಪಿಂಟಿಗೆ ಆಚರಣೆ ಅನುಕರಣೀಯ…
  ಈ ಲೇಖನ ಓದುವ ತನಕ ಇಂತಾ ಒಂದು ಆಚರಣೆ ಇದೆ ಎಂಬುದೇ ತಿಳಿದಿರಲಿಲ್ಲ…
  ಹಬ್ಬಗಳ ಮೂಲ ಉದ್ದೇಶವೇ ಸಮುದಾಯವನ್ನು ಒಟ್ಟುಗೂಡಿಸುವುದು ,ತನ್ಮೂಲಕ ಜನ ಮನಗಳಲ್ಲಿ ಬಾಂಧವ್ಯ ಬೆಸೆಯುವುದು. ಮನೆ ಮನೆಗೆ ಭೇಟಿ ನೀಡುತ್ತಾ ಸಾಗುವ ಜ್ಯೋತಿ ಈ ಸದುದ್ದೇಶಕ್ಕೆ ಪೂರಕವಾಗಿದೆ….
  ಇನ್ನು ತಂಡದ ಸದಸ್ಯರು ನಿದ್ದೆಗೆಟ್ಟು , ಮೈಲಿಗಟ್ಟಲೆ ಹಾದಿ ಸವೆಸುತ್ತಾ ,ಭಕ್ತಾದಿಗಳು ನೀಡುವ ಕಾಣಿಕೆಯನ್ನೂ ಹೊತ್ತು ಅದನ್ನು ಮೂಲ ದೇವಾಲಯಕ್ಕೆ ಅರ್ಪಿಸಿ ಧನ್ಯರಾಗುವ ರೀತಿ ಯುವ ಜನತೆ ಗಮನಿಸಲೇಬೇಕು…

  ಉತ್ತಮ ಆಚರಣೆಯ ಬಗ್ಗೆ ಲೇಖನ ಬೆಳಕು ಚೆಲ್ಲಿದೆ…

  Liked by 1 person

  1. ಒಬ್ಬ ಬುಡಕಟ್ಟು ಜಾನಪದ ಸಂಶೋಧಕನಾಗಿ ಹೇಳುವುದಾದರೆ, ನಿಮ್ಮ ಈ ಮಾಹಿತಿಪೂರ್ಣ ಬರಹ ಔನ್ನತ್ಯ ಸಾಧಿಸಿದೆ. ಅಭಿನಂದನೆಗಳು, ಒಂದೊಳ್ಳೆಯ ಮಾಹಿತಿ ಓದಿಸಿದ್ದಕ್ಕಾಗಿ.
   -ಡಾ.ಹನಿಯೂರು ಚಂದ್ರೇಗೌಡ
   ಬುಡಕಟ್ಟು-ಜಾನಪದ ತಜ್ಞರು, ಕನ್ನಡ ಸಹ-ಪ್ರಾಧ್ಯಾಪಕರು, ಮ್ಯಾನೇಜಿಂಗ್ ಡೈರೆಕ್ಟರ್, ಬಿರ್ಸಾಮುಂಡಾ ಟ್ರೈಬಲ್ಸ್ ಕಮ್ಯೂನಿಟಿ ಡೆವಲಪ್ಮೆಂಟ್ & ರೀಸರ್ಚ್ ಸೆಂಟರ್, ಬೆಂಗಳೂರು
   9901609723, kaadumedu23@gmail.com

   Liked by 1 person

 2. ಈಗಿನ ಆಂಟಿಗೆ ಪಿಂಕಿಗೆ…ಈ ಹೆಸರೇ ವಿಚಿತ್ರವಾಗಿ ಕೇಳಿಸುತ್ತದೆ… ನಿಜವಾದ ಅರ್ಥ ತಿಳಿಸಿದ್ದೀರಿ.. ಧನ್ಯ ಭಾವಗಳು…

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s