ಎಂಭತ್ತರ ದಶಕದವರೆಗೂ, ಪರಭಾಷಾ ನಾಯಕ ನಟಿಯರು ಮತ್ತು ನೃತ್ಯಗಾರ್ತಿಯರು ಕನ್ನಡ ಚಿತ್ರರಂಗಕ್ಕೆ ಬರುವವರೆಗೂ, ಕನ್ನಡದ ಚಿತ್ರರಂಗಕ್ಕೆ ಹೊಸ ಮುಖದ ಪ್ರಬುದ್ಧ ನವರರಸವನ್ನೂ ಅಭಿನಯಿಸಿ ತೋರಿಸಬಲ್ಲಂತಹ ನಟಿಯರು, ಸಹ ನೃತ್ಯಗಾರ್ತಿಯರು ಬೇಕೆಂದಲ್ಲಿ, ಇಂದಿಗೂ ಯಾವುದೇ ಸಾಂಸ್ಕೃತಿಯ ಕಾರ್ಯಕ್ರಮ ಅಥವಾ ಪೌರಾಣಿಕ ನಾಟಕಗಳಿಗೆ ರಂಗ ಸಜ್ಜಿಕೆ ಮತ್ತು ಉಡುಪುಗಳು ಬೇಕಾದಲ್ಲಿ, ಇಲ್ಲವೇ ಅತ್ಯುತ್ತಮವಾದ ಆಧುನಿಕ ಧ್ವನಿವರ್ಧಕಗಳು ಮತ್ತು ಬೆಳಕಿನ ಪರಿಕರಗಳು ಬೇಕಿದ್ದಲ್ಲಿ, ಎಲ್ಲರೂ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಪ್ರಭಾತ್ ಕಲಾವಿದರು ತಂಡವನ್ನೇ ಆಶ್ರಯಿಸುತ್ತಾರೆ. ಅಂತಹ ಪ್ರಭಾತ್ ಕಲಾವಿದರು ತಂಡವನ್ನು ಆಸ್ಥೆಯಿಂದ ಕಟ್ಟಿ ಬೆಳೆಸಿ ದೇಶ ವಿದೇಶಗಳ್ಲಿ ಕನ್ನಡ ಕಂಪು ಮತ್ತು ಜನಪದ ಸೊಗಡನ್ನು ಮೆರೆಸಿದ ಶ್ರೀ ಗೋಪೀನಾಥ ದಾಸರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆ ಕಥಾ ನಾಯಕರು.
1914,ಜೂನ್ 20ರಂದು ಹರಿಕಥಾ ದಾಸರ ವಂಶವೆಂದೇ ಖ್ಯಾತರಾಗಿದ್ದ ಶ್ರೀ ವೆಂಕಣ್ಣದಾಸರು ಮತ್ತು ಶ್ರೀಮತಿ ಭಾಗೀರಥಿ ದೇವಿ ಎಂಬ ದಂಪತಿಗಳ ಎರಡನೆಯ ಮಗನಾಗಿ ಜನಿಸಿದ ಗೋಪೀನಾಥರಾಸರು ಬಹಳ ಮುದ್ದಾಗಿದ್ದ ಕಾರಣ ಎಲ್ಲರೂ ಪ್ರೀತಿಯಿಂದ ಗೋಪಣ್ಣ ಎಂದು ಕರೆಯುತ್ತಿದ್ದರು. ನೀರಿನಲ್ಲಿರುವ ಮೀನಿಗೆ ಈಜು ಕಲಿಸಬೇಕೆ? ಎನ್ನುವಂತೆ ಹರಿಕಥೆ ಮತ್ತು ಸಂಗೀತಮಯ ವಾತಾವರಣವಿದ್ದ ಮನೆಯಲ್ಲಿ ಗೋಪೀನಾಥರಿಗೆ ಸಂಗೀತದ ಮೇಲಿನ ಆಸಕ್ತಿ ರಕ್ತಗತವಾಗಿಯೇ ಬಂದಿತ್ತು. ಇದನ್ನು ಗಮನಿಸಿದ ಅವರ ತಂದೆ ಪ್ರಸಿದ್ಧ ವೈಣಿಕ ಎಲ್. ರಾಜಾರಾಯರಲ್ಲಿ ಶಾಸ್ತ್ರ ಬದ್ಧವಾಗಿ ವೀಣೆ ಮತ್ತು ಗಾಯನದ ಶಿಕ್ಷಣವನ್ನು ಕೊಡಿಸಿದ ಪರಿಣಾಮ, ಚಿಕ್ಕ ವಯಸ್ಸಿನಲ್ಲಿಯೇ ಗೋಪಿನಾಥ ದಾಸರು ಶಾಸ್ತ್ರಬದ್ದ ಸುಶ್ರಾವ್ಯ ಗಾಯಕರಲ್ಲದೇ ವೈಣಿಕರಾಗಿಯೂ ಪ್ರಸಿದ್ದರಾದರು. ಇದರ ಜೊತೆ ಜೊತೆಯಲ್ಲಿಯೇ ತಂದೆ ಮತ್ತು ಚಿಕ್ಕಪ್ಪ ವೇಣುಗೋಪಾಲದಾಸರಿಂದ ಹರಿಕಥೆ ಅಭ್ಯಾಸ ಮಾಡಿದ್ದಲ್ಲದೇ, ನೋಡಲು ಬಹಳ ಸುಂದರವಾಗಿದ್ದ ಗೋಪಣ್ಣನವರು ಅಂದಿನ ಕಾಲದ ಖ್ಯಾತ ರಂಗಕರ್ಮಿ ಶ್ರೀ ವರದಾಚಾರ್ಯರ ಗರಡಿಯಲ್ಲಿ ನಾಟಕ ರಂಗದಲ್ಲೂ ಪಳಗಿ ಬಾಲ ನಟರಾಗಿ ಹೆಸರುವಾಸಿಯಾದರು.
ಕಲಿತ ವಿದ್ಯೆಯನ್ನು ಹತ್ತಾರು ಜನರಿಗೆ ಕಲಿಸಿದರೆನೇ, ವಿದ್ಯೆ ಪ್ರಾಪ್ತಿಯಾಗುತ್ತದೆ ಎಂಬಂತೆ ಬೆಂಗಳೂರಿನ ಸುಲ್ತಾನ್ ಪೇಟೆಯಲ್ಲಿದ್ದ ಆರ್ಯಬಾಲಿಕಾ ಪಾಠ ಶಾಲೆಯಲ್ಲಿ ಕೇವಲ ಹತ್ತೊಂಬತ್ತು ವರ್ಷಕ್ಕೇ, ಸಂಗೀತ ಶಿಕ್ಷಕಾರಾಗಿ ಸೇರಿಕೊಂಡರು. ಖ್ಯಾತ ಗಮಕ ವಿದುಷಿ ಶಕುಂತಲಾಬಾಯಿ ಪಾಂಡುರಂಗರಾವ್ ಮತ್ತು ಚಲನಚಿತ್ರ ರಂಗದ ಖ್ಯಾತ ಅಭಿನೇತ್ರಿ ಎಂ.ವಿ.ರಾಜಮ್ಮ ಇವರ ಶಿಷ್ಯೆಯರು ಎಂಬ ಹೆಗ್ಗಳಿಕೆಯೂ ಗೋಪೀನಾಥ ದಾಸರದ್ದು.
ಅದೇ ಸಂದರ್ಭದಲ್ಲಿಯೇ ಅವರ ತಂದೆಯವರ ಅಕಾಲಿಕ ಅವಸಾನರಾದಾಗ, ತಮ್ಮ ಸಹೋದರರೊಂದಿಗೆ ತಮ್ಮ ವಂಶಪಾರಂಪರ್ಯ ಹರಿಕಥೆ ಕಾರ್ಯಕ್ರಮ ನಡೆಸುತ್ತಿದ್ದರು. ತೆರೆದ ರಂಗಮಂಟಪಗಳು ಇಲ್ಲವೇ ದೇವಸ್ಥಾನಗಳಲ್ಲಿ ನೆರೆದಿರುವ ಎಲ್ಲರಿಗೂ ಕೇಳಿಸುವಂತೆ ಹರಿಕಥೆ ಮಾಡುವುದು ಸ್ವಲ್ಪ ಕಷ್ಟವೆನಿಸಿದ ಕಾರಣ ಆಗಷ್ಟೇ ಚಾಲ್ತಿಗೆ ಬಂದಿದ್ದ ದ್ವನಿ ವರ್ಧಕಗಳನ್ನು ಖರೀದಿಸಿ ತಮ್ಮದೇ ಆದ ಪ್ರಭಾತ್ ಸೌಂಡ್ ಸಿಸ್ಟಂಸ್ ಸ್ಥಾಪಿಸಿ, ತಮ್ಮ ಕಾರ್ಯಕ್ರಮಗಳಲ್ಲದೇ ಇತರರ ಕಾರ್ಯಕ್ರಮಗಳಿಗೂ ಬಾಡಿಗೆಗೆ ಕೊಡಲಾರಂಭಿಸಿದರು. ಅಂದು ಸ್ಥಾಪಿಸಿದ ಪ್ರಭಾತ್ ಸೌಂಡ್ ಸಿಸ್ಟಂಸ್ ಇಂದಿಗೂ ಬಹುತೇಕ ಎಲ್ಲಾ ದೊಡ್ಡ ದೊಡ್ಡ ಖಾಸಗೀ ಮತ್ತು ಸರ್ಕಾರೀ ಸಭೆ ಸಮಾರಂಭಗಳಿಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ಗೋಪೀನಾಥ ದಾಸರ ಅಣ್ಣ ಕರಿರಿಗಿಯವರಿಗೆ ಸ್ವಲ್ಪ ನಾಟಕದ ಖಯಾಲಿ. ಇನ್ನೂ ಗೋಪೀನಾಥ ದಾಸರೋ ಬಾಲ್ಯ ಕಲಾವಿದರಾಗಿಯೇ ಅದಾಗಲೇ ಖ್ಯಾತರಾಗಿದ್ದ ಕಾರಣ, ಆಗಾಗ ತಾವು ಶಿಕ್ಷಕರಾಗಿದ್ದ ಶಾಲೆಯನ್ನು ತಪ್ಪಿಸಿ ನಾಟಕಗಳಲ್ಲಿ ಅಭಿನಯಿಸಲು ಹೋಗುತ್ತಿದ್ದರು. ಅದೊಂದು ಸಂದರ್ಭದಲ್ಲಿ ಈ ಸಹೋದರರಿಗೆ ಕಲ್ಚರ್ಡ್ ಕಮೆಡಿಯನ್ ಹಿರಣ್ಣಯ್ಯ (ಮಾ. ಹಿರಣ್ಣಯ್ಯನವರ ತಂದೆ) ಅವರ ಪರಿಚಯವಾಗಿ ಎಲ್ಲರೂ ಸೇರಿ ಒಟ್ಟಿಗೆ ನಾಟಗಳಲ್ಲಿ ಆಭಿನಯಿಸತೊಡಗಿದರು. ಅವರು ನಟಿಸುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ಸೂಕ್ತವಾದ ಪರದೆಗಳು, ಸೈಡ್‌ವಿಂಗ್ಸ್, ಸೀನರಿಗಳು ಮತ್ತು ಪೌರಾಣಿಕ ಪಾತ್ರಗಳಿಗೆ ಅಗತ್ಯವಾದ ಪೋಷಾಕುಗಳು, ಆಭರಣಗಳು ಇಲ್ಲದಿದ್ದದ್ದನ್ನು ಗಮನಿಸಿ, ಮತ್ತದೇ ತಮ್ಮ ಸಹೋದರರ ಜೊತೆ ಸೇರಿಕೊಂಡು ಈ ಎಲ್ಲಾ ವಸ್ತುಗಳನ್ನೂ ಬಾಡಿಗೆ ಕೊಡುವ ತಮ್ಮದೇ ಆದ ಸಂಸ್ಥೆಯೊಂದನ್ನು ಆರಂಭಿಸಿಯೇ ಬಿಟ್ಟರು ಗೋಪಣ್ಣನವರು.
ಅದಾಗಲೇ ಹರಿಕಥೆಯಲ್ಲಿ ಪಳಗಿದ್ದ ಗೋಪೀನಾಥದಾಸರ ಭಾಷಾ ಸಂಪತ್ತು ಅಗಾಧವಾಗಿತ್ತು. ಇದನ್ನೇ ನಾಟಕರಂಗದಲ್ಲಿಯೂ ಬಳಸಿಕೊಂಡು ಅನೇಕ ನಾಟಕಗಳಿಗೆ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಲ್ಲದೇ, ತಮ್ಮದೇ ಸಣ್ಣ ವಯಸ್ಸಿನ ತಂಡವನ್ನು ಕಟ್ಟಿಕೊಂಡು ತಾವೇ ರಚಿಸಿದ, ನಾಟಕ ಮತ್ತು ಸಂಗೀತ ರೂಪಕಗಳನ್ನು ನಿರ್ದೇಶಿಸಿ ಯಶಸ್ವೀ ಕಿರಿಯರ ನಾಟಕ ತಂಡವೊಂದನ್ನು ಕಟ್ಟಿಯೇ ಬಿಟ್ಟರು ಗೋಪಣ್ಣನವರು.
ಗೋಪೀನಾಥ ದಾಸರ ಈ ಬಾಲ ಕಲಾವಿದರ ತಂಡ ಜನಪದ ಗೀತೆ ಪುಣ್ಯಕೋಟಿ, ಕರ್ನಾಟಕ ವೈಭವ, ಪಾಶ್ಚಾತ್ಯ ದೃಶ್ಯ ಕಾವ್ಯ ಸಿಂಡ್ರೆಲಾ ಮುಂತಾದ ನಾಟಕಗಳನ್ನು ರಾಜ್ಯಾದಂತ ನೂರಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿ, ದೇಶದ ರಾಜಧಾನಿ ದೆಹಲಿಗೂ ಕಾಲಿಟ್ಟು ನಂತರ ರಾಷ್ಟ್ರದ ವಿವಿಧಡೆಯಲ್ಲಿಯೂ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರದರ್ಶಿತಗೊಂಡು ಪ್ರಖ್ಯಾತಿ ಗಳಿಸಿತು. ಅವರ ಸಿಂಡ್ರೆಲಾ ನೃತ್ಯರೂಪಕ, ಜನವರಿ 26, 2007 ರಂದು 1001ನೇ ಪ್ರದರ್ಶನ ಕಂಡು ದಾಖಲೆಯನ್ನೇ ಸ್ಥಾಪಿಸಿತು. ಹರಿಕಥೆಗೆ ಪ್ರಸಿದ್ಧವಾಗಿದ್ದ ಕುಟುಂಬ, ಪ್ರಭಾತ್ ಸೌಂಡ್ ಸಿಸ್ಟಂಸ್ ಮೂಲಕ ಧ್ವನಿವರ್ಧಕ ಮತ್ತು ರಂಗಸಜ್ಜಿಗೆಯನ್ನು ಒದಗಿಸುತ್ತಲ್ದೇ, ಮಕ್ಕಳ ತಂಡವನ್ನು ಕಟ್ಟಿಕೊಂಡು ಪ್ರಭಾತ್ ಕಲಾವಿದರು ಎಂಬ ಸಂಸ್ಥೆಯಾಗಿದ್ದರ ಪ್ರಮುಖ ರೂವಾಗಿಗಳೇ ನಮ್ಮ ಗೋಪಣ್ಣನವರು.
ಈ ಮಕ್ಕಳ ಪ್ರಭಾತ್ ಕಲಾವಿದರು ಟೋಳಿಯಿಂದಿಗೆ ಜನಪದ ಗೀತೆಗಳಾದ ಗೋವಿನ ಕಥೆ, ಕಿಂದರ ಜೋಗಿಗಳಲ್ಲದೇ, ಧರ್ಮಭೂಮಿ, ಕರ್ನಾಟಕ ವೈಭವ ಮುಂತಾದ ಇತಿಹಾಸ ಹಿನ್ನಲೆಯ ನೃತ್ಯರೂಪಗಳಲ್ಲದೇ, ಮೋಹಿನಿ ಭಸ್ಮಾಸುರ, ಭಗವದ್ಗೀತೆ ಮುಂತಾದ ಪೌರಾಣಿಕ ನೃತ್ಯರೂಪಕಗಳಿಗೆ ಪ್ರಸಿದ್ಧವಾಗಿತ್ತು. ಎಪ್ಪತ್ತರ ದಶಕದಲ್ಲಿ ಇದೇ ತಂಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಸಲುವಾಗಿ ಗೋಪೀನಾಥ ದಾಸರು ರಷ್ಯಾ ದೇಶದ ಕಲೆಯಾದ ಬ್ಯಾಲೆಯ ಶೈಲಿಯಲ್ಲಿ ಈ ಎಲ್ಲಾ ಭಾರತೀಯ ನೃತ್ಯ ರೂಪಗಳನ್ನು ಈ ನವ-ವಿಧಾನಗಳಿಂದ ಪ್ರಪಂಚಾದ್ಯಂತ ಪಸರಿಸುವುದರ ಹಿಂದಿನ ಪರಿಶ್ರಮ ಗೋಪಣ್ಣನವರದ್ದಾಗಿತ್ತು.
- ಕನ್ನಡದ ಕಂಪನ್ನು ವಿಶ್ವಾದ್ಯಂತ ಹರಡಿದ ಗೋಪೀನಾಥರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆಯಲ್ಲದೇ, ಗೌರವ ಡಾಕ್ಟರೇಟ್ ಪಡೆದ ಮೊದಲ ಹರಿಕಥಾ ವಿದ್ವಾಂಸರೂ ಎಂಬ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
- ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೆರೆದು ಮರೆಯಾದ ಮಂಜುಳಾ ಪ್ರಭಾತ್ ಕಲಾವಿದರು ತಂಡದ ಹೆಮ್ಮೆಯ ಕೊಡುಗೆ
- ತೊಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಅಮೇರಿಕಾ ಅಮೇರಿಕಾ ಚಿತ್ರದ ನಾಯಕಿ ಹೇಮಾ ಪಂಚಮುಖಿ ಇದೇ ಪ್ರಭಾತ್ ಕುಟುಂಬದ ಕುಡಿ ಎನ್ನುವುದೂ ಗಮನಾರ್ಹ.
- ಅಂತರರಾಷ್ಟ್ರೀಯ ಮಟ್ಟದ ನೃತ್ಯಗಾರ್ತಿಯಾದ ಶ್ರೀಮತಿ ನಿರುಪಮಾ ರಾಜೇಂದ್ರ ಅವರು ಸಹಾ ಇದೇ ಕುಟುಂಬದವರು.
ಇಷ್ಟೆಲ್ಲಾ ಸಾಧಿಸುವುದರಲ್ಲಿಯೇ ತಮ್ಮ ಆಯಸ್ಸನ್ನು ಸವೆಸಿದ್ದರ ಪರಿಣಾಮ ತಮ್ಮ 68ನೇ ವಯಸ್ಸಿನಲ್ಲಿ 1982ರಲ್ಲಿ ನಿಧನರಾದರೂ ಅತ್ಯಂತ ಜತನದಿಂದ ಕಟ್ಟಿದ ಅವರ ಸಂಸ್ಥೆಯನ್ನು ಅವರ ಮಕ್ಕಳು ಮುಂದುವರೆಸಿಕೊಂಡು ಮೊದಲಿನ ರೂಪಕಗಳ ಜೊತೆ, ಶ್ರೀನಿವಾಸ ಕಲ್ಯಾಣ, ಶ್ರೀ ಕೃಷ್ಣ ವೈಜಯಂತಿ, ಶ್ರೀ ರಾಮ ಪ್ರತಿಕ್ಷಾ, ಮಹಿಷಾಸುರ ಮರ್ಧಿನಿ ಮುಂತಾದ ನೃತ್ಯ ರೂಪಕಗಳನ್ನು ಯಶಸ್ವಿಯಾಗಿ ರಂಗದ ಮೇಲೆ ತಂದಿದ್ದಾರೆ. ಪ್ರಭಾತ್ ಕಲಾವಿದರು ಈ ಪ್ರಯೋಗದಿಂದ ಪ್ರಭಾವಿತರಾಗಿ ಇವರ ಬಹುತೇಕ ರೂಪಕಗಳು, ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಮತ್ತು ಸಂಸ್ಕೃತ ಭಾಷೆಗಳಿಗೂ ಭಾಷಾಂತರಗೊಂಡು ದೇಶಾದ್ಯಂತ ಪ್ರದರ್ಶನವಾಗಿ ದಾಖಲೆಯನ್ನು ಸೃಷ್ಟಿಸಿದೆ.
ಸದಾ ಹಸನ್ಮುಖಿ ಮತ್ತು ಸಹನಶೀಲ ವ್ಯಕ್ತಿಯಾಗಿ, ಕಷ್ಟವೋ ನಷ್ಟವೋ, ದೇಹಿ ಎಂದು ಬಂದವರಿಗೆ ನಾಸ್ತಿ ಎನ್ನದೆ, ಮುಖಸಿಂಡರಿಸಿ ಕೊಳ್ಳದೇ, ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದ ದಾನಶೂರ ಕರ್ಣ ಎಂದರೂ ಅತಿಶಯೋಕ್ತಿಯೇನಲ್ಲ. ಅನೇಕ ಸಂಘ ಸಂಸ್ಥೆಗಳ ಪರವಾಗಿ ತಮ್ಮ ಪ್ರಭಾತ್ ತಂಡದ ಸಹಾಯಾರ್ಥ ಪ್ರದರ್ಶನಗಳನ್ನು ಉಚಿತವಾಗಿ ನೀಡುವ ಮೂಲಕ ಆ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಲ್ಲದೇ, ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಅಶಕ್ತ ಕಲಾವಿದರನ್ನು ತಮ್ಮ ಮನೆಯಲ್ಲಿಯೇ ಊಟ ಬಟ್ಟೆಯ ಜೊತೆಗೆ ಅಲ್ಪ ಸ್ವಲ್ಪ ಹಣವನ್ನೂ ನೀಡಿ ಆಶ್ರಯ ನೀಡಿದ ಆಶ್ರಯ ದಾತರಾಗಿದ್ದಲ್ಲದೇ, ಕಲಾತಪಸ್ವಿ ಗೋಪೀನಾಥ ದಾಸರು ತಮ್ಮ ವಂಶಪಾರಂಪರ್ಯ ಹರಿಕಥೆಯೊಂದಿಗೆ ಆರಂಭಿಸಿ, ಬಾಲ ನಟ, ಸಂಗೀತ ಶಿಕ್ಷಕ, ಪ್ರಭಾತ್ ಸೌಂಡ್ಸ್, ಪ್ರಭಾತ್ ರಂಗ ಸಜ್ಜಿಕೆ, ಪ್ರಭಾತ್ ಕಲಾವಿದರು ಹೀಗೆ ಲಲಿತಕಲೆಗಾಗಿಯೇ ತಮ್ಮನ್ನು ಮತ್ತು ತಮ್ಮ ಅವಿಭಕ್ತ ಕುಟುಂಬವನ್ನು ಜೋಡಿಸಿಕೊಂಡು ಕರ್ನಾಟಕ ಮತ್ತು ಕನ್ನಡದ ಸೊಗಡನ್ನು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಇನ್ನೂ ಅದರ ಸೊಗಡನ್ನು ಹೆಚ್ಚಿಸಿಕೊಂಡು ಹೋಗುತ್ತಲೇ ಇರುವ ಕಾರಣ ಗೋಪೀನಾಥ ದಾಸರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಈ ಲೇಖನ ವಿಕಿಪೀಡಿಯಾದ ಮಾಹಿತಿ ಆಧಾರವಾಗಿದೆ
ಶ್ರಿ ಗೋಪಿನಾಥ ದಾಸರ ಬಗ್ಗೆ ಈ ಬರಹ ಸೊಗಸಾಗಿದೆ
ಅವರು ನಿಜಕ್ಕೂ ಕನ್ವಡ ಕಲಿಗಶು
ಸಜ್ಜನಿಕೆಯ ಓಬ್ಬ ಶ್ರೆೇಷ್ಠ ಕಲಾವಿದ
ಅಪರೂಪದ ತುಂಬಾ ಓಳ್ಳೆಯ ವ್ಯಕ್ತಿ
LikeLiked by 1 person
ಧನ್ಯೋಸ್ಮಿ ಸರ್
LikeLike