ಗೊರೆ ಹಬ್ಬ (ಸಗಣಿ ಹಬ್ಬ)

ದೀಪಾವಳಿ ಹಬ್ಬವೆಂದರೆ ಮಡಿ ಹುಡಿಗಳು ಗೌಣವಾಗಿ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಹ ಹಬ್ಬ. ಬೆಳ್ಳಂಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸಾ ಬಟ್ಟೇ ಹಾಕಿಕೊಂಡು, ದೇವರಿಗೆ ಕೈ ಮುಗಿದು ಪಟಾಕಿ ಹೊಡೆದು. ಮಧ್ಯಾಹ್ನ ಅಮ್ಮಾ ಮಾಡಿದ ಮೃಷ್ಟಾನ್ನ ಭೋಜನ ಸವಿದು ಸಂಜೆ ಮನೆಯ ಅಂಗಳದಲೆಲ್ಲಾ ದೀಪಗಳನ್ನು ಹಚ್ಚಿ ಮತ್ತೆ ಸುರ್ ಸುರ್ ಬತ್ತಿ, ಮತಾಪು, ಹೂವಿನ ಕುಂಡ, ರಾಕೆಟ್ ಎಲ್ಲವನ್ನೂ ಸಿಡಿಸಿ ಸಂಭ್ರಮಿಸುವ ಹಬ್ಬ. ಆದರೆ, ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರಾಂತ್ಯಕ್ಕೆ ಹೊಂದಿಕೊಂಡೇ ಇರುವ ಭೌಗೋಳಿಕವಾಗಿ ತಮಿಳುನಾಡಿಗೇ ಸೇರಿದರೂ, ಕನ್ನಡಿಗರೇ ಬಹು ಸಂಖ್ಯಾತರಾಗಿರುವ ಗುಮ್ಮಟಾಪುರದಲ್ಲಿ ಸಾಂಪ್ರದಾಯಿಕವಾಗಿ ಊರಿನ ಆಬಾಲವೃದ್ಧರಾದಿಯಾಗಿ ಗಂಡಸರು ಪರಸ್ಪರ ಸಗಣಿಯನ್ನು ಎರೆಚಾರಿಕೊಂಡು ಪರಸ್ಪರ ಮನಸೋ ಇಚ್ಚೆ ಬಯ್ದಾಡಿಕೊಂಡು ಗೊರೆ ಹಬ್ಬವನ್ನು ವಿಲಕ್ಷಣ ಎನಿಸಿದರೂ ವಿಶಿಷ್ಟವಾಗಿ ಆಚರಿಸುತ್ತಾರೆ.

ಪ್ರತಿವರ್ಷ ನಾನಾ ಕಾರಣಕ್ಕೆ ದೇಶಾದ್ಯಂತ ವಲಸೆ ಹೋಗಿರುವ ಈ ಊರಿನವರು, ಯಾವುದೇ ಆಸ್ತಿ, ಅಂತಸ್ತು, ಹುದ್ದೆ ಎಂಬ ಹಮ್ಮು ಬಿಮ್ಮು ಇಲ್ಲದೇ ದೀಪಾವಳಿಯ ಸಮಯಕ್ಕೆ ಊರಿಗೆ ಬಂದು ಬಲಿಪಾಡ್ಯಮಿಯ ಮಾರನೇ ದಿನ ಜಾತಿ ಬೇಧದ ಮನೋಭಾವ ಇಲ್ಲದೇ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಸಗಣಿಯನ್ನು ಸಂಗ್ರಹಿಸಿ ಸಗಣಿ ಎರೆಚಾಟದ ಹಬ್ಬದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡು, ಒಬ್ಬರಿಗೊಬ್ಬರು ಸಗಣಿ ಎರಚಾಡಿಕೊಂಡು ಸಂಭ್ರಮಿಸಿ ಸಹಬಾಳ್ವೆ ಬೆಸೆಯುತ್ತಾ, ಮಾರನೇಯ ದಿನ ಮುಂದಿನ ವರ್ಷದ ಹಬ್ಬಕ್ಕೆ ಬರೋಣ ಎಂದು ಪರಸ್ಪರ ಮಾತನಾಡಿಕೊಂಡು ತಮ್ಮ ತಮ್ಮ ಊರಿಗೆ ಹಿಂದಿರುಗುವ ಪದ್ದತಿ ನೂರಾರು ವರ್ಷಗಳಿಂದಲೂ ರೂಡಿಯಲ್ಲಿದೆ.

ಈ ಗ್ರಾಮದವರು ಈ ರೀತಿಯಾಗಿ ಹಬ್ಬವನ್ನು ಆಚರಿಸುವ ಹಿಂದೆ ಒಂದು ಕುತೂಹಲಕಾರಿಯಾದ ಪೌರಾಣಿಕ ಕಥೆಯಿದೆ. ನೂರಾರು ವರ್ಷಗಳ ಹಿಂದೆ ಈ ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ದೇಶದಿಂದ ವ್ಯಕ್ತಿಯೊಬ್ಬರು ಬಂದಿದ್ದರಂತೆ. ಅವರು ಅಚಾನಕ್ಕಾಗಿ ಮರಣ ಹೊಂದಿದಾಗ ಅವನ ಅಂತಿಮ ಕ್ರಿಯೆಗಳನ್ನು ಮುಗಿಸಿದ ನಂತರ ಅವರ ಜೊತೆಯಲ್ಲಿ ಸದಾ ಕಾಲವೂ ಇರುತ್ತಿದ್ದ ಜೋಳಿಗೆ, ಬೆತ್ತ ಮತ್ತು ಅವರ ಇತರೇ ಎಲ್ಲಾ ವಸ್ತುಗಳನ್ನೂ ಮನೆಯ ಪಕ್ಕದಲ್ಲಿ ಸಗಣೀ ಸಂಗ್ರಹಿಸುವ ತಿಪ್ಪೇ ಗುಂಡಿಗೆ ಬಿಸಾಡಿದರಂತೆ. ಇದಾದ ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿಯ ಬಳಿ ಗೌಡರ ಎತ್ತಿನ ಗಾಡಿ ಹಳಿ ತಪ್ಪಿ ಆ ಜೊಳಿಗೆ ಮೇಲೆ ಹರಿದಾಗ ಅದರಲ್ಲಿದ್ದ ಲಿಂಗದ ಮೇಲೆ ಗಾಡಿಯ ಚಕ್ರ ಹರಿದು, ಆ ಲಿಂಗದಿಂದ ಧಾರಾಕಾರವಾದ ರಕ್ತ ಹರಿದು ಬಂದಿತಂತೆ. ಇದನ್ನು ನೋಡಿ ಊರನವರೆಲ್ಲಾ ಭಯಭೀತರಾಗಿದ್ದರೆಂತೇ. ಅದೇ ರಾತ್ರಿ ಆ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೋಷ ಪರಿಹಾರಕ್ಕಾಗಿ ಬೀರಪ್ಪನ ಗುಡಿ ಕಟ್ಟಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಅಚರಿಸಬೇಕು ಎಂದು ಗೌಡನಿಗೆ ಹೇಳಿತಂತೆ. ಆ ಕೂಡಲೇ ಆ ತಿಪ್ಪೆ ಇದ್ದ ಜಾಗದಲ್ಲಿಯೇ ಬೀರಪ್ಪನ ದೇವಸ್ಥಾನ ಕಟ್ಟಿ, ಗೊರೆಹಬ್ಬದ ಆಚರಣೆ ಆರಂಭವಾಯಿತೆಂಬ ಪ್ರತೀತಿ ಇದೆ.

ತಲತಲಾಂತರದಿಂದಲೂ ಈ ಹಬ್ಬದ ಅಂಗವಾಗಿ ಇಡೀ ಗ್ರಾಮವನ್ನು ತಳಿರು, ತೋರಣಗಳಿಂದ ಶೃಂಗಾರಗೊಳಿಸಿ ಊರಿನ ಸಣ್ಣ ಸಣ್ಣ ಮಕ್ಕಳು ತರುಣರೊಂದಿಗೆ ಊರಿನ ಎಲ್ಲಾ ಮನೆಗಳಿಗೂ ಹೋಗಿ ಸಗಣಿಯನ್ನು ಸಂಗ್ರಹಿಸಿ ತಂದು ದೇವಸ್ಥಾನದ ಬಳಿ ಒಟ್ಟು ಮಾಡುತ್ತಾರೆ

ಮಧ್ಯಾಹ್ನವಾಗುತ್ತಿದ್ದಂತೆ ಅವರೆಲ್ಲರೂ ಊರಿನ ಹೊರಗಡೆ ಇರುವ ಕಾರಪ್ಪ ದೇವಸ್ಥಾನಕ್ಕೆ ಬಂದು ತಮ್ಮ ತಮ್ಮ ಮೆನೆಗಳಿಂದ ತಂದಿದ್ದ ಎಣ್ಣೆಯಿಂದ ಪೂಜೆ ಸಲ್ಲಿಸಿ, ಬಳಿಕ ಕೆರೆಯಂಗಳದಲ್ಲಿ ಕತ್ತೆಯೊಂದನ್ನು ತಂದು ಅದನ್ನು ಚೆನ್ನಾಗಿ ತೊಳೆದು ಶೃಂಗರಿಸಿ, ಪೂಜೆ ಸಲ್ಲಿಸಿ, ಊರಿನ ಚಾಡಿಕೋರ ಎಂದು ಊರಿನೊಬ್ಬನನ್ನು ಬಿಂಬಿಸಿ ಆತನಿಗೆ ತೆಂಗಿನ ನಾರು ಹಾಗೂ ಒಣ ಹುಲ್ಲಿನಿಂದ ಭರ್ಜರಿಯಾದ ಗಿರಿಜಾ ಮೀಸೆಯಂತೆ ಕಟ್ಟಿ, ಆತನ ಮೈಗೆಲ್ಲ ವಿಭೂತಿ ಬಳಿದು ವಿವಿಧ ಗಿಡಗಳ ಸೊಪ್ಪುಗಳಿಂದ ಅಲಂಕರಿಸಿ, ಶೃಂಗರಿಸಿದ ಕತ್ತೆಯ ಮೇಲೆ ಕೂರಿಸಿ ಮೆರೆವಣಿಗೆ ಮಾಡುತ್ತಾ, ಅಶ್ಲೀಲ ಶಬ್ದಗಳಿಂದ ಮನಸೋ ಇಚ್ಚೆ ಬೈಯುತ್ತಾ ಸಂಭ್ರಮಿಸಿ, ಕೇಕೆ ಹಾಕುತ್ತಾ, ಸ್ವಲ್ಪ ದೂರ ಮೆರೆವಣಿಗೆ ಮಾಡಿದ ನಂತರ ಆತನನ್ನು ಕತ್ತೆಯಿಂದಿಳಿಸಿ, ಆ ಯುವಕರೆಲ್ಲರೂ ಕತ್ತೆಯನ್ನೇ ಹೊತ್ತುಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಅದನ್ನು ಬೀರೇಶ್ವರಸ್ವಾಮಿ ದೇವಸ್ಥಾನದ ಬಳಿ ತಂದು ಆ ವ್ಯಕ್ತಿಯ ಹುಲ್ಲಿನ ಮೀಸೆಯನ್ನು ಸಗಣಿ ರಾಶಿಯಲ್ಲಿ ನೆಟ್ಟು, ಬೀರೇಶ್ವರನಿಗೆ ಪೂಜೆ ಸಲ್ಲಿಸಿ ಸಗಣಿಯಾಟವನ್ನು ಆರಂಭಿಸುತ್ತಾರೆ.

ನಂತರ ಊರಿನ ನೂರಾರು ಹುಡುಗರು ಮತ್ತು ಯುವಕರು, ಸಗಣಿಯ ರಾಶಿಯೊಳಗೆ ಬಿದ್ದು ಎದ್ದು ಹೊರಳಾಡಿದ ನಂತರ ಸುಮಾರು ಒಂದುವರೆ ಎರಡು ಗಂಟೆಗಳ ಅವರವರ ಇಚ್ಚೆಗೆ ಅನುಗುಣವಾಗಿ ದಪ್ಪ ದಪ್ಪ ಸಗಣಿ ಉಂಡೆ ಮಾಡಿಕೊಂಡು ಪರಸ್ಪರ ಮನಸೋ ಇಚ್ಚೆ ಬೈದಾಡುತ್ತಾ ಯಾವುದೇ ಜಾತಿ, ಅಂತಸ್ತು, ಮೇಲು ಕೀಳುಗಳೆಂಬ ಭಾವವಿಲ್ಲದೇ ಪರಸ್ಪರ ಎರೆಚಾಡುತ್ತಾ ಸಂಭ್ರಮಿಸುತ್ತಾರೆ. ಆ ಅಶ್ಲೀಲ ಬೈಗುಳವೆಲ್ಲವೂ ಕೇವಲ ಆ ಕ್ಷಣಕ್ಕೆ ಮಾತ್ರವೇ ಸೀಮಿತವಾಗಿದ್ದು ಹಬ್ಬ ಮುಗಿದ ನಂತರ ಎಲ್ಲರೂ ಪರಸ್ಪರ ಸ್ನೇಹಭಾವದಿಂದ ಸಹಬಾಳ್ವೆ ನಡೆಸುವುದು ಗಮನಾರ್ಹವಾಗಿದೆ.

ವರ್ಷದಿಂದ ವರ್ಷಕ್ಕೆ ಈ ಹಬ್ಬ ಪ್ರಸಿದ್ಧಿ ಪಡೆಯುತ್ತಿದ್ದು ಆ ಊರಿನವರ ನೆಂಟರಿಷ್ಟರಲ್ಲದೇ, ಅಕ್ಕ ಪಕ್ಕದ ಊರುಗಳ ನೂರಾರು ಹುಡುಗರುಗಳು ಕೂಡಾ ಈ ಹಬ್ಬಕ್ಕೆ ಬಂದು ತಾವೂ ಹಬ್ಬದಲ್ಲಿ ಭಾಗವಹಿಸಿಯೋ ಇಲ್ಲವೇ ಕೆರೆಚಾಡುವವರಿಗೆ ಹುಮ್ಮಸ್ಸು ಕೊಡುತ್ತಲೋ ಸುಮಾರು ಎರಡು ಗಂಟೆಗಳ ಎಲ್ಲಾ ಕಷ್ಟ, ನಷ್ಟ ಮತ್ತು ನೋವುಗಳನ್ನು ಮರೆತು ಸಂಭ್ರಮಿಸುವುದೇ ಈ ಹಬ್ಬದ ವೈಶಿಷ್ಠ್ಯ. ಅದಕ್ಕಾಗಿಯೇ ಇಲ್ಲಿನ ಯುವಕರು ಎಲ್ಲಿಲ್ಲದ ಹುಮ್ಮಸ್ಸಿನಿಂದ ದೀಪಾವಳಿ ಹಬ್ಬ ಬರುವುದನ್ನೇ ಕಾಯುತ್ತಾ, ಗೊರೆ ಹಬ್ಬದಲ್ಲಿ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ.

ಸಗಣಿ ಎಂದು ಅಸಹ್ಯ ಪಡದೇ ಹಬ್ಬದ ಸಂಪ್ರದಾಯ ಎಂಬ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಗೊರೆಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಬೀರೇಶ್ವರನಲ್ಲಿ ಬೇಡಿಕೊಂಡರೆ ಒಳಿತಾಗುತ್ತದೆ ಎಂಬ ನಂಬಿಕೆಯೂ ಊರಿನವರಿಗೆದೆ. ಈ ರೀತಿ ಸಗಣಿಯನ್ನು ಪರಸ್ಪರ ಮೈ ಮೇಲೆ ಎರಚಡಿಕೊಳ್ಳುವುದರಿಂದ ವೈಜ್ಞಾನಿಕವಾಗಿಯೂ ಆ ವ್ಯಕ್ತಿಯ ಆರೋಗ್ಯ ವೃದ್ಧಿಯಾಗಲಿದೆ ಎಂಬ ಕಾರಣದಿಂದಾಗಿಯೇ ನಮ್ಮ ಹಿರಿಯರು ಈ ರೀತಿಯಲ್ಲಿ ಬೀರೇಶ್ವರ ಸ್ವಾಮಿಯ ನೆಪದಲ್ಲಿ ಈ ಊರಿನವರಲ್ಲದೇ, ಸುತ್ತ ಮುತ್ತಲ ಗ್ರಾಮಸ್ಥರೂ ಜಾತಿ ಭೇದ ಮರೆತು ಒಂದಾಗಿ ಸಗಣಿಯಾಟವನ್ನು ರೂಢಿಗೆ ತಂದಿರಬಹುದು ಎನ್ನುವುದು ಊರಿನ ಹಿರಿಯರೊಬ್ಬರ ವಿಶ್ಲೇಷಣೆ. ತಮ್ಮ ಗ್ರಾಮದಲ್ಲಿ ಮನೆಮುರುಕ ಚಾಡಿಕೋರರು ಇರಲೇ ಬಾರದು ಎಂಬ ಕಾರಣದಿಂದ ಸಾಂಕೇತಿಕವಾಗಿ ಅವನನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಅಶ್ಲೀಲ ಪದಗಳಿಂದ ಬೈಯುತ್ತಾ ಅವನ ಪ್ರತಿರೂಪವಾದ ಮೀಸೆಯನ್ನು ಸಗಣಿಯಲ್ಲಿ ನೆಟ್ಟು ನಂತರ ಎಲ್ಲರೂ ಅದನ್ನು ತುಳಿದುಹಾಕಿ, ಪರಸ್ಪರ ಸಗಣಿಯನ್ನು ಎರೆಚಾಡಿಕೊಂಡು ಸಹೋದರತೆಯ ಸಹಬಾಳ್ವೆ ಸದಾಕಾಲವೂ ಹಚ್ಚ ಹಸಿರಾಗಿರಲೆಂಬ ಉದ್ದೇಶದಿಂದ ರೂಡಿಯಲ್ಲಿರುವ ಈ ಹಬ್ಬ ನಿಜಕ್ಕೂ ವಿಶಿಷ್ಟವಲ್ಲದೇ, ನಮ್ಮ ಪೂರ್ವಜರ ಭೌದ್ಧಿಕ ಮಟ್ಟ ಮತ್ತು ವೈಜ್ಞಾನಿಕ ಜ್ಞಾನವನ್ನು ಎತ್ತಿ ತೋರಿಸುತ್ತದೆ ಎಂದರೂ ತಪ್ಪಾಗಲಾರದು ಅಲ್ವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s