ನಮಗೆಲ್ಲಾ ತಿಳಿದಿರುವಂತೆ ಐ.ಎ.ಎಸ್ ಅಧಿಕಾರಿಗಳೆಂದರೆ ಆಕಾಶದಿಂದ ನೇರವಾಗಿ ಈ ಧರೆಗೆ ಇಳಿದವರು ಎಂಬ ಹಮ್ಮು ಬಿಮ್ಮಿನಿಂದಲೇ ಸೂಟು ಬೂಟು ಧರಿಸಿಕೊಂಡು ಎಲ್ಲಿ ನೆಲದ ಮೇಲೆ ಕಾಲಿಟ್ಟರೆ ಅವರ ಕಾಲು ಸವೆದು ಹೋಗುತ್ತದೋ ಎಂದು ಸದಾಕಾಲವೂ ಐಶಾರಾಮಿ ಏಸಿ ಕಾರಿನಲ್ಲೇ ಓಡಾಡುತ್ತಾ ಏಸಿ ಕಛೇರಿಗಳಲ್ಲಿಯೇ ಕುಳಿತುಕೊಂಡು, ಆದಷ್ಟೂ ಜನರೊಂದಿಗೆ ಬೆರೆಯದೇ, ದೂರವೇ ಇದ್ದು ಅಧಿಕಾರವನ್ನು ಚಲಾಯಿಸುವರು ಎಂದೇ ಎಲ್ಲರ ಭಾವನೆ. ಆದರೆ ಇದಕ್ಕೆಲ್ಲವೂ ತದ್ವಿರುದ್ಧಂತೆ ಐ.ಎ.ಎಸ್ ಅಧಿಕಾರಿ ವರ್ಗದಲ್ಲಿಯೇ ಓರ್ವ ಸಂತ ಎಂದು ಬಣ್ಣಿಸಲ್ಪಟ್ಟ ಮತ್ತು ಧರಿಸುವ ವೇಷ ಭೂಷಣ, ನಡೆ ನುಡಿಗಳಲ್ಲಿಯೂ ಹಾಗೂ ನೋಡಲಿಕ್ಕೂ ಸಂತನ ರೀತಿಯಲ್ಲಿಯೇ ನೀಳವಾದ ಗಡ್ಡ, ಸದಾ ಮಂದಹಾಸದಿಂದ ತುಂಬಿರುವ ವದನ ಹಾಗೂ ಜೇನಿನಂತಹ ಮನಸ್ಸಿನಿಂದ ಹೊರಹೊಮ್ಮುವ ಸವಿಯಾದ ಮಾತುಗಳ ಅಧಿಕಾರಿ. ದೂರದ ಪಂಜಾಬಿನಿಂದ ಬಂದಿದ್ದರೂ, ಕನ್ನಡಿಗರೇ ನಾಚಿಕೆ ಪಟ್ಟುಕೊಳ್ಳುವಷ್ಟು, ಕರ್ನಾಟಕವನ್ನೂ, ಕನ್ನಡವನ್ನೂ ಮತ್ತು ಕನ್ನಡ ನಾಡಿನ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಕನ್ನಡದಲ್ಲಿ ಸುಲಲಿತವಾಗಿ ಮಾತನಾಡುವುದಲ್ಲದೇ ತಮ್ಮೆಲ್ಲಾ ವ್ಯವಹಾರಗಳನ್ನೂ ಕನ್ನಡಲ್ಲಿಯೇ ಮಾಡುವ, ಕನ್ನಡ ನಾಡು ಕಂಡ ಅತ್ಯಂತ ನಿಸ್ಪೃಹಿ ಹಿರಿಯ ಅಧಿಕಾರಿಗಳಾಗಿದ್ದ ಶ್ರೀ ಚಿರಂಜೀವಿ ಸಿಂಗ್ ಅವರೇ ನಮ್ಮ ಈ ದಿನದ ಕನ್ನಡದ ಕಲಿಗಳು ಕಥಾನಾಯಕರು.
1945ರಲ್ಲಿ ಭಾರತದ ಪಂಜಾಬ್‌ನಲ್ಲಿ ಜನಿಸಿದ ಶ್ರಿ ಚಿರಂಜೀವಿ ಸಿಂಗ್ ಓದಿನಲ್ಲಿ ಬಹಳ ಚುರುಕಾಗಿದ್ದು ತಮ್ಮ ವಿದ್ಯಾಭ್ಯಾಸವನ್ನೆಲ್ಲವೂ ಉತ್ತರ ಭಾರತದಲ್ಲಿಯೇ ಮುಗಿಸಿ, ಜನ ಸೇವೆ ಮಾಡಬೇಕೆಂಬ ಉತ್ಸಾಹದಿಂದಾಗಿ ಉತ್ತಮ ಶ್ರೇಣಿಯಲ್ಲಿ ಐ.ಎ.ಸ್ ಪದವಿ ಪಡೆದು 1971 ಕರ್ನಾಟಕ ಕ್ಯಾಡೇರ್‌ನಲ್ಲಿ ಆಯ್ಕೆಯಾಗಿ ಕರ್ನಾಟಕ ರಾಜ್ಯದಲ್ಲಿ ತಮ್ಮ ಸೇವೆಯನ್ನು ಆರಂಭಿಸುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ ಚಿರಂಜೀವಿ ಸಿಂಗ್ ಸೇವೆ ಮಾಡದ ಇಲಾಖೆಯಿಲ್ಲ ಎನ್ನುವಂತೆ 2005 ರಲ್ಲಿ ಕರ್ನಾಟಕದ ಅಭಿವೃದ್ಧಿ ಆಯುಕ್ತರಾಗಿ ಮತ್ತು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗುವವರೆಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಉತ್ತರ ಭಾರತದಿಂದ ಕರ್ನಾಟಕಕ್ಕೆ ಬರುವ ಬಹುತೇಕ ಐ.ಎ.ಎಸ್. ಅಧಿಕಾರಿಗಳು ಅಲ್ಲಿದೇ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಎನ್ನುವಂತೆ ಇಲ್ಲಿಗೆ ಬಂದರೂ ಇಲ್ಲಿಯ ಭಾಷೆಯನ್ನು ಕಲಿಯುವುದಿಲ್ಲ. ಅಕಸ್ಮಾತ್ ಕಲಿತರೂ ಕೇವಲ ಅಲ್ಪ ಸ್ವಲ್ಪ ವ್ಯಾವಹಾರಿಕ ಕನ್ನಡವನ್ನು ಕಲಿತಿರುತ್ತಾರೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಚಿರಂಜೀವಿ ಸಿಂಗ್ ಕನ್ನಡ ಕಸ್ತೂರಿಯನ್ನು ಒಪ್ಪಿ ಅಪ್ಪಿ ಕೊಂಡರಲ್ಲದೇ, ಕನ್ನಡಿಗರೂ ಹೆಮ್ಮೆ ಪೆಡುವಂತೆ ಅತ್ಯುತ್ತಮವಾಗಿ ಕನ್ನಡದಲ್ಲಿ ಮಾತನಾಡುವುದಲ್ಲದೇ, ಅಚ್ಚು ಕಟ್ಟಾಗಿ ಕಾವ್ಯಗಳನ್ನು ಬರೆಯುವ ಸಾಮರ್ಥ್ಯವನ್ನೂ ರೂಡಿಸಿಕೊಂಡಿದ್ದಲ್ಲದೇ, ಅವರಿಗೆ ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಂತೆ ಅಗಾಧವಾದ ಜ್ಞಾನವನ್ನು ಆಸಕ್ತಿಯಿಂದ ಬೆಳೆಸಿಕೊಂಡರು. ಕನ್ನಡದ ಶರಣರು ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಪಂಜಾಬಿ ಭಾಷೆಗೆ ತರ್ಜುಮೆ ಮಾಡಿದ್ದನ್ನು ಶ್ಲಾಘಿಸಿ, ಕನ್ನಡದ ಖ್ಯಾತ ಸಾಹಿತಿಗಳು ಮತ್ತು ವಿಮರ್ಶಕರಾದ ಡಾ. ಸುಮತೀಂದ್ರ ನಾಡಿಗರು, ಚಿರಂಜೀವಿ ಸಿಂಗ್ ಅವರನ್ನು ಕನ್ನಡದ ಕಿಟ್ಟಲ್ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯೇನಲ್ಲ.
ಚಿರಂಜೀವಿ ಸಿಂಗ್ ಅವರು ಕನ್ನಡವನ್ನು ಎಷ್ಟರ ಮಟ್ಟಿಗೆ ತಮ್ಮ ಭಾಷೆ ಎಂದು ಅಪ್ಪಿಕೊಂಡಿದ್ದರು ಎಂದರೆ, ಒಮ್ಮೆ ಅವರ ತವರು ರಾಜ್ಯವಾದ ಪಂಜಾಬಿನಿಂದ ಬಂದ ಅಧಿಕಾರಿಗಳು ತಮ್ಮ ಕಚೇರಿಯ ವ್ಯವಹಾರಕ್ಕೆ ಸಂಬಂಧ ಪಟ್ಟ ಸರ್ಕಾರಿ ಪತ್ರವೊಂದನ್ನು ಚಿರಂಜೀವಿ ಸಿಂಗ್ ಅವರಿಗೆ ಬರೆಯುವಾಗ, ಹೇಗೂ ಈ ಅಧಿಕಾರಿಗಳು ತಮ್ಮವರೇ ಅಲ್ಲವೇ ಎಂದೆಣಿಸಿ, ಆ ಪತ್ರವನ್ನು ಪಂಜಾಬಿ ಭಾಷೆಯಲ್ಲೇ ಬರೆದಿದ್ದರು. ಚಿರಂಜೀವಿಸಿಂಗ್ ಅವರು ಆ ಪತ್ರಕ್ಕೆ ಪ್ರತ್ಯುತ್ತವನ್ನು ಕನ್ನಡದಲ್ಲಿಯೇ ಕಳುಹಿಸಿ ಅವರಿಗೆ ಮೌನವಾಗಿ ಸರಿಯಾದ ಪಾಠ ಕಲಿಸುವ ಮೂಲಕ ತಮ್ಮ ಕನ್ನಡತನ ಮತ್ತುಕನ್ನಡ ಪ್ರೇಮವನ್ನು ಮೆರೆದಿದ್ದರು.
ಚಿರಂಜೀವಿ ಸಿಂಗ್ ಅವರ ಪ್ರಕಾರ ಕಲಿಯುವುದು ಎಂದರೆ ಕೇವಲ ತರಗತಿ ಕೊಠಡಿಯೊಳಗೆ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದೇ ಶಿಕ್ಷಣವಲ್ಲ. ಜನಸಾಮಾನ್ಯರೊಂದಿಗೆ ಅಧಿಕಾರದ ದರ್ಪವಿಲ್ಲದೇ ಸಾಮಾನ್ಯ ಮನುಷ್ಯರಂತೆ ವ್ಯವಹರಿಸುವ ಮೂಲಕ ಸಾಕಷ್ಟು ಕಲಿಯುವುದಿದೆ ಎಂದು ಹೇಳುತ್ತಿದ್ದಿದ್ದಲ್ಲದೇ, ಅವರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ರಾತ್ರಿಯ ಪ್ರಯಾಣ ಮಾಡಲು ಬಯಸದೇ, ಹೆಚ್ಚಿನ ಸಮಯ ಹಗಲಿನ ವೇಳೆಯಲ್ಲಿಯೇ ಮಾತ್ರ ಪ್ರಯಾಣ ಮಾಡಲು ಇಚ್ಚಿಸುತ್ತಿದ್ದರು. ಈ ರೀತಿಯಾಗಿ ಹಗಲಿನಲ್ಲಿ ಸಂಚರಿಸಿವಾಗ ಜನರೊಂದಿಗೆ ಬೆರೆಯಲು ಸಹಾಯವಾಗುವುದಲ್ಲದೇ ಅವರ ಸಂಕಷ್ಟಗಳನ್ನು ಅರಿಯಲು ಸಹಕಾರಿಯಾಗುತ್ತದೆ ಎಂದು ಹೇಳುತ್ತಿದ್ದರು ಇದಕ್ಕೆ ಪುರಾವೆಯಂತೆ ತಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಅವರಿಗೆ ಹಳ್ಳಿಯಲ್ಲಿ ಕೆಲಸ ಮಾಡಲು ಸೂಚನೆ ಬಂದಿತ್ತು. ಆಗ ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಹಾಗೆ ವಾಸ್ತವ್ಯ ಮಾಡಿದ್ದರಿಂದಲೇ ಅಲ್ಲಿನ ಜನರಿಗೆ ಕುಡಿಯಲು ಹಗರಿ ಹಳ್ಳದ ಒರತೆ ನೀರಷ್ಟೇ ಇತ್ತು ಎಂಬುದನ್ನು ಅರಿತು ಅ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗಿತ್ತು ಎಂದು ನೆನಪಿಸಿಕೊಂಡಿದ್ದರು.
ಚಿರಂಜೀವಿಸಿಂಗ್ ಅವರ ಬಗ್ಗೆ ಪ್ರಸ್ತುತ ಅಥವಾ ನಿವೃತ್ತ ಅಧಿಕಾರಿಗಳನ್ನು ವಿಚಾರಿಸಿದಲ್ಲಿ ಅವರಿಂದ ಬರುವುದು ಗೌರವ ಹಾಗೂ ಮೆಚ್ಚುಗೆಯ ಮಾತುಗಳೇ. ತಮ್ಮ ಜನಪರ ಗುಣಕ್ಕೆ ಪ್ರಸಿದ್ಧರಾಗಿದ್ದ ಚಿರಂಜೀವಿ ಸಿಂಗ್ ಕುರಿತಂತೆ, ಅವರಿಂದ ಕೇಳಿಬರುವ ಮಾತುಗಳೆಂದರೆ, ಕರ್ನಾಟಕ ರಾಜ್ಯ ಕಂಡ ಅನೇಕ ಅತ್ಯುತ್ತಮ ಅಧಿಕಾರಿಗಳಲ್ಲಿ ಚಿರಂಜೀವಿ ಸಿಂಗ್ ಅಗ್ರಗಣ್ಯರು. ಕೊಂಚವೂ ಭ್ರಷ್ಟರಲ್ಲದ, ಅತ್ಯಂತ ಪ್ರಾಮಾಣಿಕರಾದ, ಅಧಿಕಾರದ ಅಹಂಕಾರವಿಲ್ಲದೇ, ಕಷ್ಟಗಳನ್ನು ಹೇಳಿಕೊಂಡು ತಮ್ಮ ಬಳಿ ಬರುವ ಜನರನ್ನು ಕಂಡರೆ ತಿರಸ್ಕಾರವಾಗಲೀ ಉಡಾಫೆತನವನ್ನು ತೋರಿಸಿದೇ, ಅವರ ಸಂಕಷ್ಟವನ್ನು ವ್ಯವಧಾನದಿಂದ ಕೇಳುವ ಸಂವೇದನಾ ಶೀಲ ಅಧಿಕಾರಿ ಎಂದೇ ಬಣ್ಣಿಸುತ್ತಾರೆ ಎಂದರೆ ಚಿರಂಜೀವಿ ಸಿಂಗ್ ಅವರ ಜನಪ್ರಿಯತೆ ಎಷ್ಟಿತ್ತು ಎಂಬುದು ಅರಿವಾಗುತ್ತದೆ.
ಅವರ ನೇರ ಮತ್ತು ನಿಷ್ಟುರವಾದವನ್ನು ಅರಿಯಲು ಈ ಪ್ರಸಂವೊಂದೇ ಸಾಕು. ಕೆಲ ದಶಕಗಳ ಹಿಂದೆ ಮುಖ್ಯಮಂತ್ರಿಗಳಾಗಿದ್ದವರು, ಮಾತಿನ ಭರದಲ್ಲಿ, ರಾಷ್ಟ್ರದ ಪ್ರಖರ ಹೋರಾಟಗಾರರೆಂದೇ ಪ್ರಸಿದ್ದಿ ಪಡೆದಿದ್ದ ಅಂದಿನ ಕೇಂದ್ರ ಮಂತ್ರಿಯೊಬ್ಬರ ಕುರಿತಂತೆ ನೀಡಿದ್ದ ವಿವಾದಾಸ್ಪದ ಹೇಳಿಕೆಯೊಂದು ದೇಶಾದ್ಯಂತ ಎಲ್ಲಾ ಪತ್ರಿಕೆಗಳಲ್ಲಿಯೂ ಪ್ರಕಟವಾಗಿ ದೆಹಲಿಯ ನಾಯಕರನ್ನು ಕೆರಳಿಸಿದ್ದಲ್ಲದೇ, ಉರಿಯುವ ಬೆಂಕಿಗೆ ತುಪ್ಪಾ ಸುರಿದಂತೆ, ದೆಹಲಿ ನಾಯಕರೂ ಅದಕ್ಕೆ ಅಷ್ಟೇ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿ ಕಾವನ್ನು ಹೆಚ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರು ಮುಖ್ಯಮಂತ್ರಿಗಳ ಸ್ಪಷ್ಟೀಕರಣ ಕೇಳಿದಾಗ ಅದಕ್ಕೆ ಉತ್ತರಿಸಲು ಬಯಸದೇ, ಮುಖ್ಯಮಂತ್ರಿಗಳ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಲು ಆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ಚಿರಂಜೀವಿ ಸಿಂಗ್ ಅವರಿಗೆ ಸೂಚನೆ ಕೊಟ್ಟರು. ಅದಕ್ಕೆ ಪ್ರತಿಯಾಗಿ ಎದ್ದು ನಿಂತ ಸಿಂಗ್ ಅವರು, ತಮ್ಮ ಎಂದಿನ ಮೆಲುಧ್ವನಿಯಲ್ಲಿಯೇ, ಸ್ಪಷ್ಟವಾಗಿ ನಾನು ಆ ರೀತಿ ಸ್ಪಷ್ಟೀಕರಣ ಕೊಡಲು ಸಾಧ್ಯವಿಲ್ಲ. ಏಕೆಂದರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆಯೇ ಮುಖ್ಯಮಂತ್ರಿಗಳು ಆ ರೀತಿಯ ಹೇಳಿಕೆ ನೀಡಿದಾಗ ನಾನು ಕೂಡಾ ಅಲ್ಲಿಯೇ ಉಪಸ್ಥಿತನಿದ್ದೆ ಎಂದು ಖಡಾಖಂಡಿತವಾಗಿ ನಿರಾಕರಿಸಿದರು. ಚಿರಂಜೀವಿ ಸಿಂಗ್ ಅವರ ಸತ್ಯಸಂಧತೆ, ನಿಷ್ಠುರತೆ ನೆರೆದಿದ್ದ ಪ್ರಕರ್ತರನ್ನು ನಿಬ್ಬೆರಗಾಗಿಸಿತ್ತು.
1984ರಲ್ಲಿ ದೇಶದಲ್ಲಿ ಅಪರೇಷನ್ ಬ್ಲೂ ಸ್ಟಾರ್ ಮೂಲಕ ಸಿಖ್ ಧರ್ಮಕ್ಕೆ ಮತ್ತು ಸಿಖ್ ಜನಾಂಗದ ಭಾವನೆಗಳಿಗೆ ಆದ ತೀವ್ರವಾದ ಆಘಾತವನ್ನು ಪ್ರತಿಭಟಿಸಿ ನಡೆದ ಮೌನ ಮೆರವಣೆಗೆಯಲ್ಲಿ ಮನನೊಂದ ಒಬ್ಬ ಸಿಖ್ಖರಾಗಿ ಚಿರಂಜೀವಿ ಸಿಂಗ್ ಅವರು ಭಾಗವಹಿಸಿ ಅಂದಿನ ದೆಹಲಿ ಸರ್ಕಾರದ ದೊರೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಈ ದಕ್ಷ ಅಧಿಕಾರಿಯ ಪರವಹಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದರು.
ಅವರ ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಸೇವೆಯಲ್ಲಿದ್ದಾಗಲೇ ತೀರಿಕೊಂಡ ರಾಜು ಎಂಬ ಚಾಲಕರ ಪಾರ್ಥಿವ ಶರೀರವನ್ನು ಮೈಸೂರಿಗೆ ಕರೆದೊಯ್ಯುವಾಗ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಗೌರವ ತೋರಿಸಿದ್ದಲ್ಲದೇ, ತಮ್ಮ ಇಲಾಖೆಯಲ್ಲಿ ಯಾವುದೇ ಸಿಬ್ಬಂದಿ ಅಥವಾ ಅವರ ಕುಟುಂಬಸ್ಥರು ತೀರಿಕೊಂಡಾಗ ಅವರ ಮನೆಗಳಿಗೆ ಹೋಗಿ ಸಾಂತ್ವನ ನೀಡುತ್ತಿದ್ದಲ್ಲದೇ, ಸಾಧ್ಯವಾದಲ್ಲಿ ಅಂತಿಮ ಕ್ರಿಯೆಯಲ್ಲಿಯೂ ಭಾಗವಹಿಸುತ್ತಿದ್ದದ್ದು ಅವರ ಮಾನವೀಯ ಗುಣಗಳನ್ನು ಎತ್ತಿ ತೋರಿಸುತ್ತದೆ.
ಆವರು ನಿವೃತ್ತರಾದ ಸಮಯದಲ್ಲಿ ದಯವಿಟ್ಟು ನನ್ನ ಬಗ್ಗೆ ಯಾವುದೇ ಲೇಖನ, ಪುಸ್ತಕಗಳು ಬೇಡ. ಏನೋ ಒಳ್ಳೆಯ ವಿದ್ಯಾಭ್ಯಾಸ ದೊರಕಿತು ಐಎಎಸ್ ತೇರ್ಗಡೆಯಾದೆ. ನನ್ನ ತಂದೆ-ತಾಯಿ ಪುಣ್ಯದಿಂದ ನನಗೆ ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿದೆ ಎಂದು ಅತ್ಯಂತ ವಿನಮ್ರವಾಗಿ ಕೋರಿಕೊಂಡಿದ್ದಲ್ಲದೇ, ಅವರು ಜಿಲ್ಲಾಧಿಕಾರಿಯಾಗಿ 35-40 ವರ್ಷಗಳ ಹಿಂದೆ ಸೇವೆ ಸಲ್ಲಿಸಿದ್ದ ಸ್ಥಳಗಳಲ್ಲಿ ಅವರಿಗೆ ಸಹಕರಿಸಿದ ಅನೇಕರನ್ನು ಅತ್ಯಂತ ಗೌರವ ಮತ್ತು ಹೆಮ್ಮೆಯಿಂದ ಸ್ಮರಿಸಿಕೊಳ್ಳುವ ದೊಡ್ಡಗುಣ ಚಿರಂಜೀವಿ ಸಿಂಗ್ ಅವರದ್ದಾಗಿದೆ.
ನಿವೃತ್ತಿಯ ನಂತರ ಪಂಜಾಬಿಗೆ ಮರಳದೇ ಕರ್ನಾಟಕದಲ್ಲಿಯೇ ಉಳಿದು ಕೊಂಡ ಶ್ರೀಯುತರು, ಗ್ರಾಮೀಣಾಭಿವೃದ್ಧಿ, ಪರಿಸರ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ಸರ್ಕಾರೇತರ ಸಂಸ್ಥೆಗಳೊಂದಿಗೆ ಇಂದಿಗೂ ಉತ್ತಮವಾದ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಂದೆಯವರು ತೀರಿಕೊಂಡಾಗ ಅವರ ಅಂತಿಮ ಕ್ರಿಯೆಯನ್ನು ಮಂಡ್ಯದಲ್ಲಿಯೇ ಜರುಗಿಸಿ ಆ ಚಿತಾಭಸ್ಮವನ್ನೂ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಿ ತಂದೆಯ ಮತ್ತು ಕನ್ನಡ ನಾಡಿನ ಪವಿತ್ರ ಕಾವೇರಿ ನದಿಯ ಕುರಿತಂತೆ ಅವರಿಗಿದ್ದ ಗೌರವವನ್ನು ಎತ್ತಿ ತೋರಿಸಿದ್ದರು ಚಿರಂಜೀವಿಸಿಂಗ್ ಅವರು.
- ತಮ್ಮ ಸೇವಾವಧಿಯಲ್ಲಿ ಪ್ಯಾರಿಸ್‌ನ ಯುನೆಸ್ಕೋದ ಭಾರತದ ರಾಯಭಾರಿಯಾಗಿದ್ದರು.
- 2005ರಲ್ಲಿ ಅವರ ಸಾಧನೆಗಳಿಗಾಗಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.
ಈ ಹಿರಿಯ ವಯಸ್ಸಿನಲ್ಲೂ ಯಾವುದೇ ಅಸೌಖ್ಯವಿದ್ದರೂ ಸದಾ ಕಾಲವೂ ಮಂದಹಾಸದಿಂದ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಜಗತ್ತೇ ಸಾಮಾಜಿಕ ಅಂತರ್ಜಾಲಕ್ಕೆ ಶರಣಾಗಿರುವಾಗ ಇಂದಿಗೂ ಮೊಬೈಲ್ ಉಪಯೋಗಿಸದೇ, ಓಡಾಟಕ್ಕೆ ಸ್ವಂತ ಕಾರು ಹೊಂದಿಲ್ಲದ ಚಿರಂಜೀವಿಸಿಂಗ್ ಅನುರೂಪ ಮತ್ತು ಅನುಕರಣಿಯ ಎನಿಸಿಕೊಳ್ಳುತ್ತಾರೆ. ನಾಡಿಗೆ ಹೆಮ್ಮೆ ತರುವ, ಆಡಳಿತಕ್ಕೆ ಶಕ್ತಿ ಕೊಟ್ಟಿರುವ, ರಾಜ್ಯದ ಜನತೆಯೊಂದಿಗೆ ಬೆರೆತು ಅವರ ಕಷ್ಟ ಸುಖಗಳು ತನ್ನ ಸುಖ ಎಂದೆಣಿಸಿ ಸದಾ ತನ್ನಿಂದ ಯಾವ ರೀತಿ ಒಳ್ಳೆಯ ಕೆಲಸಗಳಾಗಬಹುದು ಎಂದು ಸದಾ ಚಿಂತಿಸಿ ಅದರಂತೆಯೇ ನಡೆದು ಕೊಂಡಿದ್ದಲ್ಲದೇ, ಕನ್ನಡದ ಚಂದಸ್ಸುಗಳಲ್ಲಿಯೇ ಕಾವ್ಯವನ್ನು ಬರೆಯುವಷ್ಟು ಕನ್ನಡವನ್ನು ಕಲಿತು ನಮ್ಮ ಕನ್ನಡಿಗರೇ ಆಗಿರುವ ಶ್ರೀ ಚಿರಂಜೀವಿ ಸಿಂಗ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?