ಫುಟ್ಬಾಲ್ ದಂತಕಥೆ, ಡೀಗೋ ಮರಡೋನಾ

ಅದು ಎಂಭತ್ತರ ದಶಕ. ಆಗ ತಾನೇ ದೂರದರ್ಶನದ ಕೇಂದ್ರ ಬೆಂಗಳೂರಿನಲ್ಲಿ ಆರಂಭವಾಗಿ ಉದ್ದ ಉದ್ದದ ದೊಡ್ಡಾದಾದ ಆಂಟೇನಾದ ಮುಖಾಂತರ ಕಪ್ಪು ಬಿಳುಪು ಟಿವಿ ಕೆಲವೇ ಕೆಲವು ಬೆರಳೆಣಿಕೆಯವರ ಮನೆಯಲ್ಲಿತ್ತು. ಅದರ ಮೂಲಕವೇ ಕ್ರಿಕೆಟ್ ಪುಟ್ಬಾಲ್ ಮತ್ತು ಟೆನ್ನಿಸ್ ಮುಂತಾದ ಆಟಗಳ ಪಂದ್ಯಾವಳಿಯನ್ನು ನೋಡಿ ಕಲಿಯಲಾರಂಭಿಸಿದ್ದ ಕಾಲವದು.

ಸಾಮಾನ್ಯವಾಗಿ ಎಲ್ಲರೂ No. 1 ಆಗಿರಲು ಬಯಸುತ್ತಾರೆ. ಆದರೆ ಆಗ ಬಹುತೇಕ ನನ್ನ ವಯಸ್ಸಿನ ಹುಡುಗರಿಗೆ No.10 ಮೇಲೆ ವಿಶೇಷವಾದ ಮಮಕಾರ ಇಂದಿನಂತೆ T-Shirtಗಳು ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ದೊರಕದಿದ್ದ ಕಾರಣ, ನಮ್ಮ ನಮ್ಮ ಬನಿಯನ್ ಗಳ ಮೇಲೆ ನಾವೇ Stencil ಗಳನ್ನು ಕತ್ತರಿಸಿ, ಸುತ್ತಮುತ್ತಲ ಮನೆಯಲ್ಲಿ ಬಣ್ಣ ಬಳಿಸುತ್ತಿದ್ದರೆ ಅವರ ಬಳಿ ಕಾಡೀ ಬೇಡಿ ಅಲ್ಪ ಸ್ವಲ್ಪ ಪೇಂಟ್ ತೆಗೆದುಕೊಂಡು ನಮ್ಮ ಬನಿಯನ್ ಮೇಲೇ ನಾವೇ ಖುದ್ದಾಗಿ No.10 ಅಚ್ಚೊತ್ತಿಕೂಂಡು ಪುಟ್ಬಾಲ್ ಮೈದಾನಕ್ಕೆ ಇಳಿಯುತ್ತಿದ್ದ ಮಜವನ್ನು ವರ್ಣಿಸಲಸದಳ.

ಈ ರೀತಿಯಾಗಿ ಬಾಲ್ಯದಲ್ಲಿ ನಮಗೆಲ್ಲಾ ಫುಟ್ಬಾಲ್ ಹುಚ್ಚನ್ನು ಹತ್ತಿಸಿದ ಪುಟ್ಬಾಲ್ ದಂತಕಥೆಯೇ ಡೀಗೋ ಮರಡೋನ. ಫುಟ್ವಾಲಿನ ಮತ್ತೊಬ್ಬ ದಂತಕಥೆ ಪೀಲೇ ಅದಾಗಲೇ ನಿವೃತ್ತರಾಗಿದ್ದ ಕಾರಣ ಅವರ ಆಟವನ್ನು ನೋಡಿರಲಿಲ್ಲವಾದರಿಂದ ನಮಗೆಲ್ಲರಿಗೂ No.10 ಜೆರ್ಸಿ ಧರಿಸಿಕೊಂಡು ಕುಳ್ಳಗಿನ ಮರಡೋನ ಪಾದರಸದಂತೆ ಇಡೀ ಮೈದಾನದಲ್ಲಿ ಓಡಾಡುತ್ತಿದ್ದದ್ದನ್ನು ನೋಡಿ ಪುಳಕಿತರಾಗಿ, ಅದೇ No.10 ಬನಿಯನ್ ಧರಿಸಿಕೊಂಡು ಮೈದಾನಕ್ಕೆ ಇಳಿಯುತ್ತಿದ್ದಂತೆಯೇ ನಮ್ಮಲ್ಲಿ ಮರಡೋನ ಪರಕಾಯ ಪ್ರವೇಶವಾದನೇನೋ ಎಂಬ ಹುರುಪಿನಲ್ಲಿ ಆಟವಾಡುತ್ತಿದ್ದ ನೆನಪು ಇನ್ನೂ ಹಚ್ಚಹಸಿರಾಗಿದೆ

ವಿಶ್ವದಲ್ಲಿ ABC (Argentine, Brazil & Chili) ದೇಶಗಳೆಂದೇ ಕರೆಯಲ್ಪಡುವ ಅರ್ಜೆಂಟೀನಾದ ಬ್ಯೂನೆಸ್ ಐರೀಸ್ಸಿನ ಲಾನೀಸ್ ಎಂಬ ಕೊಳಗೇರಿ ಪ್ರದೇಶದಲ್ಲಿ 1960ರ ಅಕ್ಟೋಬರ್ 30 ರಂದು ಮರಡೋನಾ ಜನಿಸುತ್ತಾರೆ. ನಾಲ್ಕು ಹೆಣ್ಣುಮಕ್ಕಳ ನಂತರ ಬಡ ಕುಟುಂಬದಲ್ಲಿ ಜನಿಸಿದ ಗಂಡು ಮಗುವನ್ನು ಮುದ್ದಿನಿಂದಲೇ ಬೆಳೆಸುತ್ತಾರೆ. ತನ್ನ ಎಂಟನೆಯ ವಯಸ್ಸಿನಲ್ಲಿಯೇ ತನ್ನ ಕಾಲ್ಚಕದ ಪ್ರತಿಭೆಯನ್ನು ಆನಾವರಣಗೊಳಿಸಿದ ಮರಡೋನಾ ತನ್ನ ನೆರೆಹೊರೆಯ ಕ್ಲಬ್ ಎಸ್ಟ್ರೆಲ್ಲಾ ರೋಜಾದಲ್ಲಿ ಆಡುತ್ತಿದ್ದಾಗಲೇ ಮುಂದೆ ಈ ಬಾಲಕ ಅಪ್ರತಿಮ ಆಟಗಾರ ಆಗಬಲ್ಲ ಎಂದು ಗುರುತಿಸಲ್ಪಡುತ್ತಾನೆ. ಅಲ್ಲಿಂದ ಮರಡೋನಾ ಫುಟ್ಬಾಲ್ ಪಯಣ ಆರಂಭವಾಗಿ. ಅರ್ಜೆಂಟೈನಾ ಕಿರಿಯರ ತಂಡದ ಮೂಲಕ 1976ರಲ್ಲಿ ರಾಷ್ಟ್ರೀಯ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿದರು. 5 ವರ್ಷಗಳ ಕಾಲ ಕಿರಿಯರ ತಂಡವನ್ನು ಭಾಗವಾಗಿ ಮರಡೋನಾ 167 ಪಂದ್ಯಗಳಲ್ಲಿ 115 ಗೋಲ್ ಗಳಿಸಿ, ಉತ್ತಮ ಯಶಸ್ಸು ಗಳಿಸಿದ ಕಾರಣ. 1976ರಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿ ಹಂಗೇರಿಯ ವಿರುದ್ಧ ಮೊದಲ ಬಾರಿಗೆ ಅರ್ಜೈಂಟೈನಾ ಪರವಾಗಿ ಅಂತರಾಷ್ಟ್ರೀಯ ಪಂದ್ಯವನ್ನಾಡುತ್ತಾರೆ. 1978ರಲ್ಲಿ ಅರ್ಜೈಂಟೈನಾದಲ್ಲೇ ನಡೆದಿದ್ದ ವಿಶ್ವಕಪ್‌ನಲ್ಲಿ ಇನ್ನೂ ವಿಶ್ವಕಪ್ ಮಟ್ಟದ ಪಂದ್ಯಾವಳಿಗಳಲ್ಲಿ ಆಡಲು ಅಸಮರ್ಥರಾಗಿದ್ದಾರೆ ಎಂದು ಅವರ ತರಭೇತುದಾರ ಹೇಳಿಕೆಯಿಂದಾಗಿ ತಂಡದ ಭಾಗವಾಗಿರಲಿಲ್ಲ. ಆದರೆ, 1979ರಲ್ಲಿ ಜಪಾನ್‌ನಲ್ಲಿ ನಡೆದ ಫಿಫಾ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಅರ್ಜೆಂಟೈನಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಆ ಟೂರ್ನಿಯಲ್ಲಿ ಮರಡೋನಾ ತಾರೆಯಾಗಿ ಮಿಂಚಿದ ಬಳಿಕ ಮರಡೋನಾ ಮುಟ್ಟಿದ್ದೆಲ್ಲಾ ಅಕ್ಷರಶಃ ಚಿನ್ನವಾಗುತ್ತದೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯ ಜೊತೆಗೆ 1979ರಲ್ಲಿ ದಕ್ಷಿಣ ಅಮೆರಿಕಾದ ವರ್ಷದ ಆಟಗಾರ ಎಂಬ ಕಿರೀಟವನ್ನೂ ಮುಡಿಗೇರಿಸಿಕೊಂಡರು. 1982ರಲ್ಲಿ ತನ್ನ 21ನೇ ವಯಸ್ಸಿನಲ್ಲಿ 7.7ಮಿಲಿಯನ್ ಡಾಲರ್‌ಗೆ ಮಾರಾಟವಾಗುವ ಮೂಲಕ ದಾಖಲೆ ಬರೆದು ಸುದ್ದಿಯಾದರು.

1986ರ ಫೀಫಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ತಂಡದ ನಾಯಕರಾಗಿ, ಪಶ್ಚಿಮ ಜರ್ಮನಿಯ ವಿರುದ್ಧದ ಫೈನಲ್‌ನಲ್ಲಿ 3-2ರ ಅಂತರದಲ್ಲಿ ಅರ್ಜೆಂಟೀನಾ ಗೆದ್ದು ವಿಶ್ವ ಚಾಂಪಿಯನ್ಸ್ ಆಗುವುದರಲ್ಲಿ ಮರಡೋನಾ ಪಾತ್ರ ಬಹಳ ಪ್ರಮುಖವಾಗಿತ್ತಲ್ಲದೇ ಆ ಪಂದ್ಯಾವಳಿಯ ಗೋಲ್ಡನ್ ಬಾಲ್ ವಿನ್ನರ್ ಕೂಡಾ ಆಗಿ ಹೊರಹೊಮ್ಮುವುದರ ಜೊತೆಗೆ 20ನೇ ಶತಮಾನದ ಶ್ರೇಷ್ಠ ಫುಟ್ಬಾಲಿಗ ಎಂಬ ಪ್ರಶಸ್ತಿಗೂ ಭಾಜನರಾಗುತ್ತಾರೆ. ಬ್ರಿಟಿಷ್ ಸರ್ಕಾರದ ದಶಕದ ಆಟಗಾರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ , 2-1 ರ ವಿಜಯದಲ್ಲಿ ಎರಡೂ ಗೋಲುಗಳನ್ನು ಮರಡೋನಾರೇ ಗಳಿಸಿದ್ದದ್ದು ಹೆಗ್ಗಳಿಕಯಾದರೇ, ಇಂಗ್ಲೇಂಡ್ ಆಟಗಾರರನ್ನು ಸುಮಾರು 60 ಮೀ (66 ಯಾರ್ಡ್ ) ವಂಚಿಸಿ ಗಳಿಸಿದ ಎರಡನೇ ಗೋಲು ಇಂದಿಗೂ ಶತಮಾನದ ಗೋಲು ಎಂದು ತೀರ್ಮಾನಿಸಲ್ಪಟ್ಟು ಫುಟ್ಬಾಲ್ ಪ್ರಿಯರ ಮನದಲ್ಲಿ ಅಚ್ಚೊತ್ತಿದೆ. ಇದೇ ಪಂದ್ಯದಲ್ಲಿ ಗಳಿಸಿದ ಮೊದಲ ಗೋಲು ಬಹಳ ವಿವಾದಾತ್ಮಕವಾಗಿತ್ತು. ಗೋಲುಗಳಿಸುವ ಭರದಲ್ಲಿ ತಲೆಯಿಂದ ಚಂಡನ್ನು ಹೊಡೆಯದೇ, ಮರಡೋನ ತನ್ನ ಕೈಯಿಂದ ಚೆಂಡನ್ನು ಹೊಡೆದಿರುವುದು ಟಿವಿಯಲ್ಲಿ ಸ್ಪಷ್ಟವಾಗಿ ಕಾಣಿಸಿದ್ದಲ್ಲದೇ, ಈ ಗೋಲು ದೇವರ ಕೈ ಎಂದೇ ಕುಖ್ಯಾತಿ ಪಡೆಯಿತು. ಕಡೆಗೆ 2005ರಲ್ಲಿ ಮರಡೋನಾ ತಾನು ಉದ್ದೇಶ ಪೂರ್ವಕವಾಗಿ ಕೈಯಿಂದ ಬಾಲನ್ನು ಹೊಡೆದಿದ್ದಾಗಿಯೂ ಮತ್ತು ಚೆಂಡು ತಲೆಯ ಯಾವುದೇ ಭಾಗಕ್ಕೆ ಸಂಪರ್ಕವಾಗಿರಲಿಲ್ಲ ಎಂದು ದೂರದರ್ಶನದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡರೂ ಅವರ ಪುಟ್ಬಾಲ್ ಜೀವನದ ಕಪ್ಪು ಚುಕ್ಕೆಯಾಗಿಯೇ ಉಳಿದು ಹೋಯಿತು.

ಅರ್ಜೆಂಟೀನ ಪರ ಒಟ್ಟು ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಆಡಿರುವ ಮರಡೋನಾ, ಬೋಕಾ ಜೂನಿಯರ್ಸ್ ಪರ 1, ಬಾರ್ಸಿಲೋನಾ ಪರ 3, ನೆಪೋಲಿ ಪರ 5 ಹೀಗೆ ಒಟ್ಟು 9 ಬಾರಿ ಕ್ಲಬ್‌ಗಳಿಗಾಗಿ ಪ್ರಶಸ್ತಿ ಗೆಲ್ಲಿಸಿಕೊಡುವ ಮೂಲಕ ಪೀಲೆಯ ನಂತರ ಪುಟ್ಬಾಲ್ ಆಟದ ದಂತಕಥೆಯಾಗಿ ಮೆರೆದಿದ್ದರು. ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಮರಡೋನಾ ವಿಪರೀತವಾದ ಮದ್ಯಪಾನ ಮತ್ತು ಮಾದಕ ವ್ಯಸನಕ್ಕೆ ದಾಸರಾಗಿದ್ದ ಕಾರಣ ಅವರ ಆಟದ ಮೇಲೇ ಬಾರೀ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಬಾರ್ಸಿಲೋನಾ ನಿರ್ದೇಶಕರ ಜೊತೆಗೆ ವೈಮನಸ್ಸು ಉಂಟಾಯಿತು. ಹೀಗಾಗಿ ಬಾರ್ಸಿಲೋನಾ ತೊರೆದ ಮರಡೋನಾ ನಪೋಲಿ ಕ್ಲಬ್‌ಗೆ ಮತ್ತೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾಗುತ್ತಾರೆ. ಆದರೆ ಮತ್ತೆ 1991ರಲ್ಲಿ ಕೊಕೈನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಲ್ಲದೇ, ಮತ್ತದೇ ಮಾದಕ ಸೇವನೆಯ ಪರಿಣಾಮವಾಗಿ 1994 ರ ವಿಶ್ವಕಪ್ ತಂಡದಿಂದ ಹೊರಹಾಕಲ್ಪಟ್ಟು, ಪುಟ್ಬಾಲ್ ದೇವರು ಎಂದು ಪೂಜಿಸುತ್ತಿದ್ದ ಪುಟ್ಬಾಲ್ ಪ್ರಿಯರ ಮನದಲ್ಲಿ ಅತ್ಯಂತ ಕೆಟ್ಟ ಮನುಷ್ಯ ಎಂಬ ಅಪಕೃಪೆಗೂ ಪಾತ್ರರಾಗುತ್ತಾರೆ.

ವಿಶ್ವ ಫುಟ್ಬಾಲ್ ಲೋಕದ ಅದ್ಭುತ ಆಟಗಾರ ಮರಡೋನಾರ ವೃತ್ತಿ ಜೀವನದಲ್ಲಿ ಒಟ್ಟು 312 ಗೋಲ್ ದಾಖಲಿಸಿದ್ದಾರೆ. 21 ವಿಶ್ವಕಪ್ ಪಂದ್ಯಗಳಲ್ಲಿ ಆಡಿರುವ ಮರಡೋನಾ 8 ಗೋಲ್ ಹಾಗೂ 8 ಅಸಿಸ್ ಮಾಡಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೈನಾ ಪರವಾಗಿ ಅತಿ ಹೆಚ್ಚು ಗೋಲ್ ಮಾಡಿದ ಎರಡನೇ ಆಟಗಾರ ಎಂಬ ಕೀರ್ತಿಯೂ ಮರಡೋನಾ ಅವರದ್ದಾಗಿದೆ. 1997ರಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿಗಳಿಂದ ನಿವೃತ್ತಿಯನ್ನು ಪಡೆದ ಬಳಿಕ ಫಿಫಾ ಶತಮಾನದ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 2008 ರಲ್ಲಿ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಮುಖ್ಯ ತರಭೇತುದಾರರಾಗಿ ಆಯ್ಕೆಗೊಂಡು 2010 ವಿಶ್ವ ಕಪ್ ಪಂದ್ಯಾವಳಿಯಲ್ಲಿ ತಂಡವನ್ನು ಮುನ್ನೆಡಿಸಿದ್ದರು.

ಬ್ಯೂನಸ್ ಐರಿಸ್ಸಿನ ಕೊಳೆಗೇರಿಯಿಂದ ಬಂದು ಕಾಲ್ಚೆಂಡಿನೊಂದಿಗಿನ ತನ್ನ ಪ್ರತಿಭೆಯಿಂದಾಗಿ ದೇವರಂತೆ ಪೂಜಿಸಲ್ಪಟ್ಟು ದಂತಕಥೆಯಾಗಿ ಹೋಗಿದ್ದ ಡೀಗೋ ಮರಡೋನಾ, 25.11.2020 ಬುಧವಾರ ಹೃದಯಾಘಾತದಿಂದ ನಿಧನರಾಗುವ ಮೂಲಕ ಪುಟ್ಬಾಲ್ ಆಟದ ಧೃವ ನಕ್ಷತ್ರವೊಂದು ಕಳಚಿಬಿದ್ದಿದೆ. 60 ವರ್ಷದ ಮರಡೋನಾ ಇತ್ತೀಚೆನ ಕೆಲದಿನಗಳಿಂದ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿ, ಅವರ ದೇಹ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದರು. ಪುಟ್ಪಾಲ್ ಪಂದ್ಯಗಳಲ್ಲಿ ಯಶಸ್ವಿಯಾಗಿ ಗೆದ್ದು ಬಂದಿದ್ದ ಮರಡೋನ ಜೀವನವೆಂಬ ಆಟದಲ್ಲಿ ಗೆಲ್ಲಲಾಗದೇ ಮರಳಿ ಬಾರದ ಲೋಕಕ್ಕೆ ಶಾಶ್ವತವಾಗಿ ಹೋಗಿದ್ದರೂ, ಆವರ ಆಟಗಳ ಮೂಲಕ ಕೋಟ್ಯಾಂತರ ಫುಟ್ಬಾಲ್ ಆಭಿಮಾನಿಗಳ ಹೃದಯಗಳಲ್ಲಿ ಶಾಶ್ವತವಾಗಿ ಆಚಂದ್ರಾರ್ಕವಾಗಿ ಮನೆಮಾಡಿರುತ್ತಾರೆ ಎಂದರೆ ಅತಿಶಯೋಕ್ತಿಯೇನಲ್ಲ.

ಫುಟ್ಬಾಲಿನ ಮತ್ತೊಬ್ಬ ದಂತಕಥೆಯಾದ ಬ್ರೆಜಿಲ್ ದೇಶದ ಪೀಲೆ ಅವರು ಅರ್ಜೆಂಟೀನಾದ ಈ ಶ್ರೇಷ್ಠ ಆಟಗಾರನ ನಿಧನಕ್ಕೆ ಸಂತಾಪ ಸೂಚಿಸಿ, ಖಂಡಿತವಾಗಿ, ಮುಂದೊಂದು ದಿನ ನಾವಿಬ್ಬರೂ ಒಟ್ಟಿಗೆ ಆಕಾಶದಲ್ಲಿ ಪುಟ್ಬಾಲ್ ಆಡುತ್ತೇವೆ ಎಂಬ ಹೇಳಿಕೆ ನೀಡಿರುವುದು ಎಷ್ಟು ಮಾರ್ಮಿಕವಾಗಿದೇ ಅಲ್ವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s