ಎಚ್.ಆರ್.ಗೋಪಾಲಕೃಷ್ಣ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ

ಕ್ರಿಕೆಟ್ ಆನ್ನೋದು ಭಾರತ ದೇಶದಲ್ಲಿ ಒಂದು ರೀತಿಯ ಧರ್ಮವೇ ಆಗಿ ಹೋಗಿದೆ. ಇತರೇ ವಿಷಯಗಳಲ್ಲಿ ವಿಶ್ವಗುರುವಾಗುವುದರಲ್ಲಿ ಮುನ್ನುಗ್ಗುತಿರುವ ಭಾರತ, ಕ್ರಿಕೆಟ್ಟಿನಲ್ಲಿ ಭಾರತ ಈಗಾಗಾಲೇ ವಿಶ್ವಗುರುವಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಇನ್ನು ಭಾರತೀಯ ಕ್ರಿಕೆಟ್ಟಿಗೆ ಕರ್ನಾಟಕದ ಕೊಡುಗೆ ಅನನ್ಯ ಮತ್ತು ಅವರ್ಣನೀಯ. ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯ್ಯದ್ ಕಿರ್ಮಾನಿ, ರಾಹುಲ್ ದ್ರಾವಿಡ್, ಕೆ.ಎಲ್. ರಾಹುಲ್ ರಂತಹ ಅತ್ಯದ್ಭುತ ದಾಂಡಿಗರಾದರೇ, ಬಿ.ಎಸ್. ಚಂದ್ರಶೇಖರ್, ಪ್ರಸನ್ನ, ಅನಿಲ್ ಕುಂಬ್ಲೇ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ರಂತಹ ಉತೃಕ್ಷ್ಟ ಎಸೆತಗಾರನ್ನು ನೀಡಿದೆಯಲ್ಲದೇ, ಒಂದು ಕಾಲದಲ್ಲಿ ಭಾರತ ತಂಡದ 11 ಆಟಗಾರರಲ್ಲಿ, ಕರ್ನಾಟಕ 7 ಆಟಗಾರರಿದ್ದದ್ದು ದಾಖಲೆಯಾಗಿದೆ. ಇವೆಲ್ಲರು ಮೈದಾನದಲ್ಲಿ ಇಂತಹ ಸಾಧನೆಗಳನ್ನು ಮಾಡಿದ್ದರೆ, ಮೈದಾನದ ಹೊರಗಿದ್ದು ಎಲೆಮರೆಕಾಯಿಯಂತೆ ಸದ್ದಿಲ್ಲದೇ ನೂರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅಧಿಕೃತವಾಗಿ ಅಂಕಿ ಸಂಖ್ಯಾ ಶಾಸ್ತ್ರಜ್ಞರಾಗಿ ಶತಕವನ್ನು ಸಾಧಿಸಿಸಿರುವ ಅಪರೂಪದ ಎಚ್. ಆರ್. ಗೋಪಾಲಕೃಷ್ಣ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲ್ಲೂಕಿನ ಹಿರಿಸಾವೇ ಮೂಲದವರಾದ ಶ್ರೀ ಗೋಪಾಲಕೃಷ್ಣ ಅವರು ಆಗಸ್ಟ್ 12, 1946 ರಂದು ಚನ್ನರಾಯಪಟ್ನದಲ್ಲಿ ಜನಿಸಿದರೂ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸವೆಲ್ಲಾ ನೆಡೆದದ್ದು ಬೆಂಗಳೂರಿನಲ್ಲಿಯೇ. ಜಯನಗರ 4 ನೇ ಬ್ಲಾಕ್‌ನ ದೀರ್ಘಕಾಲದ ನಿವಾಸಿಗಳಾಗಿದ್ದು ಈಗ ವಸಂತ ನಗರದಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಿಂದಲೇ ಕ್ರಿಕೆಟ್ ಆಟದ ಒಲವಿದ್ದ ಶ್ರೀಯುತರು, ಉತ್ತಮ ಎಡಗೈ ಸ್ಪಿನ್ನರ್ ಮತ್ತು ಉಪಯುಕ್ತ ಬ್ಯಾಟ್ಸ್ಮನ್ ಕೂಡಾ ಆಗಿದ್ದರು. ಆಟದ ಜೊತೆ ಓದಿನಲ್ಲಿಯೂ ಚುರುಕಾಗಿದ್ದ ಗೋಪಾಲಕೃಷ್ಣ ಅವರು ಪ್ರತಿಷ್ಠಿತ ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವಾಗಲೇ ಕಾಲೇಜ್ ತಂಡದ ಭಾಗವಾಗಿದ್ದಲ್ಲದೇ, ಬೆಂಗಳೂರು ಕ್ರಿಕೆಟರ್ಸ್-ಬಿ ತಂಡ ಮತ್ತು 2004ರಲ್ಲಿಯೇ ವಜ್ರ ಮಹೋತ್ಸವವನ್ನು ಆಚರಿಸಿಕೊಂಡ ಏಕೈಕ ಕ್ಲಬ್ ಮತ್ತು ಅತ್ಯಂತ ಹಳೆಯ ಕ್ರಿಕೆಟ್ ಕ್ಲಬ್ ಆದ ನ್ಯಾಷನಲ್ ಯುನೈಟೆಡ್ ಕ್ರಿಕೆಟ್ ಕ್ಲಬ್ ಪರವಾಗಿಯೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಲೀಗ್ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದವರು.

ತಮ್ಮ ಇಂಜಿನೀಯರಿಂಗ್ ಪದವಿಯನಂತರ ಯಾವುದೇ ಕಂಪನಿಗಳಿಗೆ ಸೇರದೇ, ಕ್ರಿಕೆಟ್ ಆಟಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಬ್ಯಾಂಕಿನಲ್ಲಿ ಅಧಿಕಾರಿಗಳಾಗಿ ಸೇರಿಕೊಂಡು ಬ್ಯಾಂಕ್ ಪರವಾಗಿಯೂ ಕ್ರಿಕೆಟ್ ಆಟವಾಡಿದ್ದಲ್ಲದೇ, ಪಂದ್ಯಾವಳಿಯ ನಡುವೆಯೂ ಸ್ಕೋರರ್ ಆಗಿ ಕೆಲಸ ಮಾಡಲು ಇಚ್ಚಿಸುತ್ತಿದ್ದರು. ಅದೊಮ್ಮೆ ತಮ್ಮ ಸಹಪಾಠಿಗಳಾಗಿದ್ದ ಮಾಜೀ ಕರ್ನಾಟಕ ತಂಡದ ಆಟಗಾರ ಮತ್ತು ಕೋಚ್ ಆಗಿದ್ದ ಬಿ. ರಘುನಾಥ್ (ಮಿಥುನ್ ಬಿರಾಲ ಅವರ ತಂದೆ) ತಾವು ರಣಜಿ ಪಂದ್ಯವಳಿಯಲ್ಲಿ ಎಷ್ಟು ರನ್ ಗಳಿಸಿದ್ದೇನೆ? ಎಂಬ ಪ್ರಶ್ನೆಯನ್ನು ಗೋಪಾಕಷ್ಣರ ಬಳಿ ಕೇಳಿದಾಗ, ಅವರ ಬಳಿ ಉತ್ತರವಿಲ್ಲದಿದ್ದಾಗ, ರಘುನಾಥ್ ಅವರು ಗೋಪಾಲಕೃಷ್ಣರವರಿಗೆ ಈ ರೀತಿಯಾದ ಅಂಕಿ ಅಂಶಗಳನ್ನು ಸ್ಕೋರರ್ ಬಳಿ ಇದ್ದರೆ ಮುಂದೆ ಉಪಯೋಗಕ್ಕೆ ಬರುತ್ತದೆ. ಎಂದು ಹೇಳಿದ್ದನ್ನೇ ತುಂಬಾ ಗಂಭೀರವಾಗಿ ಸ್ವೀಕರಿಸಿ ಅಂದಿನಿಂದಲೇ ಪ್ರತಿಯೊಂದು ಪಂದ್ಯಾವಳಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಎಲ್ಲವನ್ನೂ ದಾಖಲಿಸುತ್ತಾ ಹೊದಂತೆಲ್ಲಾ ಅವರಿಗೇ ಅರಿವಿಲ್ಲದಂತೆ ಕೆಲವೇ ವರ್ಷಗಳಲ್ಲಿ ಅವರೊಬ್ಬ ಕ್ರಿಕೆಟ್ ಅಂಕಿ ಅಂಶದ ಗಣಿಯಾಗಿ ಬಿಟ್ಟಿದ್ದರು.

1972 ರಲ್ಲಿ ಅಂದಿನ ಮೈಸೂರು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸಿದ ಕ್ರಿಕೆಟ್ ಅಂಪೈರಿಂಗ್ ಪರೀಕ್ಷೆಗೆ ಹಾಜರಾಗಿದ್ದ ಅರವತ್ತು ಅಭ್ಯರ್ಥಿಗಳ ಪೈಕಿ ಕೇವಲ ಒಬ್ಬರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರು ಬೇರೆ ಯಾರೂ ಆಗಿರದೇ ನಮ್ಮ ಗೋಪಾಲಕೃಷ್ಣ ಅವರಾಗಿದ್ದರು. ತಮ್ಮ ಚೊಚ್ಚಲು ಪ್ರಯತ್ನದಲ್ಲೇ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.

ಅದಾದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗಳ ರಂಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಟ್ರೋಫಿ, ಪೆಪ್ಸಿ ಏಕದಿನ ಪಂದ್ಯಗಳು ಮತ್ತು ಸುಬ್ಬಯ್ಯ ಪಿಳ್ಳೆ ಟ್ರೋಫಿಯಂತಹ ಅಧಿಕೃತ ಪಂದ್ಯವಳಿಗಳಲ್ಲಿ ಪೆವಿಲಿಯನ್ನಿನಲ್ಲಿ ಕುಳಿತು ಕೊಂಡು ಅಧಿಕೃತವಾಗಿ ಸ್ಕೋರಿಂಗ್ ಮಾಡತೊಡಗಿದರು.

ಇದರ ಜೊತೆಗೆ 1977-78ರಲ್ಲಿ ದುಲೀಪ್ ಟ್ರೋಫಿ ಪಂದ್ಯದ ಫೈನಲ್‌ಗಾಗಿ ಮುಂಬೈನ ಆಲ್ ಇಂಡಿಯಾ ರೇಡಿಯೊ ಪರ ಮೊತ್ತ ಮೊದಲ ಹೊರ ರಾಜ್ಯದ ಅಧಿಕೃತ ಸ್ಕೋರರ್ ಮತ್ತು ಅಂಕಿಶಾಸ್ತ್ರ ತಜ್ಞರಾಗಿ ನಿಯುಕ್ತರಾಗಿದ್ದರು.

1976-77 ರಿಂದ 1979-80ರವರೆಗೆ ಸತತ ನಾಲ್ಕು ಬಾರಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಂಖ್ಯಾಶಾಸ್ತ್ರೀಯ ಸಮಿತಿಯ ಸದಸ್ಯರಾಗಿದ್ದಲ್ಲದೇ, 1980 ರಲ್ಲಿ ನಡೆದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿ ಮಂಡಳಿಯು ಹೊರತಂದ ಪ್ರಕಟಣೆಗಳ ಅಂಕಿಅಂಶಗಳನ್ನು ಸಂಗ್ರಹಿಸುವಲ್ಲಿ ಗೋಪಾಲಕೃಷ್ಣವರ ಕೊಡುಗೆ ಅಪಾರ. ಇದರ ಜೊತೆ ಜೊತೆಯಲ್ಲಿಯೇ ವಿಶ್ವದ ವಿವಿಧ ಕ್ರಿಕೆಟ್ ನಿಯತಕಾಲಿಕೆಗಳಾದ ವಿಸ್ಡೆನ್ ಕ್ರಿಕೆಟ್ ಮಾಸಿಕ (ಇಂಗ್ಲೆಂಡ್), ಡೇವಿಡ್ ಲಾರ್ಡ್ಸ್ ವಿಸ್ಡೆನ್ ಕ್ರಿಕೆಟ್ ಮಾಸಿಕ (ಆಸ್ಟ್ರೇಲಿಯಾ), ದಿ ಕ್ರಿಕೆಟರ್ (ಪಾಕಿಸ್ತಾನ), ಕ್ರಿಕೆಟ್ ತ್ರೈಮಾಸಿಕ (ಪಾಕಿಸ್ತಾನ) ಗಳಿಗೆ ಕ್ರಿಕೆಟ್ ಕುರಿತಾದ ರೋಚಕ ಸಂಖ್ಯಾ ಶಾಸ್ತ್ರ ಕುರಿತಾದ ಲೇಖನಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.

ಎಂಬತ್ತರ ದಶಕದಲ್ಲಿ ದಿ ಹಿಂದೂ ಗ್ರೂಪ್ ಅವರ ಕ್ರೀಡಾ ಪತ್ರಿಕೆಯಾದ ದಿ ಸ್ಪೋರ್ಟ್ಸ್ ಸ್ಟಾರ್ ವಾರ ಪತ್ರಿಕೆಗೆ ಸುಮಾರು ಎಂಟು ವರ್ಷಗಳ ಕಾಲ ಕ್ರಿಕೆಟ್ ಕುರಿತಾದ ಲೇಖನಗಳನ್ನು ಬರೆದದ್ದಲ್ಲದೇ, ದಿ ಹಿಂದೂ ಪತ್ರಿಕೆಯ ಸಾಪ್ತಾಹಿಕ ಪೂರಕವಾದ ಶನಿವಾರ ಕ್ರೀಡಾ ಪುರವಾಣಿಗೂ ತಮ್ಮ ಕೊಡುಗೆ ನೀಡಿದ್ದಾರೆ ಸುನೀಲ್ ಗವಾಸ್ಕರ್ ಸಂಪಾದಿಸಿರುವ Indian Cricket ಪಾಕ್ಷಿಕಕ್ಕೆ ದಕ್ಷಿಣ ಭಾರತದ ವರದಿಗಾರರಾಗಿಯೂ ಕೆಲಸ‌ ಮಾಡಿರುವುದು ಗಮನಾರ್ಹ. ಪಾಕೀಸ್ತಾನದ ಅಂದಿನ ಪ್ರಧಾನಿ ಜಿಯಾ ಉಲ್ ಹಕ್ ಬಿಡುಗಡೆ‌ ಮಾಡಿದ ಡೋಮ್‌ಮೊರೀಸ್ ವಿರಚಿತ “ಸುನೀಲ್ ಗವಾಸ್ಕರ್” ಅವರ ಆತ್ಮಕಥೆ ಪುಸ್ತಕಕ್ಕೂ ಕ್ರಿಕೆಟ್ ಅಂಕಿಅಂಶಗಳನ್ನು ಒದಗಿಸಿದ್ದಾರೆ. ಪಾಕೀಸ್ತಾನದ ಅಜೀಜ್ ರೆಹಮತುಲ್ಲಾ ರಚಿತ ಪಾಕೀಸ್ತಾನ್ ಕ್ರಿಕೆಟ್ ಎಂಬ ಪುಸ್ತಕಕ್ಕೂ ಪಾಕೀಸ್ತಾನ ಕ್ರಿಕೆಟ್ಟಿನ ಸುದೀರ್ಘ ಇತಿಹಾಸವನ್ನು ಬರೆದಿದ್ದಾರೆ.

ಕೇವಲ ಭಾರತವಲ್ಲದೇ 1985 ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿಯೂ ಆಕಾಶವಾಣಿಯ ಪರವಾಗಿ ಸ್ಕೋರರ್-ಕಮ್-ಸ್ಟ್ಯಾಟಿಸ್ಟಿಷಿಯನ್ ಆಗಿದ್ದಲ್ಲದೇ, 1987 ರಲ್ಲಿ ಭಾರತದಲ್ಲಿ ನಡೆದ ರಿಲಯನ್ಸ್ ವಿಶ್ವಕಪ್ ಪಂದ್ಯಗಳಿಗಾಗಿ ದೂರದರ್ಶನದ ವೀಕ್ಷಕ ವಿವರಣೆಕಾರರ ತಂಡದಲ್ಲಿ ಅಧಿಕೃತವಾದ ಸಂಖ್ಯಾಶಾಸ್ತ್ರಜ್ಞರಲ್ಲಿ ಗೋಪಾಲ ಕೃಷ್ಣ ಅವರು ಒಬ್ಬರಾಗಿದ್ದರು 1996-97ರ ಪಾಕಿಸ್ತಾನ ಪ್ರವಾಸಕ್ಕಾಗಿ ಅವರನ್ನು ನವದೆಹಲಿಯ ಆಲ್ ಇಂಡಿಯಾ ರೇಡಿಯೊ ನಿರ್ದೇಶನಾಲಯವು ಆಯ್ಕೆ ಮಾಡಿತ್ತಾದರೂ ಕೊನೆಯ ಕ್ಷಣದಲ್ಲಿ ಕೇಂದ್ರ ಸರ್ಕಾರವು ಅನುಮತಿ ನೀಡದ ಕಾರಣ ಅವರು ಪಾಕೀಸ್ಥಾನಕ್ಕೆ ಪ್ರವಾಸ ಮಾಡಲಾಗಲಿಲ್ಲ. 2010 ರಿಂದ 2012ರವರೆಗೆ ಎರಡು ವರ್ಷಗಳ ಕಾಲ ಐಸಿಸಿ ಕ್ರಿಕೆಟ್‌ಗೆ ಅಧಿಕೃತ ಪ್ರಾಯೋಜಕರಾಗಿದ್ದ ಯಾಹೂ.ಕಾಂ ಕ್ರಿಕೆಟ್ ವಿಭಾಗದಲ್ಲಿ ಗೋಪಾಲಕೃಷ್ಣ ಅವರು ಸಹಾಯ ಮಾಡಿದ್ದರು. ಜೂನ್ 14, 2018 ರಂದು ಬೆಂಗಳೂರಿನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವು ಅವರ 100 ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಇತ್ತೀಚೆಗೆ ಐಸಿಸಿ ವಿಶ್ವಕಪ್ 2019 ರ ಎರಡು ಸೆಮಿಫೈನಲ್‌ಗಳನ್ನು ದೆಹಲಿಯ ಆಲ್ ಇಂಡಿಯಾ ರೇಡಿಯೊ ಪ್ರಸಾರ ಮಾಡಿದ ಸ್ಟುಡಿಯೋ ವ್ಯಾಖ್ಯಾನಕ್ಕಾಗಿ 101 ಮತ್ತು 102 ನೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಾಗಿ ನಿರ್ವಹಿಸಿದರು.

ಮುಂಬೈನ ಸುಧೀರ್ ವೈದ್ಯ ಅವರ ನಂತರ 100ಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಸ್ಕೋರರ್-ಕಮ್-ಸ್ಟ್ಯಾಟಿಸ್ಟಿಷಿಯನ್ ನಿರ್ವಹಿಸಿದ ದೇಶದ ಎರಡನೇ ವ್ಯಕ್ತಿಯೇ ಶ್ರೀಯುತ ಗೋಪಾಲಕೃಷ್ಣ ಅವರಾಗಿದ್ದಾರೆ. ಇದಕ್ಕಿಂತಲೂ ಮತ್ತೊಂದು ಗಮನಾರ್ಹವಾದ ಅಂಶವೆಂದರೆ, ಸ್ಕೋರಿಂಗ್ ಮತ್ತು ಅಂಕಿಅಂಶ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನದ 50 ವರ್ಷಗಳನ್ನೂ ಪೂರೈಸಿರುವುದು ಶ್ಲಾಘನೀಯವಾಗಿದೆ.

ಕ್ರಿಕೆಟ್ ಅಂಕಿಅಂಶ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಸರ್ಕಾರೀ‌ ಮತ್ತು ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.

  • 1989 ರಲ್ಲಿ ದಸರ ಕ್ರೀಡಾ ಪ್ರಶಸ್ತಿ
  • 2010 ರಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಹೀಗೆ ಎರಡೆರಡು ರಾಜ್ಯ ಪ್ರಶಸ್ತಿಗಳನ್ನು ಪಡೆದ ಭಾರತದ ಏಕೈಕ ಕ್ರಿಕೆಟ್ ಸಂಖ್ಯಾ ಶಾಸ್ತ್ರಜ್ಞರು ಎಂಬ ಗರಿಮೆಯೂ ಅವರದ್ದಾಗಿದೆ.

ಇತ್ತೀಚೆಗೆ ನಡೆದ ಐಪಿಲ್ ಪಂದ್ಯಾವಳಿಯ ಪ್ರತಿಯೊಂದು ಪಂದ್ಯದ ಮುಂಚೆ ಮತ್ತು ನಂತರ ಪ್ರತಿಯೊಂದು ತಂಡ ಮತ್ತು ಪ್ರತಿಯೊಬ್ಬ ಆಟಗಾರರ ಕುರಿತಾದ ಅತ್ಯಂತ ಕುತೂಹಲಕಾರಿ ಅಂಕಿ ಅಂಶಗಳನ್ನು ಪ್ರಕಟಿಸುತ್ತಲೇ ಇದ್ದರು. ಅವರ ಅಂಕಿ ಅಂಶಗಳನ್ನು ಓದುವುದಕ್ಕೇ ನಮಗೆ ಒಂದು ಗಂಟೆ ಬೇಕಾಗುತ್ತಿತ್ತು ಎಂದರೆ ಅದರ ಹಿಂದಿನ ಪರಿಶ್ರಮ ಎಷ್ಟಿರಬಹುದು ಎಂಬುದನ್ನು ತಿಳಿಯಬಹುದಾಗಿದೆ.

ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಮೈದಾನದ ಹಿಂದೆ ಕುಳಿತು ಕನ್ನಡದ ಕಂಪನ್ನು ಪರಸಿರುತ್ತಿರುವ ಶ್ರೀ ಎಚ್.ಆರ್.ಗೋಪಾಲಕೃಷ್ಣ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?

2 thoughts on “ಎಚ್.ಆರ್.ಗೋಪಾಲಕೃಷ್ಣ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s