ಎಲ್ಲರ ಜೀವನದಲ್ಲಿ ಹದಿನೆಂಟು ಎನ್ನುವುದು ಒಂದು ಪ್ರಮುಖ ಘಟ್ಟ. ಹದಿನೆಂಟಕ್ಕೆ ಹದಿಹರೆಯ ಎನ್ನುತ್ತೇವೆ. ಹೆಣ್ಣು ಮಕ್ಕಳಿಗಂತೂ ವಯಸ್ಸು ಹದಿನೆಂಟಾಗುತ್ತಿದ್ದಂತೆಯೇ ಅಪ್ಪಾ ಅಮ್ಮಂದಿರು ಮದುವೆ ಮಾಡಲು ಸಿದ್ಧರಾಗುತ್ತಾರೆ. ಸರ್ಕಾರ ಗಂಡು ಹೆಣ್ಣು ಎಂಬ ತಾರತಮ್ಯವಿಲ್ಲದೇ ಹದಿನೆಂಟು ವರ್ಷ ದಾಟಿದವರಿಗೆ ವಾಹನಗಳನ್ನು ಚಲಾಯಿಸುವ ಪರವಾನಗಿ ನೀಡುವುದರ ಜೊತೆಗೆ ಮತದಾನದ ಹಕ್ಕನ್ನೂ ನೀಡಿ ದೇಶವನ್ನೇ ಚಲಾಯಿಸುವ ಜವಾಬ್ಧಾರಿಯನ್ನು ನೀಡಿದೆ. ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ, ಇಂದಿಗೆ ಸರಿಯಾಗಿ ನಮ್ಮ ಮನೆಗೆ ಹದಿನೇಳು ತುಂಬಿ ಹದಿನೆಂಟು ವರ್ಷಗಳಾಗುತ್ತಿದೆ. ಈಗಿನಂತೆ ಆಗ ಮನೆ ಕಟ್ಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ನಿವೇಶನ ಖರೀದಿಸಿ ಮನೆ ಕಟ್ಟಿಸಲು ನಾವು ಪಟ್ಟ ಪರಿಶ್ರಮ, ಮನೆ ಕಟ್ಟಿದ ನಂತರ ಪಟ್ಟ ಸಂಭ್ರಮ ಎಲ್ಲವನ್ನೂ ನಮ್ಮ ಮನೆಯ ಹದಿನೆಂಟನೇ ಹುಟ್ಟು ಹಬ್ಬದಂದು ಮೆಲುಕು ಹಾಕುವ ಸಣ್ಣ ಪ್ರಯತ್ನ.
ಮನೆ ಎಂದರೆ ಕೇವಲ ಇಟ್ಟಿಗೆ, ಮರಳು, ಕಬ್ಬಿಣ, ಸಿಮೆಂಟ್ ಮತ್ತು ಮರಮುಟ್ಟುಗಳಿಂದ ಕಟ್ಟಿದ ಕಟ್ಟಡವಲ್ಲ. ಅದು ಕೇವಲ ಮಳೆ, ಗಾಳಿ, ಚಳಿಯಿಂದ ರಕ್ಷಿಸುವ ಆಶ್ರಯ ತಾಣವಲ್ಲ. ಅದು ಒಂದು ಇಡೀ ಕುಟುಂಬದ ಶಕ್ತಿ ಕೇಂದ್ರ. ಅದು ಮಕ್ಕಳ ಏಳು, ಬೀಳು, ನಗು, ಅಳುಗಳ ಸುಂದರ ತಾಣ. ಕುಟುಂಬದ ಎಲ್ಲಾ ಸಮಸ್ಯೆಗಳಿಗೂ, ಸಂಭ್ರಮಗಳಿಗೂ ಶಾಶ್ವತವಾದ ನೆಲೆ. ಹಾಗಾಗಿಯೇ ಎಲ್ಲರಿಗೂ ಪುಟ್ಟದಾದರೂ ಸರಿಯೇ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಹೊಂದಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ರೀತಿಯ ಮನೆಯನ್ನು ಕಟ್ಟಿಸುವುದು ಸುಲಭ ಸಾಧ್ಯವಾಗಿರದ ಕಾರಣದಿಂದಲೇ, ನಮ್ಮ ಹಿರಿಯರು, ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆಯನ್ನೇ ಮಾಡಿದ್ದಾರೆ. ಹಾಗಾಗಿಯೇ ನಾವು ಮನೆಯನ್ನು ಕೇವಲ ಕಟ್ಟಡವಾಗಿ ನೋಡದೇ ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಭಾವಿಸಿ ಅದಕ್ಕೆ ತಮ್ಮ ಅಭಿರುಚಿಗೆ ತಕ್ಕಂತೆ ಕಟ್ಟಿಸಿ ಅದಕ್ಕೆ ಶೃಂಗಾರ ಮಾಡಿ ಸಂಭ್ರಮಿಸುತ್ತೇವೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನನ್ನ ಗುರುಗಳೂ ಮತ್ತು ಹಿತೈಷಿಗಳಾದ ಸತ್ಯಾನಾರಾಯಣ, ನಮ್ಮೆಲ್ಲರ ಪ್ರೀತಿಯ ಸತ್ಯಾ ಸರ್ ಅವರ ಮನೆಗೆ ಹೋಗಿ ಲೋಕಾಭಿರಾಮವಾಗಿ ಹರಟುತ್ತಿದ್ದಾಗ, ಇದ್ದಕ್ಕಿಂದ್ದಂತೆಯೇ ಸತ್ಯಾ ಸರ್, ಶ್ರೀಕಂಠ ನೀನೇಕೆ ಒಂದು ನಿವೇಶನ ಕೊಳ್ಳಬಾರದು ಎಂದರು. ಅಯ್ಯೋ ಬಿಡಿ ಸಾರ್, ಹೇಗೂ ಅಪ್ಪಾ ಕಟ್ಟಿಸಿದ ಮನೆ ಇದೆ. ನಮಗೇಕೆ ಇನ್ನೊಂದು ಮನೆ ಎಂದೆ. ಅದಕ್ಕವರು ಆ ಮನೆಯಲ್ಲಿ ಮೂರು ಪಾಲು ಇದೆ ಎನ್ನುವುದನ್ನು ಮರೆಯಬೇಡ. ಹಾಗಾಗಿ ಇನ್ನೂ ಚಿಕ್ಕ ವಯಸ್ಸು, ಒಂದು ಒಳ್ಳೆಯ ಬಡಾವಣೆಯಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಸಿ ಬಿಡು ಎಂಬ ಹುಳವನ್ನು ನನ್ನ ತಲೆಗೆ ಬಿಟ್ಟರು. ನನ್ನ ಜೊತೆಯಲ್ಲಿಯೇ ಇದ್ದ ಮಡದಿಯೂ ಸಹಾ ರೀ ಸತ್ಯಾ ಸರ್ ಹೇಳಿದ್ದು ಸರಿಯಾಗಿದೆ ಅಲ್ವಾ ಎಂದಾಗ ಸರಿ ನೋಡೋಣ ಎಂದಿದ್ದೆ.
ನನ್ನ ಮಡದಿ ಮಾರನೇಯ ದಿನವೇ ಅದನ್ನು ಆವರ ತಂದೆ ಅರ್ಥಾತ್ ನನ್ನ ಮಾವನವರಿಗೆ ಹೇಳಿದ್ದೇ ತಡಾ ಅವರು ವಿದ್ಯಾರಣ್ಯಪುರದಲ್ಲಿ ಖಾಲಿ ನಿವೇಶನ ನೋಡಲು ಆರಂಭಿಸಿ ಒಂದೆರಡು ದಿನಗಳಲ್ಲಿಯೇ ಮಾರಟಕ್ಕಿದ್ದ ಹತ್ತಾರು ನಿವೇಶನಗಳನ್ನು ಗುರುತು ಮಾಡಿಕೊಂಡು ವಾರಂತ್ಯದಲ್ಲಿ ನನಗೆ ತೋರಿಸಿಯೇ ಬಿಟ್ಟರು. ಒಂದು ವಾಸ್ತು ಸರಿಯಿಲ್ಲ, ಮತ್ತೊಂದು ಮೂರು ರಸ್ತೆಗಳು ಕೂಡುವ ಜಾಗ, ಇಲ್ಲಿನ ನೆರೆ ಹೊರೆ ಸರಿ ಇಲ್ಲಾ ಎಂದು ತಳ್ಳುತ್ತಲೇ ಬಂದಾಗ, ಅವರು ತೋರಿಸಿದ ಒಂದು ನಿವೇಶನ ಥಟ್ ಅಂತಾ ಮನಸ್ಸನ್ನು ಸೆಳೆಯಿತು. ಅದಕ್ಕೆ ಕಾರಣ ಆ ನಿವೇಶನದ ಸಂಖ್ಯೆ 1000. ಸುಲಭವಾಗಿ ಎಲ್ಲರೂ ನೆನೆಪು ಇಟ್ಟುಕೊಳ್ಳಬಹುದು ಎಂದು ನನ್ನ ಅನಿಸಿಕೆಯಾದರೆ, ನನ್ನ ಮಡದಿಗೆ ಬಸ್ ನಿಲ್ದಾಣದ ಹಿಂದೆಯೇ ಇದ್ದ ಕಾರಣ ಅವಳಿಗೂ ಹಿಡಿಸಿತ್ತು. ಇನ್ನು ನಮ್ಮ ತಂದೆಯವರು ಬಂದು ನೋಡಿ, ಮಗೂ ಇದು 40×64 ದೊಡ್ಡದಾದ, ಉತ್ತರ ದಿಕ್ಕಿನ ನಿವೇಶನ. ಪೂರ್ವಕ್ಕೆ ನೀರು ಹರಿಯುತ್ತಿರುವುದರಿಂದ ವಾಸ್ತುವಿಗೆ ಪ್ರಶಸ್ತವಾಗಿದೆ ನೋಡು ಎಂದರು. ಇನ್ನು ನಮ್ಮ ಮಾವನವರ ಮನೆಯಿಂದ ಕೇವಲ ಮೂರು ರಸ್ತೆಗಳ ದೂರ ಎರಡು ನಿಮಿಷದಷ್ಟೇ ಹತ್ತಿರವಿದ್ದ ಕಾರಣ, ಎಲ್ಲರಿಗೂ ಇಷ್ಟವಾಗಿತ್ತಾದರೂ, ನನ್ನ ಅಂದಾಜಿನ ಪ್ರಕಾರ 30×40 ಇಲ್ಲವೇ 30×50 ನಿವೇಶನ ಖರೀದಿಸಿ ಅದರಲ್ಲೊಂದು ಚೆಂದದ ಮನೆಯನ್ನು ಒಟ್ಟು ಹತ್ತು ಲಕ್ಷಗಳಲ್ಲಿ ಮುಗಿಸುವುದಾಗಿತ್ತು. ಆದರೇ ಈ ನಿವೇಶನಕ್ಕೇ ಹತ್ತು ಲಕ್ಷಗಳಾಗುತ್ತಿದ್ದ ಕಾರಣ ಒಂದು ಮನಸ್ಸು ಬೇಡ ಎಂದರೂ ಮತ್ತೊಂದು ಮನಸ್ಸು ಮಾರ್ನಾತೋ ಹಾತೀ ಕೋ ಹೀ ಮಾರ್ನಾ ಎಂಬ ಗಾದೆಯಂತೆ ಗಟ್ಟಿ ಮನಸ್ಸು ಈಗ ನಿವೇಶನ ಖರೀದಿಸೋಣ ಮುಂದೆ ಆದಾಗ ಮನೆ ಕಟ್ಟಿದರಾಯ್ತು ಎಂದು ನಿರ್ಧರಿಸಿ, ನನ್ನ ಬಳಿಯಿದ್ದ ಎರಡು ಲಕ್ಷ ಮತ್ತು ನಮ್ಮಾಕಿಯ ಬಳಿ ಇದ್ದ ಒಂದು ಲಕ್ಷ ಒಟ್ಟು ಗೂಡಿಸಿ, ಉಳಿದ ಹಣಕ್ಕೆ ಬ್ಯಾಂಕಿನ ವ್ಯವಸ್ಥಾಪಕರು ಮಾವನವರಿಗೆ ಪರಿಚಯವಿದ್ದ ಕಾರಣ, ಸಾಲವೂ ಸುಲಭವಾಗಿ ಲಭಿಸಿ, ಹೂವಿನ ಸರ ಎತ್ತಿದಂತೆ ನಿವೇಶನ ಖರೀದಿಸಿಯೇ ಬಿಟ್ಟೆವು. ಮಾಘ ಮಾಸದ ಒಂದೊಳ್ಳೇ ದಿನ ನೋಡಿ ಸಾಂಕೇತಿಕವಾಗಿ ಗುದ್ದಲೀ ಪೂಜೆಯೂ ಮಾಡಿಯಾಗಿತ್ತು.
ಅಷ್ಟರಲ್ಲಿಯೇ ನನ್ನ ಕೆಲಸದಲ್ಲೂ ಬದಲಾಗಿ ಸ್ವಲ್ಪ ಸಂಬಳವೂ ಹೆಚ್ಚಾಗಿತ್ತು ಮತ್ತು ಬ್ಯಾಂಕಿನ ವ್ಯವಸ್ಥಾಪಕರೂ ಬದಲಾಗಿ ಮತ್ತೊಬ್ಬ ಚುರುಕಾದವರು ಬಂದಿದ್ದರು. ಆವರ ಬಳಿ ಸುಮ್ಮನೇ ನಮ್ಮ ಅಳಿಯ ಮನೆ ಕಟ್ಟಲು ಸಾಲ ಬೇಕು ಅಂತಿದ್ದಾರೆ. ಮತ್ತೆ ಸಾಲ ಕೊಡಲು ಸಾಧ್ಯವೇ ಎಂದು ಪೀಠಿಕೆ ಹಾಕಿದಾಗ, ಅವರ Salary Slip ತಂದು ಕೊಡಿ ನೋಡೋಣ ಎಂದಿದ್ದೇ ತಡಾ, ನನ್ನ ಎಲ್ಲಾ ದಾಖಲೆಗಳನ್ನು ಕೊಟ್ಟೇ. ಅವರೂ ಸಹಾ ಮನೆ ಕಟ್ಟಲು ಸಾಲ ಮಂಜೂರಾತಿ ಮಾಡಿಯೇ ಬಿಟ್ಟರು. ಈಗ ನೋಡಿ ಮನೆ ಹೇಗೆ ಕಟ್ಟುವುದು ಎಂಬ ಪೀಕಲಾಟ. ಆಪ್ಪಾ ಅಮ್ಮನಿಗೆ ವಾಸ್ತು ಪ್ರಕಾರ ಕಟ್ಟ ಬೇಕು. ಮಡದಿಗೆ ಮಾಡ್ರನ್ ಆಗಿ ಕಟ್ಟ ಬೇಕು. ನನಗೂ ಮನೆಯ ಮುಂದೆ ತಂಪಾದ ಗಿಡ ಮರಗಳು ಇದ್ದು ನಮ್ಮ ಮನೆಗೆ ಸಾಕಾಗುವಷ್ಟು ಹೂವು, ತರಕಾರಿ ಮತ್ತು ಆಮ್ಲಜನಕವನ್ನು ತಯಾರು ಮಾಡಿಕೊಳ್ಳಬೇಕಾಗಿತ್ತು.
ಇದೇ ಸಲುವಾಗಿ ನಮ್ಮ ಅತ್ತೇ ಮಾವ ಪ್ರತೀ ದಿನ ವಾಕಿಂಗ್ಗಿಗೆ ಹೋಗುವಾಗ ಚಂದನೆಯ ಮನೆಗಳನ್ನು ನೋಡಿ ಆ ಮನೆಯವರ ಪರಿಚಯ ಮಾಡಿಕೊಂಡು ಮನೆಯನ್ನು ನೋಡಿ ಇಷ್ಟವಾದಲ್ಲಿ ವಾರಾಂತ್ಯದಲ್ಲಿ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ಇವೆಲ್ಲವುಗಳನ್ನೂ ಗಮನದಲ್ಲಿ ಇಟ್ಟುಕೊಂಡು ಒಂದೆರಡು Architectಗಳನ್ನು ಭೇಟಿ ಆದೆವಾದರೂ ಕೆಲವರು Modern Design ಕೊಟ್ಟರೇ ಅದು ವಾಸ್ತು ಪ್ರಕಾರ ಇರುತ್ತಿರಲಿಲ್ಲ, ಇನ್ನು ಕೆಲವರದ್ದು ವಾಸ್ತು ಪ್ರಕಾರ ಇದ್ದರೆ Modern ಆಗಿರುತ್ತಿರಲಿಲ್ಲವಾದ್ದ ಕಾರಣ, ನಾನೇ ನನ್ನ ಅನುಕೂಲ ಮತ್ತು ಅಭಿರುಚಿಗೆ ತಕ್ಕಂತೆ ಮನೆಯ Design ಮಾಡತೊಡಗಿದೆ. ಹತ್ತಾರು Design ಮಾಡಿ ಮನೆಯವರಿಗೆ ತೋರಿಸಿದರೆ, ಅಪ್ಪಾ ವಾಸ್ತು ಸರಿ ಇಲ್ಲ ಎಂದರೆ, ಮಡದಿ ಮತ್ತೊಂದು ಸರಿ ಇಲ್ಲಾ ಎನ್ನುತ್ತಾ ಎತ್ತು ಏರಿಗೆ ಎಳೆದರೇ ಕೋಣ ನೀರಿಗೆ ಎಳೆಯಿತು ಎನ್ನುವ ಹಾಗಿತ್ತು. ಹತ್ತಾರು ದಿನಗಳ ಕಾಲ ನಾನು ಮಾಡುತ್ತಿದ್ದ Design ನೋಡಿ, ನಮ್ಮ ಮೂರು ವರ್ಷದ ಮಗಳೂ ಸಹಾ ಸೀಮೇ ಸುಣ್ಣ ತೆಗೆದುಕೊಂಡು ನೆಲದ ಮೇಲೆ ಅವಳಿಷ್ಟ ಬಂದ ಹಾಗೆ ಗೆರೆ ಎಳೆದು ಇದು ಅಡುಗೆ ಮನೆ, ಇದು ತಾತಾ-ಅಜ್ಜಿ ರೂಮ್. ಇದು ನಮ್ಮ ರೂಮ್ ಎಂದು ಬರೆಯುತ್ತಿದನ್ನು ನೋಡಿದ ಮಡದಿ, ಅಪ್ಪಾ ಮಗಳು ಮನೆ Design ಮಾಡಿದ್ದು ಸಾಕು, ನಿಮ್ಮಿಷ್ಟ ಬಂದ ಹಾಗೆ ಕಟ್ಟಿಕೊಳ್ಳಿ ಎಂದು ತಾಕೀತು ಮಾಡಿದಳು. ಕಾಕತಾಳೀಯವೆಂದರೆ, ಅಂದು ನನ್ನ ಜೊತೆ ನೆಲದ ಮೇಲೆ ಮನೆ Design ಮಾಡುತ್ತಿದ್ದ ಮಗಳು ಇಂದು Acrhitecture ಓದುತ್ತಿದ್ದಾಳೆ.
ವಾಸ್ತುವಿಗೆ ಹೊಂದುವಂತೆ ನಮ್ಮ ಅನುಕೂಲಕ್ಕೆ ತಕ್ಕಂತೆ ಒಂದು Design ಸಿದ್ಧ ಪಡಿಸಿಯಾಗಿತ್ತು ಅದಕ್ಕೆ ಪೂರಕವಾಗಿ ಮಹಾನಗರ ಪಾಲಿಕೆಯ ಪರವಾನಗಿಯನ್ನೂ ಪಡೆದು ಇನ್ನು ಮನೆ ಕಟ್ಟುವರನ್ನು ಹುಡಕ ಬೇಕಿತ್ತು. ಅಲ್ಲಿಯೂ ಸಹಾ ಹತ್ತಾರು ಜನರನ್ನು ವಿಚಾರಿಸಿ ಕಡೆಗೆ ಒಬ್ಬ ಸಿವಿಲ್ ಇಂಜಿನಿಯರ್ ಮತ್ತು ಮೇಸ್ತ್ರಿಯನ್ನು ಗೊತ್ತು ಮಾಡಿಕೊಂಡು ಅವರೆಲ್ಲರಿಗೂ ದಿನಗೂಲಿ ಲೆಖ್ಖದಲ್ಲಿ ಮನೆ ಕಟ್ಟಲು ಒಪ್ಪಿಸಲಾಯಿತು. ನಮ್ಮಾಕಿಯ ಮಾವ ಗುಂಡೂರಾವ್ Electrician ಮತ್ತು ಅದಾಗಲೇ ಹತ್ತಾರು ಮನೆಗಳನ್ನು ಕಟ್ಟಿದ ಅನುಭವ ಇದ್ದ ಕಾರಣ ಅವರನ್ನೂ ಸಂಪರ್ಕಿಸಿ ಅವರ ಪರಿಚಯವಿದ್ದ ಬಡಗಿಯನ್ನೇ ನೇಮಿಸಿ ಮನೆಗ ಅಗತ್ಯವಿದ್ದ ಎಲ್ಲಾ ಮರ ಮುಟ್ಟುಗಳನ್ನೂ ಖರೀದಿಸಿ ನಮ್ಮ ಹಳೆಯ ಮನೆಯ ಮುಂದೆ ಅವರ ಕೆಲಸವೂ ಶುರುವಾಯಿತು.
ಗಾರೆ ಕೆಲಸದವರು ಸಿಕ್ಕಾಗಿದೆ ಈಗ ಬೇಕಿದ್ದದ್ದು ಬಾರ್ ಬೆಂಡರ್. ಅಲ್ಲಿ ಇಲ್ಲಿ ಕೆಲವರನ್ನು ವಿಚಾರಿಸಿದಾಗ ಪರಿಚಯವಾದವರೇ ಅಲಿ. ಜನ್ಮತಃ ಮುಸಲ್ಮಾನರಾದರೂ ಅಪ್ಪಟ ಕನ್ನಡಿಗ ಮತ್ತು ಸೋಮವಾರ ಲಕ್ಷ ಕೊಟ್ಟರೂ ರಾಹು ಕಾಲದ ಮುಂಚೆ ಕೆಲಸ ಆರಂಭಿಸದ ಕೆಲಸಗಾರ. ಇನ್ನು ಬೇಕಿದ್ದದ್ದು ಶೀಟ್ ಸೆಂಟ್ರಿಂಗ್ ಹಾಗೂ ಹೀಗೂ ಒಬ್ಬನನ್ನು ಹಿಡಿದು ಕೆಲಸ ಆರಂಭಿಸಿಯೇ ಬಿಟ್ಟೆವು. ಮನೆ ಕಟ್ಟಲು ಮರಳು, ಇಟ್ಟಿಗೆ, ಜೆಲ್ಲಿ ತರಿಸಿದ್ದಾಯ್ತು. ನೆಲ ಅಗಿಸಿದ್ದಾಯ್ತು. ನೋಡ ನೋಡುತ್ತಿದ್ದಂತೆಯೇ 16 ಪಿಲ್ಲರ್ಗಳು ಎದ್ದೇ ಬಿಟ್ಟಿತು. ಬೆಳಿಗ್ಗೆ ಆರು ಗಂಟೆಗೆಲ್ಲಾ ಹೊಸಾ ಮನೆಯ ಹತ್ತಿರ ಬಂದು ನೀರು ಹಾಕಿ ಪುನಃ ಮನೆಗೆ ಹೋಗಿ ತಿಂಡಿ ತಿಂದು ಕಛೇರಿಗೆ ಸಿದ್ಧವಾಗಿ ಹೊಸಾ ಮನೆಯ ಹತ್ತಿರ ಬರುವಷ್ಟರಲ್ಲಿ ಮೇಸ್ತ್ರೀ ಮತ್ತು ಆಳುಗಳು ಬಂದಿರುತ್ತಿದ್ದರು. ಅವತ್ತಿನ ಕೆಲಸವನ್ನು ಅವರಿಗೆ ತಿಳಿಸುವ ಹೊತ್ತಿಗೆ ಮಾವನವರು ಅಲ್ಲಿಗೆ ಬಂದಿರುತ್ತಿದ್ದರು. ಅವರಿಗೂ ಅಂದು ಮಾಡಿಸ ಬೇಕಾದ ಕೆಲಸ ತಿಳಿಸಿ ಕಛೇರಿಗೆ ಹೋಗುತ್ತಿದೆ. ಗಂಟೆ ಹತ್ತಾಗುತ್ತಿದ್ದಂತೆಯೇ ಅಪ್ಪಾ ಸ್ನಾನ ಸಂಧ್ಯಾವಂದನೆ, ತಿಂಡಿ ಮುಗಿಸಿ ಮನೆ ಹತ್ತಿರ ಬಂದು ಮಾವನವರನ್ನು ಮನೆಗೆ ಕಳುಹಿಸಿ ಮಧ್ಯಾಹ್ನ ಊಟದವರೆಗೂ ನೋಡಿ ಕೊಂಡು ಅವರು ಮನೆಗೆ ಬಂದರೆ ಪುನಃ ನಮ್ಮ ಮಾವ ಇಲ್ಲವೇ ಅತ್ತೆಯವರು ಊಟ ಮುಗಿಸಿಕೊಂಡು ಆರಾಮವಾಗಿ ಕುಳಿತಿರುತ್ತಿದ್ದ ಕೆಲಸಗಾರರನ್ನು ಎಬ್ಬಿಸಿ ಕೆಲಸಕ್ಕೆ ಹಚ್ಚುತ್ತಿದ್ದರು. ಮತ್ತೆ ಸಾಯಂಕಾಲ ನಾಲ್ಕಕ್ಕೆ ಅಪ್ಪಾ ಬಂದು ದಿನದ ಕೆಲಸ ಮಗಿಯುವವರೆಗೂ ನೋಡಿ ಕೊಂಡು ಉಳಿದ ಸಿಮೆಂಟ್ ಎಲ್ಲವನ್ನೂ ಭದ್ರಗೊಳಿಸುತ್ತಿದ್ದರು. ಸಂಜೆ ನನ್ನ ಕೆಲಸ ಮುಗಿಸಿ ಎಷ್ಟೇ ಹೊತ್ತಿಗೆ ಬಂದರು ಸೀದಾ ಹೊಸಾ ಮನೆಯ ಹತ್ತಿರ ಹೋಗಿ ಅವತ್ತಿನ ಕೆಲಸ ನೋಡಿಯೇ ಮನೆಗೆ ಹೋಗುತ್ತಿದ್ದೆ. ಹೀಗೆ ಇಡೀ ಕುಟುಂಬದವರೆಲ್ಲರ ಮೇಲುಸ್ತುವಾರಿಯಿಂದ ಕೆಲಸ ಸುಗಮವಾಗಿತ್ತು.
ಶನಿವಾರ ಬಂದಿತೆಂದರೆ, ಬೆಳಿಗ್ಗೆ ಮುಂದಿನ ವಾರಕ್ಕೆ ಬೇಕಾಗುವ ಕಟ್ಟಡದ ಸಾಮಗ್ರಿಗಳೆಲ್ಲವನ್ನೂ ತರುವ ಕೆಲಸವಾದರೆ, ಸಂಜೆಯಾಯಿತೆಂದರೆ ಬಡವಾಡೆ ಕೆಲಸ. ಪ್ರತೀ ದಿನವೂ ಎಷ್ಟು ಜನ ಕೆಲಸಕ್ಕೆ ಬಂದಿದ್ದವರು ಎಂಬುದನ್ನು ಪುಸ್ತಕವೊಂದರಲ್ಲಿ ಮಾವನವರು ಬರೆದಿಡುತ್ತಿದ್ದದ್ದರ ಜೊತೆಗೆ ಮೇಸ್ತ್ರಿಯ ಲೆಖ್ಖವನ್ನೂ ತಾಳೆ ಮಾಡಿ ಹಣ ಕೊಟ್ಟರೆ, ಆ ವಾರ ನೆಮ್ಮದಿ.
ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿದೆ. ಇನ್ನೇನು ಸಜ್ಜಾ ಹಾಕಬೇಕು ಎಂದು ಸಜ್ಜಾಗುತ್ತಿದ್ದಂತೆಯೇ ಶೀಟ್ ಸೆಂಟ್ರಿಂಗ್ ಆಸಾಮೀ ನಾಪತ್ತೆ. ಯಾರೋ ಪುಣ್ಯಾತ್ಮರು ಈ ಶೀಟ್ ಸೆಂಟ್ರಿಂಗ್ ಅವರದ್ದೆಲ್ಲಾ ಇದೇ ಕಥೆ ಸರಿಯಾದ ಸಮಯಕ್ಕೆ ಕೈ ಕೊಡುತ್ತಾರೆ ಅದಕ್ಕೆ ನಮ್ಮದೇ ಶೀಟ್ ಮಾಡಿಸಿಕೊಂಡರೆ ಒಳ್ಳೆದು ಎಂಬ ಹುಳಾ ಬಿಟ್ಟಿದ್ದೇ ತಡಾ ನಮ್ಮ ಮಾವನವರು ವೆಲ್ಡಿಂಗ್ ಶಾಪ್ಗೆ ಹೋಗಿ 200 ಶೀಟ್ ಆರ್ಡರ್ ಕೊಟ್ಟು ಒಂದು ವಾರದೊಳಗೇ ಲಕ ಲಕಾ ಅಂತ ಹೊಳೆಯುತ್ತಿದ್ದ ಶೀಟ್ಗಳು ಬಂದು ನಿಂತಿದ್ದ ಕೆಲಸ ಅಲಿಯವರ ತಂಡ ಪುನರ್ ಆರಂಭಿಸಿ ಸಜ್ಜಾ ಮುಗಿದು, ಸೂರು ಕೂಡಾ ಹಾಕಿ ಅದರ ಮೇಲೆಯೂ ಕಟ್ಟಡ ಮುಗಿದೇ ಹೋದಾಗಾ ಅರೇ ಮನೆ ಕಟ್ಟುವುದು ಇಷ್ಟು ಸುಲಭವಾ? ಎಂದೆನಿಸುದ್ದು ಸುಳ್ಳಲ್ಲ. ನಿಜ ಹೇಳಬೇಕೆಂದರೆ ಅದುವರೆಗೂ ಆಗಿದ್ದು ಕೇವಲ 30% ಕೆಲಸವಷ್ಟೇ.
ಕಟ್ಟಡ ಮುಗಿಯುತ್ತಿದ್ದಂತೆಯೇ ತಮ್ಮ ಹೆಂಡತಿಯ ಮಾವನ ಕಡೆಯ ಎಲೆಕ್ತ್ರಿಕ್ ಕೆಲಸವರು ಒಂದು ಕಡೆ ಗೋಡೆ ಕೊರೆಯುತ್ತಿದ್ದರೆ, ದೂರದ ಮೈಸೂರಿನಿಂದ ನಮ್ಮ ಮುರಳೀ ಚಿಕ್ಕಪ್ಪನ ಆಳುಗಳು ಹೊರಗಡೆ ಪ್ಲಂಬಿಂಗ್ ಕೆಲಸ. ಇವರಿಬ್ಬರ ನಡುವೆ ಬಡಗಿಯೂ ಅಗ್ಗಾಗ್ಗೆ ಬಗ್ಗಿ ನೋಡುತ್ತಿದ್ದ. ಹೀಗೆ ಭರದಿಂದ ಸಾಗುತ್ತಿದ್ದ ಕೆಲಸಕ್ಕೆ ಬ್ರೇಕ್ ಹಾಕಿದ್ದೇ ಆಯಧಪೂಜೆ ಹಬ್ಬ. ಕೆಲಸದವರೆಲ್ಲರೂ ಸಂಭ್ರಮದಿಂದ ನಮ್ಮ ಮನೆಯಲ್ಲೇ ಆಯುಧ ಪೂಜೆ ಮಾಡಿ ಮನೆಯ ಬಾಗಿಲು ಹಾಕಿ ಒಂದು ವಾರದ ನಂತರ ಬರುತ್ತೇವೆ ಎಂದು ತಮಿಳು ನಾಡಿಗೆ ಹೋದವರು ಒಂಚು ವಾರ, ಎರಡು ವಾರ, ಉಹೂಂ ಮೂರನೇ ವಾರವೂ ಪತ್ತೆಯೇ ಇಲ್ಲ. ಈಗಿನ ಕಾಲದಂತೆ ಮೊಬೈಲ್ ಕೂಡಾ ಇಲ್ಲದಿದ್ದ ಕಾರಣ ನಮಗೆಲ್ಲರಿಗೂ ಪರದಾಟ. ಇಷ್ಟರ ಮಧ್ಯೆ ಆಯುಧ ಪೂಜೆಗೆಂದು extra advance ಪಡೆದುಕೊಂಡ ಹೋದ engineer ಫೋನ್ Not reachable. ಅಂತೂ ಇಂತೂ ದೀಪಾವಳಿ ಹಬ್ಬ ಮುಗಿಸಿಕೊಂಡು ಕೆಲಸದವರು ಬಂದರೆ, ದೂರದಲ್ಲಿ ಬೇರೆ ಮನೆಯ ಕೆಲಸ ಸಿಕ್ಕಿತ್ತು ಎಂದು engineer ನಾಪತ್ತೆ.
ನಮ್ಮಾಕಿಯ ಮಾವ ಗುಂಡೂರಾಯರ ನೇತೃತ್ವದಲ್ಲೇ ಕೆಲಸ ಮುಂದುವರೆಸಿ, ಆಂದ್ರಾದ ಕಡಪಾ ಬಳಿಯ ಬೇತಂಚೆಲ್ಲಾ ಎಂಬ ಗ್ರಾಮಕ್ಕೆ ಖುದ್ದಾಗಿ ಹೋಗಿ ಪ್ರತಿಯೊಂದು ಕಲ್ಲನ್ನೂ ಸ್ವತಃ ಆರಿಸಿಕೊಂಡು ಲಾರಿಯಿಂದ ಬೆಂಗಳೂರಿಗೆ ತಂದು, ಅಲಂಕಾರಿಕವಾಗಿ ಮನೆಯ ನೆಲಹಾಸನ್ನು ಹಾಸುವಷ್ಟರಲ್ಲಿ ನೀರಿನಂತೆ ದುಡ್ಡು ಹರಿಯತೊಡಗಿತ್ತು. ಹೇಗಾದರೂ ಮಾಡಿ ಮನೆಯನ್ನು ಮುಗಿಸಿದರೆ ಸಾಕಪ್ಪ ಎಂಬ ದೈನೇಸಿ ಸ್ಥಿತಿ ತಲುಪಿದ್ದೆ. ಅದೇ ಸಮಯಕ್ಕೆ ನಮ್ಮ ಮಡದಿಯೂ ತುಂಬಿದ ಬಸುರಿಯಾಗಿದ್ದು ಯಾವಾಗ ಬೇಕಾದರೂ ಹೆರಿಗೆಯಾಗಬಹುದು ಎಂಬ ಆತಂಕವಿದ್ದ ಕಾರಣ, ಸುಣ್ಣಾ ಬಣ್ಣ ಆಮೇಲೆ ಮಾಡಿಸಿಕೊಳ್ಳೋಣ ಆದಷ್ಟು ಬೇಗ ಮನೆ ಮಟ್ಟಿಗೆ ಗೃಹ ಪ್ರವೇಶ ಮಾಡಿಬಿಡೋಣ ಎಂದು ನನ್ನ ಆಲೋಚನೆ.
ಇಷ್ಟು ಚೆನ್ನಾಗಿ ಮನೆ ಕಟ್ಟಿಸಿದ್ದೇವೆ. ಹತ್ತಾರು ಜನರನ್ನು ಕರೆಸಿ ಊಟ ಹಾಕಿಸಿದಿದ್ದರೆ ಅದೇನು ಚೆನ್ನಾ. ನೀನು ಗೃಹಪ್ರವೇಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ನಾವೇ ಮಾಡ್ಕೋತೀವಿ ಅಂತಾ ಅಪ್ಪಾ ಅಮ್ಮನ ವರಾತ. ಸರಿ ನಿಮ್ಮಿಷ್ಟ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದರೂ. ಮನೆಯ ಗೃಹಪ್ರವೇಶದ ಆಮಂತ್ರಣ ಪತ್ರಿಕೆಯ ಮುದ್ರಣ, ಅದನ್ನು ಹಂಚುವುದು, ಅಡಿಗೆಯವರೊಂದಿಗೆ ಮಾತುಕತೆ, ಅಡುಗೆಗೆ ಬೇಕಾದ ಸಾಮಾನು ಎಲ್ಲವನ್ನೂ ನಾನೇ ತಂದಿದ್ದಾಯ್ತು. ಇಂದಿಗೆ ಸರಿಯಾಗಿ 17 ವರ್ಷಗಳ ಹಿಂದೆ ಕಾರ್ತೀಕ ಮಾಸದಲ್ಲಿ ದಿನಾಂಕ 28.11.2003ರಂದು ನೂರಾರು ಬಂಧು-ಬಾಂಧವರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಗೃಹಪ್ರವೇಶ ಮತ್ತು ಸತ್ಯನಾರಾಯಣ ಪೂಜೆ ಮುಗಿದಿತ್ತು. ಅಪ್ಪಾ-ಅಮ್ಮಾ ಗೃಹಪ್ರವೇಶದ ಪೂಜೆಗೆ ಕುಳಿತುಕೊಂಡರೆ, ತುಂಬಿದ ಬಸುರಿ ಮತ್ತು ನಾನು ಸತ್ಯನಾರಾಯಣ ಪೂಜೆಮಾಡಿದ್ದೆವು. ನಮ್ಮ ಕಾತ್ಯಾಯಿನಿ ಅತ್ತೆ ಮನೆಯ ಮುಂದೆ ಇಡೀ ರಸ್ತೆ ತುಂಬಾ ಅಗಲವಾದ ರಂಗೋಲಿಯೇ ಎದ್ದು ಕಾಣುತ್ತಿತ್ತು. ಮನೆಯವರೆಲ್ಲರ ಪರಿಶ್ರಮದಿಂದ ಕಟ್ಟಿದ ಮನೆಯಲ್ಲಿ ಸದಾ ಕಾಲವೂ ಸುಖಃ ಶಾಂತಿಯಿಂದ ಇರಲೆಂದು ಸಂಭ್ರಮ ಎಂದು ಹೆಸರಿಟ್ಟಿದ್ದೆವು.
ಬೆಳಿಗ್ಗೆ ಪೂಜೆಗೆ ಬರಲಾಗದಿದ್ದವರು ಸಂಜೆಯೂ ಮನೆ ನೋಡಲು ಬರತೊಡಗಿದ್ದರು. ಎಲ್ಲರೊಂದಿಗೂ ಮನೆಯನ್ನು ತೋರಿಸಲು ಹತ್ತಿ ಇಳಿದೂ ಕಾಲು ಬಿದ್ದು ಹೋಗಿತ್ತು. ರಾತ್ರಿ 9:45ಕ್ಕೆ ಎಲ್ಲವೂ ಮುಗಿಯಿತು ಎಂದು ಭಾವಿಸಿದೆವು. ನಮ್ಮ ಅಮ್ಮನ ಸೋದರ ಮಾವನ ಮಗ ರವಿ, ಮಣೀ ಪಾಯಸ ತುಂಬಾ ಚೆನ್ನಾಗಿದೆ ಇನ್ನೂ ಸ್ವಲ್ಪ ಇದ್ಯಾ? ಎಂದು ಕೇಳಿದ್ದಕ್ಕೆ ನಮ್ಮಮ್ಮ ಇದ್ದ ಪಾಯಸದ ಜೊತೆಗೆ ಬಿಸಿಬೇಳೆ ಬಾತ್ ಮತ್ತು ಮೊಸರನ್ನವನ್ನೂ ಸಿಕ್ಕಿದ ಡಬ್ಬಿಯಲ್ಲಿ ಹಾಕಿಕೊಟ್ಟರು. ಇನ್ನೇನು ಎಲ್ಲವನ್ನೂ ತೆಗೆದುಕೊಂಡು ಮನೆಯ ಹೊಸಿಲು ದಾಟುತ್ತಿದ್ದಂತೆಯೇ ಜೀ.. ಇದ್ದೀರಾ.. ಎಂದು ಎಂಟು, ಹತ್ತು ಸಂಘದ ಸ್ವಯಂಸೇವಕರು ವಾರದ ಬೈಠಕ್ ಮುಗಿಸಿ ಮನೆಗೆ ಬಂದಿದ್ದರು. ಅವರು ಬಂದಿದ್ದನ್ನು ನೋಡಿದ ಮಾವನ ಮಗ ರವೀ ಸದ್ದಿಲ್ಲದೇ ತೆಗೆದುಕೊಂಡು ಹೊರಟಿದ್ದ ಪಾಯಸವನ್ನು ಅಡಿಗೆ ಮನೆಯಲ್ಲಿಯೇ ಇಟ್ಟು ಹೋಗಿದ್ದ. ಅದಕ್ಕೆ ಅಲ್ಲವೇ ಹೇಳೋದು ದಾನೆ ದಾನೇ ಪರ್ ಲಿಖಾ ಹೋತಾ ಹೈ ಖಾನೇ ವಾಲೇ ಕಾ ನಾಮ್ ಎಂದು. ನಮ್ಮ ಮನೆಯ ಗೃಹಪ್ರವೇಶದ ನೆನಪಿಗಾಗಿ ಸಂಘದ ಘೋಷ್ ತಂಡಕ್ಕೆ ಎರಡು ಶಂಖವನ್ನು ಉಡುಗೊರೆಯಾಗಿ ಕೊಟ್ಟು ಎಲ್ಲರೊಂದಿಗೆ ಹರಟುತ್ತಾ ಇದ್ದದ್ದು ಬದ್ದದ್ದೆಲ್ಲವನ್ನೂ ಹಂಚಿಕೊಂಡು ತಿಂದು ಮುಗಿಸುವಷ್ಟರಲ್ಲಿ ಗಂಟೆ ಹನ್ನೆರಡಾಗಿತ್ತು.
ಗೃಹಪ್ರವೇಶದ ಸಂಜೆಯೇ ನಮ್ಮ ಮನೆಯಲ್ಲಿ ಕೆಲಸ ಮಾಡಿದ್ದ ಪ್ರತೀಯೊಬ್ಬ ಕೆಲಸಗಾರರಿಗೂ ಬಟ್ಟೆ ಮತ್ತು ಯಥಾಶಕ್ತಿ ಭಕ್ಷೀಸು ಮತ್ತು ಹೊಟ್ಟೆ ತುಂಬಾ ಊಟ ಹಾಕಿದ್ದವು. ಗೃಹ ಪ್ರವೇಶ ಮುಗಿಯುತ್ತಿದ್ದಂತೆಯೇ ಉಳಿದಿದ್ದ ಕೆಲಸಗಳನ್ನೆಲ್ಲಾ ಮುಗಿಸಿದರು. ಬಣ್ಣದವರೂ ಬಂದು ಬಣ್ಣ ಬಳಿಯುವುದನ್ನು ಮುಗಿಸುವ ಹೊತ್ತಿಗೆ ಎರಡು ವಾರಗಳಾಗಿತ್ತು. ಅದೇ ಸಮಯಕ್ಕೆ ನಮ್ಮ ಮನೆಯ ವಾರಸುದಾರನೂ ಹುಟ್ಟಿದ ಕಾರಣ ಇಡೀ ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಮನೆಕಟ್ಟಿ, ಅದ್ದೂರಿಯ ಗೃಹಪ್ರವೇಶ ಮಾಡಿ ಹೈರಾಣಾಗಿದ್ದ ನಾನು ಮನೆಯ ಮಟ್ಟಿಗೆ ಮಗನ ನಾಮಕರಣ ಮಾಡಿ ಸಾಗರ್ ಎಂಬ ಹೆಸರಿಟ್ಟು ಹಳೇ ಮನೆಯಲ್ಲಿ ಸಂಕ್ರಾತಿ ಮುಗಿಸಿಕೊಂಡು ಹೊಸಾ ಮನೆಗೆ ವಾಸ್ತವ್ಯ ಬದಲಿಸಿದ್ದೆವು.
ಕಾಲ ಕಾಲಕ್ಕೆ ಅನುಗುಣವಾಗಿ ಹತ್ತಾರು ಬದಲಾವಣೆಯೊಂದಿಗೆ, ಚೆಂದನೆಯ ಸುಣ್ಣ ಬಣ್ಣ ಮಾಡಿಸಿಕೊಂಡು ಶೃಂಗರಿಸಿಕೊಂಡು ಅಂದಿನಿಂದ ಇಂದಿನವರೆಗೂ ಮನೆ ಸಂಖ್ಯೆ 1000ದ ಜೊತೆ ಸಂಭ್ರಮ ಸೇರಿಕೊಂಡು ಸಾವಿರದ ಸಂಭ್ರಮ ಎಂದಾಗಿದೆ. ಇದೇ ಮನೆಯಲ್ಲಿಯೇ ನಮ್ಮ ಅತ್ತೆಯ ಮಗಳ ನಿಶ್ಚಿತಾರ್ಥ, ನನ್ನ ಮಗನ ಉಪನಯನ, ಮಕ್ಕಳ ಹುಟ್ಟುಹಬ್ಬ ಹೋಮ ಮತ್ತು ಹವನಾದಿಗಳಲ್ಲದೇ, ಹತ್ತಾರು ಸಂಘದ ಬೈಠಕ್, ಗುರು ಪೂಜೋತ್ಸವ, ಸಂಗೀತ ಕಛೇರಿಗಳು ನಡೆದು ಮನೆಯ ಹೆಸರಿನ ಅನ್ವರ್ಥದಂತೆಯೇ ಸಂಭ್ರಮ ಮನೆ ಮಾಡಿದೆ. ಇವೆಲ್ಲವುಗಳ ಜೊತೆಯಲ್ಲಿಯೇ ಅಜ್ಜಿ, ಅಮ್ಮಾ ಮತ್ತು ಅಪ್ಪನ ಅಗಲಿಕೆಯ ದುಃಖಕ್ಕೂ ಈ ಮನೆ ಸಾಕ್ಷಿಯಾಗಿದೆ. ಕಳೆದ 17 ವರ್ಷಗಳಲ್ಲಿ ನಮ್ಮ ವಂಶದ ನಾಲ್ಕು ತಲೆಮಾರನ್ನು ಕಂಡಿರುವ ನಮ್ಮೀ ಮನೆ, ಇನ್ನೂ ಹತ್ತಾರು ತೆಲೆಮಾರಿಗೆ ಆಶ್ರಯವನ್ನು ನೀಡಲಿ ಎನ್ನುವುದೇ ನಮ್ಮೆಲ್ಲರ ಆಶ್ರಯವಾಗಿದೆ. ಇಂದಿಗೆ ತನ್ನ ಹದಿನೆಂಟನೇ ವರ್ಧಂತಿಯನ್ನು ಆಚರಿಕೊಳ್ಳುತ್ತಿರುವ ನಮ್ಮನೆ, 1000 “ಸಂಭ್ರಮ”ಕ್ಕೆ ನಿಮ್ಮೆಲ್ಲರ ಹಾರೈಕೆಗಳು ಸದಾಕಾಲವೂ ಹೀಗೇಯೇ ಇರಲಿ. ಸಮಯ ಮಾಡಿಕೊಂಡು ಅಗ್ಗಾಗ್ಗೇ ಬಂದು ನಮ್ಮ ಮತ್ತು ನಮ್ಮನೆಯ ಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿರಿ ಎನ್ನುವುದೇ ನಮ್ಮಲ್ಲರ ಆಶೆಯಾಗಿದೆ.
ಏನಂತೀರೀ?