ಅರೇ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ತರಕಾರಿಗಳ ಬೆಲೆ ಎಲ್ಲವೂ ಗಗನಕ್ಕೇರಿರುವಾಗ ಇದೇನಿದು 1 ರೂಪಾಯಿಗೆ ಹೊಟ್ಟೆ ತುಂಬಾ ಊಟಾನಾ? ಅದೂ ಈಗಿನ ಕಾಲದಲ್ಲಿ? ಸರ್ಕಾರವೇ ನಡೆಸುವ ಇಂದಿರಾ ಕ್ಯಾಂಟೀನ್ ನಲ್ಲಿಯೇ ಪ್ಲೇಟ್ ಊಟ ಒಂದಕ್ಕೆ 10 ರೂಪಾಯಿಗಳು ಇರುವಾಗ, ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೇ ಅಂತಾ ನಂಬುವುದು ಸ್ವಲ್ಪ ಕಷ್ಟವೇ ಅದರೂ ಇದು ದೂರದ ದೆಹಲಿಯಲ್ಲಿ ನಿತ್ಯ ಸತ್ಯವಾದ ಸಂಗತಿಯಾಗಿದೆ.
ದೆಹಲಿಯ ಭೂಟೊ ವಾಲಿ ಗಲ್ಲಿಯಲ್ಲಿರುವ ನಂಗ್ಲೋಯಿ ಅವರ ಶ್ಯಾಮ್ ರಸೊಯಿಯಲ್ಲಿ ಪ್ರತೀ ದಿನವೂ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಸುಮಾರು 1 ಸಾವಿರದಿಂದ 1,100 ಜನರು ಈ ಊಟಕ್ಕಾಗಿ ಸರದಿಯಲ್ಲಿ ಕಾದು ನಿಂತು ಈ ರುಚಿಕವಾದ ಊಟವನ್ನು ಸವಿಯುತ್ತಿದ್ದಾರೆ. ಕಳೆದ ಎರಡು ವರ್ಷದಿಂದ, ಪ್ರವೀಣ್ ಕುಮಾರ್ ಗೋಯಲ್ ಎಂಬುವರು ಈ ಶ್ಯಾಮ್ ರಸೋಯ್ ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲಿಯೇ ತಿನ್ನಲಿಕ್ಕೆ ಆಗದವರು ಮನೆಯಿಂದ ಪಾತ್ರೆಗಳನ್ನು ತಂದು ಈ ಹೋಟೆಲ್ಲಿನ್ನಿಂದ ಪಾಸರ್ಲ್ ಸಹಾ ತೆಗೆದುಕೊಂಡು ಹೋಗುವುದಲ್ಲದೇ, ಅಲ್ಲಿಯೇ ಹತ್ತಿರದ ಇಂದ್ರಲೋಕ್, ಸಾಯಿ ಮಂದಿರ್‌ನಂತಹ ಪ್ರದೇಶಕ್ಕೆ ಆಟೋ ರಿಕ್ಷಾ ಮೂಲಕವೂ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. ಹೀಗೆ ಪ್ರತೀ ದಿನವೂ ಸುಮಾರು 2000 ಜನರ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಬೆಳಿಗ್ಗೆ 1 ರೂಪಾಯಿಗೆ ಬಿಸಿ ಬಿಸಿಯಾದ ಖಡಕ್ ಚಹಾ ಕೂಡ ಇಲ್ಲಿ ಲಭ್ಯವಿದೆ.
ರಂಜೀತ್ ಸಿಂಗ್ ಎಂಬ ಉದ್ಯಮಿಯವರು ನಡೆಸುತ್ತಿದ್ದ ಎನ್‌ಜಿಟಿ ಕಾರ್ಖಾನೆ ವಿವಿಧ ಕಾರಣಗಳಿಂದ ಮುಚ್ಚಿಹೋಗಿದ್ದರಿಂದ ಆ ಜಾಗ ಖಾಲಿ ಇದ್ದದ್ದನ್ನು ಗಮನಿಸಿದ ಪ್ರವೀಣ್ ಕುಮಾರ್ ಗೋಯಲ್ ತಮ್ಮ ಈ ಮಹತ್ಕಾರ್ಯಕ್ಕೆ ಈ ಜಾಗವನ್ನು ಕೊಡಲು ಸಾಧ್ಯವೇ ಎಂದು ಕೇಳಿದಾಗ ರಂಜೀತ್ ಸಿಂಗ್ ತುಂಬು ಹೃದಯದಿಂದ ಕೊಟ್ಟ ಜಾಗದಲ್ಲಿ ಜನರು ಸರಿಯಾಗಿ ನೆಲದ ಮೇಲೆ ಕುಳಿತು ಊಟ ಮಾಡುವ ಸಾಮಾನ್ಯ ವ್ಯವಸ್ಥೆಯನ್ನು ಮಾಡಿದ್ದಾರೆ. ಸುಮಾರು ಐದಾರು ಸಹಾಯಕರೊಂದಿಗೆ ಆರಂಭಿಸಿದ ಈ ಹೊಟೆಲ್ಲಿಗೆ ಅನೇಕ ಸ್ಥಳೀಯರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಇವರ ಜೊತೆ ಕೈಜೋಡಿಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದ ಕೆಲಸವಾಗಿದೆ. ಆರಂಭದಲ್ಲಿ ಕೇವಲ ಬಡ ಜನರು ಮಾತ್ರವೇ ಇಲ್ಲಿಗೆ ಬರುತ್ತಿದ್ದು, ಈ ಹೋಟೆಲ್ಲಿನ ಖ್ಯಾತಿ ಎಲ್ಲೆಡೆಯಲ್ಲಿಯೂ ಹಬ್ಬಿರುವ ಕಾರಣ, ಕೆಲವೊಂದು ಮಧ್ಯಮ ವರ್ಗದ ಜನರು ಮತ್ತು ಶ್ರೀಮಂತರು ಈ ಪ್ರದೇಶವನ್ನು ಹುಡುಕಿಕೊಂಡು ಬಂದು ಊಟ ಮಾಡಿದರೂ ಇನ್ನು ಕೆಲವರು ವಿವಿಧ ಕಾರಣಗಳಿಂದ ಆ ಪ್ರದೇಶಕ್ಕೆ ಹೋಗಿದ್ದಾಗ ಇಲ್ಲಿಯ ಊಟವನ್ನು ಸವಿದು ಬರುವುದು ಗಮನಾರ್ಹವಾದ ಅಂಶವಾಗಿದೆ,
ಕೇವಲ 1 ರೂಪಾಯಿಗಳಿಗೆ ಊಟ ಎಂದರೆ ಅದು ಕಳಪೆಯಾಗಿರದೇ, ಪ್ರತೀ ದಿನವೂ ಬಗೆ ಬಗೆಯ ಭಕ್ಷ ಭೋಜನದೊಂದಿಗೆ, ಸೋಯಾ ಪಲಾವ್, ಅನ್ನ, ರೊಟ್ಟಿ, ಎರಡು ರೀತಿಯ ಪಲ್ಯಗಳು ಮತ್ತು ಹಲ್ವಾ ಇಲ್ಲವೇ ಖೀರ್ ನೊಂದಿಗೆ ಅತ್ಯಂತ ರುಚಿಕರವಾಗಿರುತ್ತದೆ. ಆರಂಭದಲ್ಲಿ, ಈ ಊಟದ ಬೆಲೆ 10 ರೂಪಾಯಿಗಳಿದ್ದು ಈಗ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ 1ರೂಪಾಯಿಗೆ ಇಳಿಸಿದ್ದಾರೆ.
ನಮ್ಮ ಭಾರತೀಯರ ಸಂಸ್ಕಾರ ಮತ್ತು ಸಂಪ್ರದಾಯವೇ ಒಂದು ರೀತಿಯ ಅಭೂತಪೂರ್ವವಾದದ್ದು, ಯಾರೋ ಪುಣ್ಯಾತ್ಮರು ಕೇವಲ 1 ರೂಪಾಯಿಗಳಿಗೆ ಊಟ ಹಾಕುತ್ತಿದ್ದಾರೆ ಎಂದರೆ ಅದನ್ನು ಗಡದ್ದಾಗಿ ಕೇವಲ 1 ರೂಪಾಯಿ ಪಾವತಿಸಿ ತಿಂದು ಹೋಗದೇ, ಈ ಸತ್ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ತಮ್ಮ ಕೈಲಾದ ಮಟ್ಟಿಗೆ ಧನಸಹಾಯವನ್ನು ಮಾಡುತ್ತಾರೆ. ಇನ್ನೂ ಅನೇಕರು ಅಕ್ಕಿ, ಬೇಳೆ ಗೋಧಿ ಮತ್ತು ತರಕಾರಿಗಳನ್ನು ತಂದು ಕೊಡುತ್ತಿರುವ ಕಾರಣದಿಂದ ಈ ಕಾರ್ಯ ನಿರಂತರವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುತ್ತಾರೆ ಶ್ರೀ ಗೋಯಲ್ ಅವರು. ಇತ್ತೀಚೆಗೆ ಒಬ್ಬ ಬಡ ವೃದ್ಧೆಯೊಬ್ಬರು ಇಲ್ಲಿನ ಊಟ ಸವಿದ ನಂತರ ಅವರೂ ಸಹಾ ತಮ್ಮ ಕೈಲಾದ ಮಟ್ಟಿಗಿನ ಸಾಮಗ್ರಿಗಳನ್ನು ತಂದು ಕೊಟ್ಟಿದ್ದನ್ನು ಸ್ಮರಿಸಿಕೊಳ್ಳುತ್ತಾರೆ.
ಎಲ್ಲದ್ದಕ್ಕಿಂತಲೂ ಪ್ರಮುಖವಾದ ಆಂಶವೆಂದರೆ, ಈ ದೇಣಿಗೆಯನ್ನು ಹಣದ ಮೂಲಕ ಸ್ವೀಕರಿಸಿದೆ ಎಲ್ಲವೂ ಡಿಜಿಟಲ್ ಪಾವತಿ ಮೂಲಕ ನಡೆಯುವುದರಿಂದ ಪಾರದರ್ಶಕವೂ ಆಗಿದ್ದು ಜನರಿಗೆ ನಂಬಿಕೆ ಬಂದ ಕಾರಣ ಅನೇಕರು ತನು ಮನ ಮತ್ತು ಧನಗಳ ಮೂಲಕ ಸಹಾಯ ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ವಸು ದೈವ ಕುಟುಂಬಕಂ ಎಂಬ ನಮ್ಮ ಹಿಂದೂ ಧರ್ಮದ ತತ್ವಕ್ಕೆ ಅನುಗುಣವಾಗಿದೆ.
ಸುಮಾರು ದಿನಗಳಿಂದ ಈ ಶ್ಯಾಮ್ ರಸೋಯಿಯಲ್ಲಿ ಊಟ ಮಾಡುತ್ತಿರುವ ವಯೋವೃದ್ಧ ಶ್ರೀ ನರೇಂದ್ರಲಾಲ್ ಶರ್ಮಾ ರವರು ಹೇಳುವಂತೆ ನಾನು ಇಲ್ಲಿ ಕೇವಲ ಒಂದು ರೂಪಾಯಿಗೆ ಸೇವಿಸುತ್ತಿರುವ ಊಟ, ನಿಜಕ್ಕೂ ಶುಚಿ ರುಚಿಯಾಗಿದ್ದು ಇಲ್ಲಿಯವರೆಗೆ ನಮಗೆ ಯಾವುದೇ ಆರೋಗ್ಯ ವ್ಯತಿರಿಕ್ತವಾಗಿಲ್ಲ ಎಂದು ಹೇಳಿದ್ದಲ್ಲದೇ ಕೇವಲ ದೊಡ್ಡವರಲ್ಲದೇ, ಇಲ್ಲಿನ ಊಟವನ್ನು ಸೇವಿಸಿರುವ ಮಕ್ಕಳ ಮೇಲೂ ಯಾವುದೇ ರೀತಿಯ ಪರಿಣಾಮವಾಗದೇ ಎಲ್ಲರೂ ಸಂತೋಷದಿಂದ ಸವಿಯುತ್ತಿದ್ದಾರೆ ಎಂದಿರುವುದು ಆ ಹೋಟೆಲ್ಲಿನ ಖ್ಯಾತಿಯನ್ನು ತಿಳಿಸುತ್ತದೆ.
ಇನ್ನು ಉಚಿತವಾಗಿ ಊಟ ಹಾಕಿದರೆ ನಮ್ಮ ಜನರು ಒಪ್ಪದ ಕಾರಣ, ಕೇವಲ 1 ರೂಪಾಯಿಗೆ ಇಂದಿನ ಕಾಲದಲ್ಲಿಯೂ ಜನರ ಹಸಿವನ್ನು ನೀಗಿಸುತ್ತಿರುವ ಪ್ರವೀಣ್ ಕುಮಾರ್ ಗೋಯಲ್ ಮತ್ತು ಅವರ ತಂಡದವರ ಈ ಅದ್ಭುತ ಕಾರ್ಯಕ್ಕೆ ಒಂದು ಮೆಚ್ಚಿಗೆ ನೀಡುವುದರ ಮೂಲಕ ಅವರ ಈ ಅನನ್ಯವಾದ ಕಾರ್ಯವನ್ನು ಶ್ಲಾಘಿಸೋಣ. ಸಾಧ್ಯವಾದಲ್ಲಿ ಈ ವಿಷಯವನ್ನು ದೆಹಲಿಯ ನಮ್ಮ ಬಂಧು ಮಿತ್ರರಿಗೆ ತಲುಪುವಂತೆ ಮಾಡಿ ಅವರ ಮೂಲಕ ಪ್ರವೀಣ್ ಕುಮಾರ್ ಮತ್ತವರ ಸಂಗಡಿಗರನ್ನು ನಮ್ಮ ಕೈಲಾದ ಮಟ್ಟಿಗೆ ಬೆಂಬಲಿಸಿ ಇನ್ನೂ ಹತ್ತಾರು ವರ್ಷಗಳ ಕಾಲ ಲಕ್ಷಾಂತರ ಮಂದಿಯ ಹಸಿವನ್ನು ನೀಗಿಸುವ ಕಾರ್ಯದಲ್ಲಿ ಪ್ರತ್ಯಕ್ಷವಾಗಿಯೋ ಇಲ್ಲವೋ ಪರೋಕ್ಷವಾಗಿ ಸಹಾಯ ಹಸ್ತವನ್ನು ಚಾಚೋಣ. ಹೊಟ್ಟೇ ತುಂಬಿರುವವರಿಗೆ ಊಟವನ್ನು ಹಾಕುವ ಬದಲು, ಹಸಿದವರಿಗೆ ಊಟವನ್ನು ಹಾಕಿದಾಗ ಸಿಗುವ ಸಂತೃಪ್ತಿಯೇ ಬೇರೆ.
ಏನಂತೀರೀ?
ಗಗನ ಮುಟ್ಟಿದ ಬೆಲೆಗಳ ಕಾಲದಲ್ಲೂ ನಗಣ್ಯ ಎನಬಹುದಾದ ಒಂದು ರೂಪಾಯಿಗೆ ಊಟ, ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ನೀಡುತ್ತಾರೆಂದರೆ ವಿಸ್ಮಯವೇ ಸರಿ…
ಇಂಥಾ ಪರಿಕಲ್ಪನೆ, ಯಶಸ್ವಿಯಾಗಿ ಜಾರಿಗೊಳಿಸುವಿಕೆ , ಸತತ ಮುಂದುವರಿಕೆ, ದಾನಿಗಳ ಸಹಕಾರ ಎಲ್ಲವನ್ನೂ ಗಮನಿಸಿದರೆ ಮಾನವೀಯ ಮೌಲ್ಯಗಳು ಉತ್ತಮ ಮಟ್ಟದಲ್ಲಿರುವುದು ಗಮನಕ್ಕೆ ಬರದೇ ಇರದು…
ಇಂಥಾ ಮಹಾನುಭಾವರ ಸೇವೆ ನಿರಂತರವಾಗಿರಲಿ….
LikeLiked by 1 person