ಈಗಾಗಲೇ ಹತ್ತು ಹಲವಾರು ಬಾರಿ ಬಾರಿ ತಿಳಿಸಿರುವಂತೆ ಬೆಂಗಳೂರಿನ ವಾಸಿಯಾಗಿದ್ದರೂ ನಮ್ಮೂರು ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣದ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರ ಜನರು ವಾಸಿಸುವ ಕೃಷಿಪ್ರಧಾನವಾದ ಗ್ರಾಮವಾದರೂ, ನಮ್ಮೂರಿನಲ್ಲಿರುವ ದೇವಾಲಯಗಳ ಸಂಖ್ಯೆ ಹತ್ತಕ್ಕೂ ಹೆಚ್ಚು. ನಮ್ಮೂರ ಗ್ರಾಮದೇವತೆಯ ಹಬ್ಬ ಪ್ರತೀ ವರ್ಷ ಯುಗಾದಿ ಕಳೆದು ಹದಿನೈದು ದಿನಗಳ ನಂತರ ಬರುವ ಗುರುವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಮೂರುವಾರಗಳ ಕಾಲ ಅದ್ದೂರಿಯಾಗಿ ನೂರಾರು ವರ್ಷಗಳಿಂದ ಸಂಭ್ರಮ ಸಡಗರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ದುರಾದೃಷ್ಟವಷಾತ್ ಈ ಬಾರೀ ಕೋವಿಡ್ ಮಹಾಮಾರಿಯ ಕಾರಣದಿಂದಾಗಿ ಎಲ್ಲಾ ಕಡೆಯಲ್ಲಿಯೂ ಊರ ಹಬ್ಬ ಮುಂದೂಡಲ್ಪಟ್ಟು ಹಬ್ಬ ನಡೆಸಬೇಕೋ ಇಲ್ಲವೋ ಎನ್ನುವ ಡೋಲಾಯಮಾನ ಪರಿಸ್ಥಿತಿ ಇತ್ತು. ಬಾಳಗಂಚಿ ನಮ್ಮೂರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾನು, ನಿಜ ಹೇಳಬೇಕೆಂದರೆ ಊರಿನ ಮಟ್ಟಿಗೆ ಉತ್ಸವ ಮೂರ್ತಿಯೇ. ಹಬ್ಬ ಹರಿದಿನಗಳಲ್ಲಿ ಮಾತ್ರವೇ ಊರಿಗೆ ಹೋಗಿ ಒಂದೆರಡು ದಿನಗಳು ಇಲ್ಲವೇ ಕೆಲವೇ ಗಂಟೆಗಳೂ ಇದ್ದು ಬರುತ್ತೇವೆ. ಈ ಬಾರಿಯ ಊರ ಹಬ್ಬ ನಡೆಯದ ಕಾರಣ ಸುಮಾರು 18 ತಿಂಗಳುಗಳ ಕಾಲ ಊರಿನ ಕಡೆ ತಲೆಹಾಕಿಯೇ ಇರಲಿಲ್ಲ. ಅದೇಕೋ ಏನೋ ಇದ್ದಕ್ಕಿಂದಂತೆಯೇ ನಮ್ಮಾಕೀ ರೀ ಊರಿಗೆ ಹೋಗಿ ಹೊನ್ನಾದೇವಿಗೆ ಮಡಿಲು ತುಂಬಿಸಿ ಬರೋಣ ಎಂದಾಗ ಸಂತೋಷದಿಂದಲೇ ಕಳೆದ ತಿಂಗಳು ಊರಿಗೆ ಹೋಗಿ ನಮ್ಮ ಗ್ರಾಮದೇವತೆ ಹೊನ್ನಮ್ಮ ಮತ್ತು ನಮ್ಮ ಆರಾದ್ಯ ದೈವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಪೂಜೆ ಮಾಡಿಸಿಕೊಂಡು ಬರುವ ಸಮಯದಲ್ಲಿಯೇ ಊರಿನ ನೆರೆಹೊರೆಯವರನ್ನು ಭೇಟಿಯಾದಾಗ ಎಲ್ಲರಿಗೂ ಊರ ಹಬ್ಬ ನಡೆಯದೇ ಬಹಳ ಬೇಸರಿಸಿಕೊಂಡಿದ್ದನ್ನು ಕೇಳಿ ಎಲ್ಲರ ಆಹವಾಲುಗಳನ್ನು ಒಟ್ಟುಗೂಡಿಸಿ ಹಬ್ಬವನ್ನು ಸರಳವಾವಾಗಿಯಾದರೂ ನಡೆಸಬೇಕೆಂದು ಮನವಿ ಪೂರ್ವಕ ಲೇಖನವೊಂದನ್ನು ಬರೆದಿದ್ದೆ.
ದೇವರ ಸಂಕಲ್ಪವೋ ಅಥವಾ ನಮ್ಮ ಮನವಿಯ ಕಾರಣವೋ ಊರ ಹಿರಿಯರೆಲ್ಲಾ ಸೇರಿ ಈ ಬಾರಿ ಸರಳವಾಗಿ ಕಾರ್ತೀಕ ಮಾಸದಲ್ಲಿ ಊರ ಹಬ್ಬ ನಡೆಸಲು ತೀರ್ಮಾನಿಸಿ ಕಳೆದ ಎರಡು ವಾರಗಳಿಂದಲೂ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಮಾಡುತ್ತಾ, ನೆನ್ನೆ ಗುರುವಾರ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಎಂದಿನಂತಿನ ಅದ್ದೂರಿಯಿಲ್ಲದಿದ್ದರೂ ಸಡಗರ ಸಂಭ್ರಮದಿಂದ ಆಚರಿಸಲ್ಪಟ್ಟಿದ್ದು ಕೇವಲ ನಮ್ಮೂರಿನ ಗ್ರಾಮಸ್ಥರಿಗಲ್ಲದೇ ಸುತ್ತಾಮುತ್ತಲಿನ ಹತ್ತಾರು ಗ್ರಾಮಸ್ಥರಲ್ಲದೇ, ದೇಶಾದ್ಯಂತ ಇರುವ ಹೊನ್ನಮ್ಮನ ಭಕ್ತಾದಿಗಳಲ್ಲಿ ಸಂಭ್ರಮ ಮೂಡಿಸಿದೆ. ಹಾಗಾಗಿ ಹಬ್ಬವನ್ನು ಅತ್ಯಂತ ಸುಗಮವಾಗಿ ನಡೆಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
ಯುಗಾದಿ ಹಬ್ಬ ಮುಗಿದ ತಕ್ಷಣವೇ ನಾವೆಲ್ಲರೂ ನಮ್ಮ ಕುಟುಂಬಸ್ಥರನ್ನು ಊರಿನ ಹಬ್ಬಕ್ಕೆ ಆಹ್ವಾನಿಸುವುದಲ್ಲದೇ, ನಮ್ಮ ನೆಚ್ಚಿನ ಸ್ನೇಹಿತರನ್ನೂ ಹಬ್ಬಕ್ಕೆ ಕರೆದುಕೊಂಡು ಹೋಗುವ ಸಂಪ್ರದಾಯವನ್ನು ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದೇವೆ. ಕೇವಲ ಮೂರು ವಾರಗಳ ಹಿಂದೆ ತಾನೇ ಊರಿಗೆ ಕುಟುಂಬ ಸಮೇತ ಹೋಗಿ ಬಂದಿದ್ದಲ್ಲದೇ, ಈ ಬಾರಿ ಮಕ್ಕಳಿಗೆಲ್ಲರಿಗೂ Online classes ಇದ್ದ ಕಾರಣ ನಮ್ಮ ಮನೆಯಿಂದ ನಾನೋಬ್ಬನೇ ಹೋಗಬೇಕಾದ ಪರಿಸ್ಥಿತಿ ಬಂದಾಗ, ಎಂದಿನಂತೆ ನನ್ನ ಸ್ನೇಹಿತರೊಬ್ಬರನ್ನು ಹಬ್ಬಕ್ಕೆ ಆಹ್ವಾನಿಸಿದೆ. ಅವರ ತಾಯಿಯವರ ಆರೋಗ್ಯದ ಕಾರಣ ಬರಲು ಸಾಧ್ಯವಿಲ್ಲ ಎಂದಾಗ ಮತ್ತೊಬ್ಬ ಗೆಳೆಯ ಅರಸೀಕೆರೆಯ ಶ್ರೀ ಅನಂತ ಕೃಷ್ಣ ಅವರನ್ನು ಸಂಪರ್ಕಿಸಲು ಬಹಳ ಬಾರಿ ಪ್ರಯತ್ನಿಸಿದೆನಾದರೂ ಸಾಧ್ಯವಾಗದೇ, ಕಡೆಗೆ ನನ್ನ ಚಿಕ್ಕ ತಂಗಿಗೆ ಕರೆ ಮಾಡಿ ಹಬ್ಬಕ್ಕೆ ಒಬ್ಬನೇ ಹೋಗ್ತಾ ಇದ್ದೇನೆ ಬರ್ತೀಯಾ? ಎಂದು ಕೇಳಿದರೇ, ಅರೇ ನಾವೂ ಹೊರಟಿದ್ದೇವೆ. ನೀನೇ ನಮ್ಮೊಂದಿಗೆ ಬಂದು ಬಿಡು ಒಟ್ಟಿಗೆ ನಾಲ್ಕೂ ಜನರೂ ಬೆಳಿಗ್ಗೆ ಹೋಗಿ ಸಂಜೆ ವಾಪಸ್ಸು ಬರೋಣ ಎಂದಾಗ, ಹೊನ್ನಮ್ಮಾ ಏನಮ್ಮಾ ನಿನ್ನ ಲೀಲೆ ? ಎಂದು ಮನಸ್ಸಿನಲ್ಲಿ ಅಂದುಕೊಂಡು ಬೇರೆ ಯಾವ ಗೆಳೆಯರನ್ನೂ ಊರಿಗೆ ಕರೆಯದೇ ತಂಗಿ. ಭಾವ ಮತ್ತು ಸೋದರ ಸೊಸೆಯೊಂದಿಗೆ ಹಬ್ಬಕ್ಕೆ ನೆನ್ನೆ ಬೆಳಿಗ್ಗೆ ಹೋಗಿ ಭಕ್ತಿ ಪೂರ್ವಕವಾಗಿ ಹಬ್ಬವನ್ನು ಆಚರಿಸಿಕೊಂಡು ಬಂದೆವು.
ನಮ್ಮ ಕುಟಂಬದವರಲ್ಲದೇ, ಈ ಬಾರಿ ಕೆಲವರು ಆಪರಿಚಿತರೂ ಆಗಮಿಸಿ ಹಬ್ಬದ ಉತ್ಸಾಹವನ್ನು ಮತ್ತಷ್ಟೂ ಹೆಚ್ಚಿಸಿದ್ದರು. ಹೀಗೇಯೇ ಅವರನ್ನು ಮಾತನಾಡಿಸುತ್ತಿದ್ದಾಗ ಬಂದವರಲ್ಲೊಬ್ಬರು ಅರಸೀಕೆರೆ ಸತೀಶ್ ಅವಧೂತರು ಎಂದು ಗೊತ್ತಾಗಿ ಅವರಿಗೂ ಸಹಾ ತಾಯಿ ಹೊನ್ನಮ್ಮನನ್ನು ನೋಡ ಬೇಕೆನ್ನುವ ದೈವೀ ಸಂಕಲ್ಪವಾಯಿತು ಎಂದು ಕೇಳಿ ಸಂತೋಷ ಪಟ್ಟಿದ್ದೆ. ಅವರಲ್ಲದೇ ಹಾಸನದಿಂದ ಬಂದಿದ್ದ ಮತ್ತೊಂದು ಕುಟುಂಬದವರ ಪರಿಚಯವಾಯಿತು. ಸತೀಶ್ ಅವಧೂತರು ಅರಸೀಕೆರೆಯವರಾದ್ದ ಕಾರಣ ಇಂದು ಬೆಳಿಗ್ಗೆ ಅರಸೀಕೆಯವರೇ ಆದ ಮತ್ತು ಊರಿಗೆ ಕರೆದುಕೊಂಡು ಹೋಗುವ ಸಲುವಾಗಿ ಹತ್ತಾರು ಬಾರಿ ಪ್ರಯತ್ನಿಸಿದ್ದರೂ ಸಂಪರ್ಕಿಸಲು ಸಾಧ್ಯವಾಗದಿದ್ದ ಗೆಳೆಯ ಅನಂತಕೃಷ್ಣ ಅವರಿಗೆ ಕರೆ ಮಾಡಿದ ತಕ್ಷಣವೇ ಸಂಪರ್ಕ ಸಿಕ್ಕಿ ಹಬ್ಬದ ವಿಚಾರವನ್ನೆಲ್ಲಾ ಸವಿಸ್ಥಾರವಾಗಿ ಹೇಳಿದಾಗ ತಿಳಿದು ಬಂದ ಆಶ್ವರ್ಯಕರವಾದ ಸಂಗತಿಯೆಂದರೆ ಸತೀಶ್ ಅವಧೂತರೂ ಮತ್ತು ಮತ್ತೊಂದು ಕುಟುಂಬ ನಮ್ಮ ಗೆಳೆಯರ ಹತ್ತಿರದ ಸಂಬಂಧಿಗಳೇ ಆಗಿದ್ದರು.
ಸುಮಾರು ತಿಂಗಳ ಕಾಲ ಊರಿಗೆ ಹೋಗದಿದ್ದ ನಾವು ಇದ್ದಕ್ಕಿದ್ದಂತೆಯೇ ಊರಿಗೆ ಹೋಗಿ ಊರಿನ ಹಬ್ಬ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದು, ಆ ಮೂಲಕ ಸರಳವಾಗಿ ಊರ ಹಬ್ಬ ನಡೆಸುವಂತಾಗಿದ್ದು, ನಾನು ಎಲ್ಲರನ್ನೂ ಊರಿಗೆ ಕರೆದುಕೊಂಡು ಹೋಗಬೇಕೆಂದು ಬಯಸಿದ್ದರೇ, ನನ್ನನ್ನೇ ಮತ್ತಾರೋ ಹಬ್ಬಕ್ಕೆ ಕರೆದುಕೊಂಡು ಹೋಗಿದ್ದು. ಇನ್ನು ಹಬ್ಬಕ್ಕೆ ಅರಸೀಕೆರೆಯ ಗೆಳೆಯನನ್ನು ಕರೆದುಕೊಂಡು ಹೋಗಲಾರದಿದ್ದರೇನಂತೇ ಅಚಾನಕ್ಕಾಗಿ ಅವರ ಕುಟುಂಬಸ್ಥರೇ ನಮ್ಮೂರಿನ ಹಬ್ಬಕ್ಕೆ ಅತಿಥಿಗಳಾಗಿ ಬಂದು ನಮ್ಮ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು. ಇದಕ್ಕೇ ಅಲ್ಲವೇ ಹೇಳೋದು ದೈವ ಸಂಕಲ್ಪ ಎಂದು. ಕುವೆಂಪು ಅವರೇ ಹೇಳಿದಂತೆ ತೇನವಿನಾ ತೃಣಪಮಿ ನಚಲತಿ. ಅಂದರೆ ಭಗವಂತನ ಅನುಗ್ರಹವಿಲ್ಲದೇ ಒಂದು ಹುಲ್ಲು ಕಡ್ಡಿಯೂ ಆಚೀಚೆ ಅಲುಗಾಡದು ಎಂದು. ಅದಕ್ಕಾಗಿಯೇ ಭಗವಂತನನ್ನು ಭಕ್ತಿಯಿಂದ ನಮಿಸುತ್ತಾ ಅವನ ಕೃಪಾಶೀರ್ವಾದಗಳಿಗೆ ಪಾತ್ರರಾಗೋಣ.
ಏನಂತೀರೀ?
Let me apologize as l do not know how to type be it English and let alone in Kannada although my mother tongue is Kannada.
The above writing in pure( Shuddha) Kannada is really wonderful. It looked As If l was with u on your visit to your place. Reading it l was like being with the Goddess Honnamma., Herself. I could feel Her presence here at Mysore in my home.,with divine Vibration and divine smell the whole atmosphere was charged. I am blessed. Thank u Sir for having taken me to the world beyond . Let Her bless u all
With kind regards
GopalSwamy Honnavalli
LikeLiked by 1 person