ಮಸಾಲೆಗಳ ರಾಜ ಎಂಡಿಹೆಚ್ ಧರಂಪಾಲ್ ಗುಲಾಟಿ

ಪ್ರಪಂಚಾದ್ಯಂತ ನಾನಾ ಕಾರಣಗಳಿಂದಾಗಿ ಹರಡಿರುವ ಭಾರತೀಯರು ಉಳಿದೆಲ್ಲಾ ವಿಷಯಗಳಲ್ಲೂ ಅಲ್ಲಿಯ ಸ್ಥಳೀಯತನಕ್ಕೆ ಒಗ್ಗಿಕೊಂಡರೂ, ಊಟದ ವಿಷಯದಲ್ಲಿ ಮಾತ್ರಾ, ಇನ್ನೂ ಭಾರತೀಯತೆಯನ್ನು ಬಿಟ್ಟಿಲ್ಲ ಎಂದರೆ ತಪ್ಪಾಗಲಾರದು. ಪಿಜ್ಜಾ, ಪಾಸ್ತ ಬರ್ಗರ್ ಎಷ್ಟೇ ತಿಂದರೂ ಉತ್ತರ ಭಾರತೀಯರಾದರೆ ರೊಟ್ಟಿ ದಾಲ್ ಇನ್ನು ದಕ್ಷಿಣ ಭಾರತೀಯರಾದರೇ ಅನ್ನಾ ಸಾರು ಮೊಸರನ್ನ ತಿಂದರೇನೇ ಅವರಿಗೆ ಒಂದು ರೀತಿಯ ಸಂತೃಪ್ತಿ. ಹಾಗಾಗಿಯೇ ಭಾರತದಿಂದ ವಿದೇಶಕ್ಕೆ ಹೋಗುವ ಬಹುತೇಕರು ತಮ್ಮ ಚೀಲದಲ್ಲಿ ಭಾರತೀಯ ಸಾಂಬಾರು ಪುಡಿಗಳನ್ನು ತೆಗೆದುಕೊಂಡೇ ಹೋಗುತ್ತಿದ್ದರು. ಆ ಮೂಲಕ ಅಮ್ಮನ ಕೈರುಚಿಯನ್ನು ವಿದೇಶದಲ್ಲೂ ಸವಿಯುತ್ತಿದ್ದರು. ಹೀಗೆ ತೆಗೆದುಕೊಂಡು ಹೋದ ಪುಡಿಗಳಲ್ಲೆಲ್ಲವೂ ಮುಗಿದು ಹೋದಾಗ ಆ ಸ್ಥಾನವನ್ನು ತುಂಬಿದ್ದೇ ಎಂಡಿಹೆಚ್ ಮತ್ತು ಎಂಟಿಆರ್ ಎಂದರೆ ಅತಿಶಯೋಕ್ತಿಯೇನಲ್ಲ.

ಅಖಂಡ ಭಾರತದ ಭಾಗವಾಗಿದ್ದ ಮತ್ತು ಪ್ರಸ್ತುತ ಪಾಕಿಸ್ತಾನಕ್ಕೆ ಸೇರಿರುವ ಸಿಯಾಲ್‌ಕೋಟ್‌ನಲ್ಲಿ 1923ರಲ್ಲಿ ಧರಂಪಾಲ್ ಜನಿಸಿ ಕೇವಲ 5ನೇ ತರಗತಿಯವೆರೆಗೇ ಓದಿದ ನಂತರ ಅವರ ತಂದೆ ಶ್ರೀ ಚುನ್ನಿ ಲಾಲ್ ಗುಲಾಟಿ ಅವರು 1919 ರಲ್ಲಿ ಸಿಯಾಲ್ ಕೋಟಿನಲ್ಲಿ ಸಣ್ಣ ಪ್ರಮಾಣದಲ್ಲಿ ಎಂಡಿಹೆಚ್ ಮಸಾಲೆಗಳ ವ್ಯಾಪಾರ ಮಾಡುತ್ತಿದ್ದಕ್ಕೆ ಸಹಾಯ ಮಾಡತೊಡಗಿದರು. ದೇಶ ವಿಭಜನೆಯ ನಂತರ ಸ್ವತಂತ್ರ ಭಾರತದ ಅಮೃತಸರಕ್ಕೆ ಬಂದು ಆದಾದ ಕೆಲವು ವರ್ಷಗಳ ನಂತರ ದೇಶದ ರಾಜಧಾನಿ ದೆಹಲಿಯ ಹೊರವಲಯವಾದ ಕೀರ್ತಿ ನಗರದಲ್ಲಿ 1959ರಲ್ಲಿ ತಮ್ಮ ಎಂಡಿಹೆಚ್ ಮಸಾಲೆ ಕಾರ್ಖಾನೆಯನ್ನು ದೊಡ್ದ ಪ್ರಮಾಣದಲ್ಲಿ ಪ್ರಾರಂಭಿಸಿ ಪ್ರಸ್ತುತ ಪ್ರಪಂಚಾದ್ಯಂತ 1,500 ಕೋಟಿ ರೂ.ಗಳ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದ ಕಾರ್ಯವೇನೂ ಸುಲಭವಾಗಿರಲಿಲ್ಲ.

ವಿಭಜನೆಯ ಸಮಯದಲ್ಲಿ ಪಾಕೀಸ್ತಾನದಿಂದ ಹೊರದಬ್ಬಲ್ಪಟ್ಟ ಅನೇಕ ಹಿಂದೂ ಕುಟುಂಬಗಳಲ್ಲಿ ಗುಲಾಟಿ ಕುಟುಂಬವೂ ಒಂದಾಗಿತ್ತು. ಅಲ್ಲಿದ್ದ ಎಲ್ಲಾ ಆಸ್ತಿ ಪಾಸ್ತಿಗಳನ್ನು ಅಲ್ಲಿಯೇ ಬಿಟ್ಟು ಕೈಗೆ ಸಿಕ್ಕಿದ್ದಷ್ಟನ್ನು ತೆಗೆದುಕೊಂಡು ಅಮೃತಸರದ ಮೂಲಕ ಭಾರತಕ್ಕೆ ವಲಸೆ ಬಂದು ಅಲ್ಲಿಲ್ಲಿ ಕೆಲಸ ಹುಡುಕಿಕೊಂಡು ದೆಹಲಿಗೆ ಬಂದು ತಲುಪಿದರು. ತಮ್ಮ ಪಾರಂಪಾರಾಗತ ಮಸಾಲೆಯ ಹೊರತಾಗಿ ಮತ್ತೇನು ಗೊತ್ತಿರದ ಗುಲಾಟಿ ವಂಶ ಆರಂಭದಲ್ಲಿ ಕರೋಲ್ ಬಾಗ್‌ನಲ್ಲಿ ಒಂದು ಸಣ್ಣ ಅಂಗಡಿಯನ್ನು ತೆಗೆದು ಅಲ್ಲಿ ಯಶ್ವಸ್ವಿಯಾಗುತ್ತಿದ್ದಂತೆಯೇ ಚಾಂದನಿ ಚೌಕ್‌ನಲ್ಲಿ ಮತ್ತೊಂದು ಅಂಗಡಿಯನ್ನು ತೆರೆದರು. ಆದಾದ ನಂತರ 1959ರಲ್ಲಿ ಕೀರ್ತಿ ನಗರದಲ್ಲಿ ದೊಡ್ಡದಾದ ಕಾರ್ಖಾನೆ ಆರಂಭಿಸಿದರು.

ಆರಂಭದಲ್ಲಿ ಸಾಂಪ್ರದಾಯಕವಾಗಿ ಕೈಯಾರೆ ಕುಟ್ಟಿ ಪುಡಿಮಾಡಿ ತಯಾರಿಸುತ್ತಿದ್ದ ಮಸಾಲೆಗಳಿಗೆ ದೇಶಾದ್ಯಂತ ಅಭೂತಪೂರ್ವ ಬೇಡಿಕೆಗಳು ಬರಲಾರಂಭಿಸಿತು. ಅಷ್ಟು ಹೊತ್ತಿಗಾಗಲೇ ತಮ್ಮ ತಂದೆಯವರಿಂದ ಕಾರ್ಖಾನೆಯ ಉಸ್ತುವಾರಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಧರಂಪಾಲ್ ಅವರು ಸಾಂಪ್ರದಾಯಕದ ಜೊತೆ ಆಧುನೀಕರಣಕ್ಕೂ ಒತ್ತುನೀಡುವತ್ತ ಗಮನ ಕೊಡತೊಡಗಿದರು. ತಮ್ಮ ಮಸಾಲೆಗಳ ಅಧಿಕ ಬೇಡಿಕೆಯನ್ನು ಪೂರೈಸುವ ಸಲುವಾಗಿ ತಮ್ಮ ಎಂಡಿಹೆಚ್ ಕಾರ್ಖಾನೆಯಲ್ಲಿ ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಿ ಉತ್ಪಾದನೆಯನ್ನು ಹೆಚ್ಚು ಮಾಡಿದರು. ಈ ಯಂತ್ರಗಳು ಒಂದು ದಿನದಲ್ಲಿ 30 ಟನ್ ಮಸಾಲೆಗಳನ್ನು ತಯಾರಿಸಿ 10 ಗ್ರಾಂ ನಿಂದ ಹಿಡಿದು 500 ಗ್ರಾಂ ವರೆಗೂ ಪ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಉತ್ಪಾದನೆಯನ್ನು ಹೆಚ್ಚಿಸುವ ಭರದಲ್ಲಿ ಅವರೆಂದೂ ತಮ್ಮ ಉತ್ಪನ್ನಗಳ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ.ಕಚ್ಚಾ ವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು ಮಸಾಲೆಯ ತಯಾರಿಕೆಗೆ ವಿವಿಧ ಪದಾರ್ಥಗಳ ಪ್ರಮಾಣ, ತಯಾರಿಕಾ ವಿಧಾನ, ಉತ್ಪಾದನೆ, ಪ್ಯಾಕಿಂಗ್ ನಿಂದ ಹಿಡಿದು ಮಾರುಕಟ್ಟೆಯಲ್ಲಿ ಉತ್ಪನಗಳನ್ನು ಮಾರಾಟ ಮಾಡುವವರೆಗೂ ಎಲ್ಲವನ್ನೂ ತಮ್ಮ ಅನುಭವದಿಂದ ಕರಗತ ಮಾಡಿಕೊಂಡಿದ್ದರು. ಧರಂ ಪಾಲ್ ಅವರಿಗೂ ಮತ್ತು ಕರ್ನಾಟಕ್ಕಕೂ ಅವಿನಾಭಾವ ಸಂಬಂಧವಿತ್ತು ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಪ್ರತೀ ವರ್ಷ ತಮ್ಮ ಉತ್ಪನ್ನಗಳಿಗೆ ಕೆಂಪು ಮೆಣಸಿನಕಾಯಿಗಳನ್ನು ಖರೀಸುವ ಸಲುವಾಗಿ ಕರ್ನಾಟಕದ ಬ್ಯಾಡಿಗಿಗೆ ಬಂದು ಸುಮಾರು ಒಂದೆರಡು ಕಾಲಗಳ ಕಾಲ ಅಲ್ಲಿಯೇ ತಂಗಿದ್ದು ಮೆಣಸಿನಕಾಯಿ ಹರಾಜಿನಲ್ಲಿ ಆ ಇಳೀ ವಯಸ್ಸಿನಲ್ಲಿಯೂ ಭಾಗವಹಿಸಿ ಸಾವಿರಾರು ಟನ್ ಮೆಣಸಿನಕಾಯಿಯನ್ನು ಖರೀಸುತ್ತಿದ್ದರು.

ಅದೇ ಸಮಯದಲ್ಲಿ ಅವರು ಆರ್ಥಿಕವಾಗಿ ಮತ್ತು ವ್ಯಾವಹಾರಿಕವಾಗಿ ಬಹಳ ಬುದ್ಧಿವಂತರಾಗಿದ್ದು ತಮ್ಮ ಉತ್ಪನ್ನಗಳ ಪ್ರಚಾರತೆಗೆ ರೂಪದರ್ಶಿಗಳನ್ನು ಬಳೆಸಿಕೊಳ್ಳುವ ಬದಲು ಆ ಇಳೀ ವಯಸ್ಸಿನಲ್ಲಿಯೂ ತಾವೇ ರೂಪದರ್ಶಿಗಳಾಗಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡುವ ಮೂಲಕ ಕೇವಲ ಭಾರತವಲ್ಲದೇ, ವಿದೇಶಗಳಲ್ಲಿಯೂ 1,000 ಕ್ಕೂ ಹೆಚ್ಚು ಸ್ಟಾಕಿಸ್ಟ್‌ಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳ ಜಾಲದ ಮೂಲಕ ಮಾರಾಟ ಮಾಡುತ್ತಾ ವಾರ್ಷಿಕ 1500 ಕೋಟಿಗಳಿಗೂ ಅಧಿಕವಾದ ವ್ಯಾಪಾರ ಮಾಡುವ ಕಂಪನಿಯಾಗಿ ವಿಸ್ತರಿಸಿದ್ದರು.

ಅವರಿಗೆ ಪ್ರತಿಯೊಂದು ಮಸಾಲೆಯ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದಿದ್ದಲ್ಲದೇ, ಅವರ ಬಳಿ ಮಸಾಲೆ ಕುರಿತಂತೆ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಿದರೂ ಗಂಟೆಗಟ್ಟಲೆ ಸುದೀರ್ಘವಾಗಿ ಮಾತನಾಡಬಲ್ಲವರಾಗಿದ್ದರು. ಎಂಡಿಹೆಚ್ ಅಂಕಲ್ ಮತ್ತು ದಾದಾಜಿ ಎಂದೇ ಜನಪ್ರಿಯರಾಗಿದ್ದ ಮಹಾಶೆ ಧರಂಪಾಲ್ ಗುಲಾಟಿ 2017ರಲ್ಲಿ 21 ಕೋಟಿ ರೂ.ಗಳಷ್ಟು ಸಂಬಳವನ್ನು ಪಡೆಯುವ ಮೂಲಕ ದೇಶದ ಅತ್ಯಂತ ಹೆಚ್ಚಿನ ಸಂಬಳ ಪಡೆಯುವ CEO ಎಂದೇ ಹೆಸರುವಾಸಿಯಾಗಿದ್ದರು. ಅದರೆ ಹೆಚ್ಚಿನವರಿಗೆ ತಿಳಿಯದ ವಿಷಯವೇನೆಂದರೆ. ತಮ್ಮ ಆದಾಯದ 90 ಪ್ರತಿಶತದಷ್ಟನ್ನು ತಮ್ಮ ಮಹಾಶೆ ಚುನ್ನಿ ಲಾಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ದಾನ ಧರ್ಮಕ್ಕೆ ಮೀಸಲಾಗಿಟ್ಟಿದ್ದರು. ಈ ಟ್ರಸ್ಟ್ ದೆಹಲಿಯಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದು, ಕೊಳೆಗೇರಿ ನಿವಾಸಿಗಳಿಗೆ ಮೊಬೈಲ್ ಆಸ್ಪತ್ರೆಯ ಜೊತೆಗೆ ನಾಲ್ಕು ಶಾಲೆಗಳನ್ನು ಆರಂಭಿಸುವ ಮೂಲಕ ಸಮಾಜ ಮುಖೀಕಾರ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ತಮ್ಮ ಮಸಾಲೆಯ ಘಮಲಿನ ಮೂಲಕ ದೇಶದ ಖ್ಯಾತಿಯನ್ನು ವಿಶ್ವಾದ್ಯಂತ ಪಸರಿಸಿದಲ್ಲದೇ ಸಮಾಜಮುಖೀ ಕಾರ್ಯಗಳಿಂದ ಭಾರತವನ್ನು ಆತ್ಮನಿರ್ಭರವನ್ನಾಗಿ ಮಾಡಿದ್ದನ್ನು ಗಮನಿಸಿದ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಇಷ್ಟೆಲ್ಲಾ ಸಾಧನೆ ಮಾಡಿದ್ದ MDH ಮಸಾಲೆಯ ಮುಖ್ಯಸ್ಥ ಧರ್ಮಪಾಲ್ ಗುಲಾಟಿಯವರು ಮೊನ್ನೆ ಡಿಸೆಂಬರ್ 3ರಂದು ತಮ್ಮ 98ನೇ ವಯಸ್ಸಿನಲ್ಲಿ ತೀವ್ರವಾದ ಹೃದಯಾಘಾತದಿಂದ ನಿಧರಾಗಿದ್ದಾರೆ. ಈ ಮೂಲಕ ದೇಶದ ಮಸಾಲೆಗಳ ಸುಗಂಧವನ್ನು ಇಡೀ ಜಗತ್ತಿಗೆ ಹರಡಿದ್ದ ಹಿರಿಯರೊಬ್ಬರನ್ನು ಕಳೆದುಕೊಂಡಿದ್ದೇವೆ. ಮಸಾಲೆಗಳ ರಾಜ ಮಾಶಿಯಾನ್ ಧರಂ ಪಾಲ್ ಗುಲಾಟಿಯವರು ಇನ್ನಿಲ್ಲದಿದ್ದರೂ ಅವರೊಂದು ಆಲದಮರದಂತೆ ತಮ್ಮ ಬಿಳಿಲನ್ನು ಬಿಟ್ಟು ಹೋಗಿದ್ದಾರೆ. ಅವರ ಮೂರನೇಯ ತಲೆಮಾರು ಸಹಾ ತಮ್ಮ ವಂಶ ಪಾರಂಪರ್ಯವಾದ ಮಸಾಲೆ ಉತ್ಪನ್ನಗಳ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ನಮ್ಮ ದೇಶದ ಆದಾಯವನ್ನು ಆತ್ಮನಿರ್ಭರ್ತೆಯಿಂದ ಹೆಚ್ಚಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಅಲ್ವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s