ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ವರ್ಷದದ ಆರಂಭದಲ್ಲಿ ಪ್ರಪಂಚಾದ್ಯಂತ ಧುತ್ತೆಂದು ಕಾಣಿಸಿಕೊಂಡ ಕರೋನ ಮಹಾಮಾರಿಯನ್ನು ತಡೆಗಟ್ಟಲು ಮೊದಲ ಮೂರ್ನಾಲ್ಕು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದ ನಂತರ ಪರಿಸ್ಥಿತಿ ತಹಬಂದಿಗೆ ಬಾರದ್ದದರೂ, ಆರ್ಥಿಕವಾಗಿ ಎಲ್ಲರನ್ನೂ ಹೈರಾಣು ಮಾಡಿದ ಫಲವಾಗಿ ಸರ್ಕಾರವೂ ಕೆಲವೊಂದು ಕಠಿಣ ನಿರ್ಣಯಗಳನ್ನು ತೆಗೆದುಕೊಂಡು ಜನ ಸಾಮಾನ್ಯರು ಸಾಮಾನ್ಯ ಸ್ಥಿತಿಗೆ ಬರುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ಹಾಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡುವುದು,‌ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ ಕಾಪಾಡುವುದು ಮತ್ತು ಸಾರ್ವಜನಿಕವಾಗಿ ಒಬ್ಬರು ಗೊಬ್ಬರು ಅಂತರವನ್ನು ಕಾಪಾಡಿಕೊಳ್ಳುವುದು ಎಂದಿತ್ತು. ಸರ್ಕಾರ ಏನೇ ನಿಯಮಗಳನ್ನು ತಂದರೂ ಅದನ್ನು ಚಾಚೂ ತಪ್ಪದೇ ಪಾಲಿಸುವವರು ಬಹಳಷ್ಟು ಮಂದಿ ಇದ್ದರೇ, ಗಟ್ಟಿ ಕಾಳುಗಳ ಜೊತೆಯಲ್ಲಿಯೇ ನಕಲೀ ಟೊಳ್ಳು ಕಾಳುಗಳು ಇದ್ದಂತೆ ಕೆಲವು ಕಿಡಿಗೇಡಿಗಳು ಆ ನಿಯಮಗಳನ್ನು ಗಾಳಿಗೆ ತೂರಿ ಅದನ್ನು ಧಿಕ್ಕರಿಸಿ ಓಡಾಡುವ ಮಂದಿಗೇನೂ ಕಡಿಮೆ ಇರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವುದು, ಎಲ್ಲೆಂದರಲ್ಲಿ ಉಗಿಯುವುದು, ಒಂದು ಚೂರೂ ಅಂತರವನ್ನು ಕಾಪಾಡದೇ, ಒಬ್ಬರ ಮೇಲೆ ಒಬ್ಬರು ಬಿದ್ದು ಎಗ್ಗಿಲ್ಲದೇ ಓಡಾಡುವುದನ್ನು ಗಮನಿಸಿದ ಸರ್ಕಾರ ಮತ್ತು ನಗರ ಪಾಲಿಕೆ ಅಂತಹವರಿಗೆ ದಂಡಂ ದಶಗುಣಂ ಭವೇತ್ ಎನ್ನುವಂತೆ ದಂಡ ಹಾಕಲು ನಿರ್ಧರಿಸಿದವು.

ಹೇಗೂ ಸರ್ಕಾರದ ಬಳಿ ಹಣವಿಲಿಲ್ಲ. ಹಾಗಾಗಿ ಈ ಮೂಲಕವಾದರೂ ಬೊಕ್ಕಸ ತುಂಬಿಸಿದರಾಯಿತು ಎಂದೆಣಿಸಿ, ಪ್ರತಿಯೊಂದು ತಪ್ಪಿಗೂ ಕನಿಷ್ಠ 1000/- ರೂಪಾಯಿಗಳಷ್ಟು ದಂಡವನ್ನು ಹಾಕುವ ನಿರ್ಧಾರವನ್ನು ಹೊರಡಿಸಿಯೇ ಬಿಟ್ಟಿತು. ಜನರಿಂದ ಜನರಿಗಾಗಿ ಮತ್ತು ಜನರಿಗೋಸ್ಕರವೇ ಸರ್ಕಾರ ಇರಬೇಕೇ ಹೊರತು, ಸರ್ಕಾರಕ್ಕಾಗಿ ಜನರು ಇರುವುದಲ್ಲಾ ಎಂದು ಜನಾಗ್ರಹದ ಮೂಲಕ ತಿಳಿಯಪಡಿಸಿದ್ದರಿಂದ ಯಾವುದೇ ಪೂರ್ವಾಪರ ಯೋಚಿಸದೇ, ಸಾದ್ಯತೇ ಭಾಧ್ಯತೇ ಯೋಚಿಸದೇ, ಅದೇಶ ಹೊರಡಿಸಿ ನಂತರ ಯಾರದ್ದೋ ಒತ್ತಡಕ್ಕೆ ಮಣಿದು ನಿರ್ಧಾರ ಬದಲಿಸುವ ಚಾಳಿಯನ್ನು ಇಲ್ಲೂ ಮುಂದುವರೆಸಿದ ಘನ ಸರ್ಕಾರ ದಂಡದ ಮಿತಿಯನ್ನು 250 ರೂಪಾಯಿಗಳಿಗೆ ಇಳಿಸುವ ಮೂಲಕ, ಜನಪರ ಮತ್ತು ಜನಸ್ನೇಹೀ ಸರ್ಕಾರ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡಿತು. ಈ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಜಾರಿಗೆ ಗೊಳಿಸಲು ಮುಂದಾಗಿ ಮಾರ್ಷಲ್ ಗಳೆಂಬ ಪೋಲೀಸರಿಗೆ ಸಮಾನಂತರ ಪಡೆಯೊಂದನ್ನು ಆರಂಭಿಸಿ ಅವರ ಕೈಗಳಲ್ಲಿ ಹಣ ಸಂಗ್ರಹಿಸುವಂತಹ ಡಿಜಿಟಲ್ ಯಂತ್ರಗಳನ್ನು ಕೊಟ್ಟಿದ್ದಲ್ಲದೇ, ಅವರಿಗೆ ದಿನಕ್ಕೆ ಇಂತಿಷ್ಟು ಹಣವನ್ನು ಸಂಗ್ರಹಿಸಲೇ ಬೇಕೆಂಬ ಲಕ್ಷವನ್ನು ಕೊಡಲು ಮಾತ್ರಾ ಮರೆಯಲಿಲ್ಲ.

ಹಾರುವ ಓತೀಕ್ಯಾತನಿಗೆ ಬೇಲಿ ಕಾಯುವ ಉಸಾಬರೀ ನೀಡಿದ ಹಾಗೆ ಆಡಳಿತ ನಡೆಸಲು ಮತ್ತು ಕರೋನ ನಿಯಂತ್ರಿಸಲು ಸರ್ಕಾರಕ್ಕೆ ಹಣದ ಅವಶ್ಯಕತೆ ಇದೆ ಎಂಬುದನ್ನು ಮನಗಂಡ ಆ ಮಾರ್ಷಲ್ಗಳು ಜನರಿಗೆ ಆರೋಗ್ಯಕರ ವಿಷಯವನ್ನು ತಿಳಿಸಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರಗಳನ್ನು ಕಾಪಾಡುವುದರ ಕುರಿತು ತಿಳುವಳಿಕೆ ನೀಡುವ ಬದಲು ಹಣ ಮಾಡುವ ದಂದೆಗೆ ಇಳಿದು ಬಿಟ್ಟರು. ದಿನಕ್ಕೆ ನೂರಾರು ಜನರನ್ನು ಹಿಡಿಯಲೇ ಬೇಕು ದಿನದ ಅಂತ್ಯದಲ್ಲಿ ಇಂತಿಷ್ಟು ಹಣವನ್ನು ದಂಡದ ರೂಪದಲ್ಲಿ ಪೀಕಲೇ ಬೇಕು ಎಂಬ ಅಲಿಖಿತ ನಿಯಮದಂತೆ ಅವರೆಲ್ಲರೂ ಸರ್ಕಾರದ ಹೆಸರಿನಲ್ಲಿ ಹಗಲು ದರೋಡೆಗೆ ಇಳೆದೇ ಬಿಟ್ಟರು. ಹಾಗಾಗಿ ಮನೆಯ ಮುಂದೆ ನಿಂತಿರುವ, ಕಾರಿನಲ್ಲಿ ಎಲ್ಲಾ ಕಿಟಕಿಗಳನ್ನು ಹಾಕಿಕೊಂಡು ಒಬ್ಬರೇ ಹೋಗುತ್ತಿದ್ದರೂ, ಎಲ್ಲರನ್ನೂ ಅಡ್ಡಗಟ್ಟಿ ದಂಡ ವಸೂಲು ಮಾಡಲು ಆರಂಭಿಸಿಯೇ ಬಿಟ್ಟರು.

ಒಮ್ಮೆ ಬೆಂಕಿಯಿಂದ ಕೈ ಸುಟ್ಟುಕೊಂಡಿದ್ದಲ್ಲಿ ಮಾತ್ರವೇ, ಬೆಂಕಿಯ ಬಿಸಿಯ ಅನುಭವ ಗೊತ್ತಾಗುತ್ತದೆ ಎನ್ನುವಂತೆ ನಿಯಮಗಳನ್ನು ಮುರಿದ ತಪ್ಪಿನ ಅರಿವಾಗ ಬೇಕಾಗಿದ್ದಲ್ಲಿ ಅದಕ್ಕೆ ಒಂದಷ್ಟು ದಂಡವನ್ನು ವಿಧಿಸಿ ಅವರಿಗೆ ತಿಳುವಳಿಕೆ ನೀಡಿ ಒಂದು ಮಾಸ್ಕ್ ಕೊಟ್ಟು ಕಳುಹಿಸಿದ್ದಲ್ಲಿ ಅವರ ಆಭಿಯಾನಕ್ಕೆ ಒಂದು ಬೆಲೆ ಬರುತ್ತಿತ್ತು. ಅದು ಬಿಟ್ಟು ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ, ಕೆಲಸವಿಲ್ಲದೆ ಊಟಕ್ಕೇ ಪರದಾಡುತ್ತಿರುವವರಿಗೆ, ಮೂಗು, ಬಾಯಿ ಮುಚ್ಚಿಕೊಂಡು ಹೋಗಿ ಇಲ್ಲದಿದ್ದರೆ, ಮೂಗಿಗೇ ಹತ್ತಿ ಎಂದು ಮುಲಾಜಿಲ್ಲದೆ ದಂಡವನ್ನು ಎಗ್ಗಿಲ್ಲದೇ ಜಡಿಯುತ್ತಿರುವುದಲ್ಲದೇ ಸ್ಥಳದಲ್ಲಿಯೇ ಕಟ್ಟಬೇಕೆಂಬ ತಾಕೀತು ಬೇರೆ.

ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ಈ ಎಲ್ಲಾ ನಿಯಮಗಳು ಅನ್ವಯವಾಗುವುದು ಕೇವಲ ಜನಸಾಮಾನ್ಯರಿಗೆ ಮಾತ್ರವಷ್ಟೇ. ಇದೇ ರಾಜಕಾರಣಿಗಳು ಜೈಲಿನಿಂದ ಬಿಡುಗಡೆಯಾದಾಗ, ಇದೇ ನಾಯಕರ ಹುಟ್ಟು ಹಬ್ಬ, ಅವರ ಮಕ್ಕಳ ಮದುವೆ, ಮುಂಜಿ, ನಾಮಕರಣಗಳಲ್ಲಿ, ಇವರ ಉಪಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಜನರನ್ನು ಯಾವುದೇ ಮಸ್ಕ್ ಇಲ್ಲದೇ ಸೇರಿಸಿದಾಗ ಈ ಯಾವುದೇ ನಿಯಮಗಳು ಪಾಲನೆಯಾಗದೇ ಹೋದ್ದದ್ದನ್ನು ಕೇಳುವವರಿಲ್ಲ. ದಂಡ ಹಾಕಲು ಧೈರ್ಯವೂ ಇಲ್ಲ.

ಮಾರ್ಷಲ್ಗಳ ವ್ಯಾಪ್ತಿ ಕೇವಲ ಮಾಸ್ಕ್ ಧರಿಸಿದವರ ಮೇಲೆ ಮತ್ರವಲ್ಲದೇ ಸಾರ್ವಜನಿಕವಾಗಿ ಕಸ ಎಸೆಯುವರ ಮೇಲೆಯೂ ದಂಡ ವಿಧಿಸಬಹುದಾಗಿದೆ. ಹಾಗಾಗಿ ಈ ಮಾರ್ಷಲ್ಗ ಪಡೆ ನಗರದ ಬಹುತೇಕ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ಠಳಾಯಿಸುತ್ತಾ, ಸಾರ್ವಜನಿಕವಾಗಿ ಕಸ ಎಸೆಯುವರಿಂದಲೂ ದಂಡ ವಸೂಲಿ ಮಾಡುತ್ತಿದೆ. ಹಾಗೆಂದ ಮಾತ್ರಕ್ಕೇ ಖಾಸಗೀ‌ ಸ್ಥಳದಲ್ಲಿ ತಮ್ಮ ಮನೆಯ‌ ಕಸವನ್ನು ಎಸೆಯುವವರನ್ನು ಸಮರ್ಥನೆ ಮಾಡುತ್ತಿಲ್ಲ ಬದಲಾಗಿ ಅಂತಹ ಮನೋಸ್ಥಿತಿ ಖಂಡನಾರ್ಹವೇ ಸರಿ.

ಇತ್ತೀಚೆಗೆ ಖಾಲಿ ಇದ್ದ ಜಾಗದಲ್ಲಿ ಕಸ ಎಸೆದರೆಂಬ ಕಾರಣದಿಂದ ಮೂರ್ನಾಲ್ಕು ಮಾರ್ಷಲ್ಗಳು ಏಕಾಏಕಿ ಒಬ್ಬ ವಯೋವೃದ್ಧರನ್ನು ಹಿಡಿದು ಕೊಂಡು ಗಾಡಿಯಲ್ಲಿದ್ದ ಅವರ ದ್ವಿಚಕ್ರ ವಾಹನದ‌‌ ಕೀಲಿ ಕದಿಸಿಕೊಂಡು ಸ್ಥಳದಲ್ಲಿಯೇ ‌1000‌ರೂಗಳ‌ ದಂಡವನ್ನು ಕಟ್ಟ ಬೇಕೆಂದು ತಾಕೀತು‌ ಮಾಡುತ್ತಿದ್ದ ದುಂಡಾವರ್ತನೆಯನ್ನು ದಾರಿ ಹೋಕನಾಗಿ ಕಣ್ಣಾರೆ ಕಂಡು, ಈ ಮಾರ್ಷಲ್ಲುಗಳ ಬಳಿ ಈ ‌ರೀತಿಯಾಗಿ ದಂಡ ಕಟ್ಟಿಸಿಕೊಳ್ಳಲು ಮತ್ತು‌ ಯಾವ ಯಾವ ರೀತಿಯ ಅಪರಾಧಗಳಿಗೆ ಎಷ್ಟು ದಂಡ ವಿಧಿಸ ಬಹುದು ಎಂಬ ಯಾವುದಾದರೂ ಅಧಿಕೃತ ಸರ್ಕಾರೀ ದಾಖಲೆಗಳ ಇದೆಯೇ? ಎಂದು ವಿಚಾರಿಸಿದವರಿಗೇ ಏಕವಚನದಲ್ಲಿ ಮಾತನಾಡಿಸುತ್ತಾ, ಅವರ‌ ಮೇಲೆಯೇ ಮಾರ್ಷಲ್ ಗಳು ಮುಗಿಬಿದ್ದದ್ದು‌ ಅಕ್ಷಮ್ಯ ಅಪರಾಧವೇ ಸರಿ.

ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕವಾಗಿ ಓಡಾಡುವವರ‌ ಅಷ್ಟೋಂದು ದಂಡವನ್ನು ಸ್ಥಳದಲ್ಲಿಯೇ ಕಟ್ಟಲು ಹಣ ಎಲ್ಲಿಂದ ಬರಬೇಕು?‌ ಒಮ್ಮೆ ಈ ರೀತಿಯಲ್ಲಿ ತಪ್ಪನ್ನು ಮಾಡಬಾರದೆಂದು ಎಚ್ಚರಿಕೆಯನ್ನು ನೀಡುವುದೋ ಅಥವಾ ಅಧಿಕೃತವಾಗಿ ನೋಟೀಸ್ ನೀಡಿ ನಂತರ ದಂಡವನ್ನು ಕಟ್ಟಿಸಿಕೊಳ್ಳುವ ವ್ಯವಸ್ಥೆ ‌ಮಾಡ ಬಹುದಲ್ಲವೇ?

ಇಷ್ಟೆಲ್ಲಾ ರಂಪರಾಮಾಯಣ ನಡೆದ ನಂತರ ಇಲ್ಲೇಕೆ ಕಸ ಎಸೆಯುತ್ತಿದ್ದೀರಿ ಮನೆಯ ಮುಂದೆ ಕಸ ತೆಗೆದುಕೊಂಡು ಹೋಗುವವರ ಬಳಿ ಕೊಡಬಾರದೇ ಎಂದು ಅ ವಯೋವೃದ್ಧರೊಂದಿಗೆ ವಿಚಾರಿಸಿದಾಗ, ಕಸದ ತೆಗೆದುಕೊಂಡು ಹೋಗುವವರ ಬಗ್ಗೆಯೇ ಒಂದು ದೊಡ್ಡ ಆರೋಪಗಳನ್ನು ಮಾಡಿದ್ದರು. ಪ್ರತೀ ತಿಂಗಳೂ ಪ್ರತೀ ಮನೆಯಿಂದ ಯಾವುದೇ ರೀತಿಯ ರಸೀದಿ ಇಲ್ಲದೇ 30-50 ಪಡೆದು ಕೊಂಡರೂ ಪ್ರತೀ ದಿನ ಕಸ ಸಂಗ್ರಹಿಸಲು ಸರಿಯಾಗಿಯೇ ಬರುವುದಿಲ್ಲ. ಇನ್ನು ಹಸೀ ಕಸ ಮತ್ತು ಒಣ ಕಸ ಎಂದು ಬೇರ್ಪಡಿಸಿದ್ದರೂ ಅದನ್ನು ತೆಗೆದುಕೊಂಡು ಹೋಗಲು ನೂರಾರು ಕಾರಣ ಹೇಳಿ ಬಿಟ್ಟು ಹೋಗುತ್ತಾರೆ. ಇನ್ನು ಹಬ್ಬ ಹರಿದಿನಗಳು ಮತ್ತು ವಿಶೇಷದಿನಗಳಲ್ಲಿ ತೋರಣಗಳು, ದೇವರಿಗೆ ಹಾಕಿದ ಹೂಗಳು ಮತ್ತು ಊಟದ ಎಂಜಿಲು ಎಲೆಗಳನ್ನು ತೆಗೆದುಕೊಂಡು ಹೋಗಲು ಆರಂಭಾದಲ್ಲಿ ನಿರಾಕರಿಸುತ್ತಾರಲ್ಲದೇ, ಹೆಚ್ಚಿನ ಹಣ ಸುಲಿಗೆಯ ನಂತರವೇ ತೆಗೆದುಕೊಂಡು ಹೋಗುತ್ತಾರೆ. ಇನ್ನು ತೆಂಗಿನ ಕಾಯಿ ಸುಲಿದ ಸಿಪ್ಪೆಯನ್ನು ಯಾರೂ ತೆಗೆದುಕೊಂಡು ಹೋಗುವುದೇ ಇಲ್ಲವಾದ್ದರಿಂದ ಇದನ್ನು ಎಲ್ಲಿ ಬಿಸಾಡುವುದು? ಎಂಬ ಪ್ರಶ್ನೆಯನ್ನು ಹಾಕಿದ್ದರು.

ಸ್ವಚ್ಛ ಭಾರತದ ಹೆಸರಿನಲ್ಲಿ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುವಾಗ, ಈ ರೀತಿಯಾಗಿ ಕಸವನ್ನು ತೆಗೆದುಕೊಂಡು ಹೋಗದೇ ಹೋದಲ್ಲಿ ಜನಾ ಎಲ್ಲಿ ಹಾಕಬೇಕು.? ಇದಕ್ಕೆ ಪರಿಹಾರವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೇ, ವಿಂಗಡಿಸಿದ ಪ್ರತೀ ಕಸವನ್ನು ತೆಗೆದುಕೊಳ್ಳುವ ಆದೇಶ ನೀಡಬೇಕು ಇಲ್ಲವೇ, ಪ್ರತೀ ಬಡಾವಣೆಗಳಲ್ಲಿಯೂ ಈ ರೀತಿಯ ಕಸವನ್ನು ಸಂಗ್ರಹಿಸುವ ಒಂದು ನಿಗಧಿತ ಸ್ಥಳವನ್ನು ಸೂಚಿಸಿದಲ್ಲಿ ಜನರು ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಬಿಸಾಡದೇ ತ್ರಾಜ್ಯವನ್ನು ನಿಗಧಿತ ಸ್ಥಳಗಳಲ್ಲಿ ಹಾಕುತ್ತಾರೆ.

ಸರ್ಕಾರ ಜನರ ಉಪಯೋಗಕ್ಕಾಗಿಯೇ ಉತ್ತಮವಾದ ಕಾನೂನುಗಳನ್ನು ಮಾಡುತ್ತಿದ್ದರೂ. ಅದನ್ನು ಜಾರಿ ಮಾಡುವವರು. ಮಾನವೀಯತೆಯನ್ನು ಮರೆತು ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತೆ ದಬ್ಬಾಳಿಯಿಂದ ಪ್ರತಿಯೊಂದಕ್ಕೂ ದಂಡ ಹೇರುವ ಮೂಲಕ ಯಾವುದೇ ಕಾನೂನನ್ನು ಜಾರಿಗೆ ತರಲಾಗದು ಅಲ್ಲವೇ? ಸರ್ಕಾರೀ ನೀತಿ ನಿಯಮಗಳನು ಮೀರಿದರು ಯಾರೇ ಆಗಿರಲಿ ಅವರ ಮೇಲೆ ಸೂಕ್ತವಾದ ಕ್ರಮ ಜಾರಿಗೆ ಯಾಗಬೇಕು. ಅದು ಬಿಟ್ಟು ಸ್ಥಿತಿವಂತರಿಗೆ ಬೆಣ್ಣೆ, ಜನಸಾಮಾನ್ಯರಿಗೆ ಸುಣ್ಣ ಎಂತಾಗಬಾರದು.

ಇನ್ನು ದಂಡ ಎನ್ನುವುದು ಎಚ್ಚರಿಕೆಯ ಕಡೆಯ ಗಂಟೆಯಾಗ ಬೇಕೇ ಹೊರತು, ಇಂತಿಷ್ಟು ದಂಡವನ್ನು ಖಡ್ಡಾಯವಾಗಿ ಸಂಗ್ರಹಿಸಲೇ ಬೇಕೆಂಬ ಟಾರ್ಗೆಟ್ ನಿಗಧಿ ಮಾಡಿ, ಅಧಿಕಾರಯುತವಾಗಿ ದಬ್ಬಾಳಿಕೆಯಿಂದ ಹಣವನ್ನು ಸಂಗ್ರಹಿಸಲು ಮುಂದಾದಲ್ಲಿ, ಅದು ಸರ್ಕಾರೀ ಪ್ರಾಯೋಜಿತ ಹಗಲು ದರೋಡೆಯಂತಾಗಿ, ಜನಾಕೋಶ್ರಕ್ಕೆ ತುತ್ತಾಗಿ ಮತ್ತಷ್ಟು ಪ್ರತಿರೋಧ ತರುತ್ತದೆಯೇ ಹೊರತು ಜನರ ಮನ್ನಣೆ ಗಳಿಸಲು ಸಾಧ್ಯವಾಗುವುದಿಲ್ಲ. ಜನರೇ ಬೆಂಬಲಿಸಿ, ಮತ ಹಾಕಿ, ಆರಿಸಿದ ಸರ್ಕಾರದ, ನಿಯಮಗಳು ಒಂದು ರೀತಿಯ ಹುಚ್ಚುತನದ ಪರಮಾಧಿಯಾಗಿ ಹೇಸಿಗೆ ತರುವಂತಾಗುತ್ತದೆ.

ಸುಖಾ ಸುಮ್ಮನೇ ದಂಡ ಹಾಕುವುದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ. ಅದರ ಬದಲಾಗಿ ತಪ್ಪು ಮಾಡಿದವರಿಗೆ ತಿಳಿ ಹೇಳಿ, ನೆಪಮಾತ್ರದ ದಂಡ ವಿಧಿಸಿ, ಮಾಸ್ಕ್ ಗಳನ್ನು ಉಚಿತವಾಗಿ ನೀಡುವ ಮೂಲಕ, ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಮೂಲಕ ಜನರ ಮನವನ್ನು ಗೆಲ್ಲುವ ಮೂಲಕ ನೀತಿ ನಿಯಮಗಳನ್ನು ಜಾರಿಗೆ ತರಬಹುದಲ್ಲವೇ? ಬಲವಂತದ ಯಾವುದೇ ಆದೇಶವನ್ನು ಜಾರಿಗೆ ತರಲು ಹೋದರೆ, ಅದು ಸಂಘರ್ಷಕ್ಕೆ ಈಡು‌ಮಾಡುತ್ತದೆಯೇ ಹೊರತು ಸಮಸ್ಯೆ ಪರಿಹಾರವಾಗದು. ಅಹಿಂಸಾ ಪರಮೋ ಧರ್ಮ‌ ಎನ್ನುವುದೇ ನಮ್ಮ‌ ದೇಶದ ಧ್ಯೇಯವಲ್ಲವೇ?

ಏನಂತೀರೀ?
ಇಂತೀ ನಿಮ್ಮ ಉಮಾಸುತ

One thought on “ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s