ಈ ಸಾವಿಗೆ ಹೋಣೆಗಾರರು ಯಾರು?

ಇಂದು ಬೆಳ್ಳಂಬೆಳಿಗ್ಗೆ ವ್ಯಾಯಾಮವನ್ನು ಮುಗಿಸಿ, ಏನಪ್ಪಾ ಇವತ್ತಿನ ವಿಷಯ ಎಂದ ಮೊಬೈಲ್ನಲ್ಲಿ ವಾರ್ತೆಗಳನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು. ಕೆಲ ದಿನಗಳವರೆಗೂ ಚಿಕ್ಕಮಗಳೂರಿನ ಹೊರಗೀನಾಚೆ ಆಷ್ಟೇನೂ ಪರಿಚಯವಿರದಿದ್ದ ವಿಧಾನ ಪರಿಷತ್ ಉಪ ಸಭಾಪತಿಗಳಾಗಿದ್ದ ಶ್ರೀ ಎಸ್.ಎಲ್. ಧರ್ಮೇಗೌಡ ಅವರು ನೆನ್ನೆ ರಾತ್ರಿ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಓದಿ ನಿಜಕ್ಕೂ ಬೇಸರವೆನಿಸಿತು.

ಮೂಲತಃ ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯವರಾಗಿದ್ದ, ಬೀರೂರಿನ ಮಾಜೀ ಶಾಸಕ ಲಕ್ಷ್ಮಯ್ಯನವರ ಪುತ್ರರಾಗಿ ರಾಜಕೀಯ ಕುಟುಂಬದ ಹಿನ್ನೆಲೆಯವರಾಗಿದ್ದ ಶ್ರೀ ಎಸ್.ಎಲ್.ಧರ್ಮೇಗೌಡರು, ಸುಮಾರು ಮೂರು 3 ದಶಕಗಳ ರಾಜಕೀಯ ಇತಿಹಾಸದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ವಿವಿಧ ಹಂತದಲ್ಲಿ ಅಧಿಕಾರ ಹಿಡಿದು ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಗಳಿಸಿದ್ದಲ್ಲದೇ, ಚಿಕ್ಕಮಗಳೂರು ತಾಲೂಕು ಬಿಳೇಕಲ್ಲಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಮಂಡಲ ಪಂಚಾಯಿತಿ ಪ್ರಧಾನರಾಗುವ ಮೂಲಕ ರಾಜಕೀಯ ಆರಂಭಿಸಿ, ಜನತಾದಳದಿಂದ ಒಮ್ಮೆ ಬೀರೂರಿನ ಶಾಸಕರಾಗಿದ್ದರಲ್ಲದೇ, ಕ್ಷೇತ್ರ ವಿಂಗಡನೆಯಲ್ಲಿ ಬೀರೂರು ಕ್ಷೇತ್ರದ ಬಹುಭಾಗ ಚಿಕ್ಕಮಗಳೂರಿನ ಕ್ಷೇತ್ರದೊಂದಿಗೆ ಜೋಡಣೆಗೊಂಡಾಗ ಪ್ರಸ್ತುತ ಶಾಸಕರಾಗಿರುವ ಸಿ.ಟಿ. ರವಿಯವರ ವಿರುದ್ಧ ಸ್ಪರ್ಧಿಸಿ ಸೋಲನ್ನು ಕಂಡ ನಂತರ ಸಿದ್ದರಾಮಯ್ಯನವರ ಜೊತೆ ಕಾಂಗ್ರೇಸ್ ಸೇರಲು ಮುಂದಾಗಿದ್ದಾಗ ಅದನ್ನು ತಡೆಯುವ ಸಲುವಾಗಿ ಜೆಡಿಎಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ಮಾಡಬೇಕಾಗಿದ್ದಲ್ಲದೇ, ಪ್ರಸ್ತುತ ವಿಧಾನ ಪರಿಷತ್ ಉಪ ಸಭಾಪತಿ ಹುದ್ದೆಯವರೆಗೂ ಏರಿದ್ದರು. ಇವರ ಸಹೋದರರಾದ ಎಸ್.ಎಲ್. ಬೋಜೇಗೌಡರೂ ಸಹಾ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ ಎನ್ನುವುದು ಗಮನಾರ್ಹವಾಗಿದೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಶಿಕ್ಷಕರ ಕ್ಷೇತ್ರದ ಅಷ್ಟೂ ಸ್ಥಾನಗಳನ್ನು ಗೆದ್ದು ವಿಧಾನ ಪರಿಷತ್ತಿನಲ್ಲೂ ಸಹಾ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾಪಕ್ಷಕ್ಕೆ ಇದ್ದಕ್ಕಿಂದ್ದಂತೆಯೇ, ಸದ್ಯಕ್ಕೆ ಅಗತ್ಯ ಸಂಖ್ಯಾಬಲದ ವಿಲ್ಲದೇ ಸೊರಗಿರುವ ಕಾಂಗ್ರೇಸ್ಸಿನ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ತಿನ ಸಭಾಪತಿಗಳಾಗಿರುವುದು ಕಣ್ಣು ಕೆಂಪು ಮಾಡಿ, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಆ ಸ್ಥಾನದಿಂದ ಕೆಳಗಿ ಇಳಿಸಲು ಹರಸಾಹಸ ಪಡುತ್ತಿದ್ದರು. ಈ ವಿಷಯ ತಿಳಿದ ಪ್ರತಾಪ್ ಶೆಟ್ಟರೂ ಸ್ವಾಭಿಮಾನವಿಲ್ಲದೇ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ವಿಧಾನ ಪರಿಷತ್ತಿನ್ನು ಅನಿರ್ಧಿಷ್ಟಾವಧಿಯವರೆಗೆ ಮುಂದೂಡಿ ಕೊನೆಗೆ ರಾಜ್ಯಪಾಲರ ಮಧ್ಯವಹಿಸಿದ ಪರಿಣಾಮವಾಗಿ, ಕಳೆದ ಡಿ.15ರಂದು ಒಂದು ದಿನದ ಅಧಿವೇಷನವನ್ನು ಕರೆದಿದ್ದರು.

ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಪ್ರಜಾಪ್ರಭುತ್ವ ಎಂದರೆ, ಅಪ್ಪಾ ಮಕ್ಕಳಿಗಾಗಿ, ಅಪ್ಪಾ ಮಕ್ಕಳ ಕುಟುಂಬದಿಂದ, ಕಡೆಗೆ ತಮ್ಮ ಕುಟುಂಬದ ಸೇವಕರಿಗಾಗಿಯೇ ಇರುವ, ಆರು ಕೊಟ್ಟರೇ ಅತ್ತೇ ಕಡೇ, ಮೂರು ಕೊಟ್ಟರೇ ಸೊಸೇ ಕಡೇ, ಒಟ್ಟಿನಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವ ಅಪ್ಪಾ ಮಕ್ಕಳ ಪಕ್ಷ ಜೆಡಿಎಸ್. ಮೊದಲು ಕಾಂಗೇಸ್ಸಿನ ಜೊತೆ ಸೇರಿಕೊಂಡು ವಿಧಾನಪರಿಷತ್ ಉಪಾಧ್ಯಕ್ಷರ ಸ್ಥಾನ ಪಡೆದಿದ್ದವರು ರಾತ್ರೋ ರಾತ್ರಿ ಒಳ ಒಪ್ಪೊಂದ ಮಾಡಿಕೊಂಡು ಬಿಜೆಪಿಗೆ ಬೆಂಬಲ ನೀಡಲು ಒಪ್ಪಿಕೊಂಡಿದ್ದರು.

ಸದನದಲ್ಲಿ ಸದಸ್ಯರ ಬೆಂಬಲವಿಲ್ಲದೇ, ವಿಧಾನ ಪರಿಷತ್ ಅಧ್ಯಕ್ಷರ ಮೇಲೆಯೇ ಅವಿಶ್ವಾಸ ನಿರ್ಣಯ ಕರೆದಿರುವಾಗ ಸಭಾಪತಿಯ ಸ್ಥಾನದಲ್ಲಿ ಶ್ರೀ ಪ್ರತಾಪ್ ಚಂದ್ರ ಶೆಟ್ಟರೇ ಕೂರುವುದು ತರವಲ್ಲ ಎಂಬ ನೆಪವೆತ್ತಿದ ಬಿಜೆಪಿ ಸದಸ್ಯರು, ಬಲವಂತದಿಂದ ಅವರನ್ನು ಪರಿಷತ್ ಕಲಾಪಕ್ಕೆ ಬಾರದಂತೆ ತಡೆದಿದ್ದಲ್ಲದೇ, ಜೆಡಿಎಸ್ ಸದಸ್ಯರೊಂದಿಗೆ ಸೇರಿಕೊಂಡು ಬಲವಂತವಾಗಿ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರನ್ನು ಸಭಾಪತಿ ಪೀಠದಲ್ಲಿ ಕೂರಿಸಿ ಬಿಟ್ಟಿದ್ದರು. ಅಪ್ಪಾ ಅಮ್ಮ ಜಗಳದಲಿ ಕೂಸು ಬಡಾವಾಯ್ತು ಎನ್ನುವಂತೆ, ತಮ್ಮ ಪಕ್ಷದ ನಾಯಕರುಗಳ ಅನೈತಿಕ ಒಳ ಒಪ್ಪಂದದ ಅನುಗುಣವಾಗಿ ವಿಧಿ ಇಲ್ಲದೇ, ಬಲಿ ಪಶುವಾಗಿದ್ದವರು ಮಾತ್ರಾ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡರು ಎನ್ನುವುದು ದುರಂತವೇ ಸರಿ.

ಇನ್ನು ಒಂದು ಕಾಲ ಬೆಂಗಳೂರನ್ನೇ ನಡುಗಿಸಿದ್ದ ಕೊತ್ವಾಲ್ ರಾಮಚಂದ್ರನ ಶಿಷ್ಯರಾಗಿದ್ದು, ಸದ್ದಿಲ್ಲದೇ ಕನಕಪುರದ ಬಂಡೆಗಳನ್ನು ಲೂಟಿ ಮಾಡಿ ತಿಹಾರ್ ಜೈಲಿನಲ್ಲಿ ಮುದ್ದೇ ಮುರಿದ್ದವರು ರಾಜ್ಯಾಧ್ಯಕ್ಷರು. ಸಭೆಯಲ್ಲಿ ಅಸಂವೈಧಾನಿಕ ಪದ ಪ್ರಯೋಗ ಮಾಡುತ್ತಾ, ಹಿರಿಯರು, ಕಿರಿಯರು ಎನ್ನದೇ ಎಲ್ಲರನ್ನೂ ಏಕವಚನದಲ್ಲಿಯೇ ವಾವಾಮಗೋಚರವಾಗಿ ಬೈಯುತ್ತಾ ಅನಗತ್ಯವಾಗಿ ಸಭೆಯಲ್ಲಿ ತೋಳು ಮತ್ತು ತೊಡೆಗಳನ್ನು ತಟ್ಟಿ ಜಿದ್ದಾಜಿದ್ದಿಗೆ ಬೀಳುವವರು ನಾಯಕರಾಗಿರುವ ಕಾಂಗೇಸ್ಸಿನಲ್ಲಿ ಯಥಾರಾಜಾ ತಥಾ ಪ್ರಜಾ ಎನ್ನುವಂತೆ, ಸಭಾಪತಿ ಸ್ಥಾನದಲ್ಲಿ ಉಪಸಭಾಪತಿಗಳು ಕುಳಿತದ್ದನ್ನೇ ನೆಪಮಾಡಿಕೊಂಡು, ವಿಧಾನ ಪರಿಷತ್ತಿನ ಸದ್ಯರು ಎಂಬುದನ್ನೇ ಮರೆತು ರಸ್ತೆಗಳಲ್ಲಿ ಬಡಿದಾಡುವ ಪುಡಿ ರೌಡಿಗಳಂತೆ, ಸಭಾಪತಿ ಪೀಠದಿಂದ ಎಸ್.ಎಲ್. ಧರ್ಮೇಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಎಳೆದು ಹಾಕಿದ್ದಲ್ಲದೇ, ಪೀಠೋಪಕರಣಳನ್ನು ಹಾಳು ಮಾಡಿ ಸಭೆಯ ಮುಂಬಾಗಿಲನ್ನೂ ಕಾಲಿನಿಂದ ಒದೆಯುವ ಮೂಲಕ ಸಭಾ ಗೌರವನ್ನು ಮಣ್ಣು ಪಾಲು ಮಾಡಿದ್ದಲ್ಲದೇ, ಇಡೀ ದೇಶದಲ್ಲೇ ಕನ್ನಡಿಗರು ಅತ್ಯಂತ ಶಾಂತಿ ಪ್ರಿಯರು ಎಂಬ ಖ್ಯಾತಿಗೆ ಚ್ಯುತಿ ತರುವಂತೆ ಮಾಡಿದ್ದರು ಎಂದರೂ ತಪ್ಪಾಗಲಾರದು.

ಈಗಾಗಲೇ ಒಂದು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮತ್ತು ಪಕ್ಷದ ನಾಯಕರ ಬಲವಂತದಿಂದಾಗಿ ಅಂದು ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡರಿಗೆ ಕಾಂಗ್ರೇಸ್ ಸದಸ್ಯರು ಈ ರೀತಿಯಾಗಿ ಎಳೆದಾಡಿ ರಂಪ ರಾಮಾಯಣ ಮಾಡಿದ್ದದ್ದು ತುಸು ಬೇಸರವನ್ನೂ ತರಿಸಿತ್ತು. ಈ ಗಲಭೆಯ ಕುರಿತಂತೆ ತನಿಖೆಯೂ ನಡೆದಾಗ ಬಹಳ ನೊಂದು ಕೊಂಡಿದ್ದಾಗಿ ಅವರ ಗೆಳೆಯರ ಬಗ್ಗೆಯೂ ಹೇಳಿಕೊಂಡಿದ್ದರಂತೆ.

ಕೌಟುಂಬಿಕವಾಗಿಯೂ ಮತ್ತು ಆರ್ಥಿಕವಾಗಿಯೂ ಬಹಳ ಸಧೃಢರಾಗಿದ್ದ, ಆರೋಗ್ಯದ ಬಗ್ಗೆಯೂ ಸಹಾ ಸದಾಕಾಲವೂ ಸಾಕಷ್ಟು ಕಾಳಜಿ ವಹಿಸುತ್ತಿದ್ದ ಎಸ್.ಎಲ್.ಧರ್ಮೇಗೌಡರು ಆತ್ಮಹತ್ಯೆಗೆ ಶರಣಾಗುವಷ್ಟು ದುರ್ಬಲ ಮನಸ್ಸಿನವರಲ್ಲ ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಈ ರೀತಿಯಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ ಎಂಬ ಸ್ವಲ್ಪವೂ ಸುಳಿವನ್ನೂ ನೀಡದೇ, ಏಕಾ ಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುಃಖಕರವೇ ಹೌದು. ಅವರ ಆತ್ಮಹತ್ಯೆಗೆ ನಿಜವಾದ ಕಾರಣವು ಇದುವರೆಗೂ ತಿಳಿದಿಲ್ಲವಾದರೂ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಅವರೇ ಬರೆದಿರುವ ಪತ್ರವೊಂದು ಸಿಕ್ಕಿದ್ದು, ಪೋಲೀಸ್ ತನಿಖೆಯ ನಂತರ ನಿಜವಾದ ಕಾರಣ ತಿಳಿಯಬಹುದೇನೋ?

ಮೇಲ್ನೋಟಕ್ಕೆ ಇತ್ತೀಚೆಗೆ ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಅಮಾಯಕಗಿದ್ದ ಎಸ್.ಎಲ್.ಧರ್ಮೇಗೌಡರ ವಯಸ್ಸು , ಆರೋಗ್ಯ ಮತ್ತು ಸಭಾಧ್ಯಕ್ಷರ ಪೀಠಕ್ಕೂ ಗೌರವ ಕೊಡದೇ ಏಕಾ ಏಕಿ ಸಭಾಪತಿ ಪೀಠದಿಂದ ಎಳೆದು ಹಾಕಿದ್ದನ್ನೇ ಅವರು ಮನಸ್ಸಿಗೆ ಹಚ್ಚಿಕೊಂಡಿದ್ದರು ಎನ್ನುವುದಂತೂ ಸ್ಪಷ್ಟವಾಗಿ ಕಾಣಿಸುವ ಕಾರಣ, ಇದೇ ವಿಷಯವಾಗಿಯೇ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ಶಂಕಿಸಿದ್ದು, ನಿಷ್ಠುರವಾದ ತನಿಖೆ ನಡೆದಲ್ಲಿ ನಿಜವಾದ ಕಾರಣ ಹೊರಬೀಳಲಿದೆ. ಸದ್ಯದ ಅನುಕೂಲ ಸಿಂಧು ರಾಜಕಾರಣವನ್ನು ಗಮನಿಸಿದರೇ, ನಿಶ್ಪಕ್ಷವಾದ ತನಿಖೆ ನಡೆದು ಸತ್ಯಾಂಶ ಹೊರಬೀಳುವುದು ಕಷ್ಟ ಸಾಧ್ಯ ಎಂದೇ ಎಲ್ಲರೂ ನಂಬಿದ್ದು, ಕಡೆಗೆ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂದು ತಿಪ್ಪೇ ಸಾರಿಸುವ ತನಿಖಾ ವರದಿಯೇ ಹೊರಬೀಳುವ ಲಕ್ಷಣಗಳೇ ಹೆಚ್ಚಾಗಿವೆ.

ಭಾರತದ ರಾಜ್ಯಗಳಲ್ಲಿ ಎರಡು ಶಾಸಕಾಂಗಗಳನ್ನು ಹೊಂದಿರುವ ರಾಜ್ಯಗಳ ಮೇಲ್ಮನೆ ಎಂದು ಪರಿಗಣಿತವಾಗುವ ಶಾಸನ ಸಭೆಯೇ ವಿಧಾನ ಪರಿಷತ್ ಆಗಿದ್ದು ಇಲ್ಲಿ ರಾಜಕೀಯೇತರ ವಿಷಯಗಳಲ್ಲಿ ಪರಿಣಿತ ಹೊಂದಿರುವ ತಜ್ಞರು, ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರುಗಳೆಲ್ಲರೂ ಇರುವ ಚಿಂತಕರ ಚಾವಡಿ ಎಂದೇ ಕರೆಯಲಾಗುತ್ತದೆ. ವಿಧಾನ ಸಭೆಯಲ್ಲಿ ಶಾಸಕರು ಮಾಡಿದ ಶಾಸನಗಳನ್ನು ಇಲ್ಲಿ ಕೂಲಂಕುಶವಾಗಿ ಚರ್ಚೆ ಮಾಡಿದ ಅಂಗೀಕಾರವಾದ ನಂತರವೇ ರಾಜ್ಯಪಾಲರದಿಂದ ಅಂಗೀಕಾರವಾಗಿ ಶಾಸನವಾಗುತ್ತದೆ.

ದುರಾದೃಷ್ಟವಷಾತ್ ಬದಲಾದ ಇಂದಿನ ರಾಜಕಾರಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ಸೋತು ಸುಣ್ಣವಾದ ನಾಯಕರುಗಳಿಗೆ ಹಿಂಬಾಗಿಲಿನ ಆಶ್ರಯ ತಾಣವಾಗಿದ್ದರೇ, ಇನ್ನೂ ಕೆಲ ಪಕ್ಷಗಳ ನಾಯಕರು ತಮ್ಮ ಸಂಬಂಧಿಗಳನ್ನೂ ಇಲ್ಲವೇ ತಮ್ಮ ಹಿಂಬಾಲಕರನ್ನೋ ಇಲ್ಲವೇ ಹಣದಾಸೆಗಾಗಿ ಯಾವುದೋ ಉದ್ಯಮಿಗೋ ಇಲ್ಲವೇ ರಿಯಲ್ ಎಸ್ಟೇಟ್ ಏಜಂಟ್ ಗಳಿಗೆ ಈ ಸ್ಥಾನವನ್ನು ಹರಾಜು ಹಾಗಿದ ಪರಿಣಾಮವಾಗಿಯೇ ಇಂದು ವಿಧಾನ ಪರಿಷತ್ ಚಿಂತಕರ ಚಾವಡಿಯ ಬದಲಾಗಿ ಚಿತಾವಣೆಯನ್ನು ಮಾಡುವರ ಅಸ್ಥಾನವಾಗಿರುವ ಕಾರಣ ಇಂತಹ ಅಸಹ್ಯಕರ ದುರ್ಘಟನೆ ಮತ್ತು ಆತ್ಮಹತ್ಯೆಗೆ ಕಾರಣವಾಗಿರುವುದಲ್ಲದೇ ಈ ರಾಜ್ಯಕ್ಕೆ ಕೆಟ್ಟ ಹೆಸರು ತರುವಂತೆ ಮಾಡಿದೆ.

ದೇಶದ 29 ರಾಜ್ಯಗಳ ಪೈಕಿ, ಕೇವಲ 7 ರಾಜ್ಯಗಳಲ್ಲಿ ಮಾತ್ರವೇ ಇರುವ ಈ ವಿಧಾನ ಪರಿಷತ್ ವ್ಯವಸ್ಥೆ ಒಂದು ರೀತಿಯಲ್ಲಿ ರಾಜ್ಯದ ಬೊಕ್ಕಸಕ್ಕೆ ಆರ್ಥಿಕವಾಗಿ ಹೊಣೆಯಾಗಿರುವ ಕಾರಣ, ಈ ದುರ್ಘಟನೆಯ ನಂತರ ಇಡೀ ರಾಜ್ಯದಲ್ಲಿ ಎಲ್ಲರನ್ನೂ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ಎಂದರೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯಕ್ಕೂ ಇಂತಹ ವಿಧಾನ ಪರಿಷತ್ ಅವಶ್ಯಕತೆ ಇದಯೇ? ತಮ್ಮ ರಾಜಕೀಯ ತೆವಲುಗಳಿಗಾಗಿ ಒಳ ಒಪ್ಪಂದ ಮಾಡಿಕೊಂಡು ಅಮಾಯಕ ಕಾರ್ಯಕರ್ತರು ಮತ್ತು ನಾಯಕರುಗಳ ಸಾವಿಗೆ ಪರೋಕ್ಷವಾಗಿ ಕಾರಣಭೂತರಾಗಿರುವ ಇಂತಹ ಗೋಸುಂಬೇ ಸ್ವಾರ್ಥ ನಾಯಕರುಗಳು ಮತ್ತು ಪಕ್ಷಗಳ ಅವಶ್ಯಕತೆ ಇದೆಯೇ? ಸಭೆಯ ಗೌರವವನ್ನೂ ಮರೆತಿದ್ದಲ್ಲದೇ, ಸಮರ್ಥ ವಿರೋಧ ಪಕ್ಷವಾಗಿ ಸಭೆಯಲ್ಲಿ ಚರ್ಚೆ ನಡೆಸದೇ ಗುಂಡಾಗಿರೀ ಮಾಡುವ ಪಕ್ಷವನ್ನು ಯಾವ ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳ ಬಹುದು? ಅದೇ ರೀತಿ ಶಿಸ್ತಿನ ರಾಷ್ಟ್ರೀಯ ಪಕ್ಷ ಎಂದು ಹೆಸರಿಗಷ್ಟೇ ಆಗಿದ್ದು ಅಧಿಕಾರಕ್ಕಾಗಿ ಯಾವ ಕೀಳು ಮಟ್ಟದ ರಾಜಕೀಯಕ್ಕಾದರೂ ಇಳಿಯುವಂತಹ ಅನುಕೂಲಸಿಂಧೂ ನಾಯರು ಈ ರಾಜಕ್ಕೆ ಅವಶ್ಯಕತೆ ಇದೆಯೇ?

ಈ ಎಲ್ಲಾ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ಅವಲೋಕನೆ ಮಾಡಿದಲ್ಲಿ ಶ್ರೀ ಧರ್ಮೇಗೌಡರ ಸಾವಿನ ವಿಚಾರದಲ್ಲೂ ಬಾಯಿ ಚಲಪಕ್ಕೆ ಆರೋಪ ಪ್ರತ್ಯಾರೋಪ ಮಾಡುತ್ತಾ ವೃಥಾ ಕಾಲ ಹರಣ ಮಾಡದೇ ಮೂರೂ ಪಕ್ಷಗಳೂ ಈ ಸಾವಿನ ಹೊಣೆಯನ್ನು ಹೊರಬೇಕಾಗಿದೆ ಮತ್ತು ಈ ಸಾವಿನ ಪಾಪ ಪ್ರಜ್ಞೆ ಬಹಳ ಕಾಲ ಮೂರೂ ಪಕ್ಷಗಳನ್ನು ಬಹಳ ವರ್ಷಗಳ ಕಾಲ ಕಾಡಲಿದೆ. ಅಂತಿಮವಾಗಿ ವಯಕ್ತಿಕವಾಗಿ ಶ್ರೀ ಧರ್ಮೇಗೌಡರ ಪರಿಚಯ ನಮಗಿಲ್ಲದಿದ್ದರೂ ಈ ರಾಜ್ಯದ ಒಬ್ಬ ಜವಾಬ್ಧಾರೀ ನಾಗರೀಕರೀಕರಾಗಿ ಅವರ ಅತ್ಮಕ್ಕೆ ಸದ್ಗತಿಯನ್ನು ಆ ಭಗವಂತನು ನೀಡಲಿ ಮತ್ತು ಇಂತಹ ದುರ್ಘಟನೆಗಳು ಮತ್ತೆ ಜರುಗದಿರಲಿ ಎಂದು ಪ್ರಾರ್ಥಿಸೋಣ.

ಏನಂತೀರೀ?
ಇಂತಿ ನಿಮ್ಮ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s